ಬಿಜೆಪಿಯ ನೇಮಕಾತಿಯಲ್ಲೂ ಇಂದಿರಾಗಾಂಧಿ ನೆರಳು !
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
@.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಹೊಸ ಸಂಪ್ರದಾಯವನ್ನು ಆರಂಭಿಸಿದೆ. ಅದೇನೆಂದರೆ, ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನವೂ ಸೇರಿದಂತೆ, ಉತ್ತಮ ಸ್ಥಾನಗಳಿಗೆ, ನಿಗಮ-ಮಂಡಳಿ ಮತ್ತು ಇನ್ನಿತರ ಹುದ್ದೆಗಳನ್ನು ಕರುಣಿಸುತ್ತಿದೆ. ಸಹಜವಾಗಿ ಇದುಕಾರ್ಯಕರ್ತರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ ಮತ್ತು ಅವರ ನೈತಿಕ ಸ್ಥೈರ್ಯವನ್ನು ವೃದ್ಧಿಸುವಂತೆ ಮಾಡಿದೆ.
ತಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರ ಸೇವೆಯನ್ನೂ ಗುರುತಿಸುತ್ತಾರೆ ಎಂಬ ಭಾವ ಅಸಂಖ್ಯರಲ್ಲಿ ನೆಲೆಯೂ ರಲು ಸಹಾಯಕವಾಗಿದೆ. ಆದರೆ, ಇಲ್ಲಿ ಒಂದು ಮುಖ್ಯ ಸಂಗತಿ ಗಮನಿಸಬೇಕು. ಪ್ರತಿ ಹುದ್ದೆಗೂ ಅದರದ್ದೇ ಆದ ಘನತೆ, ಗೌರವ ಇದೆ. ಆಯಾ ಹುದ್ದೆಗಳು ಘನತೆಯ ಜತೆಗೆ ಅರ್ಹತೆಯನ್ನು ಅಪೇಕ್ಷಿಸುತ್ತದೆ. ಯಾವುದೇ ಸ್ಥಾನಕ್ಕೆ ನೇಮಕವಾಗುವ ವ್ಯಕ್ತಿ ಪಕ್ಷದ ಕಾರ್ಯಕರ್ತ ಎಂಬುದಕ್ಕಿಂತ, ಆ ಸ್ಥಾನಕ್ಕೆ ಅರ್ಹನಾ ಎಂಬುದು ಮುಖ್ಯವಾಗುತ್ತದೆ. ನಂತರ ಕಾರ್ಯಕರ್ತ, ನಾಯಕ, ಪಕ್ಷಕ್ಕೆ ದುಡಿದವರು ಇತ್ಯಾದಿ.
ಪಕ್ಷದ ಕಾರ್ಯಕರ್ತ ಎಂಬ ಕಾರಣಕ್ಕೆ, ಯಾವುದೋ ಒಂದು ಹುದ್ದೆಯಲ್ಲಿ ಕುಳ್ಳಿರಿಸುವುದು ಸಮಂಜಸವೆನಿಸ ಲಿಕ್ಕಿಲ್ಲ. ಪಕ್ಷಕ್ಕೆ ದುಡಿದವರು ಎಂಬ ಕಾರಣಕ್ಕೆ ಅವರ ಸಾಮರ್ಥ್ಯ, ಯೋಗ್ಯತೆಗೆ ಸರಿ ಹೊಂದದ ಸ್ಥಾನಗಳಿಗೆ ನೇಮಕ ಮಾಡಿದರೆ, ಆ ಕಾರ್ಯಕರ್ತರಿಗೆ ಮತ್ತು ಹುದ್ದೆಗೆ ಅವಮಾನ ಮಾಡಿದಂತೆ. ಎಸ್ಸೆಸ್ಸೆಲ್ಸಿಯಲ್ಲಿಫೇಲಾದನನ್ನನ್ನು ಉನ್ನತ ಶಿಕ್ಷಣ ಮಂತ್ರಿಯಾಗಿ ಮಾಡಿ ನನಗೆ ಮತ್ತು ರಾಜ್ಯದ ಜನತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವಮಾನ ಮಾಡಿದ್ದಾರೆ ಎಂದು ಆಗ ಜಿ.ಟಿ.ದೇವೇಗೌಡ ಹೇಳಿದ್ದನ್ನು ನೆನಪಿಸಿಕೊಳ್ಳಿ) ಕಾರ್ಯಕರ್ತರ ಯೋಗ್ಯ ರಾದವರನ್ನು, ಅವರ ಅರ್ಹತೆ, ಶೈಕ್ಷಣಿಕ ಹಿನ್ನೆಲೆ, ಅನುಭವ, ಪರಿಣತಿಯನ್ನು ಪರಿಗಣಿಸಿ, ಆಯಾ ಹುದ್ದೆಗಳಿಗೆ ನೇಮಿಸುವುದು ಸೂಕ್ತ ಮತ್ತು ನ್ಯಾಯಯುತ ನಡೆ.
ಇದರಿಂದ ವ್ಯಕ್ತಿಗೆ ಮತ್ತು ಹುದ್ದೆಗೆ ಭೂಷಣ. ಯಾವುದೇ ಒಂದು ಮಹತ್ವದ ಹುದ್ದೆಗೆ ನೇಮಕವಾಗಲು ಪಕ್ಷದ ಕಾರ್ಯಕರ್ತ ಎಂಬುದೊಂದೇ ಮಾನದಂಡವಾಗ ಬಾರದು. ಅದೇ ಪರಿಗಣನೆಯ ಅಂಶವಾದರೆ, ಅವರ ಮಾನವೇ ದಂಡವಾಗಬಹುದು. ಇದನ್ನು ಆಯಕಟ್ಟಿನ ಹುದ್ದೆಗಳಿಗೆ ನೇಮಿಸುವ ಪಕ್ಷದ ಹಿರಿಯರು,ನಿರ್ಧಾರಗಳನ್ನು ತೆಗೆದುಕೊಳ್ಳುವವರು ಗಮನಿಸಬೇಕಾದ ಸಂಗತಿಗಳು. ಇಂದಿರಾ ಗಾಂಧಿಯವರ ಮನೆಯಲ್ಲಿ ಚಪರಾಸಿಗಳಾಗಿದ್ದವರು, ಅವರ ಕಾರು ಡ್ರೈವರ್ ಆಗಿದ್ದವರು, ಅಡುಗೆ ಭಟ್ಟರಾಗಿದ್ದವರೆಲ್ಲ ಸಾಂವಿಧಾನಿಕ ಹುದ್ದೆಗಳಿಗೆ ನೇಮಕವಾಗಿದ್ದನ್ನು ನೋಡಿದ್ದೇವೆ.
ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕಸ ಹೊಡೆಯುತ್ತಿದ್ದವರು ಟಿಕೆಟ್ ಗಿಟ್ಟಿಸಿಕೊಂಡು ಎಂಪಿಗಳಾಗಿದ್ದನ್ನು, ಮಹತ್ವದ ಹುದ್ದೆ ಏರಿದ್ದನ್ನು ನೋಡಿದ್ದೇವೆ. ಆಗ ಇದೇ ಬಿಜೆಪಿ ನಾಯಕರು, ಕಾಂಗ್ರೆಸ್ ಸಂಸ್ಕೃತಿಯನ್ನು ಟೀಕಿಸಿದ್ದನ್ನು ಯಾರೂ ಮರೆತಿಲ್ಲ. ತಮ್ಮ ಪಕ್ಷದಲ್ಲಿ ಪ್ರಮುಖ, ಸಮರ್ಥ ನಾಯಕರಿದ್ದರೂ, ಇಂದಿರಾ ಗಾಂಧಿ ಉದ್ದೇಶಪೂರ್ವಕವಾಗಿ, ಹಿರಿಯ ನಾಯಕರನ್ನು ಅವಮಾನಿಸಲು ಕೆಳಹಂತದ ಸಾಮಾನ್ಯರನ್ನು, ಅಯೋಗ್ಯರನ್ನು ಮಹತ್ವದ ಹುದ್ದೆಗೆ ನೇಮಿಸಿ ಮಜತೆಗೆದುಕೊಳ್ಳುತ್ತಿದ್ದರು. ರಾಷ್ಟ್ರಪತಿ ಹುದ್ದೆಗೆ ನೇಮಿಸುವಾಗಲೂ ಅವರು ಈ ತಂತ್ರವನ್ನೇ ಬಳಸುತ್ತಿದ್ದರು.
ಅಯೋಗ್ಯರನ್ನು ಮಹತ್ವದ ಅಥವಾ ಉನ್ನತ ಹುದ್ದೆಯಲ್ಲಿ ಕುಳ್ಳಿರಿಸಿದರೆ, ಅವರು ಹೇಳಿದಂತೆ ಬಿದ್ದಿರುತ್ತಾರೆ ಮತ್ತು ಜೀವನವಿಡೀ ಉಪಕೃತರಾಗಿರುತ್ತಾರೆ ಎಂಬುದೂ ಈ ಕ್ರಮದ ಹಿಂದಿರುವ ಆಲೋಚನೆ. ಪಕ್ಷದ ಕಾರ್ಯಕರ್ತರಿಗೆ ಸ್ಥಾನಮಾನ ಕೊಡುತ್ತೇವೆ, ಕೊಡುತ್ತಿದ್ದೇವೆ ಎಂಬ ಬಿಜೆಪಿಯ ಕ್ರಮದ ಹಿಂದೆಯೂ ಇಂಥ ಯೋಚನೆಯೇನಾದರೂ ಇದೆಯಾ? ಗೊತ್ತಿಲ್ಲ. ಕರ್ನಾಟ ಕದಿಂದ ರಾಜ್ಯಸಭೆಗೆ ಕಳುಹಿಸಿದ ಅಭ್ಯರ್ಥಿಗಳ ಹಿನ್ನೆಲೆಯನ್ನು ನೋಡಿದರೆ, ಯಾರಿಗಾದರೂ ಈ ಸಂದೇಹ ಬರದೇ ಹೋಗುವುದಿಲ್ಲ. ರಾಜ್ಯಸಭೆಗೆ ಎಂಥವರನ್ನು ಸದಸ್ಯರನ್ನಾಗಿ ನೇಮಿಸಬೇಕು ಎಂಬ ಬಗ್ಗೆ ಬಿಜೆಪಿ ಸಂಸ್ಥಾಪಕರಬ್ಬರಾದ, ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.
ವಾಜಪೇಯಿ ಹೇಳಿದ್ದನ್ನು ಮೂವತ್ತೆರಡು ಪುಟಗಳ ಕಿರುಪುಸ್ತಕವಾಗಿಯೂ ಪ್ರಕಟವಾಗಿದೆ. ವಾಜಪೇಯಿ ಪ್ರಸ್ತಾಪಿಸಿದ ಎಲ್ಲ ಅಂಶಗಳನ್ನು ತಾವು ಅನುಮೋದಿಸು ವುದಾಗಿ, ಕಾಂಗ್ರೆಸಿನ ಅಂದಿನ ನಾಯಕರಬ್ಬರಾದ ಪ್ರಣಬ್ ಮುಖರ್ಜಿ ಸಹ ಹೇಳಿದ್ದರು. ಹೀಗಾಗಿ ಎಂಥವರನ್ನು ನೇಮಿಸಬೇಕು ಎಂಬ ಬಗ್ಗೆ ಬಿಜೆಪಿಯಲ್ಲಿ ಒಂದು ಸ್ಥಾಪಿತ ಚಿಂತನಾಕ್ರಮವಿದೆ. ರಾಜ್ಯಸಭೆಯಲ್ಲಿ ಹೆಡ್‌ಕೌಂಟ್ ಮತ್ತು ಕೈಯೆತ್ತುವವರಿಗಿಂತ, ಮಾತಾಡುವವರು ಬೇಕು. ದೇಶದ ಚಿಂತನೆಯನ್ನು ಉದ್ದೀಪನ ಗೊಳಿಸುವ ಚಿಂತಕರು, ವಿಷಯ ಪರಿಣತರು, ಜ್ಞಾಗಳು, ಸಾಧಕರು ಬೇಕು. ಆದರೆ, ಕರ್ನಾಟಕ ಬಿಜೆಪಿಯಿಂದ ಆಯ್ಕೆಯಾದವರನ್ನು ನೋಡಿದರೆ, ನಿರಾಸೆ ಯಾಗುತ್ತದೆ.
ಪಕ್ಷದ ಕಾರ್ಯಕರ್ತರು ಎಂದು ಅವರನ್ನು ‘ದೇಶದ ಹಿರಿಯರ ಮನೆ’ಗೆ ಆರಿಸಿದರೆ, ಅದು ಅವರ ತಪ್ಪಲ್ಲ. ಅದು ಆರಿಸಿದವರ ತಪ್ಪು. ಯಾಕೆಂದರೆ ಯಾರನ್ನು ಎಲ್ಲಿ ನೇಮಿಸಬೇಕು ಎಂಬುದು ಪಕ್ಷದ ಆಯಕಟ್ಟಿನ ಜಗದಲ್ಲಿರುವವರಿಗೆ ಗೊತ್ತಿರಬೇಕಾಗುತ್ತದೆ. ಎರಡು ವರ್ಷಗಳ ಹಿಂದೆ, ಕರ್ನಾಟಕದಿಂದ ಒಬ್ಬರನ್ನು ಬಿಜೆಪಿರಾಜ್ಯಸಭೆಗೆ ಸದಸ್ಯರನ್ನಾಗಿ ಆರಿಸಿ ಕಳುಹಿಸಿತು. ಪಾಪ, ಅವರು ಆ ಹುzಯನ್ನು ಬಯಸಿದ್ದರೋ, ಇಲ್ಲವೋ ಗೊತ್ತಿಲ್ಲ. ಅವರ ಹಿನ್ನೆಲೆ ಗೊತ್ತಿದ್ದವರಿಗೆ, ಅವರು ಆ ಸ್ಥಾನವನ್ನು ಬಯಸಿರಲಿಕ್ಕಿಲ್ಲ ಅನಿಸುತ್ತದೆ. ಅವರ ಹೆಸರು ಘೋಷಣೆಯಾದಾಗ, ಬಿಜೆಪಿಯಲ್ಲಿರುವ ನಾಯಕರಿಗೇ ಆಶ್ಚರ್ಯ. ಕಾರಣ ಅನೇಕರಿಗೆ ಆ ಹೆಸರುಗೊತ್ತಿರಲಿಲ್ಲ. ಇನ್ನು ಕೆಲವರು ಆ ಹೆಸರನ್ನು ಆ ಹುದ್ದೆಗೇ ನಿರೀಕ್ಷಿಸಿರಲೂ ಇಲ್ಲ. ಇನ್ನು ಟಿವಿ ಚಾನೆಲ್ಲಿನಲ್ಲಿ ಬ್ರೇಕಿಂಗ್ ಸುದ್ದಿ ಬರೆಯುವವರೂ ಆ ಹೆಸರು ಕೇಳಿ ಕಕ್ಕಾ ಬಿಕ್ಕಿಯಾದರು. ಕಾರಣ ಆ ಹೆಸರನ್ನು ಅವರು ಎಂದೂ ಕೇಳಿರಲಿಲ್ಲ.
‘ಯಾರೋ ಪ್ರಿಂಟರ್ ಅಂತೆ, ನೋಡ್ರೋ, ಪಾರ್ಟಿ ಆಫೀಸಿಗೆ ಫೋನ್ ಮಾಡಿ ಕೇಳ್ರೋ’ ಎಂದು ಟಿವಿ ಚಾನೆಲ್‌ನಲ್ಲಿ ಬ್ರೇಕಿಂಗ್ ನ್ಯೂಸ್ ಘೋಷಿಸುವವರು ತಮ್ಮ ತಮ್ಮ ಉದ್ವೇಗದಿಂದ ಕೂಗಾಡಿಕೊಂಡರು. ಇನ್ನು ಅವರ ಒಂದೇ ಒಂದು ಫೋಟೋ ಸಹ ಪತ್ರಿಕೆಗಳ ಸುದ್ದಿಮನೆಯಲ್ಲಿ ಇರಲಿಲ್ಲ. ಪಾರ್ಟಿ ಆಫೀಸಿಗೆ ಫೋನ್ ಮಾಡಿದರೆ, ಅವರೂ ಬ್ಬೆ.. ಬ್ಬೆ…ಬ್ಬೆ …! ಕೊನೆಗೆ ಅವರ ಹಿನ್ನೆಲೆ ಗೊತ್ತಾದಾಗ, ಎಲ್ಲರೂ ದೀರ್ಘ ನಿಟ್ಟುಸಿರು ಬಿಟ್ಟು, ತಲೆ ಮೇಲೆ ಕೈಹೊತ್ತು ಕುಳಿತರಂತೆ!ಅದಾಗಿ ಎರಡು ತಿಂಗಳ ನಂತರ, ಆ ಹೊಸ ಸದಸ್ಯರಿಗೆ ಬೆಂಗಳೂರಿನಲ್ಲಿ ಒಂದು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.
ನೂತನ ಸದಸ್ಯರ ಜತಿ ಬಾಂಧವರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಎಲ್ಲರೂ ನೂತನ ರಾಜ್ಯಸಭಾ ಸದಸ್ಯರ ಆಗಮನಕ್ಕಾಗಿ ಕಾಯುತ್ತಿದ್ದರು. ನಿಗದಿತ ಸಮಯ ಕಳೆದರೂ ಹೊಸ ಸದಸ್ಯರು ಆಗಮಿಸಿರಲಿಲ್ಲ. ಆಗ ಕಾರ್ಯಕ್ರಮ ಸಂಘಟಕರು ಅವರ ಮನೆಗೆ ಫೋನ್ ಮಾಡಿದರೆ, ಅವರು ಆಗಲೇ  ಕಾರ್ಯಕ್ರಮಕ್ಕೆ ತೆರಳಿದ್ದಾಲ್ಲ ಎಂಬ ಉತ್ತರ ಬಂತು. ಕಾರ್ಯಕ್ರಮದ ಸಮಯ ಸರಿದು ಕಾಲು ಗಂಟೆ ಕಳೆದರೂ ರಾಜ್ಯಸಭೆಯ ನೂತನ ಸದಸ್ಯರ ಪತ್ತೆಯೇ ಇಲ್ಲ. ನಂತರ ನೋಡಿದರೆ, ಆ ಸದಸ್ಯರು ಸರಿಯಾದ ಸಮಯಕ್ಕೆ ಆಗಮಿಸಿ, ಮುಂದಿನ ಸಾಲಿನಲ್ಲಿ ಕುಳಿದ್ದರು ! ಆ ಮಹಾಶಯರನ್ನು ಅಲ್ಲಿ ಸೇರಿದ್ದವರು, ಸನ್ಮಾನಿಸಲು ಕಾತರ ದಿಂದ ಕಾದಿದ್ದವರಾರೂ, ಗುರುತು ಹಿಡಿಯಲೇ ಇಲ್ಲ!
ಜಾರ್ಜ್ ಹೇಳಿದ ಪ್ರಸಂಗದೇಶದ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಬೆಂಗಳೂರಿಗೆ ಬಂದಾಗಲೆಲ್ಲ ಬಾಲಬ್ರೂಯಿ ಗೆಸ್ಟ್ ಹೌಸಿನಲ್ಲಿ ಉಳಿದುಕೊಳ್ಳುತ್ತಿದ್ದರು. ಅಲ್ಲಿಗೆ ತಮ್ಮ ಹಳೆ ಸ್ನೇಹಿತರನ್ನು ಕರೆಯಿಸಿಕೊಳ್ಳುತ್ತಿದ್ದರು. ಹರಟೆಯೇ ಅಲ್ಲಿನ ಮುಖ್ಯ ಆಕರ್ಷಣೆ. ನನಗೂ ಅಂಥ ಹಲವಾರು ಹರಟೆಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಜರ್ಜ್ ಅವರದು ಕರಗದ ಹರಟೆ ಬತ್ತಳಿಕೆ. ಅವರಿಗೆ ಅನಂತಕುಮಾರ ಸಿಕ್ಕರೆ ಮತ್ತಷ್ಟು ಖುಷಿಯಾಗುತ್ತಿತ್ತು. ಕಾರಣ ಅವರೂ ಪರಮ ಹರಟೆಕಾರ. ಐದಾರು ಗಂಟೆ ಹರಟೆ ಹೊಡೆದರೂ, ಇಬ್ಬರಿಗೂ ಸಮಾಧಾನವಾಗುತ್ತಿರಲಿಲ್ಲ. ರಾತ್ರಿ ಒಂಬತ್ತಕ್ಕೆ ಕುಳಿತು ಬೆಳಗಿನ ಮೂರರ ತನಕ ಅವರು ಹರಟೆ ಹೊಡೆದಿ ದ್ದುಂಟು.
ಒಮ್ಮೆ ಜರ್ಜ್ ಬೆಂಗಳೂರಿಗೆ ಬಂದಾಗ, ಇಂಥದೇ ಹರಟೆಗೋಷ್ಠಿಯಲ್ಲಿ ಕಮ್ಯುನಿಷ್ಟರು, ಸಮಾಜವಾದಿಗಳ ಬಗ್ಗೆ ಚರ್ಚಿತವಾಗುತ್ತಿತ್ತು. ಅಲ್ಲಿ ಜರ್ಜ್ ಸ್ನೇಹಿತ ಆರ್.ವಿ.ಪಂಡಿತ್, ಅನಂತಕುಮಾರ, ಜಾರ್ಜ್ ಸಹೋದರ ಮೈಕೆಲ್ ಫೆರ್ನಾಂಡಿಸ್, ಇನ್ನೂ ಒಂದಿಬ್ಬರು ಇದ್ದರು. ನನಗೂ ಆಹ್ವಾನವಿತ್ತು. ಕಮ್ಯುನಿಸಂಪ್ರಗತಿಗೆ ಮಾರಕವಾದರೂ ಚೀನಾ ಸಾಧಿಸಿದ ಅಗಾಧ ಅಭಿವೃದ್ಧಿ ಬಗ್ಗೆ ವಿಷಯ ಹೊರಳಿ, ಚರ್ಚೆ ಕಾವು ಪಡೆಯಿತು. ಆಗ ಜಾರ್ಜ್ ಒಂದು ತಮಾಷೆಯ ಪ್ರಸಂಗ ಹೇಳಿದ್ದು ನೆನಪಾಗುತ್ತದೆ. ಒಮ್ಮೆ ಲಂಡನ್‌ನ ಬಕಿಂಗ್ ಹ್ಯಾಮ್ ಅರಮನೆಯ ಸನಿಹದ ಬೀದಿಯಲ್ಲಿ ಬ್ರಿಟಿಷ್, ಭಾರತ ಮತ್ತು ಚೀನಾದ ನಾಯಿಗಳು ವಿಹಾರ ಹೊರಟಿದ್ದವು. ಅವು ತಮ್ಮ ದೇಶಗಳ ಸ್ಥಿತಿಗತಿ ಬಗ್ಗೆ ಚರ್ಚಿಸುತ್ತಿದ್ದವು. ‘ಅದೆಲ್ಲ ಸರಿ, ನಮ್ಮ ದೇಶದ ಬಗ್ಗೆ ಸ್ವಲ್ಪ ಯೋಚಿಸೋಣ ಈಗ. ನಿಮ್ಮ ದೇಶದಲ್ಲಿ ಈಗ ಪರಿಸ್ಥಿತಿ ಹೇಗಿದೆ?’ ಎಂದು ಚೀನಾ ನಾಯಿ ಕೇಳಿತು.
ಅದಕ್ಕೆ ಬ್ರಿಟಿಷ್ ನಾಯಿ, ‘ಈಗ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿದೆ. ಮೊದಲು ಸರಿಯಾಗಿ ರೇಷನ್ ಸಿಗದಿದ್ದರಿಂದ ಜನ ನಮಗೆ ಸರಿಯಾಗಿ ಊಟ ಹಾಕುತ್ತಿರ ಲಿಲ್ಲ. ಈಗ ಎಷ್ಟೋ ವಾಸಿ’ ಎಂದು ಹೇಳಿತು. ಆಗ ಭಾರತದ ನಾಯಿ ದನಿಗೂಡಿಸಿತು. ‘ನೀನು ನಮ್ಮ ಪರಿಸ್ಥಿತಿಯನ್ನು ನೋಡಬೇಕಿತ್ತು. ಯಾರಿಗೂ ಬೇಡದ ಪಾಡು ನಮ್ಮದಾಗಿತ್ತು. ದಿನದಲ್ಲಿ ಒಂದು ಊಟ ಮಾತ್ರ ಸಿಗುತ್ತಿತ್ತು. ಅಷ್ಟರ ಹೊಟ್ಟೆ ತುಂಬಿಸಿಕೊಳ್ಳಬೇಕಾಗಿತ್ತು. ಈಗ ಪರವಾಗಿಲ್ಲ, ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಅಲ್ಪ-ಸ್ವಲ್ಪ ಮಾಂಸ-ಮೂಳೆಯೂ ಸಿಗುತ್ತಿದೆ’ ಎಂದಿತು. ಬ್ರಿಟಿಷ್ ಮತ್ತು ಭಾರತದ ನಾಯಿಗಳು ‘ನಮ್ಮ ಕತೆಯಾಯ್ತು, ನಿನ್ನ ಪರಿಸ್ಥಿತಿ ಹೇಗಿದೆ?’ ಎಂದು ಚೀನಾದ ನಾಯಿಯನ್ನು ಕೇಳಿದವು.
‘ನಮ್ಮ ದೇಶದಲ್ಲಿ ಇದಾವುದರ ಸಮಸ್ಯೆಯೇ ಇಲ್ಲ. ನನ್ನನ್ನು ನೋಡಿದರೆ ಗೊತ್ತಾಗುವುದಿಲ್ಲವೇ? ನೋಡಿ, ಮೂರೂ ಹೊತ್ತು ತಿಂದುಂಡು ನಾನು ಹೇಗೆ ದಷ್ಟ-ಪುಷ್ಟವಾಗಿದ್ದೇನೆ ಅಂತ’ ಎಂದಿತು ಚೀನಾದ ನಾಯಿ. ಬ್ರಿಟಿಷ್ ಮತ್ತು ಭಾರತದ ನಾಯಿ ತಕ್ಷಣ ಅಲ್ಲಿಯೇ ನಿಂತು, ಚೀನಾದ ನಾಯಿಯನ್ನು ದಿಟ್ಟಿಸಿ ನೋಡಿದವು. ಹೌದಲ್ಲ, ಈವಯ್ಯ ಎಷ್ಟು ಸೊಂಪಾಗಿ ಬೆಳೆದಿzನೆ ಎಂದು ಅವುಗಳಿಗೆ ಅನಿಸಿತು.
‘ಅದ್ಸರಿ, ಹಾಗಾದರೆ ನೀನ್ಯಾಕೆ ಚೀನಾ ಬಿಟ್ಟು ಇಲ್ಲಿಗೆ ಬಂದೆ? ಅಲ್ಲಿಯೇ ಇರಬಹುದಿತ್ತಲ್ಲ?’ಎಂದು ಚೀನಾ ನಾಯಿಗೆ, ಭಾರತ ಮತ್ತು ಬ್ರಿಟಿಷ್ ನಾಯಿಗಳು ಕೇಳಿದವು. ಆಗ ಚೀನಾ ನಾಯಿ ಹೇಳಿತು -‘ನನಗೆ ನಮ್ಮ ದೇಶದಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಆದರೂ ಅಲ್ಲಿರಲು ಮನಸ್ಸಾಗಲಿಲ್ಲ. ಕಾರಣ ನಮ್ಮ ದೇಶದಲ್ಲಿ ಬೊಗಳುವ ಸ್ವಾತಂತ್ರ್ಯ ಇಲ್ಲವಲ್ಲ. ಹೀಗಾಗಿ ಇಲ್ಲಿಗೆ ಬಂದೆ.’
ನೀಗಿದ ನೀರಡಿಕೆಕೆಲ ವರ್ಷಗಳ ಹಿಂದೆ, ಡಾ.ವಜ್ರಮೋಹನ್ ಎಂಬುವವರು ಹೇಳಿದ ಒಂದು ಪ್ರಸಂಗವಿದು. ಫ್ರಾನ್ಸಿನ ಮಾರ್ಸೆಲ್ ಎಂಬ ನಗರದಲ್ಲಿ ಕರ್ನಾಟಕದ ಕೆಲ ಯಾತ್ರಿಕರು ಸಂಚರಿಸುತ್ತಿದ್ದರು. ಅವರಿಗೆ ವಿಪರೀತ ಬಾಯಾರಿಕೆ ಆಯಿತು. ‘ಇಲ್ಲಿ ನೀರು ಎಲ್ಲಿ ಸಿಗುತ್ತದೆ?’ ಎಂದು ವಿಚಾರಿಸೋಣ ಅಂದ್ರೆ ಭಾಷಾ ಸಮಸ್ಯೆ ಎದುರಾಯಿತು. ಕನ್ನಡದ ಯಾತ್ರಿಕರಿಗೆ ಫ್ರೆಂಚ್ ಬರುತ್ತಿರಲಿಲ್ಲ. ಅಲ್ಲಿನವರಿಗೆ ಫ್ರೆಂಚ್ ಬಿಟ್ಟು ಬೇರೆ ಭಾಷೆ ಗೊತ್ತಾಗುತ್ತಿರಲಿಲ್ಲ. ಆಗ ಕನ್ನಡಿಗನೊಬ್ಬ, ‘ಲೋ ! ಬರ್ರೋ ಇಲ್ಲಿ. ಈ ಮಂದಿಗೆ ನೀರು ಬೇಕು ಅಂತ ಹೇಗೆ ಹೇಳೋದ್ರೋ?’ ಎಂದು ಬೇಸರದಿಂದ ಹೇಳಿದ. ಆಗ ಅಲ್ಲಿದ್ದ ಫ್ರೆಂಚ್ ತಕ್ಷಣ, ‘ನೋಡಿ ಅಲ್ಲಿದೆ ನಳ’ ಎಂದು ಸನ್ನೆ ಮಾಡಿ ತೋರಿಸಿದ. ಕನ್ನಡಿಗರಿಗೆ ಆಶ್ಚರ್ಯವಾಯಿತು. ನಾವು ಬೇಸರದಿಂದ ಗೊಣಗಿಕೊಂಡಿದ್ದು ಇವನಿಗೆ ಹೇಗೆ ಅರ್ಥವಾಯಿತು ಎಂದು ತಮ್ಮತಮ್ಮ ಅಂದುಕೊಂಡರು.
ಕಾರಣ ಇಷ್ಟೇ, ಫ್ರೆಂಚ್ ಭಾಷೆಯಲ್ಲಿ ಲೋ ((’) ಅಂದರೆ ನೀರು ಎಂದರ್ಥ. ‘ಲೋ’ ಎಂದು ಕೂಗಿದ್ದರಿಂದ ಅವರ ನೀರಡಿಕೆ ಮತ್ತು ಭಾಷಾ ಸಮಸ್ಯೆಗಳೆರಡೂ ನಿವಾರಣೆಯಾಗಿದ್ದವು.
ಅರ್ಥ ಮಾಡಿಕೊಳ್ಳೋದು ಹೇಗೆ?ಓದುಗರದು ವಿಭಿನ್ನ, ಚಿತ್ರ-ವಿಚಿತ್ರ ಅಭಿರುಚಿ. ಓದುಗರನ್ನು ಸಂಪೂರ್ಣ ಅರ್ಥ ಮಾಡಿಕೊಂಡ ಸಂಪಾದಕರು ಯಾರೂ ಇರಲಿಕ್ಕಿಲ್ಲ. ಹೆಂಡತಿಯನ್ನು ಅರ್ಥ ಮಾಡಿಕೊಂಡ ಗಂಡ ಮತ್ತು ಓದುಗರನ್ನು ಅರ್ಥ ಮಾಡಿಕೊಂಡ ಸಂಪಾದಕ ಇರಲಿಕ್ಕಿಲ್ಲ ಎಂಬುದು ವಕ್ರತುಂಡೋಕ್ತಿಯಷ್ಟೇ ಅಲ್ಲ, ಅದು ವಾಸ್ತವ. ಇದೇಆಶಯವನ್ನಿಟ್ಟುಕೊಂಡು ನಾನು ಕೆಲ ವರ್ಷಗಳ ಹಿಂದೆ, ‘ಸಂಪಾದಕ ಅಂದ್ರೆ ಗಂಡನಿದ್ದಂತೆ’ ಎಂಬ ಪುಸ್ತಕ ಬರೆದಿದ್ದೆ.
ಕಾರಣ ಇಷ್ಟೇ, ಕನ್ನಡದ ಜನಪ್ರಿಯ ಮತ್ತು ಮನೆ ಮಾತಾದ ‘ಕಸ್ತೂರಿ’ ಮಾಸಪತ್ರಿಕೆ ಬಿಡುಗಡೆಯಾದಾಗ, ಆ ಪತ್ರಿಕೆ ಚೆನ್ನಾಗಿಲ್ಲ, ಅದನ್ನು ಕನ್ನಡಿಗರು ಇಷ್ಟ ಪಡುವುದಿಲ್ಲ ಎಂದು ಓದುಗರೊಬ್ಬರು ಬರೆದಿದ್ದರು. ಬೆಂಗಳೂರಿನ ಎನ್.ಜಿ.ನಾಯಕ ಎಂಬುವವರು ಹೀಗೆ ಬರೆದಿದ್ದರು – ‘ಕಸ್ತೂರಿ ಇಂಗ್ಲಿಷ್ ರೀಡರ್ಸ್  ಡೈಜೆಸ್ಟಿನ ಕನ್ನಡ ಕಾಪಿಯಂತಿದೆ. ಈ ಪತ್ರಿಕೆ ಕನ್ನಡಿಗರಿಗೆ ಹೇಗೆ ರುಚಿಸುತ್ತದೋ ಹೇಳಲಾಗುವುದಿಲ್ಲ. ನನಗಂತೂ ಈ ಪತ್ರಿಕೆ ಇಷ್ಟವಾಗಲಿಲ್ಲ. ಹೆಚ್ಚು ಕತೆ, ಕವನಗಳನ್ನೂ ಸೇರಿಸಿ, ಹೊಸ ಹೊಸ ಸಾಹಿತಿಗಳನ್ನು ಆಯ್ದು ಕೊಟ್ಟರೆ ಹೆಚ್ಚು ಆಕರ್ಷಣೀಯವಾಗುತ್ತದೆ’ ನಾಯಕ ಅವರ ಪತ್ರವನ್ನು ‘ಕಸ್ತೂರಿ’ಯಲ್ಲಿ ಯಥಾವತ್ತು ಪ್ರಕಟಿಸ ಲಾಗಿತ್ತು.
ಅವರ ಈ ಪತ್ರಕ್ಕೆ ಪತ್ರಿಕೆಯನ್ನು ನಿರ್ವಹಿಸುತ್ತಿದ್ದ ಪಾವೆಂ ಆಚಾರ್ಯರು ಬರೆದಿದ್ದರು – ‘ಡೈಜೆಸ್ಟಿನಂತೆ ಮಾಡಬೇಕೆಂಬುದೇ ನಮ್ಮ ಉದ್ದೇಶ. ಶ್ರೀ ನಾಯಕರ ಸೂಚನೆ ಒಪ್ಪಿದರೆ ಅದು ವಿಷಯವಿಸ್ತಾರಕ್ಕೆರವಾಗಿ ಸಾಹಿತ್ಯಕ ಪತ್ರಿಕೆ ಯಾದೀತೆಂಬುದು ನಮ್ಮ ಮತ.’ ನಾಯಕರ ಅಭಿಪ್ರಾಯದಂತೆ, ಪತ್ರಿಕೆ ಮುಚ್ಚಿ ಹೋಗ ಬೇಕಿತ್ತು. ಆದರೆ ‘ಕಸ್ತೂರಿ’ ಕಳೆದ ಅರವತ್ತಾರು ವರ್ಷಗಳಿಂದ ಪ್ರಕಟವಾಗುತ್ತಿದೆ. ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.
ರಾಜಕೀಯ ಪ್ರಾಮಾಣಿಕತೆಯೂ!ಗೋವಾ ವಿಧಾನಸಭಾ ಚುನಾವಣೆಗೆ ಸಜಗಿದೆ. ಎಲ್ಲ ಪಕ್ಷಗಳಲ್ಲೂ ಮೂಲನಿವಾಸಿಗಳನ್ನು ಹುಡುಕಿದರೂ ಸಿಗಲಿಕ್ಕಿಲ್ಲ. ಎಲ್ಲರೂ ವಲಸಿಗರೇ. ಕೆಲವರಂತೂ, ಬಿಜೆಪಿ, ಕಾಂಗ್ರೆಸ್, ಗೋಮಾಂತಕ ಪಕ್ಷ, ಆಮ್ ಆದ್ಮಿ ಹೀಗೆ ಎಲ್ಲ ಪಕ್ಷಗಳ ಹೊಸ್ತಿಲು ದಾಟಿ ಈಗ ಮತ್ಯಾವುದೋ ಪಕ್ಷ ಸೇರಿದ್ದಾರೆ. ಎರಡು ದಿನಗಳ ಅವಧಿಯಲ್ಲಿ ನಾಲ್ಕೂ ಪಕ್ಷಗಳನ್ನು ಸೇರಿ ಬಿಟ್ಟವರಿದ್ದಾರೆ. ಈಗ ಅಲ್ಲಿ ಸ್ಪರ್ಧಿಸಿರುವ ಶೇ.ಅರವತ್ತರಷ್ಟು ಅಭ್ಯರ್ಥಿಗಳು ವಲಸಿಗರು. ಯಾರು ಮೊದಲು ಯಾವ ಪಕ್ಷದಲ್ಲಿದ್ದರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಹ ಕಷ್ಟ. ಅಷ್ಟರಮಟ್ಟಿಗೆ ಎಲ್ಲವೂ ಕಲಸುಮೇಲೋಗರ.
ಇತ್ತೀಚೆಗೆ ಕಾಂಗ್ರೆಸಿನಿಂದ ಬಿಜೆಪಿಗೆ ಬಂದ ಅಭ್ಯರ್ಥಿಯನ್ನು ಪತ್ರಕರ್ತರು ಪ್ರಶ್ನಿಸಿದರು – ‘ನೀವು ಈಗಾಗಲೇ ಮೂರು ಪಕ್ಷಗಳನ್ನು ಸೇರಿ, ಬಿಟ್ಟಿದ್ದೀರಿ. ಇದಕ್ಕೆ ಏನು ಹೇಳುತ್ತೀರಾ?’ ಅದಕ್ಕೆ ಆ ಆಸಾಮಿ ಏನು ಹೇಳಿದ ಗೊತ್ತಾ? ‘ನಾನು ಅತ್ಯಂತ ಪ್ರಾಮಾಣಿಕ ರಾಜಕಾರಣಿ. ಮೊದಲು ಬಿಜೆಪಿಯಲ್ಲಿದ್ದೆ, ನಂತರ ಕಾಂಗ್ರೆಸ್ ಸೇರಿದೆ. ಅದೂ ಸರಿ ಇಲ್ಲ ಎಂದು ಆಮ್ ಆದ್ಮಿ ಸೇರಿದೆ. ಆ ಪಕ್ಷದಲ್ಲಿರಲು ಸಾಧ್ಯವೇ ಇಲ್ಲ ಎನಿಸಿತು. ಪುನಃ ಕಾಂಗ್ರೆಸ್ ಸೇರಿದೆ. ಅವರು ನನಗೆ ಟಿಕೆಟ್ ನಿರಾ ಕರಿಸಿದ್ದರಿಂದ ನನ್ನ ಮಾತೃಪಕ್ಷವಾದ ಬಿಜೆಪಿಗೆ ಬಂದಿದ್ದೇನೆ.
ನನಗೆ ನನ್ನ ಮಾತೃಪಕ್ಷದ ಮೇಲೆ ವಿಶ್ವಾಸ ಇಲ್ಲದಿದ್ದರೆ ನಾನು ಬಿಜೆಪಿಗೆ ಬರುತ್ತಿದ್ದಾನಾ? ಸ್ವಲ್ಪ ಯೋಚಿಸಿ. ಬಿಜೆಪಿ ಬಗ್ಗೆ ನನ್ನ ಪ್ರೀತಿ, ಪ್ರಾಮಾಣಿಕತೆಯನ್ನು ನಾನು ಮರುಸ್ಥಾಪಿಸಿದ್ದೇನೆ.’ ಎಂದುಬಿಟ್ಟ. ಈ ಭಂಡನ ಜತೆ ಏನು ಮಾತಾಡುವುದು ಎಂದು ಪತ್ರಕರ್ತರು ಸುಮ್ಮನಾಗಿಬಿಟ್ಟರು. ಈ ಪ್ರಸಂಗವನ್ನು ಪತ್ರಿಕೆಯಲ್ಲಿ ಓದಿದಾಗ ನನಗೆ ಮಾರ್ಕ್ ಟ್ವೈನ್ ಹೇಳಿದ ಒಂದು ಘಟನೆ ನೆನಪಾಯಿತು. ಒಮ್ಮೆ ಟ್ವೈನ್ ‘ಪ್ರಾಮಾಣಿಕತೆ’ ವಿಷಯದ ಬಗ್ಗೆ ಮಾತಾಡುತ್ತಿದ್ದರು. ಅವರುಚಿಕ್ಕವ ರಿದ್ದಾಗ, ಅವರ ಊರಿನಲ್ಲಿ ಒಬ್ಬ ಹಲಸಿನ ಹಣ್ಣುಗಳನ್ನು ಗಾಡಿಯಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದನಂತೆ.
ಟ್ವೈನ್ ಹಿಂದಿನಿಂದ ಹೋಗಿ ಮೆಲ್ಲಗೆ ಒಂದು ಭಾಗವನ್ನು ಕದ್ದರಂತೆ. ಅದನ್ನು ಮನೆಗೆ ತಂದು ಯಾರಿಗೂ ಕಾಣದಂತೆ, ಒಂದು ಕೋಣೆಗೆ ಹೋಗಿ ತಿನ್ನಬೇಕು ಎನ್ನುವಷ್ಟರಲ್ಲಿ ತಾನು ಮಾಡುತ್ತಿರುವುದು ಸರಿಯಲ್ಲ ಎಂದು ಅನಿಸಿತಂತೆ. ಸರಿ, ಆ ಹಣ್ಣನ್ನು ಗಾಡಿಯಲ್ಲಿ ಇಟ್ಟು ಬರೋಣ ಎಂದು ಅಲ್ಲಿಗೆ ಓಡಿದರಂತೆ. ಗಾಡಿ ಯವನು ಬೇರೆಡೆ ನೋಡುತ್ತಿzಗ, ಮೊದಲು ಕದ್ದ ಹಣ್ಣನ್ನು ಗಾಡಿಯಲ್ಲಿ ಹಾಕಿ, ಇನ್ನೂ ಚೆನ್ನಾಗಿರುವ ಬಲಿತ ಹಣ್ಣಿನ ಭಾಗವನ್ನು ಎತ್ತಿಕೊಂಡು ಬಂದು ತಿಂದರಂತೆ. ಪ್ರಾಮಾಣಿಕತೆ ಅಂದ್ರೆ ಇದಲ್ಲವೇ?
ವೃತ್ತಿ ರಹಸ್ಯಇದು ಕಳೆದ ವಾರ ಯೋಗಿ ದುರ್ಲಭಜೀ ಫೋನ್ ಮಾಡಿದಾಗ ನನಗೆ ಹೇಳಿದ ಒಂದು ಘಟನೆ. ಕೆಲವು ದಿನಗಳ ಹಿಂದೆ, ದುರ್ಲಭಜೀ ಮನೆ ಹತ್ತಿರ ವಾಕ್ ಹೋಗುವಾಗ, ಒಬ್ಬ ಭಿಕ್ಷುಕ ಎದುರಾಗಿ, ‘ಸ್ವಾಮಿ, ಏನಾದರೂ ಭಿಕ್ಷೆ ಹಾಕಿ’ ಎಂದು ಕೇಳಿದ.
ಅದಕ್ಕೆ ದುರ್ಲಭಜೀ, ‘ಅಯ್ಯಾ, ಇದೇನು ಹರಕಲು ಬಟ್ಟೆ ಹಾಕಿಕೊಂಡಿದ್ದೀಯಾ? ಅಲ್ಲಿ ಕಾಣುತ್ತದಲ್ಲ, ಅದು ನನ್ನ ಮನೆ. ಬಾ ಅಲ್ಲಿಗೆ, ನಿನಗೆ ಒಂದಷ್ಟು ಬಟ್ಟೆಗಳನ್ನು ಕೊಡ್ತೇನೆ’ ಎಂದರು. ಆಗ ಭಿಕ್ಷುಕ, ‘ಅವೆಲ್ಲ ಬೇಡ, ನನಗೆ ಭಿಕ್ಷೆಯನ್ನೇ ಹಾಕಿ’ ಎಂದು ಒತ್ತಾಯಿಸಿದ. ದುರ್ಲಭಜೀಗೆ ಆಶ್ಚರ್ಯವೆನಿಸಿತು. ನಾನು ಹೆಚ್ಚೆಂದರೆ ಅವನಿಗೆ ಹತ್ತು ರುಪಾಯಿ ಭಿಕ್ಷೆ ಹಾಕುತ್ತಿದ್ದೆ. ಅದೇ ಬಟ್ಟೆಗಳನ್ನು ಕೊಟ್ಟಿದ್ದರೆ ಅವುಗಳ ಬೆಲೆ ಏನಿಲ್ಲವೆಂದರೂ ಇನ್ನೂರು-ಮುನ್ನೂರು ರುಪಾಯಿಗಳಾಷ್ಟಾಗುತ್ತಿತ್ತು. ಆದರೂ ಈ ಭಿಕ್ಷುಕ ಯಾಕೆ ಬಟ್ಟೆಗಳನ್ನು ನಿರಾಕರಿಸಿದ? ಸರಿ, ಅವನಿಗೆ ಕೇಳೋಣವೆಂದು, ‘ಭಿಕ್ಷೆಗಿಂತ ಹೆಚ್ಚಿನ ಮೊತ್ತದ ಬಟ್ಟೆಯನ್ನು ಕೊಡ್ತೇನೆ ಅಂದ್ರೂ ನೀನ್ಯಾಕೆ ನಿರಾಕರಿಸಿದೆ?’ ಎಂದು ಕೇಳಿದರು.
ಅದಕ್ಕೆ ಭಿಕ್ಷುಕ ವಿನೀತನಾಗಿ ಹೇಳಿದ – ‘ಅಲ್ಲ ಸ್ವಾಮಿ, ನೀವು ಕೊಡುವ ಒಳ್ಳೆಯ ಬಟ್ಟೆಗಳನ್ನು ಧರಿಸಿದ್ದನ್ನು ಬೇರೆಯವರು ನೋಡಿದರೆ ಏನೆಂದುಕೊಳ್ತಾರೆ? ಆಗ ನನ್ನನ್ನು ಭಿಕ್ಷುಕ ಅಂತ ಯಾರೂ ಭಾವಿಸುವುದಿಲ್ಲ. ಇನ್ನು ಭಿಕ್ಷೆ ಬೇಡುವಾಗ ಈ ಬಟ್ಟೆಯನ್ನು ಧರಿಸಿದರಂತೂ ಯಾರೂ ಐದು ಪೈಸೆ ಹಾಕುವುದಿಲ್ಲ. ಭಿಕ್ಷಾಟನೆ ಯಲ್ಲೂ ನಿಯತ್ತು ಬೇಕಲ್ಲವೇ?’ ‘ಎಲ್ಲರಿಗೂ ಅವರದ್ದೇ ಆದ ವೃತ್ತಿಯ ರಹಸ್ಯ ( ) ಇರುತ್ತದೆ ಅಂತಾರಲ್ಲ, ಅದು ಸುಳ್ಳಲ್ಲ ನೋಡಿ’ ಅಂದರು ಯೋಗಿ ದುರ್ಲಭಜೀ