ಒಂದೇ ಅವಧಿಯಲ್ಲಿ ಬರಲಿದ್ದಾರಾ 4ನೇ ಸಿಎಂ ?
ಮೂರ್ತಿ ಪೂಜೆ
ಆರ್‌.ಟಿ.ವಿಠ್ಠಲಮೂರ್ತಿ
ಒಂದು ವೇಳೆ ಸಧ್ಯದ ಅನುಮಾನ ನಿಜವಾಗಿ ಬಿಜೆಪಿ ಸರಕಾರ ಮೂರನೇ ಮುಖ್ಯಮಂತ್ರಿಯನ್ನು ಕಂಡರೆ ಮುಂದಿನ ಚುನಾವಣೆಯಲ್ಲಿ ಎಷ್ಟು ಲಾಭವಾಗುತ್ತದೋ? ಗೊತ್ತಿಲ್ಲ. ಆದರೆ ಬಿಜೆಪಿ ಇತಿಹಾಸ ನಿರ್ಮಿಸಿದಂತಾಗುತ್ತದೆ.
ಮೂರನೇ ಮುಖ್ಯಮಂತ್ರಿಯನ್ನು ಕಾಣುವ ಮೂಲಕ ರಾಜ್ಯ ಬಿಜೆಪಿ ಹೊಸ ದಾಖಲೆ ಬರೆಯಲಿದೆಯೇ? ಹಾಗೆಂಬುದೊಂದು ಅನುಮಾನರಾಜಕೀಯ ವಲಯಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿದೆ. ಅಂದ ಹಾಗೆ ಇದಕ್ಕೆ ಕಾರಣವಾಗಿರುವುದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಇತ್ತೀಚಿನ ದೆಹಲಿ ಭೇಟಿ.
ಹೀಗೆ ದೆಹಲಿಗೆ ಹೋಗುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಭೇಟಿಯ ಉದ್ದೇಶಗಳನ್ನು ಪದೇ ಪದೆ ಹೇಳಿದ್ದರು. ಈ ಪೈಕಿ ಒಂದು, ಕೇಂದ್ರ ದಲ್ಲಿ ಬಾಕಿ ಉಳಿದಿರುವ ರಾಜ್ಯದ ಯೋಜನೆಗಳ ಕುರಿತು ಕರ್ನಾಟಕದ ಸಂಸದರ ಜತೆ ಚರ್ಚೆ ನಡೆಸುವುದು, ಮತ್ತೊಂದು: ರಾಜ್ಯ ಎದುರಿಸುತ್ತಿರುವ ಜಲವಿವಾದಗಳ ಕುರಿತು ಕಾನೂನು ತಜ್ಞರೊಂದಿಗೆ ಸಭೆ ನಡೆಸುವುದು. ಆದರೆ ಕೇಂದ್ರದಲ್ಲಿ ಬಾಕಿ ಉಳಿದ ಯೋಜನೆಗಳ ಕುರಿತು ಸಂಸದರ ಸಭೆ ನಡೆಸುವುದು ಇತ್ತೀಚಿನ ದಿನಗಳಲ್ಲಿ ಕೇವಲ ವಾಡಿಕೆಯೇ ಹೊರತು, ಅದರಿಂದ ದೊಡ್ಡ ಮಟ್ಟದ ಪ್ರಯೋಜನವೇನೂ ಆಗುತ್ತಿಲ್ಲ.
ಯಾಕೆಂದರೆ ರಾಜ್ಯದ ಹಿತಾಸಕ್ತಿ ರಕ್ಷಿಸುವ ವಿಷಯದಲ್ಲಿ ಕೇಂದ್ರ ಸರಕಾರದ ಮುಂದೆ ಗಟ್ಟಿ ಧ್ವನಿ ಹಾಕುವ ಶಕ್ತಿ ಕರ್ನಾಟಕದ ಬಿಜೆಪಿ ಸಂಸದರಲ್ಲಿ ಇಲ್ಲವೇ ಇಲ್ಲ. ಅನಂತ ಕುಮಾರ್ ಅವರ ನಂತರ ದೆಹಲಿಯಲ್ಲಿ ರಾಜ್ಯದ ಪರ ಲಾಬಿ ಮಾಡುವ ಶಕ್ತಿ ಇನ್ನೊಬ್ಬ ರಲ್ಲಿ ಕಾಣುತ್ತಿಲ್ಲ. ಇದ್ದುದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಹೊರತು ಪಡಿಸಿದರೆ ದೆಹಲಿ ಮಟ್ಟದಲ್ಲಿ ರಾಜ್ಯದ ಹಿತ ಕಾಪಾಡುವ ಶಕ್ತಿ ಮತ್ತೊಬ್ಬ ಸಂಸದರಿಗಿಲ್ಲ.
ಹೀಗಾಗಿ ದೆಹಲಿಗೆ ಹೋಗಿ ವಿಶೇಷವಾಗಿ ಸಂಸದರ ಸಭೆ ಮಾಡುವ ತಮ್ಮ ಉದ್ದೇಶ ನಿರರ್ಥಕವಾದ್ದು ಎಂಬುದು ಸ್ವತ: ಅವರಿಗೇಗೊತ್ತು. ಆದರೂ ಅಸ್ತಿತ್ವದಲ್ಲಿರುವ ಒಂದು ವಾಡಿಕೆಯನ್ನು ಮ್ಮಾಯಿ ಗುರಾಣಿಯಂತೆ ಬಳಸಿಕೊಳ್ಳಲು ಉದ್ದೇಶಿಸಿದರು. ಇದೇ ರೀತಿ ಜಲವಿವಾದಗಳ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ನಡೆಸುವ ವಿಷಯವೂ ಅಷ್ಟೇ. ಕರ್ನಾಟಕದ ವಾದಕ್ಕೆ ಪೂರಕವಾಗಿ ಇರುವ ಸಾಕ್ಷ್ಯಾಧಾರಗಳನ್ನುಕಾಲಕಾಲಕ್ಕೆ ಒದಗಿಸಿ ಎಂದು ಕಾನೂನು ತಜ್ಞರು ಹೇಳುತ್ತಾರೆಯೇ ಹೊರತು ಇದಕ್ಕೂ ವಿಶೇಷ ಸಭೆಯ ಅಗತ್ಯ ಕಡಿಮೆ. ಆದರೆ ಕೆಲ ಸನ್ನಿವೇಶಗಳಲ್ಲಿ ಇದು ಕೂಡ ಗುರಾಣಿಯಂತೆ ಬಳಕೆಯಾಗುವುದರಿಂದ ಬಸವರಾಜ ಬೊಮ್ಮಾಯಿ ಅದನ್ನೂ ತಮ್ಮ ರಕ್ಷಣೆಗೆ ಬಳಸಿಕೊಂಡರು.
ಯಾಕೆಂದರೆ ತಮ್ಮ ದೆಹಲಿ ಯಾತ್ರೆಯ ನೈಜ ಉದ್ದೇಶ ವಿಫಲವಾದರೆ ಅದು ದೊಡ್ಡದಾಗಿ ಕಾಣಬಾರದಲ್ಲ? ಹೀಗಾಗಿ ಸಂಸದರ ಸಭೆ ಮತ್ತು ಕಾನೂನು ತಜ್ಞರ ಸಭೆಗಳು ಅವರಿಗೆ ನೆರವಾದವು. ವಸ್ತುಸ್ಥಿತಿ ಎಂದರೆ, ಈ ಬಾರಿ ದೆಹಲಿಗೆ ಹೋದಾಗ ತಮ್ಮ ಸಂಪುಟವನ್ನುಕನಿಷ್ಠ ಪಕ್ಷ ವಿಸ್ತರಿಸಲು ವರಿಷ್ಠರ ಅನುಮತಿ ಪಡೆದು ಬರುವ ಇಚ್ಛೆ ಬಸವರಾಜ ಬೊಮ್ಮಾಯಿ ಅವರಿಗಿತ್ತು. ಇದಕ್ಕೆ ಮುಖ್ಯ ಕಾರಣ, ಎಲ್ಲಿ ಯವರೆಗೆ ತಮ್ಮ ಇಚ್ಛೆಯಂತೆ ಸಂಪುಟ ವಿಸ್ತರಿಸಲು ವರಿಷ್ಠರು ಒಪ್ಪುವುದಿಲ್ಲವೋ? ಅಲ್ಲಿಯವರೆಗೂ ತಮ್ಮ ನಾಯಕತ್ವ ದುರ್ಬಲ ವಾಗಿದೆ ಎಂಬ ಸಂದೇಶ ರವಾನೆಯಾಗುತ್ತಲೇ ಇರುತ್ತದೆ. ಮತ್ತು ಸನಿಹದಲ್ಲೇ ತಮ್ಮ ಖುರ್ಚಿಗೆ ಅಪಾಯ ಕಾದಿದೆ ಎಂಬ ಹೆದರಿಕೆ ಉಳಿದೇ ಇರುತ್ತದೆ.
ಎಲ್ಲಿಯವರೆಗೆ ಈ ಪರಿಸ್ಥಿತಿ ಇರುತ್ತದೋ? ಅಲ್ಲಿಯವರೆಗೂ ತಮ್ಮ ಜಾಗಕ್ಕೆ ಬರಲು ರಾಜ್ಯ ಬಿಜೆಪಿಯ ಹಲವರು ಪ್ರಯತ್ನ ನಡೆಸುತ್ತಲೇ ಇರುತ್ತಾರೆ ಎಂಬುದು ಬಸವರಾಜ ಬೊಮ್ಮಾಯಿ ಅವರ ಧಾವಂತ. ಹೀಗಾಗಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆದು ಬಂದರೆಕರ್ನಾಟಕದಲ್ಲಿನ್ನು ನಾಯಕತ್ವ ಬದಲಾವಣೆಯ ವಿಷಯ ಮುಗಿದ ಅಧ್ಯಾಯ ಎಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ. ಹಾಗಾಗಲಿ ಎಂಬುದು ಬಸವರಾಜ ಬೊಮ್ಮಾಯಿ ಅವರ ಇಚ್ಛೆಯಾಗಿತ್ತು. ಆದರೆ ಎರಡು ದಿನಗಳ ದೆಹಲಿ ಪ್ರವಾಸ ಅವರ ಇಚ್ಛೆಯನ್ನು ಈಡೇರಿಸಲಿಲ್ಲ. ವಸ್ತುಸ್ಥಿತಿ ಎಂದರೆ ಪಕ್ಷದ ಐರನ್ ಮ್ಯಾನ್ ಅಮಿತ್ ಷಾ ಅವರು ಬಸವರಾಜ ಬೊಮ್ಮಾಯಿ ಅವರನ್ನು ಕಾಣಲು ತಯಾರೇ ಇರಲಿಲ್ಲ.ಅಽಕಾರಕ್ಕೆ ಬಂದ ಆರು ತಿಂಗಳ ಅವಧಿಯಲ್ಲಿ ಬೊಮ್ಮಾಯಿ ಅವರ ಸಾಧನೆ ಅಮಿತ್ ಷಾ ಅವರಿಗೆ ಸಮಾಧಾನ ತಂದಿಲ್ಲ.
ಸರಕಾರದಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರದಿಂದ ಹಿಡಿದು ಕರ್ನಾಟಕದಲ್ಲಿ ಒಂದಿಂಚು ಏರದ ಪಕ್ಷದ ಇಮೇಜ್‌ವರೆಗೆ ಹಲವು ವಿಷಯಗಳು ಅಮಿತ್ ಷಾ ಅವರ ನಿದ್ದೆಗೆಡಿಸಿದೆ. ಇದೇ ಕಾರಣಕ್ಕಾಗಿ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಗೆ ಬಂದಾಗ ಅವರನ್ನು ನೋಡಲು ಅಮಿತ್ ಷಾ ತಯಾರೇ ಇರಲಿಲ್ಲ. ಆದರೆ ಅರುಣ್ ಸಿಂಗ್ ಸೇರಿದಂತೆ ಕೆಲ ನಾಯಕರು, ಈಗಲೇ ರಾಂಗ್ ಸಿಗ್ನಲ್ ಹೋಗು ವುದು ಬೇಡ ಎಂದು ಹೇಳಿದಾಗ ಅಮಿತ್ ಷಾ ಅವರು ಬೊಮ್ಮಾಯಿ ಅವರಿಗೆ ಕೆಲ ನಿಮಿಷಗಳ ದರ್ಶನ ಕೊಟ್ಟಿದ್ದಾರೆ. ಈ ಅಂಶವೇ ಬಸವರಾಜ ಬೊಮ್ಮಾಯಿ ಇನ್ನೆಷ್ಟು ದಿನ ಸಿಎಂ ಹುದ್ದೆಯಲ್ಲಿ ಮುಂದುರಿಯುತ್ತಾರೆ? ಎಂಬ ಅನುಮಾನಗಳನ್ನು ಸೃಷ್ಟಿಸಿದ್ದು, ಇದರ ಪರಿಣಾಮವಾಗಿ ಬಸವನಗೌಡ ಪಾಟೀಲ್, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಸೇರಿದಂತೆ ಹಲ ನಾಯಕರ ಹೆಸರುಗಳು ಭವಿಷ್ಯದ ಸಿಎಂ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡಿವೆ.
ಅಂದ ಹಾಗೆ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೆ ಬಸವರಾಜ ಬೊಮ್ಮಾಯಿ ಅವರನ್ನು ಇಳಿಸಲು ಹೈಕಮಾಂಡ್ ಮುಂದಾಗುವುದಿಲ್ಲ ಎಂಬುದೇನೋ ನಿಜ. ಆದರೆ ಐದು ರಾಜ್ಯಗಳ ಚುನಾವಣೆಯ ನಂತರ ಬಹುದಿನಗಳ ಕಾಲಬಸವರಾಜ ಬೊಮ್ಮಾಯಿ ಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂಬ ಲಕ್ಷಣ ಕಾಣುತ್ತಿಲ್ಲ. ಒಂದು ವೇಳೆ ಸಧ್ಯದ ಅನುಮಾನ ನಿಜವಾಗಿ ಬಿಜೆಪಿ ಸರಕಾರ 3ನೇ ಮುಖ್ಯಮಂತ್ರಿಯನ್ನು ಕಂಡರೆ ಮುಂದಿನ ಚುನಾವಣೆಯಲ್ಲಿ ಎಷ್ಟು ಲಾಭವಾಗುತ್ತದೋ? ಗೊತ್ತಿಲ್ಲ.ಆದರೆ ಒಂದೇ ಅವಽಯಲ್ಲಿ ಮೂರನೇ ಮುಖ್ಯಮಂತ್ರಿಯ ಪ್ರತಿಷ್ಠಾಪನೆ ಸಾಧ್ಯವಾದರೆ ಕರ್ನಾಟಕದ ಇತಿಹಾಸದಲ್ಲಿ ಅದೊಂದು ದಾಖಲೆ ಯಂತೂ ಆಗುತ್ತದೆ.
ಅಂದ ಹಾಗೆ ಒಂದು ಅವಧಿಯಲ್ಲಿ ಮೂರು ಮಂದಿ ಮುಖ್ಯಮಂತ್ರಿಗಳಾಗಿರುವ ಉದಾಹರಣೆ ಕರ್ನಾಟಕಕ್ಕೆ ಹೊಸತೇನಲ್ಲ. 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತಲ್ಲ? ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಾದವರು ಕೆಂಗಲ್ ಹನುಮಂತಯ್ಯ. ಆದರೆ ಅವರು ಕೆಲವೇ ವರ್ಷಗಳಲ್ಲಿ ಪದಚ್ಯುತರಾಗಬೇಕಾಯಿತು. ಅವರು ತೆರವು ಮಾಡಿದ ಮುಖ್ಯಮಂತ್ರಿ ಹುದ್ದೆಯ ಮೇಲೆ ಬಂದು ಕುಳಿತವರು ಕಡಿದಾಳ್ ಮಂಜಪ್ಪ. ಕೆಲವೇ ತಿಂಗಳಲ್ಲಿ ಅವರು ಕೆಳಗಿಳಿದ ನಂತರ ಈ ಜಾಗಕ್ಕೆ ಬಂದು ಕುಳಿತವರುನಿಜಲಿಂಗಪ್ಪ. 1989ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಆದರೆ ಮರು ವರ್ಷವೇ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು.
ಇದಾದ ನಂತರ ಮುಖ್ಯಮಂತ್ರಿ ಹುದ್ದೆಗೇರಿದವರು ಸಾರೆಕೊಪ್ಪ ಬಂಗಾರಪ್ಪ, ಆದರೆ ಅವರು ಕೂಡ 1992ರಲ್ಲಿ ಅಧಿಕಾರದಿಂದ ಕೆಳಗಿಳಿದರು. ಇದಾದ ನಂತರ ಮುಖ್ಯಮಂತ್ರಿಯಾಗುವ ಅವಕಾಶ ಪಡೆದವರು ಎಂ.ವೀರಪ್ಪ ಮೊಯ್ಲಿ. ಹೀಗೆ ಒಂದು ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡ ಕರ್ನಾಟಕದ ಎರಡನೇ ಸರಕಾರ ಅದು. ಮುಂದೆ ಈ ಸಾಧನೆಯನ್ನು ಪುನರಾವರ್ತಿಸಿದ್ದುಬಿಜೆಪಿ. ೨೦೦೮ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪ ಮೊದಲ ಮುಖ್ಯಮಂತ್ರಿ. ಆದರೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ನೀಡಿದ ವರದಿ ಯಡಿಯೂರಪ್ಪ ಅವರನ್ನು ಬಲಿ ಪಡೆಯಿತು.
ಇದರಿಂದಾಗಿ ಬಿಜೆಪಿ ಸರಕಾರದ ಎರಡನೇ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿತರಾದವರು ಡಿ.ವಿ.ಸದಾನಂದಗೌಡ. ವಸ್ತುಸ್ಥಿತಿ ಎಂದರೆ ಅವರು ಆ ಜಾಗಕ್ಕೆ ಬರಲು ಮೂಲ ಕಾರಣರಾದವರು ಯಡಿಯೂರಪ್ಪ. ಆದರೆ ಮುಖ್ಯಮಂತ್ರಿಯಾದ ಕೆಲವೇ ಕಾಲದಲ್ಲಿ ಡಿ.ವಿ.ಸದಾ ನಂದಗೌಡರ ವರಸೆ ಬದಲಾಯಿತು. ಅವರು ನಿಮಗೆ ನಿಷ್ಠರಾಗಿರುವ ಬದಲು ಸಂಘಪರಿವಾರದ ನಾಯಕ ರೊಬ್ಬರಿಗೆ ನಿಷ್ಠರಾಗಿದ್ದಾರೆ.ಅದರಿಂದಾಗಿಯೇ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ರೇಣುಕಾಚಾರ್ಯ ಸೇರಿದಂತೆ ಒಂದು ಗುಂಪು ಯಡಿಯೂರಪ್ಪ ಅವರ ಮುಂದೆ ಕಂಪ್ಲೇಂಟ್ ರಿಜಿಸ್ಟರ್ ತೆಗೆದುಕೊಂಡು ಹೋಯಿತು.
ಶುರುವಿನಲ್ಲಿ ಕಂಪ್ಲೇಂಟ್ ರಿಜಿಸ್ಟರ್ ಅನ್ನು ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಲಿಲ್ಲವಾದರೂ ಬಿಜೆಪಿಯಲ್ಲಿದ್ದ ಅವರ ಆಪ್ತ ಶಾಸಕರ ಗುಂಪು ಪದೇ ಪದೇ ಸದಾನಂದಗೌಡರ ವಿರುದ್ಧ ದೂರು ಒಯ್ಯತೊಡಗಿತು. ಯಾವಾಗ ಈ ದೂರು ಸೀರಿಯಲ್ಲುಗಳ ರೂಪ ಪಡೆಯಿತೋ?  ಇದಾದ ನಂತರ ಕನಲಿದ ಯಡಿಯೂರಪ್ಪ ಪಕ್ಷದಲ್ಲಿ ತಮಗಿರುವ ಶಕ್ತಿಯನ್ನು ತೋರ್ಪಡಿಸಲು ಮುಂದಾದರು. ಅಷ್ಟೇ ಅಲ್ಲ, ತಮ್ಮ ಎದುರಾಳಿ ಎಂದು ತಾವೇ ಗುರುತಿಸಿದ್ದ ಜಗದೀಶ್ ಶೆಟ್ಟರ್ ಅವರಿಗೆ ಫೋನು ಮಾಡಿ: ಮುಂದಿನ ಸಿಎಂ ಆಗಲು ರೆಡಿ ಇರಿ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಮುಂದಿನದು ಇತಿಹಾಸ. ಯಾವ ಯಡಿಯೂರಪ್ಪ ತಮ್ಮನ್ನು ಸಿಎಂ ಹುದ್ದೆಗೇರಿಸಿದರೋ? ಅದೇ ಯಡಿಯೂರಪ್ಪ ಅವರ ಹೊಡೆತಕ್ಕೆ ಸಿಲುಕಿದ ಡಿ.ವಿ. ಸದಾನಂದಗೌಡ ತುಂಬ ನಿರಾಯಾಸವಾಗಿ ಕೆಳಗೆ ಇಳಿದರು. ಅವರು ತೆರವು ಮಾಡಿದ ಜಾಗಕ್ಕೆ ಬಂದು ಕುಳಿತವರು ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್. ಹೀಗೆ 2008-13ರ ಅವಧಿಯಲ್ಲಿ ಮೂರು ಮಂದಿ ಮುಖ್ಯಮಂತ್ರಿಗಳನ್ನು ಕಂಡ ಬಿಜೆಪಿಸರಕಾರ ಈ ಬಾರಿ ಮೂರನೇ ಮುಖ್ಯಮಂತ್ರಿಯನ್ನು ಕಂಡರೆ ಕರ್ನಾಟಕದ ಇತಿಹಾಸದಲ್ಲಿ ಒಂದು ವಿಶಿಷ್ಟ ದಾಖಲೆ ನಿರ್ಮಾಣವಾಗು ತ್ತದೆ.
ಯಾಕೆಂದರೆ, ಇದುವರೆಗೆ ವಿಧಾನಸಭೆಯ ಒಂದು ಅವಧಿಯಲ್ಲಿ ಯಾವತ್ತೂ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ಕರ್ನಾಟಕ ನೋಡಿರ ಲಿಲ್ಲ. ಆದರೆ ಈ ಬಾರಿ ವಿಧಾನಸಭೆ ಅಸ್ತಿತ್ವಕ್ಕೆ ಬಂದ ನಂತರ ಸಮ್ಮಿಶ್ರ ಸರಕಾರದ ಚುಕ್ಕಾಣಿ ಹಿಡಿದ ಕುಮಾರಸ್ವಾಮಿ ಸೇರಿದಂತೆ ಒಟ್ಟು ಮೂರು ಮಂದಿ ಮುಖ್ಯಮಂತ್ರಿಗಳನ್ನು ರಾಜ್ಯ ನೋಡಿದೆ. ಅಂದ ಹಾಗೆ ಕುಮಾರಸ್ವಾಮಿ ಅವರಿಗಿಂತ ಮುಂಚೆ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರಾದರೂ, ಅವರು ಬಹುಮತ ಸಾಬೀತುಪಡಿಸದೇ ಕೆಳಗಿಳಿದಿದ್ದರು.
ಹೀಗಾಗಿ ಈಗಿನ ವಿದ್ಯಮಾನಗಳು ಬಸವರಾಜ ಬೊಮ್ಮಾಯಿ ಅವರನು ಕೆಳಗಿಳಿಸಿ ಮತ್ತೊಬ್ಬ ಮುಖ್ಯಮಂತ್ರಿ ಮೇಲೆದ್ದು ನಿಲ್ಲಲು ಕಾರಣ ವಾದರೆ ವಿಧಾನಸಭೆಯ ಒಂದು ಅವಧಿ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ಕಂಡಂತಾಗುತ್ತದೆ. ಹಾಗಾಗುತ್ತದಾ ಅಂತ ಕಾದು ನೋಡ ಬೇಕು.