ಉರುಳಿದ ಕಟ್ಟಡ, ಮರಳಿದ ನೆನಪು
ಶಶಾಂಕಣ
ಶಶಿಧರ ಹಾಲಾಡಿ
.@.
ಹಳೆಯ ಕಟ್ಟಡಗಳು, ಬೀದಿಗಳು, ಮನೆಗಳು ನಮ್ಮ ಮನದಲ್ಲಿ ಸ್ಥಿರಗೊಂಡ ಪರಿಯೇ ಒಮ್ಮೊಮ್ಮೆ ವಿಸ್ಮಯ ಹುಟ್ಟಿಸುತ್ತದೆ. ಬಾಲ್ಯದಲ್ಲಿ ಕಂಡ ಮನೆಯನ್ನೋ, ಮರವನ್ನೋ, ರಸ್ತೆ ವಿಸ್ತರಣೆಯ ಕಾರಣದಿಂದ ಉರುಳಿಸಿದರು ಎಂದಾಗ ಮನದ ಮೂಲೆಯಲ್ಲೆಲ್ಲೋ ಸಣ್ಣ ಸೂಜಿ ಆಡಿಸುವಂತಾಗುವುದು ನಿಜ ತಾನೆ!
ಮೊನ್ನೆ ಹಾಗೆಯೇ ಆಯಿತು. ಹಾಲಾಡಿ ಪೇಟೆಯಲ್ಲಿದ್ದ ಹಳೆ ಬಂಡಸಾಲೆಯನ್ನು ಉರುಳಿಸಿದರು ಎಂಬ ಸಂದೇಶವನ್ನು ಗೆಳೆಯ ವಿವೇಕಾನಂದ ಶೆಣೈ, ಫೊಟೋ ಸಹಿತ ನಮ್ಮ ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ನಲ್ಲಿ, ಒಂದು ‘ಅಳುವ ಇಮೋಜಿ’ ಯೊಂದಿಗೆ ಹಾಕಿದಾಗ, ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ನೋವುಮೂಡಿದ್ದು ಸುಳ್ಳಲ್ಲ. ಹಾಲಾಡಿಯ ಹಳೆ ಪೇಟೆಯಲ್ಲಿ ಮಾರಿಕಾನು ದೇವಸ್ಥಾನದ ಹತ್ತಿರ ಮುಖ್ಯರಸ್ತೆಗೆ ಹೊಂದಿ ಕೊಂಡಂತಿದ್ದ ಆ ಬಂಡಸಾಲೆ ಎಂಬ ಹೆಸರಿನ ಕಟ್ಟಡದ ಗೋಡೆಗಳು ಉರುಳಿಬಿದ್ದ ಫೋಟೋ ಕಂಡಾಗ, ಹಲವು ಹಳೆಯ ನೆನಪುಗಳ ಮೆರವಣಿಗೆ ಮನಃಪಟಲದ ಮೇಲೆ ಹಾದುಹೋದ ಪರಿ ನಿಜಕ್ಕೂ ನಾಸ್ಟಾಲ್ಜಿಕ್.
ಹಾಲಾಡಿಯ ಹಳೆಪೇಟೆಯಲ್ಲಿದ್ದ ಸರಕಾರಿ ಶಾಲೆಗೆ ನಮ್ಮ ಮನೆಯಿಂದ ಸುಮಾರು ಮೂರು ಕಿ.ಮೀ.ದೂರ. ಮೊದಲ ಎರಡು ಕಿಮೀ ದಾರಿಯು ಗದ್ದೆ, ಬೈಲು, ತೋಡು, ಸಂಕ, ಹಕ್ಕಲು, ಹಾಡಿ, ಗುಡ್ಡೆಗಳನ್ನು ದಾಟಿ ಸಾಗಿದರೆ, ಕೊನೆಯ ಒಂದು ಕಿಮೀ ದಾರಿಯು ಹಾಲಾಡಿ ಹೊಸ ಪೇಟೆಯಿಂದ ಹಳೆ ಪೇಟೆಗೆ ಸಾಗುವ ಟಾರು ರಸ್ತೆಯ ಮೇಲೆ ಸಾಗುತ್ತದೆ. ಪ್ರತಿದಿನ ಬೆಳಗ್ಗೆ ಮೂರು ಕಿಮೀ, ಸಂಜೆ ಮೂರು ಕಿಮೀ ನಡೆಯುವಾಗ, ಸುತ್ತಲೂ ಪ್ರಕೃತಿಯ ಬಯಲು ರಂಗಭೂಮಿ, ಪರಿಸರದ ಪ್ರಾಥಮಿಕ ಪಾಠಗಳ ಶಿಕ್ಷಣಶಾಲೆ.
ಇದೇ ದಾರಿಯಲ್ಲಿ ಸಿಗುವ ಹಂದಿಕೊಡ್ಲು ಬೈಲಿನ ಬಳಿಯಿದ್ದ ಕೆಲವೇ ಪುರಾತನ ಅಡಿಕೆ ಮರಗಳ ತೋಟದಲ್ಲಿ ನಾನು ಹಾರುವ ಓತಿಯನ್ನು ಮೊದಲ ಬಾರಿ ಕಂಡದ್ದು. ತನ್ನ ಕುತ್ತಿಗೆ ಕೆಳಭಾಗದಲ್ಲಿದ್ದ ಅರ್ಧ ಇಂಚಿನ ಹಳದಿ ನಾಲಗೆಯಂತನ ರಚನೆಯನ್ನು ಅದು ಮುಂದಕ್ಕೆ ಆಗಾಗ ಚಾಚುತ್ತಾ, ಒಂದು ಮರದಿಂದ ಇನ್ನೊಂದು ಮರಕ್ಕೆ ಗ್ಲೈಡ್ ಮಾಡುತ್ತಾ ಹಾರುವ ಅದರ ನೋಟವೇ ಚಂದ. ಆ ವಿಶಿಷ್ಟ ಜೀವಿಯನ್ನು ‘ಓಂತಿ’ ಎನ್ನುತ್ತಿದ್ದರು ನಮ್ಮೂರಿ ನವರು.
ಅದಿರಲಿ, ಆ ದಾರಿಯಲ್ಲಿ ಪ್ರತಿದಿನ ಶಾಲೆಗೆ ನಡೆದು ಹೋಗಲು ನಮಗೆ, ಅಂದರೆ ಮಕ್ಕಳಿಗೆ ಅರ್ಧದಿಂದ ಮುಕ್ಕಾಲು ಗಂಟೆ ಬೇಕು. ಆದ್ದರಿಂದ ಮಧ್ಯಾಹ್ನದ ಊಟದ ಸಮಯದಲ್ಲಿ ಮನೆಗೆ ಬಂದು ಹೋಗಲು ಅಸಾಧ್ಯ್ಯ. ಪ್ರತಿದಿನ ಬೆಳಗ್ಗೆ, ಅದು ಮಳೆಗಾಲವಿರಲಿ, ಚಳಿಗಾಲವಿರಲಿ, ಬೇಸಗೆಯೇ ಇರಲಿ, ಪರೀಕ್ಷೆಯೇ ಇರಲಿ, ಬುತ್ತಿ ಊಟ ತೆಗೆದುಕೊಂಡು ಹೋಗಬೇಕಿತ್ತು. ಒಂದು ಪುಟಾಣಿ ಅಲ್ಯುಮಿನಿಯಂ ಉಗ್ಗದ ಪಾತ್ರೆಯಲ್ಲಿ ಗಂಜಿ, ಮೊಸರು, ಉಪ್ಪಿನ ಕಾಯಿಯನ್ನು ಮನೆ ಯಲ್ಲಿ ಹಾಕಿಕೊಡುತ್ತಿದ್ದರು. ಆಗಿನ ದಿನಗಳಲ್ಲಿ ನಮ್ಮ ಹಾಲಾಡಿ ಸರಕಾರಿ ಶಾಲೆಯಲ್ಲಿ ಕೈತೊಳೆಯುವ ನೀರಿನ ಅನುಕೂಲತೆ ಇರಲಿಲ್ಲ, ಅಷ್ಟೇಕೆ ಕುಡಿಯುವ ನೀರಿನ ಅನುಕೂಲತೆಯೂ ಅಷ್ಟೊಂದು ಚೆನ್ನಾಗಿರಲಿಲ್ಲ.
ಆದ್ದರಿಂದಲೇ ಇರಬೇಕು, ಈ ಬರಹದ ಮೊದಲ ವಾಕ್ಯದಲ್ಲಿ ಬಂಡಸಾಲೆ ಎಂದು ಕರೆದೆನಲ್ಲ, ಆ ಕಟ್ಟಡದ ಉಪ್ಪರಿಗೆಯ ಹಜಾರದಲ್ಲಿ ನಾವು ಕೆಲವು ಮಕ್ಕಳು ಬುತ್ತಿ ಪಾತ್ರೆ ಇಡುತ್ತಿದ್ದೆವು. ಆ ಉದ್ದನೆಯ ಹಜಾರದ ಒಂದೊಂದು ಮೂಲೆಯಲ್ಲಿ ಒಬ್ಬೊಬ್ಬರು ಬುತ್ತಿ ಪಾತ್ರೆ ಇಡುವ ಪರಿಪಾಠ. ನಮ್ಮ ಮನೆಯಿಂದ ಮೇಲ್ಭಾಗ ದಲ್ಲಿದ್ದ ಉಪ್ಪೂರರ ಮನೆ, ಬೈಲಿಂದಾಚೆ ಇದ್ದ ಭಟ್ಟರ ಮನೆ, ಬೈಲಿನ ತುದಿಯಲ್ಲಿದ್ದ ಅಡಿಗರ ಮನೆಯ ಮಕ್ಕಳ ಜತೆ ನಾನೂ ಅದೇ ಉಪ್ಪರಿಗೆಯ ಒಂದು ಭಾಗದಲ್ಲಿ, ಗೋಡೆಗೆ ಆನಿಸಿ ಬುತ್ತಿಯಿಟ್ಟು ಶಾಲೆಗೆ ಹೋಗುತ್ತಿದ್ದೆ. ಇನ್ನೂ ಕೆಲವು ಮಕ್ಕಳು ಅಲ್ಲಿ ಬುತ್ತಿ ಇಡುತ್ತಿದ್ದರು. ಮಧ್ಯಾಹ್ನದ ಊಟದ ಬೆಲ್ ಆದ ಕೂಡಲೆ, ಒಂದು ಫರ್ಲಾಂಗು ದೂರದಲ್ಲಿದ್ದ ಬಂಡಸಾಲೆ ಎಂಬ ಹೆಸರಿನ ಆ ಮಜಬೂತಾದ ಮನೆಗೆ ಬಂದು, ಬುತ್ತಿ ಊಟ ಮಾಡಿ, ಕೆಳಗೆ ಆ ಮನೆಯವರು ನಮಗಾಗಿ ಸಿದ್ಧಪಡಿಸಿ ಇಡುತ್ತಿದ್ದ ಕೈತೊಳೆಯುವ ಜಾಗದಲ್ಲಿ ಬುತ್ತಿ ಪಾತ್ರೆ ಮತ್ತು ಕೈ ತೊಳೆದು, ಪುನಃ ಖಾಲಿ ಬುತ್ತಿಪಾತ್ರೆಯನ್ನು ಅ ಇಟ್ಟು ಶಾಲೆಗೆ ಹೋಗುತ್ತಿದ್ದೆವು.
ಊಟದ ನಂತರ ಕುಡಿಯುವ ನೀರನ್ನು ನೀಡುವ ಪುಣ್ಯದ ಕೆಲಸವನ್ನೂ ಆ ಮನೆಯವರು ಮಾಡುತ್ತಿದ್ದರು. ಸಂಜೆ ಮನೆಗೆ ಹೋಗುವಾಗ, ಅಲ್ಲಿಂದ ಬುತ್ತಿ ಪಾತ್ರೆಯನ್ನು ತೆಗೆದುಕೊಂಡು, ಕಾಡಿನ ದಾರಿ ಹಿಡಿದು ಮನೆಯತ್ತ ನಡಿಗೆ. ಈ ರೀತಿ ದೂರದಿಂದ ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಬುತ್ತಿ ಪಾತ್ರೆ ಇಡಲು ಜಾಗ ಕೊಟ್ಟಿದ್ದ ವರು, ಹಿರಿಯಣ್ಣ ನಾಯಕರು. ಆಗ ಹಾಲಾಡಿ ಶಾಲೆಯಲ್ಲಿ ಸುಮಾರು ಮುನ್ನೂರು ಮಕ್ಕಳಿದ್ದರು; ಅವರಲ್ಲಿ ೧೫೦ ಮಕ್ಕಳಾದರೂ ಇದೇ ರೀತಿ ಬುತ್ತಿತರುತ್ತಿದ್ದವರು. ಎಲ್ಲರಿಗೂ ಅಲ್ಲೆಲ್ಲಿ ಜಾಗ ಸಾಕಾದೀತು? ನಾವು ಏಳೆಂಟು ಮಕ್ಕಳು ಅಲ್ಲಿ ಬುತ್ತಿ ಇಡುತ್ತಿದ್ದೆವು.
ಅವರು ಯಾವ ಮನೆಯವರು, ಏನು – ಎತ್ತ ಎಂದು ವಿಚಾರಿಸದೇ, ಆ ವಿಶಾಲ ಉಪ್ಪರಿಗೆಯಲ್ಲಿ ಬುತ್ತಿ ಇಡಲು ಅವರ ಬ್ಲಾಂಕೆಟ್ ಅನುಮತಿ ಇತ್ತು. ಪಾಪ ಮಕ್ಕಳು, ತಮ್ಮ ಮನೆಯ ಒಂದು ಭಾಗದಲ್ಲಿ ಊಟ ಮಾಡಿಕೊಂಡು ಹೋಗಲಿ ಎಂಬ ಮನೋಭಾವ. ಶಾಲೆಗೆ ಹೋಗುವ ಮಕ್ಕಳಿಗೆ ಸಹಾಯ ಮಾಡುವು ದೆಂದರೆ ಅವರಿಗೆ ಬಲು ಇಷ್ಟ. ಅವರಿಗೆ ಮಕ್ಕಳಿರಲಿಲ್ಲ. ಹಾಗಂತ, ಹಿರಿಯಣ್ಣ ನಾಯಕರು ಆ ಬಂಡಸಾಲೆ ಎಂಬ ಗಟ್ಟಿ ಮುಟ್ಟಾದ ಕಟ್ಟಡದ ಮಾಲಿಕರಲ್ಲ!
ಅವರು ಅಲ್ಲಿ ಬಾಡಿಗೆಗೆ ಇರುವವರು! ಜತೆಗೆ, ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇದ್ದ ಆ ಕಟ್ಟಡದ ಮುಂಭಾಗದ ಎರಡು ಮಳಿಗೆಗಳ ಪೈಕಿ ಒಂದರಲ್ಲಿದ್ದ ಪುಟ್ಟ ಹಳ್ಳಿ ಪೋಸ್ಟ್ ಆಫೀಸಿಗೆ ಅವರೇ ಪೋಸ್ಟ್ ಮಾಸ್ಟರ್! ಆದರೆ ಆ ಪೋಸ್ಟ್ ಮಾಸ್ಟರ್ ಹು ಖಾಯಂ ಅಲ್ಲ, ಬದಲಿಗೆ ಹಂಗಾಮಿ ಸ್ವರೂಪದ್ದು. ಅವರು ಆ ಪುಟಾಣಿಪೋಸ್ಟ್ ಆಫೀಸಿಗೆ ಒಂದು ರೀತಿಯಲ್ಲಿ ಗೌರವ ಪೋಸ್ಟ್ ಮಾಸ್ಟರ್. ಇದು ಗೊತ್ತಾಗಿದ್ದು ಹೇಗೆಂದರೆ, ಒಂದೇ ವರ್ಷದ ಅವಧಿಯಲ್ಲಿ ಅವರ ಪೋಸ್ಟ್ ಮಾಸ್ಟರ್ ಹು ಬೇರೆಯವರ ಪಾಲಾಯಿತು. ಆಗ ಹಿರಿಯಣ್ಣ ನಾಯಕರು, ತಮ್ಮ ಮನೆಯನ್ನು ಬದಲಿಸಬೇಕಾಯಿತು.
ಅದೇ ರಸ್ತೆಯಲ್ಲಿ ಒಂದು ಫರ್ಲಾಂಗು ದೂರದಲ್ಲಿರುವ ಇನ್ನೊಂದು ಹಂಚಿನ ಮನೆಗೆ ತಮ್ಮ ವಾಸವನ್ನು ಸ್ಥಳಾಂತರಿಸಿ ದರು. ಅದೂ ಸಹ ಬಾಡಿಗೆಯ ಕಟ್ಟಡ. ಅದರಲ್ಲೂ ಒಂದು ಪುಟ್ಟ ಮಳಿಗೆ ತೆರೆಯುವ ಅವಕಾಶವಿತ್ತು. ಅಲ್ಲಿ ಅವರು ಹಳ್ಳಿಮಟ್ಟದ ಒಂದು ಪುಟ್ಟ ಬಟ್ಟೆ ಅಂಗಡಿ ಆರಂಭಿಸಿದರು. ಜತೆಗೆ ತಮ್ಮ ಟೈಲರ್ವೃತ್ತಿಗೆ ಮರುಚಾಲನೆ ನೀಡಿದರು. ಅವರ ಕಾರ್ಯಸ್ಥಳ ಬದಲಾದಾಗ, ನಾವು ಬುತ್ತಿ ಇಡುವ ಜಾಗ ಸಹ ಅವರ ಹಿಂದೆಯೇ, ಅವರ ಹೊಸ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತು. ಇಲ್ಲಿ ಉಪ್ಪರಿಗೆ ಇರಲಿಲ್ಲ. ಕತ್ತಲು ತುಂಬಿದ ಅಲ್ಲಿನ ನಡುಮನೆ ಯ ಬುತ್ತಿ ಇಟ್ಟು, ಮಧ್ಯಾಹ್ನ ಊಟ ಮಾಡುತ್ತಿದ್ದೆವು. ಈ ಮನೆ ತುಸು ಚಿಕ್ಕದು. ಆದರೆ ಹಿರಿಯಣ್ಣ ನಾಯಕರ ಮನಸ್ಸು ದೊಡ್ಡದು!
ನಮ್ಮೂರಿನಲ್ಲಿ ಮೂರು ಬಂಡಸಾಲೆಗಳಿವೆ. ಹಾಲಾಡಿ ನದಿಯ ತೀರದಲ್ಲಿದ್ದ ನಮ್ಮೂರಿಗೆ, ದೋಣಿಯ ಮೂಲಕ ಹಿಂದೆ ಉಪ್ಪು, ಹೆಂಚು ಮತ್ತಿತರ ಸಾಮಾನು ಗಳನ್ನು20ಕಿಮೀ ದೂರದ ಕರಾವಳಿಯಿಂದ ತರುತ್ತಿದ್ದರು. ಇಲ್ಲಿಯ ತನಕ ಬರತದ ನೀರು ಬರುತ್ತಿತ್ತಾದ್ದರಿಂದ ದೋಣಿ ಬಿಡಲು ಸುಲಭ. ಇಲ್ಲಿಂದ ಉಳ್ತಿಗ ಘಾಟಿಯ ಮೂಲಕ ಸಾಮಾನು ಸಾಗಿಸುತ್ತಿದ್ದರು. ಆ ನಡುವೆ ಸಾಮಾನು ಸಂಗ್ರಹಿಸಲು ನಿರ್ಮಿಸಿದ್ದ ಗಟ್ಟಿಮುಟ್ಟಾದ ಕಟ್ಟಡಗಳೇ ಬಂಡಸಾಲೆಗಳು. (ಬಂಡ = ಸರಕು). ಇವೆಲ್ಲಾ ದೆರಡು ಶತಮಾನದ ಹಿಂದಿನ ಕಥೆಗಳು.
ಇರಲಿ, ಮಾರಿಕಾನು ದೇವಸ್ಥಾನದ ಹತ್ತಿರವಿದ್ದ ‘ಕಕ್ಕುಂಜೆ ಬಂಡಸಾಲೆ’ಯನ್ನು ಈಗ ಒಡೆದು ಹಾಕಿದ್ದಾರೆ ಎಂಬ ಚಿತ್ರಸಹಿತ ಸುದ್ದಿಯನ್ನು ವಾಟ್ಸಾಪ್ನಲ್ಲಿ ನೋಡಿದ ಕೂಡಲೆ, ಇವೆಲ್ಲ ನೆನಪಾಯಿತು. ಇಲ್ಲಿ ಇನ್ನೊಂದು ಭಾವನಾತ್ಮಕ ನೆನಪೂ ಸೇರಿಕೊಂಡಿದೆ. ಬಂಡಸಾಲೆ ಕಟ್ಟಡದ ಒಂದು ಮಳಿಗೆಯಲ್ಲಿದ್ದ ಪೋಸ್ಟ್ ಆಫೀಸಿಗೆ ನಾನು ಖಾಯಂ ಗಿರಾಕಿ. ಆಗ ಹಾಲಾಡಿಯಲ್ಲಿ ಮಧ್ಯಾಹ್ನ ಒಂದು ಗಂಟೆಯ ಸಮಯವು ಪತ್ರಗಳ ಬಟವಾಡೆಯ ಸಮಯ. ಹನ್ನೆರಡು ಗಂಟೆಗೆ ಹನುಮಾನ್ ಟಪಾಲ್ ಬಸ್ಸು ತರುತ್ತಿದ್ದ ಆ ಒಂದು ಪೋಸ್ಟ್ ಬಂಡಲ್ ಇದಕ್ಕೆ ಕಾರಣ.
ಪ್ರತಿ ದಿನ ಬುತ್ತಿ ಊಟವಾದ ಕೂಡಲೇ, ನಾನು ಪೋಸ್ಟ್ ಆಫೀಸಿನ ಮುಂದೆ ನಿಂತಿರುತ್ತಿದ್ದೆ. ಅಲ್ಲಿ ನನ್ನ ರೀತಿ ಕಾಗದಕ್ಕಾಗಿ ಕಾಯುತ್ತಿರುವವರು ನಾಲ್ಕಾರು ಮಂದಿ ಇರುತ್ತಿದ್ದುದು ಸಾಮಾನ್ಯ. ನಾನು ಪ್ರತಿದಿನ ಕಾಯುವ ಕಾರಣವೆಂದರೆ, ನಮ್ಮಪ್ಪ ಆಗ ದೂರದ ಆಂಧ್ರದಲ್ಲಿ ಹೊಟೇಲ್ ಕೆಲಸದಲ್ಲಿದ್ದರು. ಅವರು ವಾರಕ್ಕೆ ಒಂದು ಕಾಗದ ಬರೆಯುತ್ತಿದ್ದು, ಅದು ಮೂರು ನಾಲ್ಕು ದಿನಗಳಲ್ಲಿ ಹಾಲಾಡಿಗೆ ಬರುತ್ತಿತ್ತು. ಅದರ ಜತೆ, ಊರಿನ ಯಾರಿಗೆ ಕಾಗದ ಬರುತ್ತೆ ಎಂದು ತಿಳಿಯುವ ಕುತೂಹಲವೂ ಅಲ್ಲಿ ನಿಲ್ಲುವಂತೆ ಮಾಡುತ್ತಿತ್ತು. ಪೋಸ್ಟ್ ಮ್ಯಾನ್ ಎಲ್ಲಾ ಕಾಗದಗಳಿಗೆ ಸೀಲು ಹೊಡೆದ ನಂತರ, ಅವುಗಳ ಮೇಲಿನ ಅಡ್ರೆಸ್ಸನ್ನು ದೊಡ್ಡದಾಗಿ ಓದುವುದರಿಂದಾಗಿ, ಆ ದಿನ ಸಮಸ್ತ ಹಾಲಾಡಿಯಲ್ಲಿರುವ ಯಾರ್ಯಾರಿಗೆ ಏನೇನು ಪತ್ರಗಳು ಬಂದಿವೆ ಎಂದು ನಮಗೆಲ್ಲರಿಗೂ ಗೊತ್ತಾಗುತ್ತಿತ್ತು.
ಕೆಲವರಿಗೆ ಕಾರ್ಡ್, ಕೆಲವರಿ ಇನ್ಲ್ಯಾಂಡ್ ಲೆಟರ್, ಇನ್ನು ಕೆಲವರಿಗೆ ಕವರುಗಳು! ಹಾಗಾಗಿ, ಅಂದಿನ ದಿನಗಳಲ್ಲಿ ಇದೂ ಒಂದು ಜ್ಞಾನಾರ್ಜನೆಯ ವಿಧಾನ!ಈ ರೀತಿಯ ಹಲವು ಅನುಭವಗಳನ್ನುನೀಡಿದ್ದ ಆ ಕಟ್ಟಡವು ನೆಲಕ್ಕೆ ಉರುಳಿದ ಸಂದರ್ಭದ ಫೋಟೋವನ್ನು ವಾಟ್ಸಾಪ್‌ನಲ್ಲಿ ಕಂಡು, ಮನ ದಾಳದಲ್ಲಿದ್ದ ನೆನಪು ಗಳು ಉಕ್ಕಿಬಂದವು. ಆ ವಾಟ್ಸಾಪ್ ಫೋಟೋವನ್ನು ಕ್ಲಿಕ್ ಮಾಡಿ, ಅದಕ್ಕೆ ಉತ್ತರ ರೂಪದಲ್ಲಿ ‘ಈ ಕಟ್ಟಡದೊಂದಿಗೆ ನನ್ನ ಹಲವು ನೆನಪುಗಳಿವೆ, ನಾವು ಪ್ರತಿದಿನ ಮಧ್ಯಾಹ್ನ ಬುತ್ತಿ ಊಟ ಮಾಡುತ್ತಿದ್ದ ಜಾಗ ಅದು, ಊಟ ಡಿ ಹಿರಿಯಣ್ಣ ನಾಯಕರ ಮನೆಯಲ್ಲಿ ನೀರು ಕುಡಿದು ಶಾಲೆಗೆ ಬರುತ್ತಿದ್ದೆವು’ ಎಂದು ಪಿಸಿ, ಪೆಚ್ಚುಮುಖದ ಒಂದು ಇಮೋಜಿಯ ಜತೆ ಪೋಸ್ಟ್ ಮಾಡಿದೆ.
ಈ ನನ್ನ ಪ್ರತಿಕ್ರಿಯೆಗೆ ಸ್ಪಂದಿಸಿದ ನನ್ನ ಇನ್ನೊಬ್ಬ ಸಹಪಾಠಿಯ ಅನಿಸಿಕೆ ನೋಡಿ, ನನ್ನ ಯೋಚನಾ ಕ್ರಮವೇ ತಲೆಕೆಳಗಾಯಿತು! ಮೂರು ಕಿಮೀ ದೂರದ ನಮ್ಮ ಮನೆಯಿಂದ ಪ್ರತಿದಿನ ನಡೆದು ಬರುತ್ತಾ, ಒಂದು ಮುಷ್ಟಿ ಗಂಜಿಯನ್ನು ಉಗ್ಗದ ಪಾತ್ರೆಯಲ್ಲಿ ತಂದು, ಬಂಡಸಾಲೆಯ ಉರಿಗೆಯಲ್ಲಿಟ್ಟು, ಅದು ಪೂರ್ತಿ ತಣ್ಣಗಾದ ನಂತರ, ಮಧ್ಯಾಹ್ನ ಊಟ ಮಾಡುತ್ತಿದ್ದೆ. ಐದನೆಯ ತರಗತಿಯಿಂದ ಏಳನೆಯ ತರಗತಿಯ ತನಕ ಈ ರೀತಿ ಮೂರು ವರ್ಷಗಳ ಕಾಲ ಪ್ರತಿ ದಿನ ನಾನು ತಿನ್ನಬೇಕಾಗಿತ್ತು ಎಂಬ ವಿಚಾರ ತಿಳಿದು ನನ್ನ ಸಹಪಾಠಿಗಳು ಕನಿಕರ ವ್ಯಕ್ತಪಡಿಸಬಹುದು ಎಂಬುದು ನನ್ನ ಭಾವನೆಯಾಗಿತ್ತು.
ಆದರೆ ಆ ಸಹಪಾಠಿ ಏನೆಂದ ಗೊತ್ತೆ? ‘ನನಗೆ ಆ ರೀತಿಯ ಲಕ್ಷುರಿ ಇರಲಿಲ್ಲ. ನಾವು ಕೆಲವರು ಹುಡುಗರು ಮಧ್ಯಾಹ್ನ ಊಟದ ಬೆಲ್ ಹೊಡೆದ ಕೂಡಲೇ, ಉಪ್ಪಿನ ಕೋಟೆಗೆ (ತುಸು ಕಾಡು ಬೆಳೆದ ನದಿತೀರದ ಜಾಗ, ಎರಡು ಫರ್ಲಾಂಗ್ ದೂರದಲ್ಲಿತ್ತು) ಓಡುತ್ತಾ ಹೋಗಿ, ಅಲ್ಲಿ ಗಂಜಿ ಮತ್ತು ಉಪ್ಪಿನಕಾಯಿ ತಿನ್ನಬೇಕಿತ್ತು. ಆನಂತರ, ಕೆಲವರು ಹಾಲಾಡಿ ಹೊಳೆಯ ನೀರನ್ನು ಕುಡಿದು ಶಾಲೆಗೆ ಬರುತ್ತಿzವು. ಆ ಹೊಳೆಯಲ್ಲಿ ಕೆಲವು ಬಾರಿ ಎಮ್ಮೆಗಳು ಮಲಗಿರುತ್ತಿದ್ದವು!’ ಬಂಡಸಾಲೆಯ ಉಪ್ಪರಿಗೆಯಲ್ಲಿ ನಾವು ನಾಲ್ಕಾರು ಮಕ್ಕಳು ಬುತ್ತಿ ಊಟ ಮಾಡುತ್ತಿದ್ದುದು, ಅಂದಿನ ಇತರ ಕೆಲವು ಸಹಪಾಠಿಗಳ ದೃಷ್ಟಿಯಲ್ಲಿ ಲಕ್ಷುರಿಯಾಗಿತ್ತು ಎಂದು ತಿಳಿದು, ನನಗೆ ಇಂದು, ಅಂದರೆ ಅವೆ ನಡೆದು ೫೦ ವರ್ಷಗಳ ನಂತರ ತಿಳಿದಾಗ, ಬೆರಗು, ವಿಸ್ಮಯ ಎಲ್ಲವೂ ಒಟ್ಟಿಗೇ ಆಯಿತು! ಕಾಲ ಬದಲಾದಂತೆ ಅವರವರಅದೃಷ್ಟದ ಪರಿಕಲ್ಪನೆಗಳುಬದಲಾಗುತ್ತಾ ಹೋಗುವುದೇ ಒಂದು ಅಚ್ಚರಿ, ಅಲ್ಲವೆ!