ಕಲಿಯುಗದ ಗಂಗೆ ಮಾಯಾಜಿಂಕೆ
ಶಿಶಿರ ಕಾಲ
ಶಿಶಿರ ಹೆಗಡೆ
@.
ಕರ್ನಾಟಕ ತಮಿಳುನಾಡು, ಕರ್ನಾಟಕ ಮಹಾರಾಷ್ಟ್ರದಿಂದ ಹಿಡಿದು ನಮ್ಮೂರ ದೋಮಪ್ಪ ಮತ್ತು ಬೋಮಪ್ಪನವರೆಗಿನ ಎಲ್ಲ ಗಲಾಟೆ, ಕಿತ್ತಾಟ, ವೈಮನಸ್ಸಿನ ಹಿಂದೆ ಅಂದು ನೀರಿನ ಸಮಸ್ಯೆ ಇರುವುದು ಕಾಣಿಸುತ್ತದೆ. ಎಲ್ಲ ಸಮಸ್ಯೆಗಳ ಮೂಲ ನದಿ, ನೀರು ಸಿಗುತ್ತದೆ.
ನೀರಿನ ಸಮಸ್ಯೆ, ನೀರಿಲ್ಲ, ನೀರಿಗೆ ಹಾಹಾಕಾರ, ಪರದಾಟ, ಗೋಳಾಟ, ಕೊರತೆ, ಮಳೆಯಾಗಿಲ್ಲ, ಡ್ಯಾಮ್ ಖಾಲಿ. ಇವೆಲ್ಲ ನಿತ್ಯ ಕಾಣಿಸುವ ಹೆಡ್‌ಲೈನ್‌ಗಳು. ನೀರು ಮತ್ತು ಸಮಸ್ಯೆ ಜತೆಯ ಇರುವ ಶಬ್ದಗಳೆಂಬಂತೆ. ಭೂಮಿಯ ಮೇಲ್ಮೈನ ಶೇ.71 ನೀರು. ಭೂಮಿಯ ಶೇ.97 ರಷ್ಟು ನೀರು ಸಮುದ್ರವಾಗಿ.
ಉಳಿದದ್ದು, ಬಳಕೆಗೆ, ಕೃಷಿಗೆ, ಗಿಡ ಮರಕ್ಕೆ, ಪ್ರಾಣಿ-ಪಕ್ಷಿಗೆ ಮತ್ತು ನಮಗೆ. ಈ ಶೇ.3. ರಲ್ಲಿ ಶೇ 2.5 ಹಿಮ ವಾಗಿ ಅಥವಾ ಭೂಮಿಯಡಿಯಲ್ಲಿ ಹೀಗೆ ಜೀವ ಜಗತ್ತಿಗೆ ಅಲಭ್ಯ. ಇದೆಲ್ಲ ನಿಮಗೇನು ಹೊಸ ವಿಷಯವಲ್ಲ. ಇಂದು ವಿಚಾರ – ಈ ಶೇ.3 ಸಿಹಿನೀರಿದೆಯಲ್ಲ ಅದು ಸಾವಿರ ಸಾವಿರ ವರ್ಷಗಳಿಂದ ಹೆಚ್ಚು ಕಡಿಮೆ ಅಷ್ಟೇ ಇದೆ. ಹಾಗಾದರೆ ಸಮಸ್ಯೆ ಏನು ಇಲ್ಲಿ? ನೀರಿನ ಸಮಸ್ಯೆ ಎನ್ನುವುದಕ್ಕಿಂತ – ನೀರು ನಮಗೆ ಬೇಕಾದಲ್ಲಿ ಇಲ್ಲ ಎನ್ನು ವುದು ಇಲ್ಲಿನ ಸಮಸ್ಯೆ.
ಈ ಭೂಮಿಯ ಅತ್ಯಂತ ದೊಡ್ಡ ವಿಕೃತಿ ಪಟ್ಟಣಗಳು. ಒಂದು ನಿರ್ದಿಷ್ಟ ಜಗದಲ್ಲಿ ಕಿಕ್ಕಿರಿದು ಸೇರಿ ಬದುಕುವುದು. ಅದರಲ್ಲಿ ಇನ್ನೊಂದು ಲೆವೆಲ್ಲು ಮುಂದಿನ ವಿಕೃತಿ ಪಟ್ಟಣದಲ್ಲಿ ಒಬ್ಬರ ಮೇಲೊಬ್ಬರು ಬದುಕುವ ಅಪಾರ್ಟ್‌ ಮೆಂಟುಗಳು. ಇದೆಲ್ಲ ವಿಕೃತಿಯ ಸಹಜ ಅಡ್ಡ ಪರಿಣಾಮ ನಾವೇ ನಿರ್ಮಿಸಿಕೊಂಡ ನೀರಿನ ಕೊರತೆ. ಇದರ ಜತೆ ಇನ್ನೊಂದು ಸಮಸ್ಯೆ ಈ ಶೇ.3 ಸಿಹಿನೀರು ಸ್ಥಾನಪಲ್ಲಟವಾಗುವುದು. ನೀವು ನೀರಿದೆ ಎಂದು ಊರು ಕಟ್ಟಿದರೆ ಸುಮಾರು ವರ್ಷವಾದ ನಂತರ ನೀರು ತನ್ನ ಜಗವನ್ನು ಇನ್ನೊಂದೆಡೆಗೆ ಬದಲಿಸಿರುತ್ತದೆ. ಬೇಕಾದಲ್ಲಿ ಅನಾವೃಷ್ಟಿ, ಬೇಡದಲ್ಲಿ ಅತಿ ವೃಷ್ಟಿ.
ಇದು ಕೂಡ ಸದಾ ಬದಲಾಗುತ್ತಲಿರುವುದು. ಇದು ಕೆಲವು ಕಡೆ ಅತ್ಯಂತ ನಿಧಾನವಾಗಿ ಆಗುವ ಬದಲಾವಣೆ, ಇನ್ನು ಕೆಲವು ಕಡೆ ಅವಗಾಹನೆಗೆ ಬರುವಷ್ಟು ವೇಗದಲ್ಲಿ. ಇದು ಪ್ರಕೃತಿ ಸಹಜ. ಪ್ರಕೃತಿಯ ಟೈಮ್ ಲೈನ್‌ನದು ಬೇರೆಯದೇ ವೇಗ. ಬದಲಾವಣೆ ಜಗದ ನಿಯಮ ಎನ್ನುವ ಮಾತಿನ ವಿಸ್ತಾರದ ಅರ್ಥವಿದು. ಇನ್ನೊಂದೆಂದರೆ ಪ್ರಾಣಿಗೂ ಮನುಷ್ಯನಿಗೂ ಇರುವ ವ್ಯತ್ಯಾಸ. ಮನುಷ್ಯ ಒಂದೇ ಜಗದಲ್ಲಿ ಪಟ್ಟಣ ಕಟ್ಟಿ ಝಂಡಾ ಹೂಡಿಬಿಡುತ್ತಾನೆ. ಪ್ರಾಣಿಗಳು ನೀರಿರುವಲ್ಲಿ, ವಲಸೆ ಹೋದರೆ ಮನುಷ್ಯನಿಗೆ ನೀರು ಕರೆದಾಗ, ಕರೆದಲ್ಲಿಗೆ ಬರಬೇಕು, ಸಿಗಬೇಕು.
ಗಂಗೆಗೆ ಅವಳದೇ ಚಂಚಲತೆಯಿದ್ದರೆ ಮನುಷ್ಯನಿಗೆ ತನ್ನದೇ ಆದ ಸೊಕ್ಕಿದೆ. ಒಂದು ನೀರಿನ ಸಮಸ್ಯೆಯೆಡೆಗೊಂದು ಸ್ಥೂಲ ದೃಷ್ಟಿಕೋನಕ್ಕೆ ಇವಿಷ್ಟು ಪೀಠಿಕೆ ಸಾಕೆನ್ನಿ. ನೀರಿನ ಸಮಸ್ಯೆಗೆ ಮನುಷ್ಯ ಪ್ರತಿಕ್ರಿಯಿಸುವುದು ಮೂರು ರೀತಿ. ಮೊದಲನೆಯದು – ಹೊಂದಿಸಿಕೊಳ್ಳೋದು. ಎಂದರೆ ತಾನಿರುವಲ್ಲಿಗೇ ನೀರು ಬರು ವಂತೆ ಮಾಡಿಕೊಳ್ಳೋದು ಮತ್ತು ಅವಶ್ಯಕತೆ ಹೆಚ್ಚಾದಂತೆ ಅದನ್ನು ಅಲ್ಲಿಯೇ ಪಡೆಯಲು ಮಾಡಿಕೊಳ್ಳುವ ವ್ಯವಸ್ಥೆ. ಬೆಂಗಳೂರು – ಮೇಕೆದಾಟು ಅಥವಾ ಟ್ಯಾಂಕರ್ ನೀರು ಇವೆಲ್ಲ ಇದಕ್ಕೆ ಉದಾಹರಣೆ. ಇದರಲ್ಲಿ ಒಂದಿಷ್ಟು ಮಿತಿಯಿದೆ. ಆ ಮಿತಿ ಮೀರುವತ್ತ ಹೋದಷ್ಟು ನೀರಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಎರಡನೆಯದು ಅ ಇದ್ದು ನೀರಿಲ್ಲದೇ ಸಾಯೋದು. ಅದಾಗುವುದಿಲ್ಲ.
ಇನ್ನುಳಿದ ಕೊನೆಯದ್ದು ಗುಳೆ ಹೋಗೋದು – ಸರಳವಾಗಿ ಹೇಳೋದಾದ್ರೆ ನೀರಿಲ್ಲದ್ದರಿಂದ ನೀರಿದ್ದಲ್ಲಿಗೆ ಎಲ್ಲ ಬಿಟ್ಟು ವಲಸೆ ಹೋಗುವುದು. ಈ ಕೊನೆಯ ಆಯ್ಕೆ ಯಿದೆಯಲ್ಲ ಅದು ಇಂದಿನ ಪೇಟೆಗಳ ಇನ್ನೊಂದು ಐದುನೂರು ವರ್ಷದ ಭವಿಷ್ಯ. ಇದನ್ನೇನು ಸುಮ್ಮನೆ ಕಲ್ಪನೆ ಮಾಡಿಕೊಂಡು ಹೇಳ್ತಾ ಇದ್ದೀನಿ ಅಂದು ಕೊಳ್ಳ ಬೇಡಿ. ಸಿರಿಯಾ ಅಂತರ್ಯುದ್ಧದ ಬಗ್ಗೆ ಓದಿರಬಹುದು.
ಸಿರಿಯಾ ಮಧ್ಯಪ್ರಾಚ್ಯದಲ್ಲಿ ಒಂದು ವಿಶೇಷ ದೇಶ. ಅಲ್ಲಿ ಮೂರು ಧರ್ಮ. ಹತ್ತರಷ್ಟು ಕ್ರಿಶ್ಚನ್ನರು, ಮೂರರಷ್ಟು ಡ್ರೂಜ್ ಧರ್ಮದವರು ಮತ್ತು ಇನ್ನುಳಿದ ಶೇ.87ಇಸ್ಲಾಮ. ಇಸ್ಲಾಮಿನಲ್ಲಿ ಶಿಯಾ(ಶೇ.3), ಸುನ್ನಿ(ಶೇ.73), ಮತ್ತು ಅಲವಾಯಿತಿಗಳು(ಶೇ.14). ಇವರೆಲ್ಲರಿಗೂ ಅನೆ ಎಲ್ಲೇ ಆದರೂ ಅವರ ನಡುವಿನ ಕಂದಕದ ಆಳ ಧರ್ಮ-ಧರ್ಮಕ್ಕಿಂತ ಜಸ್ತಿಯದು. 1971ರಲ್ಲಿ ಸಿರಿಯಾದಲ್ಲಿ ಅಧಿಕಾರಕ್ಕೆ ಬಂದದ್ದು ಹಫೀಜ-ಅಲ-ಅಸಾದ್. ಆತ ಅಲವಾಯಿತಿ. ಸಿರಿಯಾವನ್ನು ಮೂವತ್ತು ವರ್ಷ ಆಳಿ ಆತ ಸತ್ತ ನಂತರ ಅಧಿಕಾರ ಹಿಡಿದದ್ದು ಆತನ ಮಗ ಬರ್ಷ- ಅಲ-ಅಸಾದ್.
ಇವರಿಬ್ಬರು ಅಧಿಕಾರದ ಮುಖವಾಗಿದ್ದರೂ ಅಲ್ಲಿಂದಿಲ್ಲಿಗೆ ಸಿರಿಯಾವನ್ನು ಆಳಿದ್ದು, ಆಳುತ್ತಿರುವುದು ಅಲವಾಯಿತಿಗಳ ಗುಂಪು. ಇದನ್ನು, ಈ ಆಳ್ವಿಕೆಯನ್ನು ಅಲ್ಲಿನ ಬಹುಸಂಖ್ಯಾತ ಸುನ್ನಿಗಳು ಮೆಚ್ಚುವುದಿಲ್ಲ. ಬಷರ್ ಆಳ್ವಿಕೆಯಲ್ಲಿ ಅಲವಾಯಿತಿಗಳಿಗೆ ಮೊದಲ ರಿಸರ್ವೇಷನ್. ಈ ಎಲ್ಲ ಕಾರಣಕ್ಕೆ ಜನರ ಗುಂಪು ಮಾರ್ಚ್ ೨೦೧೧ ರಸ್ತೆಗಿಳಿಯಿತು ಮತ್ತು ಬಷರ್ ಅವರ ಮೇಲೆ ಗುಂಡು ಹಾರಿಸಲು ಆದೇಶಿಸಿದ. ಆಗ ನೂರಾರು ಮಂದಿ ಸತ್ತು ಬಿದ್ದಿದರು. ಅಲ್ಲಿಂದ ಸಿರಿಯಾ ಅಂತ ರ್ಯುದ್ಧ ಶುರುವಾದದ್ದು. ಇದು ಜಗತಿಕ ಮಾಧ್ಯಮಗಳು ಹೇಳುವ ಖರೆ ಕಥೆ ಆದರೆ ಅಪೂರ್ಣ. ಸಿರಿಯಾದಲ್ಲಿ ಧರ್ಮ, ಅಸಮಾನತೆ ಎಂಬಿತ್ಯಾದಿ ಕಾರಣದಿಂದ ದಂಗೆ ನಡೆಯುತ್ತಿರುವುದು ಹೌದು.
ಆದರೆ ಅದಕ್ಕಿಂತ ಮೊದಲು ಇಂಥದ್ದೊಂದು ದಂಗೆಯೇಳುವ ಮಟ್ಟಿಗಿನ ವಾತಾವರಣ ನಿರ್ಮಾಣವಾಗಿದ್ದಾದರೂ ಹೇಗೆ? ಇದೆಲ್ಲದಕ್ಕೆ ಮೂಲ ಆಯಾಮ ಸಿಗುವುದು ಇನ್ನೂ ಸ್ವಲ್ಪ ಆಳಕ್ಕೆ ಇಳಿದಾಗ. ಒಂದಂತೂ ನಿಜ – ಬಡವ, ಕೃಷಿಕ, ದೇಶದ ರಾಜಧಾನಿಯಿಂದ ದೂರವಿರುವವ. ಆತ ದಂಗೆಗೆ ಹೊರಡುವಷ್ಟು ರಾಜಕೀಯವನ್ನು ಅಂಟಿಸಿಕೊಂಡಿರುವುದಿಲ್ಲ. ಇದು ಎಲ್ಲ ದೇಶದಲ್ಲೂ, ನೆಲದಲ್ಲೂ ಸತ್ಯ. ಸಿರಿಯಾದಲ್ಲಿ ಕೂಡ ಬರೋಬ್ಬರಿ ಶೇ.90ಕ್ಕಿಂತ ಜಸ್ತಿ ಮಂದಿದಮಾಸ್ಕಸ್‌ನ ಹೊರಗೆ ಎಲ್ಲಾ ಹಳ್ಳಿಯಲ್ಲಿ ಕೃಷಿಮಾಡಿಕೊಂಡು, ಲಿಂಬು, ಆಲಿವ್, ದ್ರಾಕ್ಷಿ ಇವನ್ನೆಲ್ಲ ಬೆಳೆದುಕೊಂಡು ನೆಮ್ಮದಿಯಲ್ಲಿ ಇದ್ದವರೇ. ಅವರಿಗೆ ಈ ಧರ್ಮ, ರಿಸೆರ್ವೆಷನ್ನುಗಳು ಹೋಗಿ ತಾಗುತ್ತಲೇ ಇರಲಿಲ್ಲ.
ಇದೆಲ್ಲ ಬುಡಮೇಲಾಗಲು ಶುರುವಾಗಿದ್ದು ಕಳೆದ ಮೂವತ್ತು ವರ್ಷದಲ್ಲಿ. ಸಿರಿಯಾದಲ್ಲಿ 1980 ರಿಂದೀಚೆ ವರ್ಷ ಕಳೆದಂತೆ ನೀರಿನ ಪ್ರಮಾಣ ಕಡಿಮೆಯಾಗುತ್ತಹೋಯಿತು. 2000 ಇಸವಿಯಿಂದ ಸಿರಿಯಾ ಅತ್ಯಂತ ಘೋರ ಬರಗಾಲ ಅನುಭವಿಸಿತು. ಅಲ್ಲಿನ ಕೃಷಿಕರು ಅಕ್ಷರಶಃ ಬರಗೆಟ್ಟು ಹೋದರು. ಊರಿಗೆ ಊರೇ ಖಾಲಿ ಮಾಡಿಕೊಂಡು ದಮಾಸ್ಕಸ್ ಮೊದಲಾದ ನಗರಗಳಿಗೆ ಗುಳೆ ಬಂದು ಸೇರತೊಡಗಿದರು. 2010 ರ ಸಮಯದಲ್ಲಿ ಇಡೀ ದೇಶಕ್ಕೆ ದೇಶವೇ ಬರದಲ್ಲಿ ಬೆಂದು ಹೋಯಿತು. ಅಲ್ಲಿಂದ ದಂಗೆಗಳು ಶುರುವಾದವು. ಆಹಾರ, ನೀರು ಇಲ್ಲದ ಸ್ಥಿತಿ, ಇತ್ತ ಬದುಕಲು ಅಸಾಧ್ಯವಾದ ಬೆಲೆ ಏರಿಕೆ.
ಬಷರ್-ಅಲ-ಅಸಾದ್ ಅಪ್ಪನಂತಲ್ಲ, ತುಂಬಾ ಒಳ್ಳೆಯವನು, ಸಿರಿಯಾವನ್ನು ಮೇಲಕ್ಕೆತ್ತಲು ಮೇಲಿಂದ ಬಂದವನು ಎಂದೆಲ್ಲ ಅನ್ನುತ್ತಿದ್ದ ಅದೇ ಜನ ಅವನ ವಿರುದ್ಧವೇ ಬೀದಿಗಿಳಿದರು. ಅವನು ಒಳ್ಳೆಯವನೇ ಆಗಿದ್ದನೋ? ಗೊತ್ತಿಲ್ಲ. ಇಂತಹ ಸ್ಥಿತಿಯನ್ನು ಸಂಬಾಳಿಸಲಾಗದೆ ತನ್ನ ಜನ – ಈ ದಂಗೆಕೋರರ ಮೇಲೆಯೇಗುಂಡುಹಾರಿಸಲು ಆದೇಶಕೊಡುವಷ್ಟು ಪರಿಸ್ಥಿತಿ ಹದಗೆಟ್ಟಿತ್ತು. ಅಲ್ಲಿಂದ ಮುಂದೆ ಅದೆಷ್ಟೋ ಲಕ್ಷ ಮಂದಿ ಸತ್ತರು. ಸುಮಾರು ಎಪ್ಪತ್ತು ಲಕ್ಷ ಮಂದಿ ದೇಶ ಬಿಟ್ಟು ಬೋಟು ಹತ್ತಿ, ನಡೆದು ಹೀಗೆ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋದರು. ಅದೆಲ್ಲದಕ್ಕೆ ಕಾರಣ ಅವರಿಗೆ ಅಲ್ಲಿ ಬದುಕಲು ಅಸಾಧ್ಯವಾದ ಸ್ಥಿತಿ. ಪೇಟೆಯಲ್ಲಿ ದಂಗೆಗಳು – ಅತ್ತ ಬಿಟ್ಟು ಬಂದ ಹಳ್ಳಿಗಳಲ್ಲಿ ಹುಲ್ಲು ಕಡ್ಡಿ ಹುಟ್ಟದಷ್ಟು ಬರಗಾಲ.
2010 ರಲ್ಲಿ 2.1 ಕೋಟಿ ಜನಸಂಖ್ಯೆ ಇದ್ದ ಸಿರಿಯಾ 2018 ಆಗುವಾಗ 1.6 ಕೋಟಿಗೆ ಇಳಿದುಬಿಟ್ಟಿತ್ತು. ಇಲ್ಲಿ ಗಮನಿಸಬೇಕಾದದ್ದು ಇನ್ನೊಂದು – ಶೇ.90 ರಷ್ಟಿದ್ದ ಹಳ್ಳಿ ಜನಸಂಖ್ಯೆ 2018 ಆಗುವಾಗ ಶೇ.57ಕ್ಕೆ ಇಳಿದದ್ದು. ಇವರೆಲ್ಲ ಹಳ್ಳಿಬಿಟ್ಟು ಪೇಟೆಗೆ ಹೋಗುವಂತಿಲ್ಲ. ಹಳ್ಳಿಯಲ್ಲಿ ನೀರಿಲ್ಲ – ಬರ – ಅಲ್ಲಿ ಬದುಕುವಂತಿಲ್ಲ. ಈ ಹಳ್ಳಿಯ ಜನಸಂಖ್ಯೆಯಲ್ಲಿನ ಇಳಿಕೆಯಿದೆಯಲ್ಲ ಅದು ಗಮನಿಸಿದರೆ ಇದೆಲ್ಲದಕ್ಕೆ ಕಾರಣ ಬರ ಮತ್ತು ನೀರು ಎನ್ನುವುದು ಸ್ಪಷ್ಟವಾಗಿತ್ತದೆ. ನಮ್ಮ-ನಿಮ್ಮ ಜೀವಿತಾ ವಧಿಯಲ್ಲಿ ನಡೆದ ಅತ್ಯಂತ ದೊಡ್ಡ ನಿರಾಶ್ರಿತರ ಬಿಕ್ಕಟ್ಟು ಎಂದರೆ ಸಿರಿಯಾದ್ದು. ಈ ಬಿಕ್ಕಟ್ಟಿನಲ್ಲಿ 1.35 ಕೋಟಿ ಮಂದಿ ತಾವಿದ್ದ ಊರು ಬಿಟ್ಟು ಇನ್ನೊಂದು ಊರಿಗೆ, ದೇಶಕ್ಕೆ ಈ ಅತಿ ಚಿಕ್ಕ ಸಮಯದಲ್ಲಿ ಗುಳೆ ಹೋಗಿದ್ದಾರೆ. ಈ ಸಂಖ್ಯೆಗಳೇ ಸಾಕು ಇಂದಿನ ಅಲ್ಲಿನ ಸ್ಥಿತಿಯನ್ನು ವಿವರಿಸಲಿಕ್ಕೆ. ಇದೆಲ್ಲ ದರ ನಡುವೆ ಹತ್ತಾರು ದೇಶಗಳು ಈ ರಾಜಕೀಯದಲ್ಲಿ ಒಳಕ್ಕೆ ಬಂದು ತಮ್ಮ ತಮ್ಮ ಪ್ರತಿಷ್ಠೆಗೆ ಒಂದೊಂದು ಗುಂಪನ್ನು ಬೆಂಬಲಿಸಿ ಸಮಸ್ಯೆಯನ್ನು ಇನ್ನಷ್ಟು ಜಟಿಲ ಗೊಳಿಸಿ ದವು.
ಅಲ್ಲದೇ ಐಸಿಸ್ ಉಗ್ರರು ಟೈಗ್ರಿಸ್ ನದಿಯ ಡ್ಯಾಮ್ ಅನ್ನು ಒತ್ತುವರಿ ಮಾಡಿಕೊಂಡು ಹರಿದು ಬರುತ್ತಿದ್ದ ಸ್ವಲ್ಪ ನೀರನ್ನೂ ನಿಲ್ಲಿಸಿ ಮಧ್ಯದಲ್ಲಿ ಕತ್ತನ್ನು ಇನ್ನಷ್ಟು ಹಿಸುಕಿದ್ದರು. ಇದೆಲ್ಲದರ ರಾಜಕೀಯ, ದೇಶ ದೇಶದ ಹೊಡೆದಾಟ ಇನ್ನೂ ಕ್ಲಿಷ್ಟವಾಗಿದ್ದರೂ ಇರಾಕ್, ಟರ್ಕಿ ಮತ್ತು ಸಿರಿಯಾದ ವೈಷಮ್ಯಕ್ಕೆಲ್ಲ ಮೂಲ ಕಾರಣವೇ ನೀರು. ಇದಷ್ಟೇ ಅಲ್ಲ; ಯೆಮನ್, ಬೊಲಿವಿಯಾ, ಸೋಮಾಲಿಯಾ, ಈಜಿಪ್ಟ್ ಇಲ್ಲದರ ಆಂತರಿಕ ಸಮಸ್ಯೆ, ಅಫ್ಘನ್ ಮತ್ತು ಇರಾನಿನ ಗಲಾಟೆ, ಟರ್ಕಿ ಮತ್ತು ಅರ್ಮೇನಿಯಾ ದಿಂದ ಹಿಡಿದು ನಮ್ಮ ಕರ್ನಾಟಕ ತಮಿಳುನಾಡು, ಕರ್ನಾಟಕ ಮಹಾರಾಷ್ಟ್ರದಿಂದ ಹಿಡಿದು ನಮ್ಮೂರ ದೋಮಪ್ಪ ಮತ್ತು ಬೋಮಪ್ಪನವರೆಗಿನ ಎಲ್ಲ ಗಲಾಟೆ, ಕಿತ್ತಾಟ, ವೈಮನಸ್ಸಿನ ಹಿಂದೆ ಅಂದು ನೀರಿನ ಸಮಸ್ಯೆ ಇರುವುದು ಕಾಣಿಸುತ್ತದೆ.
ನದಿಯ ಮೂಲ ತಿಳಿಯೋಕೆ ಹೋಗಬಾರದಂತೆ, ಆದರೆ ಈ ಎಲ್ಲ ಸಮಸ್ಯೆಗಳ ಮೂಲಕ್ಕೆ ಹೋದರೆ ಅಲ್ಲಿ ನದಿ – ನೀರು ಸಿಗುತ್ತದೆ. ಇದೆಲ್ಲ ಪ್ರಕೃತಿ ತನ್ನ ವೇಗ ದಲ್ಲಿ ಮಾಡಿಕೊಳ್ಳುವ ಸಹಜ ಬದಲಾವಣೆಗೆ ಮನುಷ್ಯ ಸ್ಪಂದಿಸಿದ ರೀತಿ ಎಂದು ಗ್ರಹಿಸುವುದು ಇನ್ನೊಂದು ಆಯಾಮ. ಮನುಷ್ಯನಿಗೆ ನೀರಿಲ್ಲದೆ ಸಾಯುವಂತಿಲ್ಲ, ಹೊಂದಿಕೊಳ್ಳಲು ಅಸಾಧ್ಯವಾಗಿ ಗುಳೆ ಹೋದರೆ ಇರುವ ಸಮಾಜ, ಕಟ್ಟಿಕೊಂಡ ದೇಶ ಮುರಿದು ಬೀಳುತ್ತದೆ. ಒಟ್ಟಾರೆ ಮನುಷ್ಯನಿಗೆ ನೀರು – ಗಂಗೆ ತಾನಿರು ವಲ್ಲಿಗೆ, ಆಹ್ವಾನ ಮಾಡಿದಾಗ ಬಂದು ಬಿಡಬೇಕು. ಗಂಗೆ ಅಷ್ಟು ಸುಲಭಕ್ಕೆ ಬಗ್ಗುವವಳಲ್ಲ, ಒಪ್ಪುವವಳಲ್ಲ. ಅವಳು ಕಲಿಯುಗದ ಗಂಗೆ. ಮಾಯಾ ಜಿಂಕೆ !