ದಾಸ- ಶರಣ ಸಾಹಿತ್ಯದ ಜಾಡು, ಹುಡುಕಿ ನೋಡು
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ನಾವು ಬೆಳೆದ ಪರಿಸರದ, ಸುತ್ತಲಿರುವ ಜನರ ರೀತಿ, ನೀತಿ, ಕೆಲಸಗಳು, ಆಡುವ ಮಾತು, ದ್ವೇಷ, ಜಗಳ, ಅಂತಃಕರಣ, ಔದಾರ್ಯಗಳೇ ಅಲ್ಲಿ ಬೆಳೆಯುವ ಮಕ್ಕಳಿಗೂ ಬರುತ್ತದೆ.
ಇವುಗಳನ್ನೇ ನಾವು ಜಾತಿ-ಧರ್ಮಗಳಾಗಿ ಪರಿವರ್ತಿಸಿಕೊಂಡಿದ್ದೇವೆ. ಮನುಷ್ಯ ಪರಿಸರದ ಮಗು ಎಂದೇ ಓದುತ್ತ ಬಂದಿದ್ದೇವೆ. ‘ನಾಲಿಗೆ ಕುಲವಂ ಪೇಳ್ವದು’ ಎನ್ನುವುದು ಅಷ್ಟೇ ದಿಟ. ಹಾಗೆ ನೋಡಿದರೆ ಒಂದೇ ರೀತಿ ಯೋಚಿಸುವವರದೇ ನಿಜವಾದ ಜಾತಿ ಎನಿಸುತ್ತದೆ. ನಮಗೊಲ್ಲದ, ನಮಗೆ ಒಗ್ಗದ ಅನೇಕ ವಿಷಯ ಗಳನ್ನು ಹೇಳುವವನನ್ನು ನಾವು ಹತ್ತಿರ ಸೇರಿಸುವುದಿಲ್ಲ. ಅವನಾಗಿ ಹತ್ತಿರ ಬಂದಾಗಲೂ ನಾವು ಜಾಗ ಖಾಲಿ ಮಾಡುತ್ತೇವೆ. ‘ಅಚ್ಚಿ ಬಂದ ವಸ್ತು, ವ್ಯಕ್ತಿ,ವಿಷಯಗಳನ್ನು ಮಚ್ಚಿಲೇ ಹೊಡೆದರೂ ಬಿಡಬಾರದು’ ಎಂಬ ಗಾದೆ ಮಾತೇ ನಮ್ಮ ಕಡೆ ಇದೆ.
ನಾನು ಹುಟ್ಟಿದ, ಬೆಳೆದ ವಾತಾವರಣ ಮಂತ್ರ, ಹವನ, ಹೋಮ, ಭೂರಿ ಭೋಜನದ ಬ್ರಾಹ್ಮಣ ಪರಿಸರದಲ್ಲಿ. ಹೀಗಾಗಿ ‘ದಾಸ ಸಾಹಿತ್ಯ’ ಬಾಲ್ಯದಿಂದಲೂ ನನ್ನನ್ನು ಸೆಳೆದ, ಪ್ರಭಾವ ಬೀರಿದ, ನಾನು ಆದರಿಸುವ ಸಾಹಿತ್ಯ ವಾಗಿ ಉಳಿದಿದೆ. ಹಾಗೆಂದು, ನನಗೆ ವಚನ ಸಾಹಿತ್ಯದಲ್ಲಿ ಆಸಕ್ತಿ ಇಲ್ಲ `ಎನ್ನುವಂತಿಲ್ಲ. ಶ್ರೀಸಿದ್ದಯ್ಯ ಪುರಾ ಣಿಕರು ಬರೆದ ‘ಶ್ರೀಶರಣ ಚರಿತಾಮೃತ’ ಪುಸ್ತಕದ ಅರವತ್ನಾಲ್ಕು ಪುರಾತನ ಶರಣರ ಸಾಹಿತ್ಯ ಜೀವನ ಚರಿತ್ರೆಗಳನ್ನು ಓದಿ, ಪ್ರತಿ ಸೋಮ ವಾರ ನಮ್ಮೂರ ‘ಬಸವದಳ’ ಎಂಬ ಸಂಸ್ಥೆ ಏರ್ಪಡಿಸುತ್ತಿದ್ದ ‘ಶಿವಾನುಭವ ಗೋಷ್ಠಿ’ಯಲ್ಲಿ ಪ್ರತಿವಾರ ನಾನು ಭಾಷಣ ಮಾಡುತ್ತಿದ್ದೆ.
ಇದು ನನ್ನ 1980-85ರ ವರ್ಷಗಳಲ್ಲಿ ನಾನು ಈ ಮಾತಿನ ಲೋಕಕ್ಕೆ ಕಾಲಿಡಲು ನಾಂದಿಯಾದ ವರ್ಷ. ಇದರಿಂದ ಪ್ರಭಾವಿತನಾದ ನಾನು, ನಮ್ಮ ವಿಪ್ರ ಸಮಾಜದ ವತಿಯಿಂದಲೂ ‘ದಾಸ ಗೋಷ್ಠಿ’ ಎಂಬ ಒಂದು ಕಾರ್ಯಕ್ರಮವನ್ನು ಪ್ರತಿ ಮಂಗಳವಾರ ಆರಂಭಿಸಿ ಅಲ್ಲಿ ದಾಸ ಸಾಹಿತ್ಯದ ವೈಶಿಷ್ಟ್ಯ, ದಾಸರ ಜೀವನ ಶೈಲಿ, ಅವರ ಕೃತಿಗಳ ಬಗ್ಗೆ ಮಾತನಾಡಲು ಪಂಡಿತರನ್ನು ವಿದ್ವಾಂಸರನ್ನು ವಿನಂತಿಸಿಕೊಂಡು ಅವರಿಂದ ಅನೇಕ ದಾಸ ಸಾಹಿತ್ಯದ ಮಹಾರತ್ನಗಳನ್ನು ಆಯ್ದು ಕೊಳ್ಳಲು ಪರಿಸರ ನಿರ್ಮಿಸಿಕೊಂಡೆ.
ಅದರಲ್ಲಿ ಕನಕದಾಸರ ಸಾಹಿತ್ಯದ ಅಂಶಗಳು ಆಚರಿಸಲು ಸುಲಭ ಎನಿಸುವಂತಿದ್ದವು. ದೇವರನ್ನು ಒಲಿಸಿಕೊಳ್ಳಲು ಸುಲಭಾತಿ ಸುಲಭ ದಾರಿ ತೋರಿಸಿದವರು ಕನಕದಾಸರು. ಅವರ ‘ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ’ ಎಂಬ ಮಾತು ‘ಹೌದಲ್ಲವೇ?’ ಎನಿಸಿತು. ‘ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿ ಗಳೇ? ಜನ್ಮ ಸಾರ್ಥಕಲ್ಲದವರೆಲ್ಲ ಭಾಗವತರೇ? ಜಪವ ಮಾಡಿದರೇನು ತಪವ ಮಾಡಿದರೇನು? ಕಪಟ ಗುಣ ವಿಪರೀತ ಕಲುವಿಷವಿದ್ದವರು’ ಹೀಗೆ ಅಂತರಂಗ ಬಹಿರಂಗ ವ್ಯಾಪಾರಗಳ ಗುಟ್ಟೆಲ್ಲವನ್ನು ಬಲ್ಲ ಕನಕದಾಸರು, ಒಣ ವೇದಾಂತ ಢಂಬಾಚಾರಗಳನ್ನೆಲ್ಲ ಬಿಚ್ಚಿಟ್ಟರು.
ಇವರ ಮುಂಡಿಗೆಗಳಂತೂ ಜಗತ್ಪ್ರಸಿದ್ಧ. ಅವು ತಾವು ಮೇಧಾವಿಗಳೆಂದು ಮೆರೆಯುವವರಿಗೆಲ್ಲ ಸವಾಲುಗಳೇ ಸರಿ. ಅದಕ್ಕೆ ಗಾದೆ ಮಾತೇ ಹುಟ್ಟಿಕೊಂಡು ಬಿಟ್ಟಿತು. ಅದೆಂದರೆ ಕನಕರನ್ನು ಕೆಣಕಬೇಡ, ಕೆಣಕಿ ತಿಣುಕಬೇಡ. ಅದಕ್ಕೆ ಕನಕದಾಸರೆಂದರೆ ‘ಬೂದಿ ಮುಚ್ಚಿದ ಕೆಂಡ, ಭಕ್ತಿಯ ಸಾಕಾರಮೂರ್ತಿ, ವಿಚಾರದ ವಿಶಾಲ ಸಾಗರ, ನಯ, ನಮ್ರತೆಗಳ ಅಕ್ಷಯ ನಿಧಿ’ ಎಂದೇ ಇತಿಹಾಸದಲ್ಲಿ ವಿರಾಜಮಾನರಾಗಿದ್ದಾರೆ. ಇನ್ನು ಜಗನ್ನಾಥದಾಸರು. ಇವರು ಬರೆದ ಕನ್ನಡ ಶ್ರೇಷ್ಠ ಶಾಸಕಾವ್ಯ ಹರಿಕಥಾಮೃತಸಾರ ಕನ್ನಡದಿಂದ ಸಂಸ್ಕೃತಕ್ಕೆ ಭಾಷಾಂತರವಾದ ಏಕಮೇವಶಾಸ್ತ್ರ. ದೇವರನ್ನು ಸ್ಮರಿಸಲು ಪಾಮರರಿಗೆ ಅತಿ ಸುಲಭ ಸೂತ್ರ ಹೇಳಿಕೊಟ್ಟು, ಹೇಗಾದರೂ ಅವನನ್ನು ಸ್ಮರಿಸಿ, ಅವನು ಕೇಳಿಯೇ ಕೇಳುತ್ತಾನೆ ಎಂದು ಜನರನ್ನು ಹುರಿದುಂಬಿಸಿದ ರೀತಿಯಿದೆಲ್ಲ, ಅದು ಬೇರಾವ ಭಾಷೆಯ ಭಕ್ತಿ ಸಾಹಿತ್ಯದಲ್ಲೂ ಇಲ್ಲ.
ಅದೆಂದರೆ ಜಗತ್ಪ್ರಸಿದ್ಧ ‘ಮಲಗಿ ಪಾಡಿದರೆ ಭಗವಂತ ಕುಳಿತು ಕೇಳುವ, ಕುಳಿತು ನೀವು ಪಾಡಿದರೆ, ಅವನು ನಿಂತು ಕೇಳುವ, ನೀವೇ ನಿಂತು ಪಾಡಿದರೆಅವನು ನಲಿದಾಡಿ ಕೇಳುವ, ನಲಿದು ನೀವು ಹಾಡಿದರೆ ನಿಮಗೆ ಒಲಿದೇ ಬಿಡುವ’ ಎಂದು ಹುರಿದುಂಬಿಸಿ ಜನರನ್ನು ಭಕ್ತಿ ಲೋಕಕ್ಕೆ ತನ್ಮೂಲಕ ಪರಮಾತ್ಮ ನಿದ್ದಾನೆ ಎಂಬ ಸತ್ಯಕ್ಕೂ ಅವರನ್ನು ಒಪ್ಪಿಸಿ, ದೇವರಲ್ಲಿಯೇ ಒಂದಾಗುವಂತೆ ಪ್ರೇರೇಪಿಸಿದರು. ಬೈಯ್ಯುತ್ತಲೇ ಅವನನ್ನು ಹೊಗಳುವ ಶಿಷ್ಟವಾದ ಒಂದುಪ್ರಕಾರ ಭಕ್ತಿ ಅಥವಾ ದಾಸ ಸಾಹಿತ್ಯದಲ್ಲಿದೆ. ಅದುವೇ ನಿಂದಾಸ್ತುತಿ. ಇಲ್ಲಿ ದಾಸರು ಬೈಯ್ಯುತ್ತಲೇ ಅವನ ಗುಣಗಳನ್ನೂ ಪ್ರಶಂಸಿಸುತ್ತಾರೆ.
‘ಕೃಷ್ಣರಾಯನೆ ನಿನ್ನ ಕೃತ್ಯಗಳನ್ನೆಲ್ಲ ಸೃಷ್ಟಿಯೊಳಗೆ ನಾನು ಬೀರಲ್ಯಾ’ ಎಂಬ ಹಾಡಿನಲ್ಲಿ ‘ಹೇ ದೇವಾ.. ನೀನು ನನ್ನನ್ನು ಸಜ್ಜನರ ಸಂಗದಲ್ಲಿ ಸೇರಿಸದಿದ್ದರೆ,ನೀನು ನನ್ನನ್ನು ಉದಾಸೀನ ಮಾಡಿದರೆ ನಾನು ಸುಮ್ಮನಿರುವುದಿಲ್ಲ’ ಎಂದು ಆತನ ಗುಣಗಳನ್ನೇ ಆತನ ದೌರ್ಬಲ್ಯಗಳನ್ನಾಗಿ ಮಾಡಿ ಹೇಳುವ ರೀತಿ ಅಮೋಘ. ಅವು ಏನೆಂದರೆ, ನೀನು ಗೋಪಿಗೆ ಸಾಕು ಮಗ, ಮಾಮೂಲು ದನ ಕಾಯುವ ಗೊಲ್ಲ ಬಾಲಕ, ಹಾಲು, ಮೊಸರು, ಬೆಣ್ಣೆ ಕದಿಯುವ ಕಳ್ಳ ಎಂದು ನಿನ್ನನ್ನು ಸೇವಿ ಸುವ ಶ್ರೇಷ್ಠರಾದ ಸನಕ ಸನಂದ, ಸನಾತರಂತಹ ದೇವತೆಗಳಿಗೆ ಹೇಳಿಯೇ ಬಿಡಲಾ? ಎಂದು ಆತನನ್ನು ಬ್ಲಾಕ್‌ಮೇಲ್ ಮಾಡುತ್ತಾರೆ.
ನಿನ್ನ ದರ್ಶನ ಮಾತ್ರದಿಂದ ರಾಕ್ಷಸರು, ಅಸುರರು ಹೆದರಿ ನಡುಗುವವರಿಗೆ ನೀನು ಮಗಧದ ದೊರೆ ಜರಾಸಂಧನಿಗೆ ಅಂಜಿಕೊಂಡು ಪಲಾಯನ ಮಾಡಿದ ವಿಷಯ ತಿಳಿಸಲಾ? ತಮ್ಮೆಲ್ಲ ಮನೋರಥಗಳನ್ನು ಈಡೇರಿಸುವ ನೀನು, ಅರ್ಜುನನ ರಥ ಓಡಿಸುವ ಸಾರಥಿ ಎಂದು ಜನರಿಗೆ ಹೇಳಿ ಬಿಡಲಾ? ಸದಾ ಲಕ್ಷ್ಮೀ ದೇವಿಯ ಬಾಹುಗಳಲ್ಲಿರುವ ನೀನು ಆಕೆಯ ಕಣ್ಣು ತಪ್ಪಿಸಿ ಗೋಪಿಕಾಸೀಯರ ಜತೆ ಸೇರುವುದನ್ನು ಸಾರಿ ಬಿಡಲಾ? ವೇದಾಭಿಮಾನಿಗಳ ಬಯಕೆಗಳನ್ನು, ಗುಣಾತಿಶಯಗಳನ್ನೂ ಅರಿಯದಂತೆ ನಟಿಸುವ ನೀನು, ಸತ್ಯಭಾಮೆಯ ಆಸೆಗೆ ಸೋತು ಪಾರಿಜಾತ ವೃಕ್ಷವನ್ನೇ ತಂದ ಪ್ರಸಂಗವನ್ನು ಪ್ರಕಟಿಸಿ ಬಿಡಲಾ? ಎಂದು ಆತನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ.
ಇನ್ನು ದಾಸರ ದಾಸರು, ದಾಸ ಶ್ರೇಷ್ಠರೆನಿಸಿದ ಪುರಂದರದಾಸರಂತೂ ಸೂರ್ಯಚಂದ್ರರಿರುವವರೆಗೂ ಇರುವಂತಹವರು. ಪುರಂದರ ದಾಸರು ಗಾದೆ ಮಾತು ಗಳ ಸರದಾರರು. ಅವರ ಸಾಹಿತ್ಯದ ಝಲಕುಗಳನ್ನು, ತುಣುಕುಗಳನ್ನು ಕೋಟ್ ಮಾಡದ ಯಾವ ಭಾಷಣಕಾರರು, ಸಂಗೀತಗಾರರು, ರಾಜಕಾರಣಿ ಗಳು, ನಟರು, ಶಿಕ್ಷಕರು, ಸಾಧಕರು ಇಲ್ಲವೇ ಇಲ್ಲ. ಮಕ್ಕಳನ್ನು ಮಲಗಿಸುವ, ಮಲಗಿದ ಮಕ್ಕಳನ್ನು ಎಬ್ಬಿಸುವ ತಾಯಂದಿರೂ ಸಹಿತ ಅವರ ಮಾತುಗಳನ್ನೇ, ಪದ ಗಳನ್ನೇ ಬಳಸುತ್ತಾರೆಂದರೆ ಪುರಂದರರ ಸಾರ್ವತ್ರಿಕತೆ ಎಲ್ಲ ಕಾಲಕ್ಕೂ ಸಲ್ಲುವಂತಹದೆಂಬುದನ್ನು ಒಪ್ಪಲೇ ಬೇಕು. ಹಾಕುವುದು ಸಾಧುವೇಷ, ಸಾಕುವುದು ಹಲವು ದೋಷ, ಕುಟಿಲವ ಬಿಡದಿಹ ಕುಜನರು ತಾ ಮಂತ್ರವ ಪಠಿಸಿದರೇನು ಫಲ? ಘಾತಕನವನು ತಾ ಬಿಡದವ ಗೀತೆಯನೋದಿದರೇನು ಫಲ ? ಈಗಿನ ರಾಜಕಾರಣಿಗಳ ಉದ್ಧಟತನ, ಮೂರ್ಖತನ, ಅಹಂಕಾರಗಳನ್ನು ಅಂದಿನ ದಿನದಲ್ಲಿದ್ದ ಅಧಿಕಾರಸ್ಥರಿಗೆ ಹೇಳುವ ಈ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಯೆಂಬುದೇ ಪುರಂದರದಾಸರ ಯುಗ ಯುಗಗಳಲ್ಲೂ ಅಧಿಕಾರಶಾಹಿ ಮನುಜರ ಸ್ಥಿತಿಗತಿಗಳ ಬಗ್ಗೆ ಮಾಡಿದ ಈ ವಿಶ್ಲೇಷಣೆಯೇ ಸಾಕ್ಷಿ.
ಇಲ್ಲಿ ನೋಡಿ ಕೊಬ್ಬಿನಲ್ಲಿರಬೇಡವೋ ಮನುಜ, ಕೊಬ್ಬಿನಲ್ಲಿರಬೇಡವೋ.., ಬಲ್ಲಿದ ನೀನೆಂದು ಬಡವರ ಬಾಯಿ ಬಡಿಯದಿರೆಚ್ಚರಿಕೆ, ನೆಚ್ಚದಿರು ಈ ಭಾಗ್ಯ ಯಾರಿಗೂ ಸ್ಥಿರವಲ್ಲ, ಬಡವರ ಎಡರ ಲಾಲಿಸದೆ ಮುಂದಕೆ ಹೆಜ್ಜೆ ಇಡಬೇಡ ಇಷ್ಟಲ್ಲದೇ ಸ್ಪಷ್ಟವಾಗಿ ಹಿಂದಿನ ನಾಯಕರೂ ಹೀಗೆ ಇದ್ದರೆಂದು ಹೇಳುವ ಈ ವಾಕ್ಯಗಳು, ಇಂದಿನ ಕೆಲ ರಾಜಕಾರಣಿಗಳ ವರ್ತನೆಯನ್ನು ಕಣ್ಮುಂದೆ ತರುವಂತಿವೆ.
ಓದಿ ನೋಡಿ, ಅದೆಂದರೆ, ದೊರೆಗಳ ಒಲುಮೆ ಉಂಟೆಂದು ಎಲ್ಲರೊಳು ಹಗೆತನ ತರವಲ್ಲ, ನಳಮಾಂಧಾತರೆಂಬುವವರಲ್ಲ ಏನಾದರು? ಇದು ಇಂದಿನ ನಮ್ಮ ಉನ್ಮತ್ತರಾಜಕಾರಣಿಗಳ ಚಿತ್ತವನ್ನೇ ಕಣ್ಮುಂದೆ ತರುತ್ತಿಲ್ಲವೇ? ಹೀಗೆ ದಾಸ ಸಾಹಿತ್ಯವಾಗಲಿ, ಶರಣ ಸಾಹಿತ್ಯವಾಗಲಿ, ಜಾನಪದ ಸಾಹಿತ್ಯವಾಗಲಿ, ಹಾಸ್ಯ ಸಾಹಿತ್ಯವಾಗಲಿ ಎಲ್ಲವೂ ಅಂದಿಗಂದಿನ ಸ್ಥಿತಿಯನ್ನು ಪ್ರಸ್ತುತಪಡಿಸಿವೆ. ಈ ಲೇಖನವನ್ನು ಓದುಗ ಪ್ರಭುಗಳ ಮುಂದಿಡುವ ಸಾಹಸ ನಾನು ಮಾಡಿದ್ದು ಶ್ರೀಶ್ರೀ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿಯವರ ಪುಸ್ತಕ ‘ಹರಿದಾಸ ಸಾಹಿತ್ಯ ಸೌರಭ’ವನ್ನು ಓದಲು ಕೈಗೆತ್ತಿಕೊಂಡಾಗ ಸುರಿಸಿದ್ದು.
ಅವರ ಪುಸ್ತಕದ ಈ ಅಂಶಗಳು ನಿಮಗೆ ಇನ್ನಷ್ಟು ಓದಲು ಪ್ರೇರೇಪಣೆ ನೀಡಿದರೆ ನಾನು ಉಪಕೃತ. ಆನೆಯನ್ನು ಕನ್ನಡಿ ಹಿಡಿದು ತೋರಿಸಿದ್ದೇನೆ. ಮುಖಃತ, ಸಾಕ್ಷಾತ್ ಆನೆಯನ್ನೇ ನೋಡುವ ಬಯಕೆ ಉಂಟಾದರೆ ಅರಳು ಮಲ್ಲಿಗೆ ಪಾರ್ಥಸಾರಥಿಯವರ ಪುಸ್ತಕಗಳನ್ನು ಹುಡುಕಿಕೊಂಡು ಹೋಗಬೇಕಾದದ್ದು ಇನ್ನು ನಿಮ್ಮ ಕೆಲಸ.