ಸಾವಿರದ ಸವಿ ಬದುಕು, ಈ ಜೀವನದಲ್ಲೇ ಹುಡುಕು
ಸುಪ್ತ ಸಾಗರ
ರಾಧಾಕೃಷ್ಣ ಎಸ್‌.ಭಡ್ತಿ
@.
ಒಂದು ಅಣುವನ್ನೂ ಸೃಷ್ಟಿಸಲಾಗುವುದಿಲ್ಲ. ಒಂದು ಅಣುವನ್ನೂ ಕೊಲ್ಲಲಾಗುವುದಿಲ್ಲ. ಅದು ರೂಪಾಂತರಗೊಳ್ಳಬಹುದಷ್ಟೇ. ಈಗ ಯೋಚಿಸಿ, ಬದುಕಿನಬಗ್ಗೆ ಚಿಂತಿಸದೇ ಸಾವನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸುವ ಸಂಶೋಧನೆ ಎಂದರೆ ನಮ್ಮ ಜ್ಞಾನವನ್ನು ಕೊಂದುಕೊಂಡಂತಾಗುವುದಿಲ್ಲವೇ?
ಕಪ್ಪೆಯನ್ನು ಕೊಯ್ದು ಬದುಕನ್ನು ಅರ್ಥ ಮಾಡಿಕೊಳ್ಳುತ್ತದೆ. ನಮ್ಮ ವಿಜ್ಞಾನ! ಬಹುತೇಕ ವೈದ್ಯ ವಿಜ್ಞಾನದ ಪ್ರಯೋಗಗಳೆಲ್ಲವೂ ಒಂದೋ ಕಪ್ಪೆ ಅಥವಾ ಇಲಿಯ ಮೇಲೆ ನಡೆಯುವುದು ಹೊಸ ಸಂಗತಿಯೇನಲ್ಲ. ಆರಂಭದಲ್ಲಿ ಜಿರಳೆಯನ್ನು ಸೀಳುವ ಮೂಲಕ ವಿಜ್ಞಾನ ಪ್ರಯೋಗ ಆರಂಭವಾಗುತ್ತದೆ. ಇದು ಸಂಶೋಧನೆಯ ವಿಚಾರವಾದರೆ, ಮನುಷ್ಯನ ದೇಹ ರಚನೆಯನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸಲು ನಾವು ಬಳಸುವುದು ಶವವನ್ನು ಕೊಯ್ದು.
ವಿದ್ಯಾರ್ಥಿ ದಿಸೆಯಿಂದಲೂ ಈ ಬಗ್ಗೆ ಕೆಟ್ಟದೊಂದು ಕುತೂಹಲ. ಏನೇನೋ ವಿಚಿತ್ರ ಪ್ರಶ್ನೆಗಳು. ಕಪ್ಪೆಯನ್ನು ಕೊಯ್ದರೆ ಮನುಷ್ಯನ ಬದುಕು ಹೇಗೆ ಅರ್ಥವಾಗಲು ಸಾಧ್ಯ? ಏಕೆಂದರೆ ಕಪ್ಪೆಯನ್ನೋ, ಇಲಿಯನ್ನೋ, ಜಿರಲೆಯನ್ನೋ ಕೊಯ್ದರೆ ಅದು ಸತ್ತು ಹೋಗುತ್ತದೆ. ಅಂದ ಮೇಲೆ ಅದು ಹೇಗೆ ಬದುಕನ್ನು ಅರ್ಥ ಮಾಡಿಸಲು ಸಾಧ್ಯ? ಸಾವನ್ನು ಅಭ್ಯಸಿಸುವುದಾದರೆ ಅವುಗಳನ್ನು ಕೊಯ್ಯಬಹುದು, ಬದುಕನ್ನಲ್ಲ, ಬದುಕನ್ನು ಅರ್ಥ ಮಾಡಿಕೊಳ್ಳುಬೇಕೆಂದರೆ ಸಾವಿನಂಚಿನಲ್ಲಿರುವ ಜೀವಿ ಗಳನ್ನು ಪ್ರಯೋಗಕ್ಕೆ ಒಳಪಡಿಸಿ ಬದುಕಿಸಬೇಕಲ್ಲವೇ? ಹಾಗಾದರೆ ನಮ್ಮ ವಿಜ್ಞಾನ ಪ್ರಯೋಗವೆಲ್ಲ ನಡೆಯುತ್ತಿರುವುದು ಸಾವಿನ ಬಗ್ಗೆಯೇ? ಒಂದರ್ಥದಲ್ಲಿ ಹೌದು.
ನಾವೆಲ್ಲರೂ, ಬದುಕಿದಷ್ಟೂ ದಿನ ಯೋಚಿಸುವುದು ಸಾವಿನ ಬಗ್ಗೆಯೇ, ಸಾವಿನ ಬಗೆಗಿನ ಅವ್ಯಕ್ತ ಭಯ ನಮಗೆ ಹುಟ್ಟಿನಿಂದಲೇ ಅಂಟಿಕೊಂಡು ಬರುತ್ತದೆ. ಹೀಗಾಗಿ ನಮ್ಮೆಲ್ಲ ಶ್ರಮ, ಪ್ರಯತ್ನವನ್ನೂ ನಾವು ಸಾವನ್ನು ದೂರ ಮಾಡುವ ನಿಟ್ಟಿನಲ್ಲಿ ಹೂಡುತ್ತೇವೆ. ಹೇಗೇ ಮಾಡಿದರೂ ಸಾವನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಗೊತ್ತಿದ್ದರೂ ಎಂತೆಂಥದ್ದೋ ‘ಹೆಣ’ಗಾಟವನ್ನು ಮುಂದುವರಿಸಿಕೊಂಡೇ ಬರುತ್ತಿದ್ದೇವೆ. ಸಾವನ್ನು ಗೆಲ್ಲುವುದೇ ಜೀವನದ ಪರಮೊಚ್ಚ ಗುರಿಯೆಂಬ ಭ್ರಮೆಗೆ ಬಿದ್ದು ವರ್ತಿಸುತ್ತೇವೆ. ವೈದ್ಯ ವಿಜ್ಞಾನದ ಇಡೀ ಸಮುದಾಯದ ಪ್ರತಿ ಕ್ಷಣದ ವ್ಯಯ ಸಾವಿನ ವಿರುದ್ಧದ ಪ್ರಯೋಗಕ್ಕಾಗಿಯೇ, ವರ್ಷ ವರ್ಷವೂ ವೈದ್ಯ ವಿಜ್ಞಾನದ ಪರಿಗಣಿತರು ಸಾರುವುದೂ ಇದನ್ನೇ.
ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಸಹಾಯದಿಂದ ಮನುಷ್ಯನ ಸರಾಸರಿ ಆಯುಸ್ಸು ವೃದ್ಧಿಯಾಗುತ್ತದೆ. ರೋಗಗಳನ್ನು ನಾವು ಯಶಸ್ವಿಯಾಗಿ ಸಾಯಿಸು ತ್ತಿದ್ದೇವೆ. ಹೀಗಾಗಿ ಹೆಚ್ಚು ವರ್ಷ ಮನುಷ್ಯರು ಬದುಕುತ್ತಿದ್ದಾರೆ -ಇದು ಹೆಮ್ಮೆಯ ಹೇಳಿಕೆ, ಇದು ಸತ್ಯವೋ ಸುಳ್ಳೋ ಅಂತೂ ವೈದ್ಯ ಸಮುದಾಯ ನೆಮ್ಮದಿಯ ಬದುಕು ಕಾಣುತ್ತಿದೆ. ವೈದ್ಯ ಸೇವೆ ಉದ್ದಿಮೆಯಾಗಿ ಚಿಗಿತು ನಿಂತಿದೆ. ಹಿಂದೆಲ್ಲ ವೈದ್ಯ, ಸಮುದಾಯದ ಅತಿ ಗೌರವಾನ್ವಿತ ಸೇವಕನಾಗಿದ್ದ, ಚಿಕಿತ್ಸಾ ಕೇಂದ್ರಗಳು ‘ಧರ್ಮಾಸ್ಪತ್ರೆ’ಗಳೆಂಬ ಹೆಸರಿನಲ್ಲಿ ನಡೆಯುತ್ತಿದ್ದವು. ಇಂದು ಆ ಹೆಸರು ವ್ಯಂಗ್ಯವಾಗಿ ಬಳಕೆಯಾಗುತ್ತಿದೆ.
ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ಗಳ ಹೆಸರಿನಲ್ಲಿ ಆಸ್ಪತ್ರೆಗಳು ಯಾವುದೇ ಸಂಕೋಚವಿಲ್ಲದೇ ಲಾಭದಾಯಕ ವ್ಯವಹಾರವಾಗಿ ಪರಿವರ್ತನೆ ಆಗಿದೆ. ಕೆಲ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯುವುದು ಪ್ರತಿಷ್ಠೆಯ ಸಂಕೇತವಂತೆ. ಬಹುಶಃ ಮನುಕುಲಕದ ಇತಿಹಾಸದಲ್ಲಿ ಇದಕ್ಕಿಂತ ವ್ಯಂಗ್ಯ, ಹಾಸ್ಯಾಸ್ಪದ ಸಂಗತಿ ಇನ್ನೊಂದು ಇರಲಿಕ್ಕಿಲ್ಲ. ಹಿರಿಯ ರಾಜಕಾರಣಿಯೊಬ್ಬ ಕಾಯಿಲೆ ಬಿದ್ದರೆ, ಆತನೆಂದೂ ಸಾಮಾನ್ಯ ಆಸ್ಪತ್ರೆ ಸೇರಲೊಲ್ಲ. ಏಕೆಂದರೆ ಒಂದೋ ಅವನ ಗೌರವಕ್ಕೆ ಸರಿ ಹೊಂದುವ ಆಸ್ಪತ್ರೆ ಅದಾಗಿರುವುದಿಲ್ಲ. ಇಲ್ಲವೇ ಅಗತ್ಯ ಎಲ್ಲ ಸೌಕರ್ಯಗಳೂ ಅಲ್ಲಿ ಸಿಗುವುದಿಲ್ಲ. ಇಂಥ ‘ದಂಧೆ’ಯಿಂದಾಗಿಯೇ ಇವತ್ತು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೂ ಐಷಾರಾಮಿ ತೆರಿಗೆ ಹೇರುವ ಸನ್ನಿವೇಶ ನಿರ್ಮಾಣವಾಗಿರುವುದು. ಹಾಗಿದ್ದರೆ ಬಡವನೊಬ್ಬನ ಆರೋಗ್ಯದ ಹಕ್ಕು ನಿರ್ಧರಿತವಾಗುವುದುಅವನಲ್ಲಿರುವ ಹಣದ ಸಾಮರ್ಥ್ಯದ ಮೇಲೆಯೇ? ವೈದ್ಯಕೀಯ ಕ್ಷೇತ್ರ ಉದ್ದಿಮೆಯಾಗಿ ರೂಪಾಂತರಗೊಂಡು ದಶಕಗಳೇ ಸಂದವು.
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಶ, ವಿದೇಶಗಳ ರೋಗಿಗಳನ್ನು ಆಕರ್ಷಿಸುವ ವೈದ್ಯಕೀಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ನಾವು ಚಿಂತಿಸುತ್ತಿದ್ದೇವೆ. ಬೆಂಗಳೂರು ಒಂದು ಮಟ್ಟಿಗೆ ಇದರಲ್ಲಿ ಯಶಸ್ವಿಯೂ ಆಗಿದೆ ಎಂಬ ಬಗ್ಗೆ ಹೆಮ್ಮೆ ಪಡಬೇಕೋ, ವಿಷಾದಿಸಬೇಕೋ ತಿಳಿಯುತ್ತಿಲ್ಲ. ಹೀಗಾಗಿಯೇ ವೈದ್ಯ ಕೋರ್ಸ್‌ಗೆ ಬೇಡಿಕೆ ಹೆಚ್ಚಿ, ಕಾಲೇಜುಗಳಲ್ಲಿ ಒಂದೊಂದು ಸೀಟು ಗಿಟ್ಟಿಸಿಕೊಳ್ಳುವುದೂ ಜೀವಮಾನದ ಸಾಧನೆಯಾಗಿ ಪರಿಗಣಿತವಾಗುತ್ತಿದೆ. ಸಾಮಾನ್ಯ ವಿಜ್ಞಾನದ ಓದು ಶಿಕ್ಷಣವೇ ಅಲ್ಲ ಎಂಬಷ್ಟರ ಮಟ್ಟಿಗೆ ನಮ್ಮ ಮನೋಭಾವ ಬಂದು ನಿಂತಿದೆ.
ಕಲೆ, ಸಂಸ್ಕೃತಿ, ಸಾಹಿತ್ಯಕ ಅಧ್ಯಯನಗಳು ತೀರಾ ನಗಣ್ಯವಾಗಿ ಯಾವುದೋ ಕಾಲವಾಯಿತು ಬಿಡಿ. ನಮ್ಮ ತಲೆಮಾರು ಕಾಲೇಜು ಓದುತ್ತಿದ್ದ ದಿನಗಳಲ್ಲಿ ‘ಸೈನ್ಸ್‘ ವಿದ್ಯಾರ್ಥಿ ಎಂದರೆ ಅದೆಂಥದ್ದೋ ಗತ್ತು, ಅಹಮಿಕೆ. ಕಾರಿಡಾರ್‌ಗಳಲ್ಲಿ ಅವರು ಹೆಜ್ಜೆ ಹಾಕುವ ರೀತಿಯೇ ಬೇರೆ. ಅವರ ಬಗ್ಗೆ ಉಪನ್ಯಾಸಕ ವರ್ಗಕ್ಕೂ ವಿಶೇಷ ಅಕ್ಕರೆ. ಅದು ಈಗಿಲ್ಲ. ಈಗ ಆ ಸ್ಥಾನವನ್ನು ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳು ಆಕ್ರಮಿಸಿಕೊಂಡಿದ್ದಾರೆ. ತಂತ್ರಜ್ಞಾನಕ್ಕೂ- ಉದ್ದಿಮೆಗೂ, ಆಧುನಿಕತೆಗೂ- ಆರ್ಥಿಕತೆಗೂ, ಸಂಶೋಧನೆಗೂ- ಬಂಡವಾಳಶಾಹಿ ಧೋರಣೆಗೂ ಬೆಸೆದುಕೊಂಡಿರುವ ನಂಟು ಇದೇ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿ ಗೋಚರಿಸುತ್ತಿದೆ.
ಏನೇ ಆದರೂ ಒಮ್ಮೆ ನಷ್ಟ ಮಾಡಿಕೊಂಡ ಆರೋಗ್ಯವನ್ನು ಹಿಂತಿರುಗಿಸಲು ಸಾಧ್ಯವಿಲ್ಲ ಎಂಬಂಥ ಸನ್ನಿವೇಶದಲ್ಲಿ ಆರೋಗ್ಯಕಾರಿ ಜೀವನದ ಕಾಳಜಿಯೂ ಹೆಚ್ಚಿತು. ಆದರಿಂದ ನಮ್ಮ ವೈದ್ಯ ವಿಜ್ಞಾನ ಸಾಖಷ್ಟು ಮುಂದುವರಿದಿದೆ ಎಂಬ ಅಹಮಿಕೆ ನಮ್ಮನ್ನು ಕೀಳು ಮಟ್ಟದ ದಾಸ್ಯಕ್ಕೆ, ಚಟಕ್ಕೆ ಈಡು ಮಾಡುತ್ತಿದೆಎಂಬುದೂ ಸತ್ಯ. ಒಂದು ಕಾಯಿಲೆಯನ್ನೋ, ಸಾಂಕ್ರಮಿಕವನ್ನೋ ಮನುಕುಲ ಮೆಟ್ಟಿನಿಂತಿದೆ ಎನ್ನುವಾಗಲೇ ಹೊಸ ಹೊಸ ಸ್ವರೂಪದ ಕರೋನಾದಂಥ ರಕ್ಕಸ ಕಾಯಿಲೆಗಳು ಸಾವಿನಂಚಿಗೆ ಮನುಕುಲವನ್ನು ದೂಡುತ್ತಿದೆ. ಅಂದರೆ ಸಾವು ಅಪರಿಹಾರ್ಯ ಎಂಬ ಸತ್ಯವನ್ನು ನಾವು ಅರಗಿಸಿಕೊಳ್ಳದೇ, ಆರೋಗ್ಯಕಾರಿ ಬದುಕಿನ ಬಗೆಗೆ ಯೋಚಿಸುವುದನ್ನೇ ಮರೆಯುತ್ತಿದ್ದೇವೆ.
ನಮ್ಮ ಇಂದಿನ ಬಹುತೇಕ ಧರ್ಮಗಳೂ ಬೋಧಿಸುವುದು ಸಾವಿನಾಚೆಯ ಘಟ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡೇ. ಹುಟ್ಟುತ್ತಲೇ ಮಗುವಿನ ಜಾತಕವನ್ನು ಜೋಯಿಸರ ಬಳಿ ಬರೆಸುವ ನಾವು ಅದರ ಆಯುಸ್ಸು ಪೂರ್ತಿಯಾಗಿದೆಯೇ ಎಂದು ಪ್ರಶ್ನಿಸುತ್ತೇವೆ. ಧರ್ಮ ಕರ್ಮಗಳ ಮಾತಾಡುವಾಗಲೆಲ್ಲ ಪೂರ್ವಜನ, ಸಾವಿನ ಬಳಿಕದ ಲೋಕದ ಪ್ರಸ್ತಾಪವನ್ನು ಮಾಡುತ್ತೇವೆ. ಪಾಪಭೀತಿಯನ್ನು ಬಿತ್ತುವಾಗಲೆಲ್ಲ ಸಾವಿನ ನಂತರ ನರಕಕ್ಕೆ ಹೋಗುತ್ತೇವೆ. ಅಲ್ಲಿ ಇನ್ನಿಲ್ಲದಸಂಕಷ್ಟ ವನ್ನು ಅನುಭವಿಸಬೇಕಾಗುತ್ತದೆ ಎನ್ನುವ ಮಾತು ಅರಿತವರಿಂದ, ಹಿರಿಯರಿಂದ ಕೇಳಿದ್ದೇವೆ. ಇವತ್ತು ನಾನು ಹೇಗಿರಬೇಕು ಎಂಬುದರ ಬಗ್ಗೆ ಹೇಳು ವಾಗಲೆಲ್ಲ ‘ಸತ್ತ ಬಳಿಕ ಹಾಗಾಗುತ್ತೇವೆ’ ಎಂಬ ಭಯದ ನೆರಳಲ್ಲೇ ಧರ್ಮ ಬೋಧನೆ ನಡೆಯುತ್ತದೆ. ನೈತಿಕತೆಯನ್ನು ಹೇಳುವಾಗ ಒಂದು ಮಟ್ಟದ ಭಯ ಇರಲಿ ಎಂಬುದು ಸಮ್ಮತವಾಗಿರಬಹುದು.
ಆದರೆ ಭಯಕ್ಕಷ್ಟೇ ನಾವು ನೀತಿವಂತರಾಗುತ್ತೇವೆ ಎಂದರೆ ಆ ಭಯದ ಪೊರೆ ಕಳಚಿದ ಮರುಕ್ಷಣ ನಾವು ಸಂಪೂರ್ಣ ನೈತಿಕ ಅಧಃಪತನಕ್ಕೆ ಕುಸಿದು ಬಿಡುವ ಅಪಾಯವಿಲ್ಲವೇ? ಇರಲಿ, ಹಿಂದಿನ ದಿನಗಳಲ್ಲಿ ಮನುಷ್ಯನ ಅಷ್ಟೊಂದು ಸುಶಿಕ್ಷಿತವಲ್ಲದ ಸಮುದಾಯಕ್ಕೆ ಇಂಥ ಪಾಪಭೀತಿಯ ಅಗತ್ಯವಿತ್ತು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆದರಿಂದು ನಾವು ವೈಜ್ಞಾನಿಕವಾಗಿ ಸಾಕಷ್ಟು ಮುಂದುವರಿದಿದ್ದೇವೆಂದು ಹೇಳಿಕೊಳ್ಳುತ್ತಿದ್ದೇವೆ. ಆದರೂ ನಾವು ಬದುಕಿನ ಬಗ್ಗೆ ಯೋಚಿಸುವು ದನ್ನು ಬಿಟ್ಟು ಸಾವನ್ನು, ಅದರಾಚೆಯನ್ನೇ ಆಧರಿಸಿ ಜಿಜ್ಞಾಸೆಗೆ ಬೀಳುತ್ತೇವೆ. ಇಲ್ಲೂ ನಾವು ಧರ್ಮದ ಆಶಯವನ್ನು ಅರ್ಥ ಮಾಡಿಕೊಳ್ಳದೇ ಅಂಧಾಚರಣೆಗೆ ಮುಂದಾಗುತ್ತಿದ್ದೇವೆ.
ಸಂಘರ್ಷಕ್ಕೆ ಇಳಿಯುತ್ತಿದ್ದೇವೆ. ಪರಿಣಾಮ ಇಂಥ ವಿಘಟಿತ ಮನಸ್ಸುಗಳು ಸೃಷ್ಟಿಸುತ್ತಿರುವುದು ಸಾವಿನ ಸರಣಿಯನ್ನೇ. ಸಾವನ್ನೂ ಸಂಭ್ರಮಿಸುವ ಧರ್ಮವೂ ನಮ್ಮ ನಡುವಿದೆ. ಜೈನರಲ್ಲಿ ಸಲ್ಲೇಖನ ಸ್ವೀಕರಿಸಿ ಸ್ವ ಇಚ್ಛೆಯಿಂದ ಸಾವನ್ನು ಅಪ್ಪಿಕೊಳ್ಳಲಾಗುತ್ತದೆ. ಇಲ್ಲಿ ಜೀವನದ ಬಗ್ಗೆ ಜುಗುಪ್ಸೆಯೂ ಇಲ್ಲ, ಸಾವಿನ ಬಗ್ಗೆ ಭೀತಿಯೂ ಇಲ್ಲ, ಸಂಪೂರ್ಣ ತೃಪ್ತಿಯೊಂದಿಗೆ ನಮ್ಮ ಸಾವನ್ನು ನಾವೇ ಸ್ವಾಗತಿಸಿಕೊಳ್ಳುವುದು. ಆದರೆ ಇದಕ್ಕೆ ಕಾರಣ, ಬದುಕು ಸಾಕೆನಿಸುವುದಲ್ಲ. ನಮ್ಮಲ್ಲಿ ಜ್ಞಾನದ ಹಸಿವು ಇಂಗಿಸಿಕೊಳ್ಳುವ ಸಾಮರ್ಥ್ಯ ಕುಸಿದ ನಂತರ ಬದುಕು ಅರ್ಥ ಕಳೆದುಕೊಳ್ಳುತ್ತದೆ ಎಂಬುದು ಸಲ್ಲೇಖನದ ಸಂಕೇತ.
ವಿಜ್ಞಾನದ (ಇ = ಎಂಸಿ೨) ಸೂತ್ರವೇ ಇಲ್ಲಿ ಪಾಲನೆಯಾಗುವುದು. ಅಂದರೆ ಒಂದು ಅಣುವನ್ನೂ ಸೃಷ್ಟಿಸಲಾಗುವುದಿಲ್ಲ. ಒಂದು ಅಣುವನ್ನೂ ಕೊಲ್ಲಲಾಗುವುದಿಲ್ಲ, ಅದು ರೂಪಾಂತರಗೊಳ್ಳಬಹುದಷ್ಟೇ. ಈಗ ಯೋಚಿಸಿ, ಬದುಕಿನ ಬಗ್ಗೆ ಚಿಂತಿಸದೇ ಸಾವನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸುವ ಸಂಶೋಧನೆ ಎಂದರೆನಮ್ಮ ಜ್ಞಾನವನ್ನು ಕೊಂದುಕೊಂಡಂತಾಗುವುದಿಲ್ಲವೇ? ಇದು ನಿಜವಾದ ಅತ್ಮಹತ್ಯೆ. ಸಾವಿನಾಚೆಯ ಬದುಕನ್ನು ಬೋಽಸುವ ಧರ್ಮಗಳಲ್ಲಿಯೂ ಆತ್ಮಕ್ಕೆ ಸಾವಿಲ್ಲ ಎಂದು ಹೇಳಲಾಗುತ್ತದೆ. ಸಾವೆಂದರೆ ಅದು ಅವಸ್ಥಾಂತರವಷ್ಟೇ, ಈ ದೇಹದಿಂದ ಇನ್ನೊಂದು ದೇಹಕ್ಕೆ ಆತ್ಮ ಸ್ಥಳಾಂತರಗೊಳ್ಳುವುದು ಎಂಬುದು ಎಲ್ಲ ಧರ್ಮಗುರುಗಳೂ ಸಾರುವ ಅಂಶ.
ಅಂದರೆ ನನ್ನ ಸಾವು, ನಿಜವಾಗಿ ನನ್ನ ಸಾವಲ್ಲ. ಅದು ನನ್ನ ದೇಹದ ಸಾವು. ವಿಜ್ಞಾನವೂ ಹೀಗೆಯೇ ಹೇಳುತ್ತದೆ. ಸಾವನ್ನು ವ್ಯಾಖ್ಯಾನಿಸುವ ಅದು, ಸಾವೆಂದರೆ ಜೀವಕೋಶಗಳ ಸಾವು. ದೇಹದ ಜೀವಕೋಶಗಳೆಲ್ಲವೂ ಒಂದೊಂದಾಗಿ ಸಾಯುತ್ತಾ ಬಂದರೆ ಮನುಷ್ಯ ಸಾಯುತ್ತಾನೆ ಎನ್ನುತ್ತದೆ. ಅಥವಾ ಪ್ರಮುಖ ಅಂಗಾಂಗಗಳ ಸಾವೇ ಮನುಷ್ಯನ ಸಾವು. ಅಂದರೆ ನಮಗೆ ಸಾವಿಲ್ಲ ಎಂಬುದು ಖಚಿತವಾದ ಮೇಲೆ ನಾವೇಕೆ ಇಂಥಾ ಪರಿ ಸಾವಿನ ಬಗ್ಗೆಯೇ ಯೋಚಿಸುತ್ತೇವೆ.ಸಾವು ಅಪರಿಹಾರ್ಯ ಎಂಬುದು ಗೊತ್ತಿದ್ದೂ ಸಾವಿನ ವಿರುದ್ಧ ವ್ಯರ್ಥ ಸಮರ ಸಾರುವ ಬದಲು ಸಾವಿನ ನಂತರವೂ ‘ನಾನು’ ಹೇಗೆ ಬದುಕಿರಲು ಸಾಧ್ಯ ಎಂಬುದರ ಬಗ್ಗೆ ಚಿಂತಿಸಲು ಹೆಚ್ಚಿನ ಶ್ರಮ, ಸಮಯ ವಿನಿಯೋಗಿಸಬಹುದಲ್ಲವೇ? ವಾಸ್ತವದ ಗ್ರಹಿಕೆಯಿಂದ ಮಾತ್ರ ಸತ್ಯದ ದರ್ಶನ ಸಾಧ್ಯ. ಬದುಕು ವಾಸ್ತವ. ಸಾವೂ ವಾಸ್ತವವಾದರೂ ಅದು ಬದುಕಿನ ನಂತರದ್ದು. ಮೊದಲು ನೆಲವನ್ನು ಅಪ್ಪಿಕೊಳ್ಳೋಣ.
ಇಲ್ಲಿ ನೆಟ್ಟಗೆ ನಿಂತುಕೊಳ್ಳೋಣ. ನಂತರ ನಡೆದು, ನೆಗೆದು ಕೊನೆಗೆ ಹಾರುವ ಬಗ್ಗೆ ಯೋಚಿಸ ಬೇಕಲ್ಲವೇ? ಬದುಕನ್ನು ನಿಲ್ಲಿಸಿಕೊಳ್ಳುವ ಕುರಿತು ತಂತ್ರಜ್ಞಾನಗಳು ಬರಲಿ. ಭ್ರಮಾಲೋಕದಲ್ಲಿ ಸಾಗುತ್ತಿರುವ ನಮ್ಮನ್ನು ಬಂಧನದ ಬದುಕಿನಲ್ಲಿಡಲುತಮ್ಮ ಹಿಂದೆ ಕರೆದೊಯ್ಯುತ್ತಿದಾದರೆ ವಿeನಿಗಳೆಂಬ ಕಿಂದರಜೋಗಿಗಳು ಬೆಚ್ಚಗಿನ ನೆಲದೊಡಲ ಬಿಲಬಿಟ್ಟು, ತಲೆ ತಗ್ಗಿಸಿ, ಅಂಧರಾಗಿ ಅವರನ್ನು ಹಿಂಬಾಲಿಸುತ್ತಿದ್ದೇವೆ ನಾವು. ಎಂಥಾ ದುರಂತ! ಇದನ್ನು ಬಿಟ್ಟು ನಿಸರ್ಗದಲ್ಲಿ ಒಂದಾಗಿ ಬದುಕನ್ನು ಕಟ್ಟಿಕೊಳ್ಳುವುದು, ಆರೋಗ್ಯಕರ ಮನಸಿನೊಂದಿಗೆ ಜೀವನಕ್ರಮವನ್ನು ಬೆಸೆದುಕೊಳ್ಳುವುದು ನಮ್ಮಿಂದ ಆಗುತ್ತಿಲ್ಲವೇಕೆ? ಪ್ರಕೃತಿಗೇ ಪರಕೀಯರಾಗಿ ನಮ್ಮ ಅಸ್ತಿತ್ವ ಶೂನ್ಯವಾಗುತ್ತಿದೆ.
ನಮ್ಮ ಬದುಕಿನ ಜೀವಸೆಲೆ ಬತ್ತಿಹೋಗುತ್ತದೆ. ಮನದಾಳದ ಅಧ್ಯಾತ್ಮಿಕ ತಪೋವನ ಬರಡಾಗುತಿದೆ. ಆಧುನಿಕ ನಾಗರಿಕತೆಯೆಂಬ ಭಾವನಿರ್ಜಿವ ಸ್ಥಿತಿಯಲ್ಲಿ ನಾವಿಂದು ರೋಗಗ್ರಸರಾಗುತ್ತಿರುವುದು, ಏಕಾಂಗಿತನದಿಂದ ಖಿನ್ನರಾಗುತ್ತಿರುವುದು ಇದೇ ಕಾರಣಕ್ಕೆ. ನಿಸರ್ಗದರಮನೆಯಲ್ಲಿ ನಾವು ಪರಕೀಯರಾಗಿ ಬಿಟ್ಟಿದ್ದೇವೆ. ಪಕೃತಿಯ ದಿವ್ಯವಾಚಾಳಿತನವನ್ನೂ ಕೇಳಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿಲ್ಲ. ಅದರ ಜತೆಗೆ ಒಮ್ಮೆಯೂ ಹರಟೆಗೆ ಕೂರುವ ವ್ಯವಧಾನವೇ ನಮಗಿಲ್ಲ.ನೀರು-ಮಣ್ಣು, ಗಿಡ-ಮರಗಳು, ಕೀಟಗಳು, ಸೂಕ್ಷಾಣುಜೀವಿಗಳು, ಗಾಳಿ-ಸೂರ್ಯ ಹೀಗೆ ಕಣ್ಣಿಗೆ ಕಾಣುವ, ಕಾಣದ ಎಷ್ಟೊಂದು ಸದಸ್ಯರಿದ್ದಾರೆ ಈ ಮನೆಯಲ್ಲಿ. ಹಠಕ್ಕೆ ಬಿದ್ದಾದರೂ ಒಮ್ಮೆ ಅವರೊಂದಿಗೆ ವಾದಕ್ಕೆ ಇಳಿದರೆ ಪಕೃತಿಯ ಅನುಕ್ಷಣದ ಕಾಲಾಕಾಶದಲ್ಲಿ ನಮ್ಮ ನಿರಂತರ ಸೆಣಸಾಟ ಕೊನೆಯಾಗುತ್ತದೆ.
ಬದುಕು ಆಡಂಬರದ ಆಚರಣೆಯಾಗಬಾರದು. ಅದೊಂದು ಮಾನಸಪೂಜೆ. ಧ್ಯಾನಸ್ಥ ಸ್ಥಿತಿಯಲ್ಲಿ ನಿಸರ್ಗವನ್ನು ಕಣ್ತುಂಬಿಕೊಂಡು, ಆಕೆಯ ಒಲುಮೆ ಪಡೆಯುವವಿಧಾನ. ಯಾವತ್ತಿಗೂ ವಾಚ್ಯವಾಗದ ಮಗುವಿನ ಅಳುವನ್ನೇ ಅರ್ಥೈಸಿಕೊಳ್ಳಬಲ್ಲ ಅಮ್ಮನೆದೆಯ ಹಾಲು ಕುಡಿದೇ ಬೆಳೆದು ನಿಲ್ಲುವ ನಾವು, ಮೊಂಡುತನಕ್ಕೆ ಬಿದ್ದು ‘ನಿನಗೇನು ಗೊತ್ತಾಗೊಲ್ಲ ದಡ್ಡಿ’ ಅಂತ ಆಕೆಯನ್ನೇ ಹಂಗಿಸುವುದಿಲ್ಲವೇ? ಹಾಗೆಯೇ ನಿಸರ್ಗದೆದುರಿನ ನಮ್ಮ ಮೊಂಡುತನವೂ. ಭೂಮಿಯ ಮೇಲಿನ ಜೀವಿಗಳಲ್ಲ ಅಪೂರ್ವ ಆಲೋಚನಾ ಶಕ್ತಿಯಿರುವುದು ನನಗೊಬ್ಬನಿಗೇ ಎಂಬ ಅಹಮಿಕೆ ನಮ್ಮದು.
ನಮ್ಮನ್ನು ನಾವೇ ಅರಿತುಕೊಳ್ಳಲಾಗದ ಸ್ಥಿತಿಯಲ್ಲಿ ಕುಳಿತು ಇಡೀ ಪ್ರಾಕೃತಿಕ ಜಗತ್ತನ್ನೂ ಅರಿತಿದ್ದೇವೆಂಬ ಭ್ರಮೆಯಲ್ಲಿದ್ದೇವೆ. ಇಂಥ ಶ್ರೇಷ್ಠತೆಯ ವ್ಯಸನದಿಂದಾಗಿಯೇ ಪ್ರಕೃತಿಯನ್ನು ನನಗಿಷ್ಟಬಂದ ಹಾಗೆ ಬಳಸಿಕೊಳ್ಳಬಹುದೆಂದು ಭ್ರಮಿಸಿರುವುದು. ನನ್ನ ಬುದ್ಧಿವಂತಿಕೆ ಆಲೋಚನಾ ಶಕ್ತಿಯೇ ನನ್ನ ಬಲ. ಅದರಿಂದಾಗಿ ತನಗೆ ಅಲಭ್ಯವಾದುದು ಯಾವುದೂ ಇಲ್ಲವೆಂಬ ಹುಚ್ಚುತನ ನಮಗೆ ಭೋಗ ಸಂಸ್ಕೃತಿಯನ್ನು ಕಲಿಸಿದ್ದು. ಮಿಥ್ಯಾ ಸುಖದ ಹಂಬಲದಲ್ಲಿ ಹೆಣಗಾಡುತ್ತಿರುವವನಿಗೆ ಸಿಗುತ್ತಿರುವುದೂ ಶೂನ್ಯ-ನಿರ್ಜಿವ ಸಂತಸವೇ. ನಿಸರ್ಗದ ಸಹಜನಂದದ ಸುಖ ಮರೀಚಿಕೆಯಾಗಿರುವುದು ಇದೇ ಕಾರಣಕ್ಕೆ.
ಈ ಪ್ರಪಂಚದಲ್ಲಿ ಮಿಥ್ಯಾ ವಿವೇಕವನ್ನು ಸೃಷ್ಟಿಸಿಕೊಂಡು ಅದರ ಭ್ರಮಾಽನರಾಗಿಬಿಟ್ಟಿದ್ದೇವೆ ನಾವು. ಸೂಕ್ಷ್ಮ ಭಾವನೆಗಳು ನಮ್ಮ ಮನಸ್ಸನ್ನು ತಟ್ಟುತ್ತಲೇ ಇಲ್ಲ. ನಮ್ಮ ಸುತ್ತಲಿರುವುದು ಗೊತ್ತುಗುರಿಯಿಲ್ಲದ ಭ್ರಮಾಲೋಕ. ಏನನ್ನೂ ಕಲಿತಿಲ್ಲ, ಏನೂ ಸಾಧಿಸಿಲ್ಲ. ಆದರೂ ನಾವು ಬಿದ್ದ ನೆಲವನ್ನೇ ನಮ್ಮ ಈ ವಿಥ್ಯಾ eನದಿಂದನಿಯಂತ್ರಿಸಬನೆಂಬ ಭ್ರಮೆಯಲ್ಲಿ ಹಾಳುಗೆಡವುತ್ತಿದ್ದೇವೆ. ಸಾವನ್ನು ಮುಂದೂಡಬಹುದಷ್ಟೇ. ಆದರೆ ಚಿರಂಜೀವತ್ವವನ್ನು ತಂದುಕೊಡುವುದು ಯಾವುದರಿಂದಲೂಸಾಧ್ಯವಿಲ್ಲ. ಅದೊಮ್ಮೆ ಸಾಧ್ಯವಿದ್ದರೆ ನಮ್ಮ ‘ಬದುಕು’ ಹೇಗಿತ್ತು ಎಂಬುದರಿಂದ ಮಾತ್ರ. ಅಂಥ ಬದುಕನ್ನು ಕುರಿತಾಗಿಯೇ ಬಸವಣ್ಣನವರು ಹೇಳಿದ್ದು ಸ್ಥಾವರ ಕ್ಕಳಿವುಂಟು, ಜಂಗಮಕ್ಕಳಿವಿಲ್ಲ. ಎಷ್ಟು ಸತ್ಯವಲ್ಲವೇ?