ಅತ್ಯಾಚಾರ ಎಂಬ ಸಾಂಕ್ರಾಮಿಕ ಸೋಂಕಿಗೆಲ್ಲಿಯ ಲಸಿಕೆ ?
ಪ್ರತಿಸ್ಪಂದನ
ಸರಸ್ವತಿ ವಿಶ್ವನಾಥ್ ಪಾಟೀಲ್
ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆದಿವೆ. ಅತ್ಯಾಚಾರ ಒಬ್ಬನಿಂದ ಆಗಲಿ ಅಥವಾ ಸಾಮೂಹಿಕವಾಗೇ ನಡೆದಿರಲಿ ಅದರಲ್ಲಿ ಪಾಲ್ಗೊಳ್ಳುವವರಲ್ಲಿ ಬಹುತೇಕರು ಸಾಮಾನ್ಯವಾಗಿ ಆ ಸಂತ್ರಸ್ತೆಗೆ ಪರಿಚಯದವರೇ ಆಗಿರುತ್ತಾರೆ ಎಂಬುದು ಗಮನಾರ್ಹ.
ಬಹುಶಃ ‘ಅತ್ಯಾಚಾರ’ ಪದವಿಲ್ಲದ ಮಾಧ್ಯಮಗಳೇ ಇಲ್ಲ. ಅದು ದಿನಪತ್ರಿಕೆಗಳಾಗಲೀ, ಸುದ್ದಿವಾಹಿನಿಗಳೇ ಆಗಿರಲಿ, ಸಾಮಾಜಿಕ ಜಾಲತಾಣಗಳಲ್ಲಿಯೇಇರಲಿ. ನಿತ್ಯ ರಾರಾಜಿಸುವುದು ಅತ್ಯಾಚಾರ ಪ್ರಕರಣಗಳೇ! ತೀರಾ ಅಸಹ್ಯವೆನಿಸುವುದು, ತಂದೆಯೇ ಅಪ್ರಾಪ್ತ ಮಗುವಿನ ಮೇಲೆ ಅತ್ಯಾಚಾರ ಎಸಗುವ ಸುದ್ದಿ,ಮೊಮ್ಮಗಳ ಮೇಲೆ ಮುಗಿಬೀಳುವ ವೃದ್ಧ, ಸೋದರ ಮಾವನಿಂದ ಹಸುಗೂಸಿನ ಮೇಲಿನ ದೌರ್ಜನ್ಯ, ತಾಯಿಯನ್ನೂ ಬಿಡದೇ ಹುರಿದು ಮುಕ್ಕುವ ಮಗ… ಹೀಗೆ ಅತ್ಯಾಚಾರದ ನಾನಾ ವಿಕಾರಗಳ ಅನಾವರಣ ವಾಗುತ್ತಲೇ ಇರುತ್ತವೆ. ಇವು ಕೇವಲ ಸುದ್ದಿಯಾಗುಳಿಯದೇ ಹೆಣ್ಣು ಮಕ್ಕಳನ್ನು ದಿನದಿಂದ ದಿನಕ್ಕೆ ಭಯದ ಕೂಪಕ್ಕೆ ತಳ್ಳುತ್ತವೆ.
ಹೆಚ್ಚುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿತ್ತು. ಹಾಗಾಗಿ ಅಪ್ರಾಪ್ತ ಬಾಲಕಿಯರ,12ವರ್ಷದೊಳಗಿನವರ ಮೇಲೆ ಅತ್ಯಾಚಾರ ಎಸಗುವ ಆರೋಪಿಗಳಿಗೆ ಮರಣ ದಂಡನೆ ವಿಧಿಸುವ ವಿಧೇಯಕವನ್ನು ಮಧ್ಯಪ್ರದೇಶ ವಿಧಾನ ಸಭೆಯಲ್ಲಿ ಒಮ್ಮತದಿಂದ ಅಂಗೀಕರಿಸಿ ದೇಶದಲ್ಲಿಯೇ ಪ್ರ ಪ್ರಥಮ ಬಾರಿಗೆ ಉಗ್ರಶಿಕ್ಷೆ ನೀಡುತ್ತಿರುವ ಸರಕಾರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಷ್ಟೇ ಅಲ್ಲ ಹುಡುಗಿಯರನ್ನು ಹಿಂಬಾಲಿಸುವುದು, ಪ್ರೀತಿಸುವಂತೆ ಪೀಡಿಸುವುದು ಅಲ್ಲಿ ಜಾಮೀನು ರಹಿತ ಅಪರಾಧ.
ಸೃಷ್ಟಿಯ ಅತ್ಯಂತ ‘ಬುದ್ಧಿವಂತ’ ಪ್ರಾಣಿ ಎನಿಸಿಕೊಂಡು ಬೆಳೆದ ಮಾನವ ಇನ್ಯಾವ ಜೀವಜಂತುವೂ ಕಂಡುಕೇಳರಿಯದ ವಿಕೃತಿಯನ್ನು ಪೋಷಿಸಿದ್ದಾನೆ, ರೂಢಿಸಿಕೊಂಡಿದ್ದಾನೆ. ಬಲವಂತದ ಲೈಂಗಿಕತೆ ಮತ್ತು ಅದಕ್ಕಾಗಿ ನಡೆಯುವ ಹಿಂಸೆ ಇಡೀ ಜೀವಸೃಷ್ಟಿಯಲ್ಲಿ ಮನುಷ್ಯಜೀವಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ಅತ್ಯಾಚಾರ ಆಧುನಿಕ ಕಾಲಘಟ್ಟದಲ್ಲೂ ಪಿಡುಗಾಗಿ ಕಾಡುತ್ತಿರುವುದು ದುರಂತ. ಜಾತಿ, ಜನಾಂಗ, ವರ್ಗ, ಪ್ರದೇಶ, ವಯಸ್ಸು, ಸಂಬಂಧ ಎಲ್ಲ ಬಗೆಯ ವ್ಯಾಪ್ತಿ ಮೀರಿ ಈ ಹೇಯಕೃತ್ಯ ನಡೆಯುತ್ತಿದೆ. ಶಾಲೆ, ಕಾಲೇಜು, ಯೂನಿವರ್ಸಿಟಿ ಕ್ಯಾಂಪಸ್, ಕಾರ್ಯಸ್ಥಳ, ಹೊಲ-ಗದ್ದೆ ಬಯಲು, ಪಾಳು ಬಿದ್ದ ಕಟ್ಟಡ, ಮಿಲ, ಕೈಗಾರಿಕಾ ಪ್ರದೇಶ, ರೈಲು ಬೋಗಿ, ಬಸ್, ಶೌಚಾಲಯ, ನಿರಾಶ್ರಿತರ ತಾಣ, ಕ್ಲಬ, ಬಾರ್-ಹೀಗೆ ಎಂದರಲ್ಲಿ ನಡೆಯುವ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಮನುಷ್ಯನಲ್ಲಿ ಅಂತರ್ಗತ ಮೃಗೀಯತನಕ್ಕೆ ಸಾಕ್ಷಿಯಂತಿದೆ.
ಎಷ್ಟೋ ಅತ್ಯಾಚಾರಗಳು ಕಣ್ಮರೆಯಾಗಿ ಹೋಗುತ್ತವೆ. ಆದರೆ, ಕೆಲವು ಮಾತ್ರ ಕಣ್ಣಿಗೆ ಬೀಳುತ್ತವೆ. ಇಡೀ ಸಮಾಜವೇ ಈ ಅಮಾನವೀಯ ಘಟನೆಯ ವಿರುದ್ಧ ದನಿಯೆತ್ತುತ್ತ ದೆಂದರೆ, ಕೆಲ ತಥಾಕಥಿ ಸಮಾಜ ಸುಧಾರಕರು, ಕೂಗುಮಾರಿಗಳೂ ಹೋರಾಟಕ್ಕಿಳಿಯ ಬೇಕೆಂದರೆ ಒಂದೋ ಆರೋಪಿತರಲ್ಲಿ ಒಬ್ಬನಾ ದರೂ ಮುಸ್ಲಿಮನಿರಬೇಕು, ಇಲ್ಲವೇ ಕೃತ್ಯ ಅತ್ಯಂತ ಕ್ರೂರವಾಗಿರಬೇಕು, ಆ ಮಹಿಳೆ ಪಡಬಾರದ ಹಿಂಸೆಯನುಭವಿಸಿ ಸಾವಿಗೀಡಾಗಿರಬೇಕು.. ಇದ್ಯಾವುದೂ ಆಗಿಲ್ಲದಿದ್ದರೆ ದೌರ್ಜನ್ಯಕ್ಕೊಳಗಾದವಳು ಸಮಾಜದ ಪ್ರಬಲ ವರ್ಗಗಳಿಗೆ ಸೇರಿರಬೇಕು. ಆಗಂತೂ ಎಲ್ಲರ ಗಮನ ಆ ಕಡೆ ಹರಿಯುವುದು ಖಚಿತ. ಹಾಗಲ್ಲದಿದ್ದರೆ ಅತ್ಯಾಚಾರ ವಿಷಯವೇ ಅಲ್ಲವೆಂಬಂತಾಗಿರುವುದು ನಮ್ಮ ದೇಶದ ದುರಂತ.
ಸಾಮಾನ್ಯವಾಗಿ ಕೇಳಿಬರುತ್ತಿದ್ದ ಮಾತುಗಳೆಂದರೆ ಅತ್ಯಾಚಾರಕ್ಕೆ ಹೆಣ್ಣುಮಕ್ಕಳೇ ಕಾರಣ, ಮಹಿಳೆಯರು ಧರಿಸುವ ಉಡುಪುಗಳ ಕಾರಣಕ್ಕೆ ಅತ್ಯಾಚಾರಗಳು ನಡೆಯುತ್ತವೆ, ಹೆಣ್ಣ ಮಕ್ಕಳು ಸಂಜೆ-ರಾತ್ರಿ ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಹೊರಹೋಗದೇ ಭದ್ರವಾಗಿ ಮನೆಯ ಇದ್ದರೆ ಇಂತಹವೆಲ್ಲ ನಡೆಯುವುದಿಲ್ಲ- ಇವೇ ಮೊದಲಾದ ವಾದಗಳು ಕೇಳಿ ಬರುತ್ತವೆ. ಒಂಟಿಯಾಗಿ ಹೊರಗೆ ಹೋಗಿದ್ದೇ ಅತ್ಯಾಚಾರಕ್ಕೆ ಕಾರಣ ಎಂದಾದರೆ, ಮೊನ್ನೆ ಮೊನ್ನೆಯಷ್ಟೇ ಅತ್ಯಾಚಾರಕ್ಕೆತುತ್ತಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನ ಯುವತಿಯನ್ನು ಹಾಡಹಗಲೇ ಸಾಮೂಹಿಕ ಅತ್ಯಾಚಾರಗೈದ ನಾಲ್ವರು ಯುವಕರು ಅವಳ ನಾಲಿಗೆ ಕತ್ತರಿಸಿ, ಬೆನ್ನುಮೂಳೆ ಮುರಿದದ್ದಲ್ಲದೇ ಹತ್ಯೆಯನ್ನೂ ಮಾಡಿದರು. ಇದಕ್ಕೆ ಉತ್ತರ ಯಾರ ಬಳಿಯಾದರೂ ಇದೆಯೇ? ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಮಹಿಳೆಯರು ದಲಿತರು ಮತ್ತು ದುರ್ಬಲ ವರ್ಗದವರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಗಳು, ದೌರ್ಜನ್ಯಗಳು ಹೆಚ್ಚಾಗಿವೆ.
‘ಕಾಮಾತುರಾಣಾಂ ನ ಲಜ್ಜಾ ನ ಭಯ’ ಎಂಬುದು ಅಂದಿನಿಂದಲೂ ಅನ್ವಯವಾದ ಮಾತು. ಇಂದು ಹಿಂದೆಂದಿಗಿಂತಲೂ ದಾನವ ಪ್ರವೃತ್ತಿ ಮಾನವನಲ್ಲಿ ಹೆಚ್ಚಿದೆ. ಹೀಗಾಗಿ ಮಾಡಬಾರದ್ದನ್ನು ಮಾಡುತ್ತಿದ್ದೇವೆ, ನೋಡಬಾರದ್ದನ್ನು ನೋಡುತ್ತಿದ್ದೇವೆ, ಕೇಳಬಾರದ್ದನ್ನು ಕೇಳುತ್ತಿದ್ದೇವೆ. ಕರ್ನಾಟಕ ದಂಥ ಸುಸಂಸ್ಕೃತ ನೆಲದಲ್ಲೂ ಹಸುಳೆಗಳಿಂದ ಹಿಡಿದು ವೃದ್ಧರವರೆಗೂ ಅತ್ಯಾಚಾರ ಹೆಚ್ಚುತ್ತಿರುವುದು. ಇಷ್ಟಾದರೂ ಈ ಬಗ್ಗೆ ಮೌನವಹಿಸುತ್ತಿರುವ ಸರಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುವುದಾದರೇ, ಎಲ್ಲಿಗೆ ಬಂದು ನಿಂತಿದೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ? ಯಾರ ರಕ್ಷಣೆಗಾಗಿ ಸರಕಾರ ಕೆಲಸ ಮಾಡುತ್ತಿದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 87 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ಎಂಬ ಆಘಾತಕಾರಿ ವರದಿಯನ್ನು ಸರಕಾರ ನೀಡಿದೆ. 2019ರಲ್ಲಿ ನಡೆದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧದ ವರದಿ ಇದನ್ನು ಪುಷ್ಟೀಕರಿಸುತ್ತದೆ. ಇದರನ್ವಯ ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ.7ರಷ್ಟು ಹೆಚ್ಚಿದೆ. ಒಂದು ವರ್ಷದಲ್ಲಿ 4,05,861 ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ನಡೆದಿದೆ. ದೇಶದಲ್ಲಿ ಪ್ರತಿನಿತ್ಯ ಅದೆಷ್ಟೋ ಹಿಂಸಾಚಾರ ಗಳು, ಅನಾಚಾರಗಳು ನಡೆಯುತ್ತಿರುವ ಜತೆ ಜತೆಗೇ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆಗಳಿಗೆ ಕೊನೆ ಎಂದು ಎನ್ನುವ ಪ್ರಶ್ನೆ ವ್ಯಾಪಕವಾಗಿದೆ. ಇಷ್ಟಾದರೂ ಕೂಡ, ಎಲ್ಲೂ ಇದನ್ನು ತಡೆಯುವ, ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಕಾನೂನುಗಳು ಈವರೆಗೆ ಬಂದೇ ಇಲ್ಲ. ಅದರಲ್ಲೂ ಏನೂ ಅರಿಯದ ಪುಟ್ಟ ಕಂದಮ್ಮಗಳನ್ನೇ ಹಾಡಹಗಲೇ ಅತ್ಯಾಚಾರ ಎಸಗುವ ದುರುಳ ರಕ್ಕಸರು, ಒಂದೊಮ್ಮೆ ಕಾನೂನಿನ ಕೈಗೆ ಸಿಲುಕಿದರೂ ಕೇವಲ ಒಂದೆರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಹೊರಬರುತ್ತಾರೆ.
ಏನು ಅರಿಯದ ಮುಗ್ಧ ಕಂದಮ್ಮಗಳ ಮೇಲೆ ಅತ್ಯಾಚಾರ ಎಸಗುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ಜಾರಿಯಾಗಿಲ್ಲ ಎನ್ನುವುದೇ ಬೇಸರದ ಸಂಗತಿ. ಕಾನೂನಾಗಲಿ, ಸರಕಾರವಾಗಲಿ ಇಂಥ ಅಮಾನವೀಯ ದೌರ್ಜನ್ಯವನ್ನು ಮಟ್ಟ ಹಾಕಲು ಯೋಚಿಸಿದ್ದೇ ಇಲ್ಲ. ಅನುಮಾನವೇ ಇಲ್ಲ, ಅತ್ಯಾಚಾರದ ವಿಷಯದಲ್ಲಿ ಮನುಷ್ಯ ಪಶುವಿಗಿಂತ ಕಡೆಯಾಗಿzನೆ. ಮೈಥುನ ಕ್ರಿಯೆಯನ್ನು ಪ್ರಾಣಿಗಳು ನಿಸರ್ಗದ ನಿಯಮದ ಪ್ರಕಾರ ನಿರ್ದಿಷ್ಟಸಮಯದಲ್ಲಿ ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಅನುಸರಿಸುತ್ತವೆ.
ಆದರೆ ಮಾನವ? ಮೈಥುನ ಕ್ರಿಯೆಯಲ್ಲಂತೂ ಮನುಷ್ಯನನ್ನು ಮೀರಿಸುವ ಪ್ರಾಣಿ ಈ ಜಗತ್ತಿನಲ್ಲಿ ಇನ್ನಾವುದಾದರೂ ಇದೆಯೇ ಎನ್ನುವಂತಾಗಿದೆ. ಸಣ್ಣವರು-ದೊಡ್ಡವರು, ಮಕ್ಕಳು, ಅಕ್ಕ-ತಂಗಿಯರು, ತಾಯಂದಿರು, ಗುರು-ಹಿರಿಯರೆಂಬ ಗೌರವ ಭಾವನೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳ ಮೇಲಷ್ಟೇ ಅಲ್ಲ ಸ್ವಂತ ತಾವೇ ಹುಟ್ಟಿಸಿದ ಮಕ್ಕಳ ಮೇಲೆ ಕೂಡ, ಸುಶಿಕ್ಷಿತ ತಂದೆಯೇ ಅತ್ಯಾಚಾರ ಮಾಡುತ್ತಿದ್ದಾನೆಂಬುದನ್ನು ಪತ್ರಿಕೆಗಳಲ್ಲಿ ಓದಿದಾಗ, ಕೇಳಿದಾಗ ಇದಕ್ಕಿಂತ ಹೆಚ್ಚಿನ ನೈತಿಕ ಅಧಃಪತನ ಇನ್ನಾವುದಾದರೂ ಇದೆಯೇ.
ತೀರಾ ಸಣ್ಣ ಕಾರಣಕ್ಕಾಗಿ, ಹುಡುಗಿಯರ ಮೇಲೆ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ನಡೆಯುವುದೂ ಇದೆ. ಇಂಥ ಸ್ಥಿತಿಗೆ ಕಾರಣ ಏನು? ಮಕ್ಕಳನ್ನು ಹೇಗೆ ಬೆಳೆಸಬೇಕು? ಸಮಾಜದ ಮುಂದೆ ಇಂಥ ಪ್ರಶ್ನೆಗಳು ಸವಾಲಾಗಿ ನಿಂತಿವೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ವೇಷ ಭೂಷಣ, ಆಹಾರ ಪದ್ಧತಿ, ಸಿನಿಮಾ ಮತ್ತು ಟಿವಿ ಸಂಸ್ಕೃತಿ, ಬಿಂದಾಸ್ ಜೀವನ ಶೈಲಿ ಎಲ್ಲವೂ ಇಂಥ ಕೃತ್ಯಕ್ಕೆ ಕೊಡುಗೆ ನೀಡುತ್ತವೆ ಎಂಬುದೇನೋ ನಿಜ. ಆದರೆ ಇದೆಲ್ಲವನ್ನೂ ಮೀರಿದ ಮನೋಭಾವದ ವಿಕೃತಿ ಇಲ್ಲಿ ಕೆಲಸ ಮಾಡುತ್ತಿದೆ. ವಿಶ್ವಾದ್ಯಂತ ಅತ್ಯಾಚಾರದ ಪಿಡುಗು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ.
ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸದೇ ಇರುವುದು ರೇಪಿಸ್ಟ್ ಗಳು ಸ್ವೇಚ್ಛೆಯಿಂದ ವರ್ತಿಸಲು ಮುಖ್ಯ ಕಾರಣ. ನಿಜಕ್ಕೂ ಅಪಮಾನಕಾರಿ ಕೃತ್ಯ ಎಸಗಿದ್ದು ಆ ಆತ್ಯಾಚಾರಿಗಳು. ಹೀಗಾಗಿ ಆ ಮೂಲಕವಾದರೂ ರೇಪಿಸ್ಟ್‌ನನ್ನು ಸಾರ್ವಜನಿಕವಾಗಿ ಅಪಮಾನ ಮಾಡಬೇಕು.ಅತ್ಯಾಚಾರಕ್ಕೆ ಒಳಗಾಗಿ ನರಕ ಯಾತನೆ ಅನುಭವಿಸುವ ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಸ್ಥಿತಿ ತುಂಬಾ ಕೆಟ್ಟದಾಗಿರುತ್ತದೆ. ಆಕೆಯ ಶಿಕ್ಷಣ, ಉದ್ಯೋಗ, ಖಾಸಗಿ ವೈವಾಹಿಕ ಭವಿಷ್ಯ ಆತಂಕದಲ್ಲಿರುತ್ತದೆ. ಆಕೆಗೆ ಎಷ್ಟರ ಮಟ್ಟಿಗೆ ಮನೋವೈಜ್ಞಾನಿಕ ಸಲಹೆ, ಚಿಕಿತ್ಸೆ ಬೇಕಾಗುತ್ತದೆ ಎಂಬುದನ್ನು ಆಪ್ತ ಸಮಾಲೋಚಕರು ನಿರ್ಧರಿಸಬೇಕು. ಇನ್ನು ಆಕೆಯ ಹೆತ್ತವರು ಅನುಭವಿಸುವ ಸಂಕಟ, ನೋವು ಮತ್ತು ಯಾತನೆ ಹೇಳತೀರದು.
ಜತೆಗೆ ತನ್ನದಲ್ಲದ ತಪ್ಪಿಗಾಗಿ ಆಕೆ ಸಮಾಜದಲ್ಲಿ ‘ಅತ್ಯಾಚಾರಕ್ಕೆ ಒಳಗಾದವಳು’ ಎಂಬ ಹಣೆಪಟ್ಟಿ ಆಕೆಯ ಜೀವನದಲ್ಲಿ ಎಂದೂ ಅಳಿಸಲಾರದಂಥ ಕಪ್ಪು ಚುಕ್ಕೆಯಾಗುತ್ತದೆ. ಆಕೆ ಇದರಿಂದ ಎಷ್ಟು ಮಾನಸಿಕ ಹಿಂಸೆ ಅನುಭವಿಸ ಬೇಕಾಗಬಹುದು ಎಂಬುದು ಅದನ್ನು ಅನುಭವಿಸಿದ ರೇಪ್ ವಿಕ್ಟಿಮ್‌ಗಳು ಮತ್ತು ನತದೃಷ್ಟೆಯರಿಗಷ್ಟೇ ಗೊತ್ತು. ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಗಳಿಗೆ ಸಂಬಂಽಸಿದಂತೆ ಅನೇಕ ಅಧ್ಯಯನಗಳು ನಡೆದಿವೆ.ಅತ್ಯಾಚಾರ ಒಬ್ಬನಿಂದ ಆಗಲಿ ಅಥವಾ ಸಾಮೂಹಿಕವಾಗೇ ನಡೆದಿರಲಿ ಅದರಲ್ಲಿ ಪಾಲ್ಗೊಳ್ಳುವವರಲ್ಲಿ ಬಹುತೇಕರು ಸಾಮಾನ್ಯವಾಗಿ ಆ ಸಂತ್ರಸ್ತೆಗೆ ಪರಿಚಯ ದವರೇ ಆಗಿರುತ್ತಾರೆ ಎಂಬುದು ಗಮನಾರ್ಹ.
ಬಸ್‌ಗಳಲ್ಲಿ, ರೇಲ್ವೆ ಬೋಗಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಧ್ಯವಾದಷ್ಟೂ ಸಿಸಿ ಟಿವಿಗಳನ್ನು ಅಳವಡಿಸಬೇಕು. ಮಹಿಳಾ ಸುರಕ್ಷತೆಗೆ ಸಂಬಂಧಪಟ್ಟ ವಿಧೇಯಕಗಳನ್ನು, ಅಂದರೆ ಮಹಿಳೆಯರ ವಿರುದ್ಧ ಆಕೆಯ ಕಾರ್ಯಸ್ಥಳ ಹಾಗೂ ಇತರೆಡೆ ನಡೆಯಬಹುದಾದ ಲೈಂಗಿಕ ಕಿರುಕುಳ, ಅತ್ಯಾಚಾರ ದಂಥ ದೌರ್ಜನ್ಯ ಗಳನ್ನು ತಡೆಗಟ್ಟಲು ಇರುವ ಕಾನೂನನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಕೂಡಲೇ ಜಾರಿಗೊಳಿಸಬೇಕು. ಸಾಧಾರಣವಾಗಿ ಇಂಥ ಕೃತ್ಯ ನಡೆದಾಗ ಸಮಾಜ ರೊಚ್ಚಿಗೇಳುತ್ತದೆ. ಕ್ರಮೇಣ ತಣ್ಣಗಾಗುತ್ತದೆ. ವಿಚಾರಣೆ ತಡವಾಗುತ್ತದೆ. ಇದರಿಂದಾಗಿ ಶಿಕ್ಷೆ ಅಪರಾಽಗಳ ಬಳಿ ಸುಳಿಯುವುದಿಲ್ಲ.
ಮುಂದೆ ಅತ್ಯಾಚಾರಿಗಳು ರಾಜಾರೋಷದಿಂದ ಓಡಾಡಿಕೊಂಡು ಇರುತ್ತಾರೆ. ದೆಹಲಿ ಮತ್ತು ಮುಂಬಯಿಯಲ್ಲಿ ನಡೆದ ಗ್ಯಾಂಗ್‌ರೇಪ್ ಪ್ರಕರಣಗಳು ಹೆಣ್ಣು ಮಗಳೊಬ್ಬಳ ಬಾಳಿಗಷ್ಟೇ ಕಪ್ಪು ಚುಕ್ಕೆ ಅಲ್ಲ. ಅದು ಈಗ ವಿಶ್ವದ ಕಣ್ಣಿನಲ್ಲಿ ಇಡೀ ಭಾರತ ದೇಶಕ್ಕೇ ದೊಡ್ಡ ಕಪ್ಪು ಚುಕ್ಕೆ. ಶಿಕ್ಷೆಯ ಬಗ್ಗೆ ಚರ್ಚಿಸುವುದಕ್ಕಿಂತ ಅದಕ್ಕೆ ಆಸ್ಪದವೇ ನೀಡದಂತೆ ಅತ್ಯಾಚಾರ ನಡೆಯುವುದನ್ನು ತಡೆಗಟ್ಟುವುದೇ ಸೂಕ್ತ ಪರಿಹಾರ. ಅತ್ಯಾಚಾರ ಹೇಗೆ ತಡೆಗಟ್ಟಬೇಕು,ಕಾನೂನಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ, ಅಂತರ್ಜಾಲದ ಮೇಲೊಮ್ಮೆ ಕಣ್ಣಾಡಿಸಿ ನೋಡಿದರೆ, ಜನ ಹೇಗೆ ರೊಚ್ಚಿಗೆದ್ದಿದ್ದಾರೆ ಎಂಬುದು ತಿಳಿಯುತ್ತದೆ. ಗಲ್ಲು ಶಿಕ್ಷೆ ತೀರಾ ಸರಳ. ಆದ್ದರಿಂದ ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಜನನಾಂಗ ಛೇದನ ಮಾಡುವುದೇ ಸೂಕ್ತ ಶಿಕ್ಷೆ. ಕೋರ್ಟ್‌ಗಳಲ್ಲಿ ಇತ್ಯರ್ಥವಾಗದೇ ಉಳಿದಿರುವ ಅತ್ಯಾಚಾರದ ಹಳೇ ಪ್ರಕರಣಗಳನ್ನು ಕೂಡಲೇ ಹೊರ ತೆರೆದು ಅಪರಾಽಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಶಿಕ್ಷೆ ಎಷ್ಟರ ಮಟ್ಟಿಗೆ ಇರಬೇಕೆಂದರೆ ಇಂಥ ಘೋರ ಕೃತ್ಯ ಎಸಗುವವರಿಗೆ ಇದರ ಭಯ ತಟ್ಟಿ, ಅವರು ಈ ರೀತಿಯ ಹೀನ ಕೆಲಸಗಳಿಗೆ ಕೈ ಹಾಕಲು ಹಿಂಜರಿಯುವಂತಾಗಬೇಕು. ಹಾಗಾಗಲಿ.