ಸಚಿನ್‌ ತೆಂಡೂಲ್ಕರ್‌ ಕ್ರಿಕೆಟರ್‌ ಅಲ್ಲ !
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್‌
@.
ಅವಲಕ್ಕಿ ಚೊಡಾಕ್ಕೆ ಸಮ ಪ್ರಮಾಣದಲ್ಲಿ ಸೇವು ಸೇರಿಸಿದರೆ ಅದನ್ನು ಅವಲಕ್ಕಿ ಎನ್ನಬೇಕೋ ಅಥವಾ ಸೇವು ಎನ್ನಬೇಕೋ? ದೋಸೆಯಂತೆ ಕಂಡರೂದೋಸೆಯಾಗದ, ಅತ್ತ ರೊಟ್ಟಿಯೂ ಅಲ್ಲದ, ಪ್ಯಾಕೆಟ್‌ನಲ್ಲಿ ಬರುವ ಕೋರಿ ರೊಟ್ಟಿಯನ್ನು, ತೊಡದೇವನ್ನು ಯಾವ ವರ್ಗಕ್ಕೆ ಸೇರಿಸಬೇಕು?
ಭಾರತದಲ್ಲಿ ಕ್ರಿಕೆಟ್ ಆಟದ ದೇವರು ಎಂದು ಕರೆಸಿಕೊಂಡ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಆಟಗಾರನಲ್ಲ ನೆಸ್ಲೆ ಕಂಪನಿಯವರು ತಯಾರಿಸುವ ಕಿಟ್‌ಕ್ಯಾಟ್ಚಾಕಲೇಟ್ ಅಲ್ಲ ಎಂದರೆ ನಂಬಬೇಕೆ? ನಂಬಬೇಕು. ಚಪಾತಿ, ರೊಟ್ಟಿಯಂತಹ ತಿನಿಸಿನ ಲಿಗೆ ಪರೋಟಾ ಸೇರುವುದಿಲ್ಲ ಎಂದರೂ ನಂಬಬೇಕು, ಎಣ್ಣೆಯಲ್ಲಿ ಕರಿಯುವ ಸಂಡಿಗೆ ಯಂತಹ ಕುರುಕಲು ತಿಂಡಿ ಫ್ರೈಮ್ಸ್ಊಟದ ಜತೆಗೆ ಚಪ್ಪರಿಸುವ ಹಪ್ಪಳಕ್ಕೆ ಸಮ ಎಂದರೂ ಖಡಾ ಖಂಡಿತವಾಗಿ ನಂಬಲೇಬೇಕು. ಇದನ್ನುಹೇಳುವುದಕ್ಕೆ ಕಾರಣ ಮತ್ತು ಸಾಕ್ಷಿ ಎರಡೂ ಇದೆ.
ಮೊದಲನೆಯದಾಗಿ ಕಾರಣ; ಕಳೆದ ವಾರದ ಅಂಕಣದಲ್ಲಿ ಮ್ಯಾರಿಕೋ ಇಂಡಸ್ಟ್ರೀಸ್ ತಯಾರಿಸುವ ಪ್ಯಾರಾ ಚೂಟ್ ಕೊಬ್ಬರಿ ಎಣ್ಣೆಯ ವಿಷಯ ಬರೆದಿದ್ದೆ. ಅದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದ್ದು, ಅದರಲ್ಲಿ ಪ್ರಮುಖವಾಗಿ, ತೆರಿಗೆಗೆ ಸಂಬಂಧಪಟ್ಟಂತೆ ಸರಕಾರ ಮತ್ತು ಸಂಸ್ಥೆಯ ನಡುವೆ ನಡೆದ ಸಮರದ ಕುರಿತು ಹೆಚ್ಚು ಪ್ರತಿಕ್ರಿಯೆ ಬಂದಿತ್ತು. ಕೆಲವರು ಸರಕಾರದ ನೀತಿ ಕುರಿತಂತೆ, ಕೆಲವರು ಮಾರಿಕೋ ಸಂಸ್ಥೆಯ ನೈತಿಕತೆಯ ಕುರಿತು ಪ್ರತಿಕ್ರಿಯೆ ನೀಡಿದ್ದರು. ಯಾರು ಸರಿ, ಯಾರು ತಪ್ಪು ಎನ್ನುವುದಕ್ಕೆ ಅವರವರದ್ದೇ ಆದ ವಾದಗಳಿರುತ್ತವೆ ಬಿಡಿ. ಆದರೆ ಒಂದು ವಿಷಯ ಗಮನದಲ್ಲಿರಲಿ, ಈ ರೀತಿ ತೆರಿಗೆಯೊಂದಿಗೆ ಚಾಣಾಕ್ಷ್ಯದ ಚಕ್ಕಂದ ಆಡಿದವರಲ್ಲಿ ಮಾರಿಕೊ ಸಂಸ್ಥೆ ಒಂದೇ ಅಲ್ಲ, ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಸಾಕಷ್ಟು ಸಂಸ್ಥೆಗಳು ಅಥವಾ ವ್ಯಕ್ತಿಗಳು ಈ ಮೊದಲೂ ಸರಕಾರದೊಂದಿಗೆ ಸಮರಕ್ಕೆ ಇಳಿದದ್ದಿದೆ. ಕೆಲವು ಇಂದಿಗೂ ಮುಂದುವರಿಯುತ್ತಿದೆ.
ಬೇಕಾದರೆ ಬರೆದಿಟ್ಟುಕೊಳ್ಳಿ, ಭವಿಷ್ಯದಲ್ಲೂ ಇದು ಮುಂದುವರಿಯುತ್ತದೆ. ಇನ್ನು ಇದಕ್ಕೆ ಸಾಕ್ಷಿ, ನೆಸ್ಲೆ ಸಂಸ್ಥೆಯ ಹೆಸರು ಕೇಳದೇ ಇದ್ದದವರು ಯಾರೂ ಇರಲಿಕ್ಕಿಲ್ಲ. ಕುಡಿಯುವ ನೀರಿನ ಬಾಟಲಿಯಿಂದ ಹಿಡಿದು ಚಹಾ, ಕಾಫಿ ಪುಡಿಯ ವರೆಗೆ, ಚಾಕಲೇಟ್‌ನಿಂದ ಹಿಡಿದು ಐಸ್‌ಕ್ರೀಂವರೆಗೆ, ಹೈನು ಉತ್ಪನ್ನಗಳಿಂದ ಹಿಡಿದು ಸಾಕು ಪ್ರಾಣಿಗಳ ಆಹಾರ ಪದಾರ್ಥಗಳವರೆಗೆ ಸಂಸ್ಥೆ ಉತ್ಪಾದಿಸುತ್ತದೆ. ಕ್ವಾಲಿಟಿ ಸ್ಟ್ರೀಟ್ಸ್, ಮೈಲೊ, ಏರೊ, ನೆಸ್‌ಕ್ವಿಕ್, ಸ್ಮಾರ್ಟೀಸ್ ಮೊದಲಾದ ವುಗಳೆಲ್ಲ ನೆಸ್ಲೆ ಉತ್ಪಾದನೆಗಳೇ.
ಚಾಕಲೇಟಿಗೆ ಹೋಲಿಸಿದರೆ ಸಂಸ್ಥೆ ತಯಾರಿಸುವ ಬಿಸ್ಕತ್ತುಗಳು ತೀರಾ ಕಡಿಮೆ ಎಂದೇ ಹೇಳಬಹುದು. ಸಂಸ್ಥೆಯ ಅತ್ಯಂತ ಜನಪ್ರಿಯ ಉತ್ಪಾದನೆಗಳಲ್ಲಿ ಕಿಟ್‌ಕ್ಯಾಟ್ ಕೂಡ ಒಂದು. ಕಿಟ್ ಕ್ಯಾಟ್ ಎಂದಾಕ್ಷಣ ಮನಸ್ಸಿಗೆ ಬರುವುದು ಚಾಕಲೇಟ್ ತಾನೆ? ಆದರೆ ಕಿಟ್‌ಕ್ಯಾಟ್ ಚಾಕಲೇಟ್ ಅಲ್ಲ, ಬಿಸ್ಕತ್ತು ಎಂದರೆ ಆಶ್ಚರ್ಯ ಬೇಡ. ಇದು ನಾನು ಹೇಳುತ್ತಿರುವುದಲ್ಲ, ಸಂಸ್ಥೆಯ ಹೇಳಿಕೆ. ಅದನ್ನು ಆದಾಯ ತೆರಿಗೆ ನ್ಯಾಯಮಂಡಳಿಯೂ ಒಪ್ಪಿದೆ!
ಎಲ್ಲರಿಗೂ ತಿಳಿದಿರುವಂತೆ ಕಿಟ್‌ಕ್ಯಾಟ್‌ನಲ್ಲಿರುವುದು ಎರಡು ಪ್ರಮುಖ ಪದಾರ್ಥ. ಒಂದು ಚಾಕಲೇಟ್, ಇನ್ನೊಂದು ವೇಫರ್ಸ್ ಅಥವಾ ಸಿಹಿ ಮುರುಕು. ಸಿಹಿ ಮುರುಕನ್ನು ಅದರ ಜನ್ಮದಾರಭ್ಯ ಬಿಸ್ಕತ್ತಿನ ಗುಂಪಿಗೆ ಸೇರಿಸಿ ಆಗಿದೆ ಎನ್ನುವುದೂ ಕೂಡ ಎಲ್ಲರೂ ಅರಿತಿರುವ ವಿಷಯವೇ. ಈಗ ಅಸಲಿ ವಿಷಯಕ್ಕೆ ಬರೋಣ. ಒಂದು ಪ್ರಮಾಣದಲ್ಲಿ ಸಿಹಿಮುರುಕಿನ ಸುತ್ತ ಚಾಕಲೇಟ್ ಇರಲಿ ಅಥವಾ ಚಾಕಲೇಟಿನ ಮಧ್ಯದಲ್ಲಿ ಸಿಹಿಮುರುಕು ಇರಲಿ ಎರಡೂ ಒಂದೇ ತಾನೆ? ಹಾಗೆ ಅಂದು ಕೊಂಡರೆ ಅದು ತಪ್ಪು.
ಯಾಕೆಂದರೆ, ಅದನ್ನು ಚಾಕಲೇಟ್ ಎನ್ನಬೇಕೋ ಅಥವಾ ಬಿಸ್ಕತ್ತು ಎನ್ನಬೇಕೋ? ಸರಕಾರ ಮತ್ತು ನೆಸ್ಲೆ ಸಂಸ್ಥೆ ಕಿತ್ತಾಡಿಕೊಂಡಿದ್ದೂ ಇದೇ ವಿಷಯದ ಕುರಿತು. ಕಿಟ್‌ಕ್ಯಾಟ್ ಚಾಕಲೇಟ್ ಕೊಟ್ಟೆಯನ್ನು ಒಮ್ಮೆ ನೋಡಿದರೆ ಅರ್ಥವಾಗುತ್ತದೆ. ಅದರ ಮೇಲೆ   ,     , ,  ಹೀಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಬರೆದಿರುತ್ತದೆಯೇ ಹೊರತು ಎಲ್ಲಿಯೂ ಚಾಕಲೇಟ್ ಎಂದು ಬರೆದಿರುವುದಿಲ್ಲ. ಸಂಸ್ಥೆಯ ಪ್ರಕಾರ ಇವೆಲ್ಲ ಚಾಕಲೇಟಿನಲ್ಲಿ ಅದ್ದಿದ ಸಿಹಿಮುರುಕು. ಏಕೆ? ಬಿಸ್ಕತ್ತಿನಲ್ಲಿ ಚಾಕಲೇಟ್ ಇರಬಾರದೇನು? ಚಾಕಲೇಟ್ ಚೂರು ಹಾಕಿ ಮಾಡಿದ ಬಿಸ್ಕತ್ತು, ಚೊಕೊ ಚಿಪ್ಸ್ ಕುಕೀಸ್ ಮಾರುಕಟ್ಟೆಯಲ್ಲಿ ಎಷ್ಟಿಲ್ಲ ಹೇಳಿ? ಪ್ರಮಾಣ ಸ್ವಲ್ಪ ಹೆಚ್ಚು ಕಮ್ಮಿ ಇರಬಹುದು ಅಷ್ಟೇ.
ಸರಕಾರ ಕಿಟ್‌ಕ್ಯಾಟನ್ನು ಚಾಕಲೇಟ್ ಎಂದಾಗ ಸಂಸ್ಥೆ ನ್ಯಾಯಾಲಯದಲ್ಲಿ ಮುಂದಿಟ್ಟದ್ದು ಇದೇ ವಾದವನ್ನು. ಅಸಲಿಗೆ ಸರಕಾರದ ನೀತಿಯಂತೆ ಬಿಸ್ಕತ್ತಿಗೆ ಶೇಕಡಾ ಹತ್ತು ತೆರಿಗೆಯಾದರೆ, ಚಾಕಲೇಟಿಗೆ ತೆರಿಗೆ ಶೇಕಡಾ ಇಪ್ಪತ್ತು. ಸರಕಾರದ ಪ್ರಕಾರ ಚಾಕಲೇಟ್ ಐಷಾರಾಮಿ ವಸ್ತು, ಸುಖಭೋಗದ ತಿನಿಸು.ಬಡವರ ಮಕ್ಕಳೂ ಚಾಕಲೇಟ್ ತಿನ್ನುತ್ತಾರೆ ಎನ್ನುವುದು ಸರಕಾರಕ್ಕೆ ತಿಳಿಯದ ವಿಷಯವೊ ಅಥವಾ ಬಡವರು ಚಾಕಲೇಟ್ ತಿನ್ನಬಾರದು ಎಂಬ ನಿಲುವೊಗೊತ್ತಿಲ್ಲ, ಒಟ್ಟಿನಲ್ಲಿ ಇದು ಸರಕಾರದ ತೆರಿಗೆ ನಿಯಮ.
ಇರಲಿ, ಮುಂಬೈನ ಸೆಂಟ್ರಲ್ ಎಕ್ಸೈಸ್ ಕಮಿಷನರ್1999ರಲ್ಲಿ ನೆಸ್ಲೆ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ಕಿಟ್‌ಕ್ಯಾಟ್‌ನ್ನು ಚಾಕಲೇಟ್ ಎಂದು ಪರಿಗಣಿಸಬೇಕು ಎಂದಿದ್ದರು. ಇದರ ವಿರುದ್ಧ ನ್ಯಾಯ ಕೇಳಿದಾಗ ತೀರ್ಪು ಸಂಸ್ಥೆಯ ಪರವಾಗಿ ಬಂದಿತ್ತು.
ಸಿಹಿಮುರುಕಿನ ಪ್ರಮಾಣ ಹೆಚ್ಚಿದ್ದು, ಚಾಕಲೇಟ್ ಪ್ರಮಾಣ (ಗಾತ್ರದಲ್ಲಿ, ಭಾರದಲ್ಲಿ ಅಲ್ಲ) ಕಮ್ಮಿ ಇರುವುದರಿಂದ ಇದನ್ನು ಬಿಸ್ಕತ್ತು ಎಂದೇ ಪರಿಗಣಿಸಬೇಕು ಎಂದು ಸಂಸ್ಥೆಯ ಪರವಾಗಿ ವಕೀಲರು ವಾದಿಸಿದರು. ಚಾಕಲೇಟಿನಲ್ಲಿ ಕೊಕೊ ಇರಬೇಕು ನಿಜ ಆದರೆ ಕೊಕೊ ಇರುವುದನ್ನೆಲ್ಲ ಚಾಕಲೇಟ್ ಎಂದು ಪರಿಗಣಿಸ ಲಾಗುವುದಿಲ್ಲ ಎಂಬ ವಾದವನ್ನು ನ್ಯಾಯಮಂಡಳಿ ಒಪ್ಪಿತ್ತು.
ನೆಸ್ಲೆ ಸಂಸ್ಥೆಗೆ ಜಯ ದೊರಕಿತು. ಹಾಗೆಯೇ ಚಾಕಲೇಟ್ ಪ್ರಮಾಣ ಹೆಚ್ಚಿರುವ ಕಿಟ್‌ಕ್ಯಾಟ್ ಕೊಟ್ಟೆಯ ಮೇಲೆ ಚಾಕಲೇಟ್ ಎಂದು ನಮೂದಿಸಿ, ಸಂಸ್ಥೆ ಅದಕ್ಕೆ ತಕ್ಕ ತೆರಿಗೆ ನೀಡಿತು.ಇತ್ತೀಚಿನದಿನಗಳಲ್ಲಿ ಸಂಸ್ಥೆ ಉತ್ಪಾದಿಸುವ  ,  ,  ,   ಇತ್ಯಾದಿ ಗಳ ಕೊಟ್ಟೆಯ ಮೇಲೆ ಚಾಕಲೇಟ್ ಎಂದು ಬರೆದದ್ದನ್ನು ಕಾಣಬಹುದು. ಪ್ಯಾರಾಚೂಟ್ ಕೂಡ ಮಾಡಿದ್ದು ಇದನ್ನೇ. ಹೇರ್ ಆಯಿಲ್ ಎಂದು ಬರೆಯದೇ, ತೆಂಗಿನ ಎಣ್ಣೆ ಎಂದಷ್ಟೇ ಬರೆದದ್ದು.
2003ರಲ್ಲಿ ಡಾಬರ್ ಇಂಡಿಯಾ ಮತ್ತು ಆದಾಯ ತೆರಿಗೆ ಅಧಿಕಾರಿಗಳ ನಡುವೆ ಒಂದು ವಿವಾದವಾಗಿತ್ತು. ಡಾಬರ್ ಲಾಲ್ ದಂತಮಂಜನ್ ಹಲ್ಲುಜ್ಜುವ ಪೇಸ್ಟ್ ಎಂದು ಅಧಿಕಾರಿಗಳು ಹೇಳಿದರೆ, ಲವಂಗ, ಪುದಿನಾ, ಶುಂಠಿ ಸೇರಿದಂತೆ ಒಟ್ಟೂ ಹದಿಮೂರು ಗಿಡಮೂಲಿಕೆಗಳಿಂದ ತಯಾರಿಸಿದ ಆಯುರ್ವೇದದ, ಹಲ್ಲು ಮತ್ತು ಒಸಡನ್ನು ರಕ್ಷಿಸುವ ಔಷಧ ಎಂದು ಸಂಸ್ಥೆ ವಾದಿಸಿತು. ಅದಕ್ಕೆ ಕಾರಣ ಔಷಧಕ್ಕಿರುವ ತೆರಿಗೆ ರಿಯಾಯತಿ.
ಮಕ್ಕಳು ಇಷ್ಟಪಟ್ಟು ತಿನ್ನುವ ಫ್ರೈಮ್ಸ್ಎಲ್ಲರಿಗೂ ಗೊತ್ತು ತಾನೆ? ಇದನ್ನು ತಿನ್ನಲು ಸಿಗುವುದಕ್ಕಿಂತ ತೂತುಗಳೇ ಹೆಚ್ಚು ಇರುವ, ಒಂದು ಬಗೆಯ ಪೊಳ್ಳು ಸಂಡಿಗೆ ಅಂದುಕೊಳ್ಳಿ. ಒಂದೂವರೆ ಇಂಚು ಗಾತ್ರದ ಇದನ್ನು ಹಪ್ಪಳ ಎಂದರೆ ನಂಬಬಹುದೇ?2019ರಲ್ಲಿ ಮಧ್ಯಪ್ರದೇಶದ ಎಎಆರ್ (  ) ಫ್ರೈಮ್ಸ್ನ್ನು ಹಪ್ಪಳ ಎಂದು ಪರಿಗಣಿಸಬೇಕೆ ಅಥವಾ ಕುರುಕಲು ತಿಂಡಿ ಎಂದು ನಮೂದಿಸಬೇಕೆ ಎಂದು ತಿಳಿಸುವಂತೆ ತಯಾರಕರಾದ ಅಲಿಶಾ-ಡ್ಸ್ಸಂಸ್ಥೆಗೆ ನೋಟೀಸ್ ಕಳಿಸಿತು. ತಿಳಿದಿರಲಿ, ಹಪ್ಪಳಕ್ಕೆ ತೆರಿಗೆ ಶೇಕಡಾ ಐದರಷ್ಟಾದರೆ, ಇತರ ಕುರುಕಲುಗಳಿಗೆ ತೆರಿಗೆ ಶೇಕಡಾ ಹದಿನೆಂಟು ಪ್ರತಿಶತ. ಅಲಿಶಾ ಸಂಸ್ಥೆಯ ಬಹಳಷ್ಟು ಉತ್ಪನ್ನಗಳು ತೂತೇ ಹೆಚ್ಚಾಗಿರುವ ಫ್ರೈಮ್ಸ್ವರ್ಗಕ್ಕೆ ಸೇರಿದರೂ, ಅದೇ ಸಾಮಗ್ರಿಗಳನ್ನು ಬಳಸಿಕೊಂಡು ಮಾಡುವ ಒಂದೂವರೆ ಇಂಚಿನ ವೃತ್ತಾಕಾರದ ಬಿಲ್ಲೆಯ ಕೊಟ್ಟೆಯ ಮೇಲೆ ಪಾಪಡ್ (ಹಪ್ಪಳ) ಎಂದು ನಮೂದಿಸಿದೆ. ತಾನೇ ಹುಟ್ಟಿಸಿದ ಮಗುವಿಗೆ ತಾನೇ ಒಂದು ಹೆಸರಿಟ್ಟು ಕರೆಯುವಾಗ, ನಿಮ್ಮ ಮಗುವಿನ ಹೆಸರು ಅದಲ್ಲ ಎಂದರೆ ಯಾರು ಕೇಳುತ್ತಾರೆ? ಅಲಿಶಾ ಸಂಸ್ಥೆ ಹೇಳಿದ್ದೂ ಅದನ್ನೇ.
ಒಂದು ವರ್ಷದ ಹಿಂದೆ ಕರ್ನಾಟಕದ ಎಎಆರ್ ಕೂಡ ಇದೇ ರೀತಿಯ ಒಂದು ಆದೇಶ ಹೊರಡಿಸಿತ್ತು. ಅದರ ಪ್ರಕಾರ, ಪ್ಯಾಕೆಟ್‌ನಲ್ಲಿ ಬರುವ ರೊಟ್ಟಿ, ಕಾಕರಾ ಅಥವಾ ಚಪಾತಿಗೂ ಪ್ಯಾಕೆಟ್‌ನಲ್ಲೇ ಬರುವ ಶೀತಲೀಕರಿಸಿದ ಪರೋಟಾಕ್ಕೂ ವ್ಯತ್ಯಾಸವಿದೆ ಎನ್ನುವುದು. ಫ್ರಿಡ್ಜ್‌ನಲ್ಲಿ ಇಡುವ ಪರೋಟಾ ಐಷಾರಾಮಿ ತಿನಿಸು. ಹಾಗಾದರೆ ಹೋಳಿಗೆ? ರುಚಿ ಬೇರೆ ಇರಬಹುದು, ಮಾಡುವ ವಿಧಾನ ಒಂದೇ ಅಲ್ಲವೆ? ಇದೂ ಕೂಡ ಸಾಕಷ್ಟು ಚರ್ಚೆಗೆ ವಿಷಯವಾಯಿತು.
ಇನ್ನೊಂದು ವಿಷಯ ಕೇಳಿದರೆ ಕರೆಂಟ್ ಶಾಕ್ ಹೊಡೆದ ಅನುಭವ ಆಗಬಹುದು, ಆದರೆ ಇದು ಸತ್ಯ. ಕೆಲವು ವರ್ಷಗಳ ಹಿಂದೆ ಇದು ಚರ್ಚೆಗೆ ಗ್ರಾಸವೂ ಆಗಿತ್ತು. ನಮ್ಮ ದೇಶದ ಕ್ರಿಕೆಟ್ ಕಣ್ಮಣಿ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ನೂರು ಶತಕ ಸಿಡಿಸಿದ ಏಕೈಕ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.
ಸಾವಿರಾರು ಕಿಕೆಟ್ ಪ್ರೇಮಿಗಳಿಗೆ ದೇವರು, ಕ್ರಿಕೆಟಾರ್ಥಿಗಳಿಗೆ ಪ್ರೇರಣೆ, ಸ್ಫೂರ್ತಿನೀಡಿದ, ಒಲ್ಲದವರಿಗೂ ಕ್ರಿಕೆಟ್ ಸಲ್ಲುವಂತೆ ಮಾಡಿದ, ಸಲ್ಲುವವರಿಗೆ ಹುಚ್ಚು ಹಿಡಿಸಿದ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಆಟಗಾರ ಅಲ್ಲ ಎಂದರೆ? ಸ್ವತಃ ಸಚಿನ್ ಹೇಳಿದ್ದರಿಂದ ಆಘಾತವಾದರೂ ನಂಬಲೇ ಬೇಕು. ಅದು ಆತ ಕ್ರಿಕೆಟ್ ಆಟದಿಂದ ನಿವೃತ್ತನಾದ ನಂತರ ಹೇಳಿದ ಮಾತಾದರೆ ಒಪ್ಪಬಹುದಿತ್ತೋ ಏನೋ. ಸಚಿನ್ ಹೇಳಿಕೆ ನೀಡಿದ್ದು ತನ್ನ ವೃತ್ತಿಯ ಉತ್ತುಂಗದಲ್ಲಿರುವಾಗ. ಅದೂ ಕೂಡ ಯಾವುದೋ ದೂರದರ್ಶನದ ಸಂದರ್ಶನದಲ್ಲೋ, ಸಭೆಯಲ್ಲೋ, ಸಮಾರಂಭದಲ್ಲೋ ನೀಡಿದ ಹೇಳಿಕೆಯಲ್ಲ. ಇದು ಆತ ನ್ಯಾಯಮಂಡಲಿಗೆ ಬರೆದುಕೊಟ್ಟ ಕೊಟ್ಟ ಹೇಳಿಕೆ. ನ್ಯಾಯ ಮಂಡಳಿಯೂ ಅದನ್ನು ಒಪ್ಪಿದೆ ಎಂದರೆ, ಅಲ್ಲಗಳೆಯುವದಕ್ಕೆ ನಾವು ಯಾರು?
೨೦೦೧ ರಿಂದ ೨೦೦೫ ರವರೆಗೆ ಸಚಿನ್ ಭರ್ಜರಿಫಾರ್ಮ್‌ನಲ್ಲಿದ್ದ. ಆ ಸಂದರ್ಭದಲ್ಲಿ ಆತನಿಗೆ ಸಾಕಷ್ಟು ವಿದೇಶೀ ಸಂಸ್ಥೆಗಳಿಂದ ಜಾಹೀರಾತುಗಳಿಗೆ ಆಹ್ವಾನ ಬರುತ್ತಿತ್ತು. ಅದನ್ನು ಆತ ಸ್ವೀಕರಿಸುತ್ತಲೂ ಇದ್ದ. ಹಾಗೆಯೇ ದುಬಾರಿ ಉಡುಗೊರೆಗಳೂ ಬರುತ್ತಿದ್ದವು. (ಫೆರಾರಿ ಕಾರಿನ ಕಥೆ ಎಲ್ಲರಿಗೂ ನೆನಪಿರಬಹುದು) ತೆರಿಗೆ ಸಂಸ್ಥೆಯವರು ಸಚಿನ್‌ನಿಂದ ಸಾಕಷ್ಟು ತೆರಿಗೆ ಸಂಗ್ರಹಿಸಿದ್ದರು. ಅದರ ವಿರುದ್ಧ ಸಚಿನ್ ನ್ಯಾಯಮಂಡಳಿಗೆ ಪತ್ರ ಬರೆದಿದ್ದ. ಜಾಹೀರಾತಿನಿಂದ ಬಂದ ಹಣ ಕ್ರಿಕೆಟ್ ಆಡಿ ಬಂದದ್ದಲ್ಲ, ಅದಕ್ಕಾಗಿ ನಾನು ಅಭಿನಯಿಸಿದ್ದೇನೆ. ಅಭಿನಯ ಎಲ್ಲರಿಗೂ ಒಲಿಯುವುದಲ್ಲ, ಅದು ಸುಲಭವೂ ಅಲ್ಲ, ಅದಕ್ಕಾಗಿ ನಾನು ಕಷ್ಟಪಟ್ಟಿದ್ದೇನೆ ಎಂದು ತಿಳಿಸಿದ್ದ. ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ಸ್ಟ್ರೋಕ್ ಹೊಡೆದಿರಬಹುದು, ಆದರೆ ಆತ ಮೈದಾನದಿಂದ ಹೊರಗೆ ಹೊಡೆದ ಅತ್ಯುತ್ತಮ ಸ್ಟ್ರೋಕ್ ಇದಾಗಿತ್ತು.
ಆದಾಯ ತೆರಿಗೆಯ ನಿಯಮ 80 ಪ್ರಕಾರ, ಭಾರತೀಯ ಮೂಲದ ನಟ, ಕಲಾವಿದ, ಲೇಖಕ, ಸಂಗೀತಕಾರ ಆಗಿದ್ದು, ಅವರ ಕಲೆಗೆ ವಿದೇಶದಿಂದ ಹಣ ಸಂದಾಯವಾದರೆ, ತೆರಿಗೆಯಲ್ಲಿ ದೊಡ್ಡ ಪ್ರಮಾಣದ ರಿಯಾಯತಿ ದೊರಕುತ್ತದೆ. ಜಾಹೀರಾತುಗಳಿಂದ ಸಚಿನ್‌ಗೆ ದೊಡ್ಡ ಮೊತ್ತದ ಹಣ ಸಂದಾಯವಾಗುತ್ತಿತು. ಅದೆಲ್ಲ ಸಚಿನ್ ಕ್ರಿಕೆಟ್ ಆಡಿ ಗಳಿಸಿದ ಹೆಸರಿನಿಂದ ಬಂದದ್ದು ಎಂದು ಅಧಿಕಾರಿ ಗಳು ವಾದಿಸಿದರು. ಆದರೆ, ಕ್ರಿಕೆಟ್‌ನಿಂದ ಸಚಿನ ಹೆಸರುಗಳಿಸಿರಬಹುದು, ಆದರೆ, ಜಾಹೀರಾತಿನ ಹಣ ಕ್ರಿಕೆಟ್ ಆಡಿ ಬಂದದ್ದಲ್ಲ, ನಟನೆಯಿಂದ ಬಂದದ್ದು ಎಂದು ಒಪ್ಪಿ ನ್ಯಾಯಮಂಡಳಿ ೨೦೧೧ ರಲ್ಲಿ ತೀರ್ಪು ನೀಡಿತು.
ಇಂತಹ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಸರಕಾರದ ಈ ತೆರಿಗೆ ಗೊಂದಲಗಳು ಇಂದು ನಿನ್ನೆಯದಲ್ಲ. ಮೊದಲೆಲ್ಲ ಅಬಕಾರಿ ಸುಂಕ, ಸೇವಾ ತೆರಿಗೆ ಇತ್ಯಾದಿ ಬೇರೆ ಬೇರೆ ತೆರಿಗೆಗಳಿಂದ ಬಚಾವಾಗಲು ಪ್ರಯತ್ನ ನಡೆಯುತ್ತಿತ್ತು. ಇದೆಲ್ಲವನ್ನೂ ಜಿಎಸ್‌ಟಿ ಒಂದರ ಅಡಿಯಲ್ಲಿಯೇ ತಂದರೂ ಗೊಂದಲಗಳು ಮಾತ್ರ ಇನ್ನೂ ಮುಂದುವರಿದಿವೆ.
ಅವಲಕ್ಕಿ ಚೊಡಾಕ್ಕೆ ಸಮ ಪ್ರಮಾಣದಲ್ಲಿ ಸೇವು ಸೇರಿಸಿದರೆ ಅದನ್ನು ಅವಲಕ್ಕಿ ಎನ್ನಬೇಕೋ ಅಥವಾ ಸೇವು ಎನ್ನಬೇಕೋ? ದೋಸೆಯಂತೆ ಕಂಡರೂ ದೋಸೆ ಯಾಗದ, ಅತ್ತ ರೊಟ್ಟಿಯೂ ಅಲ್ಲದ, ಪ್ಯಾಕೆಟ್‌ನಲ್ಲಿ ಬರುವ ಕೋರಿ ರೊಟ್ಟಿಯನ್ನು, ತೊಡದೇವನ್ನು ಯಾವ ವರ್ಗಕ್ಕೆ ಸೇರಿಸಬೇಕು? ತಿಳಿದವರೇ ಸಮಜಾಯಿಶಿ ಕೊಡಬೇಕು.
ಯಾವುದೇ ಸಂಸ್ಥೆಯಾದರೂ ತಮ್ಮ ಉತ್ಪನ್ನಗಳನ್ನು ಕಡಿಮೆ ತೆರಿಗೆಯ ಸ್ಲ್ಯಾಬ್‌ನ ಅಡಿಯಲ್ಲಿ ನಮೂದಿಸಿಕೊಳ್ಳಲು ಪ್ರಯತ್ನಿಸು ತ್ತವೆ. ಅದರಲ್ಲಿ ತಪ್ಪೇನೂ ಇಲ್ಲ. ಕಾರಣ ಇಷ್ಟೇ, ಮೊದಲನೆಯದಾಗಿ, ತೆರಿಗೆ ಎಷ್ಟಾದರೂ ಸೇರಿಸಿಯೇ ಸಂಸ್ಥೆಯವರು ತಮ್ಮ ಉತ್ಪನ್ನಗಳನ್ನು ಮಾರಬೇಕು. ತೆರಿಗೆ ಕಮ್ಮಿಯಾದಷ್ಟೂ ಬೆಲೆ ಕಮ್ಮಿ ಮಾಡಬಹುದು. ಅದರಿಂದ ಕಂಪನಿಯ ಸರಕು ಹೆಚ್ಚು ಮಾರಾಟವಾಗುವುದರಿಂದ ಲಾಭ ಹೆಚ್ಚುತ್ತದೆ ಎನ್ನುವುದು ನಿಜವಾದರೂ ಇದರಿಂದ ಹೆಚ್ಚಿನ ಲಾಭವಾ ಗುವುದು ಗ್ರಾಹಕರಿಗೆ. ಅದರಲ್ಲೂ ಸಾಮಾನ್ಯ ಜನರಿಗೆ ಸಣ್ಣ ಉಳಿತಾಯವೇ ದೊಡ್ಡದು. ಸರಕಾರಕ್ಕೆ ಇದರಿಂದ ಅಂಥ ದೊಡ್ಡ ನಷ್ಟವೇನೂ ಇಲ್ಲ. ಪರೋಟಾ, ರೊಟ್ಟಿಯ ನಡುವಿನ ವ್ಯತ್ಯಾಸ ದಿಂದ ಸರಕಾರ ಎಷ್ಟು ತೆರಿಗೆ ಸಂಗ್ರಹಿಸಬಹುದು? ಅದೆಲ್ಲ ಬಕಾಸುರನ ಹೊಟ್ಟೆಗೆ ಮಜ್ಜಿಗೆಯಂತೆ.
ಇನ್ನೊಂದು, ಸರಕಾರವೇ ನಿರೂಪಿಸಿದ ಕಾಯಿದೆ ಯನ್ನು ಮೀರದೆ, ಮುರಿಯದೇ, ಅದರಲ್ಲೇ ಇರುವ ಅವಕಾಶವನ್ನು ಬಳಸಿಕೊಳ್ಳುವುದರಲ್ಲಿ ತಪ್ಪೇನು ಎನ್ನುವುದು. ಯಾವ ವಸ್ತುಗೆ ಎಷ್ಟು ತೆರಿಗೆ ಎಂದು ಸರಕಾರ ಹೇಗೆ ಕಾನೂನನ್ನು ರೂಪಿಸುತ್ತದೆಯೋ, ತೆರಿಗೆ ಕಟ್ಟಬೇಕಾದವರು ನುಣುಚಿಕೊಳ್ಳದಂತೆ ಕಾನೂನು ರೂಪಿಸುವುದೂ ಸರಕಾರದ್ದೇ ಜವಾಬ್ದಾರಿ. ಸರಕಾರ ರೂಪಿಸಿದ ಕಾನೂನು ದುರ್ಬಳಕೆಯಾಗುತ್ತಿದ್ದರೆ ತಪ್ಪು ಬಳಕೆದಾರರದ್ದೋ ಅಥವಾ ಸರಕಾರದ್ದೋ ಎನ್ನುವ ಪ್ರಶ್ನೆಗೆ ಉತ್ತರ ಬೇರೆ ಬೇಕೆ?