ಮೀಸಲಾತಿ ನೀಡುವುದು ತಪ್ಪಲ್ಲ, ಆದರೆ…
ಅಶ್ವತ್ಥಕಟ್ಟೆ
ರಂಜಿತ್‌ ಎಚ್‌.ಅಶ್ವತ್ಥ
.@.
ಇಂದಿನ ದಿನದಲ್ಲಿ ಮೀಸಲಾತಿಯ ವಿಷಯದಲ್ಲಿ ಇದನ್ನು ಒಪ್ಪಲು ಸಿದ್ಧರಿಲ್ಲ. ಉದಾಹರಣೆಗೆ ದಲಿತ ಅಥವಾಹಿಂದುಳಿದ ಅಧಿಕಾರಿಯ ಮಗ ವಂಶಪಾರಂಪರ್ಯ ವಾಗಿ ಮೀಸಲು ಪಡೆಯಲು ದಲಿತನಾಗುತ್ತಾನೆ.
ಭಾರತದಲ್ಲಿ ಯಾವುದೇ ವಿಷಯ ಇರಲಿ, ಅದು ಆರಂಭವಾಗುವುದೇ ‘ಯಾವ ಜಾತಿ?’ ಎನ್ನುವ ಮಾತಿಂದ. ಜಾತ್ಯಾತೀತ ರಾಷ್ಟ್ರದ ಕನಸನ್ನು ಮಕ್ಕಳಲ್ಲಿ ಬಿತ್ತುವ ಶಾಲೆಗಳಲ್ಲಿಯೂ, ಆ ಜಾತಿಯವರೆಲ್ಲ ತರಗತಿ ಮುಗಿದ ಬಳಿಕ ಕಚೇರಿಗೆ ಬನ್ನಿ, ನಿಮಗೆ ವಿದ್ಯಾರ್ಥಿವೇತನ ನೀಡಬೇಕಿದೆ ಎನ್ನುವ ಮಾತನ್ನು ಹೇಳುವ ಮಟ್ಟಕ್ಕೆ ಬಂದು ನಿಂತಿದೆ.
ದೇಶದಲ್ಲಿ ಮೀಸಲಾತಿಯ ಬಗ್ಗೆ ಚಕಾರ ಎತ್ತುವಂತಿಲ್ಲ. ಎತ್ತಿದರೆ ಆತ ದೇಶದ್ರೋಹಿ ಎನ್ನುವ ರೀತಿಯ ಮಾತು ಗಳನ್ನು ಕೆಲವರು ಹೇಳುತ್ತಾರೆ. ಆದರೆ ಮೀಸ ಲಾತಿಯ ಬಗ್ಗೆ ಧ್ವನಿ ಎತ್ತುವ ಜತೆಜತೆಗೆ ಈ ಮೀಸಲು ಎನ್ನುವ ರಕ್ಷಾ ಕವಚದಿಂದ ಹೊರಗಿರುವ ಸಹಸ್ರ, ಸಹಸ್ರ ಮಂದಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಮಾತ್ರ ಯಾರೊಬ್ಬರೂ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಮೀಸಲಾತಿಯ ಬಗ್ಗೆ ಪರಾಮರ್ಶೆ ನಡೆಸಿ ಎಂದು ಹೇಳುವುದು ಸಹ ಅಕ್ಷಮ್ಯ ಎನ್ನುವ ಮಟ್ಟದ ಮನಸ್ಥಿತಿಗೆ ಜನರನ್ನು ಸಿದ್ಧಪಡಿಸಲಾಗಿದೆ.
ಹಾಗೆಂದ ಮಾತ್ರಕ್ಕೆ ನಾನಿಲ್ಲಿ ಮೀಸಲಾತಿಯನ್ನು ವಿರೋಧಿಸುತ್ತಿಲ್ಲ. ಆದರೆ ಮೀಸಲಾತಿಯ ಹೆಸರಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಹೇಳಲು ಬಯಸುತ್ತಿದ್ದೇನೆ. ಮೀಸಲಾತಿಯ ಹೆಸರಲ್ಲಿ ಸರಕಾರಗಳು ತೆಗೆದು ಕೊಳ್ಳುವ ನಿರ್ಣಯಗಳು ಎಷ್ಟೆಲ್ಲ ಅನಾಹುತಕ್ಕೆ ಕಾರಣವಾಗುತ್ತದೆ ? ಇದರಿಂದ ಸಾಮಾನ್ಯ ವರ್ಗದ ಅಂದರೆ ಜನರಲ್ ಕೆಟಗರಿಯ ಲೇಬಲ್ ಹೊಂದಿರುವ ವಿದ್ಯಾರ್ಥಿ ಅಥವಾ ಅಭ್ಯರ್ಥಿಗೆ ಆಗುವ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದೇನೆ.
ಉದಾಹರಣೆಗೆ, ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಗಗನ್ ಕುಬೇರ್ ಎನ್ನುವ ವಿದ್ಯಾರ್ಥಿ, ಪಿಜಿ ನೀಟ್ ರ‍್ಯಾಂಕಿಂಗ್‌ನಲ್ಲಿ ಉತ್ತಮ ರ‍್ಯಾಂಕ್ ಪಡೆದರೂ ತನಗೆ ಬೇಕಾದ ಸೀಟನ್ನು, ತನಗೆ ಬೇಕಾದ ಕಾಲೇಜಿನಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಆ ಕಾಲೇಜಿನಲ್ಲಿರುವ ಎಂ.ಡಿ. ಸೀಟುಗಳು ಎಲ್ಲ ಮೀಸಲು ವಿದ್ಯಾರ್ಥಿಗಳಿಗೆ ನೀಡಿ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೂನ್ಯ ಸೀಟು ಇರುತ್ತದೆ ಎಂದು ಹೇಳಿದ್ದ. ಆದರೆ ಆ ವಿಡಿಯೊದಲ್ಲಿ ‘ತಾನು ಮೊದಲ ರ‍್ಯಾಂಕಿಂಗ್ ಬಂದಿದ್ದರೂ ನನಗೆ ಸೀಟು ಸಿಗುತ್ತಿರಲಿಲ್ಲ’ ಎನ್ನುವ ವಿಷಯವನ್ನು ಹೇಳುವ ಭರದಲ್ಲಿ, ಮೊದಲ ರ‍್ಯಾಂಕ್ ಬಂದಿದ್ದೇನೆ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದ (ಸೂಕ್ಷ್ಮವಾಗಿ ಗಮನಿಸಿದರೆ, ಆತನ ಮೊದಲ ರ‍್ಯಾಂಕ್ ಎಂದು ಹೇಳಿಕೊಂಡಿಲ್ಲ). ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾನ್ಯವರ್ಗದ ವಿದ್ಯಾರ್ಥಿ ಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಗಗನ್ ಹೇಳಿದ್ದ ವಿಷಯವನ್ನು ಬಿಟ್ಟು, ಆತನ ರ‍್ಯಾಂಕ್, ವೈಯಕ್ತಿಕ ನಿಂದನೆಗೆ ಒಂದು ವರ್ಗ ನಿಂತಿತ್ತು.
ಯಾರೊಬ್ಬರೂ, ವಿಡಿಯೊದಲ್ಲಿ ಆತನ ಹೇಳಿದ ಮಾತಿನ ಒಟ್ಟಾರೆ ಅರ್ಥವನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ. ಆದರೆ ಎಂ.ಡಿ. ವಿಭಾಗದ ಸೀಟು ಹಂಚಿಕೆಯನ್ನು ಪ್ರತಿ ವರ್ಷ ರೋಸ್ಟರ್ ಪದ್ಧತಿಯಲ್ಲಿ ಸೀಟ್ ಮ್ಯಾಟ್ರಿಕ್ಸ್ ಮೂಲಕ ಅಂತಿಮಗೊಳಿಸಲಾಗುತ್ತದೆ. ಇದರಿಂದ ಒಂದು ಕಾಲೇಜಿನಲ್ಲಿ ಈ ಬಾರಿ ಸಾಮಾನ್ಯ ವರ್ಗದ ವಿದ್ಯಾರ್ಥಿಗೆ ಸೀಟು ಸಿಗದಿದ್ದರೂ, ಮುಂದಿನ ವರ್ಷ ಆ ಕಾಲೇಜಿನಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗೆ ಸೀಟು ಸಿಗುತ್ತದೆ. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ ಎನ್ನುವ ಸಮರ್ಥನೆಯನ್ನು ಅನೇಕರು ನೀಡಿದರು.
ಆದರೆ ಒಟ್ಟಾರೆ ಈ ಸೀಟು ಮ್ಯಾಟ್ರಿಕ್ಸ್ ನಲ್ಲಿ ಇರುವ ಮೀಸಲು ಸಮಸ್ಯೆಯಿಂದ ಒಂದಲ್ಲ ಒಂದು ರೀತಿ ಸಾಮಾನ್ಯ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆಸಮಸ್ಯೆಯಾಗುವುದಂತೂ ನಿಜ. ಇದು ಕೇವಲ ವೈದ್ಯಕೀಯ ಶಿಕ್ಷಣವಲ್ಲ. ಪ್ರತಿಯೊಂದು ಸರ್ಧಾತ್ಮಕ ಪರೀಕ್ಷೆ, ಸೀಟು ಹಂಚಿಕೆಯಲ್ಲಿಯೂ ಸಮಸ್ಯೆಯಾಗುತ್ತದೆ. ಆದರೆ ಹಿಂದುಳಿದ ವರ್ಗದವರಿಗೆ ಅವಕಾಶ ನೀಡಬೇಕು ಎನ್ನುವ ಕಾರಣಕ್ಕೆ ಸಂವಿಧಾನದಲ್ಲಿಯೇ ಮೀಸಲಾತಿಗೆ ಅವಕಾಶ ನೀಡಿರುವುದರಿಂದ, ಅದನ್ನು ಬದಲಾಯಿಸುವುದು ಸುಲಭದ ಮಾತಲ್ಲ. ಆದರೆ ಒಂದು ವರ್ಗವನ್ನು ಮೇಲೆತ್ತುವ ಕಾರಣಕ್ಕೆ, ಇನ್ನೊಂದು ವರ್ಗಕ್ಕೆ ಅನ್ಯಾಯವಾಗದಂತೆ ಎಚ್ಚರ ವಹಿಸುವ ಕೆಲಸವನ್ನು ಸರಕಾರಗಳು ಮಾಡಬೇಕು.
ಇನ್ನು ಮೇಲ್ವರ್ಗದಲ್ಲಿರುವವರಿಗೆ ಮೀಸಲಾತಿ ಸಿಗಲಿ ಎನ್ನುವ ಕಾರಣಕ್ಕೆ, ಕೇಂದ್ರ ಸರಕಾರ ಆರ್ಥಿಕ ಹಿಂದುಳಿದವರಿಗೆ ಶೇ.10ರಷ್ಟು ಮೀಸಲು ನೀಡಿದೆ. ಅದರಲ್ಲಿ ಸಾಮಾನ್ಯ ವರ್ಗದವರು ಸೀಟು ಪಡೆಯಲಿ ಎನ್ನುವ ವಾದವನ್ನು ಅನೇಕರು ಮಂಡಿಸುತ್ತಿದ್ದಾರೆ. ಆದರೆ ಈ ರೀತಿ ಆರ್ಥಿಕ ಹಿಂದುಳಿದ ಮೇಲ್ವರ್ಗದವರ ಗುಂಪು ಹೆಚ್ಚಿಲ್ಲ. ಮಧ್ಯಮ ವರ್ಗದ ಮೇಲ್ವರ್ಗದವರಿಗೆ ಇತ್ತ ಆರ್ಥಿಕ ಹಿಂದುಳಿದ ಕೋಟವೂ ಸಿಗುವುದಿಲ್ಲ. ಅತ್ತ ಸಾಮಾನ್ಯ ವರ್ಗದಲ್ಲಿಯೂ ಸೀಟು ಲಭ್ಯವಿರುವುದಿಲ್ಲ ಎನ್ನುವುದನ್ನು ಮರೆಯಬಾರದು.
ಈ ಎಲ್ಲದರ ನಡುವೆ ಸರಕಾರ ಮೀಸಲು ಹಂಚಿಕೆ ಮಾಡುವ ಸಮಯದಲ್ಲಿ ಇನ್ನೊಂದು ಕೆಲಸವನ್ನು ಮಾಡಬೇಕಿದೆ. ಈಗಿರುವ ಪದ್ಧತಿಯಲ್ಲಿ, ಒಬ್ಬ ವಿದ್ಯಾರ್ಥಿ ಅಥವಾ ಅಭ್ಯರ್ಥಿ  ತನ್ನ ಕೋಟದಲ್ಲಿ ಸೀಟು ಪಡೆಯಲು ಸಾಧ್ಯವಾಗದಿದ್ದರೆ, ಸಾಮಾನ್ಯ ವರ್ಗದಿಂದ ಸ್ಪರ್ಧಿಸಿಯೂ ಆ ಸೀಟು ದಕ್ಕಿಸಿಕೊಳ್ಳಬಹುದು. ಆದರೆ ಈ ಲಾಭ ಸಾಮಾನ್ಯ ವರ್ಗದವರಿಗೆ ಇರುವುದಿಲ್ಲ. ಆದ್ದರಿಂದ ಒಂದು ವೇಳೆ ಮೀಸಲಾತಿ ಯಲ್ಲಿ ಸೀಟು ಪಡೆಯಲು ಆ ವಿದ್ಯಾರ್ಥಿ ಇಚ್ಛಿಸಿದರೆ, ಆತ ಜನರಲ್ ಕೆಟಗರಿ ಕೋಟದ ಸೀಟುಗಳಿಗೆ ಸ್ಫರ್ಧಿಸಲು ಅವಕಾಶ ನೀಡಬಾರದು. ಇದರಿಂದ ಸಾಮಾನ್ಯ ವರ್ಗಕ್ಕೆ ಇರುವ ಸೀಟು ಅಲ್ಲಿರುವ ಪ್ರತಿಭಾವಂತರಿಗೆ ಸಿಗುತ್ತದೆ.
ಹಿಂದುಳಿದ, ದಲಿತ ವರ್ಗಗಳಿಗೆ ಮೀಸಲು ನೀಡುವ ವಿಷಯದಲ್ಲಿ ಯಾರೊಬ್ಬರೂ ಚಕಾರವೆತ್ತಿಲ್ಲ. ಆದರೆ ಈ ರೀತಿ ಮೀಸಲು ಹಂಚಿಕೆ ಯಾವ ಹಂತದ ತನಕ ವಿರಬೇಕು ಎನ್ನುವ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರನ್ನು ಮೇಲಕ್ಕೆ ಎತ್ತಲು ಶಿಕ್ಷಣ ಅತ್ಯಗತ್ಯ. ಆದ್ದರಿಂದ ಅವರಿಗೆ ಉಚಿತ ಶಿಕ್ಷಣ, ಶಿಕ್ಷಣದಲ್ಲಿ ಮೀಸಲಾತಿ ನೀಡುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಉನ್ನತ ಶಿಕ್ಷಣದಲ್ಲಿ ಈ ರೀತಿ ಮೀಸಲು ಅಗತ್ಯವೇ? ಎನ್ನುವ ಪ್ರಶ್ನೆಗಳಿವೆ. ಪದವಿಯ ತನಕ ಮೀಸಲಾತಿ ಕೊಡುವುದು ಒಪ್ಪಿತ ಮಾತು. ಆದರೆ ಉನ್ನತ ಶಿಕ್ಷಣ ಅಥವಾ ಆಯಕಟ್ಟಿನ ಸ್ಥಳಕ್ಕೆ ನೇಮಕಾತಿ ಮಾಡುವ ಸಮಯದಲ್ಲಿ ಮೀಸಲನ್ನು ತರುವುದು ಎಷ್ಟು ಸರಿ? ಅಲ್ಲಿ ಆತನ ಅಥವಾ ಆಕೆಯ ಬುದ್ಧಿಮತ್ತೆ, ಕೌಶಲ್ಯ ಹಾಗೂ ಪ್ರತಿಭೆಗೆ ಮಣೆ ಹಾಕಬೇಕೇ ಹೊರತು, ಜಾತಿಯ ವಿಷಯದಲ್ಲಿ ಅಲ್ಲವೇ ಅಲ್ಲ.
ಖಾಸಗಿ ಸಂಸ್ಥೆ ಎಂದಿಗೂ ಯಾವ ಜಾತಿ, ಯಾವ ಪಂಗಡವೆಂದು ನೋಡುವುದಿಲ್ಲ. ಅಲ್ಲಿ ಬೆಲೆ ಇರುವುದು ಆತನ ಪ್ರತಿಭೆ ಮಾತ್ರ. ಅಂದ ಮಾತ್ರಕ್ಕೆ ಖಾಸಗಿ ಸಂಸ್ಥೆಗಳಲ್ಲಿ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರಿಗೆ ಅವಕಾಶ ಸಿಗುತ್ತಿಲ್ಲ ಎನ್ನಲು ಸಾಧ್ಯವೇ? ನೈಜ ಪ್ರತಿಭೆ ಇರುವ ವ್ಯಕ್ತಿ ಎಲ್ಲಿದ್ದರೂ ಗೆಲವು ಸಾಽಸುತ್ತಾನೆ ಎನ್ನುವುದಕ್ಕೆ ನಮ್ಮಲ್ಲಿಯೇ ಸಾವಿರಾರು ಉದಾಹರಣೆಗಳು ಇಲ್ಲವೇ? ಇನ್ನು ಮೇಲ್ಜಾತಿಯವರು ಜಾತಿ ಆಧಾರಿತ ವಿಭಜನೆಯ ಮಾಡುತ್ತಿದ್ದಾರೆ ಎನ್ನುವ ಮಾತನ್ನು ‘ಬುದ್ಧಿಜೀವಿ’ಗಳು ಆಗ್ಗಾಗೆ ಹೇಳುತ್ತಲೇ ಇರುತ್ತಾರೆ.
ಜಾತಿ ಎನ್ನುವುದು ಹುಟ್ಟಿನಿಂದ ಬರುವುದಲ್ಲ, ಬದಲಿಗೆ ಆತ ಮಾಡುವ ಕೆಲಸದಿಂದ. ಮೀಸಲು ಎನ್ನುವುದು ಆತನ ಆರ್ಥಿಕ ಸ್ಥಿತಿಗತಿಯಿಂದ. ಆರ್ಥಿಕ, ಸಾಮಾಜಿಕವಾಗಿ ದುರ್ಬಲರಾದವರಿಗೆ ನೆರವು ನೀಡಬೇಕು ಎನ್ನುವ ಕಾರಣಕ್ಕೆ ಮೀಸಲಾತಿ ನೀಡಲಾಗಿದೆ ಎನ್ನುವ ಮಾತನ್ನು ಹೇಳುತ್ತಾರೆ. ಆದರೆ ಇಂದಿನ ದಿನದಲ್ಲಿ ಮೀಸಲಾತಿಯ ವಿಷಯದಲ್ಲಿ ಇದನ್ನು ಒಪ್ಪಲು ಸಿದ್ಧರಿಲ್ಲ. ಉದಾಹರಣೆಗೆ ದಲಿತ ಅಥವಾ ಹಿಂದುಳಿದ ಅಧಿಕಾರಿಯ ಮಗ ವಂಶಪಾರಂಪರ್ಯವಾಗಿ ಮೀಸಲು ಪಡೆಯಲು ದಲಿತನಾಗುತ್ತಾನೆ. ಜನ್ಮಸಿದ್ಧ ಜಾತಿಯ ಹೆಸರಲ್ಲಿ ಮೀಸಲನ್ನು ಪಡೆಯುತ್ತಾನೆ. ಆದರೆ ಒಬ್ಬ ಬಡ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ ಪ್ರತಿಭಾವಂತನಿಗೆ ಅದೇ ‘ಜಾತಿ’ ಹೆಸರಲ್ಲಿ ಯಾವುದೇ ಮೀಸಲು ಸಿಗುವುದಿಲ್ಲ.
ಇದರಿಂದ ‘ಶಕ್ತರಲ್ಲದವರಿಗೆ ಮೀಸಲು’ ಎನ್ನುವ ಅಂಬೇಡ್ಕರ್ ಅವರ ಮೊದಲ ಆಶಯಕ್ಕೆ ಧಕ್ಕೆ ಬಂದಂತೆ ಆಗಲಿಲ್ಲವೇ? ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯ ಬಗ್ಗೆ ಹೊಂದಿದ್ದ ನಿಲುವಿಗೂ ಇಂದು ನಡೆಯುತ್ತಿರುವ ಮೀಸಲಾತಿಗೂ ವ್ಯತ್ಯಾಸವಿದೆ. ಹಾಗೇ ನೋಡಿದರೆ, ಅಂಬೇಡ್ಕರ್ ಅವರು ಸಹ ಮೀಸಲಾತಿ ಸುದೀರ್ಘ ಅವಧಿಗೆ ಮೀಸಲಾತಿ ಅಗತ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಆ ಮೀಸಲಾತಿಯ ಹಿಂದಿರುವ ‘ಮತ ಬ್ಯಾಂಕ್’ನ ಪ್ರಭಾವದಿಂದ ಅಂಬೇಡ್ಕರ್ ಅವರ ಮಾತು ಯಥಾವತ್ತಾಗಿ ಜಾರಿಗೊಳಿಸುವ ಸಾಹಸಕ್ಕೆ ಯಾವ ಸರಕಾರಗಳೂ ಕೈಹಾಕಿಲ್ಲ. ಹಾಕುವುದೂ ಇಲ್ಲಎನ್ನುವುದು ಬೇರೆ ಮಾತು.
ಆದ್ದರಿಂದ ಮೀಸಲಾತಿಯನ್ನು ಭಾರತದಲ್ಲಿ ತಗೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದನ್ನು ಒಪ್ಪುವ ಜತೆಜತೆಗೆ, ಮೀಸಲಾತಿಯ ಹೆಸರಲ್ಲಿ ಸಾಮಾನ್ಯವರ್ಗದ ಪ್ರತಿಭಾವಂತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕಾದ ಕೆಲಸವನ್ನು ಸರಕಾರಗಳು ಮಾಡಬೇಕಿದೆ.