ಖಾಲಿಯಾಗುತ್ತಾ ತುಂಬಿಕೊಳ್ಳುತ್ತಾ ಸಾಗುತ್ತಿರುವ ಹಾದಿಯಲ್ಲಿ…
ಯಶೋ ಬೆಳಗು
ಯಶೋಮತಿ ಬೆಳಗೆರೆ
@.
ಅವರು ಧರ್ಮ, ಆಚರಣೆಗಳಲ್ಲಿ ನಂಬಿಕೆ ಕಳೆದುಕೊಂಡಿದ್ದರೂ, ಯಾವತ್ತೂ ನನ್ನ ನಂಬಿಕೆಗೆ ಅಡ್ಡಿ ಮಾಡಲಿಲ್ಲ. ಮಗ ಹುಟ್ಟಿದಾಗ ಎಲ್ಲ ರೀತಿಯ ಶಾಸ್ತ್ರಗಳನ್ನು ಸಂಪ್ರದಾಯದ ಪ್ರಕಾರವೇ ನಡೆಸಿದರು. ನಾವು ಮೆರೆಯುವಾಗ ನಮ್ಮನ್ನು ದೇವರಂತೆ ಮೆರೆಸುವ ಜನ ಗ್ರಹಚಾರ ಕೆಟ್ಟು ನಾವು ಕೆಳಗೆ ಬಿದ್ದಾಗ ಆಳಿಗೊಂದು ಕಲ್ಲು ಹಾಕುತ್ತಾರೆ ಎಂದು ಅವರು ಹೇಳುತ್ತಿದ್ದರು.
ಇದೊಂದು ವಾರ ನನ್ನ ಅಂಕಣ ಬರಹವನ್ನು  ಮಾಡಿಬಿಡ್ಲಾ? ಯಾಕೋ ಸ್ವಲ್ಪ ಅನಾರೋಗ್ಯ. ಕೆಲಸದ ಒತ್ತಡ, ಏನು ಬರೆಯುವುದು ಅನ್ನುವುದೇ ಇನ್ನೂ ಆಲೋಚಿಸಿಲ್ಲ, ಆಗಲೇ ಶನಿವಾರ ದಾಟಿ ಬಿಟ್ಟಿತು. ಹೀಗೆ ನೂರು ನೆಪವೊಡ್ಡಿ ತಪ್ಪಿಸುವ ಸಂಚು ಮಾಡುತ್ತಲೇ ಇರುತ್ತದೆ ಈ ಕಳ್ಳ ಮನಸ್ಸು. ಅಮ್ಮಾ, ನಿಂಗೆ ಆಗ್ತಿಲ್ಲ ಅಂದ್ರೆ ಬಿಟ್ಬಿಡು. ಯಾಕೆ ಸುಮ್ನೆ ಕಷ್ಟ ಪಡ್ತೀಯಾ? ಅಂತಾನೆ ಮಗ.
ಆಗ್ಲಿಲ್ಲ ಅಂದ್ರೆ ಪರ್ವಾಗಿಲ್ಲಮ್ಮ, ತೊಂದ್ರೆ ತಗೊಬೇಡ ಎಂದು ಅದೇ ಅಕ್ಕರೆಯಿಂದ ಹೇಳ್ತಾರೆ ಮೋನಣ್ಣ. ನೂರು ಅಂಕಣ ಆದ್ಮೇಲೆ ಅದನ್ನು ಪುಸ್ತಕ ರೂಪಕ್ಕೆ ತರೋಣ ಎಂದು ಹೇಳಿದ ಅವರ ಮೊದಲ ದಿನದ ಪ್ರೋತ್ಸಾಹದ ಮಾತುಗಳು ಕಿವಿಯಲ್ಲಿ ಸುಳಿಯುತ್ತಿರುತ್ತವೆ. ನಾನು ಬರೆದರೂ ಬರೆಯದಿದ್ದರೂ ಅದರಿಂದ ಅವರಿಗೆ ಯಾವ ಲಾಭವಾಗಲಿ ನಷ್ಟವಾಗಲಿ ಖಂಡಿತಾ ಇಲ್ಲ. ಆದರೂ ನಿನ್ನ ಬರವಣಿಗೆ ಚೆನ್ನಾಗಿದೆ ಅದ್ಯಾಕೆ ನೀನು ಕೇವಲ ಫೇಸ್‌ಬುಕ್‌ಗೆ ಸೀಮಿತ ವಾಗಿದ್ದೀಯಾ? ಭಟ್ಟರು ಕೂಡ ನಿನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.
ಯಾವುದೇ ಅನುಮಾನಗಳನ್ನು ಇಟ್ಟುಕೊಳ್ಳದೆ ಒಂದೇ ಮನಸ್ಸಿನಿಂದ ಬರೆಯಲು ಆರಂಭಿಸು ಒಳ್ಳೆಯ ದಾಗುತ್ತದೆ ಎಂದು ಹೇಳಿ ಅಂಕಣಕ್ಕೊಂದು ಹೆಸರನ್ನೂ ಅವರೇ ಸೂಚಿಸಿ ಅವರು ನಂಬಿಆರಾಧಿಸುವಈಶ್ವರ ನನ್ನು ಪೂಜಿಸುವ ದಿನವಾದ ಶುಭ ಶ್ರಾವಣ ಸೋಮವಾರದಂದು ಮೊದಲ ಬರಹ ಕಳುಹಿಸಲು ಹೇಳಿದ ಪ್ರತಿ ಮಾತುಗಳು ನೆನಪಾಗುತ್ತವೆ. ಅವರು ಅಷ್ಟೆಲ್ಲ ಭರವಸೆ ತುಂಬಿ ಆಡಿದ ಮಾತುಗಳಿಗೆ ನಾನು ಬರಹದ ಮೂಲಕವೇ ಗೌರವ ತೋರಿಸಬೇಕು ಎಂದು ಕೊಳ್ಳುತ್ತಾ ಬರೆಯಲು ಮನಸ್ಸನ್ನು ಸಿದ್ಧಗೊಳಿಸುತ್ತೇನೆ.
ವಾರದಲ್ಲಿ ಒಂದೇ ಒಂದು ದಿನ, ಅದೂ ಕೇವಲ800ಪದಗಳಿರುವ ಒಂದು ಪುಟ್ಟ ಬರಹ ಬರೆಯಲು ನಾನು ಇಷ್ಟೆಲ್ಲ ಕಷ್ಟ ಪಡುತ್ತಿರಬೇಕಾದರೆ, ಇನ್ನು ಪ್ರತಿದಿನದಿನಪತ್ರಿಕೆಯನ್ನು ತುಂಬಿಸಿ ಹೊರತರಬೇಕಾದರೆ ಅದೆಷ್ಟು ಕಷ್ಟಗಳಿರಬಹುದು ಎನ್ನುವ ಆಲೋಚನೆ ಮೂಡುತ್ತಿದ್ದಂತೆಯೇ ಮನಸ್ಸಿಗೆ ಹಿಡಿದ ಗ್ರಹಣ ಸಂಪೂರ್ಣ ವಾಗಿ ಬಿಟ್ಟುಹೋಗಿ ಗ್ರಹಣಮುಕ್ತ ಚಂದ್ರನಂತೆ ಹೊಳೆಯತೊಡಗುತ್ತದೆ ಮನಸ್ಸು. ಹೀಗೆಲ್ಲ ಅಂದುಕೊಳ್ಳುತ್ತಲೇ ವಾರಕ್ಕೆ ಒಂದೊಂದು ಬರಹವನ್ನು ಬರೆಯುತ್ತಾ ಬರೆಯುತ್ತಾ ಆಗಲೇ ಇಪ್ಪತ್ತೈದು ಬರಹಗಳ ಗುಚ್ಛ ಅರಳಿ ನಿಂತಿದೆ. ಪುಟ ತಿರುಗಿಸಿ ಹಳೆಯ ಬರಹಗಳನ್ನು ಓದುವಾಗ ನಿಜಕ್ಕೂ ನಾನೇ ಬರೆದಿರುವುದಾ ಎಂದು ಖುಷಿಯಾಗುತ್ತದೆ.
ಬರೆಯುವ ಅವಸರದಲ್ಲಿ ಸಣ್ಣ ಪುಟ್ಟ ತಪ್ಪುಗಳು ಕಣ್ತಪ್ಪಿ ನುಸುಳಿರಬಹುದು. ಅದಕ್ಕೆ ಕ್ಷಮೆ ಇರಲಿ, ಅವಕಾಶ ಕೊಟ್ಟ ಪತ್ರಿಕೆಗೆ, ಅದರ ಸಂಪಾದಕರಿಗೆ ಋಣಿ.ಒಬ್ಬೊಬ್ಬರಿಗೆ ಒಂದೊಂದರಲ್ಲಿ ಪರಿಣಿತಿ ಇರುತ್ತದೆ. ಕೆಲವರಿಗೆ ಒಂದು ವಿಷಯ ಕೊಟ್ಟು ಅದರ ಬಗ್ಗೆ ಬರೆಯಲು ಹೇಳಿದರೆ ಕ್ಷಣಾರ್ಧದಲ್ಲಿ ಅದರ ಬಗ್ಗೆ ಕಥೆ ಬರೆಯಬಲ್ಲರು. ಆದರೆ ವರದಿಗಾರರಂತೆ ನನ್ನಿಂದ ಹೇಳಲು ಸಾಧ್ಯವಾಗುವುದಿಲ್ಲ. ಮೊದಲು ವಿಷಯವನ್ನು ಅರಿತು, ಅವಲೋಕಿಸಿ ಆನಂತರ ನನ್ನದೇ ಅಭಿವ್ಯಕ್ತಿಯ ದಾಟಿಯಲ್ಲಿ ಬರೆಯಲು ಮಾತ್ರ ನನ್ನಿಂದ ಸಾಧ್ಯ. ಮಾತಿಗಿಂತಲೂ ಬರವಣಿಗೆಯ ಮೇಲೆಯೇ ಹೆಚ್ಚು ಪ್ರೀತಿ. ಮಾತು ತುಂಬ ಶಬ್ದವನ್ನು ಸೃಷ್ಟಿಸು ತ್ತದೆ. ಆದರೆ ಬರವಣಿಗೆ ಎನ್ನುವುದು ತನ್ನ ಪಾಡಿಗೆ ತಾನು ನಿಶ್ಶಬ್ದದ ಕಡಲಿನ ಒಡಲಲ್ಲಿ ತಣ್ಣಗೆ ಈಜಾಡುವ ಮೀನಿನಂತೆ.
ಅದಕ್ಕೆ ಇರಬೇಕು ಹಿಂದೆ ಋಷಿ – ಮುನಿಗಳೆಲ್ಲ ಏಕಾಗ್ರಚಿತ್ತರಾಗಿ ಮನಸ್ಸನ್ನು ಕೇಂದ್ರೀಕರಿಸಲು ದಟ್ಟಡವಿಗಳನ್ನು, ಸಮುದ್ರ ತಟಗಳನ್ನು ಅರಸಿ ಹೋಗುತ್ತಿದ್ದುದು.ಆದರೆ ಜವಾಬ್ದಾರಿಯುತ ಗೃಹಿಣಿಯಾಗಿ, ಅಮ್ಮನಾಗಿ ಎಲ್ಲವನ್ನೂ ಬಿಟ್ಟು ಏಕಾಂತವನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಿಲ್ಲ. ಈ ಜಂಜಾಟಗಳನ್ನೆಲ್ಲ ಅ ಬಿಟ್ಟು ಎರಡು ದಿನದ ಮಟ್ಟಿಗೆ ಅಗಾಧವಾದ ಶರಧಿಯೆದುರು ಕಾಲು ಮಡಚಿ ಕುಳಿತು ಅದರ ಅಗಾಧತೆಯನ್ನು ಮನಸ್ಸಿಗೆ ಇಳಿಸಿಕೊಳ್ಳಬೇಕು ಎನಿಸುತ್ತದೆ. ಪುರಾತನ ದೇವಾ ಲಯಗಳ ತಣ್ಣನೆಯ ಕಲ್ಲುಹಾಸುಗಳ ಮೇಲೆ ಎರಡು ನಿಮಿಷ ಕುಳಿತೆದ್ದು ಬರುವ ಮುನ್ನ ಅಂದಿನ ಗತವೈಭವವನ್ನು ಕಣ್ಣಿಗಿಳಿಸಿಕೊಳ್ಳಬೇಕು ಎನಿಸುತ್ತದೆ. ನಿತ್ಯಹರಿದ್ವರ್ಣದ ಕಾಡಿನ ನಡುವೆ ಓಡುವ ನದಿಗೆ ಮುಖವೊಡ್ಡಿ ನಿಲ್ಲಬೇಕೆನಿಸುತ್ತದೆ.
ಆದರೆ ’           ಅಂದುಕೊಂಡು ಸುಮ್ಮನಾಗುತ್ತೇನೆ. ಸಾಲದ್ದಕ್ಕೆ ಮನೆಗೆ ಬಂದು-ಹೋಗು ವವರಿಂದ ಹಿಡಿದು, ಕೆಲಸ-ಕಾರ್ಯಗಳು, ಮನೆಯ ಆಗು- ಹೋಗುಗಳು, ಮಗನ ಬೇಡಿಕೆಗಳು, ಅಮ್ಮನ ಅಗತ್ಯಗಳು ಎಲ್ಲವನ್ನೂ ಇರುವ ಇಪ್ಪತ್ನಾಲ್ಕು ಗಂಟೆಯೊಳಗೆ ಪೂರೈಸಿಕೊಳ್ಳಬೇಕು. ಒಂದಿಷ್ಟು ಸಮಯವನ್ನು ಬೇಕಾದಾಗ ಬಳಸಿಕೊಳ್ಳುವ ಹಾಗೆ ಹಣದಂತೆ ಎತ್ತಿಟ್ಟುಕೊಳ್ಳಲು ಆಗುವುದಿಲ್ಲ. ಮನದಳುವ ನೂರು ಮಾತುಗಳನ್ನು ಹಂಚಿಕೊಳ್ಳಲು ನಂಬಿಕೆಯ ಒಂದು ಜೀವ ಸಿಗುವುದಿಲ್ಲ. ಸಿಕ್ಕರೂ ಒಂದು ಅಂತರದೊಂದಿಗೆ ನಡೆದಿರುತ್ತದೆ ಮಾತು-ಕತೆಗಳು.
ಎಲ್ಲವನ್ನೂ ನೋಡುವಾಗ ಇದ್ದಕ್ಕಿದ್ದ ಹಾಗೆ ಬದುಕು ಖಾಲಿಯಾಗಿ ಹೋಯ್ತಾ? ಅನ್ನುವ ಬೇಸರ ಆವರಿಸಿಕೊಂಡು ಇರುವ ನೂರು ಕೆಲಸಗಳನ್ನು ಬದಿಗೊತ್ತಿ ಸುಮ್ಮನೆ ಕುಳಿತರೆ, ಅವರೊಡನೆ ಕಳೆದ ಪ್ರತಿಯೊಂದು ಕ್ಷಣಗಳೂ ಸಾಲಾಗಿ ಮೆರವಣಿಗೆ ಹೊರಡುತ್ತವೆ. ಅಲ್ಲಿ ಕೇವಲ ಸಂತೋಷ ಮಾತ್ರವಿರಲಿಲ್ಲ. ಸಿಟ್ಟು-ಸೆಡವಿನ ಜೊತೆಗೆ ಒಲವಿನ ಸಂಧಾನಗಳಿರುತ್ತಿತ್ತು. ದುಃಖ-ನೋವಿನ ಜೊತೆಗೆ ಬೆಚ್ಚನೆಯ ಸಾಂತ್ವನವಿರುತ್ತಿತ್ತು. ಬೇಸರ-ಅಸಹನೆಗಳ ನಡುವೆ ಕ್ಷಮೆಯಾಚನೆ ಇರತ್ತಿತ್ತು. ಹಾಸ್ಯ ಅಪಹಾಸ್ಯಗಳ ನಡುವೆ ಮನೆತುಂಬ ನಗು ಚೆಡುತ್ತಿತ್ತು.
ಇದೆಲ್ಲದರ ನಡುವೆಯೇ ಎಷ್ಟೊಂದು ಬರೆದರು. ಮಾತನಾಡಿದರು, ಬದುಕು ಕಟ್ಟಿಕೊಟ್ಟರು… ಸಣ್ಣ ವಯಸ್ಸಿನಿಂದಲೂ ಅವಮಾನಗಳಿಂದ ಸಾಕಷ್ಟು ನೊಂದಿದ್ದೀರಿ, ಬದುಕಿಗಾಗಿ ದುಡಿದಿದ್ದೀರಿ. ಈಗ ಎಲ್ಲವೂ ಇದೆ. ಈಗಲೂ ಯಾಕೆ ರಾತ್ರಿಯೆಲ್ಲ ನಿದ್ರೆಗೆಟ್ಟು ಬರೆಯುತ್ತಾ ಕೂರುತ್ತೀರಿ? ಮಕ್ಕಳು ಮೊಮ್ಮಕ್ಕಳೊಂದಿಗೆ ಆರಾಮಾ ಗಿರಬಾರದಾ? ಅಂದರೆ, ನಿನಗೆ ಬೆಳಗ್ಗೆ ಎದ್ದರೆ ಮಗ ನನ್ನು ಶಾಲೆಗೆ ಕಳಿಸಬೇಕು, ಗಂಡನಿಗೆ ಅಡುಗೆ ಮಾಡಬೇಕು, ಮನೆಯನ್ನು ಸ್ವಚ್ಛ ಮಾಡಬೇಕು ಅನ್ನುವ ನೂರು ಕೆಲಸಗಳಿರುತ್ತವೆ.
ಆದರೆ ನನಗೆ ಬರೆಯುವುದೊಂದು ಬಿಟ್ಟು ಬೇರೇನಿದೆ ಹೇಳು? ಎಂದು ನನಗೆ ಪ್ರಶ್ನೆ ಎಸೆದು ನೀನು ಆರಾಮಾಗಿ ನಿದ್ರೆ ಮಾಡು. ಆದರೆ ಒಂದು-ಸ್ಕಿನತುಂಬ ಬಿಸಿ ಕಾಫಿ ಮಾಡಿಟ್ಟು ಹೋಗು. ಪದೇ ಪದೇ ನಿನಗೆ ತೊಂದರೆ ಕೊಡಲ್ಲ ಎಂದು ಹೇಳಿ ರಾತ್ರಿಯಿಡಿ ಪುಸ್ತಕ ಓದುತ್ತಲೋ, ಟಿಪ್ಪಣಿ ಮಾಡುತ್ತಲೋ, ಬರೆಯು ತ್ತಲೋ ಕುಳಿತಿರುತ್ತಿದ್ದ ಅವರ ಚಿತ್ರ ಕಣ್ಣಲ್ಲಿ ಕದಲ ತೊಡಗುತ್ತದೆ. ಅವರು ನಡೆದಾಡಿದ ಕೋಣೆ, ಆಫೀಸಿಗೆ ಹೊರಡುವ ಮುನ್ನ ಕಾಫಿ ಕುಡಿಯುತ್ತ ಆಡುತ್ತಿದ್ದ ಮಾತುಗಳು, ಅವರಿಗಾಗಿ ತಯಾರಿಸುತ್ತಿದ್ದ ಅಡುಗೆಗಳು, ಮಗನೊಂದಿಗೆ ಸೇರಿ ಮಾಡುತ್ತಿದ್ದ ಕೀಟಲೆಗಳನ್ನು ಮರೆಯುವುದಾದರೂ ಹೇಗೆ? ನೂರಾರು ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅವರ ಮಾತಿನಲ್ಲಿ ಸಮಾಧಾನ ಕಾಣುತ್ತಾ ಎದ್ದು ಹೋಗುತ್ತಿದ್ದರು.
ಎಲ್ಲಿ ಹೋದರು ಅವರೆಲ್ಲ? ನಾವು ಮೆರೆಯುವಾಗ ನಮ್ಮನ್ನು ದೇವರಂತೆ ಮೆರೆಸುವ ಇದೇ ಜನ ಗ್ರಹಚಾರ ಕೆಟ್ಟು ನಾವು ಕೆಳಗೆ ಬಿದ್ದಾಗ ಆಳಿಗೊಂದು ಕಲ್ಲು ಹಾಕುತ್ತಾರೆ. ’           ಅದು ಯಾರನ್ನೂ ನಿರಂತರವಾಗಿ ನೆನಪಿನಲ್ಲಿಟ್ಟುಕೊಂಡು ಪೂಜಿಸುವು ದಿಲ್ಲ ಅನ್ನುವುದು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳುತ್ತಾ, ಕಲ್ ಔರ್ ಆಯೇಗಾ ನಗಮೋಂಕಿ ಖಿಲತೀ ಕಲಿಯಾ ಚುನನೇ ವಾಲೇ ಮುಜಸೆ ಬೆಹತರ್ ಕೆಹನೇವಾಲೇ ತುಮಸೆ ಬೆಹತರ್ ಸುನನೇವಾಲೇ ಮೈ ಪಲ್ ದೋ ಪಲ್ ಕಾ ಶಾಯರ್ ಹೂ ಎನ್ನುವ ಸಾಹಿರ್ ಲುಧಿಯಾನ್ವಿ ಬರೆದ ಅರ್ಥಪೂರ್ಣ ಹಾಡಿನ ಸಾಲನ್ನು ಕೇಳಿಸುತ್ತಿದ್ದರು. ಹಾಗೆ ಜೊತೆಗಿರುತ್ತ ಇರುತ್ತಲೇ ಎಷ್ಟೆಲ್ಲ ತಿದ್ದಿದರು, ತಿಳಿಸಿದರು.
ದೇವರು, ಧರ್ಮ, ಆಚರಣೆಗಳಲ್ಲಿ ನಂಬಿಕೆ ಕಳೆದುಕೊಂಡಿದ್ದ ಅವರು ನನ್ನ ನಂಬಿಕೆಗಳಿಗೆ ಎಂದೂ ಅಡ್ಡಿ ಮಾಡಲಿಲ್ಲ. ಹೀಗೇ ಇರಬೇಕೆಂದು ಒತ್ತಾಯ ಹೇರಲಿಲ್ಲ.ಮಗ ಹುಟ್ಟಿದಾಗಲೂ ಎಲ್ಲ ರೀತಿಯಶಾಸ್ತ್ರಗಳನ್ನು ಸಂಪ್ರದಾಯ ಬದ್ಧವಾಗಿಯೇ ನೆರವೇರಿಸಿದರು. ಕಾರಣ ಅದು ನಮ್ಮ ಕರ್ತವ್ಯ. ಮುಂದೆ ಅವನು ಬೆಳೆದುಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವಾಗ ಅದನ್ನು ಪಾಲಿಸುವುದು ಬಿಡುವುದು ಅವನಿಚ್ಛೆ. ನೀನು ಯಾವುದಕ್ಕೂ ಒತ್ತಾಯಿಸಬೇಡ ಎಂದು ಹೇಳಿದ್ದರು.
ಶಾಸ್ತ್ರಬದ್ಧವಾಗಿ ತಮ್ಮ ಪೂರ್ವಜರಿಗೆ ಎಂದಿಗೂ ತರ್ಪಣ ಬಿಡದೆ ತಮ್ಮ ಶಾಲೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ತನ್ನಮ್ಮನ ನೆನಪಿನಲ್ಲಿ ಒಂದು ದಿನಕ್ಕಾಗುವಷ್ಟು ಹಾಲು, ಮೊಸರು, ಅಕ್ಕಿ, ಬೇಳೆ, ಬೆಲ್ಲ, ತರಕಾರಿಗಳನ್ನು ಕೊಟ್ಟು ತಮ್ಮದೇ ರೀತಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ಆದರೆ ಅವತ್ತು ಅದೇನನ್ನಿಸಿತೋ ಗೊತ್ತಿಲ್ಲ. ನಾಳೆ ಬೆಳಗ್ಗೆ ಮುರುಡೇಶ್ವರಕ್ಕೆ ಹೊರಡೋಣ, ಒಂದು ಸಣ್ಣ ಕೆಲಸವಿದೆ ಎಂದಾಗ ಕಾರಣವೇನೆಂದು ವಿವರವಾಗಿ ತಿಳಿಯದಿದ್ದರೂ ಮಾರನೆಯ ದಿನ ಬೆಳಗ್ಗೆ ಮಗನನ್ನೂ ಕರೆದುಕೊಂಡು ಹೊರಟಿದ್ದೆವು.
ಸೂರ್ಯೋದಯಕ್ಕೂ ಮುನ್ನ ಸಮುದ್ರದ ದಡದಲ್ಲಿ ಅವರ ಪರಿಚಯದಶಾಸ್ತ್ರಿಗಳಿದ್ದರು. ಆ ಕೊರೆವ ಚಳಿಯ ಇಬ್ಬರಿಗೂ ಸಪ್ತವರ್ಣದ ನೀರಿನ ಅಭಿಷೇಕ ಮಾಡಿ, ಉದಯವಾಗುತ್ತಿದ್ದ ಬಾಲ ಸೂರ್ಯನೆದುರು ಸಮುದ್ರಕ್ಕೆ ತಿಲತರ್ಪಣ ಕೊಡಿಸಿದ್ದರು. ಆಗಸದ ರಂಗಿನೊಡನೆ ಸಮುದ್ರತಟವೂ ರಂಗೇರಿ ಒಂದು ವಿಶೇಷವಾದ ಅನುಭವವನ್ನು ತಂದುಕೊಟ್ಟಿತ್ತು. ಆದರೆ ಸಂಜೆಯಾಗುವಷ್ಟರಲ್ಲಿ ನನಗೆ ಶೀತದಿಂದ ಜ್ವರವೇ ಬಂದುಬಿಟ್ಟಿತ್ತು. ಆ ಜ್ವರದಲ್ಲಿಯೇ ಸಂಜೆ ಸಮುದ್ರ ದಡದಲ್ಲಿ ವಿಹಾರಕ್ಕೆಂದು ಹೋದಾಗ ಓಡೋಡಿ ಬಂದು ಪಾದ ತೊಳೆಯುತ್ತಿದ್ದ ಸಮುದ್ರದ ಅಲೆಗಳಲ್ಲಿ ಆಡುತ್ತಾ ಕುಳಿತಾಗ ಅನಿಸಿದ್ದು ಎಷ್ಟೇ ರೋಷ, ಆವೇಶದಿಂದಅಬ್ಬರಿಸುತ್ತಾ ಬಂದರೂ ಕದಲದೆ, ಹಿಂದೆ ಸರಿಯದೆ ನಿಶ್ಚಲವಾಗಿ ನಿಂತ ದಡದೆದುರು ಸೋತು ಹಿಂದೆ ಸರಿದು ಹೋಗುವ ಸಮುದ್ರದಂತೆ ನಾವೂ ಕೂಡ ಎದುರಾಗುವ ಕಷ್ಟಕಾರ್ಪಣ್ಯಗಳಿಗೆ ಅಂಜದೆ ದಡದಂತೆ ದೃಢವಾಗಿ ನಿಂತಾಗ ಎಂಥಾ ಸಮಸ್ಯೆಗಳೂ ಸೋತು ಹಿಂದೆ ಸರಿದು ಹೋಗುತ್ತವೆ ಎಂದು.
ಮಗನಿಗಿನ್ನೂ ಹದಿಮೂರು ವರುಷವಷ್ಟೆ. ಅಪ್ಪನ ಬಗ್ಗೆ ಎಲ್ಲರೂ ಮಾತಾಡುವುದನ್ನು ಕೇಳುವಾಗ ಅವನು ಹೌದಾ ಅಮ್ಮಾ? ಎಂದು ನನ್ನನ್ನೇ ಕೇಳುತ್ತಾನೆ. ಅವನಿಗೆ ಎಲ್ಲವನ್ನೂ ತಿಳಿಸಿಕೊಡಬೇಕು. ಹೀಗಾಗಿಯೇ ನಾನಿನ್ನೂ ಇಲ್ಲಿದ್ದೇನೆ. ಇಷ್ಟು ದಿನ ನಡೆದ ದಾರಿಗಿಂತ ಮುಂದೆ ನಡೆಯುವ ದಾರಿ ಇನ್ನೂ ದೊಡ್ಡದಿದೆ. ಖಾಲಿಯಾದಾಗಲೇ ತುಂಬಿಕೊಳ್ಳಲು ಸಾಧ್ಯ. ಆದರೆ ಈ ವಾರಕ್ಕೆ ನಾನು ಇದೆಲ್ಲವನ್ನು ಬರೆಯಬೇಕೆಂಬ ಯಾವ ತಯಾರಿಯೂ ಮಾಡಿರಲಿಲ್ಲ. ಮೂರ್ನಾಲ್ಕು ವಿಷಯ ವಸ್ತುಗಳು ಒಟ್ಟೊಟ್ಟಿಗೆ ದಾಳಿಯಿಡುತ್ತಿದ್ದಾಗ ಅವೆಲ್ಲವನ್ನೂ ಪಕ್ಕಕ್ಕೆ ಸರಿಸಿ ನನ್ನಿಂದ ಈ ಅಕ್ಷರಗಳು ಬರೆಸಿಕೊಂಡಿವೆ. ನಿಜಕ್ಕೂ ಇದೆಲ್ಲವನ್ನೂ ಬರೆಯು ತ್ತಿರುವುದು ನಾನೇನಾ? ಅಥವಾ ಅವರೇ ನನ್ನಿಂದ ಇದೆಲ್ಲವನ್ನೂ ಬರೆಸುತ್ತಿದ್ದಾರಾ?