ನಾಳೆ ಕ್ಯಾನ್ಸರ್‌ ದಿನ : ಆರೈಕೆಯ ಅಂತರ ಕೊನೆಗಾಣಿಸುವುದು ಅಗತ್ಯ
ತನ್ನಿಮಿತ್ತ
ಡಾ.ಮನೋಹರ ಅಗ್ನಾನಿ
‘ಕ್ಯಾನ್ಸರ್’ ಪದ ಕೇಳಿದರೇ ಸಾಕು ಬೆನ್ನುಮೂಳೆಯಲ್ಲಿ ನಡುಕ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಹಾಗೂ ಕ್ಯಾನ್ಸರ್ ರೋಗಿಗಳನ್ನು ಆರೈಕೆ ಮಾಡುತ್ತಿರುವವರ ಮನಃಸ್ಥಿತಿ ಅವರ್ಣನೀಯ.
ರೋಗನಿರ್ಣಯ,ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ, ಕೀಮೋಥೆರಪಿ ಮತ್ತು ಉಪಶಮನದಂತಹ ಕ್ಯಾನ್ಸರ್ ಆರೈಕೆಯ ನಾನಾ ಹಂತಗಳಲ್ಲಿ ಅಂತರ ಇದ್ದರೆ, ಊಹಿಸ ಲಾಗದಷ್ಟು ಹತಾಶೆ ಉಂಟಾಗುತ್ತದೆ. ಈ ಹಿನ್ನೆಲೆ ಯಲ್ಲಿ ಈ ವರ್ಷದ ಧ್ಯೇಯ್ಯವಾಕ್ಯ ಪ್ರಸ್ತುತವಾಗಿದೆ. ಏಕೆಂದರೆ ಯಾವುದೇ ಆರೋಗ್ಯ ವ್ಯವಸ್ಥೆ ಆರೈಕೆಯ ಆದರ್ಶ ಮಾನದಂಡಗಳಿಗೆ ಸಂಪೂರ್ಣ ಒಗ್ಗಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಕೆಲವೊಮ್ಮೆ ವೈದ್ಯಕೀಯ ಸೌಲಭ್ಯಗಳ ಕೊರತೆ ಇರಬಹುದು ಅಥವಾ ಚಿಕಿತ್ಸೆ ಬಾರಿಯಾಗಿರಬಹುದು. ಕೆಲವೊಮ್ಮೆ, ಜನರ ಜೀವನಶೈಲಿ ಮತ್ತು ಪರಿಸರದಲ್ಲಿ ಕ್ಯಾನ್ಸರ್ ಅಪಾಯದ ಅಂಶಗಳು ಮಿತಿಮೀರಿರಬಹುದು ಮತ್ತು ಜನಸಾಮಾನ್ಯ ಆರೋಗ್ಯದ ಬಗ್ಗೆ ತೀವ್ರ ಕಾಳಜಿಯ ನಡವಳಿಕೆ ಸಹ ಒಂದು ಸವಾಲಾಗಿರ ಬಹುದು. ಕ್ಯಾನ್ಸರ್ ರೋಗಿಗಳಿಗೆ ಕೊನೆಯ ಹಂತದಲ್ಲಿ ಉಪಶಮನಕಾರಿ ಆರೈಕೆ ಒದಗಿಸುವ ಅಗತ್ಯವೂ ಇದೆ. ಪರಿಣಾಮ, ಕ್ಯಾನ್ಸರ್ ಆರೈಕೆಯ ಪ್ರತೀ ಹಂತ ದಲ್ಲೂ ನಿರೀಕ್ಷೆಗಳು ಮತ್ತು ವಾಸ್ತವ ಸನ್ನಿವೇಶಗಳ ನಡುವೆ ಅಂತರಗಳಿವೆ.
ಅವು ಕೆಲವೊಮ್ಮೆ ಹೆಚ್ಚೂ-ಕಡಿಮೆ ಆಗಿರಬಹುದು. ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಆರೋಗ್ಯ ನೀತಿ (2017), ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು (ಎಬಿ-ಎಚ್ ಡಬ್ಲ್ಯುಸಿ), ಪ್ರಧಾನಮಂತ್ರಿ- ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ), ಪ್ರಧಾನ ಮಂತ್ರಿ- ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂ ಎಸ್ ಎಸ್‌ವೈ) ಮತ್ತು ಕ್ಯಾನ್ಸರ್ ಕ್ಷೇತ್ರದಲ್ಲಿ ಮಾಡುತ್ತಿ ರುವ ವಿಶೇಷ ಪ್ರಯತ್ನಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ. ಎಬಿ-ಎಚ್‌ಡಬ್ಲ್ಯುಸಿ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರಕಾರ ರೂಪಿಸಿರುವ ಉತ್ತಮ ಕಾರ್ಯತಂತ್ರ.
ಪ್ರಧಾನ ಮಂತ್ರಿಯವರು ದೇಶದ ಎಲ್ಲ ಉಪ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಿದ್ದಾರೆ. ಇಂದು, ದೇಶದಲ್ಲಿ 89000 ಎಚ್‌ಡಬ್ಲ್ಯು ಸಿಗಳು ತಡೆಗಟ್ಟುವ, ಮೊದಲ ಮತ್ತು ಸಮಗ್ರ ಪ್ರಾಥಮಿಕಆರೋಗ್ಯ ಸೇವೆ ಒದಗಿಸುತ್ತಿವೆ. ಆಶಾ ಕಾರ್ಯಕರ್ತರು ಮತ್ತು ಎಎನ್‌ಎಂಗಳು 30 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಐದು ಪ್ರಮುಖ ಕಾಯಿಲೆಗಳಾದ ಅಽಕ ರಕ್ತದೊತ್ತಡ, ಮಧುಮೇಹ ಮತ್ತು ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಲು ಮನೆ-ಮನೆಗೆ ಭೇಟಿ ನೀಡು ತ್ತಾರೆ ಮತ್ತು ಕ್ಯಾನ್ಸರ್ ತಡೆಗಟ್ಟಲು ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
ಪರಿಣಾಮ, ಕ್ಯಾನ್ಸರ್ ಆರೈಕೆಯ ಆರಂಭಿಕ ಹಂತದಲ್ಲಿ ಅಂತರ ಕೊನೆಗಾಣಿಸಲು ಮಹತ್ತರ ಪ್ರಯತ್ನ ಮಾಡಲಾಗುತ್ತಿದೆ. ಇದು ಧನಾತ್ಮಕ ಫಲಿತಾಂಶಗಳನ್ನು ಸಹ ತೋರಿಸುತ್ತಿದೆ. ಕ್ಯಾನ್ಸರ್, ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯಕಾರ್ಯಕ್ರಮದ (ಎನ್‌ಪಿಸಿಡಿಸಿಎಸ್) ಮೂಲಕ ಕ್ಯಾನ್ಸರ್ ತಡೆಗಟ್ಟಲು ಮತ್ತು ನಿಯಂತ್ರಿಸಲು ದೇಶದಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಕಾರ್ಯ ಕ್ರಮದ ಉದ್ದೇಶ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
ಜನರು ತಮ್ಮ ಜೀವನಶೈಲಿ ಸುಧಾರಿಸಿಕೊಳ್ಳಲು ಪ್ರೋತ್ಸಾಹಿಸುವುದು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಜಿಲ್ಲೆ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ವಲ್ಲದ ರೋಗಗಳ (ಎನ್ಸಿಡಿ) ಚಿಕಿತ್ಸಾಲಯ ಸ್ಥಾಪಿಸುವುದು. ಜಿಲ್ಲೆ ಆಸ್ಪತ್ರೆಗಳಲ್ಲಿ ಸಿಟಿ-ಸ್ಕ್ಯಾನ್, ಎಂಆರ್‌ಐ, ಮ್ಯಾಮೊಗ್ರಫಿ ಮತ್ತು ಹಿಸ್ಟೋಪೆಥಾಲಜಿ ಸೇವೆ ಗಳನ್ನು ವಿಸ್ತರಿಸುವ ಮೂಲಕ, ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡುವಲ್ಲಿರುವ ಅಂತರವನ್ನು ಸಹ ನಿವಾರಿಸಲಾಗುತ್ತಿದೆ.
‘ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ ಮೂಲಕ, ಆಯ್ದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಜನಸಂಖ್ಯೆಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ದೇಶದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮತ್ತು ಜಿಲ್ಲೆ ಆಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸುವ ಪ್ರಧಾನ ಮಂತ್ರಿಯವರ ದೂರದೃಷ್ಟಿಯು ದ್ವಿತೀಯ ಹಂತದ ಆರೈಕೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಂತೆಯೇ, ತೃತೀಯ ಆರೈಕೆಯನ್ನು ವಿಸ್ತರಿಸಲು ಹಂತಹಂತವಾಗಿ ದೇಶದಲ್ಲಿ೨೨ಏಮ್ಸ್‌ಗಳನ್ನು ಸ್ಥಾಪಿಸಲಾಗುತ್ತಿದೆ.
‘ಟರ್ಷರಿ ಕ್ಯಾನ್ಸರ್ ಕೇರ್ ಸೆಂಟರ್ಸ್ ಸ್ಕೀಮ’ ಅಡಿಯಲ್ಲಿ ರಾಜ್ಯ ಕ್ಯಾನ್ಸರ್ ಸಂಸ್ಥೆ ಮತ್ತು ತೃತೀಯ ಕ್ಯಾನ್ಸರ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಅನುದಾನ ನೀಡಲಾಗುತ್ತದೆ. ಇದನ್ನು ಕ್ಯಾನ್ಸರ್ ರೋಗ ನಿರ್ಣಯ ಮತ್ತು ಚಿಕಿತ್ಸೆ, ಪರೀಕ್ಷೆಗಳನ್ನು ನಡೆಸುವುದು, ಸಂಶೋಧನೆ, ಉಪಶಮನ ಆರೈಕೆ ಒದಗಿಸುವುದು ಮತ್ತು ಕ್ಯಾನ್ಸರ್ ನೋಂದಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಳಸಬಹುದು. ಝಜ್ಜರ್(ಹರಿಯಾಣ)ನಲ್ಲಿ700ಹಾಸಿಗೆಗಳ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಮತ್ತುಕೋಲ್ಕತಾದಲ್ಲಿ460ಹಾಸಿಗೆಗಳ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯನ್ನು ಸಹ ಪ್ರಾರಂಭಿಸಲಾಗಿದೆ. ಈ ಎಲ್ಲ ಉಪಕ್ರಮಗಳು ಕ್ಯಾನ್ಸರ್ ಆರೈಕೆ ಯಲ್ಲಿಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ, ಕೀಮೋಥೆರಪಿ ಇತ್ಯಾದಿ ಕ್ಷೇತ್ರಗಳಲ್ಲಿನ ಅಂತರವನ್ನು ನಿವಾರಿಸಲು ಉಪಯುಕ್ತವಾಗಿವೆ.
ಕ್ಯಾನ್ಸರ್ ನಿಯಂತ್ರಣಕ್ಕೆ ದೇಶದಲ್ಲಿ ತೆಗೆದು ಕೊಳ್ಳುತ್ತಿರುವ ಕ್ರಮಗಳು ಐತಿಹಾಸಿಕವಾದುವು. ಈ ಉಪಕ್ರಮಗಳಲ್ಲಿ ಯಾವಾಗಲೂ ಸುಧಾರಣೆಗೆ ಅವಕಾಶ ವಿದ್ದರೂ, ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸುವ ರೀತಿಯಲ್ಲಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ದೊಡ್ಡ ಜವಾಬ್ದಾರಿ ದೇಶದ ಜನರ ಮೇಲಿದೆ, ವಿಶೇಷವಾಗಿ ಯುವಜನರ ಮೇಲಿದೆ. ಸಮತೋಲಿತ ಆಹಾರ ಸೇವಿಸುವುದು, ಯೋಗ ಮತ್ತು ವ್ಯಾಯಾಮವನ್ನು ಅಭ್ಯಾಸ ಮಾಡುವುದು, ತಂಬಾಕು ಮತ್ತು ಮದ್ಯದ ಸೇವನೆಯನ್ನು ತ್ಯಜಿಸುವುದು ಮುಂತಾದ ಜೀವನಶೈಲಿಯ ಬದಲಾವಣೆಗಳು ಈ ಉದ್ದೇಶ ಸಾಧಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿವೆ.ಇಂತಹ ಪ್ರಯತ್ನಗಳು ಅವರನ್ನು ಕ್ಯಾನ್ಸರ್‌ನ ಸಾಧ್ಯತೆಗಳಿಂದ ಉಳಿಸುವುದಲ್ಲದೆ, ಅಗತ್ಯವಿರುವ ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಮತ್ತು ಸಮಯೋಚಿತ ಸೇವೆಗಳನ್ನು ನೀಡಲು ಸಹಾಯ ಮಾಡುತ್ತವೆ. ಈ ವರ್ಷದ ‘ಕ್ಲೋಸ್ ದಿ ಕೇರ್ ಗ್ಯಾಪ್’ ಎಂಬ ಧ್ಯೇಯ್ಯವನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ.
(ಲೇಖಕರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ)