ಬೇಹುಗಾರಿಕೆಯ ಕಬಂಧ ಬಾಹುಗಳಲ್ಲಿ
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
@.
ಮೋದಿಯನ್ನು ಬಡಿಯುವುದಕ್ಕೆ ಯಾವುದೇ ಬೆತ್ತವಾದರೂ ಆದೀತು ಎಂಬಂತಹ ಪ್ರಸಕ್ತ ವಾತಾವರಣದಲ್ಲಿ, ದೇಶದ ಭದ್ರತೆ ಹಿಂದೆಂದಿಗಿಂತಲೂ ಮುಖ್ಯ ವಾಗಿದೆ. ಭದ್ರತೆಯನ್ನು ಕಾಪಾಡುವುದರಲ್ಲಿ ಇಂಟೆಲಿಜೆನ್ಸ್ ಗ್ಯಾದರಿಂಗ್ ಬಹುದೊಡ್ಡ ಸವಾಲು.
ವನ್ಯಜೀವಿ ಸಂಶೋಧಕ-ದ್ವಯರಾದ ಎಸ್. ಕೃಪಾಕರ್ ಮತ್ತು ಸೇನಾನಿ ಹೆಗ್ಡೆ ಹಾಗೂ ತೋಟಗಾರಿಕಾ ವಿಜ್ಞಾನಿ ಸತ್ಯಬ್ರತ ಮೈತಿ ಅವರನ್ನೂ ಸೇರಿದಂತೆ ಆರು ಜನರನ್ನು ವೀರಪ್ಪನ್ ಅಪಹರಿಸಿದ ಪ್ರಕರಣ ನಡೆದು25ವರ್ಷ ಗಳೇ ಸಂದವು. ತನ್ನ ಎಂದಿನ ಕಾರ್ಯಕ್ಷೇತ್ರದಿಂದ ಹೊರಬಂದು ಬಂಡೀಪುರ ಅಭಯಾ ರಣ್ಯದಲ್ಲಿ ನರಹಂತಕ ಕುಕೃತ್ಯವೆಸಗಿದ್ದ. ಅದು ಅನಿರೀಕ್ಷಿತವಾಗಿತ್ತು. ಹಾಗಂತ ಅಂದಿನ ವಿಶೇಷ ಕಾರ್ಯಪಡೆಯ ಮುಖ್ಯಸ್ಥ ಹರ್ಷ ವರ್ಧನ್ ರಾಜು ಮತ್ತು ಚಾಮರಾಜನಗರ ಜಿಲ್ಲೆಯ ಪೊಲೀಸ್ ಮುಖ್ಯಸ್ಥ ಎ ಎಂ ಪ್ರಸಾದ್ ಇಬ್ಬರೂ ಹೇಳಿಕೆ ನೀಡಿದ್ದರು.
ಸಂಭವನೀಯ ದುಷ್ಕೃತ್ಯಗಳ ಕುರಿತು ಮಾಹಿತಿ ಕಲೆ ಹಾಕಿ ಅವಘಡಗಳನ್ನು ತಪ್ಪಿಸುವಂತೆ ಕ್ರಮಕೈಗೊಳ್ಳಲು ಸಲಹೆ ನೀಡುವುದು ಗುಪ್ತಚರ ಇಲಾಖೆಯ ಮುಖ್ಯ ಕೆಲಸ. ಅಪಹರಣ ಅನಿರೀಕ್ಷಿತವಾಗಿತ್ತು ಅನ್ನುವುದಕ್ಕಿಂತ ವೀರಪ್ಪನ್ ಬಂಡೀಪುರಕ್ಕೆ ಕಾಲಿಟ್ಟದ್ದು ಅನಿರೀಕ್ಷಿತವಾಗಿತ್ತು. ವೀರಪ್ಪನ್ ನನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯದ್ದು ಯುಕ್ತಿ, ಪೊಲೀಸ್ ಇಲಾಖೆಯದ್ದು ಶಕ್ತಿ ಎಂದು ಅಂದಿನ ಚಾಮರಾಜನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ ಕೆ ದೀಕ್ಷಿತ್ ಸೊಗಸಾಗಿ ನುಡಿದಿದ್ದರು.
ದಟ್ಟ ಅರಣ್ಯದಲ್ಲಿ ದಂತಚೋರ ನಡೆಸುತ್ತಿದ್ದ ಅಪಹರಣಗಳ ನಂತರ ಆ ಕುರಿತು ದೈನಂದಿನ ಮಾಹಿತಿ ಹೆಕ್ಕುವುದು ಕಷ್ಟದ ಕೆಲಸವಾಗಿತ್ತು. ಮಾಹಿತಿ ಎಲ್ಲಿಂದ ಹೆಕ್ಕುತ್ತೀರಿ. ಅವನ ಅಡಗುದಾಣದ ಬಗ್ಗೆ ಅರಿವಿಲ್ಲ. ಪತ್ತೆಯಲ್ಲಿ ನಿರತರಾದ ಅಧಿಕಾರಿಗಳಿಗೇ ನಿಖರ ಮಾಹಿತಿ ಇರುತ್ತಿರಲಿಲ್ಲ. ಅವರನ್ನು ಅವಲಂಬಿಸಿದ್ದ ನಮಗೆ ಮಾಹಿತಿ ದುರ್ಲಭ. ಅವರು ನೀಡಿದ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವುದು ಯಾವಾಗಲೂ ಸಾಧ್ಯವಾಗು ತ್ತಿರಲಿಲ್ಲ. ಕಾಡಿನಲ್ಲಿ ಅಲೆಯುವುದಾದರೂ ಎಂದು ಅಲೆಯುವುದು. ಮತ್ತು ಇದು ಒಂದೆರಡು ದಿನದ ಕೆಲಸವಲ್ಲವಲ್ಲ!
ಕಷ್ಟಪಟ್ಟು ಕಲೆ ಹಾಕಿದ ಸುದ್ದಿ ರವಾನಿಸಬೇಕಾದರೂ ಇಂದಿನ ಸೌಕರ್ಯಗಳು ಇರಲಿಲ್ಲ. ಈ ಸುದ್ದಿ ದಾರಿದ್ರ್ಯ ಸನ್ನಿವೇಶದ ದುರುಪಯೋಗ ಮಾಡಿಕೊಂಡುಕಪೋಲ ಕಲ್ಪಿತ ವರದಿಗಳನ್ನು ಹರಿಬಿಟ್ಟ ಪತ್ರಕರ್ತರೂ ಇದ್ದರು. ಅಪಹರಣವಾದ ಮೂರು ದಿನಗಳಲ್ಲಿ, ಡಾ.ಮೈತಿ ಜ್ವರ ಪೀಡಿತರಾಗಿದ್ದಾರೆಂಬ ಸುದ್ದಿ ಬಂತು. ಅದನ್ನು ಪ್ರಕಟಿಸಿದರೆ, ಮೊದಲು ಚಿಂತೆಗೀಡಾಗುವವರು ಅವರ ಮಡದಿ. ಮೊದಲೇ ಪೊಲೀಸರನ್ನು ಕಂಡರೆ ಸಾರ್ವಜನಿಕರಿಗೆ ತಿರಸ್ಕಾರ. ಕಾಡುಗಳ್ಳನ ಬಗ್ಗೆ ಪತ್ರಕರ್ತರಿಗೆ ಸಿಗುವ ಮಾಹಿತಿ ಪೊಲೀಸರಿಗೇಕೆ ಸಿಗದು ಎಂಬುದು ಎಡೆ ಕೇಳಿಬರುತ್ತಿದ್ದ ಪ್ರಶ್ನೆ. ಸುದ್ದಿಯನ್ನಂತೂ ಕಳಿಸಿದೆ. ಆದರೆ, ವರದಿಗಾರ ಇಂತಹ ಸಂದರ್ಭದಲ್ಲಿ ಯಾವ ರೀತಿ ಮಾಹಿತಿ ಸಂಗ್ರಹಿಸುತ್ತಾನೆ, ಯಾರನ್ನು ಅವಲಂಬಿಸುತ್ತಾನೆ, ಆ ಸುದ್ದಿಯ ಸತ್ಯಾಸತ್ಯತೆ ಏನಿರಬಹುದು ಎಂಬುದನ್ನೂ ವಿವರಿಸಿದ್ದೆ. ನನ್ನ ಮಾಹಿತಿ ತಪ್ಪಿದ್ದರೂ ಇರಬಹುದೆಂಬುದನ್ನೂ ಸೂಚಿಸಿದ್ದೆ.
ಮಾಹಿತಿ ನೀಡಿದ ಅಧಿಕಾರಿಯೂ ಎಡವಿರಬಹುದೆಂಬುದನ್ನೂ ಬರೆದಿದ್ದೆ. ವರದಿ ಮಾಡುವ ಒತ್ತಡದ ನಡುವೆ, ನಾನು ಕಾಣದ ಶ್ರೀಮತಿ ಮೈತಿಯವರ ಬಗ್ಗೆ ನಾನು ತೋರಬಹುದಾದ ಕನಿಷ್ಠ ಜವಾಬ್ದಾರಿಯುತ ಕಾಳಜಿ ಅದಾಗಿತ್ತು. ತದನಂತರದಲ್ಲಿ, ಅಪಹೃತರೆಲ್ಲರೂ ಸುರಕ್ಷಿತವಾಗಿ ಬಿಡುಗಡೆಗೊಂಡರು. ಭೇಟಿಮಾಡಿದ ಪತ್ರಕರ್ತರಿಗೆ ಕೈಮುಗಿದ ಡಾ.ಮೈತಿ ದಯವಿಟ್ಟು ಅಂತಹ ತಪ್ಪು ಸುದ್ದಿಯನ್ನು ಪ್ರಕಟಿಸಬೇಡಿರೆಂದು ಬೇಡಿದರು. ನನಗೆ ಹಿಂಸೆ, ಮುಜುಗರವಾಯಿತು. ಆಧಾರ ಸಹಿತವೇ ಆಗಿದ್ದರೂ ಸುಳ್ಳಾದ ಆ ಸುದ್ದಿ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗಿದ್ದ ಮಾತ್ರಕ್ಕೆ ನನ್ನ ಅಳುಕಿನ ಪ್ರಮಾಣವೇನೂ ಕಡಿಮೆಯಾಗಲಿಲ್ಲ.
ಆ ಪ್ರಮಾದಕ್ಕೆ ಕಾರಣ ಗುಪ್ತಚರ ಇಲಾಖೆಯ ಹಿರಿಯರೊಬ್ಬರು. ತಮ್ಮ ಇಲಾಖೆಗೆ ನೀಡುವ ವರದಿಗೆ ಪುಷ್ಟಿ ಒದಗಿಸುವ ನಿಟ್ಟಿನಲ್ಲಿ ಆ ಅಧಿಕಾರಿಯೇ ಆ ಮಾಹಿತಿ ಯನ್ನು ಎಡೆ ಹರಡಿದ್ದರು. ಅಧಿಕೃತ ಮೂಲದಿಂದ ಬಂದ ಮಾಹಿತಿಯಾದ್ದರಿಂದ ಅದನ್ನು ಎಲ್ಲರೂ ವರದಿಮಾಡಿದ್ದೆವು. ಸರಕಾರಿ ಅಧಿಕಾರಿಗಳೂ, ರಾಜಕಾರಣಿ ಗಳೂ, ಉದ್ಯಮದ ಅಧಿಪತಿಗಳೂ ಸೇರಿದಂತೆ, ನಾನಾ ರಂಗದ ಧುರೀಣರು ತಮ್ಮ ಬೇಳೆಬೇಯಿಸಿಕೊಳ್ಳಲು ಮಾಧ್ಯಮದಲ್ಲಿ ಸುದ್ದಿಯನ್ನು ತೇಲಿ ಬಿಡಲು ಪತ್ರಕರ್ತರನ್ನು ಬಳಸಿಕೊಳ್ಳುತ್ತಾರೆ. ಇತ್ತೀಚೆಗೆ ಗತಿಸಿದ ಭೂಗತ ಡಾನ್ ಮುತ್ತಪ್ಪ ರೈಗೆ ಮೈಸೂರಿನ ಸಂಬಂಧವೂ ಇತ್ತು. ಆತನ ತೋಟದ ಮನೆ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಬಂದದ್ದು ನಂತರದ ವರ್ಷಗಳಲ್ಲಿ. ಆತ ಜಯಲಕ್ಷ್ಮೀಪುರಂನ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸ್ತವ್ಯ ಹೂಡುತ್ತಿದ್ದನ್ನು ಕ್ರಾಫರ್ಡ್ ಹಾಲ್ ಬಳಿ ಸಿಕ್ಕ ಗುಪ್ತಚರ ಇಲಾಖೆಯ ಪರಿಚಯದ ಪೊಲೀಸ್ ಒಬ್ಬರಿಗೆ ತಿಳಿಸಿದೆ.
ಎಲ್ಲಿ, ಎಂದು ಅವರು ನನ್ನಿಂದ ವಿವರ ಪಡೆದುಕೊಂಡರು. ಜನನಿಬಿಡ ಬಡಾವಣೆಯಲ್ಲಿದ್ದ ಡಾನ್ ಬಗ್ಗೆ ಅವರಿಗೆ ಮಾಹಿತಿ ಇಲ್ಲದಿದ್ದುದು ನನಗೆ ಆಶ್ಚರ್ಯ ವೆನ್ನಿಸ ಲಿಲ್ಲ. ಅಪರಾಧಿ ಜಗತ್ತಿನ ಹೊರಗೆ ಸಂಭವಿಸಿದ ಅಚಾತುರ್ಯವೊಂದನ್ನು ಮತ್ತೆ ಓದುಗರ ಅವಗಾಹನೆಗೆ ತಂದು ಮತ್ತೆ ಬೇಹುಗಾರಿಕಾ ಪ್ರಪಂಚಕ್ಕೆ ಬರುತ್ತೇನೆ. ತೊಂಬತ್ತರ ದಶಕದ ಆರಂಭದಲ್ಲಿ ಕಾವೇರಿ ನದಿ ಪ್ರವಾಹಕ್ಕೆ ಕಾರಣವಾದ ಮಾನವ ವೈಫಲ್ಯ. ಕೃಷ್ಣರಾಜ ಅಣೆಕಟ್ಟಿಗೆ ಮೇಲ್ದಂಡೆ ಯೋಜನೆಗಳಿಂದ ಮುನ್ಸೂಚನೆ ಯಿಲ್ಲದೆ ಹರಿದುಬಂದ ಬೃಹತ್ ಪ್ರಮಾಣದ ನೀರನ್ನು ನಿಭಾಯಿಸಲಾಗದೆ ಅಣೆಯಿಂದ2.10ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿ ನದಿ ಉಬ್ಬಿ ಹರಿಯಿತು.
ಆ ಪ್ರಮಾದಕ್ಕೆ ವ್ಯವಸ್ಥಿತವಾದ ಸಂಪರ್ಕ ಸಾಧನಗಳಿಲ್ಲದಿದ್ದುದು ಒಂದು ಕಾರಣವಾದರೂ ನೀರಾವರಿ ಇಲಾಖೆಯ ಮೇಲಧಿಕಾರಿಗಳ ಬೇಜವಾಬ್ದಾರಿಯನ್ನು ದೂರದೇ ಗತ್ಯಂತರವಿಲ್ಲ. ಕ್ಯೂಸೆಕ್ ಮತ್ತು ಟಿಎಂಸಿ ನಡುವಿನ ಸಂಬಂಧವನ್ನು ಅಣೆಯ ಹೊಣೆ ಹೊತ್ತ ಮಧ್ಯಮ ಮಟ್ಟದ ಎಂಜಿನಿಯರ್ ಒಬ್ಬರನ್ನು ಕೇಳಿ ಅವರು ಉತ್ತರ ತಿಳಿಯದೆ ತಡಬಡಾಯಿಸಿದರು. ಮತ್ತೊಬ್ಬರನ್ನು ಫೋನ್ ಮಾಡಿ ವಿಚಾರಿಸಿದರು. ಅವರಿಗೂ ಗೊತ್ತಿರಲಿಲ್ಲ. ಮೂರನೆ ಯವರಿಗಾದರೂ ತಿಳಿದಿದ್ದುದು ತಾಯಿ ಕಾವೇರಿಯ ಭಾಗ್ಯ.
ಬಾಬರಿ ಮಸೀದಿ ಕೆಡವಿದ ದಿನ ಡಿಸೆಂಬರ್ 6. ಅದಕ್ಕೆ ಪ್ರತ್ಯುತ್ತರವಾಗಿ ಬಾಂಬೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವೂ ಬೇಹುಗಾರಿಕೆಯ ವೈಫಲ್ಯವೇ. ಆ ವೈಫಲ್ಯದಿಂದ ಹೆಚ್ಚಿನ ಪಾಠ ಕಲಿತಿಲ್ಲದಿದ್ದರೂ, ಪ್ರತಿ ವರ್ಷ ಡಿಸೆಂಬರ್ 6ರ ಹಿಂದಿನ ದಿನ ಯಾಂತ್ರಿಕವಾಗಿ ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆ. ಆತಂಕ ವಾದಿಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುತ್ತಾರೋ ಇಲ್ಲವೋ, ಪ್ರಕಟಣೆಯನ್ನಂತೂ ನೀಡಿಯೇ ನೀಡಲಾಗುತ್ತದೆ. ನಾಲ್ಕು ಹನಿ ಹೆಚ್ಚು ಮಳೆಯಾದರೆ, ತಗ್ಗಿನ ಪ್ರದೇಶದಲ್ಲಿ ವಾಸಿಸುವ ಜನ ಸುರಕ್ಷತೆಗೆ ತೆರಳಬೇಕೆಂಬ ಸೂಚನೆಯೂ ಹಾಗೆಯೇ. ಮೋಡ ಕವಿಯುತ್ತಿದ್ದ ಹಾಗೆ ಮೀನುಗಾರರಿಗೆ ಕಡಲ ಸಹವಾಸ ಬಿಡಿರೆಂಬ ಮುನ್ಸೂಚನೆಯೂ ಹಾಗೆಯೇ. ಎಲ್ಲವೂ ಯಾಂತ್ರಿಕ.
ಕಳ್ಳತನ ಸಂಭವಿಸಿದ ಮನೆಗೆ ಮಹಜರು ನಡೆಸಲು ಬಂದ ಪೊಲೀಸಪ್ಪ ಯಾರೋ ನೋಡಿಕೊಂಡೇ ಮಾಡಿದ್ದಾನೆ ಎಂದು ಹೊರಡಿಸುವ ಫರ್ಮಾನಿನಷ್ಟೇ ಯಾಂತ್ರಿಕ, ನಿರೀಕ್ಷಿತ. ಅದಕ್ಕೆ ಇಂಟೆಲಿಜೆನ್ಸ್ ಅಗತ್ಯವಿಲ್ಲ. ದೇಶದ ಹೊರಗಿನ   ಜಗತ್ತಿನ ವಿಸ್ತಾರವಾದ ವಿವರಣೆ ಮೇಜರ್ ಜನರಲ್ ವಿಕೆ ಸಿಂಗ್‌ರ ಅಪರೂಪದ ಪುಸ್ತಕದಲ್ಲಿದೆ. ’  ,       ()  ಎಂಬ ಈ ಪುಸ್ತಕದಲ್ಲಿ ಸರಕಾರೀ ಅಧಿಕಾರಿಯೊಬ್ಬರಿಂದ ನಿರೀಕ್ಷಿಸಲಾಗದಷ್ಟು ಮಹತ್ವಪೂರ್ಣ ವಿವರಗಳಿವೆ. ಪುಸ್ತಕ ಬಿಡುಗಡೆಯಾಗಿದ್ದು 2007ರಲ್ಲಿ, ಸಾಕಷ್ಟು ವಿವಾದಕ್ಕೊಳಗಾದ ಈ ಪುಸ್ತಕ ಸದ್ಯಕ್ಕೆ ಅಮೆಜನ್‌ನಲ್ಲಿ ಲಭ್ಯವಿದೆ.
1962ರ ಚೀನಾ ಯುದ್ಧದ ಹಾಗೂ 1965ರ ಪಾಕ್ ಯುದ್ಧದ ತರುವಾಯ ಗುಪ್ತಮಾಹಿತಿ ಸಂಗ್ರಹಿಸುವಲ್ಲಿ ಇಂಟೆಲಿಜೆನ್ಸ್ ಬ್ಯುರೋವಿನಿಂದುಂಟಾದ () ವೈಫಲ್ಯಗಳೇ ರಾ () ಹುಟ್ಟಿಗೆ ಕಾರಣವಾಯಿತು. ಹಿಂದೆ ಐಬಿ, ಮಿಲಿಟರಿ, ಅಥವಾ ಪೊಲೀಸ್ ಇಲಾಖೆಯಿಂದ ರಾಗೆ ನೇಮಕವಾಗುತ್ತಿತ್ತು. ಬದಲಾದ ಇಂದಿನ ಪರಿಸ್ಥಿತಿಯಲ್ಲಿ, ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ನೇಮಕಮಾಡುವ ಪರಿಪಾಠವೂ ಇದೆ. ಮಿಲಿಟರಿ ಹಿನ್ನೆಲೆಯ ಸಿಂಗ್, ಉಳಿದೆಲ್ಲ ಸರಕಾರೀ ಇಲಾಖೆಗಳಂತೆ ರಾ ಕೂಡ ಜಡತ್ವದಿಂದ ನರಳಬಾರದೆಂಬ ಕಳಕಳಿಯಿಂದ ಬರೆದ ಪುಸ್ತಕವಿದು.
ಪ್ರಜಸತ್ತೆಯಲ್ಲಿ, ರಕ್ಷಣಾ ಇಲಾಖೆಯ ಖರ್ಚು ವೆಚ್ಚಗಳೂ ಸಂಸತ್ತಿನ ಪರಿಶೀಲನೆಗೊಳಪಡುತ್ತದೆ, ಹಾಗಿರುವಾಗ, ಗುಪ್ತಚರ ಇಲಾಖೆಗೇನು ಕೋಡು? ರಾ ಬಜೆಟ್ ಏಕೆ ಸಂಸತ್ ನಿಯಂತ್ರಣದಿಂದ ಹೊರಗಿಡಬೇಕು ಎಂಬ ಮುಖ್ಯ ಪ್ರಶ್ನೆಯನ್ನೆತ್ತುತ್ತಾರೆ ಸಿಂಗ್ . ಅತ್ಯಂತ ಬಲಿಷ್ಠ ಪ್ರಜಪ್ರಭುತ್ವ ವ್ಯವಸ್ಥೆಯಾದ ಅಮೆರಿಕದಬೇಹುಗಾರಿಕಾ ಸಂಸ್ಥೆಯಾದ ಸಿಐಎ ಕುರಿತ ವಿವರಗಳೇ ಮುಕ್ತವಾಗಿ ಲಭ್ಯವಿದೆ, ರಾ ನ ಹುಟ್ಟು, ಬೆಳವಣಿಗೆ, ಕಾರ್ಯವ್ಯಾಪ್ತಿ, ಚಟುವಟಿಕೆಗಳಿಗೆ ಸಂಬಂಧಿಸಿ ದಂತೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಈ ಗೋಪ್ಯತೆ ಸಾಧುವಲ್ಲ ಎಂದು ಸಿಂಗ್ ವಾದಿಸುತ್ತಾರೆ. ಭಾರತೀಯ ಸೇನೆಯಾದರೋ ವಾರ್ ಡೈರಿ ಅಥವಾ ಸೇವಾ ಡೈಜೆಸ್ಟ್‌ನಲ್ಲಿ ಸೇನೆಯ ಚಟುವಟಿಕೆಗಳೆಲ್ಲವನ್ನೂ ಲಾಗ್ ಮಾಡುತ್ತದೆ, ರಾಗೆ ಆ ರಗಳೆಯಿಲ್ಲ. ಎಲ್ಲವೂ ಗುಟ್ಟು-ಗುಟ್ಟು.
ರಾ ಕುರಿತು ಸಾಕಷ್ಟು ಪುಸ್ತಕಗಳು ಬಂದಿದ್ದು ಅವುಗಳಲ್ಲಿ ಪಾಕಿಸ್ತಾನೀಯರು ಬರೆದ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವುಗಳ ನಿಖರತೆ ಪ್ರಶ್ನಾರ್ಹ. ಅವು ಗಳಲ್ಲಿನ ಸುಳ್ಳುಪೊಳ್ಳುಗಳನ್ನೂ ಸಿಂಗ್ ಉದಾಹರಣೆ ಸಮೇತ ದಾಖಲಿಸಿದ್ದಾರೆ. ರಾ ನ ರೀತಿನೀತಿಗಳ ಜತೆಜತೆಗೇ ಅದರ ಸಾಧನೆಗಳನ್ನೂ, ಕಾರ್ಗಿಲ್ಆಕ್ರಮಣವನ್ನು ನಿರೀಕ್ಷಿಸಲಾಗದ ಗುರುತರ ವೈಫಲ್ಯವೂ ಪುಸ್ತಕದಲ್ಲಿ ನಮೂದಿತವಾಗಿವೆ.
ಇಂಟೆಲಿಜೆನ್ಸ್ ವ್ಯವಸ್ಥೆಯನ್ನು ಚುರುಕುಗೊಳಿಸಬೇಕೆಂಬ ಏಕೈಕ ಕಳಕಳಿಯಿಂದ ಬರೆಯಲಾದ ಈ ಪುಸ್ತಕವನ್ನು ಇಲ್ಲಿ ಪ್ರಸ್ತಾಪಿಸುತ್ತಿರುವುದಕ್ಕೆ ಕಾರಣ ನ್ಯೂ ಯಾರ್ಕ್ ಟೈಮ್ಸ್ ಪ್ರಕಟಿಸಿದ ಎಕ್ಸ್‌ಕ್ಲ್ಯೂಸಿವ್ ವರದಿ. ಪ್ರಧಾನಿ ನರೇಂದ್ರ ಮೋದಿ ೨೦೧೭ರಲ್ಲಿ ತಮ್ಮ ಐತಿಹಾಸಿಕ ಇಸ್ರೇಲ್ ಪ್ರವಾಸದ ಅವಧಿಯಲ್ಲಿ ಆತಿಥೇಯ ದೇಶದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಪ್ರಶ್ನಿಸಿರುವ ಕಿತಾಪತಿ ವರದಿ. ಭಾರತವಿರೋಧಿ, ದೂ ವಿರೋಧಿ ಪತ್ರಿಕೋದ್ಯಮಕ್ಕೆ ಹಲವಾರು ಪುಲಿಟ್ಜರ್ ಗಿಟ್ಟಿಸಿಕೊಳ್ಳಬಲ್ಲ ಸಾಮರ್ಥ್ಯವಿರುವ ಪತ್ರಿಕೆಯಿಂದ ಬೇರೇನನ್ನೂ ನಿರೀಕ್ಷಿಸಲಾಗದು.
ಮೋದಿಯನ್ನು ಬಡಿಯುವುದಕ್ಕೆ ಯಾವುದೇ ಬೆತ್ತವಾದರೂ ಆದೀತು ಎಂಬಂತಹ ಪ್ರಸಕ್ತ ವಾತಾವರಣದಲ್ಲಿ, ದೇಶದ ಭದ್ರತೆ ಹಿಂದೆಂದಿಗಿಂತಲೂ ಮುಖ್ಯ ವಾಗಿದೆ. ಭದ್ರತೆಯನ್ನು ಕಾಪಾಡುವುದರಲ್ಲಿ ಇಂಟೆಲಿಜೆನ್ಸ್ ಗ್ಯಾದರಿಂಗ್ ಬಹುದೊಡ್ಡ ಸವಾಲು. ಸರಕಾರೀ ಇಲಾಖೆಗಳೆಡೆ ಅಡ್ಡಕಸುಬಿಗಳು ತುಂಬಿ ತುಳುಕು ತ್ತಿದ್ದಾರೆ. ಸೇನೆಯಗಲೀ, ರಾನಗಲೀ ನಾಲಾಯಕ್ಕುಗಳಿಗೆ ಅವಕಾಶವೇ ಇಲ್ಲ. ಆಂತರಿಕ ಶತ್ರುಗಳನ್ನು ಸದೆಬಡಿಯಬೇಕಾದ ಕೆಲಸ ಬಾಹ್ಯ ಶತ್ರುಗಳ ಮುಂದಿನ ಹೆಜ್ಜೆಯನ್ನು ನಿರೀಕ್ಷೆ ಮಾಡಿ ಅದಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳಬೇಕಾದಷ್ಟೇ ಮುಖ್ಯ.
ಪೆಗಾಸಸ್ ತಂತ್ರಜ್ಞಾನದಿಂದ ಆ ಕೆಲಸ ಸುಗಮವಾಗುವುದಾದರೆ ಅದನ್ನು ಸ್ವಾಗತಿಸೋಣ. ನೋಟ್ ಅಮಾನ್ಯೀಕರಣಗೊಳಿಸಿದ್ದನ್ನು ಅಂದು ವಿರೋಧಿಸಿದಕುಂಬಳಕಾಯಿ ಕಳ್ಳರೇ ಇಂದು ಪೆಗಾಸಸ್ ಕಂಡು ಬೆಚ್ಚಿಬೀಳುತ್ತಿದ್ದಾರೆ. ವೀರಪ್ಪನ್ ಹತನಾದ, ಅರ್ಬನ್ ವೀರಪ್ಪನ್‌ಗಳು ಹೆಚ್ಚಾಗುತ್ತಿದ್ದಾರೆ.