ಬಾರೋಲಿಯಲ್ಲೊಂದು ಬಣ್ಣದ ಜಾತ್ರೆ…
ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehandale100@.
ಅದು ತುಂಬಾ ದೊಡ್ಡ ಪಟ್ಟಣವೂ ಅಲ್ಲ. ಇತ್ತ ಬರಗೆಟ್ಟ ಹಳ್ಳಿಯೂ ಅಲ್ಲ. ಆದರೆ ಆ ಜಿಲ್ಲೆಯ ಸುತ್ತ ಮುತ್ತ ಎಲ್ಲೇ ಪ್ರವಾಸಿಗನೊಬ್ಬ ಸುಳಿದಾಡಿದರೂ ಅಲ್ಲಿನಗೈಡುಗಳು, ರಿಕ್ಷಾದವರು, ಟ್ಯಾಕ್ಸಿ ಚಾಲಕರು, ಕೊನೆಗೆ ಹೋಟೆಲ್ ಸಿಬ್ಬಂದಿ ಬಹು ಆಪ್ತತೆಯಿಂದ ‘ಸಾರ್.. ಇದೆಲ್ಲ ಒಕೆ, ಇಷ್ಟೆಲ್ಲ ನೀವು ಸುತ್ತಾಡಿದ್ದೂ ಒಕೆ. ಆದರೆ ರಾಜ್ಯದ ಮೂಲೆ ಮೂಲೆಯ ಇತಿಹಾಸ ಪ್ರಸಿದ್ಧ ಪ್ರವಾಸಿ ಸ್ಥಳ ಎಲ್ಲ ಸುತ್ತಾಡಿದ ಮೇಲೆ ಬಾರೋಲಿಯ ಘಾಟೇಶ್ವರ ಇಲ್ಲ ಯಾಕೆ..?’ ಎನ್ನುವ ಪ್ರಶ್ನೆಯನ್ನು ಸವಿ ಯಾಗೆ ಎದುರಿಗಿಡುತ್ತಾರೆ.
ಕೇಳಿದವರು ಇಲ್ಲ ಎನ್ನಲಾರರು..? ಮಾಹಿತಿ ಸಿಕ್ಕ ಕೂಡಲೇ ಎಲ್ಲಿದೆ ಎಂದು ಹೊರಡುವವರಿಗೂ ಕಮ್ಮಿ ಇಲ್ಲ. ಕಾರಣ ಸ್ಥಳೀಯರಿಗೆ ಇದೊಂದು ಪ್ರವಾಸೋದ್ಯ ಮದ, ವ್ಯವಹಾರದ ಮತ್ತು ಆದಷ್ಟೂ ಲಾಭ ನಷ್ಟದ ಬಾಬತ್ತೂ ಹೌದು. ಅಂದ ಹಾಗೆ ರಾಜಸ್ತಾನ್ ಪ್ರವಾಸಿಗ ಹೆಚ್ಚಾಗಿ, ಹತ್ತು ಹಲವು ನೋಟೆಡ್ ಪ್ರದೇಶಗಳನ್ನು ಜೋಡಿಸಿ ಕೊಂಡು ಹೊರಡುವುದು, ಅದರಲ್ಲೇ ಕೆಲವರು ಯೂನಿಕ್ ಎನ್ನುವ ರೀತಿಯ ಪ್ರವಾಸಿ ಆಯೋಜನೆ ಮೂಲಕ ಭಿನ್ನ ಎನ್ನಿಸುವಂತೆ ಮಾಡಿರುವುದೂ ಇರುತ್ತೆ.
ಆದರೆ ಆಫ್ ಬೀಟ್ ಪ್ರವಾಸದಲ್ಲಿ ಕೇವಲ ಬ್ಲಾಗರ್‌ಗಳು, ವ್ಲಾಗರಗಳು, ಪ್ರವಾಸಿ ಕೈಪಿಡಿಯ ಚಿಕ್ಕಪುಟ್ಟ ಮಾತಿ ಸೇರಿಸುವವರು ಮಾತ್ರ ಇಂಥಾ ಪ್ರದೇಶದ ಬಗ್ಗೆ ಅಲ್ಲಲ್ಲಿ ನಮೂದಿಸುತ್ತಾರೆ, ಹೊರತಾಗಿ ಸಾಮಾನ್ಯವಾಗಿ ಇತ್ತೀಚಿನ ವರ್ಷದವರೆಗೂ ಇವೆಲ್ಲ ಮುಖ್ಯನೆಲೆಯಲ್ಲಿ ಕಾಣಿಸಿಕೊಂಡಿದ್ದು ಕಮ್ಮಿಯೇ. ಗೂಗಲ್ ಮತ್ತು ಹೊಸ ಅಲೆಯ ಹುಡುಕಾಟದ ಪ್ರವಾಸಿ ಹುಡುಗರ ಕಾರಣ ಇದ್ದಕ್ಕಿದ್ದಂತೆ ಮುನ್ನೆಲೆಗೆ ಬರುತ್ತಿರುವ ಹಲವು ಪ್ರದೇಶಗಳ ಪೈಕಿ, ರಾಜಸ್ತಾನದ ಕಡೆಗೆ ಹೋದರೆ ಇದನ್ನೂ ಸೇರಿಸಿಕೊಳ್ಳಿ.
ಯಾವುದೀ ಘಾಟೆಶ್ವರ್, ಎಲ್ಲಿದೆ ಎನ್ನುತ್ತ ಆಲ್ಲಲ್ಲಿ ವಿಚಾರಿಸಿಕೊಂಡರೆ ರಾಜಸ್ಥಾನದ ಪ್ರಮುಖ ಜಿಲ್ಲೆಯಾದ ಚಿತ್ತೋರಘಡದಿಂದ ಯಾರು ಬೇಕಾದರೂ ಅಲ್ಲಿಗೆ ಒಯ್ದು ಮುಟ್ಟಿಸುತ್ತಾರೆ. ಅಧಿಕೃತವಾಗಿ ಇದು ಚಿತ್ತೋರಘಡ ಜಿಲ್ಲೆಯಲ್ಲಿದ್ದರೂ, ಬಾರೋಲಿ ಎಂಬ ಹೆಸರು ಬರಹಗಳಲ್ಲಿ ಬಳಕೆಯಲ್ಲಿದ್ದರೂ ಗುರುತಿಸುವುದು ಘಾಟೇಶ್ವರ್ ಎಂದೇ. ಈಗೀಗ ಸುಲಭಕ್ಕೆ ಅಲೆಮಾರಿಗಳಿಗೆ ಲಭ್ಯವಾಗಲು ಕಾರಣ ಇದು ಭೌಗೋಳಿಕವಾಗಿ ಮತ್ತು ಪ್ರವಾಸಿಗರ ದೃಷ್ಟಿಯಿಂದ ಹೆಚ್ಚು ಹತ್ತಿರವಾಗಿ ರುವುದು ಕೇವಲ28ಕಿ.ಮೀ. ದೂರ ಇರುವ ಕೋಟಾ ನಗರಕ್ಕೆ. ಈ ಕೋಟಾ ಕಳೆದೊಂದು ದಶಕದಿಂದ ಶಿಕ್ಷಣ ಕ್ಷೇತ್ರವನ್ನು ಆವರಿಸಿಕೊಂಡು ಬೆಳೆದ ಅಂದಾಜು ಲೆಕ್ಕದ ಹೊರಗೆ.
ಬಹುಶಃ ಭಾರತದ ಅಷ್ಟೂ ಶಿಕ್ಷಣ ಕ್ಷೇತ್ರಗಳ ನಿದ್ದೆಗೆಡಿಸಿದ ಖ್ಯಾತಿ ಈ ಕೋಟಾದ ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಕೋಚಿಂಗ್ ಕೇಂದ್ರಗಳದ್ದು. ಈಗ ಕೋಟಾ ನಮ್ಮ ದೇಶದಲ್ಲಿ ಅತಿಹೆಚ್ಚು ಶಿಕ್ಷಣ ಸೌಲಭ್ಯಗಳ ವ್ಯವಸ್ಥೆ ಮತ್ತು ಖಾಸಗಿ ಕೋಚಿಂಗ್ ಕೇಂದ್ರಗಳಿಂದ ಪರಿಚಿತವಾಗಿರುವ ಮತ್ತು ಖಾಸಗಿ ಯುನಿವರ್ಸಿಟಿಗಳನ್ನು ಹೊಂದಿ ರುವ ನಗರ ಹಾಗೂ ಬುದ್ಧಿವಂತರನ್ನು ಸೃಷ್ಟಿಸುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇವತ್ತು ಹೆಚ್ಚಿನಂಶ ಎಲ್ಲ ರಾಜ್ಯಗಳಲ್ಲೂ ವೃತ್ತಿಪರ ಕೋರ್ಸುಗಳಿಗಾಗಿ ಖಾಸಗಿ ಕೇಂದ್ರಗಳನ್ನು ನಡೆಸುವಲ್ಲಿ ಕೋಟಾ ನಗರದ ಆಡಳಿತ ಮಂಡಳಿಗಳು ಮಂಚೂಣಿಯಲ್ಲಿವೆ.
ಯಾವುದೇ ಪಾಲಕರು ಒಮ್ಮೆ ನಮ್ಮ ಮಕ್ಕಳನ್ನೂ ಕೋಟಾದ ಹಾಸ್ಟೆಲ್‌ನಲ್ಲಿ ಇರಿಸಿ ಓದಿಸೋಣವೇ ಎಂದು ಯೋಚನೆ ಮಾಡುವಷ್ಟರ ಮಟ್ಟಿಗೆ ಇದು ಪ್ರಭಾವ ಬೀರಿದ್ದು ಸತ್ಯ. ಈ ಕೇಂದ್ರದಿಂದ ಸಾಕಷ್ಟು ಸರಕಾರಿ ಮತ್ತು ಖಾಸಗಿ ವಾಹನ ಸೌಕರ್ಯವಿರುವ ಬಾರೋಲಿ ದೇಗುಲ ಸಮೂಹ ಅರ್ಧ ದಿನ ಸಮಯಾವಕಾಶದ ಸುಂದರ ಮತ್ತು ಪ್ರಶಾಂತ ಸ್ಥಳ. ಸ್ಥಳೀಯವಾಗಿ ಯಾವುದೇ ವಾಹನ ಸೌಕರ್ಯ ಪಡೆಯದೇ ನಡಿಗೆಯಲ್ಲಿ ಸುತ್ತಿದರೆ ಬಾರೋಲಿಯ ಚೆಂದ ಚೆಂದ. ಇತಿಹಾಸ ಪ್ರಸಿದ್ಧ ಮತ್ತು ಡಕಾಯಿತಿಗೆ (ಒಂದು ಕಾಲ ದಲ್ಲಿ) ಕುಖ್ಯಾತಿಯ ಚಂಬಲ್ ನದಿ ಹಾಗೂ ಅದರ ಅಗಾಧ ಬಂಡೆಗಳ ಪರ್ವತ ಪ್ರದೇಶದ ಆವರಣದೊಳಗೆ ಬೆಳೆದಿರುವ ಕೋಟಾ ನಗರಿ, ಪೂರ್ತಿ ರಾಜಸ್ಥಾನದಲ್ಲೇ ಒಂದು ಕಾಲಕ್ಕೆ ಅತೀವ ನಟೋರಿಯಸ್ ಎಂದೇ ಗುರುತಿಸಲ್ಪಡುತ್ತಿತ್ತು.
ರಾಜ್ಯದ ಹೊರಗೂ ಮತ್ತು ಒಳಗೂ ಕುಖ್ಯಾತಿಯ ಜನರಿಂದ ಪದೇಪದೇ ಸುದ್ದಿಗೆ ಸಿಕ್ಕುತ್ತಿದ್ದ ನಗರಿಯೂ ಹೌದು. ಆಚೆ ಈಚೆಗಳ ಸರಹದ್ದನ್ನು ಕ್ರೈಂಗೆ ಹೇಗೆ ಬಳಸಿಕೊಳ್ಳಬೇಕೆಂಬುವುದನ್ನು ಭೂಗತ ಲೋಕಕ್ಕೆ ಕಲಿಸಿದ ಖ್ಯಾತಿ ಇದರದ್ದು. ಆದರೆ ಇವತ್ತು ಐ.ಟಿ.ಯ ಬಾಹುಗೆ ಸಿಕ್ಕು ಅನಾಹುತಕಾರಿಯಾಗಿ ಬದಲಾದ ನೌಕರಿಯಡೆ-ನಿಶನ್ಎರಡು ದಶಕದಲ್ಲಿ ಈ ಎಲ್ಲ ನಗರಗಳನ್ನೂ ಶಿಕ್ಷಣ ಕ್ಷೇತ್ರಕ್ಕೆ ತೆರೆದುಕೊಳ್ಳುವಂತೆ ಮಾಡಿದ್ದೂ ಸ್ಮಯವಾಗುವ ಬದಲಾವಣೆ.
ಬಾರೋಲಿ ಹಸಿರು ಹಾಸಿನ ಮೇಲೆ ವಿಶಾಲವಾಗಿ ಹರಡಿದ ಹಳೆಯ ದೇವಸ್ಥಾನಗಳ ಸಮೂಹವೆಂದರೆ ತಪ್ಪಿಲ್ಲ. ದೇವಸ್ಥಾನದ ಸಮೂಹದ ಹಿನ್ನೆಲೆಯಲ್ಲಿರುವ ನಿಸರ್ಗ ಸೌಂದರ್ಯವಂತೂ ಅದ್ಭುತ ವಿನ್ಯಾಸದ, ಚಿತ್ರಕಾರನೊಬ್ಬ ಬರೆದ ಚಿತ್ರದಂತೆ ಗೋಚರಿಸುತ್ತದೆ. ಅಪರೂಪದ ಹಸಿರಿನಿಂದ ಕೂಡಿದ ಮತ್ತು ನೀಲಿ ಆಗಸದ ಹಿನ್ನೆಲೆ ಬಾರೋಲಿಯ ಪ್ರವಾಸಿ ತಾಣಕ್ಕೆ ತಕ್ಕ ಹಿನ್ನೆಲೆ ಕೂಡ. ನೀಲಾಕಾಶದ ಅಗಾಧತೆ ಇದರ ವಿಶೇಷ. ಕಾರಣ ದೂರ ದೂರದವರೆಗೆ ಯಾವ ಗುಡ್ಡ ಬೆಟ್ಟಗಳ ಅಡೆತಡೆಯಿಲ್ಲದ ಮೈದಾನ ಇದರ ನೈಜ ಚಿತ್ರಕ್ಕೆ ರಂಗೋಲಿ.
ಏಳನೆಯ ಶತಮಾನದಲ್ಲಿ ನಿರ್ಮಿತವಾದ ಸುಂದರ ದೇವಸ್ಥಾನಗಳ ಸಮೂಹವಾದ ಬಾರೋಲಿಯ ಘಾಟೇಶ್ವರ್ ಮತ್ತು ಇತರ ಮಂದಿರ ಸಮೂಹ, ನಂತರದ ದಿನಗಳಲ್ಲಿ ಮೊಘಲ್ ದೊರೆ ಔರಂಗಜೇಬನ ದಾಳಿಗೆ ಸಿಲುಕಿ ಅಕ್ಷರಶಃ ಚೆಲ್ಲಾಪಿಲ್ಲಿಯಾಗುತ್ತದೆ. ಈ ಮೊಘಲ್ ದಾಳಿಗೆ ದಕ್ಕದೆ ಇದ್ದಿದ್ದರೆ ಬಹುಶಃ ಜಗತ್ತಿನಲ್ಲಿ ಭಾರತದ ಎಲ್ಲ ಸೌಂದರ್ಯ ಸೂಸುವ ಇಂಥ ಸ್ಥಳಗಳಿಗೆ, ಜಾಗತಿಕವಾಗಿ ಯಾವುದೇ ಸ್ಪರ್ಧೆಯೇ ಇರುತ್ತಿರಲಿಲ್ಲವೇನೋ ಎನ್ನಿಸಿದ್ದು ಇದೆ. ಕಾರಣ ಯಾವುದೇ ಐತಿಹಾಸಕ ಸ್ಮಾರಕಕ್ಕೆ ಇವತ್ತು ಮೊಘಲ್ ವಂಶದ, ಬೇರೆ ಬೇರೆ ಮುಸ್ಲಿಂ ದೊರೆಗಳ ನಾಶಕಾರಿ ಪ್ರವೃತ್ತಿಯ ಕುರುಹುಗಳು ಎಲ್ಲೆಡೆ ಭಗ್ನವಾಗಿ ಕಂಡುಬರುತ್ತದೆ.
ಹಲವು ವರ್ಷಗಳ ಕಾಲ ಬಿದ್ದಲ್ಲೇ ಬಿದ್ದಿದ್ದ ಅಸಂಖ್ಯಾತ ಅವಶೇಶಗಳನ್ನು ಪುನಃ ಜೋಡಿಸಿ ಮರು ಸ್ಥಾಪಿಸಲಾಗಿದೆ. ಇದರ ಕೀರ್ತಿ ಸಲ್ಲಬೇಕಾದದ್ದು ಗುರ್ಜರ್ ರಾಜ ಮಹಾ ದೇವನಿಗೆ. ಇಂತಹ ಬಾರೋಲಿ ಪ್ರದೇಶ ದೊಡ್ಡ ಅಳತೆಯ ವಿಸ್ತೀರ್ಣದೊಂದಿಗೆ ಸಾಕಷ್ಟು ಹಸಿರು ಪ್ರದೇಶವಾಗಿ ಸದ್ಯಕ್ಕೆ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿದೆ. ದೇವಸ್ಥಾನ ಸಮೂಹವನ್ನು ಇನ್ನಷ್ಟು ಅಂದವಾಗಿಸುವ ನಿಟ್ಟಿನಲ್ಲಿ ಸುತ್ತಮುತ್ತಲೆಲ್ಲ ಹಸಿರು ಮರಗಳಾದ ಮಾವು, ನೇರಳೆಗಳನ್ನು ಧಾರಾಳ ವಾಗಿ ಬೆಳೆಸುತ್ತಿದ್ದು, ಮೂಲ ಸೌಲಭ್ಯಗಳನ್ನು ಸೂಕ್ತವಾಗಿ ಒದಗಿಸಲಾಗಿದೆ.
ಇಲ್ಲಿನ ಪ್ರತಿಯೊಂದು ಮಂಟಪ ಮತ್ತು ದೇವಸ್ಥಾನಗಳು ಕೇವಲ ಆರು ಕಂಭಗಳ ವಿನ್ಯಾಸ ಹೊಂದಿದ್ದರೆ ಅದಕ್ಕೆ ಸಮಾನಾಂತರವಾಗಿ ಎರಡೆರಡು ಕಂಬಗಳ ಸಾಲು ಆಧಾರಕ್ಕೆ ನಿಲ್ಲಿಸಲಾಗಿದೆ. ಗುರ್ಜಾರ ಮತ್ತು ಪ್ರತಿಹಾರ ಶೈಲಿಯಲ್ಲಿರುವ ದೇವಸ್ಥಾನ ಸಮೂಹದಲ್ಲಿ ಎದ್ದು ಕಾಣುವಂತೆ ನಿಂತಿರುವುದು ಶಿವ ದೇವಸ್ಥಾನ. ಹೆಚ್ಚಿನ ಭಾರತೀಯ ಇಂಥಾ ಐತಿಹಾಸಿಕ ಸ್ಮಾರಕಗಳನ್ನು ಬೆಳಕಿಗೆ ತಂದದ್ದು ಅಥವಾ ದಾಖಲಿಸಿದ್ದು ವಿದೇಶಿ ಪ್ರವಾಸಿಗರೆ. ನಮ್ಮ ಹಂಪಿ ಸೇರಿದಂತೆ ಹಲವು ಪುರಾತನ ದಾಖಲೆಗಳನ್ನು ಬರೆದವರು ಅವರೇ.1898ರಲ್ಲಿ ವಿದೇಶಿ ಕಲೆಕ್ಟರ್ ‘ಜರ್ಡನ್ಸ್’ ಎಂಬಾತನಿಂದ ಬೆಳಕಿಗೆ ಬಂದ ದೇವಸ್ಥಾನ ಸಮೂಹ ಅನಂತರ ದಲ್ಲಿ ಭಾರತೀಯ ಪುರಾತತ್ವ ಇಲಾಖೆ ವಹಿಸಿಕೊಳ್ಳುವವರೆಗೂ ಹಾಳು ಬಿದ್ದಿದ್ದೇ ಹೆಚ್ಚು.
ಹಾಗಾಗಿ ನೂರಾರು ವರ್ಷಗಳ ಸಾಮಾಜಿಕ ಮತ್ತು ಕಾನೂನಾತ್ಮಕ ನಿರ್ಲಕ್ಷ್ಯಕ್ಕೆ ಸಿಕ್ಕ ನಂತರವೂ ಉಳಿದಿರುವ ಅವಶೇಷಗಳೆಂದರೆ, ಹಾಳುಗೆಡವಲು ಮತ್ತು ಹೊತ್ತೊಯ್ಯಲು ಸಾಧ್ಯವಾಗದೇ ಉಳಿದಿರುವಂತವು. ಹಾಗಾಗಿ ಬಾರೋಲಿಯ ಭಾರಿ ಶಿಲಾರಚನೆ ಈಗಲೂ ಗಮನ ಸೆಳೆಯುತ್ತವೆ. ಒಂಬತ್ತು ದೇವಸ್ಥಾನಗಳಲ್ಲಿ ಎಲ್ಲವೂ ಸಾಲುಸಾಲಾಗಿ ನಿರ್ಮಿತವಾಗಿದ್ದರೆ ಒಂದು ದೇವಸ್ಥಾನ ಮಾತ್ರ ಸುಮಾರು ಒಂದೂವರೆ ಕಿ.ಮೀ. ಆಚೆಗಿದೆ. ದುರ್ಗೆ, ಘಾಟೇಶ್ವರ್, ಮಹದೇವ, ಶೇಷಶಯನ ಆನಂತರದಲ್ಲಿ ಗರ್ಭಗೃಹ, ನೃತ್ಯಭವನ, ಮುಖ ಮಂಟಪ, ರಂಗ ಪಂಟಪ ಹೀಗೆ ಹಲವು ದೇವರು ಮತ್ತು ಮಂಟಪಗಳ ಕಾಂಪ್ಲೇಕ್ಸ್ ಹೊಂದಿರುವ ಬಾರೋಲಿಯ ಬಣ್ಣದ ಜಾತ್ರೆ ಶಿವರಾತ್ರಿಗೆ ನಡೆಯುತ್ತದೆ.
ಆಗ ವಿಶೇಷವಾಗಿ ಗುಲಾಬಿ ಮತ್ತು ಕೆಂಪು ಬಣ್ಣದ ದಿರಿಸಿನ ಹೆಂಗಳೆಯರ ಕಂಗೊಳಿಸುವ ಉಡುಪಿನಿಂದಾಗಿ ಎರಡು ದಿನ ಕ್ಷೇತ್ರ ಕಳೆಗಟ್ಟುತ್ತದೆ. ಆ ಎರಡು ದಿನ ಭಾರಿಸಂಖ್ಯೆಯಲ್ಲಿ ಯಾತ್ರಿಗಳನ್ನು ಆಕರ್ಷಿಸುವ ಈ ದೇವಸ್ಥಾನ ಸಮೂಹದ ತಾಣ ಅಕ್ಷರಶಃ ಪಿಕ್‌ನಿಕ್ ತಾಣವಾಗಿ ಮಾರ್ಪಟ್ಟಿರುತ್ತದೆ. ಮಹಿಳೆಯರುಶಿವಲಿಂಗ ಗಳನ್ನು ವಿಶೇಷವಾಗಿ ಆರಾಧಿಸುವ ಅವಕಾಶದ ಸಂದರ್ಭದಲ್ಲಿ ಬಾರೋಲಿ ಗುಲಾಬಿ ಬಣ್ಣದ ಜಾತ್ರೆಯಾಗಿ ಕಂಗೊಳಿಸುತ್ತದೆ. ವರ್ಷಕ್ಕೊಮ್ಮೆ ಈ ಉತ್ಸವ ನಡೆದ ನಂತರವೂ ಈಗೀಗ ಹನ್ನೆರಡೂ ತಿಂಗಳೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಬಾರೋಲಿ ತನ್ನ ಪುರಾತನ ಶಿಲ್ಪಕಲೆಯಿಂದಲೇ ಸೆಳೆಯುತ್ತಿದೆ.ಇನ್ನೇನು ಬರುವ ತಿಂಗಳೇ ಶಿವರಾತ್ರಿ. ಬಾರೋಲಿ ಈ ಸಲ ಪ್ರವಾಸಿಗರನ್ನು ಅಕರ್ಷಿಸುವ ಮೇಳಗಳನ್ನು ಆಯೋಜಿಸುತ್ತಿರುವ ಸುದ್ದಿ ಇದೆ.
ಹೌದಾದಲ್ಲಿ ಮತ್ತೊಮ್ಮೆ ಗುಲಾಬಿ ರಂಗಿನ ಜಾತ್ರೆ ಬಾರೋಲಿ ಯಲ್ಲಿ ಭರಾಟೆ ಎಬ್ಬಿಸಲಿದೆ. ಆ ಹೊತ್ತಿಗೇನಾದರೂ ಅತ್ತ ಕಡೆಯಲ್ಲಿ ಅಲೆಯುವ ಯೋಜನೆನಿಮಗಿದ್ದರೆ ಯಾವು ದಕ್ಕೂ ಒಂದು ಗುಲಾಬಿ ರಂಗಿನ ದಿರಿಸು ಇಟ್ಟುಕೊಂಡಿರಿ. ನಿಮಗೂ ಜಾತ್ರೆಯ ಬಣ್ಣಕ್ಕೆ ಮೆರುಗು ತುಂಬುವ ಅವಕಾಶ ಸಿಗಲೂಬಹುದು.