ಶಾಲೆಗಳಲ್ಲಿ ಶಿಕ್ಷಣ ಬಿಟ್ಟು ಬೇರೆಲ್ಲ ಆಗುತ್ತಿದೆ
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
.@.
ಶಾಲೆಗಳು ನಡೆದಷ್ಟೂ ವಿದ್ಯಾರ್ಥಿಗಳಿಗೆ ಲಾಭ. ಅದರಲ್ಲಿಯೂ ಪರೀಕ್ಷೆಗೆ ಮುಂಚಿನ ಒಂದೆರೆಡು ತಿಂಗಳು ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟ. ಈಗಾಗಲೇ ಎರಡು ವರ್ಷಗಳಿಂದ ’ಕರೋನಾ’ಬಲೆಗೆ ಸಿಲುಕಿರುವ ವಿದ್ಯಾರ್ಥಿಗಳಿಗೆ, ಒಂದೊಂದು ದಿನವೂ ಅತ್ಯಂತ ಮುಖ್ಯ.
ಇಂತಹ ಸಂಕಷ್ಟ, ಸಂದಿಗ್ಧ ಸಮಯದಲ್ಲಿ ಕರ್ನಾಟಕದಲ್ಲಿ ಪಠ್ಯ, ಪರೀಕ್ಷೆ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಗಮನಹರಿಸುವ ಬದಲು, ಬೇರೆಲ್ಲಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಅತಿವೃಷ್ಟಿ, ಹೆಚ್ಚಿನ ಮಳೆ, ಇಲ್ಲವೇ ಯಾವುದೋ ಒಂದು ಬಂದ್, ಇಲ್ಲವೇ ಯಾರಾದರೂ ಮೃತ ರಾದರೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು ನೋಡಿದ್ದೇವೆ. ಅದರಲ್ಲಿಯೂ ಅತಿವೃಷ್ಟಿಯಂಥ ಸಮಯದಲ್ಲಿ ಎಷ್ಟು ದಿನ ರಜೆನೀಡಬೇಕು ಎನ್ನುವ ಬಗ್ಗೆ ಆಡಳಿತಕ್ಕೆ ಸ್ಪಷ್ಟನೆ ಇಲ್ಲದೇ ವಿಸ್ತರಣೆ ಮಾಡುವುದು, ಮಾಡಿದ್ದೂ ಇದೆ. ಇನ್ನು ಶಾಲಾ ಆವರಣದಲ್ಲಿ ನಿಷೇಧಾಜ್ಞೆ ಜಾರಿಯಾಗುವುದು ಚುನಾವಣಾ ಮತದಾನದ ಸಮಯದಲ್ಲಿ ಹೊರತು, ಇನ್ಯಾವ ಸಮಯದಲ್ಲಿಯೂ ಅಲ್ಲ.
ಆದರೆ, ಕಳೆದ ಒಂದು ವಾರದಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವುದು ಹಾಗೂ ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳತ್ತ ನಿಷೇದಾಜ್ಞೆ ಹೇರಿರುವುದು, ‘ಗಲಾಟೆ’ ಆಗಬಾರದು ಎನ್ನುವ ಕಾರಣಕ್ಕೆ!. ಹೌದು, ಶಾಂತಿ ಮಂತ್ರ ಪಠಿಸುವ, ಧರ್ಮಾಧರಿತವಾಗಿ ನಿಂತಿರುವ ಶಾಲಾ- ಕಾಲೇಜುಗಳಲ್ಲಿ ಇದೀಗ ಒಂದು ಧರ್ಮದ ಚಿಹ್ನೆಯಂ ತಿರುವ ಅಥವಾ ಒಂದು ಧರ್ಮದ ಆಚರಣೆಯ ಕ್ರಮ ವಾಗಿರುವವಸ್ತ್ರವನ್ನು ಹಾಕಿಕೊಂಡು ಬರಲು ಅವಕಾಶ ನೀಡುವಂತೆ ಆಗ್ರಹಿಸಿ, ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿರುವುದು ಹಾಗೂ ಸರಕಾರದ ಆದೇಶವನ್ನು ಪಾಲಿಸಲು ಪ್ರತಿ ಶಾಲೆಯ ಮುಂದೆ ಪೊಲೀಸರ ನಿಯೋಜನೆ ಮಾಡಿರುವುದು ಶೈಕ್ಷಣಿಕ ಕ್ಷೇತ್ರಕ್ಕೆ ನಿಜಕ್ಕೂ ಶೋಭೆ ತರುವುದಿಲ್ಲ.
ಹಾಗೇ ನೋಡಿದರೆ, ಶಿಕ್ಷಣ ಕ್ಷೇತ್ರದಲ್ಲಿ ಚರ್ಚೆಯಾಗಬೇಕಿರುವುದು ರಾಷ್ಟ್ರೀಯ ನೀತಿಯ ಅನುಷ್ಠಾನ, ನೀಟ್‌ನಿಂದ ರಾಜ್ಯದ ವಿದ್ಯಾರ್ಥಿ ಗಳಿಗೆ ಆಗುತ್ತಿರುವ ಅನ್ಯಾಯ ಇತ್ಯಾದಿ. ಕರೋನಾದಿಂದ ಮುಚ್ಚಿದ್ದ ಶಾಲೆಗಳು ಪುನಾರಂಭವಾದ ಸಮಯದಲ್ಲಿ ಮರುಸೇರ್ಪಡೆ ಯಾಗದೇ ಸುಮಾರು 18 ಸಾವಿರ ಮಕ್ಕಳು ಹೊರಗುಳಿದಿದ್ದಾರೆ. ಅಂಥ ಮಕ್ಕಳನ್ನು ಪುನಃ ಶಾಲೆಗೆ ಕರೆತರುವುದು ಹೇಗೆ ಎನ್ನುವ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಇದ್ಯಾವುದು ಆಗುತ್ತಿಲ್ಲ. ಬದಲಿಗೆ ಹಿಜಾಬ್ ಧರಿಸಿ ಬಂದರೆ, ಕೇಸರಿ ಶಾಲು ಧರಿಸುತ್ತೇವೆ ಎನ್ನುವ ಚರ್ಚೆ, ಆ ಚರ್ಚೆಗೆ ರಾಜಕೀಯ ನಂಟು. ಶಿಕ್ಷಣ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಧ್ವನಿ ಎತ್ತಬೇಕಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಅದನ್ನು ಮಾಡದೇ, ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಿಲ್ಲವೆಂದು ಹೈಕೋರ್ಟ್ ಮೆಟ್ಟಿಲು ಏರಿರುವುದು ನಿಜಕ್ಕೂ ಶಿಕ್ಷಣ ವ್ಯವಸ್ಥೆಯ ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ.
ಇಷ್ಟಕ್ಕೂ ಈ ಎಲ್ಲ ವಿವಾದಗಳನ್ನು ಗಮನಿಸಿದ ಮೇಲೆಯೇ ಹೈಕೋರ್ಟ್ ಏಕಸದಸ್ಯ ಪೀಠ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಗಳ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿತು. ಸಿಜೆ ಪೀಠವೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತುರ್ತು ವಿಚಾರಣೆಗೆ ಅವಕಾಶವನ್ನು ನೀಡಿತ್ತು. ಮಧ್ಯಂತರ ಆದೇಶದ ರೀತಿಯ, ‘ಶಾಲಾ-ಕಾಲೇಜುಗಳನ್ನು ಆರಂಭಿಸಿ. ತೀರ್ಪು ಮುಗಿಯುವ ತನಕ ಯಾವುದೇ ಧರ್ಮ ಸೂಚಕ ಽರಿಸನ್ನು ಧರಿಸುವಂತಿಲ್ಲ’ ಎನ್ನುವ ಸ್ಪಷ್ಟ ಸೂಚನೆಯನ್ನೂ ನೀಡಿತ್ತು. ಸರಕಾರದ ಆದೇಶಉಲ್ಲಂಘಿಸಿದ್ದಅನೇಕರು, ಕನಿಷ್ಠ ಪಕ್ಷ ಹೈಕೋರ್ಟ್ ಸೂಚನೆಯನ್ನಾದರೂ ಒಪ್ಪಿಬರಬಹುದು ಎನ್ನುವ ಲೆಕ್ಕಾಚಾರವಿತ್ತು.
ಆದರೆ ಸೋಮವಾರ ಆರಂಭವಾದ ಶಾಲೆಗೆ ಕೆಲವು ವಿದ್ಯಾರ್ಥಿಗಳು ಪುನಃ ಹಿಜಾಬ್ ಧರಿಸಿ ಬಂದಿದ್ದಾರೆ. ಪರೀಕ್ಷೆಗಳಿಗೂ ಕೆಲ ವಿದ್ಯಾರ್ಥಿ ಗಳು ಹಿಜಾಬ್‌ನಲ್ಲಿಯೇ ಬಂದಿದ್ದಾರೆ. ಶಿಕ್ಷಣಕ್ಕಿಂತ ಹಿಜಾಬ್ ಮುಖ್ಯ ಎನ್ನುವ ಧೋರಣೆ ತೋರುತ್ತಿರುವ ಈ ವಿದ್ಯಾರ್ಥಿಗಳಿಂದ,ಸಮಾಜಕ್ಕೆ ರವಾನೆಯಾಗುವ ಸಂದೇಶವಾದರೂ ಏನು? ಹೈಕೋರ್ಟ್ ಆದೇಶವನ್ನೂ ಮೀರಿ ಹಿಜಾಬ್‌ನಲ್ಲಿಯೇ ಬರುತ್ತೇವೆ ಎನ್ನುವ ಹಠಕ್ಕೆ ವಿದ್ಯಾರ್ಥಿನಿಯರು ಬೀಳುತ್ತಾರೆ ಎಂದರೆ, ಅವರ ಹಿಂದಿನ ಶಕ್ತಿಯಾದರೂ ಯಾವುದು ಎನ್ನುವುದನ್ನು ವಿವೇಚಿಸಬೇಕಿದೆ.
ಹಿಜಾಬ್ ವಿವಾದ ಶುರುವಾದ ಬಳಿಕ ರಾಜಕೀಯ ನಾಯಕರ ಕೆಸರೆರಚಾಟ ನೋಡಿದ್ದೇವೆ. ಕೇವಲ ನಾಯಕರು ಮಾತ್ರವಲ್ಲದೇ, ಇಷ್ಟು ದಿನ ಕಾಲೇಜು ಆವರಣದಲ್ಲಿ ‘ಭಾಯಿ-ಭಾಯಿ’ ಆಗಿದ್ದವರೂ ಇಂದು ಪರಮವೈರಿಗಳ ರೀತಿ ನಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ, ಹಿಜಾಬ್ ಹಾಕಲು ಅವಕಾಶ ನೀಡಲಾಗುವುದೋ, ಇಲ್ಲವೋ ಎನ್ನುವುದು ಎರಡನೇ ಮಾತು. ಆದರೆ ಈ ರೀತಿ ವೈಷಮ್ಯ ಬೆಳೆಸಿ ಕೊಂಡಿರುವ ವಿದ್ಯಾರ್ಥಿಗಳು ಪುನಃ ಕೂಡಲೂ ಸಾಧ್ಯವೇ? ಶಾಲಾ-ಕಾಲೇಜುಗಳಲ್ಲಿ ಈ ಹಿಂದೆ ಇದ್ದ ಸಾಮರಸ್ಯ ಪುನಃ ಬರಲು ಸಾಧ್ಯವೇ? ಇನ್ನು ಇಲ್ಲೊಂದು ವಿಷಯ ಪ್ರಸ್ತಾಪಿಸಲೇಬೇಕು.
ಹಿಜಾಬ್-ಕೇಸರಿ ಶಾಲು ವಿವಾದ ಭುಗಿಲೇಳುತ್ತಿದ್ದಂತೆ, ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು, ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ‘ಜೈ ಶ್ರೀರಾಂ’ ಘೋಷಣೆಗೆ ಪ್ರತಿಯಾಗಿ ‘ಅಲ್ಲಾ ಹು ಅಕ್ಬರ್’ ಎನ್ನುವ ಘೋಷಣೆ ಕೂಗಿದ್ದಳು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಸಹ ಆಗಿತ್ತು. ಆದರೆ ಇದಾದ ಬಳಿಕ ಆ ವಿದ್ಯಾರ್ಥಿನಿಗೆ ತಮಿಳುನಾಡಿನ ಮುಸ್ಲಿಂ ಸಂಘಟನೆಐದು ಲಕ್ಷ, ಬಿಬಿಎಂಪಿ ಮಾಜಿ ಸದಸ್ಯನಿಂದ ಒಂದು ಲಕ್ಷ, ಮಹಾರಾಷ್ಟ್ರದ ಶಾಸಕನೊಬ್ಬನಿಂದ ಐಫೋನ್ ಉಡುಗೊರೆಯಾಗಿ ಬಂದವು. ಇನ್ನು ಅವರ ಮನೆಗೆ ಮುಸ್ಲಿಂ ನಾಯಕರು ಒಬ್ಬರ ಮೇಲೊಬ್ಬರಂತೆ ‘ಪರೇಡ್’ ನಡೆಸಿದರು.
ಆ ಹುಡುಗಿಗೆ ‘ಸೆಲೆಬ್ರಿಟಿ’ ಫೀಲ್ ನೀಡಲಾಗುತ್ತಿದೆ. ರಾಜಕಾರಣಿಗಳು ತಮ್ಮ ವೋಟ್ ಬ್ಯಾಂಕ್ ಓಲೈಕೆಗಾಗಿ ಆ ವಿದ್ಯಾರ್ಥಿನಿಗೆ ‘ಶಹಬ್ಬಾಸ್‌ಗಿರಿ’ ನೀಡಲಾಗುತ್ತಿದೆ. ಸರಕಾರದ ಆದೇಶ ಮೀರಿ, ಶಾಲೆಗೆ ಬಂದರೆ ‘ಇಷ್ಟೆಲ್ಲ ಅನುಕೂಲಗಳು’ ಇವೆ ಎನ್ನುವುದು ವಿದ್ಯಾರ್ಥಿ ಗಳ ಮನಸ್ಸಿಗೆ ಹೋಗಿ, ಮುಂದೆ ಇದೇ ರೀತಿ ಅರಾಜಕತೆಯನ್ನೇ ಮುಂದುವರಿಸಿದರೆ ಅದನ್ನು ನಿಯಂತ್ರಿಸುವುದು ಹೇಗೆ ಎನ್ನುವ ಆತಂಕ ಬಹುಮಾನ ಕೊಟ್ಟ ಯಾವ ನಾಯಕರಿಗೂ ಬಾರದಿರುವುದು ನಿಜಕ್ಕೂ ಆತಂಕದ ವಿಷಯ.
ಕೇವಲ ಕಾಂಗ್ರೆಸ್ ಅಥವಾ ಇತರ ನಾಯಕರಿಂದ ಮಾತ್ರ ತಪ್ಪಾಗಿದೆ ಎಂದಲ್ಲ. ಬಿಜೆಪಿಯ ಹಲವು ನಾಯಕರೂ, ಹಿಜಾಬ್ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಅದರಲ್ಲಿಯೂ ಸಚಿವ ಸ್ಥಾನದಲ್ಲಿ ಕೂತಿರುವವರು, ‘ಕೇಸರಿ ಧ್ವಜ ರಾಷ್ಟ್ರಧ್ವಜ ವಾದರೂ ತಪ್ಪೇನು?’ ಎನ್ನುವ ಹೇಳಿಕೆಗಳನ್ನು ಬಹಿರಂಗವಾಗಿಯೇ ನೀಡುವ ಮೊದಲು ಈ ಹೇಳಿಕೆಯಿಂದ ಸಮಾಜದ ಮೇಲೆ ಆಗುವ ಪರಿಣಾಮದ ಬಗ್ಗೆಯೂ ಯೋಜಿಸಬೇಕು ಅಲ್ಲವೇ? ಅದರಲ್ಲಿಯೂ ಆಡಳಿತ ಪಕ್ಷದಲ್ಲಿರುವ ಬಿಜೆಪಿ ನಾಯಕರು ಈ ವಿಷಯದಲ್ಲಿ‘ಎಚ್ಚರಿಕೆಯಿಂದ ಹೇಳಿಕೆ’ ನೀಡಬೇಕು.
ಹಾಗೇ ನೋಡಿದರೆ ಕರ್ನಾಟಕದಲ್ಲಿ ಕೋಮು ಸಾಮರಸ್ಯದ ಸಮಸ್ಯೆ ಇರಲಿಲ್ಲ. ಈದ್ಗಾ ಮೈದಾನ, ಎಲ್ಲೋ ಸ್ಥಳೀಯ ಗಣಪತಿ ಕೂರಿಸುವ ಕಿತ್ತಾಟಗಳನ್ನು ಹೊರತು ಪಡಿಸಿದರೆ ಕರ್ನಾಟಕದಲ್ಲಿ ಎಂದಿಗೂ ಕೋಮು ವಿಷಯಕ್ಕೆ ಗಲಾಟೆಯಾಗಿಲ್ಲ. ಕರಾವಳಿಯಲ್ಲಿ ಆಗ್ಗಾಗೆ ಹಿಂದೂ -ಮುಸ್ಲಿಂ ಬಣಗಳ ನಡುವೆ (ರಾಜಕೀಯ ಕಾರಣಕ್ಕೆ) ಗಲಾಟೆಗಳು ಆಗುತ್ತವೆ ಹೊರತು, ಈ ರೀತಿ ಇಡೀ ರಾಜ್ಯವೇ ಹೊತ್ತಿ ಉರಿಯುವ ಮಟ್ಟಕ್ಕೆ ಎಂದಿಗೂ ಗಲಾಟೆಗಳು ನಡೆದಿಲ್ಲ. ಈಗಲೂ ಹಲವು ಗ್ರಾಮಗಳಲ್ಲಿ, ಹಿಂದೂ-ಮುಸ್ಲಿಂ ಎನ್ನುವ ಭೇದ – ಭಾವ ಇಲ್ಲ. ಆದರೆ ಯಾವುದೋ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣಕ್ಕೆ, ಇಡೀ ರಾಜ್ಯದ ಶಾಲಾ-ಕಾಲೇಜುಗಳು ಎರಡು ಧರ್ಮದ ಆಧಾರದಲ್ಲಿ ಒಡೆದು ಹೋಗುವ ಆತಂಕದಲ್ಲಿದೆ.
ವಿಷಯ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಸರಕಾರವೂ ವಿಷಯ ಒಂದು ತಾತ್ವಿಕ ಅಂತ್ಯಕಾಣಲಿದೆ ಎನ್ನುವ ವಿಶ್ವಾಸದಲ್ಲಿದೆ. ಆದರೆ ಈ ಎಲ್ಲಕ್ಕಿಂತ ಮುಖ್ಯವಾಗಿ, ಈ ವಿವಾದ ತಣ್ಣಗಾಗಬೇಕು ಎಂದರೆ ಮೊದಲು ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ. ತಮ್ಮ ಮಗುವಿನ ಉಜ್ವಲ ಭವಿಷ್ಯ ರೂಪಿಸುವುದು ಧರ್ಮದ ಗುರುತಿನ ಬಟ್ಟೆಯಾಗಲಿ, ಧರ್ಮದ ಹೊಡೆದಾಟವಾಗಲಿ ಅಲ್ಲ. ಬದಲಿಗೆ, ವಿದ್ಯೆ ಎನ್ನುವುದನ್ನು ಅರಿಯಬೇಕು. ತಮ್ಮ ಮಕ್ಕಳಿಗೆ ಈ ಬಗ್ಗೆ ಎಚ್ಚರಿಕೆಯ ಪಾಠವನ್ನು ಮಾಡಿ, ಶಾಲೆಗಳನ್ನು ಶಾಲೆಗಳಾಗಿಯೇ ಉಳಿಸುವುದಕ್ಕೆ ಪ್ರಯತ್ನಿಸ ಬೇಕಿದೆ. ಇಲ್ಲದೇ ಹೋದರೆ, ಈ ವಿವಾದಕ್ಕೆ ಕೊನೆ ಇಲ್ಲವಾಗುವುದರಲ್ಲಿ ಅನುಮಾನವೇ ಇಲ್ಲ. ಸರಕಾರದ ಸೂಚನೆ, ಆದೇಶ ಉಲ್ಲಂಘಿಸಿ ದವರಿಗೆ ‘ಬಹುಮಾನ’ ಸಿಗುತ್ತದೆ ಎನ್ನುವ ಸಂದೇಶವನ್ನು ಯಾವ ಪಕ್ಷ ಅಥವಾ ಪಂಥದವರು ನೀಡಿದರೂ ಅದು ತಪ್ಪೇ.
ಅದರಲ್ಲಿಯೂ ದೇಶದ ಭವಿಷ್ಯದ ಪ್ರಜೆಗಳಾಗಿರುವ ವಿದ್ಯಾರ್ಥಿಗಳಲ್ಲಿ ಈ ರೀತಿಯಾದ ವಿಚಾರವನ್ನು ಬಿತ್ತಿದರೆ ಆಗುವ ಅನಾಹುತ ಭೀಕರವಾಗಿಯೇ ಇರುತ್ತದೆ. ಹಿಜಾಬ್- ಕೇಸರಿ ಶಾಲು ಎನ್ನುವುದನ್ನು ಪಕ್ಕಕ್ಕೆ ಇಟ್ಟು, ಶಾಲಾ ವಾತಾವರಣದಲ್ಲಿ ಆಗಬೇಕಿರುವ ಬದಲಾ ವಣೆಯ ಬಗ್ಗೆ ಚಿಂತಿಸಬೇಕಿದೆ. ಈ ನಿಟ್ಟಿನಲ್ಲಿ ಸರಕಾರಗಳು ದಿಟ್ಟ ಕ್ರಮ ಕೈಗೊಳ್ಳುವ ಜತೆಜತೆಗೇ ವಿದ್ಯಾರ್ಥಿಗಳ ಪೋಷಕರು ಗಮನ ಹರಿಸಿದಾಗ ಮಾತ್ರ, ಶಿಕ್ಷಣ ದೇಗುಲಗಳು ಶಿಕ್ಷಣಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ.