ಸರಕಾರಿ ಆಸ್ಪತ್ರೆ ಎಂದು ಮೂಗು ಮುರಿಯುವ ಮುನ್ನ…
ಸ್ವಾನುಭವ
ವಿನುತಾ ಹೆಗಡೆ, ಶಿರಸಿ
ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದೆ. ಕಣ್ಣಾಲಿಗಳಿಂದ ಧಾರಾಕಾರವಾಗಿ ನೀರು ಇಳಿಯುತ್ತಿತ್ತು. ಆಕ್ಸಿಜನ್ ಹಾಕಿದ್ದರೂ ಉಸಿರಾಟಕ್ಕೆ ಗಾಳಿಯೇ ಇಲ್ಲವೆನ್ನು ವಂತೆ ಕಿಟಕಿಗಳನ್ನು ತೆರೆಯುವಂತೆ ಸನ್ನೆ ಮಾಡುತ್ತಿದ್ದೆ. ಅದೆಷ್ಟೇ ಒದ್ದಾಡಿದರೂ ಉಸಿರು ತೆಗೆ ಯಲು ಗಾಳಿಯೇ ಇಲ್ಲದಂಥ ಸ್ಥಿತಿ. ಮೂಗು, ಬಾಯಿ ದೊಡ್ಡದಾಗಿ ತೆರೆದರೂ… ಇಲ್ಲ.. ಆಗುತ್ತಿಲ್ಲ… ಆಕ್ಸಿಜನ್ ಹಾಕಿದ ಕವಚವೇ ಉಸಿರಿಗೆ ಅಡ್ಡಿಯಾಗುತ್ತಿದೆಯೇನೋ… ಇನ್ನೇನು ಕೆಲವೇ ಕ್ಷಣ ನನ್ನ ಉಸಿರುನಿಂತೇ ಹೋಗುತ್ತದೇನೋ ಎಂಬಂತೆ ಭಾಸವಾಗುತ್ತಿತ್ತು.
ಪ್ರಯಾಸದಿಂದ ಕಣ್ಣು ಬಿಟ್ಟು ಮಗಳ ಮುಖ ನೋಡಿದೆ. ನನ್ನ ಕಣ್ಣಿನಂತೆ ಅವಳ ಕಣ್ಣಾಲಿಗಳು ತುಂಬಿದ್ದ ವೆಂದು ಕಾಣುತ್ತದೆ. ಆತಂತ ಮಡುಗಟ್ಟಿದ್ದ ಅವಳ ಮೌನ ಗಮನಿಸಿದಾಗ, ತನ್ನ ಉಸಿರು ಬಿಗಿಡಿಹಿಡಿದು ಅದನ್ನು ನನಗಾಗಿ ನೀಡಲು ಸಿದ್ಧವಾದಂತೆ ಕಂಡುಬಂತು…. ಅಷ್ಟರಲ್ಲಿ ನರ್ಸ್ ಧ್ವನಿ ಕೇಳಿಸಿತು. ‘ಸರ್, ಪಲ್ಸ್ ಆಕ್ಸಿ ಮೀಟರ್ ೩೫ ಬರ್ತಿದೆ. ಡಾಕ್ಟರ್‌ರನ್ನು ಬೇಗ ಕರೀರಿ. ಚಿಕಿತ್ಸೆಗೆ ಇವ್ರು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಆಕೆ ಹೇಳುತ್ತಿದ್ದರು.
ಎಲ್ಲಾ ದೂರದಲ್ಲಿ ನಿಂತು ಮಾತನಾಡು ತ್ತಿದ್ದಂತಿತ್ತು ಅವರ ಧ್ವನಿ. ಮೈಯಲ್ಲಿರುವ ಶಕ್ತಿಯನ್ನೆಲ್ಲ ಒಗ್ಗೂಡಿಸಿ ದೀರ್ಘ ಉಸಿರೆಳೆದು, ಬಿಡುತ್ತಿದ್ದೆ. ಆದರೂ ಏಕೆ ಹೀಗೆ? ಉಸಿರಾಡಿಯೇ ಸುಸ್ತಾಗಿತು. ಏದುಸಿರು, ಎದೆ ನೋವು, ಉರಿ, ಉಸಿರೆಳೆದುಕೊಳ್ಳಲೂ ಪರದಾಟ… ಮತ್ತೆ ದೂರದಲ್ಲೆಲ್ಲೋ ಕ್ಷೀಣ ಸ್ವರ ಕೇಳಿಸಿತು. ‘ನಿಮಗೇನೂ ಆಗಲ್ಲ ದೈರ್ಯವಾಗಿರಿ, ಡಾಕ್ಟರ್ ಬಂದಿದಾರೆ, ಇಂಜೆಕ್ಷನ್ ಕೊಟ್ಟಿದ್ದಾರೆ’ ಎಂದು ನರ್ಸ್ ಧೈರ್ಯ ತುಂಬುತ್ತಿದ್ದರು. ಆದರೂ ಮನಸ್ಸಿನನೋ ಆತಂಕ.
ಉಸಿರು ಶ್ವಾಸಕೋಶದ ತನಕ ಹೋಗುತ್ತಿಲ್ಲವೇನೋ ಎಂಬ ಭಯ. ಒಮ್ಮೆ ಗಟ್ಟಿಯಾಗಿ ಕಣ್ಣ ಮುಚ್ಚಿ, ಕೈ ಮುಷ್ಠಿ ಬಿಗಿ ಹಿಡಿದು ಜೋರಾಗಿ ಉಸಿರಾಡಲು ಆರಂಭಿಸಿದೆ. ಇದು ನನ್ನ ಕೊನೆಯ ಕ್ಷಣ … ನಾ ಸೋಲಬಾರದು ಎಂದುಕೊಂಡೆ. ಆ ಕೊನೆಯ ಮೂರುಕ್ಷಣದ ಉಸಿರಾಟದ ಹೋರಾಟ ಕೊನೆಗೂ ಫಲ ನೀಡಿತು. ಒಮ್ಮೆಲೆ ಏನೋ ಸಂಭ್ರಮ. ಆಗತಾನೇ ಮಗು ಹೆತ್ತು ತಾಯಿ ಯಾದಂತೆ. ಎಲ್ಲಿ ನನ್ನ ಮಗು ಎಂದು ತಡಕಾಡಿದರೆ ಪಕ್ಕದಲ್ಲಿ ಮಗಳು ನಿಂತಿದ್ದಳು. ಸ್ಪಷ್ಟವಾಗಿ ಆಕೆಯ ಮುಖ ಕಾಣಿಸಲಾರಂಭಿಸಿತು. ಪುಟ್ಟ ಮಗುವಾಗಿದ್ದಾಗ ನಾನಾಕೆಗೆ ಮಾಡು ತ್ತಿದ್ದಂತೆಯೇ ನನ್ನ ಪಕ್ಕದ ನಿಂತು ನನ್ನ ಆರೈಕೆ ಮಾಡುತ್ತಿದ್ದಳು; ತಾಯಿಯಾಗಿ ನಿಂತು. ಎಲ್ಲವೂ ಸ್ಪಷ್ಟವಾಗು ಗೊಚರಿಸತೊಡಗಿತು.
ನನ್ನ ಸುತ್ತ ಇರುವ ವೈದ್ಯರು, ನರ್ಸ್‌ಗಳು ದೇವದೂತರಂತೆ ಕಾಣಲಾರಂಭಿಸಿದರು. ಅಂದು ಶನಿವಾರ, ನಾನು ಡಾ.ಚೇತನ ಅವರನ್ನು ಕಂಡಿದ್ದೇ ರಾತ್ರಿ ೯ ರ ಮೇಲೆ. ನಿಲ್ಲಲೂ ಆಗದಿರುವಷ್ಟು ವಿಪರೀತ ಜ್ವರದಿಂದ ಬಳಲುತ್ತಿದ್ದೆ. ಕೊನೆ ಉಸಿರಿನ ಹೋರಾಟ ನಡೆದದ್ದು ಅದೇ ರಾತ್ರಿ; ಸುಮಾರು ಒಂದು ಗಂಟೆಯ ಸಮಯ. ಸರಕಾರಿ ಆಸ್ಪತ್ರೆಯ ಕರೋನಾ ವೈದ್ಯರಾಗಿ ಚಿಕಿತ್ಸೆ ನೀಡಿದ ಡಾ.ಚೇತನ ಶೆಟ್ಟಿಯವರಿಗೆ ಕೃತಜ್ಣತೆ ಸಲ್ಲಿಸಲೇಬೇಕು. ಸರಕಾರಿ ಆಸ್ಪತ್ರೆ ಎಂದು ನಾನು ಅಸಡ್ಡೆ ತೋರಿರಲಿಲ್ಲ. ಹಾಗೆ ಆಗದಂತೆ ಅವರು ಕೂಡ ನಡೆದುಕೊಂಡಿದ್ದರು. ಈ ಮೊದಲಾದರೂ ಶಿರಸಿ ಸರಕಾರಿ ಆಸ್ಪತ್ರೆಗೆ ಹೋಗಿದ್ದೇ ಕಡಿಮೆ. ಈತನ್ಮಧ್ಯೆ ಪತ್ರಕರ್ತಳಾಗಿ ಸರಕಾರಿ ಆಸ್ಪತ್ರೆಯ ಸಾಕಷ್ಟು ಲೋಪಗಳ ಬಗ್ಗೆ ಬರೆದಿದ್ದಿದೆ. ಅಲ್ಲಿ ವೈದ್ಯರು, ನರ್ಸ್‌ಗಳು ಸರಿ ಇಲ್ಲ. ಕೆಲಸ ಮಾಡು ತ್ತಿಲ್ಲ ಎಂದೆಲ್ಲ ಗೀಚಿದ್ದೆ.
ಆದರೆ ಅಲ್ಲಿಯ ವೈದ್ಯರು, ನರ್ಸ್‌ಗಳು ನೀಡುವ ಉತ್ತಮ ಸೇವೆಯ ಬಗ್ಗೆ ಬರೆದಿರಲೇ ಇಲ್ಲ. ಅದನ್ನಿಂದು ಅನುಭವಿಸಿದ, ನನ್ನ ಜೀವಂತಿಸಿದ ಕುರಿತು ಉಲ್ಲೇಖಸಿಲೇ ಬೇಕು ಎಂದೆನಿಸಿತ್ತು. ಪ್ರತೀದಿನ ಕರೋನಾ ರೋಗಿಗಳ ಸ್ಥಿತಿ, ಗತಿ  ಅರಿಯುವ, ನೋಡಿಕೊಳ್ಳುವ ಆಸ್ಪತ್ರೆಯ ವೈದ್ಯರ ಬಗ್ಗೆ, ಅದರಲ್ಲೂ ಸರಕಾರಿ ಆಸ್ಪತ್ರೆಯ ವೈದ್ಯರ ಬಗ್ಗೆ ನಾವು ಸಾಕಷ್ಟು ಅಸಮಾಧಾನ ಹೇಳುತ್ತಲೇ ಇರುತ್ತೇವೆ. ಖಾಸಗಿ ಇರಲಿ, ಸರಕಾರಿ ಇರಲಿ ವೈದ್ಯರೂ ಮನುಷ್ಯರೇ. ಎಲ್ಲರೂ ತಪ್ಪು ಮಾಡುವುದು ಸಹಜ. ಯಾರೂ ಬೇಕೆಂದೇ ಮಾಡುವುದಿಲ್ಲ. ಆದರೆ, ಬಿಳಿ ಬಣ್ಣವನ್ನೆಲ್ಲ ಮಸಿಯ ಚಿಕ್ಕ ಚುಕ್ಕೆ ನುಂಗಿಬಿಟ್ಟಿತು ಎಂಬಂತೆ ಗೊತ್ತಿದ್ದೆ, ಗೊತ್ತಿಲ್ಲದೆಯೋ ಆದ ಲೋಪ ಅವರ ಎಲ್ಲ ನಿಸ್ವಾರ್ಥ ಸೇವೆಯನ್ನೂ ಮರೆಮಾಚುತ್ತದೆ.
ಕರೋನಾ ಪೀಡಿತರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಸರಕಾರವೇ ಉಚಿತ ಊಟ ನೀಡುತ್ತದೆ. ಆದರೆ ಅನಾರೋಗ್ಯ ಪೀಡಿತನ ಬಾಯಿ, ಮನಸ್ಸು ಯಾವುದೂ ಸರಿ ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯ ಯಾವ ವ್ಯವಸ್ಥೆಯೂ ಸರಿ ಇಲ್ಲ ಎಂದೇ ಕಾಣಿಸುತ್ತದೆ. ಆದರೆ, ಆದರಾಚೆಗಿನ ಚಿಕಿತ್ಸೆ, ಸರಿಯಾದ ಸಮಯದಲ್ಲಿ ನಮ್ಮ ಉಸಿರಾಟದ ತೊಂದರೆಗೆ ದೊರಕಿಸಿಕೊಡಬೇಕಾದ ಪ್ರಯತ್ನವನ್ನೂ ವೈದ್ಯರು ಮಾಡಿರುತ್ತಾರೆ. ರೋಗಿಗೆ ಕನಿಷ್ಠ ಪಕ್ಷ ಆ ಕೃತಜ್ಞತೆಯಾ ದರೂ ಇರಲೇಬೇಕು.
ಸರಕಾರಿ ಆಸ್ಪತ್ರೆಯಲ್ಲೂ ನನಗೆ ರಾಜಾತಿಥ್ಯ ಬೇಕೆಂದು ಬಯಸಿದರೆ ಹೇಗೆ? ರೋಗಿ ಚೇತರಿಸಿಕೊಳ್ಳುವುದಷ್ಟೇ ಇಲ್ಲಿ ಮುಖ್ಯ. ಅದರ ಹೊರತಾಗಿ ಸರಕಾರಿ ಆಸ್ಪತ್ರೆಯ ಊಟದ ಬಗ್ಗೆಯಾಗಲಿ, ಹಣ್ಣು ನೀಡದಿರುವ ಬಗ್ಗೆಯಾಗಲೀ ಮಾತು ಸರಿಯಲ್ಲ. ನಾನು ಸರಕಾರಿ ಆಸ್ಪತ್ರೆಯಲ್ಲಿ ಬರೋಬ್ಬರಿ ಐದುದಿನಗಳ ಕಾಲ ಉಳಿದಿದ್ದೆ. ನನ್ನ ಬದುಕಿಸಿದ್ದು ಸರಕಾರಿ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು. ಅಲ್ಲಿಯ ಚಿಕಿತ್ಸೆಯ ಲಭ್ಯತೆ (ಆಕ್ಷಿಜನ್).
ಅದರ ಆಚೆಗೆ ಯೋಚಿಸಿಸುವುದು ಸಮಂಜಸವೇ ಅಲ್ಲ. ಏಕೆಂದರೆ ಇದೇ ಐದು ದಿನದ ಚಿಕಿತ್ಸೆಗೆ ನಾನು ಖಾಸಗಿ ಆಸ್ಪತ್ರೆ ಸೇರಿದ್ದರೆ ಅದರ ವೆಚ್ಚ ಕಂಡೇಹೃದಯಾಘಾತವಾಗುತ್ತಿತ್ತೇನೋ. ಸರಕಾರಿ ಆಸ್ಪತ್ರೆ ಸೇರುವುದಕ್ಕೂ ಅರ್ಧ ದಿನ ಮುಂಚೆ ಅಂದರೆ ಶನಿವಾರ ಮಧ್ಯಾಹ್ನ ವಿಪರೀತ ಜ್ವರ, ಮೈ ಕೈ ನೋವು ಇದ್ದ ಕಾರಣ ಖಾಸಗಿ ಆಸ್ಪತ್ರಗೆ ತೆರಳಿದ್ದೆ. ಕೇವಲ ಹತ್ತು ನಿಮಿಷದಲ್ಲಿ ಒಂದೂವರೆ ಸಾವಿರ ಬಿಲ್ ಕೈಗಿತ್ತರು. ಅಡ್ಮಿಟ್ ಆಗಿ ಅಂದರು. ಅಲ್ಲಿಂದ ತಪ್ಪಿಸಿ ಕೊಂಡು ಹೊರಬರುವುದೇ ಕಷ್ಟವಾಯಿತು. ಹೇಗೋ ಹೊರಬಂದು ಪಂಡಿತ ಸಾರ್ವಜನಿಕ ಸರಾಸರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಜಾನನ ಭಟ್ ಅವರನ್ನು ಸಂಪರ್ಕಿಸಿ ವಿಷಯ ಹೇಳಿದೆ. ಒಬ್ಬ ವೈದ್ಯರಾಗಿ ಅವರ ಜವಾಬ್ದಾರಿ ನಿರ್ವಹಿಸಿದ್ದರು.
ಹೀಗೂ ಉಂಟು:ಹಾಗಂತ ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲವೂ ಸರಿ ಅಂತಲ್ಲ. ಆಗಾಗ ತಾವೇ ಆಸ್ಪತ್ರೆಯ ಮೇಲುಸ್ತುವಾರಿಯರು ಎನ್ನುವಂತೆ ರೋಗಿಗಳಿಗೆತೊಂದರೆಯಾಗುವಂತೆ ಕಿರುಚುವ ಕೆಲಸದವರೂ ಇದ್ದಾರೆ. ಕರೋನಾ ವಾರ್ಡಿಗೆ ತೆರಳುವಾಗ ‘ಭಯ ಪಡಬೇಡಿ, ಆರಾಮವಾಗಿ ವಾಪಸ್ಸಾಗ್ತೀರಿ’ ಎಂದು ಕೈ ಕುಲುಕಿ ಕಳುಹಿಸುವ ವಾಚ್ ಮನ್‌ಗಳೂ ಇzರೆ. ಅರ್ಧ ರಾತ್ರಿಯಲ್ಲಿ ಅವಶ್ಯ ಬಿದ್ದರೆ ಬರುವ ಆಂಬ್ಯುಲೆನ್ಸ್ ಕೂಡ ಇದೆ. ನೀವ್ಯಾಕೆ ಸರಕಾರಿ ಈ ಆಸ್ಪತ್ರೆಗೆ ಬಂದು ತಗಲಾಕ್ಕೊಂಡಿದ್ರಿ ಎನ್ನುವ ಸಿಬ್ಬಂದಿಯೂ ಸೇರಿದಂತೆ ತಲೆ ನೇವರಿಸುವ ನರ್ಸಗಳೂ ಕೋವಿಡ್ ರೋಗದ ನೆನಪಿಗೆ ಶಾಶ್ವತ.
ಖಾಸಗಿ ಆಸ್ಪತ್ರೆಯೇ ಇರಲಿ, ಸರಕಾರಿ ಆಸ್ಪತ್ರೆಯೇ ಇರಲಿ ಲೋಪಗಳು ಎಲ್ಲಡೆಯೂ ಇದ್ದೇ ಇದೆ. ಅದಾಗ್ಯೂ ಯಾವ ವೈದ್ಯರು ಸಹ ತಾವು ತಪ್ಪು ಮಾಡಬೇಕೆಂದು ಬಯಸುವುದಿಲ್ಲ. ತಾವೂ ಒಳ್ಳೆಯ ಹೆಸರು, ಕಾರ್ಯ ಮಾಡಬೇಕೆಂದೇ ಬಂದಿರುತ್ತಾರೆ. ಸರಕಾರ ಎಷ್ಟರ ಮಟ್ಟಿಗೆ ಅವರಿಗೆ ಸ್ವಾತಂತ್ರ್ಯ ನೀಡಿದೆ ಅದರ ಅಡಿಯಲ್ಲಿ ಅವರು ಕಾರ‍್ಯನಿರ್ವಹಿಸುತ್ತಾರೆ. ಕರೋನಾದಂತ ವ್ಯಕ್ತಿಯ ಕೊನೆಯ ಉಸಿರಿನ ಉದ್ವೇಗಕ್ಕೂ ಅವರು ಸಾಕ್ಷಿಯಾಗಿರುತ್ತಾರೆ. ಅವರ ಬದುಕಿನ ಹಂಗನ್ನೂ ತೊರೆದು. ಸಾವು ಎಲ್ಲರಿಗೂ ಇದ್ದೇ ಇದೆ. ಆದರೆ ಕರೋನಾದಂಥ ರೋಗದಿಂದ ನಿಮಗೂ ಒಂದು ದಿನ ಆ ಕೊನೆಯಉಸಿರಾಟದ ಸಂಘರ್ಷ ಎದುರಾಗಬಹುದು.
ಧೈರ್ಯಗೆಡಬೇಡಿ, ಉಸಿರು ದೀರ್ಘವಾಗಿಸಿ. ನಿಮ್ಮನ್ನೂ ಪ್ರೀತಿಸುವವರು, ನಿಮ್ಮ ಆಗಮನಕ್ಕೆ ಕಾಯುವವರು ಇದ್ದೇ ಇದ್ದಾರೆ. ಎಲ್ಲರಿಗೂ ಅಷ್ಟೇ ಬದುಕಲು ಹಿಡಿ ಪ್ರೀತಿ ಸಾಕು. ವೈದ್ಯರಲ್ಲಿಯೂ,ರೀಗಿಯಲ್ಲಿಯೂ, ನಿಮ್ಮ, ನಮ್ಮಲ್ಲಿಯೂ…