ಮರೆತು ಹೋದ ಮಹಾ ಸಾಮ್ರಾಜ್ಯ ದೇವಗಿರಿ !
ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehandale100@.
ಅಜಂತಾ-ಎಲ್ಲೋರಾ ನೋಡಲು ಹೋದ ಪ್ರವಾಸಿಗ ದೇವಗಿರಿ ಕೋಟೆಯನ್ನು ಬಿಟ್ಟು ಹೊರಟರೆ ಆ ಪ್ರವಾಸ ಅಪೂರ್ಣ. ಅಭೂತ ಪೂರ್ವ ಐತಿಹಾಸಿಕ ಪಳೆಯು ಳಿಕೆಯನ್ನು ಅನುಭವಿಸುವುದರಿಂದ ವಂಚಿತರಾಗುತ್ತೇವೆ. ಇದು ಮೂಲತಃ ಕನ್ನಡಿಗರ ಹೆಮ್ಮೆ.
ಅದು ಅಕಸ್ಮಿಕವಾಗಿ ದೇವಗಿರಿಯನ್ನು ಸಂದರ್ಶಿಸುವ ಅವಕಾಶ ಲಭ್ಯವಾದದ್ದು, ಗುಜರಾತಿನ ಗಡಿದಾಟಿ ಮಹಾರಾಷ್ಟ್ರದ ಎರಾ ಗುಹೆಗಳನ್ನು ನೋಡಲು ಹೊರಟ ಸಂದರ್ಭದಲ್ಲಿ. ಅಲ್ಲಿಯವರೆಗೆ ನನಗೂ ಮಾಹಿತಿಯನ್ನು ಪಡೆಯುವಾಗ ಇತರರಿಗಾದಂತೆ ಅಪೂರ್ಣ ಮಾಹಿತಿಯ ಕಾರಣ, ನೇರವಾಗಿ ಎರಾದಿಂದ ನೂರು ಕಿ.ಮೀ ದೂರದ ಅಜಂತಾಕ್ಕೆ ಹೊರಟು ಹೋಗಿರುತ್ತಿದ್ದೆ. ಆದರೆ ಅಲ್ಲಲ್ಲಿ ನಿಂತು ಫೋಟೊ ಕ್ಲಿಕ್ಕಿಸುತ್ತ ಹೊರಡುವಾಗ ಹದಿನೈದು ಕಿ.ಮೀ. ಕ್ರಮಿಸುವಷ್ಟರಲ್ಲಿ ರಸ್ತೆಯಎರಡೂ ಬದಿಯಲ್ಲಿ ಪೇರಲೆ ಮತ್ತು ಸೀತಾಫಲಗಳ ರಾಶಿ ರಾಶಿ ನೋಡಿ ವಾಹನ ನಿಲ್ಲಿಸಿದ್ದೆ.
ತುಂಬಾ ಚಂದಗೆ ಜೋಡಿಸಿದ್ದ ರುಚಿಯಾದ ಬುಟ್ಟಿಗಟ್ಟಲೆ ಹಣ್ಣುಗಳ ತಾಜತನ ಮತ್ತು ರೇಟು ಎರಡೂ ಆಕರ್ಷಿಸಿದ್ದು ಸುಳ್ಳಲ್ಲ. ಅಲ್ಲಿ ಇಳಿದು ಆಚೀಚೆ ನೋಡಿದಾ ಗಲೆ ಅರಿವಾದದ್ದು, ಅಂದು ಟೂರಿಸ್ಟ್ ಸ್ಪಾಟ್ ತರಹ ಪ್ರವಾಸಿಗರನ್ನು ಸೆಳೆಯಲು ಜನಗಳು ಅಂಗಡಿ ಮುಂಗಟ್ಟುಗಳನ್ನು ತೆರೆದು, ಬೆಳ್ಳಂಬೆಳಗ್ಗೆ ಕಾಯ್ದಿದ್ದರು. ಜತೆಗೆ ಯಾರಾದರು ವಿಚಾರಿಸಿದಲ್ಲಿ ಕೊಂಚ ವ್ಯಾಪಾರ ವ್ಯವಹಾರ ಆದೀತು ಎನ್ನುವ ಸಹಜ ಆಸಕ್ತಿಯ ನೋಟ, ನನ್ನನ್ನು ದೇವಗಿರಿಯ ಕೋಟೆಯತ್ತ ಹೊರಳು ವಂತೆ ಮಾಡಿತ್ತು. ರಾಷ್ಟ್ರೀಯ ಹೆದ್ದಾರಿ ೧೧೨ ರ ಅಂಚಿಗೆ ತನ್ನ ಕೋಟೆಯ ಗೋಡೆಗಳನ್ನು ಚಾಚಿರುವ ದೇವಗಿರಿಯ ಅಗಾಧತೆ ಸುಲಭಕ್ಕೆ ನಮ್ಮ ನಿಲುವಿಗೆ ನಿಲುಕುವುದಿಲ್ಲ.
ಕಾರಣ ಆರು ಕಿ.ಮೀ ವ್ಯಾಪ್ತಿಯಲ್ಲಿ ವಿಸ್ತಾರವಾಗಿ ಚಾಚಿಕೊಂಡಿದ್ದರೂ ಮಾಹಿತಿ ಮತ್ತು ಪ್ರಚಾರದ ಕೊರತೆ ಯಿಂದಾಗಿ ಹಿಂದಕ್ಕೆ ಉಳಿದು ಬಿಡುತ್ತಿದೆ. ಆದರೆ ಹಾಗೆಂದು ಅಜಂತಾ- ಎಲ್ಲೋರಾ ನೋಡಲು ಹೋದ ಪ್ರವಾಸಿಗ ಇದನ್ನು ಬಿಟ್ಟು ಹೊರಟರೆ ಆ ಪ್ರವಾಸ ಅಪೂರ್ಣವಾದಂತೆಯೇ. ಜತೆಗೆ ಅಭೂತ ಪೂರ್ವ ಐತಿಹಾಸಿಕ ಸತ್ಯ ವೊಂದರ ಪಳೆಯುಳಿಕೆಯನ್ನು ಅನುಭವಿಸುವುದರಿಂದ ವಂಚಿತರಾಗುತ್ತೇವೆ. ಕಾರಣ ದೇವಗಿರಿ ಕೋಟೆ ಮೂಲತಃ ಕನ್ನಡಿಗರ ಹೆಮ್ಮೆಯದು ಎನ್ನುವ ಭಾವನಾತ್ಮಕತೆ ಒಂದೆಡೆಯಾದರೆ, ದೆಹಲಿಯಿಂದ ರಾಜಧಾನಿಯನ್ನೇ ಇಲ್ಲಿಗೆ ಸ್ಥಳಾಂತರಿಸ ಹೊರಟ ತುಘಲಕ್ ನಿಂದಾಗಿ ಐತಿಹಾಸಿಕ ಮಹತ್ವ ಪಡೆದದ್ದೂ ಇನ್ನೊಂದೆಡೆ.
ಸರಿಯಾಗಿ ಒಂದು ಸಾವಿರ ವರ್ಷಗಳ ಹಿಂದೆ ನಮ್ಮ ನೆಲದ ಹೆಮ್ಮೆಯ ಕನ್ನಡ ರಾಜ ವಂಶಜರು ಅಲ್ಲಿ ತಮ್ಮ ಧ್ವಜವನ್ನೂರಿ ಆಡಳಿತ ಘೋಷಿಸಿದರು. ನಂತರ ತಮ್ಮ ಇರುವಿಕೆ ಹಾಗೂ ಶತ್ರುಗಳಿಂದ ರಾಜ್ಯ ರಕ್ಷಣೆಗಾಗಿ ಅದ್ಭುತ ಎನ್ನುವಂತಹ ಕೋಟೆಯೊಂದನ್ನು ಕಟ್ಟಿದರು. ಅಂಬರಕೋಟ, ಮಹಾಕೋಟ ಮತ್ತು ಕಾಲ ಕೂಟ ಎಂದು ಮೂರು ಹಂತಗಳಲ್ಲಿ ವಿಭಿನ್ನವಾಗಿ ಶಂಕುವಿನಾಕಾರಾದ ಬೆಟ್ಟದ ಮೇಲೆ ತಲೆಯೆತ್ತಿ ನಿಂತ ಕೋಟೆಯನ್ನು ಆಗಿನ ಸವುಣರ ರಾಜ ಭಿಲ್ಲಣ, ದೇವ ಲೋಕಕ್ಕೆ ಸಮನಾದ ಸುಂದರ ಕೋಟೆಯನ್ನು ಪ್ರೀತಿಯಿಂದ ದೇವಗಿರಿ ಎಂದು ಕರೆದ.
ಅಲ್ಲಿಗೆ ಮುಂದಿನ ಮೂನ್ನೂರು ವರ್ಷಗಳವರೆಗೆ ನಿರಾತಂಕವಾಗಿ ಯಾದವರು, ನಾಸಿಕ್ ಮತ್ತು ಈಗಿನ ಧುಲಿಯಾವನ್ನು ಆಳಿದ ಚಾಲುಕ್ಯರು, ರಾಷ್ಟ್ರಕೂಟರುಸೇರಿದಂತೆ ಕನ್ನಡದ ಸವುಣರಿಂದ ಸಪಂದ್ಭರಿತ ಮತ್ತು ಪ್ರಗತಿಪೂರಕ ಬೆಳವಣಿಗೆಯನ್ನು ಕಂಡ ದೇವಗಿರಿ, 1328ರಲ್ಲಿ ಮುಸ್ಲಿಂ ಆಡಳಿತಕ್ಕೊಳಪಡುತ್ತಿದ್ದಂತೆ ದೌಲತಾ ಬಾದ್ ಎಂದು ಬದಲಾಗಿ ದೆಹಲಿಯಿಂದ ರಾಜಧಾನಿಯಾಗಿಯೂ ಗುರುತಿಸಲ್ಪಡುವುದರೊಂದಿಗೆ, ದೇವಗಿರಿ ತನ್ನ ವೈಭವೋಪೇತ ದಿನಗಳನ್ನು ಇತಿಹಾಸದ ಪುಟಕ್ಕಿಡತೊಡಗಿತು.
ಪ್ರಸ್ತುತ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಎಂಬ ಮುಖ್ಯ ನಗರದಿಂದ ಕೇವಲ 16 ಕೀ.ಮೀ ದೂರದಲ್ಲಿರುವ ದೇವಗಿರಿ, ಅದಕ್ಕೂ ಮೊದಲು ಜಗತ್ಪ್ರಸಿದ್ಧ ಎರಾ ಗುಹಾ ಸಮೂಹದಿಂದಲೇ ಹೊರಬೀಳುವ ರಾಷ್ಟ್ರೀಯ ಹೆದ್ದಾರಿ 112 ರ ಮೂಲಕವೇ ಪ್ರವೇಶ ಪಡೆಯುತ್ತದೆ. ಹೆಚ್ಚಿನಂಶ ಎರಾ ಮತ್ತು ಅಜಂತಾ ನೋಡ ಹೊರಡುವ ಪ್ರವಾಸಿಗರು ತಪ್ಪು ಮತ್ತು ಅರೆಮಾಹಿತಿಯಿಂದಾಗಿ ದೇವಗಿರಿ ಕೋಟೆ ನೋಡಲು ಅಸಾಧ್ಯವಾಗುತ್ತದೆ. ಸಾಮಾನ್ಯ ಎರಾ ಮತ್ತು ದೇವಗಿರಿ ಕೋಟೆ ಎರಡೂ ಸೇರಿಯೇ ಒಂದು ದಿನದ ಪ್ರವಾಸವಾಗುವಾಗ ಸ್ಥಳೀಯ ಮತ್ತು ವಾಹನ ದಳಿಗಳು ನೀಡುವ ಮಾಹಿತಿಯಿಂದಾಗಿ ಎರಾ ಮುಗಿಸಿ ಅಜಂತಾ ನೋಡುವಆತುರದಲ್ಲಿ ದೇವಗಿರಿ ಎಂದಿನಂತೆ ಹೆದ್ದಾರಿಯ ಪಕ್ಕದಲ್ಲಿಯೇ ಉಳಿದು ಬಿಡುತ್ತದೆ. (ಅಜಂತಾ ನೋಡಲು ಕನಿಷ್ಠ ಆರು ತಾಸುಗಳ ಅಗತ್ಯವಿದ್ದು, ಕನಿಷ್ಠ ಮಧ್ಯಾಹ್ನದ ಮೊದಲೇ ಟಿಕೆಟ್ ಕೌಂಟರ್ ಸೇರಿರಬೇಕು) ಆದರೆ ಇದನ್ನು ತಪ್ಪಿಸಿಕೊಳ್ಳುವ ಪ್ರವಾಸಿಗ ನಿಜಕ್ಕೂ ದುರದೃಷ್ಟವಂತನೇ.
ಕಾರಣ ದೇವಗಿರಿ ಕೋಟೆ ಕಟ್ಟಡ ಮತ್ತು ತಾಂತ್ರಿಕತೆ ಎರಡರ ದೃಷ್ಟಿಯಿಂದಲೂ ಅಪರೂಪದ ವಿನ್ಯಾಸವನ್ನು ಹೊಂದಿದೆ. ಆರು ನೂರು ಅಡಿ ಎತ್ತರದವರೆಗೂ ಮೇಲ್ಮುಖವಾಗಿ ಹಬ್ಬಿರುವ ಕೋಟೆಯನ್ನು ಕನ್ನಡ ಮೂಲ ರಾಜರುಗಳಾದ ಸವುಣರು ಮತ್ತು ಯಾದವರು ತುಂಬ ಅಭಿಮಾನದಿಂದ ಬೆಳೆಸಿದ ಬಗ್ಗೆ ದಾಖಲೆಗಳು ಲಭ್ಯ. ಯಾದವ ದೊರೆ ಎರಡನೆಯ ಹಾಗೂ ಐದನೆಯ ಭಿಲ್ಲಣರು ಹನ್ನೆರಡನೆಯ ಶತಮಾನದವರೆಗೂ ಆಳಿದರು. ಸಂಪೂರ್ಣ ಕನ್ನಡ ಭಾಷೆಯನ್ನೇ ಬಳಸುತ್ತಿದ್ದ ಸವುಣರ ಪ್ರಮುಖ ದಾಖಲೆಗಳು ಮತ್ತು ರಾಜ್ಯಕೋಶದ ದಾಖಲೆಗಳೆಲ್ಲವೂ ಕನ್ನಡದ ಬರೆಯಲಾಗುತ್ತಿತ್ತು.
ಅದರಲ್ಲೂ ಪ್ರಮುಖವಾಗಿ ನೂರೈವತ್ತು ವರ್ಷಗಳ ಕಾಲ ಆಳಿದ ಯಾದವ ವಂಶದ ಭಿಲ್ಲಣ, ಮೊದಲನೆಯ ಜೈತುಗಿ, ಎರಡನೆಯ ಸಿಂಹಣ, ನಂತರದಲ್ಲಿ ಕೃಷ್ಣ ದೇವ ಹಾಗೂ ರಾಮಚಂದ್ರದೇವ ಯಾದವ ಪ್ರಮುಖರು. ಅದರಲ್ಲೂ ರಾಮಚಂದ್ರದೇವ ಮಾಲ್ವ, ಪಾಂಡ್ಯ, ಸಾಳುವ ಹಾಗು ತಿಂಕರ ಸೇರಿದಂತೆ ಮೂರನೆಯ ಮಾರಸಿಂಹನನ್ನೂ ಸೋಲಿಸಿ ದ್ವಾರಸಮುದ್ರದವರೆಗೂ ತನ್ನ ದೇವಗಿರಿ ರಾಜ್ಯವನ್ನು ವಿಸ್ತರಿಸಿದ್ದ.
ಆದರೆ, ಈ ತಲೆ ಮಾರಿನ ನಂತರ ಕೇವಲ ಶಂಕರದೇವ ಮಾತ್ರ ದೇವಗಿರಿಯನ್ನು ರಕ್ಷಿಸಿದ. ಅವನ ನಂತರದ ಹರಪಳ ದೇವ ಮುಸ್ಲಿಂ ದಾಳಿಗೆ, ದೊರಕ ತೊಡಗಿದ ಸ್ಥಳೀಯರ ಬೆಂಬಲವನ್ನು ತಡೆಯಲಾರದೇ ಸೋತು ಹೋದ. ಕಾರಣ ದೇವಗಿರಿಯನ್ನು ಜಯಿಸಲು ಕೋಟೆಯೊಳಗಿನ ರಹಸ್ಯವನ್ನು ಅರಿತಿರುವ ಜನರು ಶಾಮೀಲಾಗದೆ ಸಾಧ್ಯವೇ ಇರಲಿಲ್ಲ. ಯಾದವರ ಹೊರತು ಪಡಿಸಿದರೆ ತದನಂತರದಲ್ಲಿ ಖಿಲ್ಜಿ, ಬಹಮನಿ ಸುಲ್ತಾನ ಹಾಗು ತುಘಲಕ್ ಆಡಳಿತಕ್ಕೆ ನಿರಂತರವಾಗಿ ಆರುನೂರು ವರ್ಷಕಾಲ ಆಳಲ್ಪಟ್ಟಿತು. ಮುಸ್ಲಿಂ ಆಡಳಿಕ್ಕೊಳಟ್ಟ ಮೊದಲ ಭಾಗದ ದೇವಗಿರಿ ಕೋಟೆಯೊಳಗೆ ಚಾಂದ್ ಮಿನಾರ್ ನಿರ್ಮಾಣ ವಾಯಿತು. ನೂರು ಅಡಿ ಎತ್ತರದ ಚಾಂದ್‌ಮಿನಾರ್ ಶೈಲಿಯಲ್ಲೂ ನಿರ್ಮಾಣದಲ್ಲೂ ವಿಭಿನ್ನ ವಾಗಿ ನೋಡುಗರನ್ನು ಸೆಳೆಯುತ್ತದೆ.
1435 ರಲ್ಲಿ ಅವುದಿನ್ ಬಹಮನಿ ಶಾಹ್ ಇದನ್ನು ನಿರ್ಮಿಸುವುದರೊಂದಿಗೆ ಕೋಟೆಯ ವಾಸ್ತು ಶಿಲ್ಪಕ್ಕೆ ಭಿನ್ನ ರಚನೆಯ ಶೈಲಿ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತದೆ. ದೇವಗಿರಿಯ ವಿಶೇಷತೆ ಅದರ ಎರಡೂ ಬಗೆಯ ಕೋಟೆಯನ್ನು ಹೊಂದಿರುವುದು. ಸಾಮಾನ್ಯ ಕೋಟೆಯೊಳಗೆ ಪರ್ವತಗಳ ಮೇಲೆ ಕಟ್ಟುತ್ತಿದ್ದ ಕೋಟೆಯೂ ಸೇರಿರುವುದಲ್ಲದೆ ಮೂರು ಹಂತಗಳನ್ನು, ಅಲ್ಲಲ್ಲಿ ಅಷ್ಟೆ ಆಕರ್ಷಕ ತಡೆಗೋಡೆಗಳನ್ನು ಹೊಂದಿದೆ. ಮೊದಲ ರಚನೆಯಾದ ಅಂಬರಕೋಟೆಸಂಪೂರ್ಣ ನಗರವನ್ನು ಸುತ್ತುವರಿದ ರಕ್ಷಣಾ ಗೋಡೆಯಾಗಿದ್ದು ಈಗ ಹೆದ್ದಾರಿಯ ಬಳಿಯಲ್ಲಿ ಮಾತ್ರ ಕೆಲಭಾಗ ಲಭ್ಯವಿದೆ.
ಎರಡನೆಯ ಭಾಗವಾದ ಮಹಾಕೋಟೆ ಎಂಟು ಬಾಗಿಲುಗಳನ್ನು ಹೊಂದಿರುವ ಬೃಹದಾಕಾರದ ರಚನೆಯಾಗಿದೆ. ಮೊದಲು ಈ ಗೋಡೆಯ ಗುಂಟ ನೀರಿನ ವ್ಯವಸ್ಥೆಯ ಮತ್ತು ಆಳ ಕಂದರಗಳ ಬಾವಿಯನ್ನು ತೋಡಿಡಲಾಗಿದ್ದು ಒಳಗಿನವರಿಗೆ ಆರು ತಿಂಗಳಿಗೆ ಸಾಕಾಗುಷ್ಟು ನೀರು ಪೂರೈಕೆ ಮತ್ತು ಶತ್ರು ನಿರ್ಬಂಧ ಎರಡಕ್ಕೂ ಉಪಯೋಗವಾಗುತ್ತಿತ್ತು. ಎಂಟು ಬಾಗಿಲುಗಳಿಗೆ ಆನೆಗಳ ಏಟನ್ನೂ ತಡೆಯುವ ತಾಕತ್ತಿನ ಕಬ್ಬಿಣದ ಪಟ್ಟಿಗಳನ್ನು ಜೋಡಿಸಲಾಗಿದ್ದು ಈಗಲೂ ಅವುಗಳು ತುಕ್ಕು ಹಿಡಿಯದ ರೀತಿಯಲ್ಲಿವೆ.
ಮೂರನೆಯ ಮತ್ತು ಅತ್ಯಂತ ಸುಂದರ ಕಲಾತ್ಮಕ ರಚನೆಗೂ ಹೆಸರಾದ ಕಾಲಕೋಟೆ ಗಿರಿಯ ಮೇಲಿನ ಕೋಟೆಯ ಭಾಗವನ್ನೇ ಉಳಿದ ಭಾಗಗಳಿಂದ ಸಂಪೂರ್ಣವಾಗಿ ಬೇರ್ಪಡಿಸಿಬಿಡುತ್ತದೆ. ಪಿರಾಮಿಡ್ ರಚನೆಯ ಮಾದರಿಯಲ್ಲಿ ಮೇಲ್ಮುಖವಾಗಿ ರಚಿಸಲಾಗಿರುವ ಕೋಟೆಯನ್ನು ಈ ಭಾಗ ಸುಮಾರು ನಲ್ವತ್ತು ಅಡಿ ಅಗಲದ ಅಷ್ಟೆ ಆಳದ ಸುತ್ತುವರಿದ ನೀರಿನ ಕಂದಕಗಳು ಬೇರ್ಪಡಿಸುತ್ತವೆ. ಈಗಲೂ ನೀರಿನಿಂದ ತುಂಬಿರುವ ಈ ಕೋಟೆಯನ್ನು ಸುತ್ತುವರಿದಿರುವ ಅಂಕುಡೊಂಕಾದ ಹೇರ್ಪಿನ್ ಮಾದರಿಯ ಕಾಲುವೆ ಸತತವಾಗಿ ವೈರಿಗಳಿಗೆ ಕಬ್ಬಿಣದ ಕಡಲೆಯಾಗಿತ್ತು. ಆದ್ದರಿಂದಲೇ ಒಳಗಿನ ಜನಬೆಂಬಲವಿಲ್ಲದೆ ಈ ಕೋಟೆಯನ್ನು ಇತರ ರಾಜರು ಮೊದಲ ಮುನ್ನೂರು ವರ್ಷ ಕಾಲ ಗೆಲ್ಲದೇ ಹೋದರು.
ಆಳ ನೀರಿನ ಕಂದಕದಲ್ಲಿ ಆಗ ಭಯಂಕರ ಮೊಸಳೆಗಳನ್ನು ಸಾಕಲಾಗುತ್ತಿತ್ತು. ಈಗಲೂ ನೇರ ಸಂಪರ್ಕ ಕಲ್ಪಿಸುವ ಸೇತುವೆಯೊಂದನ್ನು ನಿರ್ಮಿಸಿದ್ದು ಅದಿಲ್ಲ ದಿದ್ದರೆ ಎರಡೂ ಭಾಗಗಳೂ ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ಇದರೊಂದಿಗೆ ಕೋಟೆಯ ಮೇಲ್ಭಾಗದಲ್ಲಿ ಕಬ್ಬಿಣದ ಅಚ್ಚುಗಳನ್ನು ಬಳಸಿದ್ದು ಅದರ ಮೇಲೆ ಬೆಂಕಿಯನ್ನುರಿಸಿ ಶತ್ರುಗಳನ್ನು ಹಿಮ್ಮೆಟ್ಟಲು ಬಳಸುತ್ತಿದ್ದರಲ್ಲದೆ, ಕೋಟೆಯೊಳಗೆ ನುಸುಳುವ ವೈರಿಗಳನ್ನು ಸದೆಬಡಿಯಲು, ಅವಿತು ಕೂಡುವ ರಹಸ್ಯ ಗೂಡು ಗಳು, ರಚನೆಯ ಅರಿವಿಲ್ಲದೆ ಶತ್ರುಗಳು ನೇರವಾಗಿ ಸಿಕ್ಕ ದಾರಿಯಲ್ಲಿ ಚಲಿಸಿ ನೇರವಾಗಿ ನೂರೈವತ್ತು ಅಡಿಯಿಂದ ಮೊಸಳೆಗಳಿರುವ ಕಂದಕಕ್ಕೆ ಬಿದ್ದು ಹೋಗುವ ಕತ್ತಲ ದಾರಿಗಳ ತಂತ್ರಜ್ಞಾನ, ಸುಲಭಕ್ಕೆ ಅದುರಲಾರದ ಭಾರಿ ಸೈಜಿನ ಬಂಡೆಗಳನ್ನು ಬಳಸಿ ನಿರ್ಮಿಸಿದ ಕೋಟೆಯನ್ನು ಈಗಲೂ ಇತ್ತಿಚಿಗಷ್ಟೆ ನಿರ್ಮಿಸಿ ದಂತೆ ಕಾಣಿಸುತ್ತವೆ.
ಪುರಾತತ್ವ ಇಲಾಖೆ ಇದನ್ನು ವಹಿಸಿಕೊಂಡು ನಿರ್ವಹಣೆಯನ್ನು ಮಾಡಿರುವುದರಿಂದ ಪ್ರವಾಸಿಗರಿಗೆ ದೇವಗಿರಿಯ ಕೋಟೆ ಒಮ್ಮೆ ಎತ್ತರೆತ್ತರಕ್ಕೆ ಏರಿ ನೋಡುತ ಸಾಗಿದಂತೆಲ್ಲ ಖುಷಿ ಕೊಡುವುದರಲ್ಲಿ ಅನುಮಾನವಿಲ್ಲ. ಆದರೆ ಕನಿಷ್ಠ ಆರೆಂಟು ತಾಸುಗಳ ಅವಧಿಯನ್ನು ಇರಿಸಿಕೊಂಡು ಹೋದಲ್ಲಿ ದೇವಗಿರಿಯ ಸೌಂದರ್ಯ ವನ್ನು ಅದರ ಮೇಲ್ಭಾಗದಿಂದ ಕಾಣುವ ಸುಂದರ ಸೃಷ್ಟಿ ಸೌಂದರ್ಯವನ್ನು ಸವಿಯಬಹುದು. ಮುಖ್ಯವಾಗಿ ಏರುತ್ತ ಸಾಗಬೇಕಾದ ದಾರಿ ಸವಾಲಿನದ್ದು ಹೌದ ದರೂ ಅಲೆಮಾರಿಗಳಿಗೆ ಇದೆಲ್ಲ ಲೆಕ್ಕವಲ್ಲ ಬಿಡಿ.