ದೇಶಭಾಷಾ ಮಾಧ್ಯಮದ ಶಿಕ್ಷಣ ಅನಿವಾರ್ಯ, ಅಗತ್ಯ
ದಾಸ್ ಕ್ಯಾಪಿಟಲ್‌
ಟಿ.ದೇವಿದಾಸ್
dascapital1205@.
ಪಾಲಕರು, ತಮ್ಮ ಮಕ್ಕಳು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೆಂಬ ಮಹದಾಸೆಯಿಂದ ಆಂಗ್ಲಮಾಧ್ಯಮ ಶಾಲೆಗಳಿಗೆ ಸೇರಿಸಿ, ಕನ್ನಡದ ಉಳಿವಿನ ಬಗ್ಗೆ ನಾಟಕೀಯವಾಗಿ ಒಳಗೊಳಗೇ ಅಸಹ್ಯವನ್ನೂ ಅಣಕವನ್ನೂ ಮಾಡುವವರಿದ್ದಾರೆ.
ಒಂದು ನಿರ್ದಿಷ್ಟ ಅಧ್ಯಯನದೊಂದಿಗೆ ನಾನು ನನ್ನ ಭಾಷೆ, ಓದು, ಸಮುದಾಯವನ್ನು ನೋಡುವ, ಸ್ವೀಕರಿಸುವ, ಮನುಷ್ಯ ಸಂಬಂಧಗಳ ಗಹನತೆಯನ್ನು ಅರ್ಥೈಸಿಕೊಳ್ಳುವ, ಹಿರಿಯರನ್ನು ಗೌರವಿಸುವ, ಸಮುದಾಯ ಸ್ವೀಕರಿಸುವ ಬದುಕನ್ನು ಕಟ್ಟಿಕೊಳ್ಳುವ ಬಗೆಯನ್ನು ಕಲಿಸುವ ಮೌಲ್ಯಗಳನ್ನು ಕೊಡುವ ಶಿಕ್ಷಣವ್ಯವಸ್ಥೆ ಭಾರತದಂಥ ಬೃಹತ್ ರಾಷ್ಟ್ರಕ್ಕೆ ಬೇಕಾಗಿದೆ. ಹಿಂದೆಲ್ಲಾ ಖಾಸಗಿ ಶಾಲೆಗಳು ಇರಲಿಲ್ಲ.
ಈಗ ಎಲ್ಲೆಲ್ಲೂ ಅವೇ ತುಂಬಿಕೊಂಡಿವೆ. ಇಡಿಯ ಶಿಕ್ಷಣ ವ್ಯವಸ್ಥೆ ಅಪಮೌಲ್ಯವಾಗುತ್ತಿರುವುದಕ್ಕೆ ಇದು ಪ್ರಧಾನ ಕಾರಣವಾಗಿದೆ ಎನ್ನದೇ ವಿಧಿಯಿಲ್ಲ. ನಾವು ಫೀಸು ಕಟ್ಟುತ್ತೇವೆ. ಅದರಿಂದಾಗಿ ನಿಮಗೆ ಸಂಬಳ ಬರುತ್ತದೆಂದು ಹೆತ್ತವರೇ ರಾಜಾರೋಷವಾಗಿ, ಸಾರಾಸಗಟಾಗಿ ಮಾತಾಡುವಾಗ ಮಕ್ಕಳು ಯಾವ ಗೌರವವನ್ನು ತನ್ನ ಗುರುವಿಗ ಕೊಡಲು ಸಾಧ್ಯ? ಶಾಲೆಯೊಂದರ ಆಂತರಿಕ ವ್ಯವಸ್ಥೆಗಳ ಬಗ್ಗೆ ಹೆತ್ತವರು ಮಕ್ಕಳ ಮುಂದೆ ಕ್ಷುಲ್ಲಕ ವಾಗಿ ಮಾತಾಡಿದರೆ, ಏಕವಚನದಲ್ಲಿ ತಮ್ಮ ಮಕ್ಕಳ ಶಿಕ್ಷಕರನ್ನು ಗೌರವಿಸಿದರೆ ಆ ಮಕ್ಕಳ ಮನಸಲ್ಲಿ ಯಾವ ಭಾವನೆಗಳು ಳೆದೀತು ಎಂಬ ಸಾಮಾನ್ಯಪ್ರಜ್ಞೆಯೂ ದೊಡ್ಡವರಲ್ಲಿಲ್ಲ.
ಅಸಂಖ್ಯ ಪ್ರಮಾಣದಲ್ಲಿ ಖಾಸಗೀ ಶಾಲೆಕಾಲೇಜುಗಳು ಹುಟ್ಟಿಕೊಂಡಾಗಲೇ ಶಿಕ್ಷಣ ದಂಧೆಯಾಗಿ ಮೌಲ್ಯವನ್ನು ಕಳೆದುಕೊಂಡಿತು. ಸದುದ್ದೇಶ ಮತ್ತು ಸ್ಥಳೀಯ ಆದ್ಯತೆಗಳನ್ನು ಗಮನಿಸಿ ಖಾಸಗೀಶಾಲೆಗಳು ಹುಟ್ಟಿಕೊಂಡಿರು ವುದಕ್ಕೂ, ದಂಧೆಯಾಗಿ ಹುಟ್ಟಿಕೊಂಡಿರುವುದಕ್ಕೂ ಅಂತರವಿದೆ. ಮೊದಲನೆಯ ಆದ್ಯತೆಯನ್ನಿಟ್ಟು ಕೊಂಡ ಖಾಸಗೀ ಶಾಲೆಗಳಲ್ಲಿ ಶೈಕ್ಷಣಿಕ ಮೌಲ್ಯಗಳು, ಘನತೆ-ಗೌರವ ಇನ್ನೂ ಜೀವಂತವಾಗೇ ಇದೆ.
ದಂಧೆಯಾಗಿ ಹುಟ್ಟಿಕೊಂಡವು ಮಾತ್ರ ಹತ್ತು ತಿಂಗಳ ವ್ಯವಹಾರವನ್ನು ಮಾಡುತ್ತವೆ. ಯಾವಾಗ ಶಿಕ್ಷಣವೂ ವ್ಯವಹಾರವಾಯಿತೋ ಆವಾಗಲೇ ಮಕ್ಕಳು ನಿಜವಾದ ಶಿಕ್ಷಣದಿಂದ ವಂಚಿತರಾದರು. ಆದ್ದರಿಂದ ತಪ್ಪು ಮಕ್ಕಳದಲ್ಲ, ಶಿಕ್ಷಣವನ್ನು ದಂಧೆಯನ್ನಾಗಿ ಪರಿವರ್ತಿಸಿ ಕೊಂಡವರು ಮತ್ತು ಅಂಥ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಿದವರದ್ದು. ಪರಿಣಾಮವಾಗಿ ಸರಕಾರಿ ಶಾಲೆಗಳಲ್ಲಿ ಇದರ ಪ್ರಭಾವ ಬೀರಿ ಅವು ಇಂಥ ಶಾಲೆ ಗಳನ್ನೇ ಅನುಕರಿಸಲು ಮುಂದಾಗಿ ಅತ್ತ ಅದೂ ಅಲ್ಲದ, ಇತ್ತ ಮೂಲಕ್ಕೂ ಸಿಗದ ರೂಪದಲ್ಲಿ ಹಳಿತಪ್ಪಿ ಅಸ್ತಿತ್ವವನ್ನು ಕಳೆದುಕೊಂಡವು.
ಎಲ್ಲವನ್ನೂ ಸರಿಮಾಡಬೇಕಾದ ಸರಕಾರ ಕಣ್ಮುಚ್ಚಿ ಕುಳಿತಿತು. ಯಾರನ್ನು ದೂರುತ್ತೀರಿ? ಕಾಲಕಳೆದಂತೆ ಅಧ್ಯಯನ, ಪರೀಕ್ಷೆ, ಮೌಲ್ಯಮಾಪನ, ಅಂಕ ವಿತರಣೆ, ಪದವಿ ಪ್ರದಾನಗಳೆಲ್ಲ ಸಾಮೂಹಿಕ ದಂಧೆಯಾದವು. ದಂಧೆಯಾಗಿ ಪರಿವರ್ತನೆಗೊಂಡ ಶಾಲೆಗಳಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳ ಮಧ್ಯೆ ಯಾವ ಮಾನುಷ್ಯ ರೂಪದ ಭಾವನಾತ್ಮಕವಾದ ಸಂಬಂಧವಿರಲು ಸಾಧ್ಯವಿಲ್ಲ. ಕಲಿತ ಶಾಲೆಯ ವಿರುದ್ಧವೇ ಮಾತಾಡುವವರು, ಅಸಡ್ಡೆ ಮಾಡುವವರಿದ್ದಾರೆ. ಕಲಿತ ಶಾಲೆ, ಕಲಿಸಿದ ಗುರುಗಳಲ್ಲಿ ಇರಬೇಕಾದ ತೀರದ ಒಂದು ಭಾವ ಸತ್ತಿತು. ಒಂದು ಕಾಲದಲ್ಲಿ, ಮೇಷ್ಟ್ರುಗಳನ್ನು ಮಾತಾಡಿಸುವಾಗಲೂ ಅವ್ಯಕ್ತ ಭಯ, ಗೌರವವಿರುತಿತ್ತು. ಕಾರಣ ಶಾಲೆಯಲ್ಲಿ ಮಾತ್ರ ಗುರುಗಳಾಗಿರದೆ, ಮನೆಯ ಸದಸ್ಯರೊಂದಿಗೆ ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ಮಾತಾಡುತ್ತಿದ್ದರು.
ಶಾಲೆಯಲ್ಲಾದ ಓದಿನ ವಿಚಾರವನ್ನು ಮನೆಗೆ ಮುಟ್ಟಿಸುತ್ತಿದ್ದರು. ಈ ಭಯದಿಂದ ತಪ್ಪುಮಾಡುವ ಸಾಧ್ಯತೆಗಳು ಕಡಿಮೆಯಿತ್ತು. ತಪ್ಪಿದಾಗ ತಿದ್ದಿತೀಡುತ್ತಿದ್ದರು. ಇದರಿಂದಾಗಿ ದಾರಿತಪ್ಪುವ ಸಾಧ್ಯತೆ ಕಡಿಮೆಯಿರುತಿತ್ತು. ಶಾಲೆಗಷ್ಟೇ ಗುರುಗಳ ಪರಿಚಯವಿರದೇ ಮನೆ, ಊರು-ಕೇರಿಗೇ ಪರಿಚಯವಿರುವ ಆ ಕಾಲದಲ್ಲಿ(ಈಗಲೂ ಅಂತ ಶಾಲೆಗಳಿವೆ) ಕಲಿತವರು ಬೇರೇನೂ ಇಲ್ಲದಿದ್ದರೂ ಮಾನಸಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ ಒಂದು ಮಟ್ಟಿಗಿನ ಶ್ರೀಮಂತರೇ. ಕೊನೆಯಪಕ್ಷ ಇದಾವುದೂ ಇರದಿದ್ದರೂ ಅಡ್ಡಿಯಿಲ್ಲ, ತನಗೆ ಬೋಧಿಸುವ ಗುರುವಿನೊಂದಿಗೆ ಭಾವನಾತ್ಮಕವಾದ, ಮಾನಸಿಕವಾದ ಸಂಬಂಧವೂ ಇಲ್ಲದೇ ಹೋದರೆ ಏನನ್ನು ಕಲಿಯಲು ಸಾಧ್ಯವಿದೆ? ಎಲ್ಲವೂ ಕೇವಲ ಹಣದಲ್ಲಿಯೇ ನಿರ್ಧಾರವಾಗುತ್ತದೆಂದಾದರೆ ಯಾವ ಮೌಲ್ಯದ ಬಗ್ಗೆ ಎಷ್ಟು ಮಾತಾಡಿದರೇನು? ಕಡಿಮೆ ಫೀಸು ತಗೊಳ್ಳುವ ಖಾಸಗಿ ಶಾಲೆಯಾದರೂ ಪರವಾಗಿಲ್ಲ ಅಂತ ಹೇಳುವವರಿಗೆ ನಿಜವಾದ ಶಿಕ್ಷಣದ ಅಗತ್ಯವಾದರೂ ಏನಿದೆ? ನಾವು ಹಣ ಕೊಡ್ತೇವೆ, ನೀವು ನಮಗೆ ಅಂಕಗಳನ್ನು ಕೊಡಿ ಅಷ್ಟೆ, ಅಂತ ಮಾತಾಡುವವರ ಮುಂದೆ ಶಿಕ್ಷಣದ ಯಾವ ಮೌಲ್ಯವನ್ನು ಹೇಳಿ ಪ್ರಯೋಜನವಿದೆ? ನಡುವಿನ ಒಳ್ಳೆಯ ಉಪಾಧ್ಯಾಯರಲ್ಲಿ ಹೆಚ್ಚು ಕಲಿತಿರುವವರು ಇರುವುದು ಕಳಪೆಯಾಗಿ ಕಾಣುವ ಸರಕಾರಿ ಶಾಲೆಗಳಲ್ಲಿ. ಆದರೂ ಸರಕಾರಿ ಶಾಲೆಗಳೂ ಕುಸಿಯುತ್ತಿವೆ.
ಕೇರಳದಲ್ಲಂತೂ ಮುಚ್ಚುತ್ತಿವೆ. ಕರ್ನಾಟಕ ಆ ಹಾದಿಯಲ್ಲಿದೆ. ಸರಕಾರವೇ ಪ್ರತಿವರ್ಷ ಆಹ್ವಾನವೀಯುವುದರಿಂದ ಗಿಳಿಯೋದು ಶುಕಪಾಠದಂಥ ಕಳಪೆಯಾದ ಆಂಗ್ಲಮಾಧ್ಯಮ ಶಾಲೆಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. ಉಳ್ಳವರು ಇಂಥ ಖಾಸಗಿ ಶಾಲೆಗಳಿಗೆ, ಬಡವರು ಕಳಪೆಯಾಗಿ ಕಾಣುತ್ತಿರುವ ಸರಕಾರಿ ಶಾಲೆಗೆ ಹೋಗುವಂತಾಗಿ ಸರಕಾರವೇ ಅಸಮಾನತೆ ಹುಟ್ಟುಹಾಕಿದೆ.
ಹೀಗಿದ್ದಾಗ, ನಾವೆಲ್ಲ ಒಂದೇ ದೇಶದ ಮಕ್ಕಳು ಅಂತ ಹೇಗೆ ಹೇಳಲು ಸಾಧ್ಯ? ಜನರಲ್ಲಿ ಸ್ವಾಸ್ಥ್ಯ ಮತ್ತು ಸಮುದಾಯಪ್ರಜ್ಞೆ ಹೇಗೆ ಹುಟ್ಟೀತು? ಬಡವರಿಗಿದು ಒಳ್ಳೆಯದಲ್ಲ; ಉಳ್ಳವರಿಗೆ ಜೀವನಿಷ್ಠ ಜ್ಞಾನಾರ್ಜನೆಯ ದೃಷ್ಟಿಯಿಂದ ಹಿತವಲ್ಲ. ಕನ್ನಡ ಮಾಧ್ಯಮದ ಕಲಿಕೆ ನಿಜವಲ್ಲವೆಂಬ ಪ್ರಜ್ಞೆ ಎಲ್ಲೆಲ್ಲೂ ಬೆಳೆದು, ಒಂದು ಶಾಲೆಯ ಅಸ್ತಿತ್ವವನ್ನು ಮಾಧ್ಯಮದ ಪ್ರಶ್ನೆಯಾಗಿ ನೋಡುವ ಮಟ್ಟಕ್ಕೆ ನಾವು ಕುಬ್ಜರಾಗಿದ್ದೇವೆ. ಕೆಲವು ಖಾಸಗಿ ಶಾಲೆಗೆ ಸೇರಿಸಲು ಮನಸು ಮಾಡಿರುವು ದರಿಂದ ಸರಕಾರ ತನ್ನದು ಅಂತ ಅಂದುಕೊಂಡ ಯಾವ ಶಾಲೆಗಳನ್ನು ಭವಿಷ್ಯದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲವೇನೋ! ಖಾಸಗೀ ಶಾಲೆಗಳ ಬಗ್ಗೆಯಾಗಲಿ, ಆಂಗ್ಲಮಾಧ್ಯಮ ಶಾಲೆಗಳ ಬಗ್ಗೆಯಾಗಲೀ ಅಸಡ್ಡೆ, ಅಗೌರವ ಖಂಡಿತಾ ಇಲ್ಲವೇ ಇಲ್ಲ.
ನಮ್ಮ ಉಸಿರನ್ನು ನಾವೇ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ಸ್ವಅಸ್ತಿತ್ವವನ್ನು ಉಳಿಸಿಕೊಂಡೂ, ಸುಂದರ, ಸ್ವಚ್ಛ ಬದುಕನ್ನು ಕಟ್ಟಿಕೊಳ್ಳಲಾಗದ, ವಿದ್ಯಾರ್ಥಿಗಳ ಸಮೂಹವನ್ನೇ ಒಳಗೊಂಡ ಖಾಸಗೀ ಶಾಲೆಯಲ್ಲೇ ದುಡಿಯುವವರನೇಕರಿದ್ದಾರೆ. ನಮ್ಮ ಮಕ್ಕಳು ಆಂಗ್ಲ ಕಲ್ಪಿತ ಭ್ರಮಾಲೋಕದಲ್ಲಿ ಬದುಕುತ್ತಿರುವವರು ಅಂತ ಹೇಳುವ ಅನಂತಮೂರ್ತಿಯವರು ಸಾಮಾನ್ಯ ಶಾಲೆಗಳ ಬಗ್ಗೆ ಮಾತಾಡುತ್ತಾರೆ. ಎಲ್ಲ ವಿಷಯಗಳನ್ನೂ ಮಕ್ಕಳಿಗೆ ಆಪ್ತವಾಗಿ ಗೊತ್ತಿರುವ ದೇಶಭಾಷೆಯಾದ ಕನ್ನಡದಲ್ಲೇ ಹೇಳಿಕೊಡಬೇಕು. ಇದರಿಂದ ವಿಷಯಜ್ಞಾನ ಬೆಳೆಯುತ್ತದೆ.
೫ನೇ ತರಗತಿಯಿಂದ ಇಂಗ್ಲಿಷನ್ನು ಮಾತನಾಡಲು ಕಲಿಸಿದರೆ ಸಾಕು. ಇದರಿಂದ ಮುಂದಕ್ಕೆ ಅಗತ್ಯವಾದ ಇಂಗ್ಲಿಷಿನ ಭಯವೂ ಹೋಗುತ್ತದೆಂದು. ಮಾನವಿಕ ಅಭ್ಯಾಸಗಳನ್ನಾದರೂ ದೇಶದ ಭಾಷೆಯಲ್ಲಿ ನಮ್ಮ ಮಕ್ಕಳು ಓದುವಂತಾಗಬೇಕು. ಚರಿತ್ರೆ, ಭೂಗೋಳ, ಪರ್ಯಾವರಣ- ಇವೇ ಮುಂತಾದವುಗಳನ್ನು ದೇಶಭಾಷೆಯಲ್ಲಿ ನಮ್ಮ ಮಕ್ಕಳು ಓದುವುದು ವೈಜ್ಞಾನಿಕವಾಗಿ ಸಮರ್ಥನೀಯ ಅನ್ನುತ್ತಾರೆ. ಇದರಿಂದಾಗಿ ತಾನಿರುವ ಸುತ್ತಲ ಜಗತ್ತಿಗೆ ಸ್ಪಂದಿಸುವುದುಸಾಧ್ಯವಾಗುತ್ತದೆನ್ನುವ ಅನಂತಮೂರ್ತಿಯವರು, ೧) ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದು ೨) ಖಾಸಗಿ ಆಂಗ್ಲಮಾಧ್ಯಮದ ಶಾಲೆಗಳಲ್ಲಿ ಮಾನವಿಕ ವಿಷಯಗಳನ್ನು ಮಕ್ಕಳ ಜ್ಞಾನಾಭಿವೃದ್ಧಿಯ ಸಲುವಾಗಿ ಕನ್ನಡದಲ್ಲಿ ಬೋಧಿಸುವುದು ಅತೀ ಮುಖ್ಯವೆಂದು ಹೇಳುತ್ತಾ ಕನ್ನಡದ ಉಳಿವು, ನಮ್ಮ ಮಕ್ಕಳಲ್ಲಿ ಬೆಳೆಯಬೇಕಾದ ಸೃಜನಶೀಲತೆಯ ಬಗ್ಗೆ ಮಾತಾಡುತ್ತಾರೆ.
ನಮ್ಮ ನಮ್ಮ ಮನೆಗಳಲ್ಲಿ ನಾವು ನಮ್ಮ ಶ್ರೀಮಂತ ಕನ್ನಡದಲ್ಲಿ ಮಾತಾಡೋಣ. ನಮ್ಮ ಮನೆಯ ಹಿತ್ತಲಿನ ದಣಪೆ ದಾಟಿ ಹೊರಜಗತ್ತಿಗೆ ಕಾಲಿಟ್ಟಾಗ, ಅಗತ್ಯಬಿದ್ದ ಸ್ಥಳದಲ್ಲಿ ಮಾತ್ರ ವ್ಯವಹಾರಕ್ಕೆ ಇಂಗ್ಲಿಷನ್ನು ಬಳಸೋಣ.
ಗಾಂಧಿ ಹೇಳಿದ ಮಾತು:ಒಂದು ಅತ್ಯುತ್ತಮ ಸೃಜನಶೀಲ ಭಾರತೀಯ ಮನಸಿನಲ್ಲಿ ಎರಡು ಅಂಶಗಳು ಕೂಡಿಕೊಂಡಿರುತ್ತವೆ. ೧. ನಮ್ಮ ನೆಲದ ಪರಂಪರೆ ಯಲ್ಲಿ ಬೇರೂರಿ ಅದರ ಸತ್ತ್ವವನ್ನು ಹೀರಿಕೊಳ್ಳಬಲ್ಲ ಶಕ್ತಿ. ೨. ಹೊರಗಿನ ನಿತ್ಯನೂತನ ಆಕಾಶಕ್ಕೆ ತೆರೆದಿದ್ದು, ಎಲ್ಲೆಡೆಯಿಂದಲೂ ಪ್ರೇರಣೆಗಳನ್ನು ಪಡೆದು ಕೊಳ್ಳಬಲ್ಲ ಶಕ್ತಿ. ಕುವೆಂಪು, ಬೇಂದ್ರೆ, ಕಾರಂತ, ಡಿವಿಜಿ, ಮಾಸ್ತಿ, ಪುತಿನ, ಶ್ರೀರಂಗರಲ್ಲಿ ಇವೆರಡೂ ಕೂಡಿದ ವ್ಯಕ್ತಿತ್ವವನ್ನು ಕಾಣಬಹುದು ಅಂತ ಅನಂತಮೂರ್ತಿ ಹೇಳುತ್ತಾರೆ. ನಮ್ಮ ನಮ್ಮ ವೈಚಾರಿಕತೆ ಹುಟ್ಟೋದು ಕೂಡ ಇಲ್ಲಿಂದಲೇ. ಅಧು ನಿಕತೆ ಎಷ್ಟು ಬೆಳೆದಿದೆಯೆಂದರೆ ಯಾವ ದೇಸೀಯತೆಯನ್ನೂ ಉಳಿಸಿಕೊಳ್ಳ ಲಾಗದೇ ಹೋಗುವ ಬರ್ಬರತೆ ಆವರಿಸಿದೆ.
ಕನ್ನಡ ಪೂರ್ಣವಾಗಿ ಉಳಿಯದೇ ಅಳಿಯದೇ ಒಂದು ಅತಂತ್ರವಾದ ಸ್ಥಿತಿಯಲ್ಲಿ ಕೋಮಾವಸ್ಥೆಗೆ ಹೋಗಿರುವುದರಿಂದ ನಮ್ಮ ಮಕ್ಕಳು ನಮ್ಮ ಮನೆಯ ಮಕ್ಕಳಾಗಿ ಬೆಳೆಯುತ್ತಿಲ್ಲವೆಂದು ಅನಿಸುತ್ತಿದೆ. ಜಾಗತೀಕರಣದ ಪರಿಣಾಮವಿದು. ಇದರಿಂದಾಗಿ ಅತ್ತ ಆಂಗ್ಲಭಾಷೆಯೂ ಸರಿಯಾಗಿ ಬರದ, ಇತ್ತ ಕನ್ನಡವೂಸರಿಯಾಗಿ ಬರದ ಒಂದು ಎಡವಟ್ಟು ಜನಾಂಗ ದೇಶದಲ್ಲಿ ಬೆಳೆಯುತ್ತಿದೆ. ದೇಶವನ್ನು ಬಡತನದಿಂದ ಮೇಲೆತ್ತಲು ನಮ್ಮ ಸರಕಾರ ಶತಪ್ರಯತ್ನ ಮಾಡುತ್ತಿದೆ ಯೆಂದೂ, ಸರಕಾರದ ಹಣ ತಿಂದು ತೇಗುವ ರಾಜಕಾರಣಿಗಳಂತೆ ತಮ್ಮ ಮಕ್ಕಳನ್ನು ಇಂಗ್ಲಿಷಿನ ವ್ಯಾಮೋಹ ಮತ್ತು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೆಂಬ ಮಹದಾಸೆಯಿಂದ ಆಂಗ್ಲಮಾಧ್ಯಮ ಶಾಲೆಗಳಿಗೆ ಸೇರಿಸಿ, ಕನ್ನಡದ ಬಗ್ಗೆ ನಾಟಕೀಯವಾಗಿ ಮಾತನಾಡುತ್ತ ಒಳಗೊಳಗೇ ಅಸಹ್ಯ ವನ್ನೂ ಅಣಕವನ್ನೂ ಮಾಡುವವರಿದ್ದಾರೆ.
ಸರಳವಾದ ವಿಚಾರವನ್ನು ಸರಳವಾದ ರೀತಿಯಲ್ಲಿ ಹೇಳುವುದಕ್ಕೂ, ಸರಳವಾದ ವಿಚಾರವನ್ನು ಸರಳವಾಗಿ ಕೇಳಿ ತಿಳಿಯುವುದಕ್ಕೂ, ಸರಳವಾದ ಸಂಗತಿ ಯನ್ನು ಸರಳವಾಗಿ ಓದುವುದಕ್ಕೂ, ಸರಳವಾದ ಅಭಿಪ್ರಾಯಗಳನ್ನು ಸರಳವಾಗಿ ಬರೆಯುವುದಕ್ಕೂ ದೇಶಭಾಷೆಯಲ್ಲೇ ಬೋಧನೆಯಾಗಬೇಕೆಂಬುದು ಜಾಗತಿಕ ಭಾಷಾಶಾಸಜ್ಞರ ಇಂಗಿತವಾಗಿದ್ದೂ, ಇದನ್ನೇ ಮತ್ತಷ್ಟು ಪುಷ್ಟೀಕರಿಸುತ್ತ ದೇಶಾದ್ಯಂತ ಮಾತೃಭಾಷೆಗಳ ಮೂಲಕವೇ ಮೂಲಶಿಕ್ಷಣದ ಕಲಿಕೆ ಸಾಧ್ಯವಾದರೆ ಭವಿಷ್ಯದಲ್ಲಿ ಪ್ರತಿಭಾವಂತ ಜನಾಂಗವನ್ನು ನಿರ್ಮಿಸಲು ಸಾಧ್ಯವಿದೆ.