ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಬೆನ್ನೇರಿ
ಪ್ರಸ್ತುತ
ಗಣೇಶ್ ಭಟ್, ವಾರಾಣಸಿ
@.
ಹೂಡಿಕೆ ಹಿಂಪಡೆತ, ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ನಗದೀಕರಣ, ಸರಕಾರ-ಖಾಸಗೀ ಸಹಭಾಗಿತ್ವ ಮೊದಲಾದ ನಡೆಗಳು ದೇಶದ ZಚಿeqsZಜZಠಿಃqsZeಟಟ.ಟ.ಜ್ಞಿ ಆರ್ಥಿಕತೆಯನ್ನು ಬಲಿಷ್ಠಗೊಳಿಸುತ್ತಿವೆ. 30 ವರ್ಷಗಳ ಮೊದಲು ಆರ್ಥಿಕತೆಯಲ್ಲಿ ಭಾರತಕ್ಕಿಂತ ಹಿಂದಿದ್ದ ಚೀನಾ ಈಗ ಎರಡನೇ ದೊಡ್ಡ ಆರ್ಥಿಕ ಶಕ್ತಿ!
ದೇಶದ ಪ್ರಧಾನಿ ನರೇಂದ್ರ ಮೋದಿ ೨೦೧೯ರಲ್ಲಿ ಸ್ವಾಂತಂತ್ರ್ಯೋವದ ದಿನದಂದು ಕೆಂಪುಕೋಟೆಯಲ್ಲಿ ನಿಂತು ದೇಶವನ್ನುದ್ದೇಶಿಸಿ ಮಾತನಾಡುತ್ತ ೨೦೨೪-೨೫ರ ಒಳಗಾಗಿ ದೇಶವನ್ನು ೫ ಟ್ರಿಲಿಯನ್ ಡಾಲರ್ ಗಳ (೫ ಲಕ್ಷ ಕೋಟಿ ಡಾಲರ್‌ಗಳು) ಆರ್ಥಿಕತೆಯನ್ನು ಹೊಂದಿದ ದೇಶವನ್ನಾಗಿಸುವ ಆಶಯದ ಮಾತು ಗಳನ್ನಾಡಿದ್ದರು. ೨೦೧೪ರಲ್ಲಿ ದೇಶದ ಒಟ್ಟು ಜಿಡಿಪಿ ೨ ಟ್ರಿಲಿಯನ್ ಡಾಲರ್‌ಗಳಷ್ಟಿತ್ತು.
೨೦೧೯ ನೆಯ ಇಸವಿಯನ್ನು ತಲುಪುವಾಗ ದೇಶದ ಆರ್ಥಿಕತೆ ೩ ಟ್ರಿಲಿಯನ್ ಡಾಲರ್‌ಗಳನ್ನು ಸಮೀಪಿಸಿತ್ತು. ಕೇವಲ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆಒಂದು ಟ್ರಿಲಿಯನ್ ಡಾಲರ್‌ಗಳಷ್ಟು ಏರಿರುವಾಗ ಮುಂದಿನ ೫ ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆ ಏರಲು ಸಮಸ್ಯೆಯಿಲ್ಲ ಎನ್ನುವುದು ಪ್ರಧಾನಿ ಸೇರಿ ದಂತೆ, ನೀತಿ ಆಯೋಗ ಹಾಗೂ ಆರ್ಥಿಕ ತಜ್ಞರ ಖಚಿತ ನಿಲುವಾಗಿತ್ತು. ೨೦೧೪ರಲ್ಲಿ ಬೃಹತ್ ಆರ್ಥಿಕತೆಯ ರಾಷ್ಟ್ರಗಳ ಪಟ್ಟಿಯಲ್ಲಿ ೧೦ನೇ ಸ್ಥಾನದಲ್ಲಿದ್ದ ಭಾರತ ೨೦೧೯ ನೇ ಇಸವಿಯನ್ನು ತಲುಪುವಾಗ ರಷ್ಯಾ, ಇಟೆಲಿ, ಬ್ರೆಜಿಲ, ಫ್ರಾನ್ಸ್, ಇಂಗ್ಲೆಂಡ್‌ಗಳನ್ನು ಹಿಂದಿಕ್ಕಿ ೫ನೇ ಸ್ಥಾನಕ್ಕೇರಿತ್ತು.
ಆದರೆ ಪ್ರಧಾನಿ ೫ ಟ್ರಿಲಿಯನ್ ಆರ್ಥಿಕತೆಯ ಮಾತುಗಳನ್ನಾಡುವ ಸಂದರ್ಭದಲ್ಲಿ ಕರೋನಾ ಮಹಾಮಾರಿಯ ಸಮಸ್ಯೆ ಇನ್ನೂ ಶುರು ಆಗಿರಲಿಲ್ಲ. ಆದರೆ, ಕರೋನಾದ ಅಲೆಗೆ ಸಿಲುಕಿದ ಭಾರತ ಸೇರಿದಂತೆ ಇಡೀ ಪ್ರಪಂಚದ ಆರ್ಥಿಕತೆಯೇ ಕುಸಿತ ಕಂಡಿತು. ಕರೋನಾದ ಲಾಕ್‌ಡೌನ್ ಭಾರತದ ದೇಶೀಯ ಉತ್ಪಾದನೆ, ದೇಶೀಯ ಖರೀದಿ, ಉದ್ಯೋಗ , ನಿರ್ಯಾತ ಮೊದಲಾದವುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ೨೦೨೦-೨೧ರಲ್ಲಿ ದೇಶದ ಅಭಿವೃದ್ಧಿ ದರವನ್ನು ಮೈನಸ್ ೭.೩ಕ್ಕೆ ಇಳಿಸಿತು. ಹೆಚ್ಚೂಕಮ್ಮಿ ಮೂರು ಟ್ರಿಲಿಯನ್ ಡಾಲರ್ ನಷ್ಟು ಇದ್ದ ದೇಶೀಯ ಉತ್ಪಾದನೆ ೨.೭ ಟ್ರಿಲಿಯನ್ ಡಾಲರ್‌ಗೆ ಕುಸಿಯಿತು.
ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಹೆಚ್ಚು ಸಾವು ನೋವುಗಳು ಸಂಭವಿಸಿದರೂ ಅದಾಗಲೇ ವ್ಯಾಕ್ಸಿನೇಶನ್ ಪ್ರಕ್ರಿಯೆ ಆರಂಭವಾಗಿದ್ದ ಕಾರಣ ಸೋಂಕು ನಿಯಂತ್ರಣಕ್ಕೆ ಬಂತು. ಇದೀಗ ಮೂರನೆಯ ಅಲೆಯು ಚಾಲ್ತಿಯಲ್ಲಿದ್ದು ದಿನವೊಂದರ ಹೊಸ ಕರೋನಾ ಕೇಸುಗಳ ಸಂಖ್ಯೆ ೩ ಲಕ್ಷದ ಆಸುಪಾಸಿನಲ್ಲಿದ್ದರೂ ರೋಗಿಗಳು ಆಸ್ಪತ್ರೆಗಳಲ್ಲಿ ಕಿಕ್ಕಿರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಸಾವಿನ ಪ್ರಮಾಣವೂ ಹೆಚ್ಚಾಗಿಲ್ಲ. ದೇಶದ ವ್ಯಯಸ್ಕ ಜನಸಂಖ್ಯೆಯ ಶೇ.೭೫ ಜನರಿಗೆ ಎರಡು ಡೋಸ್ ವ್ಯಾಕ್ಸಿನೇಶನ್ ಹಾಗೂ ಶೇ.೯೬ ಜನರಿಗೆ ಕನಿಷ್ಠ ಒಂದು ಡೋಸ್ ವ್ಯಾಕ್ಸಿನೇಶನ್ ಆಗಿರುವ ಕಾರಣ ಕರೋನಾ ಸೋಂಕು ಹೆಚ್ಚಿದ್ದರೂ ದುಷ್ಪರಿಣಾಮ ಹೆಚ್ಚಾಗಿಲ್ಲ.
ಇದೀಗ ೧೫ ರಿಂದ ೧೭ ವಯಸ್ಸಿನ ಒಳಗಿನ ಮಕ್ಕಳಿಗೂ ವ್ಯಾಕ್ಸಿನೇಶನ್ ಆಗುತ್ತಿದೆ ಹಾಗೂ ೬೦ ಮೇಲ್ಪಟ್ಟವರಿಗೆ ಮೂರನೆಯ ಡೋಸ್ ಅನ್ನು ಕೂಡ ಕೊಡಲಾ ಗುತ್ತಿದೆ. ಭಾರತದ ಕೋವಿಡ್ ಲಸಿಕೀಕರಣದ ಸುವ್ಯವಸ್ಥೆಯು ಜಗತಿಕವಾಗಿ ಶ್ಲಾಘಿಸಲ್ಪಡುತ್ತಿದ್ದು ಕರೋನಾ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ದೇಶದ ಆರ್ಥಿ ಕತೆಯೂ ಸಹಜವಾಗಿಯೇ ಚಿಗಿತುಕೊಳ್ಳಲು ಆರಂಭಿಸಿದೆ. ಕರೋನಾ ಕಾಲದಲ್ಲಿ ಕುಸಿದಿದ್ದ ಭಾರತದ ಆರ್ಥಿಕತೆಯು ಇಂಗ್ಲಿಷ್ ವರ್ಣಮಾಲೆಯ ‘ವಿ’ ಅಕ್ಷರದಂತೆ ಪುನಃ ಮೇಲೆ ಬಂದಿದೆ.
ಇದೀಗ ಭಾರತದ ಆರ್ಥಿಕ ಬೆಳವಣಿಗೆಯ ದರವು ವಿಶ್ವದ ಅತೀ ವೇಗವಾಗಿದೆ. ೨೦೨೧- ೨೨ರಲ್ಲಿ ಭಾರತದ ಅಭಿವೃದ್ಧಿ ದರ ಶೇ.೯.೨ರಷ್ಟು ಇರಬಹುದು ಎಂದು ‘ದ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್’ ಹೇಳಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಶೇ.೯.೫ ಪ್ರಗತಿ ದರವನ್ನು ಊಹಿಸಿದೆ. ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ ಕೂಡ ಭಾರತದದಲ್ಲಿ ಶೇ.೯.೫ ಅಭಿವೃದ್ಧಿ ದರವನ್ನು ನಿರೀಕ್ಷಿಸುತ್ತಿದೆ. ಇದೇ ಅವಧಿಯಲ್ಲಿ ಅಮೆರಿಕದ ಅಭಿವೃದ್ಧಿ ದರವು ಶೇ.೪ದ ಆಸುಪಾಸಿನಲ್ಲಿರಲಿದೆ.ಚೀನಾದ ಅಭಿವೃದ್ಧಿ ದರ ಶೇ.೫, ಜಪಾನ್ ಶೇ.೨.೯, ಯುರೋಪ್ ಶೇ.೪.೨, ಬ್ರೆಜಿಲ್ ಶೇ.೧.೫ ಹೀಗೆ ಜಗತ್ತಿನ ಇತರ ಎಲ್ಲ ರಾಷ್ಟ್ರಗಳ ಅಭಿವೃದ್ಧಿದರಗಳುಭಾರತಕ್ಕಿಂತ ತೀರಾ ಹಿಂದಿವೆ.
ಈಗ ಭಾರತದ ಒಟ್ಟು ದೇಶೀಯ ಉತ್ಪನ್ನಗಳ ಮೊತ್ತ ೩.೧ ಟ್ರಿಲಿಯನ್ ಡಾಲರ್ (೩.೧ ಲಕ್ಷ ಕೋಟಿ ಡಾಲರ್) ಗಳನ್ನು ತಲುಪಿದೆ. ಕೋವಿಡ್ ಕಾಲದಲ್ಲಿ ೨.೭ ಟ್ರಿಲಿಯನ್ ಗಳಿಗೆ ಕುಸಿದಿದ್ದ ದೇಶದ ದೇಶೀಯ ಉತ್ಪಾದನೆ ಪುನಃ ೪೦೦ ಶತಕೋಟಿ ಡಾಲರ್ ಗಳಷ್ಟು ಹೆಚ್ಚಾಗಿ ೩.೧ ಟ್ರಿಲಿಯನ್ ಡಾಲರ್‌ಗಳಿಗೆ ಏರಿರುವುದುಭಾರತದ ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ ಪೂರಕವಾಗಿಯೇ ಇದೆ. ಭಾರತದಲ್ಲಿ ಮೂಲಭೂತ ಸೌಕರ್ಯ ಕ್ಷೇತ್ರ ದಗುತ್ತಿರುವ ಬದಲಾವಣೆ ದೇಶದ ಆರ್ಥಿಕ ಸುಧಾರಣೆಯ ತಳಹದಿಯಾಗಿದೆ.
ಭಾರತದಲ್ಲಿ ರಸ್ತೆ ಸಂಪರ್ಕ, ರೈಲ್ವೇ ಹಾಗೂ ವಾಯುಯಾನ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗುತ್ತಿದೆ. ಭಾರತ್ ಮಾಲಾ ರಸ್ತೆ ಯೋಜನೆ ಇಡೀ ದೇಶವನ್ನು ರಸ್ತೆ ಮಾರ್ಗದ ಮೂಲಕ ಬೆಸೆದರೆ, ಸಾಗರಮಾಲಾ ಯೋಜನೆ ದಕ್ಷಿಣ ಭಾರತದ ಎಲ್ಲ ನಗರಗಳನ್ನು ಹಾಗೂ ಬಂದರುಗಳನ್ನು ರಸ್ತೆ ಹಾಗೂ ಸಮುದ್ರ ಮಾರ್ಗವಾಗಿ ಬೆಸೆಯುತ್ತಿದೆ. ೨೦೧೪ರಲ್ಲಿ ದೇಶದಲ್ಲಿ ದಿನವೊಂದಕ್ಕೆ ಸರಾಸರಿ ೬ ಕಿಲೋಮೀಟರ್‌ಗಳಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿತ್ತು. ೨೦೨೦-೨೧ರಲ್ಲಿ ಭಾರತದಲ್ಲಿ ದಿನವೊಂದಕ್ಕೆ ಸರಾಸರಿ ೩೬.೫ ಕಿಲೋಮೀಟರ್‌ಗಳಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ.
೨೦೧೩-೧೪ ರಲ್ಲಿ ದೇಶದಲ್ಲಿ ೯೧೨೮೭ ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಇದ್ದಿದ್ದು, ೨೦೨೦-೨೧ ರಲ್ಲಿ ದೇಶದಲ್ಲಿ ಲಭ್ಯವಿದ್ದ ರಾಷ್ಟ್ರೀಯ ಹೆದ್ದಾರಿಯ ಉದ್ದ ೧,೫೧,೦೦೦ ಕಿಲೋಮೀಟರ್‌ಗಳಿಗೆ ಏರಿದೆ. ಕಳೆದ ೭ ವರ್ಷಗಳಲ್ಲಿ ದೇಶದಲ್ಲಿ ಹೊಸದಾಗಿ ೬೦ ಸಾವಿರ ಕಿಲೋಮೀಟರ್ ಗಳಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡಿದೆ. ಇದೀಗ ನಮ್ಮ ದೇಶದಲ್ಲಿ ಒಟ್ಟು ೨೦೩೭ ಕಿಲೋಮೀಟರ್ ಉದ್ದದ ನಾಲ್ಕು ನಾಲ್ಕು ಅಥವಾ ಹೆಚ್ಚು ಪಥಗಳ ೧೯ಎಕ್ಸ್‌ಪ್ರೆಸ್ ವೇ( ಕ್ಷಿಪ್ರಪಥ)ಗಳು ನಿರ್ಮಾಣ ಆಗಿವೆ. ಇವುಗಳಲ್ಲಿ ೬ ಎಕ್ಸ್‌ಪ್ರೆಸ್ ವೇ ಗಳು ಉತ್ತರಪ್ರದೇಶದ ಮೂಲಕ ಹಾದು ಹೋಗುತ್ತವೆ.
೨೦೧೭ ರಲ್ಲಿ ದೇಶದಲ್ಲಿ ಕೇವಲ ೨೦೦ ಕಿಲೋಮೀಟರ್‌ಗಳ ಎಕ್ಸ್‌ಪ್ರೆಸ್‌ರಸ್ತೆಗಳಿದ್ದವು. ಈಗ ದೇಶಾದ್ಯಂತ ೨೯ ಎಕ್ಸ್‌ಪ್ರೆಸ್ ವೇ ಗಳ ನಿರ್ಮಾಣ ಕಾರ್ಯನಡೆಯುತ್ತಿದುದ್ದು ಇವುಗಳಲ್ಲಿ ಶೇ.೭೫ ರಸ್ತೆ ಯೋಜನೆಗಳು ೨೦೨೨ರ ಒಳಗಡೆ ಸಂಪೂರ್ಣವಾಗಲಿವೆ. ಇವುಗಳಲ್ಲಿ ಬೆಂಗಳೂರು ಹಾಗೂ ಮೈಸೂರು ನಡುವಿನ ದಶಪಥ ರಸ್ತೆಯೂ ಒಂದು. ೨೦೨೪ರ ಒಳಗೆ ದೇಶದಲ್ಲಿ ಸುಮಾರು ೧೨೫೦೦ ಕಿಲೋಮೀಟರ್‌ಗಳಷ್ಟು ಉದ್ದದ ಕ್ಷಿಪ್ರಪಥಗಳು ಇರಲಿವೆ.
ರಸ್ತೆಗಳು ಜನರ ಓಡಾಟಕ್ಕೆ, ವಸ್ತುಗಳ ಸಾಗಾಟಕ್ಕೆ, ಕೈಗಾರಿಕಾ ಕಚ್ಚಾ ವಸ್ತುಗಳ ಪೂರೈಕೆಗೆ ಹೆಚ್ಚು ಅನುಕೂಲವಾಗುತ್ತದೆ. ಕ್ಷಿಪ್ರ ಪಥಗಳು ಪ್ರಯಾಣದ ಸಮಯ ವನ್ನು ಕಡಿಮೆಗೊಳಿಸುತ್ತವೆ ಹಾಗೂ ದೇಶದ ಆರ್ಥಿಕ ಪ್ರಗತಿಯ ವೇಗವನ್ನು ಹೆಚ್ಚಿಸುತ್ತವೆ. ಭಾರತೀಯರ ಇನ್ನೊಂದು ಪ್ರಧಾನ ಪ್ರಯಾಣದ ಮಾಧ್ಯಮವಾದ ಭಾರತೀಯ ರೈಲ್ವೆಯಲ್ಲೂ ಮಹತ್ತರ ಬದಲಾವಣೆಯಾಗಿದೆ. ದೇಶದ ೬೪,೬೮೯ ಕಿಲೋಮೀಟರ್ ಉದ್ದದ ಬ್ರಾಡ್‌ಗೇಜ್ ರೈಲ್ವೇ ಹಳಿಗಳಲ್ಲಿ ೪೫೮೮೧ (ಶೇ.೭೧) ಕಿಲೋಮೀಟರ್ ಹಳಿಗಳು ವಿದ್ಯುದೀಕರಣಗೊಂಡಿವೆ. ೨೦೧೪ನೇ ಇಸವಿಯವರೆಗೆ ದೇಶದಲ್ಲಿ ೨೧,೮೦೧ ಕಿಲೋಮೀಟರ್ ಬ್ರಾಡ್ ಗೇಜ್ ಹಳಿಗಳು ವಿದ್ಯುದೀಕರಣಗೊಂಡಿದ್ದು, ಕಳೆದ ೭ ವರ್ಷಗಳಲ್ಲಿ ದಾಖಲೆಯ ೨೪,೦೮೦ ಕಿಲೋಮೀಟರ್ ಹಳಿಗಳು ವಿದ್ಯುದೀಕರಣಗೊಂಡಿವೆ.
೨೦೨೩ರ ಒಳಗೆ ದೇಶದ ಎಲ್ಲ ಬ್ರಾಡ್‌ಗೇಜ್ ಹಳಿಗಳು ವಿದ್ಯುತ್ ಸಂಪರ್ಕ ಹೊಂದಲಿದೆ. ವೇಗದ ರೈಲುಗಳಾದ ತೇಜಸ್, ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಪರಿಚಯಿಸಲ್ಪಟ್ಟಿವೆ. ಈಶಾನ್ಯ ರಾಜ್ಯಗಳನ್ನು ಮೊದಲ ಬಾರಿಗೆ ಭಾರತೀಯ ರೈಲ್ವೇ ತಲುಪುತ್ತಿದೆ. ಅಹಮ್ಮದಾಬಾದ್ ಹಾಗೂ ಮುಂಬಯಿ ನಡುವಿನ ಬುಲೆಟ್ ಟ್ರೈನ್ ಯೋಜನೆ ಕಾರ್ಯಗತವಾಗುತ್ತಿದೆ. ದೇಶದ ೧೩ ನಗರಗಳಲ್ಲಿ ಮೆಟ್ರೋ ರೈಲುಗಳು ಓಡುತ್ತಿದ್ದು, ೯ ನಗರಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ೪ ನಗರಗಳಲ್ಲಿ ಮೆಟ್ರೋ ಕಾಮಗಾರಿಗೆ ಅನುಮತಿ ದೊರೆತಿದೆ ಹಾಗೂ ಇನ್ನೂ ೧೪ ನಗರಗಳು ಮೆಟ್ರೋ ರೈಲಿಗೆ ಪ್ರಸ್ತಾವನೆ ಸಲ್ಲಿಸಿವೆ.
ದೇಶದಲ್ಲಿಂದು ೧೩೭ ಪ್ರಯಾಣಿಕರ ವಿಮಾನ ನಿಲ್ದಾಣಗಳಿದ್ದು, ೭೨ ನಿಲ್ದಾಣಗಳನ್ನು ಕಳೆದ ೭ ವರ್ಷಗಳಲ್ಲಿ ನಿರ್ಮಿಸಲಾಗಿದೆ. ಭಾರತವು ಹೂಡಿಕೆದಾರರ ಆಕರ್ಷಣೆಯ ತಾಣವಾಗಿ ಮೂಡಿಬರುತ್ತಿದೆ. ಇಲ್ಲಿ ಹೂಡಿಕೆ ಹಾಗೂ ವಹಿವಾಟು ನಡೆಸಲು ಬಹಳ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತಿದ್ದು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಪಟ್ಟಿಯಲ್ಲಿ ೧೪೨ ನೇ ಸ್ಥಾನದಲ್ಲಿದ್ದ ಭಾರತ ೭೯ ಸ್ಥಾನಗಳಷ್ಟು ಮೇಲೇರಿ ೬೩ ನೇ ಸ್ಥಾನಕ್ಕೆ ಬಂದಿದೆ. ಅತೀ ಹೆಚ್ಚು ನೇರ ವಿದೇಶೀಹೂಡಿಕೆಯನ್ನು ಪಡೆಯುವ ಟಾಪ್ ೫ ದೇಶಗಳ ಪಟ್ಟಿಯಲ್ಲಿ ಭಾರತವು ಸ್ಥಾನ ಗಳಿಸಿದೆ. ೨೦೨೦-೨೧ ರಲ್ಲಿ ಭಾರತವು ೮೧.೭೨ ಶತಕೋಟಿ ಡಾಲರ್‌ಗಳವಿದೇಶೀ ಹೂಡಿಕೆ ಆಕರ್ಷಿಸಿದೆ. ಭಾರತದ ವಿದೇಶೀ ವಿನಿಮಯ ಸಂಗ್ರಹ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡು ೬೩೪.೯೬ ಶತಕೋಟಿ ಡಾಲರ್‌ಗಳಿಗೆಏರಿದೆ.
ದೇಶದಲ್ಲಿ ಉದ್ಯಮಾವಕಾಶಗಳು ಹೆಚ್ಚಾಗಿದ್ದು ದೇಶದಲ್ಲಿ ಈಗ ಸುಮಾರು ೫೩,೦೦೦ ನವೋದ್ಯಮಗಳು (ಸ್ಟಾರ್ಟಪ್) ಹೊಸದಾಗಿ ಆರಂಭವಾಗಿವೆ. ೮೪ ಸ್ಟಾರ್ಟಪ್‌ಗಳು ಯುನಿಕಾರ್ನ್ ಸ್ಟಾರ್ಟ್ ಅಪ್ (ನೂರು ಕೋಟಿ ಡಾಲರ್ ಮೌಲ್ಯಕ್ಕಿಂತ ಹೆಚ್ಚು ಮೌಲ್ಯದ ನವೋದ್ಯಮ)ಗಳಾಗಿ ಬೆಳೆದು ನಿಂತಿವೆ. ೨೦೨೧-೨೨ ರಲ್ಲಿ ಇದುವರೆಗೆ ಭಾರ ತೀಯ ಸ್ಟಾರ್ಟಪ್‌ಗಳು ೨೧ ಶತಕೋಟಿ ಡಾಲರ್ ಗಳಷ್ಟು ವಿದೇಶೀ ಹೂಡಿಕೆಯನ್ನು ಪಡೆದಿವೆ. ಭಾರತವು ೫ ಟ್ರಿಲಿಯನ್ ಡಾಲರ್‌ಗಳ ಆರ್ಥಿಕತೆಯನ್ನು ತಲುಪಲು ತನ್ನ ನಿರ್ಯಾತವನ್ನು ಹೆಚ್ಚಿಸಬೇಕಾಗಿದ್ದು ನಿರ್ಯಾತದ ಮೊತ್ತವು ವಾರ್ಷಿಕವಾಗಿ ಒಂದು ಟ್ರಿಲಿಯನ್ ಡಾಲರ್‌ಗಳನ್ನು ತಲುಪಬೇಕುಎಂದು ಅರ್ಥಶಾಸಜ್ಞರು ಹೇಳುತ್ತಾರೆ. ಇದಕ್ಕಾಗಿ ಭಾರತದಲ್ಲಿ ಉತ್ಪಾದನೆ ಹಾಗೂ ನಿರ್ಯಾತಕ್ಕೆ ಬಹಳ ಉತ್ತೇಜನವನ್ನು ನೀಡಲಾಗುತ್ತಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತದ ವಸ್ತುಗಳನ್ನು ಉತ್ಪಾದಿಸಿ ವಿದೇಶಗಳಿಗೆ ನಿರ್ಯಾತ ಮಾಡುವ ಅವಕಾಶವನ್ನು ದೇಶೀಯ ಹಾಗೂವಿದೇಶೀ ಹೂಡಿಕೆದಾರರಿಗೆ ಕೊಡಲಾಗುತ್ತಿದೆ. ಉತ್ಪಾದನೆಗೆ ಪ್ರೋತ್ಸಾಹ ಕೊಡುವ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ/ ಉತ್ಪಾದನಾಧಾರಿತ ಪ್ರೋತ್ಸಾಹಧನ) ಯೋಜನೆಯನ್ನು ಸರಕಾರ ಜರಿಗೊಳಿಸಿದೆ. ದೇಶೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿವೆ. ಈ ಯೋಜನೆಯಡಿಯಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್ ಮೊಬೈಲ್ ಉತ್ಪಾದಕ ಸಂಸ್ಥೆ ಗಳು ಈ ವರ್ಷ ೫ ಶತಕೋಟಿ ಡಾಲರ್ (೩೭೦೦೦ ಕೋಟಿ ರುಪಾಯಿಗಳು) ಮೊತ್ತದ ಮೊಬೈಲ್ ಫೋನ್‌ಗಳನ್ನು ಭಾರತ ಉತ್ಪಾದನೆ ಮಾಡಿ ವಿದೇಶಗಳಿಗೆ ನಿರ್ಯಾತ ಮಾಡಿವೆ.
ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ಸ್, ಟೆಕ್ಸ್ ಟೈಲ್ಸ್, ಫಾರ್ಮಾಸ್ಯೂಟಿಕಲ್ಸ್, ಸೋಲಾರ್, ಆಧುನಿಕ ರಾಸಾಯನಿಕ ಬ್ಯಾಟರಿ, ಟೆಲಿಕಾಂ ಮತ್ತು ನೆಟ್‌ವರ್ಕ್ ಮೊದಲಾದ ೧೦ ಕ್ಷೇತ್ರಗಳ ಉತ್ಪಾದನಾ ಚಟುವಟಿಕೆಗಳಿಗೆ ಉತ್ಪಾದನಾಧಾರಿತ ಸಹಾಯಧನವನ್ನು ಕೊಡಲು ಭಾರತ ಸರಕಾರವು ೧.೧೦ ಲಕ್ಷ ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಇದೀಗ ಪಿಎಲ್‌ಐ ಯೋಜನೆಯಡಿಯಲ್ಲಿ ಸೆಮಿಕಂಡಕ್ಟರ್ ಹಾಗೂ ಚಿಪ್‌ಗಳ ಉತ್ಪಾದನೆಗೆ ಪ್ರೋತ್ಸಾಹಧನವಾಗಿ ೭೬,೦೦೦ ಕೋಟಿರುಪಾಯಿಗಳನ್ನು ನೀಡಲು ಸರಕಾರ ನಿರ್ಧರಿಸಿದೆ.
೨೦೨೧-೨೨ ರ ಭಾರತದ ನಿರ್ಯಾತದ ಪ್ರಮಾಣ ಸಾರ್ವಕಾಲಿಕ ಮಟ್ಟವನ್ನು ಮುಟ್ಟಿದೆ. ಈ ಆರ್ಥಿಕ ವರ್ಷದ ಮೊದಲ ೯ ತಿಂಗಳುಗಳಲ್ಲಿ ೩೦೦ ಶತಕೋಟಿಡಾಲರ್‌ಗಳಷ್ಟು ಮೊತ್ತದ ಸರಕು ಮತ್ತು ಸೇವೆಗಳನ್ನು ನಿರ್ಯಾತ ಮಾಡಲಾಗಿದೆ. ಜನವರಿ ೨೨ ರಿಂದ ಮಾರ್ಚ್ ೨೨ ರ ವರೆಗಿನ ೩ ತಿಂಗಳ ಅವಧಿಯಲ್ಲಿ ಇನ್ನೂ ೧೦೦ ಶತಕೋಟಿ ಡಾಲರ್ ಪ್ರಮಾಣದ ನಿರ್ಯಾತ ನಡೆಯಲಿದ್ದು ಈ ವರ್ಷ ಒಟ್ಟಾಗಿ ೪೦೦ ಶತಕೋಟಿ ಡಾಲರ್‌ಗಳಷ್ತು ಮೌಲ್ಯದ ನಿರ್ಯಾತ ವಾಗಲಿದೆ. ಈ ವರ್ಷದಲ್ಲಿ ಈಗಾಗಲೇ ಭಾರತದ ಐಟಿ ಕಂಪನಿಗಳು ೧೪೮.೩ ಶತಕೋಟಿ ಡಾಲರ್ ಗಳಷ್ಟು ಮೌಲ್ಯದ ಐಟಿ ಸೇವೆಗಳನ್ನು ರಫ್ತು ಮಾಡಿವೆ.ಇದು ಸೌದೀ ಅರೇಬಿಯಾಗೆ ವಾರ್ಷಿಕವಾಗಿ ತೈಲ ರಫ್ತಿನ ಆದಾಯಕ್ಕಿಂತಲೂ ಹೆಚ್ಚು.
ಕೃಷಿ ಉತ್ಪಾದನಾ ವಸ್ತುಗಳ ಮೌಲ್ಯವರ್ಧನೆ ಹಾಗೂ ನಿರ್ಯಾತಕ್ಕೆ ಹೆಚ್ಚು ಪ್ರೋತ್ಸಾಹ ಕೊಡಲಾಗುತ್ತಿದೆ. ಸರಕಾರದ ಯೋಜನೆಗಳ -ಲವಾಗಿ ರೈತರಆದಾಯವೂ ದ್ವಿಗುಣವಾಗುತ್ತಿದೆ. ಕರೋನಾ ಅಲೆಗಳ ದಾಳಿಯ ನಡುವೆಯೂ ದೇಶದ ಹಣ ದುಬ್ಬರ ನಿಯಂತ್ರಣದಲ್ಲಿದ್ದು ಶೇ.೫ರ ಆಸುಪಾಸಿನಲ್ಲಿದೆ. ಹೂಡಿಕೆ ಹಿಂಪಡೆತ, ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ನಗದೀಕರಣ, ಸರಕಾರ-ಖಾಸಗೀ ಸಹಭಾಗಿತ್ವ ಮೊದಲಾದ ನಡೆಗಳು ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸುತ್ತಿವೆ.
೩೦ ವರ್ಷಗಳ ಮೊದಲು ಆರ್ಥಿಕತೆಯಲ್ಲಿ ಭಾರತಕ್ಕಿಂತ ಹಿಂದಿದ್ದ ಚೀನಾ ಈಗ ಜಗತಿಕವಾಗಿ ಎರಡನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು ಹೇಗೆ? ಆರ್ಥಿಕ ಸುಧಾರಣೆಗಳ ಫಲವಾಗಿ ಚೀನಾ ಸತತವಾಗಿ ಶೇ.೯ ಅಭಿವೃದ್ಧಿ ದರವನ್ನು ಕಾಯ್ದುಕೊಳ್ಳುತ್ತಲೇ ಹೋಯಿತು. ಇದರ ಪರಿಣಾಮ ಈಗ ಚೀನಾ ಬೃಹತ ಆರ್ಥಿಕ ಶಕ್ತಿಯಾಗಿ ಗುರುತಿಸಿಕೊಂಡಿದೆ. ಈ ವರ್ಷ ಭಾರತವು ಸಾಧಿಸಿದ ಶೇ.೯.೨ ಅಭಿವೃದ್ಧಿ ದರವನ್ನು ಮುಂದಿನ ಕೆಲವು ವರ್ಷಗಳವರೆಗೆ ಕಾಯ್ದುಕೊಂಡರೆ ಭಾರತವು ೨೦೨೪-೨೫ ರಲ್ಲಿ ೫ ಟ್ರಿಲಿಯನ್ ಡಾಲರಗಳ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುವುದು ಮಾತ್ರವಲ್ಲ, ೨೦೩೦ ರಲ್ಲಿ ೧೦ ಟ್ರಿಲಿಯನ್ ಡಾಲರ್‌ಗಳ ಆರ್ಥಿಕ ಶಕ್ತಿಯಾಗಿ ಬೆಳೆದು ಜಗತಿಕವಾಗಿ ೩ ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ.