ಬಜೆಟ್: ವಾಸ್ತವ, ವಿಮರ್ಶೆ ಮತ್ತು ನಿರೀಕ್ಷೆ
ವಿಶ್ಲೇಷಣೆ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಎರಡಂಕಿ ಆರ್ಥಿಕ ಬೆಳವಣಿಗೆಯ ದರ ಸಾಧನೆಯ ಗುರಿ ಹೊಂದಿರುವ ಸರಕಾರ, ಸೋಂಕಿನ ವಿಘ್ನಗಳನ್ನು ಎದುರಿಸಿ ಕಂಗೆಟ್ಟ ಅರ್ಥವ್ಯವಸ್ಥೆಯ ಪಥ ಬದಲಿಸ ಬೇಕಾಗಿದೆ.
ಫೆಬ್ರವರಿ 1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಕರಾರುವಕ್ಕಾದ ಯೋಜನೆಗಳೊಂದಿಗೆ ಬೃಹದಾಕಾರಾದ ಸವಾಲುಗಳನ್ನು ಎದುರಿಸಬೇಕಾಗಿದೆ. ಆಕಾಶ, ಭೂಮಿ ಒಂದು ಮಾಡುವ ಅತ್ತ ಧರಿ ಇತ್ತ ಪುಲಿ ಎಂಬಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವುದು ಕಠಿಣ ಸವಾಲೇ ಆಗಿದೆ. ಬಜೆಟ್ ನಮಗೆ ಏನನ್ನುಕೊಡುತ್ತದೆ ಎಂಬುದಕ್ಕಿಂತಲೂ ಸರಕಾರ ಸಂಪನ್ಮೂಲಗಳನ್ನು ಯಾವ ಕ್ಷೇತ್ರಗಳಿಂದ ಕ್ರೋಡೀಕರಿಸುತ್ತದೆ ಮತ್ತು ಯಾವ ಆಯಾಮಗಳಲ್ಲಿ ಲಭ್ಯತೆಯಿದೆ ಎಂಬುದು ಪ್ರಮುಖವಾಗುತ್ತದೆ. ಆಗಾಧ ಸಂಪನ್ಮೂಲಗಳ ಕೊರೆತೆ ಯಿರುವಾಗ ಆರ್ಥಿಕತೆಯನ್ನು ಹಳಿಗೆ ತಂದು ಕ್ರೋಢೀಕರಿಸಿದ ಸಂಪನ್ಮೂಲಗಳನ್ನು ವಿನಿಯೋಗಗೊಳಿಸ ಬೇಕಾಗಿದೆ.
ಕಳೆದ ಬಾರಿ 18.49 ಲಕ್ಷ ಕೋಟಿ ರು.ವಿತ್ತೀಯ ಕೊರತೆಯಿಂದೊಡಗೂಡಿದ 34.83 ಲಕ್ಷ ಕೋಟಿ ರು. ಗಾತ್ರದ ಬಜೆಟ್ ಮಂಡನೆಯಾಗಿತ್ತು. ಇವೆರಡೂ ಬೃಹತ್ ಗಾತ್ರಗಳೇ ಆಗಿವೆ. ವಿತ್ತೀಯ ಕೊರತೆಯಲ್ಲಿ ಅರ್ಧದಷ್ಟು ಸಾಲದ ಬಡ್ಡಿಯೇ ಆಗುತ್ತದೆ. ಇದು ತಲ್ಲಣಗೊಳಿಸುವ ವಿಚಾರವಲ್ಲವೇ? ಈ ಬಾರಿ ಖಜನೆಯಲ್ಲಿ ಹಣವಿಲ್ಲದಿದ್ದರೂ ಆಗಾಧ ಕೊರತೆ ಬಜೆಟ್ ಆಗುವ ಸಂಭವವಿದ್ದರೂ ಕೇಂದ್ರ ಹೊಸ ಯೋಜನೆಗಳನ್ನು ಘೋಷಿಸಲೇ ಬೇಕಾಗುತ್ತದೆ. ಸರಕಾರಕ್ಕೆ ಸಾಲದ ಮೊತ್ತವನ್ನು ಇಳಿಸಲು ತತ್‌ಕ್ಷಣ ಯಾವ ಪರಿಹಾರಗಳೂ ಇಲ್ಲ. ಹೆಚ್ಚಾಗಿ ಮೂಲ ಸೌಕರ್ಯ ಗಳಲ್ಲಿ ಹಣ ಹೂಡುವ ಯೋಜನೆಯನ್ನು ಕಾಣಿಸಬೇಕಾಗಿದೆ.
ಕೃಷಿ ವಲಯಕ್ಕೆ ಉತ್ತೇಜನ ನೀಡುವ ಸಲುವಾಗಿ 2022-2023ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರಕಾರವು ಕಳೆದ ಬಾರಿ ನೀಡಿದ 16.5 ಲಕ್ಷ ಕೋಟಿ ರು.ಗಳಿಂದ 18 ಲಕ್ಷ ಕೋಟಿ ರು. ವರೆಗೆ ಏರಿಸುವ ಸಾಧ್ಯತೆ ಇದೆ. ಕಳೆದ ಬಾರಿ ಈ ನಿಟ್ಟಿನಲ್ಲಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳು ಮಹತ್ತರ ಪಾತ್ರ ವಹಿಸಿವೆ ಮತ್ತು ಗುರಿ ಮೀರಿ ಸಾಲ ಒದಗಿಸಿವೆ. ಕಿರು, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ದೇಶದ ಆಂತರಿಕ ಉತ್ಪನ್ನಕ್ಕೆ ಶೇ.30 ರಷ್ಟು ಕೊಡುಗೆ ನೀಡುತ್ತವೆ ಮತ್ತು ಸರಿಸುಮಾರು ಒಂದು ಕೋಟಿ ಉದ್ಯೋಗಿಗಳಿದ್ದಾರೆ. ಈ ಕ್ಷೇತ್ರವು ಕಳೆದ ಎರಡೂ ಕೋವಿಡ್ ಅಲೆಗಳಿಂದ ಬಾರೀ ಹೊಡೆತ ತಿಂದಿವೆ. ಕೆಲವು ಮುಚ್ಚಿಯೇ ಹೋಗಿವೆ.
ಆದುದರಿಂದ ಈ ವಲಯಕ್ಕೆ ಭಾರೀ ಕೊಡುಗೆಯನ್ನು ಘೋಷಣೆ ಮಾಡದಿದ್ದರೆ ಮಾರಕವಾಗಿ ಪ್ರಮಾದವೇ ಆದೀತು. ರಫ್ತು ಮತ್ತು ಆಮದು ನೀತಿಯಲ್ಲಿ ಸುಂಕ ಮತ್ತು ನಿಖರ ಸುಧಾರಣೆಗಳಾಗಬಹುದು. ವೇತನದಾರರಿಗೆ ಈ ಬಾರಿ ಸ್ಟಾಂಡರ್ಡ್ ಡಿಡಕ್ಶನ್ ಪ್ರಸಕ್ತ 50000 ದಿಂದ 75000 ರು. ವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದ ಕೋಟ್ಯಂತರ ವೇತನದಾರರು ಮತ್ತು ಪಿಂಚಣಿದಾರರಿಗೆ ಮತ್ತು ಮಧ್ಯಮ ವರ್ಗದ ಆದಾಯದವರಿಗೆ ಅನುಕೂಲವಾಗಲಿದೆ. ಚರ್ಚಾ ಸ್ಪದವಾಗಿರುವ ಆದಾಯದ ಬದಲು ವೆಚ್ಚಕ್ಕೆ ತೆರಿಗೆ ವಿಧಿಸುವುದರ ಬಗ್ಗೆ ಆತುರ ಸಲ್ಲದು ಮತ್ತು ಈ ಬಗ್ಗೆ ಚರ್ಚೆ ಮತ್ತು ಅಧ್ಯಯನ ಅಗತ್ಯ.
ಗೃಹ ಸಾಲದ ಬಡ್ಡಿಯ ರಿಬೇಟ್ 2 ಲಕ್ಷಕ್ಕೆ ಏರಿಸುವ ನಿರೀಕ್ಷೆಯಿದೆ.ಎಫೋರ್ಡೆಬಲ್ ಹೌಸಿಂಗ್ ವ್ಯಾಖ್ಯಾನ (ಎಲ್ಲರಿಗೂ ಕಡಿಮೆ ದರದಲ್ಲಿ ಮನೆ)ದಡಿ ಮೆಟ್ರೋ ನಗರಗಳಲ್ಲಿ 1.5 ಕೋಟಿ ಮತ್ತು ಉಳಿದೆಡೆ 75 ಲಕ್ಷ ರು. ಮಿತಿಗೆ ತರಬಹುದು. ಆರೋಗ್ಯ ಸೇವಾ ವಲಯಕ್ಕೆ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ಅರ್ಥ ವ್ಯವಸ್ಥೆಯ ಮಟ್ಟಿಗೆ ಭರವಸೆಯ ಸಂಗತಿಗಳು ಮತ್ತು ಆಶಾದಾಯಕ ಚಿತ್ರಣಗಳ ಸಂದರ್ಭದಲ್ಲಿ, ಮಂಕು ಕವಿದಿದ್ದ ದೇಶದ ಒಟ್ಟಾರೆ ಆರ್ಥಿಕ ವ್ಯವಸ್ಥೆಯಲ್ಲಿ ಈಗಸ್ಥಿರತೆ ಕಾಣುತ್ತಿದ್ದರೂ, ಚೇತರಿಕೆಯ ದಾರಿಯಲ್ಲಿದೆ. ಜಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದರೂ ಕೆಳಮಟ್ಟದಲ್ಲಿ ಬೆಳವಣಿಗೆ ಕಂಡು ಬಂದಿರುವುದು ಕಳವಳಕಾರಿ.
ಕಾರ್ಮಿಕರು, ರೈತರು, ಸಣ್ಣ ಉದ್ದಿಮೆದಾರರು, ಕೂಲಿಕಾರ್ಮಿಕರು ತೀವ್ರ ಹಿಮ್ಮುಖ ಚಲನೆ ಅನುಭವಿಸುತ್ತಿದ್ದಾರೆ. ಸಾಮೂಹಿಕ ಬಳಕೆಯ  ಸರಕುಗಳಲ್ಲಿನ ಖರೀದಿಯ ಬೆಳವಣಿಗೆ ಕುಂಠಿತವಾಗಿದೆ. ಬಸವಳಿದ ಜನಗಳಿಗೆ ಹಣದುಬ್ಬರ ತಾಳಲಾಗುತ್ತಿಲ್ಲ. ದೇಶದ ಪ್ರಗತಿಯನ್ನು ಪೋಷಿಸಲು ಹಣದುಬ್ಬರ ಮತ್ತುನಿರುದ್ಯೋಗ ನಿಯಂತ್ರಣಗಳೆರಡೂ ಅತ್ಯಂತ ಪ್ರಾಮುಖ್ಯ. ಬಡತನ ಕಡಿಮೆಯಾಗಿಲ್ಲ. ನಿರುದ್ಯೋಗ ನಗರಗಳಿಲ್ಲ. ಶೇ.8.5 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ.6.74ರ‍್ಟದೆ. ದೈನಂದಿನ ಉಪಯೋಗಿ ವಸ್ತುಗಳ ಬೆಲೆ ಇಳಿದಿಲ್ಲ.
ಸರಕಾರದ ಬಂಡವಾಳ ಹೆಚ್ಚಲಿಲ್ಲ. ಆರ್‌ಬಿಐ ಜತೆ ಸರಕಾರವೂ ಒಂದುಗೂಡಿ ಹಣದುಬ್ಬರ ನಿಯಂತ್ರಣಕ್ಕೆ ಬಜೆಟ್ ಮುಖೇನ ಸೂಕ್ತ ಕ್ರಮ ಕೈಗೊಳ್ಳಬಹುದು.ಇಲ್ಲವಾದಲ್ಲಿ ಅಭಿವೃದ್ಧಿಯ ಎಲ್ಲ ಫಲಗಳು ನಿಷ್ಪ್ರಯೋಜಕಗೊಳ್ಳುತ್ತವೆ. ಡಿಸೆಂಬರ್‌ನಲ್ಲಿ ಹಣದುಬ್ಬರ ಶೇ.5.59 ತಲುಪಿದೆ. ಇದು ಆತಂಕದ ವಿಚಾರ ಮತ್ತುಹಣದುಬ್ಬರಕ್ಕೆ ಸರಕಾರಗಳನ್ನೇ ಬದಲಿಸುವ ಶಕ್ತಿ ಇದೆ. ಅರ್ಥವ್ಯವಸ್ಥೆಯಲ್ಲಿ ಹೆಚ್ಚಿನ ಹಣದುಬ್ಬರ ಮತ್ತು ನಿರುದ್ಯೋಗವಿದೆ. ಕಳೆದೆರಡು ವರ್ಷಗಳಿಂದ ಕುಟುಂಬಗಳ ತಲಾ ಆದಾಯ ಕಡಿಮೆಯಾಗಿದೆ. ಬಡ ಕುಟುಂಬಗಳ ಕಲ್ಯಾಣಕ್ಕೆ ಯೋಜನೆ ನಿರೂಪಿಸಬೇಕಾಗಿದೆ. ಸರಕು ಮತ್ತು ಸೇವೆಗಳ ಸೇವೆಯನ್ನು ಹೆಚ್ಚುವಂತೆ ಮಾಡಬೇಕಾಗಿದೆ.
ನಿಸ್ಸಂದೇಹವಾಗಿ ಈ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲೇ ಬೇಕಾಗಿದೆಯಲ್ಲದೆ ಮೊದಲೆರಡು ಅಲೆಗಳಲ್ಲಾದ ನಷ್ಟವನ್ನು ತುಂಬಲೇಬೇಕಾಗಿದೆ. ಈ ಬಜೆಟ್ ನಿಶ್ಚಿತವಾಗಿಯೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲೇಬೇಕಾಗಿದೆ. ಇಲ್ಲವಾದಲ್ಲಿ ಆಳುವ ಪಕ್ಷಕ್ಕೆ ಹೊಡೆತ ಬೀಳದೇ ಇರಲಾರದು. ದೇಶದ ಜನರು ಉದ್ಯೋಗ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬಿಲೇನಿಯರ್‌ಗಳ ಆಸ್ತಿ ಹೆಚ್ಚಾಗುತ್ತಿದೆ. ಉಳ್ಳವರ ಆದಾಯ ಹೆಚ್ಚುತ್ತಿದೆ.
ಇಲ್ಲದವರ ಸಂಖ್ಯೆ ಹೆಚ್ಚುತ್ತಿದೆ. ಆರ್ಥಿಕತೆ ಏಕಮುಖವಾಗಿ ಸಂಚರಿಸದಂತೆ ಬಜೆಟ್ ಎಚ್ಚರಿಕೆವಹಿಸಬೇಕು. ಕೇಂದ್ರ ಹಣಕಾಸು ಸಚಿವಾಲಯದ ವರದಿಯಂತೆ2022-23ಕ್ಕೆ ದೇಶದ ಒಟ್ಟು ಆರ್ಥಿಕ ಸಂಪನ್ಮೂಲ (ಜಿಡಿಪಿ) ಶೇ. 9 ರಷ್ಟು ಬೆಳವಣಿಗೆ ಕಾಣಬಹುದೆಂದು ಅಂದಾಜಿಸಿದೆ. ಇಂಡಿಯಾ ರೇಟಿಂಗ್ ರಿಸರ್ಚ್ ಮುಂದಿನ ಹಣಕಾಸು ವರ್ಷದಲ್ಲಿ ಶೇ. 7.6ರ ಬೆಳವಣಿಗೆ ನಮೂದಿಸಿದೆ. ಐಸಿಆರ್‌ಎ ವರದಿಯು ಪ್ರಸಕ್ತ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಶೇ. 9ರ ಬೆಳವಣಿಗೆ ನಿರೀಕ್ಷಿಸಬಹುದು ಎಂದೂ, ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಶೇ.9.2 ಎಂದು ಅಂದಾಜಿಸಿದೆ.
ಆರ್‌ಬಿಐ ತನ್ನ ಶೇ.9.5ರ ಬೆಳವಣಿಗೆಯ ಅಂದಾಜನ್ನು ಬದಲಿಸಿಲ್ಲ ಆದರೆ ಇವೆಲ್ಲವೂ ಪರಿಸ್ಥಿತಿ, ಪ್ರಕೃತಿ, ದೇಶಿ ಒತ್ತಡಗಳು ಮತ್ತು ಕೊರೊನಾ ತೀವ್ರತೆಯನ್ನು ಅವಲಂಬಿಸಿದೆ. ಸರಕಾರವು ತನ್ನ ವಶದಲ್ಲಿರುವ ಕೆಲವೊಂದು ಹೆಚ್ಚುವರಿ ಜಮೀನು ಮಾರಾಟದಿಂದ ಸರಕಾರಿ ವೆಚ್ಚಗಳಿಗೆ ಕಡಿವಾಣ ಹಾಕುವುದಲ್ಲದೆ ಸ್ವಂತ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು. ತನ್ನ ವಶದಲ್ಲಿರುವ ಹಳೆಯ ಕಂಪನಿಗಳನ್ನು ಮಾರಾಟ ಮಾಡಬಹುದು ಹೊಸ ಮೂಲ ಸೌಕರ್ಯಗಳನ್ನು ವೃದ್ಧಿಗೊಳಿಸಬೇಕು. ಆಯ್ದ ವಲಯಗಳಿಂದ ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಿಕೊಳ್ಳಬಹುದು. ಮೇಲ್‌ವರ್ಗಕ್ಕೆ ಆದಾಯ ತೆರಿಗೆ ಹೆಚ್ಚಿಸಬಹುದು.
ಸಾಮಾನ್ಯವಾಗಿ ಮಹಾಚುನಾವಣೆ ಬರಲಿರುವ ಮುಂಚೆ ಮಂಡಿಸಲಿರುವ ಕೇಂದ್ರ ಅಥವಾ ರಾಜ್ಯ ಬಜೆಟ್‌ಗಳ ಜನಪ್ರಿಯ ಘೋಷಣೆಗಳನ್ನು ಹೊತ್ತಿರುತ್ತವೆ. ಆಡಳಿತ ಪಕ್ಷಗಳಿಗೆ ಚುನಾವಣೆ ಗೆಲ್ಲಲು ಬಜೆಟ್ ಕೂಡಾ ಉತ್ತಮ ಸಾಧನ. ಈ ಆಶ್ವಾಸನೆಗಳು ಕೃಷಿ, ಉದ್ಯೋಗ, ಉದ್ದಿಮೆಗಳಿಗೆ ಪೂರಕವಾಗಿರುತ್ತದೆ. ಇಂತಹ ಜನಪ್ರಿಯ ಯೋಜನೆಗಳಿಗೆ ಹೆಚ್ಚು ಹಣ ವ್ಯಯವಾಗಿರುವುದರಿಂದ ಅಗತ್ಯ ಯೋಜನೆಗಳಿಗೆ ಹಣಕಾಸು ಕೊರತೆ ಆಗುವುದು ಸ್ವಾಭಾವಿಕ. ಆದ್ಯತಾ ರಂಗವಾದ ಕೃಷಿಕರ ಹಿತಕ್ಕೆ ತಾನು ಬದ್ಧ ಎಂದು ತೋರಿಸುವ ಉಪಕ್ರಮಗಳಿಗೆ ಮಾರು ಹೋಗಬಹುದು, ಎಲ್ಲ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ವಿಸ್ತರಿಸುವ ಕ್ರಮ ಕೈಗೊಳ್ಳಬಹುದು. ಇದೀಗ ಕೊರೊನಾ ಇದ್ದರೂ ಆರ್ಥಿಕ ರಂಗದಲ್ಲಿ ಕುಸಿತ ಕಾಣುತ್ತಿಲ್ಲ.
ಸೋಂಕಿನ ನಡುವೆಯೂ ಆರ್ಥಿಕ ಬೆಳವಣಿಗೆಗೆ ಸಕಾರಾತ್ಮಕವಾಗಿದೆ. ಜಿಎಸ್‌ಟಿ ಸಂಗ್ರಹ ಸತತ ಆರನೆಯ ತಿಂಗಳೂ ಒಂದು ಲಕ್ಷ ಕೋಟಿ ರು. ದಾಟಿದೆ. ಆದರೆ ಜಿಎಸ್‌ಟಿ ಗೊಂದಲ ನಿವಾರಣೆಯಾಗಬೇಕಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಆರ್ಥಿಕತೆ ಎಲ್ಲ ರಂಗಗಳಲ್ಲಿ ಸುಸ್ಥಿರವಾಗಿ ವಿತ್ತಿಯ ಕೊರತೆ ಬೆಂಚ್ ಮಾರ್ಕ್ ಮಟ್ಟ ಕಾಯ್ದುಕೊಳ್ಳಬಹುದೆಂದು ನಿರೀಕ್ಷಿಸೋಣ. ಹತ್ತು ವರ್ಷದೊಳಗೆ ದೇಶವು ಹತ್ತು ಟ್ರಿಲಿಯನ್ ಆರ್ಥಿಕತೆಯಾಗಲೆಂದು ಆಶಿಸೋಣ.
(ಲೇಖಕರು ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ ಪ್ರಬಂಧಕರು ಮತ್ತು ಸಂದರ್ಶಕ ಪ್ರಾಧ್ಯಾಪಕರು)