ಸಂಗೀತವೆನ್ನುವ ಖುಷಿ, ನೆನಪಿನ ಡೆಪಾಸಿಟ್
ಶಿಶಿರ ಕಾಲ
ಶಿಶಿರ್‌ ಹೆಗಡೆ
@.
ನೀವೆಷ್ಟು ಶ್ರೀಮಂತರೆನ್ನುವುದು ನೀವೆಷ್ಟು – ಹಾಯಾದ ಸಂಗೀತ ಕೇಳುತ್ತೀರಿ ಎನ್ನುವುದರ ಮೇಲೆ ನಿರ್ಧರಿತವಾಗುತ್ತದೆ. ಲಯಬದ್ಧ ಸಂಗೀತ ಬಳಸಿಕೊಳ್ಳುವು ದನ್ನು, ನೆನಪಿನ ಜತೆ ಕಟ್ಟಿಹಾಕಿ, ಪುನಃ ಪಡೆಯುವುದನ್ನು ಪಾಶ್ಚಾತ್ಯರು ಮ್ಯೂಸಿಕ್ ಸೈನ್ಸ್ ಎನ್ನುವ ಹೆಸರಿನಲ್ಲಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ.
‘ಕೌಸಲ್ಯಾ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೇ…’ ಹಳೆ ಚಲನಚಿತ್ರಗಳನ್ನು ನೆನಪು ಮಾಡಿಕೊಳ್ಳಿ. ಅದೆಷ್ಟೋ ಕನ್ನಡ ಚಿತ್ರಗಳು ಹಿಂದೆಲ್ಲ ಶುರುವಾಗು ತ್ತಿದ್ದುದೇ ಬೆಳಗಿನ ಚಿತ್ರಣದಿಂದ. ಅದರಲ್ಲೂ ಆ ಸೀನ್ ಬೆಂಗಳೂರಿನದಾಗಿದ್ದರೆ ಅದು ಬೆಳಗಿನ ಸಮಯ ಎನ್ನುವ ಅರಿವು ಬರುತ್ತಿದ್ದುದೇ ವೆಂಕಟೇಶ್ವರ ಸುಪ್ರಭಾತದಿಂದ.
ನೀವು ಒಂದು ಸೀನ್ ಮತ್ತು ಈ ವೆಂಕಟೇಶ್ವರ ಸುಪ್ರಭಾತವನ್ನು ಒಟ್ಟಿಗೆ ಗ್ರಹಿಸಿದರೆ ನಮಗರಿವಿಲ್ಲದಂತೆ ಅದು ಬೆಳಗಿನ ಸಮಯ ಎಂದು ನಮ್ಮ ಮೆದುಳು ಅಂದಾಜಿಸಿಬಿಡುತ್ತದೆ. ಇನ್ನು ಅದೇ ಬೆಳಗಿನ ಸೀನ್ಹಳ್ಳಿಯzಗಿದ್ದರೆ ಅಲ್ಲಿ ಕೋಳಿ ಕೂಗಿಸುತ್ತಾರೆ. ಇದೆಲ್ಲ ನಮ್ಮ ಮೆದುಳಿನ ಕಿತಾಪತಿ. ಒಂದು ಪ್ಯಾಟರ್ನ್ ಅನ್ನುಗ್ರಹಿಸಿ ಹಿಂದಿನ ನೆನಪನ್ನು ಜಾಗೃತಗೊಳಿಸಿ, ಹೋಲಿಕೆ ಮಾಡಿ ಪಂಚೇಂದ್ರಿಯದ ಅರಿವಿಗಿಂತ ಮೊದಲು ಇದು ಹೀಗೆಯೇ ಎಂದು ತಯಾರಾಗಿಬಿಡುವ ಮೆದುಳಿನ ಅಧಿಕಪ್ರಸಂಗತನ ಅಥವಾ ಬುದ್ಧಿವಂತಿಕೆ ಅದು.
ಮೆದುಳು ವಿಚಿತ್ರ. ವಿeನ ಅಷ್ಟು – ಇಷ್ಟೆಲ್ಲ ಮುಂದುವರಿದಿದೆ ಎಂದರೂ ನಮಗೆ ಅಂತ್ ಪಾರ್ ಹತ್ತದಷ್ಟು ಕ್ಲಿಷ್ಟತೆಯನ್ನು ಈ ಮೆದುಳು ತನ್ನೊಡಲಲ್ಲಿಟ್ಟುಕೊಂಡಿದೆ. ಯಾವ ವಿಜ್ಞಾನಿ ಇದು ಹೀಗೆಯೇ ಎಂದರೂ ಅದರಾಚೆ ಇನ್ನೇನೋ ಒಂದಿಷ್ಟು ಹೊಸತು ಪ್ರತೀ ದಿನ ಹೊರಕ್ಕೆ ಬರುತ್ತಲೇ ಇರುತ್ತದೆ. ಅದರಲ್ಲಿ ಸತ್ಯವೆಷ್ಟು – ಮಿಥ್ಯ ವೆಷ್ಟು ಎನ್ನುವುದಕ್ಕಿಂತ, ಈಗೀಗಂತೂ ಮೆದುಳಲ್ಲಿ ಹಾಗಿದೆಯಂತೆ – ಹೀಗಾಗುತ್ತದಂತೆ ಎಂದು ಅದ್ಯಾವುದೋ ಒಂದು ಯೂನಿವೆರ್ಸಿಟಿಯ ರಿಸರ್ಚ್‌ನ ಹೆಸರಿನ ಜತೆ ಪ್ರಕಟವಾದರೆ ಅದನ್ನು ನಂಬಿಬಿಡುತ್ತೇವೆ. ಅಂತಹ ನಂಬಿಕೆಗೂ ನಮ್ಮ ಮೆದುಳು ಹಿಂದೆ ಇಂಥದ್ದೇ ಸಮಯ ಬಂದಾಗ ನಂಬಿದ್ದನ್ನು ನೆನಪಿಸಿ ಕೊಂಡು ಮತ್ತೆ ಅದು ಸತ್ಯವಿರಬಹುದು ಎಂದು ತಾಳೆ ಹಾಕುವುದು ಕಾರಣ. ಇದು ಒಂದಂಶ ಮುಂದಕ್ಕೆ ಹೋದರೆ ಪೂರ್ವಗ್ರಹ ಎಂದಾಗುತ್ತದೆ – ಬಿಡಿ.
ಕೆಲವು ತೀರಾ ಸಾಮಾನ್ಯವೆನಿಸುವ ವಿಚಾರಗಳತ್ತ ನಾವು ಅಷ್ಟಾಗಿ ಗಮನ ಹರಿಸಿಯೇ ಇರುವುದಿಲ್ಲ. ಅದರಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವುದು ಸಂಗೀತ. ಸಂಗೀತ ನಮ್ಮ ಆತಂಕ, ಉದ್ವೇಗ, ರಕ್ತದೊತ್ತಡ, ಎದೆಬಡಿತ ಇವನ್ನೆಲ್ಲ ಹದಕ್ಕೆ ತಂದು ಮೂಡ್ ಸರಿಮಾಡಬಲ್ಲದು, ಮಾನಸಿಕ ಸಮಸ್ಯೆಯನ್ನೂ ಪರಿಹರಿಸಬಲ್ಲದು, ಇದೆಲ್ಲ ಸರಿ. ಆದರೆ ಸಂಗೀತಕ್ಕೂ ಮೆದುಳಿಗೂ ಮತ್ತು ನೆನಪಿಗೂ ಅದೇನೋ ಸಂಬಂಧ! ಸಂಗೀತಕ್ಕಿರುವ ಒಂದು ಅದ್ಭುತ ಶಕ್ತಿ ಎಂದರೆ ಅದು ನೆನಪಿ ನೊಡನೆ ಜತೆಯಾಗುವ ರೀತಿ.
ಕೆಲ ದಿನಗಳ ಹಿಂದೆ ಇಲ್ಲಿನ ಸುದ್ದಿ ಚಾನೆಲ್‌ನ ಒಂದು ಕಾರ್ಯಕ್ರಮ ನೋಡುತ್ತಿದ್ದೆ. ಅದು ರೋಸಿ ಎನ್ನುವ ಸಾಮಾನ್ಯ ಮುದುಕಿಯ ಚಿಕ್ಕ ಇಂಟರ್‌ವ್ಯೂ. ಆಕೆ ಅಕ್ಷರಶಃ ಹಣ್ಣು ಮುದುಕಿ. ತನ್ನ ನೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಳು. ವೃದ್ಧಾಶ್ರಮದಲ್ಲಿ ರೋಸಿಯ ಸುತ್ತ ಕುಟುಂಬದವರೆಲ್ಲ ನೆರೆದಿದ್ದರು. ಕೋವಿಡ್ ಕಾರಣದಿಂದವರು ಆಕೆಯನ್ನು ಭೆಟ್ಟಿಯಾಗಿ ಎರಡು ವರ್ಷವೇ ಕಳೆ ದಿತ್ತು. ಆಕೆಗೆ ಮರೆವು. ಪಕ್ಕದಲ್ಲಿ ಕೂತ ಸ್ವಂತ ಮಗನನ್ನು ಕೂಡ ಆಕೆ ಗುರುತಿಸು ತ್ತಿರಲಿಲ್ಲ. ಸಂದರ್ಶಕಿ ಇವರು ಯಾರು ಗೊತ್ತೇ ಎಂದು ಎಪ್ಪತ್ತರ ಮಗನನ್ನು ತೋರಿಸಿ ಕೇಳಿದರೆ ಈತ ತನ್ನ ಗಂಡನಂತೂ ಆಗಿರಲಿಕ್ಕಿಲ್ಲ ಎಂದು ಚಿಕ್ಕ ಮಗುವಿ ನಂತೆ ನಕ್ಕುಬಿಟ್ಟಳು. ಈತ ಆಕೆಯ ಮಗ ಎಂದು ಎಲ್ಲರೂ ನಕ್ಕಾಗ ಆಕೆ ಕೂಡ ಇನ್ನೊಮ್ಮೆ ನಕ್ಕುಬಿಟ್ಟಳು.
ತನಗೆ ಎಲ್ಲ ಮರೆತುಹೋಗಿದೆ ಎಂದಳು. ಆಕೆಯ ಗಂಡನ ಹೆಸರು ಕೇಳಿದಾಗ ಅದು ಕೂಡ ನೆನಪಿಗೆ ಬಾರದೇ ಮಗದೊಮ್ಮೆ ಹಲ್ಲು ಕಿರಿದಳು. ಅಂತಹ ಸಮಯ ದಲ್ಲಿ ಆಕೆ ಮಧ್ಯವಯಸ್ಸಿನಲ್ಲಿ ಕೇಳುತ್ತಿದ್ದ, ಆಕೆಯ ಇಷ್ಟದ ಒಂದು ಹಾಡನ್ನು ಮಗ ಆಕೆಯ ಮುಂದೆ ಪ್ಲೇ ಮಾಡಿದ. ಕೂಡಲೆ ಆಕೆ ಕೂತ ಕುಣಿಯಲು ಶುರುಮಾ ಡಿದಳು. ಕೈ ಕಾಲುಗಳು ತಾಳ ಹಾಕಲು ಶುರುಮಾಡಿದವು. ರೋಸಿ ಆ ಇಡೀ ಹಾಡನ್ನು ಗುನುಗಲು ಶುರುಮಾಡಿದಳು. ಕ್ಷಣಾರ್ಧದಲ್ಲಿ ಆ ಹಾಡನ್ನು ತಾನು ಯಾವಾಗ ಕೇಳುತ್ತಿದ್ದೆ, ಆಕೆಯ ಗಂಡ, ಮಕ್ಕಳ ಹೆಸರನ್ನು ಪಟಪಟನೆ ಹೇಳಿಬಿಟ್ಟಳು.
ಇದೊಂದು ಸರಳ, ನೂರರ ಮುದುಕಿಯ ಸಂದರ್ಶನವಾದರೂ ಅಲ್ಲಿ ಕಾಣಿಸಿದ್ದು ಸಂಗೀತದ ಶಕ್ತಿ. ಸಂಗೀತದೊಂದಿಗೆ ನೆನಪು ಥಳಕುಹಾಕಿಕೊಂಡದ್ದು ಮತ್ತುನೆನಪು ಸಂಪೂರ್ಣ ಮಾಸಿದ ನಂತರ ಕೂಡ ಮರುಕಳಿಸುವಂತೆ ಮಾಡಿದ ಸಂಗೀತದ ಪಾತ್ರ. ರೋಸಿಯ ಮೆದುಳಿನ ಬಹುತೇಕ ಕನೆಕ್ಷನ್ನುಗಳು ಹೆಚ್ಚುಕಡಿಮೆ ಯಾಗಿ ಆಕೆಗೆ ಯಾವೊಂದು ವಿಚಾರವೂ ನೆನಪಿರುತ್ತಿರಲಿಲ್ಲ. ಆದರೆ ಆಕೆ ಕೇಳಿದ ಆ ಹಾಡು ಆಕೆಯ ನೆನಪನ್ನು ಪುನಃ ಅದೆಲ್ಲಿಂದಲೋ ಹೆಕ್ಕಿ ತಂದು ಆಕೆಯ ಮನಃಪಟಲದಲ್ಲಿ ಮೂಡಿಸಿತ್ತು, ಆಕೆಯನ್ನು ಮಾತನಾಡಿಸಿತ್ತು.
ಸಂಗೀತ ಮತ್ತು ನೆನಪಿನ ಸಂಬಂಧವೇ ಅಂಥದ್ದು. ಇಂಥ ಅನುಭವ ನಮಗೂ ಆಗುತ್ತಿರುತ್ತದೆ. ಅದೆಲ್ಲಿಯೋ ಒಂದು ಸುಂದರ ಸಮಯದಲ್ಲಿ ಕೇಳಿದ ಹಾಡು, ಸಂಗೀತ ಮತ್ತೊಮ್ಮೆ ಇನ್ನೆ ಕೇಳಿದಾಗ ಅಷ್ಟೇ, ಅಂದಿನಷ್ಟೇ ಉಸದ ಅನುಭವವ ಮನಸ್ಸಿನಲ್ಲಿ ನಿರ್ಮಾಣವಾಗುತ್ತದೆ. ಇಂತಹ bಛ್ಜಿ (ಪೂರ್ವಾನುಭವ ಭಾವ) ಸಂಗೀತಕ್ಕಷ್ಟೇ ಸಾಧ್ಯ. ಇದನ್ನೇ ಇನ್ನೊಂದು ರೀತಿ ಗ್ರಹಿಸುವುದಾದರೆ, ನಾವು ಇಂದಿನ ಸಂತಸದ, ಖುಷಿಯ ಸಮಯವನ್ನು ನಮಗಿಷ್ಟವಾಗುವ, ಹಾಯೆನಿಸುವ ಸಂಗೀತದೊಂದಿಗೆ ಅನುಭವಿಸಿದರೆ ಮುಂದೊಮ್ಮೆ ಬೇಸರಗೊಂಡಾಗ ನಮ್ಮ ಮೆದುಳು ಇಂತಹ ಸವಿ ಅನುಭವದ ಭಾವವನ್ನು ಮತ್ತೊಮ್ಮೆ ಹುಟ್ಟುಹಾಕುತ್ತದೆ. ಮೆದುಳು ಕೆಲಸ ಮಾಡುವುದೇ ಹಾಗೆ.
ಒಂದಕ್ಕೊಂದು ಸಂಬಂಧ ಕಲ್ಪಿಸಿ ಅದನ್ನು ನೆನಪಿನ ಜತೆ ಮತ್ತದೇ ಸಂಗೀತದ ಜತೆ ಇದ್ದ ಭಾವ ಪ್ರಚೋದಿಸುವುದು. ಹಾಗಾಗಿಯೇ ಜೀವನದ ಪಯಣದ ಜತೆ, ಖುಷಿಯಾದಾಗ, ಒಳ್ಳೆಯ ಮೂಡಿನಲ್ಲಿzಗ ಒಂದೊಳ್ಳೆ ಸಂಗೀತ ಕೇಳಬೇಕು; ಮನಸ್ಸಿನ ಉದ್ವೇಗ ಶಮನಕ್ಕೆ, ಆರೋಗ್ಯಕ್ಕೆ ಸಂಗೀತ ಕೇಳಬೇಕು ಎನ್ನುತ್ತಾರೆ ವಿeನಿಗಳು. ಆದರೆ ಬೇಸರದಲ್ಲಿ ಕೇಳಿದ ಸಂಗೀತ ಆ ಕ್ಷಣಕ್ಕೆ ಬೇಸರವನ್ನು ಶಮನಿಸಿದರೂ ಮುಂದೊಮ್ಮೆ ಬೇಸರವೇ ಉತ್ಕಟತೆಯಲ್ಲಿದ್ದಾಗ ಆ ಬೇಸರದಭಾವವನ್ನು ಅದು ಮುನ್ನೆಲೆಗೆ ತಂದು ನಿಲ್ಲಿಸಬಹುದು. ಇದು ದೀರ್ಘಕಾಲದ ಮಾತಾಯಿತು. ಇನ್ನು ಅಲ್ಪಾವಧಿಯ ನೆನಪು ಹೇಗೆ ಕೆಲಸ ಮಾಡುತ್ತದೆ ಎನ್ನುವು ದಕ್ಕೆ ನೀವೇ ಒಂದು ಪ್ರಯೋಗ ಮಾಡಬಹುದು. ಪ್ರತಿ ಬೆಳಗ್ಗೆ ಎದ್ದಾಕ್ಷಣ ಸಾಮಾನ್ಯವಾಗಿ ಮನಸ್ಸು ಹಗುರವಾಗಿರುತ್ತದೆ.
ಕ್ರಮೇಣ ವಿಚಾರಗಳು ನಮ್ಮನ್ನಾವರಿಸಿ ಆ ದಿನದ ಮುಂಬರುವ ಜಂಜಾಟಗಳಿಗೆ ಮನಸ್ಸು ತಯಾರಾಗುವುದು. ಇವೆರಡರ ನಡುವಿನದು ತೀರಾ ಆಯಕಟ್ಟಿನ ಸಮಯ. ಎzಕ್ಷಣ ಮೊಬೈಲ್ ಹಿಡಿದು, ಸೋಷಿಯಲ್ ಮೀಡಿಯಾ ಜಾಲಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಅದರ ಬದಲಿಗೆ ಒಂದೊಳ್ಳೆ ಸಂಗೀತ ಆಲಿಸಿದರೆ ಮನಸ್ಸು ಆ ಬೆಳಗಿನ ಸೌಮ್ಯವನ್ನು ಸಂಗೀತದೊಂದಿಗೆ ಥಳಕು ಹಾಕಿಕೊಳ್ಳುತ್ತದೆ. ಮಧ್ಯಾಹ್ನ ಅಥವಾ ಮುಸ್ಸಂಜೆ – ಯಾವಾಗ ಮನಸ್ಸಿನ ಉದ್ವೇಗ ಹೆಚ್ಚಿರುತ್ತದೆಯೋ ಆ ಸಂದರ್ಭದಲ್ಲೂ ಮತ್ತದೇ – ಬೆಳಗ್ಗೆ ಕೇಳಿದ ಹಾಡನ್ನೇ ಕೇಳುವುದರಿಂದ ಮನಸ್ಸು ಬೆಳಗಿನ ನೆನಪನ್ನು ಪುನಃ ಜಾಗೃತಗೊಳಿಸುತ್ತದೆ. ನೆನಪು ಅನ್ನುವುದಕ್ಕಿಂತ ಬೆಳಗಿನ ಸ್ಥಿತಿಗೆ ಮನಸ್ಸು ಪುನಃ ಹೋಗಿಬಿಡುತ್ತದೆ ಮತ್ತುಉಸತುಂಬುತ್ತದೆ.
ಸಂಗೀತವೆಂದರೆ ಅಸಲಿಗೆ ಏನು? ಒಂದು ರಿದಮಿಕ್ – ಲಯಬದ್ದ ಶಬ್ದಗಳು, ರಾಗ, ತಾಳ. ಇದರ ಅನುಭವ ಇನ್ನಷ್ಟು ಗೋಚರವಾಗಬೇಕೆಂದರೆ ಬೆಳಗ್ಗೆ ಎದ್ದಾಕ್ಷಣ ಸಂಗೀತದ ಬದಲು ಯಾವುದಾದರೊಂದು ಸ್ವರ ಮಂತ್ರವನ್ನು ಕೇಳುವುದು. ರುದ್ರ, ಮೃತ್ಯುಂಜಯ ಮಂತ್ರ, ಗಾಯತ್ರಿ ಮಂತ್ರ ಅಥವಾ ಕೊನೆಯ ಪಕ್ಷ ಓಂಕಾರವನ್ನು ಒಂದು ಹದಿನೈದು ನಿಮಿಷ ಕೇಳಿದರೆ ಬೆಳಗಿನ ಶಾಂತತೆ ಯನ್ನು ಲೋಕ್ ಮಾಡಿಕೊಂಡಂತೆ. ಅದನ್ನೇ ನಂತರದಲ್ಲಿ ಪುನರಾವರ್ತಿಸಿ ಕೇಳಿದರೆ ಉಸದ ಅನುಭವ ಅರಿವಿಗೆ ಬರುತ್ತದೆ.
ಸಾಮಾನ್ಯವಾಗಿ ಬೆಳಗ್ಗೆ ಮೊದಲು ಕೇಳಿದ ಹಾಡು ಅಥವಾ ಸ್ವರ ಮಂತ್ರವನ್ನು ನಾವು ನಮಗರಿವಿಲ್ಲದಂತೆ ಇಡೀ ದಿನ ಯಾವಯಾವಗಲೋ ಗುನುಗುತ್ತಿರು ತ್ತೇವೆ. ಅಯ್ಯೋ ಈ ಹಾಡೊಂದು ಬೆಳಗ್ಗೆಯಿಂದ ಕಾಡುತ್ತಿದೆ ಎಂದು ಆಡಿಕೊಳ್ಳುವುದಿದೆ. ಅದಕ್ಕೆ ಮೂಲದಲ್ಲಿ ಕಾರಣ ನಮ್ಮ ಮನಸ್ಸು ಮತ್ತದೇ ಬೆಳಗಿನ ಆ ಮುಗ್ಧತೆಯನ್ನು, ಶಾಂತತೆಯನ್ನು ಪುನಃ ಬಯಸುವುದು. ಅದಕ್ಕೆ ವಿಜ್ಞಾನ ಹೇಳುವುದು ‘oಠ್ಟಿಛಿ ಚ್ಠಿoಠಿಜ್ಞಿಜ eಞಞಜ್ಞಿಜ’ ಎಂದು ಸಂಗೀತ, ಸ್ವರಮಂತ್ರಗಳನ್ನು ನಾವು ಇಂದು ತೀರಾ ಲಘುವಾಗಿ ಪರಿಗಣಿಸುತ್ತೇವೆ. ಹೆಚ್ಚಿನ ಬಾರಿ ಸಂಗೀತವನ್ನುಚ್ಟಿZಜ್ಞ್ಝಿಛಿooಆಗಿ ಕೇಳುವುದಿದೆ. ಇಂದು ನಮಗೆ ಒಂದಾದ ನಂತರ ಒಂದು ಹಾಡುಗಳು, ಎ-ಎಂ ರೇಡಿಯೋ ಹೀಗೆ ಸಂಗೀತಕ್ಕಿಂತ ಗದ್ದಲಗಳೇ ಜಾಸ್ತಿಯಾಗಿ ಲಭ್ಯ. ಇವೆಲ್ಲ ಕಾರಣದಿಂದ ನಿಜ ಸಂಗೀತದ -ಲಾನುಭವವೇ ಆಗುವುದಿಲ್ಲ. ಇಂದು ಸಂಗೀತ ಕೇಳುವುದನ್ನು ಕೂಡ ಕಲಿಯಬೇಕಾದ ಸ್ಥಿತಿ ಬಂದುಬಿಟ್ಟಿದೆ.
ಹಿಂದೂಸ್ತಾನಿ ಮತ್ತು ಕರ್ನಾಟಕಿ ಸಂಗೀತದಲ್ಲಂತೂ ಯಾವ ಹೊತ್ತಿನಲ್ಲಿ ಯಾವ ರಾಗ ಕೇಳಬೇಕು ಎಂಬ ವಿಂಗಡಣೆಯೇ ಇದೆ. ಸೂರ್ಯೋದಯದಸಂದರ್ಭವಾದರೆ ಜೋಗಿಯಾ, ಭತಿರ್ಯಾ, ಅಹಿರ್ ಭೈರವಿ, ತೋಡಿ, ಮಧ್ಯಾಹ್ನಕ್ಕೆ ಭೀಮ-ಲಾಸ್, ಮುಲ್ತಾನಿ, ಸಾಯಂಕಾಲಕ್ಕೆ ಯಮನ್ ಕಲ್ಯಾಣ್, ದುರ್ಗಾ,ಜೈಜವಂತಿ, ರಾತ್ರಿಗೆ ಮಾರುಬಿಹಾಗ್, ತಡ ರಾತ್ರಿಗೆ ಶಂಕರಾ, ಮಧ್ಯರಾತ್ರಿಗೆ ಮಾಲಕೌಂಸ್… ಹೀಗೆ ಸುಮ್ಮನೆ ಹುಡುಕಿದರೆ ಆಯಾ ಸಮಯಕ್ಕೆ ಹತ್ತಿಪ್ಪತ್ತು ರಾಗಗಳು.
ಇಂತಹ ಪರಮಾದ್ಭುತ ಸಂಗೀತ ವೈವಿಧ್ಯಗಳು ನಮ್ಮಲ್ಲಿವೆ. ಇವು ಆಯಾ ಸಮಯದ ಮನಸ್ಸಿನ ಅವಶ್ಯಕತೆಗಳು ಸಹ. ಅವನ್ನು ಖುಷಿಯ ಜತೆ ಕೇಳಿದರೆ ಆ ನೆನಪು, ಸವಿಭಾವ ಒಂದು ರೀತಿಯಲ್ಲಿ ಸಂಗೀತವೆನ್ನುವ ಬ್ಯಾಂಕ್‌ನಲ್ಲಿ ಡೆಪಾಸಿಟ್ ಇಟ್ಟಂತೆ. ಮತ್ತೆ ಬೇಕೆಂದಾಗ ಪಡೆಯಬಹುದು. ನೀವೆಷ್ಟು ಶ್ರೀಮಂತ ರೆನ್ನುವುದು ನೀವೆಷ್ಟು – ಹಾಯಾದ ಸಂಗೀತ ಕೇಳುತ್ತೀರಿ ಎನ್ನುವುದರ ಮೇಲೆ ನಿರ್ಧರಿತವಾಗುತ್ತದೆ. ಲಯಬದ್ಧ ಸಂಗೀತ ಬಳಸಿಕೊಳ್ಳುವುದನ್ನು, ನೆನಪಿನ ಜತೆ ಕಟ್ಟಿಹಾಕಿ, ಬೇಕೆಂದಾಗ ಪುನಃ ಪಡೆಯುವುದನ್ನು ಪಾಶ್ಚಾತ್ಯರು ಮ್ಯೂಸಿಕ್ ಸೈನ್ಸ್ ಎನ್ನುವ ಹೆಸರಿನಲ್ಲಿ ಇಂದು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.
ನಾವು ಹಳೆಯದೆಂದು ಬಿಟ್ಟ ಟ್ರೆಂಡ್, ಮುಂದೊಂದು ದಿನ ಹೊಸತೆಂದು, ಮಾರುವೇಷದಲ್ಲಿ ನಮ್ಮನ್ನು ತಲುಪುವುದರ ಒಳಗೆ ನಾವೇ ಅದನ್ನು ಪುನಃ ನಮ್ಮದಾ ಗಿಸಿಕೊಳ್ಳಬಾರದೇಕೆ? ಅಲ್ಲವೇ?