ಬೊಮ್ಮಾಯಿಯದ್ದು ಫುಟ್ಬಾಲ್‌ ಅಲ್ಲ, ಕೊಕ್ಕೋ ತಂಡ
ಮೂರ್ತಿಪೂಜೆ
ಆರ್‌.ಟಿ.ವಿಠ್ಠಲಮೂರ್ತಿ
ಬಜೆಟ್ ಗೆ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದೆ. ಸಾರ್ವಜನಿಕ ಸ್ವಾಮ್ಯದಲ್ಲಿರುವ ಬಹುತೇಕ ನಿಗಮ- ಮಂಡಳಿಗಳ ಆಸ್ತಿಯನ್ನು ಮಾರಿ ಹಣ ಹೊಂದಿ ಸುವ ಪ್ರಯತ್ನಕ್ಕೆ ಅದು ಕೈ ಹಾಕಿರುವುದು ಇದೇ ಕಾರಣಕ್ಕಾಗಿ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರಕಾರವನ್ನು ಪುಟ್ಬಾಲ್ ಟೀಂ ಎಂದು ಬಣ್ಣಿಸಿದ ಮರುದಿನವೇ ತಮ್ಮ ಪಕ್ಷದ ಶಾಸಕರೊಬ್ಬರಿಂದ ಒಂದು ದೂರನ್ನು ಸ್ವೀಕರಿಸಿದರು. ಈ ರೀತಿ ಅವರಿಗೆ ದೂರು ನೀಡಿದವರು ಸ್ವತ: ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ. ರಾಜ್ಯ ಸಚಿವ ಸಂಪುಟದಲ್ಲಿರುವವರ ಪೈಕಿ ಬಹುತೇಕರು ಶಾಸಕರ ಅಹವಾಲುಗಳನ್ನು ಆಲಿಸುವುದಿಲ್ಲ, ಫೋನು ಮಾಡಿದರೂ ಉತ್ತರಿಸುವ ಸೌಜನ್ಯ ತೋರಿಸುತ್ತಿಲ್ಲ ಎಂಬುದು ರೇಣುಕಾಚಾರ್ಯ ಅವರ ದೂರು.
ಅಂದ ಹಾಗೆ ಈ ರೀತಿ ದೂರು ನೀಡಿದ ಸಂದರ್ಭದಲ್ಲಿ ರೇಣುಕಾಚಾರ್ಯ ಅವರು ಒಬ್ಬ ಸಚಿವರು ನಡೆದುಕೊಳ್ಳು ತ್ತಿರುವ ರೀತಿಯ ಬಗ್ಗೆ ವಿವರಿಸಿದಾಗ ಖುದ್ದು ಮುಖ್ಯಮಂತ್ರಿಗಳಿಗೇ ಮುಜುಗರವಾಯಿತು. ಅದರ ಪ್ರಕಾರ, ರೇಣುಕಾಚಾರ್ಯ ಅವರು ಮೊಟ್ಟೆ ಖ್ಯಾತಿಯ ಸಚಿವರೊಬ್ಬರನ್ನು ದೂರವಾಣಿಯ ಮೂಲಕ ಸಂಪರ್ಕಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಅವರ ಆಪ್ತ ಕಾರ್ಯದರ್ಶಿ: ಸಚಿವರಿಗೆ ಕರೋನಾ ಸೋಂಕು ತಗುಲಿದೆ. ಹೀಗಾಗಿ ಅವರು ವಿಶ್ರಾಂತಿಯಲ್ಲಿದ್ದಾರೆ. ಕೆಲ ದಿನ ನೋಡಲು ಸಾಧ್ಯವಿಲ್ಲ ಎಂದರು.
ಸರಿ, ಸಚಿವರಿಗೆ ಕರೋನಾ ಬಂದ ಮೇಲೆ ಇನ್ನೇನು ಮಾಡುವುದು? ಎಂದು ರೇಣುಕಾಚಾರ್ಯ ಸುಮ್ಮನಾದರು. ಆದರೆ ಕೆಲವೇ ಕ್ಷಣಗಳಲ್ಲಿ ರೇಣುಕಾಚಾರ್ಯ ಅವರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಮರುದಿನ ನಡೆದ ಸಂಪುಟ ಸಭೆಗೆ ಮೊಟ್ಟೆ ಸ್ಪೆಷಲಿಸ್ಟ್ ಸಚಿವರು ಹಾಜರಾಗಿದ್ದರು. ಕೋವಿಡ್ ಬಂದವರು ಸಂಪುಟ ಸಭೆಗೆ ಬಂದಿದ್ದಾರೆ ಎಂದರೆ ಏನರ್ಥ? ಒಂದೋ ಅವರಿಗೆ ಕೋವಿಡ್ ಆಗಿಲ್ಲ, ಇಲ್ಲವೇ ಸಂಪುಟ ಸಹೋದ್ಯೋಗಿಗಳಿಗೆ ಕೋವಿಡ್ ಹಂಚಲು ಬಂದಿದ್ದಾರೆ ಎಂಬುದು ರೇಣುಕಾಚಾರ್ಯ ಅವರ ವಾದ.2ನೇ ಅಂಶ ಸುಳ್ಳಾದರೆ ಅವರಿಗೆ ಶಾಸಕರ ಅಹವಾಲು ಕೇಳುವ ಉತ್ಸಾಹವೇ ಇಲ್ಲ, ಕೆಲಸ ಮಾಡುವ ಆಸಕ್ತಿಯಿಲ್ಲದ ಇಂತಹ ಸಚಿವರನ್ನು ಸಂಪುಟದಿಂದ ಕಿತ್ತು ಹಾಕಿ ಬೇರೆಯವರಿಗೆ ಅವಕಾಶ ನೀಡಿ ಎಂಬುದು ಅವರ ಪಟ್ಟು.
ಈಗ ಮೊಟ್ಟೆ ಖ್ಯಾತಿಯ ಸಚಿವರಷ್ಟೇ ಅಲ್ಲ, ಮಂತ್ರಿ ಮಂಡಲದ ಹಲವರು ಹೇಗೆ ಶಾಸಕರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಕುರಿತೂ ರೇಣುಕಾಚಾರ್ಯ ಮುಖ್ಯ ಮಂತ್ರಿಗಳಿಗೆ ವಿವರಿಸಿದ್ದಾರೆ. ತಮ್ಮ ಕ್ಷೇತ್ರದ ಕೆಲಸಗಳ ಬಗ್ಗೆ ಪತ್ರಮುಖೇನ ಈಗ ಹಲ ಸಚಿವರಿಗೆ ವಿವರ ನೀಡಿದರೆ, ಅವರು ಇಂತಹ ಪತ್ರಗಳನ್ನು ತಮ್ಮ ಆಪ್ತಕಾರ್ಯದರ್ಶಿಗಳ ಕೈಗೆ ಕೊಟ್ಟು ಇದೇನು ನೋಡಿ ಎನ್ನುತ್ತಾರೆ. ಅವರು ಈ ಪತ್ರಗಳ ಮೇಲೆ ನಿಯಮಾನುಸಾರ ಇದನ್ನು ಪರಿಶೀಲಿಸಿ ಎಂದು ಷರಾ ಬರೆಯುತ್ತಾರೆ. ಹೀಗೆ ಬರೆಯುವುದು ಎಂದರೆ ಈ ಕೆಲಸ ಮಾಡಲೇಬೇಕೆಂದಿಲ್ಲ ಎಂಬ ಸೂಚನೆ. ಹಿಂದೆ ಹೀಗಿರಲಿಲ್ಲ, ಪತ್ರ ಕೊಟ್ಟರೆ ಒಂದೋ ಕೆಲಸವಾಗುತ್ತಿತ್ತು. ಇಲ್ಲದಿದ್ದರೆ ಆಗುವುದಿಲ್ಲ ಎಂಬ ಉತ್ತರ ಸಿಗುತ್ತಿತ್ತು. ಅರ್ಥಾತ್, ಈಗ ಸಚಿವರ ಭಾಷೆ ಬದಲಾಗಿದೆ, ಶಾಸಕರ ಗೋಳು ಹೆಚ್ಚಾಗಿದೆ ಎಂಬುದು ಅವರ ಅಸಮಾ ಧಾನ.
ಇದೇ ರೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ವಲಸೆ ಬಂದು ಸಚಿವರಾದವರ ವರಸೆಯೇ ಬೇರೆ. ಈ ಸರಕಾರ ಬರಲು ತಾವೇ ಕಾರಣ, ಹೀಗಾಗಿ ನಾವು ಹೇಗೇ ನಡೆದುಕೊಂಡರೂ ಭೂಷಣ ಎಂಬಂತಿದೆ ಅವರ ವರ್ತನೆ ಎಂಬುದು ರೇಣುಕಾಚಾರ್ಯ ಅವರ ಅಸಮಾಧಾನದ ಭಾಗ. ತಮ್ಮ ಈ ಅಸಮಾದಾನವನ್ನು ಅವರು ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರಿಗೂ ಹೇಳಿದ್ದಾರೆ. ಅಂದ ಹಾಗೆ ಮುಖ್ಯಮಂತ್ರಿಗಳಿಗೆ, ಪಕ್ಷದ ಅಧ್ಯಕ್ಷರಿಗೆ ಇಂತಹ ದೂರು ನೀಡಿದವರು ರೇಣುಕಾಚಾರ್ಯ ಒಬ್ಬರೇ ಅಲ್ಲ, ಬದಲಿಗೆ ಹಲ ಶಾಸಕರು ತಮ್ಮ ದೂರು, ದುಮ್ಮಾನಗಳನ್ನು ತೋಡಿಕೊಳ್ಳುತ್ತಲೇ ಇದ್ದಾರೆ.
ಆದರೆ ಯಡಿಯೂರಪ್ಪ ಗ್ಯಾಂಗಿನ ಪ್ರಮುಖರಾದ ರೇಣುಕಾಚಾರ್ಯ ಈಗ ಧ್ವನಿ ಎತ್ತುತ್ತಿದ್ದಾರೆ ಎಂದರೆ ಸರಕಾರದ ಕಾರ್ಯ ವೈಖರಿಯ ಬಗ್ಗೆ ಬಹುಪಾಲು ಮಂದಿಗೆ ಸಮಾಧಾನ ಇಲ್ಲ ಅಂತಲೇ ಅರ್ಥ. ಅಂದ ಹಾಗೆ ಬಹುತೇಕ ಶಾಸಕರ ಅಸಮಾಧಾನಕ್ಕೆ ಗುರಿಯಾಗಿರುವ ಸರಕಾರವನ್ನು ಪುಟ್ಬಾಲ್ ಟೀಮ್ ಅಂತ ಬಸವರಾಜ ಬೊಮ್ಮಾಯಿ ಯಾಕೆ ಬಣ್ಣಿಸಿದರೋ ಗೊತ್ತಿಲ್ಲ. ಯಾಕೆಂದರೆ ಅವರ ಪುಟ್ಬಾಲ್ ಟೀಮಿನ ಬಹುತೇಕ ಪ್ಲೇಯರುಗಳಿಗೆ ಚೆಂಡು(ಆರೋಪ)ತಮ್ಮ ಬಳಿಬಂದರೆ ಹೇಗೆ ಒದೆಯಬೇಕು ಎಂಬುದೇ ಗೊತ್ತಿಲ್ಲ.
ಉದಾಹರಣೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪಗಳನ್ನೇ ನೋಡಿ. ನೀರಾವರಿಗೆ ತಮ್ಮ ಸರಕಾರದ ಅವಧಿಯಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿ ಕೊಡುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಅದರ ಪ್ರಕಾರ, ಪ್ರತಿ ವರ್ಷ ನೀರಾವರಿಗಾಗಿ ಮೂವತ್ತು ಸಾವಿರ ಕೋಟಿ ರೂಪಾಯಿ ಕೊಡಬೇಕಿತ್ತು. ಆದರೆ ಈ ವರ್ಷ ಕೇವಲ6300ಕೋಟಿ ರೂಪಾಯಿ ಮಾತ್ರ ಕೊಡಲಾಗಿದೆ. ಇದೇ ರೀತಿ ಹೈದ್ರಾಬಾದ್-ಕರ್ನಾಟಕದ. ಅಭಿವೃದ್ಧಿಗೆ3000ಕೋಟಿ ಕೊಡುತ್ತೇವೆ ಎಂದ ಬಿಜೆಪಿ ಸರಕಾರ ಕೇವಲ1200ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಉಳಿದಿರುವ ಎರಡು ತಿಂಗಳಲ್ಲಿ ಬಾಕಿ 1800 ಕೋಟಿ ರೂಪಾಯಿ ಕೊಡಲುಸಾಧ್ಯವೇ? ಅಂತ ಸಿದ್ದರಾಮಯ್ಯ ಕೇಳಿದರೆ ಅದಕ್ಕೆ ಈವರೆಗೆ ಸರಕಾರದ ಯಾರೊಬ್ಬರೂ ನಿಖರವಾಗಿ ಉತ್ತರಿಸಿಲ್ಲ.
ಬದಲಿಗೆ ಕಂದಾಯ ಸಚಿವ ಅಶೋಕ್ ಮಾತ್ರ:ಸಿದ್ಧರಾಮಯ್ಯ ಅವರಿಗೆ ಟೀಕಿಸುವುದೇ ಚಟ ಎಂದು ಹೇಳಿ ಕೈ ತೊಳೆದುಕೊಂಡರು. ಹೀಗೆ ಕೈ ತೊಳೆದು ಕೊಳ್ಳುವ ಬದಲು ಸಿದ್ಧರಾಮಯ್ಯ ಅವರ ಒಂದೊಂದೂ ಆರೋಪಗಳಿಗೂ ನಿಖರ ಉತ್ತರ ಕೊಟ್ಟಿದ್ದರೆ ಅಶೋಕ್ ಬೆಸ್ಟ್ ಪ್ಲೇಯರು ಅನ್ನಿಸಿಕೊಳ್ಳುತ್ತಿದ್ದರು. ಆದರೆ ಒಂದು ಆರೋಪವನ್ನು ತಳ್ಳಿ ಹಾಕಿದರೆ, ಅದೂ ಉತ್ತರ ನೀಡಿದಂತೆ ಎಂಬ ತೀರ್ಮಾನಕ್ಕೆ ಅವರು ಬಂದುಬಿಟ್ಟಿದ್ದಾರೆ. ಇದು ಬೊಮ್ಮಾಯಿ ಪುಟ್ಬಾಲ್ ಟೀಮಿನ ಒಬ್ಬರ ಕತೆಯಲ್ಲ, ಬಹುತೇಕ ಎಲ್ಲರದೂ ಇದೇ ಮಾದರಿಯ ಆಟ.
ನೇರವಾಗಿ ಹೇಳಬೇಕೆಂದರೆ ಸರಕಾರದ ಈ ಸಾಲಿನ ಬಜೆಟ್ ಗಾತ್ರ ಎರಡು ಲಕ್ಷದ ನಲವತ್ತೇಳು ಸಾವಿರ ಕೋಟಿ. ಈ ಬಜೆಟ್ ಈಡೇರಿಕೆಗೆ ಪೂರಕವಾಗಿ ಸಂಗ್ರಹವಾದ ಹಣ ಎಷ್ಟು? ಈ ಹಣದಲ್ಲಿ ಸರಕಾರ ಮಾಡಿದ ಕೆಲಸಗಳು ಏನೇನು? ಅನ್ನುವುದರ ಬಗ್ಗೆ ಒಂದು ಶ್ವೇತ ಪತ್ರ ಹೊರಡಿಸುವ ಕೆಲಸ ಮಾಡಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಅದೇ ರೀತಿ, ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಸರಕಾರದ ತೆರಿಗೆ ಸಂಗ್ರಹ ಪ್ರಮಾಣ ಗಮನಾರ್ಹವಾಗಿಯೇಇದೆ. ಕಳೆದ ವರ್ಷ ಕೋವಿಡ್ ಕಂಟಕದಿಂದಾಗಿ ಸರಕಾರಕ್ಕೆ ಹರಿದು ಬರುವ ಆದಾಯದ ಪ್ರಮಾಣ ಕಡಿಮೆಯಾಗಿತ್ತು.
ಈ ವರ್ಷ ಸರಕಾರದ ಗರಿಷ್ಠ ಪ್ರಯತ್ನವಿಲ್ಲದಿದ್ದರೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ರಂಗಗಳಲ್ಲಿನ ಬೆಲೆ ಏರಿಕೆಯ ಪರಿಣಾಮವಾಗಿ ಸರಕಾರಕ್ಕೆ ಹರಿದುಬರುವ ತೆರಿಗೆಯ ಪ್ರಮಾಣ ಹೆಚ್ಚಿದೆ. ಅಂದ ಮೇಲೆ ಬಂದ ಹಣವೆಷ್ಟು? ಖರ್ಚು ಮಾಡಿದ ಹಣವೆಷ್ಟು? ಯಾವ್ಯಾವ ಕೆಲಸಗಳಿಗೆ ಎಷ್ಟು ಹಣ ಕೊಡಲಾಗಿದೆ ಅಂತ ಹೇಳಬಹುದಲ್ಲ? ಅಂದ ಹಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆನಪಿನಲ್ಲಿಡಬೇಕಾದ ಸಂಗತಿ ಎಂದರೆ,೨೦೧೩ರ ಚುನಾವಣೆಯ ಸಂದರ್ಭ ದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಏನೆಲ್ಲ ಆಶ್ವಾಸನೆಗಳನ್ನು ನೀಡಿತ್ತೋ? ಅದರಲ್ಲಿ ಎಷ್ಟನ್ನು ಈಡೇರಿಸಲಾಗಿದೆ.
ಅಂತ ಮುಖ್ಯಮಂತ್ರಿಯಾಗಿದ್ಧ ಸಿದ್ದರಾಮಯ್ಯ ಪ್ರತಿ ವರ್ಷ ಲೆಕ್ಕ ಕೊಡುತ್ತಿದ್ದರು. ಅವರ ಸರಕಾರ ಕೂಡಾ ನೀರಾವರಿಗೆ ಕೊಡುತ್ತೇವೆ ಎಂದಷ್ಟು ಹಣವನ್ನು ಕೊಟ್ಟಿರಲಿಲ್ಲ. ಆದರೆ ಅವರು ಹೇಳಿದ್ದಕ್ಕೂ ಮಾಡದೇ ಇದ್ದುದಕ್ಕೂ ಸ್ವಲ್ಪ ಅಂತರವಿತ್ತು. ಆದರೆ ಬಿಜೆಪಿ ಹೇಳಿದ್ದಕ್ಕೂ,ಮಾಡದೆ ಇದ್ದುದಕ್ಕೂ ಅಪಾರ ಅಂತರವಿದೆ. ಇನ್ನು ಬೊಮ್ಮಾಯಿ ಟೀಮಿನ ಅದ್ಭುತ ಪ್ಲೇಯರುಗಳು ಯಾರು? ಅಂತ ನೋಡಿದರೆ ಯಾರಿಗೂ ಸಮಸ್ಯೆ ಎಂಬ ಚೆಂಡನ್ನು ಒದ್ದು ಗೋಲು ಪೆಟ್ಟಿಗೆಯ ತನಕತಳ್ಳುವ ಆಸಕ್ತಿಯೇ ಇಲ್ಲ.
ಗೋವಿಂದ ಕಾರಜೋಳರು, ಲೋಕೋಪಯೋಗಿ ಖಾತೆಯನ್ನು ಹೊಂದಿದ್ದ ಕಾಲದಲ್ಲಿ ಉತ್ತರ ಕರ್ನಾಟಕ ಅತಿವೃಷ್ಟಿಯಿಂದ ನಲುಗಿತಲ್ಲ? ಅವತ್ತು ಹಾನಿಗೊಳ ಗಾದ ಸಂತ್ರಸ್ತರಿಗೆ ನೆಟ್ಟಗೆ ಪರಿಹಾರ ನೀಡುವುದಿರಲಿ, ಹಾನಿಗೊಳಗಾದ ರಸ್ತೆ, ಕಟ್ಟಡಗಳನ್ನು ದುರಸ್ತಿ ಮಾಡುವ ಕೆಲಸ ಇನ್ನೂ ಆಗಿಲ್ಲ. ಅದೇ ರೀತಿ ರಾಜ್ಯದಲ್ಲಿ ಸೆಕೆಂಡ್ಸ್, ಥರ್ಡ್ಸ್ ರೂಪದಲ್ಲಿ ಹರಿಯುತ್ತಿದ್ದ ಮದ್ಯ ಹಣವಾಗಿ ಪರಿವರ್ತನೆಯಾಗಿ ಸರಕಾರಗಳನ್ನು ಅಲುಗಾಡಿಸುತ್ತಿದ್ದ ರೀತಿಯನ್ನು ಒಂದು ಕಾಲದಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಡೆದಿದ್ದರು.
ಪಾನೀಯ ನಿಗಮವನ್ನು ಸ್ಥಾಪಿಸುವ ಮೂಲಕ ಡಿಸ್ಟಿಲ್ಲರಿಗಳಲ್ಲಿ ಉತ್ಪಾದನೆಯಾಗುವ ಎಲ್ಲ ಮದ್ಯವನ್ನು ನಿಗಮಕ್ಕೆ ನೀಡಬೇಕು ಎಂದಿದ್ದರು. ಆದರೆ ಇವತ್ತು ಬಿಜೆಪಿ ಸರಕಾರದ ಅವಧಿಯಲ್ಲಿ ಪಾನೀಯ ನಿಗಮವನ್ನೂ ಮೀರಿ ನಕಲಿ ಮದ್ಯ ರಾಜ್ಯದೆಲ್ಲೆಡೆ ಸಂಚರಿಸುತ್ತಿದೆ. ಇದನ್ನು ತಡೆಗಟ್ಟುವ ಇಚ್ಛಾಶಕ್ತಿಯೇ ಬೊಮ್ಮಾಯಿ ಅವರ ಸರಕಾರಕ್ಕಿಲ್ಲ. ಇವತ್ತು ರಾಜ್ಯದ ಹಳ್ಳಿ- ಹಳ್ಳಿಗಳಲ್ಲಿ ಮದ್ಯ ಹರಿಯುತ್ತಿದೆ. ಕಿರಾಣಿ ಅಂಗಡಿಗಳಲ್ಲೂ ಇದು ಸುಲಭವಾಗಿ ಸಿಗುತ್ತಿದೆ. ಹೇಗಾದರೂ ಮಾಡಿ ಇದನ್ನುತಡೆಗಟ್ಟಿ ಅಂತ ಪಕ್ಷ ಭೇದ ಮರೆತು ಎಲ್ಲ ಶಾಸಕರು ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ಆಗ್ರಹಿಸಿದ್ದರು. ಆದರೆ ಇವತ್ತಿನವರೆಗೆ ಪರಿಸ್ಥಿತಿ ಬದಲಾಗಿಲ್ಲ, ಯುವ ಜನಾಂಗ ಕುಡಿತದ ಹೊಡೆತಕ್ಕೆ ಸಿಕ್ಕು ಹಾಳಾಗುತ್ತಿರುವುದನ್ನು ತಡೆಯಬೇಕು ಎಂಬ ಉತ್ಸಾಹವೇ ಸರಕಾರಕ್ಕಿಲ್ಲ.
ತುಂಬ ದೂರ ಹೋಗುವುದೇನು? ಡ್ರಗ್ ದಂದೆ ನಡೆಸುತ್ತಿದ್ದ ಪೋಲೀಸರಿಬ್ಬರು ಮುಖ್ಯಮಂತ್ರಿಗಳ ಮನೆ ಕಾಯುತ್ತಿದ್ದರು ಎಂದರೆ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂತ ಊಹಿಸಬಹುದು. ಹೀಗೆ ಆಡಳಿತದ ಸಡಿಲತೆ ಈ ಮಟ್ಟಕ್ಕೆ ಬಂದಿರುವುದಕ್ಕೆ ಬೊಮ್ಮಾಯಿಯೇ ಕಾರಣ ಎಂದಲ್ಲ, ಬದಲಿಗೆ ಅವರ ಪುಟ್ಬಾಲ್ ಟೀಮಿನಲ್ಲಿಪ್ರೊಫೆಷನಲ್ ಪ್ಲೇಯರುಗಳಿಲ್ಲ ಅಂತ ಅರ್ಥ. ಇಂತಹ ಹಲವು ಕಾರಣಗಳಿಂದ ಕುಸಿದಿರುವುದರಿಂದಲೇ ಮುಂದಿನ ಬಜೆಟ್ ಗೆ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದೆ. ಸಾರ್ವಜನಿಕ ಸ್ವಾಮ್ಯದಲ್ಲಿರುವ ಬಹುತೇಕ ನಿಗಮ-ಮಂಡಳಿಗಳ ಆಸ್ತಿಯನ್ನು ಮಾರಿ ಹಣ ಹೊಂದಿಸುವ ಪ್ರಯತ್ನಕ್ಕೆ ಅದು ಕೈ ಹಾಕಿರುವುದು ಇದೇ ಕಾರಣಕ್ಕಾಗಿ.
ನಿಮ್ಮ ಸಂಸ್ಥೆಯ ವ್ಯಾಪ್ತಿಯಲ್ಲಿ ನಗದೀಕರಣಕ್ಕೆ ಲಭ್ಯವಿರುವ ಆಸ್ತಿಯ ಪ್ರಮಾಣ ಎಷ್ಟು? ಎಂದು ಕೇಳಿ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಿಗೆ ಸರ್ಕಾರ ಪತ್ರ ಬರೆದಿರುವುದೇ ಇದಕ್ಕೆ ಸಾಕ್ಷಿ. ಸರಕಾರ ನಡೆಸಲು ಅಗತ್ಯವಾದ ಆದಾಯ ಮೂಲ ಕಂಡುಕೊಳ್ಳಲು ವಿಫಲವಾಗಿರುವ ಒಂದು ಸರ್ಕಾರ ಸಧೃಢ ಪುಟ್ಬಾಲ್ ಟೀಮ್ ಹೇಗಾಗುತ್ತದೆ? ಗೊತ್ತಿಲ್ಲ. ಆದರೆ ಅಲ್ಲಿರುವವರು ಅಧಿಕಾರಕ್ಕಾಗಿ ಚಡಪಡಿಸುತ್ತಾ,ಒಬ್ಬರನ್ನು ತಳ್ಳಿ ಮತ್ತೊಬ್ಬರು ಕೂರಲೆತ್ನಿಸುತ್ತಿರುವ ರೀತಿಯನ್ನು ನೋಡಿದರೆ ಸರಕಾರವನ್ನು ಕೊಕ್ಕೋ ಟೀಮ್ ಎನ್ನುವುದೇ ಸೂಕ್ತ.