ಒಬ್ಬರೇ ಕುಳಿತು ’ಏ ಮೇರೆ ವತನ್‌ ಕೇ ಲೋಗೋ’ ಕೇಳಿ !
ನೆನಪು
ಎಂ.ಜೆ.ಅಕ್ಬರ್‌
(ಲೇಖಕರು, ರಾಜ್ಯಸಭಾ ಸದಸ್ಯರು ಹಾಗೂ ಹಿರಿಯ ಪತ್ರಕರ್ತರು)
ಏರ್ ಇಂಡಿಯಾದ ಸಂಗ್ರಹದಲ್ಲಿ ಮಹಮ್ಮದ್ ರಫಿ, ಮುಕೇಶ್, ಮನ್ನಾ ಡೇ ಹಾಗೂ ಕಿಶೋರ್ ಕುಮಾರ್ ಅವರ ಹಾಡುಗಳೂ ಸಾಕಷ್ಟಿದ್ದವು. ಆದರೆ, ಏಕೋ ಗೊತ್ತಿಲ್ಲ, ಲತಾ ಕಂಠದಲ್ಲಿ ಸಿಗುತ್ತಿದ್ದ ನೆಮ್ಮದಿ ಈ ಪುರುಷರ ಧ್ವನಿಯಲ್ಲಿ ಸಿಗುತ್ತಿರಲಿಲ್ಲ. ಬಹುಶಃ ಗಂಡು ಧ್ವನಿ ಉದ್ಯಾನ ದಲ್ಲಿ ವಾಕ್ ಮಾಡಿದಂತೆ; ಹೆಣ್ಣು ಧ್ವನಿ ನಿಮ್ಮನ್ನು ಮನೆಗೆ ಕರೆದುಕೊಂಡು ಬರುತ್ತದೆ.
ಕಾಲ ಬಹಳ ತಣ್ಣಗೆ, ನಿರ್ದಯಿ ಮತ್ತು ಅನಂತ. ನೀವು ಅದಕ್ಕೆ ಜೋತುಬೀಳಲು ಸಾಧ್ಯವಿಲ್ಲ. ಬೇಕಾದರೆ ಘಟನೆಗಳಿಗೆ ಅಂಟಿಕೊಳ್ಳಬಹುದು. ಅವು ನಿಮ್ಮ ಅನಂತ ನೆನಪಿನ ಕೋಶಕ್ಕೆ ಸೇರಿಕೊಂಡುಬಿಡುತ್ತವೆ. ಅಲ್ಲೇ ಬಿದ್ದು, ಹೊರಳಾಡಿ, ನಿದ್ದೆಗೆ ಜಾರುತ್ತವೆ. ಮತ್ತೆ ಎಬ್ಬಿಸಿದರೆ ಏಳುತ್ತವೆ. ಬಹುಶಃ ಲತಾ ಮಂಗೇಶ್ಕರ್ ಅವರಲ್ಲಿ ಸುಮಧರ ಕಂಠವನ್ನು ಬಿಟ್ಟು ಇನ್ನೇನೋ ಅನಂತವಾದುದು ಇದೆ ಎಂದು ನನಗೆ ಮನವರಿಕೆಯಾಗಿದ್ದು 1980ರದಶಕದ ಕೊನೆಯಲ್ಲಿರಬೇಕು.
ಎಂಬತ್ತರ ದಶಕದ ಕೊನೆಯಲ್ಲಿ ವಾಣಿಜ್ಯ ವಿಮಾನಗಳು ಕೊಬ್ಬಿ ದಢೂತಿಯಾಗಿದ್ದವು. ಸೀಟುಗಳು ಅಗಲವೂ, ಐಷಾರಾಮವೂ ಆಗಿದ್ದವು. ಕೈ ಇಟ್ಟುಕೊಳ್ಳುವ ಜಾಗದಲ್ಲಿ ಏನೇನೋ ಆಯ್ಕೆಗಳು ಬಂದಿದ್ದವು. ಏರ್ ಇಂಡಿ ಯಾಕ್ಕೆ ಆಗ ಮೂವತ್ತು ವರ್ಷ ತುಂಬಿತ್ತು. ಕಂಪನಿಯಲ್ಲಿ ಸಾಕಷ್ಟು ದುಡ್ಡು ಓಡಾಡುತ್ತಿತ್ತು. ಯಾರೋ ಒಬ್ಬ ಒಳ್ಳೆಯ ಮಾರ್ಕೆಟಿಂಗ್ ಮ್ಯಾನೇಜರ್ ಬಂದಿದ್ದ ಅನ್ನಿಸುತ್ತದೆ. ಆತ ಪ್ರಯಾಣಿಕರನ್ನು ಖುಷಿಪಡಿಸಲು ಆರ್ಮ್‌ರೆಸ್ಟ್‌ಗಳಿಗೆ ಇಯರ್ ಫೋನ್ ಚುಚ್ಚಿಕೊಂಡು ಹಿಂದಿ ಹಾಡುಗಳನ್ನು ಕೇಳುವ ಭಾಗ್ಯ ಕರುಣಿಸಿದ್ದ. ಹಾಗೆ 1950-60ರ ದಶಕದಲ್ಲಿ ವಿಮಾನದಲ್ಲಿ ಕ್ಲಾಸಿಕ್ಸ್‌ಗಳನ್ನು ಆಲಿಸುತ್ತ ಹಾರುವ ಅವಕಾಶ ನಮಗೆ ಪ್ರಾಪ್ತವಾಗಿತ್ತು.
ನಾನಂತೂ ದೀರ್ಘ ಪ್ರಯಾಣದಲ್ಲಿ ಅದನ್ನು ಬಹಳ ಎಂಜಾಯ್ ಮಾಡುತ್ತಿದ್ದೆ. ನಾನು ಹೋಗುವ ಜಾಗಕ್ಕೆ ಏರ್ ಇಂಡಿಯಾ ವಿಮಾನ ಇದೆ ಅಂತಾದರೆ ಅದರಲ್ಲೇ ಹೋಗುತ್ತಿದ್ದೆ. ಅದರ ಮಹತ್ವವೇನು ಎಂಬುದು ನಮಗೆ ಗೊತ್ತಾಗುತ್ತಿದ್ದುದು ರಿಟರ್ನ್ ಟ್ರಿಪ್‌ನಲ್ಲಿ. ವಿದೇಶದಲ್ಲಿ ವಾರವೋ, ಹತ್ತು ದಿನವೋ ಕಳೆದು ಊರಿಗೆ ಬರಲು ಏರ್ ಇಂಡಿಯಾ ವಿಮಾನ ಹತ್ತಿದರೆ ಅಲ್ಲಿ ಸಿಗುತ್ತಿದ್ದ ಭಾರತೀಯ ಸಂಗೀತದ ರಸದೌತಣ ನಾವು ಅಷ್ಟು ದಿನ ಏನನ್ನು ಮಿಸ್ ಮಾಡಿಕೊಂಡಿದ್ದೆವು ಎಂಬುದನ್ನು ನೆನಪು ಮಾಡಿಕೊಡುತ್ತಿತ್ತು. ವಿಮಾನ ಹತ್ತಿದ ಕೂಡಲೇ ನಾನು ಮೊದಲು ಮಾಡುತ್ತಿದ್ದ ಕೆಲಸ ಆಡಿಯೋ ಚಾನೆಲ್‌ನ ಸ್ವಿಚ್ ಅದುಮುವುದು. ನ್ಯೂಯಾರ್ಕ್ ಏರ್‌ಪೋರ್ಟ್‌ನ ಮೋಡಗಳ ಮೇಲೆ ಲತಾ ಮಂಗೇಶ್ಕರ್ ಕಂಠದಲ್ಲಿ ‘ವೋ ಚಾಂದ್ ನಿಕಲಾ ವೋಹ್ ತಾರೇ ಹಸೀ, ಯೇ ರಾತ್ ಅಜಬ್ ಮತವಾರಿ ಹೈ/ ಸಮಝನೇ ವಾಲೇ ಸಮಝ್ ಚುಕೇ ಹೈ, ನ ಸಮಝೇ ವೋ ಅನಾರಿ ಹೈ’ ಎಂದು ಹಾಡು ಕೇಳುತ್ತಿದ್ದರೆ ನೀವು ನಿಮ್ಮದೇ ಲೋಕದಲ್ಲಿ ಮರೆಯಾಗಿಬಿಡುತ್ತೀರಿ.
1950ರ ದಶಕದ ಬಾಲಿವುಡ್‌ನ ಅಂಗಳದಲ್ಲಿ ಅರಳಿದ ಪ್ರೇಮಲೋಕ ನನ್ನ ಪ್ರಕಾರ ಇನ್ನೆಲ್ಲೂ ಕಾಣಸಿಗದು. ಏರ್ ಇಂಡಿಯಾದ ಸಂಗ್ರಹದಲ್ಲಿ ಮಹಮ್ಮದ್ ರಫಿ, ಮುಕೇಶ್, ಮನ್ನಾ ಡೇ ಹಾಗೂ ಕಿಶೋರ್ ಕುಮಾರ್ ಅವರ ಹಾಡುಗಳೂ ಸಾಕಷ್ಟಿದ್ದವು. ಆದರೆ, ಏಕೋ ಗೊತ್ತಿಲ್ಲ, ಲತಾ ಕಂಠದಲ್ಲಿ ಸಿಗುತ್ತಿದ್ದ ನೆಮ್ಮದಿ ಈ ಪುರುಷರ ಧ್ವನಿಯಲ್ಲಿ ಸಿಗುತ್ತಿರಲಿಲ್ಲ. ಬಹುಶಃ ಗಂಡು ಧ್ವನಿ ಉದ್ಯಾನದಲ್ಲಿ ವಾಕ್ ಮಾಡಿದಂತೆ; ಹೆಣ್ಣು ಧ್ವನಿ ನಿಮ್ಮನ್ನುಮನೆಗೆ ಕರೆದುಕೊಂಡು ಬರುತ್ತದೆ.
ನಮ್ಮ ದೇಶದಲ್ಲಿ ಸಿನಿಮಾಗಳಿಗೆ ಸಂಗೀತ ಬಹಳ ಮುಖ್ಯ. ಹಿನ್ನೆಲೆ ಗಾಯಕರಿಗೆ ಇಲ್ಲಿ ತುಂಬಾ ಮಹತ್ವ. ಏಕೆಂದರೆ ಭಾರತೀಯರಿಗೆ ಪ್ರೀತಿಯನ್ನೂ, ಸಾವಿನ ಸೂತಕವನ್ನೂ, ನಗುವನ್ನೂ, ಅಳುವನ್ನೂ ಸಂಗೀತದೊಂದಿಗೇ ಕಳೆಯಬೇಕು. ಕತೆ ಹಾಗೂ ಸಂಗೀತ ಇಲ್ಲದಿದ್ದರೆ ನಮ್ಮ ಬದುಕು ಮುಂದೆ ಹೋಗುವುದಿಲ್ಲ. ದೇವಾನಂದ್‌ರ ಅತ್ಯದ್ಭುತ ಸಿನಿಮಾ ‘ಗೈಡ್’ ಮೊದಲಿಗೆ ೧೯೬೫ರಲ್ಲಿ ಬಿಡುಗಡೆಯಾದಾಗ ಫ್ಲಾಪ್ ಆಗಿತ್ತಂತೆ. ಅವರೇ ಒಮ್ಮೆ ನನಗಿ ದನ್ನು ಹೇಳಿದ್ದರು. ಒಂದು ವಾರ ಕಳೆದ ನಂತರ ಅದರ ಹಾಡುಗಳು ಜನರ ನಾಲಗೆಯ ಮೇಲೆ ಆಡಲು ಶುರುವಾದ ಮೇಲೆ ಸಿನಿಮಾ ಹಾಲ್‌ಗಳಲ್ಲಿ ‘ಗೈಡ್’ ಹಿಟ್ ಆಯಿತಂತೆ.
ಅದೊಂದು ಅಸಾಮಾನ್ಯ ಸಿನಿಮಾ. ಆ ಕಾಲಕ್ಕಿಂತ ಬಹಳ ಮುಂದಿತ್ತು. ನಾಯಕಿಯ ಕತೆ ಆಧರಿತ ಚಿತ್ರ. ರೋಸಿ ಎಂಬ ಹೆಣ್ಣುಮಗಳು ತನ್ನ ಪುರಾತತ್ವಶಾಸಜ್ಞ ಗಂಡನ ಸಂಗದಿಂದ ಬೇಸತ್ತು ರಾಜು ಎಂಬ  ಪ್ರೇಮಿಯ ಜತೆ ಮನೆ ಬಿಟ್ಟು ಓಡಿಹೋಗುತ್ತಾಳೆ. ಹಾಗೆ ಹೋದವಳು ಪ್ರೊಫೆಷನಲ್ ಡ್ಯಾನ್ಸರ್ ಆಗುತ್ತಾಳೆ. ರಾಜು ಆಕೆಗೆ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾನೆ. ಅವಳಿಗೆ ಯಶಸ್ಸು, ಹಣ ಎರಡೂ ಹರಿದು ಬರುತ್ತದೆ. ಕೊನೆಗೆ ರಾಜು ಆಕೆಯ ಹಣ ಲಪಟಾಯಿಸಿ ಮೋಸ ಮಾಡುತ್ತಾನೆ. ಆ ಸಿನಿಮಾ ಆಗಿನ ಕಾಲದ ಎಲ್ಲ ಸಂಪ್ರದಾಯ ಹಾಗೂ ಬದುಕಿನ ರೀತಿಯ ಪ್ರತಿಯೊಂದು ಮಜಲನ್ನೂ ಮುರಿದು ಹಾಕಿತ್ತು.
‘ಗೈಡ್’ ಎಷ್ಟರಮಟ್ಟಿಗೆ ಅನುಪಮ ಸುಂದರಿ ವಹಿದಾ ರೆಹಮಾನ್, ಅಪ್ರತಿಮ ನಟ ದೇವಾನಂದ್, ಸಂಗೀತ ಮಾಂತ್ರಿಕ ಎಸ್‌ಡಿ ಬರ್ಮನ್ ಅಥವಾ ನಿರ್ದೇಶಕ ವಿಜಯ್ ಆನಂದ್ ಅವರ ಸಿನಿಮಾ ಆಗಿತ್ತೋ ಅಷ್ಟೇ ಲತಾ ಮಂಗೇಶ್ಕರ್ ಅವರ ಸಿನಿಮಾ ಕೂಡ ಆಗಿತ್ತು. ‘ಅಲ್ಲಾ ಮೇಘ್ ದೇ, ಪಾನಿ ದೇ, ಛಾಯಾ ದೇ, ರಾಮಾ ಮೇಘ್ ದೇ’ ಸೇರಿದಂತೆ ಅದರ ಪ್ರತಿಯೊಂದು ಹಾಡುಗಳೂ ಸೂಪರ್‌ಟ್ ಆಗಿದ್ದವು. ಇಷ್ಟೊತ್ತಿಗೆ ಯಾವತ್ತೋ ಮರೆತು ಹೋಗ ಬಹುದಾಗಿದ್ದ ಒಂದು ಕಾಲದ ಜನಪ್ರಿಯ ಬಾಲಿವುಡ್ ಸಿನಿಮಾಗಳ ಪಟ್ಟಿಗೆ ‘ಗೈಡ್’ ಸೇರದಂತೆ ಮಾಡಿದ್ದು ಲತಾ ಮಂಗೇಶ್ಕರ್ ಕಂಠ ಎಂಬುದರಲ್ಲಿ ಅನುಮಾನವೇ ಇಲ್ಲ.
ಕವಿ ಶಂಕರ್‌ದಾಸ್ ಕೇಸರಿಲಾಲ್ ಶೈಲೇಂದ್ರರ ಸಾಹಿತ್ಯದ ಸಾಲುಗಳಿಗೆ ರೋಸಿ ತನ್ನ ರೆಕ್ಕೆ ಬಿಚ್ಚಿ ‘ಕಾಂಟೋ ಸೇ ಖೀಚ್ ಕೇ ಯೇಹ್ ಆಂಚಲ್, ಛೋಡ್ ಕೇ ಬಂಧನ್ ಬಾಂಧೇ ಪಾಯಲ್, ಕೋಯಿ ನಾ ರೋಕೋ ದಿಲ್ ಕಿ ಉಡಾನ್ ಕೋ, ದಿಲ್ ವೋ ಚಲಾ…/ ಆಜ್ ಫಿರ್ ಜೀನೇ ಕಿ ತಮನ್ನಾ ಹೇ, ಆಜ್ ಫಿರ್ ಮರನೇ ಕಾ ಇರಾದಾ ಹೇ…/ ಮೇ ಹೂಂ ಘುಬಾಡ್ ಯಾ ತೂಫಾನ್ ಹೂ, ಕೋಯಿ ಬತಾಯೇ ಮೇ ಕಹಾ ಹೂಂ/ ಡರ್ ಹೈ ಸ-ರ್ ಮೇ ಕಹೀಂಖೋ ನ ಜಾವೋ, ರಾಸ್ತಾ ನಯಾ…’ ಎಂದು ಕುಣಿಯುತ್ತಿದ್ದರೆ ಪ್ರೇಕ್ಷಕರಲ್ಲೂ ಭವಬಂಧನಗಳಿಂದ ಮುಕ್ತಗೊಂಡ ನಿರಾಳ ಭಾವ.
ಲತಾ ಮಂಗೇಶ್ಕರ್ ನಮಗೆಲ್ಲ ಬಿಡುಗಡೆಯ ದಾರಿ ತೋರುವವರೂ ಹೌದು, ಸ್ವತಃ ಬಿಡುಗಡೆಯೂ ಹೌದು. ಅದು ಅವರ ಧ್ವನಿಯಲ್ಲಿರುವ ಪವಾಡ. ಆದರೆ ‘ಗೈಡ್’ನಲ್ಲಿ ನನ್ನ ಪ್ರಕಾರ ಲತಾರ ಪರಮಾದ್ಭುತ ಹಾಡೆಂದರೆ ‘ಮೋಹ್ ಸೇ ಚಲ್ ಕಿಯೇ ಜಾಯೇ, ಹೈ ರೇ ಹೈ ಹೈ ದೇಖೋ, ಸಯ್ಯಾಂ ಬೇಯಿ ಮಾನ್.’ ಅದೊಂದು ಅನುಭವ, ಅನುಮಾನ, ಸಾಧನೆಯ ಅರ್ಥಗಳನ್ನೆಲ್ಲ ಕೆಣಕುವ ಹಾಡು. ಸಿನಿಮಾದಲ್ಲಿ ವಹೀದಾ ರೆಹಮಾನ್ ತನ್ನ ಎರಡನೆಯ ಯಶಸ್ಸಿನ ನಂತರದ ವಂಚನೆಯ ಬಲೆಯಿಂದ ಹಾಗೂ ರಾಜುವಿನ ದುಡ್ಡಿನ ಮೋಹದಿಂದ ಹೊರಗೆ ಜಿಗಿಯುತ್ತಾ ಹಾಡುವ ಈ ಗೀತೆಯಲ್ಲಿ ಆಕೆಯ ಕಣ್ಣಿನಲ್ಲೇ ಬದುಕಿನ ಸಮಸ್ತ ಕಪಟಗಳ ಝಲಕು ಹರಿದಾಡುತ್ತದೆ.
ಲತಾ ಹಾಡಿದಂತೆ ಆ ಹಾಡನ್ನು ಜಗತ್ತಿನ ಇನ್ನಾವ ಧ್ವನಿಯೂ ಹಾಡಲು ಸಾಧ್ಯವಿರಲಿಲ್ಲ ಬಿಡಿ. ಅಷ್ಟೇಕೆ, ತಾನು ಪ್ರೀತಿಸಿದ ಗಂಡಸು ವಿಶ್ವಾಸದ್ರೋಹ ಎಸಗಿದ್ದರ ನೋವನ್ನು ಕಣ್ಣಿನಲ್ಲೇ ತೋರಿಸಿದ ವಹೀದಾ ರೆಹಮಾನ್ ಕೂಡ ಸಾಟಿಯಿಲ್ಲದ ನಟಿ.
ಹಿನ್ನೆಲೆ ಗಾಯನದ ಬಗ್ಗೆ ಗಹನವಾದ ಚರ್ಚೆಗಳು ನಡೆದಿವೆ; ಪರದೆಯ ಮೇಲೆ ಕಾಣುವ ನಟ-ನಟಿಯರು ಸ್ಟುಡಿಯೋದಿಂದ ಬಂದ ಧ್ವನಿಯ ಮಾಲೀಕ ಆಗಬಹುದೇ? ಮುಕೇಶ್ ಎಂದೇ ಖ್ಯಾತಿ ಪಡೆದ ಮುಕೇಶ್ ಚಾಂದ್ ಮಾಥುರ್ ಅವರು ರಾಜ್ ಕಪೂರ್‌ರ ಧ್ವನಿಯೇ ಆಗಿಬಿಟ್ಟಿದ್ದರು. ‘ಆವಾರಾ ಹೂಂ, ಗರ್ದಿಶ್ ಮೇ ಹೂಂ ಆಸಮಾನ್ ಕಾ ತಾರಾ ಹೂಂ’ ಎಂದು ವೆಗಾಬಾಂಡ್ ರೀತಿ ಹಾಡುವುದರಲ್ಲಿ, ‘ಚಲಿಯಾ ಮೇರಾ ನಾಮ್, ಚಲನಾ ಮೇರಾಕಾಮ್/ ಹಿಂದು-ಮುಸ್ಲಿಂ-ಸಿಖ್-ಇಸಾಯಿ ಸಬ್ ಕೋ ಮೇರಾ ಸಲಾಂ’ ಎಂದು ಬೀದಿಯಲ್ಲಿ ಹಾಡುವ ವಂಚಕನ ಪಾತ್ರದಲ್ಲಿ, ‘ದೋಸ್ತ್ ದೋಸ್ತ್ ನಾ ರಹಾ, ಪ್ಯಾರ್ ಪ್ಯಾರ್ ನಾ ರಹಾ’ ಎಂದು ‘ಸಂಗಮ್’ದಲ್ಲಿ ಹಾಡುವುದರಲ್ಲಿ, ‘ಸುನೋ ಜಿ ಸುನೋ, ಹಮಾರಿ ಭೀ ಸುನೋ, ಅಜಿ ಮೆಹೆರ್‌ಬಾನ್ ಹಮಾರಿ ಭೀ ಸುನೋ/ ನಾ ತಪ್ಪಾ ನಾ ತುಮಾರಿ, ಗಜಲ್ ಹೈ ನಾ ಕಾಜ್ರಿ, ಯೇ ರಾಗಿನಿ ಹೈ ಪ್ಯಾರ್’ ಎಂದು ಸೊಗಸುಗಾರನ ರೀತಿಯಲ್ಲಿ ‘ಏಕ್ ದಿಲ್ ಸೌಅ-ನೆ’ಚಿತ್ರದಲ್ಲಿ ಕಥಕ್ ನೃತ್ಯ ಮಾಡುತ್ತ ಹಾಡುವುದರಲ್ಲಿ ಮುಕೇಶ್ ಅವರು ಸ್ವತಃ ರಾಜ್ ಕಪೂರ್ ಆಗಿಬಿಟ್ಟಿದ್ದರು.
ಸಿನಿಮಾದಿಂದ ಸಿನಿಮಾಕ್ಕೆ ಸಾಗುತ್ತ, ‘ಮೇರೇ ಟೂಟೇ ಹುಯೆ ದಿಲ್ ಸೇ ಕೋಯಿ ತೋ ಆಜ್ ಯೇ ಪೂಚೇ ಕಿ ತೇರಾ ಹಾಲ್ ಕಾ ಹೈ’ ಎನ್ನುತ್ತ ಅಥವಾ ‘ಕಿಸಿಕೇ ಮುಸ್ಕುರಾಹಟೋಂ ಪೇ ಹೋ ನಿಸಾರ್, ಕಿಸಿ ಕಾ ದರ್ದ್ ಮಿಲ್ ಸಕೇ ತೋ ಯೇ ಉಧಾರ್/ ಕಿಸ್ಕೆ ವಾಸ್ತೇ ಹೋ ತೇರೇ ದಿಲ್ ಮೇ ಪ್ಯಾರ್,ಜೀನಾ ಇಸಿ ಕಾ ನಾಮ್ ಹೈ’ ಎನ್ನುತ್ತ ಅವರು ರಾಜ್ ಕಪೂರ್‌ರ ಅಪರಾವತಾರವೇ ಆಗಿಹೋದರು.
ಹಾಗೆಯೇ ದಿಲೀಪ್ ಕುಮಾರ್‌ಗೆ ಮಹಮ್ಮದ್ ರಫಿ ಧ್ವನಿಯಾಗಿದ್ದರು. ‘ಮಧುಬನ್ ಮೇ ರಾಧಿಕಾ ನಾಚೇ ರೇ/ ಗಿರಿಧರ್ ಕಿ ಮುರಲಿಯಾ ಬಾಜೇ’ ಎಂದು ಹಾಡಿದ೧೯೬೦ರ ದಶಕದ ಅದ್ಭುತ ‘ಕೊನೂರ್’ ಚಿತ್ರದಲ್ಲಿ ದಿಲೀಪ್ ಕುಮಾರ್‌ರನ್ನೂ ಮಹಮ್ಮದ್ ರಫಿಯನ್ನೂ ಬೇರೆಯಾಗಿ ನೋಡಲು ಸಾಧ್ಯವೇ ಇಲ್ಲ. ‘ಟೂಟೇ ಹುಯೇ ತಾರೋಂ ನೇ ಹಮ್‌ಕೋ ಯೇ ಸಿಖಾದಿಯಾ ಹೈ’ ಎಂಬ ರಫಿ ಸಾಹೇಬರ ‘ಮಧುಮತಿ’ ಚಿತ್ರದ ದುರಂತ ಹಾಡಿನಲ್ಲಿ ದಿಲೀಪ್ ಅಜರಾಮರರಾದರು. ಅವರಿಬ್ಬರ ನಡುವೆ ಒಂದು ಅಸಾಮಾನ್ಯ ವೃತ್ತಿಪರ ಸಂಬಂಧವಿತ್ತು. ಆದರೆ ಅದು ಅವರನ್ನು ಕಟ್ಟಿಹಾಕಿರಲಿಲ್ಲ.
ಮುಕೇಶ್ ‘ಯಹೂದಿ’ ಚಿತ್ರದಲ್ಲಿ ಶಂಕರ್ ಸಿಂಗ್ ರಘುವಂಶಿ ಮತ್ತು ಜೈಕಿಶನ್ ದಯಾಭಾಯಿ ಪಾಂಚಲ್ (ಶಂಕರ್-ಜೈಕಿಶನ್ ಎಂದೇ ಖ್ಯಾತಿ ಪಡೆದ ಜೋಡಿ) ಅವರ ಸಂಗೀತಕ್ಕೆ ‘ಯೇ ಮೇರಾ ದೀವಾನಾಪನ್ ಹೈ, ಯಾ ಮೊಹಬ್ಬತ್ ಕಾ ಸರೂರ್’ ಎಂದು ದಿಲೀಪ್ ಕುಮಾರ್‌ಗೆ ಸಾರ್ವಕಾಲಿಕ ಟ್ ಗೀತೆ ಹಾಡಿದರು. ಇದೇ ಜೋಡಿ ರಾಜ್ ಕಪೂರ್‌ಗೆ ‘ಶ್ರೀ ೪೨೦’ ಮತ್ತು ‘ಚೋರಿ ಚೋರಿ’ ಚಿತ್ರದಲ್ಲಿ ಮನ್ನಾ ಡೇ ಅವರನ್ನು ನೀಡಿತು.
ನನಗೆ ನೆನಪಿರುವಂತೆ ಲತಾ ಮಂಗೇಶ್ಕರ್, ರಫಿ ಮತ್ತು ಮುಕೇಶ್ ಈ ಮೂರೂ ದಿಗ್ಗಜರು ಒಂದೇ ಚಿತ್ರಕ್ಕೆ ಹಾಡಿದ್ದು ‘ರಮಯ್ಯಾ ವಸ್ತಾ ವಯ್ಯಾ… ಮೈನೇ ದಿಲ್ ತುಝ್‌ಕೋ ದಿಯಾ’ ಹಾಡು ಮಾತ್ರ. ದೇವಾನಂದ್‌ಗೆ ಮೂವರು ಗಾಯಕರು ಹೆಚ್ಚಾಗಿ ಹಾಡುತ್ತಿದ್ದರು. ಅವರಲ್ಲೂ ರಫಿ ಹಾಡಿದ್ದು ಹೆಚ್ಚು. ಆದರೆ, ‘ಹೈ ಅಪನಾ ದಿಲ್ ತೋ ಆವಾರಾ, ನ ಜಾನೇ ಕಿಸ್ ಪೇ ಆಯೇಗಾ’ ಮತ್ತು ‘ನ ತುಮ್ ಹಮೇ ಜಾನೋ, ನ ಹಮ್ ತುಮೇ ಜಾನೇ, ಮಗರ್ ಲಗತಾ ಹೈ ಕುಚ್ ಐಸಾ ಮೇರಾ ಹಮ್‌ದಮ್ ಮಿಲ್ ಗಯಾ’ ಎಂದು ಮರೆಯಲಾಗದ ಗೀತೆಗಳನ್ನು ಕೊಟ್ಟವರು ಹೇಮಂತ್ ಕುಮಾರ್. ಸಂಗೀತ ಇರುವವರೆಗೂ, ಅಥವಾ ಕೊನೆಯ ಪಕ್ಷ ಯೂಟ್ಯೂಬ್ ಇರುವವರೆಗೂ ಈ ಗೀತೆಗಳು ಇರುತ್ತವೆ. ಅತಿ ಹೆಚ್ಚು ಹೀರೋಗಳಿಗೆ ಬೇರೆ ಬೇರೆ ರೀತಿಯ ಹಾಡುಗಳನ್ನು ಹಾಡಿದ್ದು ರಫಿ. ಅವರು ದಿಲೀಪ್ ಕುಮಾರ್‌ರಿಂದ ಹಿಡಿದು ಶಮ್ಮಿಕಪೂರ್‌ವರೆಗೆ ಎಲ್ಲರಿಗೂ ಹಾಡಿದರು.
ಧರ್ಮೇಂದ್ರರ ಅತಿ ಸುಂದರ ಹಾಡು ಬಂದಿದ್ದು ರಫಿ ಕಂಠದಲ್ಲಿ: ‘ಆಪ್ ಕೇ ಹಸೀ ರುಖ್ ಪೇ ಆಜ್ ನಯಾ ನೂರ್ ಹೈ, ಮೇರಾ ದಿಲ್ ಮಚಲ್ ಗಯಾ ತೋ ಮೇರಾ ಕ್ಯಾ ಕಸೂರ್ ಹೈ.’ ಜಾಯ್ ಮುಖರ್ಜಿಯವರ ಲವ್ ಇನ್ ಶಿಮ್ಲಾ, ಏಕ್ ಮುಸಾಫಿರ್ ಏಕ್ ಹಸೀನಾ, ಫಿರ್ ವೋ ದಿಲ್ ಲಾಯಾ ಹೂಂ ಅಥವಾ ಶಾಗಿರ್ದ್‌ನಂತಹ ಚಿತ್ರಗಳು ರಫಿ ಮತ್ತು ಲತಾ ಹಾಡದಿದ್ದರೆ ಹಿಟ್ ಆಗುತ್ತಿದ್ದವೋ ಇಲ್ಲವೋ ಎಂಬುದು ಚರ್ಚಾರ್ಹ. ಆದರೆ, ರಫಿ ಮತ್ತು ಮುಕೇಶ್ ದೊಡ್ಡ ದೊಡ್ಡ ಸ್ಟಾರ್‌ಗಳಿಂದಾಗಿ ಪ್ರಸಿದ್ಧರಾದರೆ ಲತಾ ತಮಗೆ ತಾವೇ ಸೂಪರ್‌ಸ್ಟಾರ್ ಆದರು.
ಲತಾ ಪ್ರತಿಯೊಬ್ಬ ಹೀರೋಯಿನ್‌ಗೂ ಹಾಡಿದರು. 1949ರಲ್ಲಿ ಹದಿನಾರು ವರ್ಷದ ಮಧುಬಾಲಾಗೆ ‘ಆಯೇಗಾ ಆಯೇಗಾ, ಆಯೇಗಾ ಆನೇವಾಲಾ’ ಎಂದು ಆರಂಭಿಸಿ ಅರವತ್ತು ವರ್ಷದ ನಂತರ ಬಂದ ನಾಯಕಿಯರಿಗೂ ಧ್ವನಿಯಾದರು. ಅವರ ಕಂಠ 36 ಭಾಷೆಗಳಿಗೆ ಹಾಡಿತ್ತು. ಹಾಗಂತ ಅವರು ಮೀನಾ ಕುಮಾರಿ, ನರ್ಗಿಸ್, ನಿಮ್ಮಿ, ನಾದಿರಾ, ಸುಚಿತ್ರಾ ಸೇನ್, ವೈಜಯಂತಿಮಾಲಾ, ನೂತನ್, ಮಾಲಾ ಸಿನ್ಹಾ, ಸಾಧನಾ, ಆಶಾ ಪಾರೇಖ್, ಶಕೀಲಾ, ವಹೀದಾ ರೆಹ್ಮಾನ್, ಸಾಯಿರಾ ಬಾನು, ಹೇಮಾ ಮಾಲಿನಿ, ಮುಮ್ತಾಜ್ ಅಥವಾ ಇನ್ನಾವ ನಟಿಯೂ ಆಗಲಿಲ್ಲ. ಬದಲಿಗೆ ಈ ನಟಿಯರೇ ಲತಾಮಂಗೇಶ್ಕರ್ ಆದರು! ‘ಬದಲೇ ಬದಲೇ ಮೇರೆ ಸರ್ಕಾರ್ ನಜರ್ ಆತೇ ಹೈ/ ದಿಲ್ ಕಿ ಬರಬಾದಿ ಕೇ ಅಸರ್ ನಜರ್ ಆತೇ ಹೈ’ ಎಂದು ‘ಚೌಧ ಕಾ ಚಾಂದ್’ನಲ್ಲಿ ವಹಿದಾ ರೆಹ್ಮಾನ್, ‘ಆಪ್ ಕಿ ನಜರೋ ನೇ ಸಮಝಾ ಪ್ಯಾರ್ ಕೇ ಕಾಬಿಲ್ ಮುಝೇ/ ದಿಲ್ ಕಿ ಹರ್ ಧರಕಾ ತಹರ್ ಜಾ, ಮಿಲ್ ಗಯೇ ಮಂಜಿಲ್ ಮುಝೇ’ ಎಂದು ಮಾಲಾ ಪರದೆಯ ಮೇಲೆ ಹಾಡುತ್ತಿದ್ದರೆ ನಮಗೆ ಲತಾ ಕಾಣಿಸುತ್ತಿದ್ದರು.
ಈಗ ಹೆಚ್ಚುಕಮ್ಮಿ ಮರೆತೇಹೋಗಿರುವ ಅನಿತಾ ಗುಹಾಗೆ ಸಿನಿಮಾ ಜಗತ್ತಿನಲ್ಲಿ ಹೊಸ ಎತ್ತರ ಕರುಣಿಸಿದ್ದು ರಾಜೇಂದ್ರ ಕೃಷ್ಣನ್ ಅವರ ಸಾಹಿತ್ಯ ಮತ್ತು ಮದನ್ ಮೋಹನ್‌ರ ಸಂಗೀತವಿರುವ ‘ವೋ ಭೂಲಿ ದಾಸ್ತಾ ಲೋ ಫಿರ್ ಯಾದ್ ಆ ಗಯಿ, ನಜರ್ ಕೇ ಸಾಮನೇ ಘಟಾ ಸಿ ಚಾ ಗಯಿ…/ -ಕತ್ ಇಕ್ ಯಾದ್ ಹೈ ಬಾಕಿ, ಬಸ್ ಇಕ್ ಫರ್ಯಾದ್ ಹೈ ಬಾಕಿ/ ವೋ ಖುಯಾ ಲೂಟ್ ಗಯೇ ಲೇಕಿನ್, ದಿಲ್ ಎಲ್ಲಾ ಬರ್ಬಾದ್ ಹೈ ಬಾಕಿ/ ಕಹಾಂ ಥೀ ಜಿಂದಗಿ ಮೇರಿ, ಕಹಾಂ ಪರ್ ಆಗಯೀ..’ ಎಂದು ಲತಾ ದೀದಿ ‘ಸಂಜೋಗ್’ನಲ್ಲಿ ಹಾಡಿದಾಗ. ಲತಾ ಉರ್ದು ಪದಗಳನ್ನು ಉಚ್ಛರಿಸುವಷ್ಟು ಸ್ಪಷ್ಟವಾಗಿಇನ್ನಾರೂ ಹಾಡಲು ಸಾಧ್ಯವೇ ಇರಲಿಲ್ಲ.
ಅನುಮಾನವಿದ್ದರೆ ‘ಜಿಹಲ್ ಎಲ್ಲಾ ಮಸ್ಕಿನ್ ಮಕುಂದ್ ಎಲ್ಲಾ ರಂಜಿಶ್ ಬಹಾರ್ ಎಲ್ಲಾ ಜರಾ ಹಮಾರಾ ದಿಲ್ ಹೈ’ ಎಂಬ ಗುಲ್ಜಾರ್ ಬರೆದ ಗೀತೆಯನ್ನು ಕೇಳಬಹುದು. ಅಥವಾ ‘ಯೇ ರಂಗೇ ಮೆಹಫಿಲ್ ಯೇ ಜಶನೇ ಬಹಾರಾ/ ಐಸೇ ಮೇ ಯೂ ಖಿರಮಾ ಖಿರಮಾ, ಅಲ್ಲಾ ಕರೇ ತು ಭೀ ಆಜಾಯೇ’ ಎಂಬ ‘ಮಿಸ್ಟರ್ ಎಕ್ಸ್ ಇನ್ ಬಾಂಬೆ’ ಹಾಡು ಕೇಳಬಹುದು. ಪ್ರತಿಯೊಬ್ಬ ನಾಯಕಿಯನ್ನೂ ಲತಾರ ಧ್ವನಿ ರೂಪಾಂತರಗೊಳಿಸಿತ್ತು.ಲತಾ ಮಂಗೇಶ್ಕರ್‌ಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕು ಅಂದರೆ ಅವರು ಮದನ್ ಮೋಹನ್‌ಗೆ ಹಾಡಿದ, ಅದರಲ್ಲೂ ರಾಜಾ ಮೆಹದಿ ಅಲಿಖಾನ್ ಅವರ ಸಾಹಿತ್ಯಕ್ಕೆ ಹಾಡಿದ ಗೀತೆಗಳನ್ನು ನೆನಪಿಸಿಕೊಳ್ಳಬೇಕು. ಸ್ವತಃ ಲತಾ ಹೇಳುತ್ತಿದ್ದಂತೆ ಅವರ ಅತ್ಯುತ್ತಮ ಗೀತೆಗಳು ಬಂದಿದ್ದು ಮೆಹದಿ ಅಲಿ ಖಾನ್‌ರ ಸಾಹಿತ್ಯ ಮತ್ತು ಮದನ್ ಮೋಹನ್ ಅವರ ಸಂಗೀತದಲ್ಲಿ.
ಯಾವುದೇ ತಲೆಮಾರಿನ ಕೇಳುಗರಿಗೆ ಅವರ ಮೂರು ಗೀತೆಗಳು ಖಂಡಿತ ಹೃದಯಕ್ಕೆ ಬಹಳ ಹತ್ತಿರವಾಗುತ್ತವೆ: ‘ಆಪಕಿ ನಜರೋ ನೇ ಸಮಝಾ ಪ್ಯಾರ್ ಕೆ ಕಾಬಿಲ್ ಮುಝೇ’; ‘ಹೈ ಇಸೀ ಮೇ ಪ್ಯಾರ್ ಕೇ ಆಬರೂ, ವೋಜ-ಕರೇ ಮೈ ವ- ಕರೂ/ ಜೋ ವ- ಭೀ ಕಾಮ್ ನ ಆಸಕೇ ತೋ ವಹೀ ಕಹೇ ಕಿ ಮೇ ಕ್ಯಾ ಕರೂ…/ ಮೇರಾ ಗಮ್ ಭೀ ಉನಕಾ ಅಜೀಜ್ ಹೈ ಕಿ ಉನ್ ಕಿ ದೀ ಹುಯಿ ಚೀಜ್ ಹೈ…’; ‘ಜಿಯಾ ಲೇಗಯೋ ಜೀ ಮೋರಾ ಸಾಂವರಿಯಾ.’ ಇದಕ್ಕೆ ಇನ್ನೊಂದನ್ನು ಸೇರಿಸುತ್ತೇನೆ: ‘ಜೋ ಹಮನೇ ದಾಸ್ತಾ ಅಪನಿ ಸುನಾಯಿ ಆಪ್ ಕ್ಯೋಂ ರೋಯೇ?/ ತಬಾ ತೌ ಹಮಾರೇ ದಿಲ್ ಪೇ ಆಯಿ, ಆಪ್ ಕ್ಯೋಂ ರೋಯೇ?’ ಲತಾರ ಎಲ್ಲ ಭಕ್ತರಂತೆ ನಾನು ಕೂಡ ಅವರ ಅತ್ಯುತ್ತಮ ಹಾಡು ಯಾವುದು ಎಂದು ಬಹಳ ಯೋಚಿಸಿದ್ದೇನೆ.
ಆಗೆಲ್ಲ ಶಾಜಹಾನ್‌ನ ರತ್ನಗಳ ಪೆಟ್ಟಿಗೆಯಲ್ಲಿ ಯಾವುದು ಬಹಳ ಸುಂದರವಾದುದು ಎಂದು ಅಳೆಯುವುದಕ್ಕೆ ಹೋಗಿ ಸೋತಂತೆ ಸೋತು ಕೈಚೆಲ್ಲಿ ದ್ದೇನೆ. ಆದರೂ ಅವರ ಕಂಠದಲ್ಲಿ ಮೂಡಿಬಂದ ಅತ್ಯುತ್ತಮ ಗೀತೆಗಳು ಎಂದು ಪರಿಗಣಿಸಲೇಬೇಕಾದ ಕೆಲವು ಹಾಡುಗಳಿವೆ. ವೋ ಕೌನ್ ಥಿಸಿನಿ ಮಾದ ‘ಲಗಜಾ ಗಲೇ ಕಿ ಫಿರ್ ಯೇ ಹಸೀ ರಾತ್ ಹೋ ನ ಹೋ/ ಶಾಯದ್ ಫಿರ್ ಇಸ್ ಜನಮ್ ಮೇ ಮುಲಾಖಾತ್ ಹೋ ನ ಹೋ’ ಅಥವಾ ‘ಮಹಜಬೀನ್’ನ ಮೀನಾ ಕುಮಾರಿಗಾಗಿ ಹಾಡಿದ ‘ಅಜೀಬ್ ದಾಸತಾ ಹೇ ಯೇ, ಕಹಾ ಶುರು ಕಹಾ ಖತಮ್/ ಯೇ ಮಂಜಿಲೇ ಹೇ ಕೌನ್ ಸಿ, ಯೇ ವೋ ಸಮಝ್ ಸಕೇ ನ ಹಮ್..’ ಹಾಡುಗಳು ನಂ.೧ ಸ್ಥಾನಕ್ಕೆ ಪೈಪೋಟಿ ನೀಡುತ್ತವೆ.
ಹೇಮಂತ್ ಕುಮಾರ್ ಸಂಗೀತ ನೀಡಿದ, ಸುಚಿತ್ರಾ ಸೇನ್ ಅಭಿನಯದ ಚಂಪಾಕಲಿ ಸಿನಿಮಾದ ‘ಚುಪ್ ಗಯಾ ಕೋಯಿ ರೇ, ದೂರ್ ಸೇ ಪುಕಾರ್ ಕಿ/ ದರ್ದ್ ಅನೋಖೇ ಹೈ ದಿ ಗಯಾ ಪ್ಯಾರ್ ಕಿ’ ಹಾಡಂತೂ ಲತಾ ಬಿಟ್ಟು ಇನ್ನಾರು ಹಾಡಲು ಸಾಧ್ಯ? ಇಲ್ಲೊಂದು ಕೇವಿಯಟ್. ನಾನು ಯಾವುದೇ ಹಾಡನ್ನೂ ಇಲ್ಲಿ ಅನುವಾದ ಮಾಡಿಲ್ಲ. ಅದಕ್ಕೆ ಕಾರಣವಿದೆ. ಈ ರೀತಿಯ ಸಾಹಿತ್ಯವನ್ನು ಮೂಲದಲ್ಲೇ ಆಸ್ವಾದಿಸಬೇಕು. ಅನುವಾದ ಮಾಡಿದರೆ ಸೊಗಸು ಹೊರಟುಹೋಗುತ್ತದೆ. ‘ಕಿಸಿಕೇ ಮನಾನೇ ಮೇ ಲಜ್ಜತ್ ಜೋ ಆಯಿ ಕಿ ಫಿರ್ ರೂಟ್ ಜಾನೇ ಕೋ ಜೀ ಚಾಹತಾ ಹೈ?’ ರೀತಿಯ ಸಾಲನ್ನುಅನುವಾದ ಮಾಡುವುದಾದರೂ ಹೇಗೆ? ಲಜ್ಜತ್‌ಗೆ ರುಚಿಯೆಂಬ ಅರ್ಥ ಹೇಳಬಹುದಾದರೂ ಆ ಪದಕ್ಕೆ ರುಚಿಗಿಂತ ಹೆಚ್ಚಿನ ತೂಕವಿದೆ. ಹೀಗಾಗಿ ಕತೆಯನ್ನು ಅದು ಹೇಗಿದೆಯೇ ಹಾಗೇ ಬಿಡೋಣ.
ಲತಾ ಮತ್ತು ಆಶಾ ಭೋಂಸ್ಲೆ ಸಹೋದರಿಯರು ಸಂಗೀತದ ಎರಡು ಪ್ರಕಾರಗಳನ್ನು ತಮ್ಮ ನಡುವೆ ಹಂಚಿಕೊಂಡುಬಿಟ್ಟಿದ್ದರು. ಹೀಗಾಗಿ ಬೇರೆಯವರಿಗೆ ಅಲ್ಲಿ ಜಾಗವೇ ಇರಲಿಲ್ಲ. ಆಶಾ ತುಂಟ ಅಥವಾ ಮಾದಕ ಗೀತೆಗಳನ್ನು ಹಾಡಿದರು. ಲತಾ ಅಪ್ಪಟ ಕೋಗಿಲೆಯಾದರು. ಆದರೂ ಅಗತ್ಯಬಿದ್ದಾಗ ಲತಾ ಕೂಡ ತುಂಟತನದ ಗೀತೆಗಳನ್ನು ನೀಡಿದರು. ‘ಕಾಲಿ ಟೋಪಿ ಲಾಲ್ ರುಮಾಲ್’ನಲ್ಲಿಆ-ನ್ರಿದಮ್ ಗೆ ‘ಡಗಾ ಡಗಾ ವೈ ವೈ… ಹೋ ಗಯಿ, ತುಮ್‌ಸೇ ಉಲತ್ ಹೋ ಗಯಿ..’ ಎಂದು ಹಿಪ್ ಡ್ಯಾನ್ಸ್ ಮಾಡಿಸಿದರು.
ಸಂಗಮ್ ಸಿನಿಮಾದಲ್ಲಿ ರಾಜ್ ಕಪೂರ್‌ರನ್ನು ವೈಜಯಂತಿಮಾಲಾ ಛೇಡಿಸುವುದು ಬಹಳ ಮಜವಾಗಿದೆ. ‘ಮೇ ಕಾ ಕರೂ ರಾಮ್ ಮುಝೇ ಬುಡ್ಡಾ ಮಿಲ್ ಗಯಾ…’ ಎಂದು ಲತಾ ಅದಕ್ಕೆ ಒಗ್ಗರಣೆ ಸೇರಿಸುತ್ತಾರೆ. ‘ಉಜಾಲಾ’ ಚಿತ್ರದ ‘ತೇರಾ ಜಲವಾ ಜಿಸನೇ ದೇಖಾ ವೋ ತೇರಾ ಹೋಗಯಾ’ ಎಂದು ಹಾಡುವಾಗ ಲತಾ ಕಂಠ ಮಾದಕವಾಗಿತ್ತು. ‘ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ’ ಹಾಗೂ ‘ಬೇಗನಿ ಶಾದಿ ಮೇ ಅಬ್ದುಲ್ಲಾ ದೀವಾನಾ’ ಎಂದು ರಾಜ್ ಕಪೂರ್‌ಗೆ ಉತ್ಸಾಹ ತುಂಬಲು ತುರ್ಕಿ ಟೋಪಿಯಲ್ಲಿ ಪದ್ಮಿನಿ ಕುಣಿಯುವ ಈ ಹಾಡಿಗಂತೂ ಫುಲ್ ಮಾರ್ಕ್ಸ್.
ಹಿಂದಿ ಚಿತ್ರರಂಗದ ಮೂರರಲ್ಲಿ ಎರಡು ಅದ್ಭುತ ಡ್ಯಾನ್ಸ್ ನಂಬರ್ ಗಳ ಪೂರ್ತಿ ಕ್ರೆಡಿಟ್ (ಗೈಡ್ ಸಿನಿಮಾ ಬಿಟ್ಟು) ಲತಾಗೆ ಸಿಗಬೇಕು. ಸಾಬ್ ಬೀಬಿ ಔರ್ ಗುಲಾಮ್ ಸಿನಿಮಾದ ‘ಸಾಕಿಯಾ ಆಜ್ ಮುಝೇ ನೀಂದ್ ನಹಿ ಆಯೇಗಿ’ ಹಾಡಿನ ಮೂಲಕ ಆಶಾ ಭೋಂಸ್ಲೇ ಅಮರರಾಗಿದ್ದರೆ, ‘ಜ್ಯುವೆಲ್ಥೀ-’ನ ‘ಹೋಟೋಂ ಮೇ ಐಸೀ ಬಾತ್ ಜುಬಾನ್ ಪೇ ಚಲಿ ಆಯ್’ ಹಾಡಿನಲ್ಲಿ ಹಾಗೂ ಮಧುಮತಿ ಚಿತ್ರದ ‘ದಯ್ಯಾ ರೇ ದಯ್ಯಾ ದೇಖೋ ರೇ ಪಾಪಿ ಬಿಚುವಾ’ ಹಾಡಿನಲ್ಲಿ ಲತಾರನ್ನು ಮೀರಿಸುವವರು ಯಾರು? ಹೋಟೋಂ ಪೇ ಹಾಡು ಏಳು ನಿಮಿಷ ಹಾಗೂ ದಯ್ಯಾ ಹಾಡು ಆರು ನಿಮಿಷದಷ್ಟು ದೀರ್ಘವಾಗಿದೆ.
ಬಾಲಿವುಡ್‌ನ ಮೂರು ಅದ್ಭುತ ಸಿನಿಮಾಗಳಲ್ಲಿ ನಮಗೆ ಲತಾ ಮಂಗೇಶ್ಕರ್ ಛಾಪು ಇನ್ನಿಲ್ಲದಂತೆ ಕಾಣಿಸುತ್ತದೆ: ಬಿಮಲ್ ರಾಯ್ ಅವರ ಮಧುಮತಿ, ದೇವಾನಂದ್‌ರ ಗೈಡ್ ಹಾಗೂ ಕೆ.ಆಸಿಫ್ ಅವರ ಮುಘಲ್-ಎ-ಆಜಂ. ಇವುಗಳಿಗೆ ಸಂಗೀತ ನಿರ್ದೇಶಕರು ಕ್ರಮವಾಗಿ ಸಲಿಲ್ ಚೌಧುರಿ, ಎಸ್.ಡಿ.ಬರ್ಮನ್ ಮತ್ತು ನೌಶಾದ್. ಈ ಪಟ್ಟಿಗೆ ಪಾಕಿಜಾ ಕೂಡ ಸೇರಿಸಬಹುದು. ಆದರೆ, ಪಾಕಿಜಾದಲ್ಲಿ ಸಂಗೀತ ರೇಷ್ಮೆಯಂತಿದ್ದರೆ, ಸಿನಿಮಾ ಕಚ್ಚಾ ನೂಲಿನಂತಿತ್ತು. ಹಳೆಯ ನಾಗಿನ್ ಕೂಡ ಈ ಪಟ್ಟಿಗೆ ಸೇರಿಸಬಹುದು. ಆದರೆ, ಸಿನಿಮಾ ಅಷ್ಟಕ್ಕಷ್ಟೆ.
ಮಧುಮತಿ ಚಿತ್ರದಲ್ಲಿ ಲತಾ ಹಾಡು ಕೇಳುವುದೇ ಒಂದು ಸುಖ. ದಯ್ಯಾ ರೇ ದಯ್ಯಾ ಜತೆಗೆ ‘ಜುಲ್ಮಿ ಸಂಘ್ ಆಂಖ್ ಲಡೀ ರೇ/ ಆಜಾ ರೇ ಪರದೇಸಿ ಮೇ ತೋ ಕಬ್ ಸೇ ಖಡಿ ಇಸ್ ಪಾರ್’ ಮತ್ತು ‘ಘಡೀ ಘಡೀ ಮೇರಾ ದಿಲ್ ದಡಕೇ’ ಹಾಡುಗಳೂ ಅಷ್ಟೇ ಸೊಗಸಾಗಿವೆ. ವೈಜಯಂತಿ ಮಾಲಾ ಆ ಕಾಲದ ಅದ್ಭುತ ಡ್ಯಾನ್ಸರ್‌ಗಳಲ್ಲಿ ಒಬ್ಬರು. ‘ಬಿಚುವಾ’ದಲ್ಲಿ ಬುಡಕಟ್ಟು ಕಲೆಯ ನೃತ್ಯ, ಸಂಗೀತ ಹಾಗೂ ಸೃಜನಶೀಲತೆಯಲ್ಲಿ ಆಕೆ ತನ್ನನ್ನು ತಾನೇ ಮೀರುತ್ತಾರೆ. ‘ಮುಘಲ್ -ಎ-ಆಜಂ’ನಲ್ಲಿ ಲತಾ ದೀದಿ ಮಧುಬಾಲಾ ಆಗಿರಲಿಲ್ಲ, ಬದಲಿಗೆ ಅನಾರ್ಕಲಿಯಾಗಿದ್ದರು. ರಾಜಕುಮಾರನನ್ನು ಪ್ರೀತಿಸುವ ಹುಚ್ಚು ಸಾಹಸ ಮಾಡಿದ ಕನೀಜ್‌ಳ ಧ್ವನಿಯಲ್ಲಿ ಲತಾರ ಕಂಠವೇ ಪ್ರತಿಧ್ವನಿಸುತ್ತಿತ್ತು.
‘ತೇರಿ ಮೆಹಫಿಲ್ ಮೇ ಕಿಸ್ಮತ್ ಆಜಮಾನ್ ಕೇ ಹಮ್ ಭಿ ದೇಖೇಂಗೇ’ ಮುಂತಾದ ಕವ್ವಾಲಿಗಳಂತೂ ಆ ಸಿನಿಮಾದ ಸೀನ್‌ಗಳನ್ನೇ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವಂತಿದ್ದವು. ಭಾವಿ ರಾಜನನ್ನು ಪ್ರೀತಿಸಿದ ಅಪರಾಧಕ್ಕೆ ಅದರಲ್ಲಿ ಸಾವೇ ಶಿಕ್ಷೆ. ‘ನ ಹೋ ಖೂನಿ ಜಿಗರ್ ತೋ ಅಶ್ಕ್ ಪೀನೇ ಕಾ ಮಜಾ ಕ್ಯಾ ಹೈ?’ ಎಂದು ಅನಾರ್ಕಲಿ ಪ್ರಾಣ ಬಿಡುತ್ತಾಳೆ. ವಿಷಪ್ರಾಶನ ಮಾಡಿಸಲ್ಪಟ್ಟ ಪ್ರೇಮಿ ನೆಲದ ಮೇಲೆ ಮಲಗಿದ್ದಾನೆ. ಅನಾರ್ಕಲಿಯನ್ನು ಹಂತಕರು ಸ್ಮಶಾನಕ್ಕೆ ಒಯ್ಯುತ್ತಿರುತ್ತಾರೆ. ಆಗಲೂ ತಲೆಯೆತ್ತಿ ಆಕೆ ‘ಖುದಾ ನಿಗೇಬನ್ ಹೋ ತುಮಾರಾ, ಧಡಕತೇ ದಿಲ್ ಕಾ ಪಯಮ್ ಲೇ ಲೋ’ ಎಂದುಹಾಡುತ್ತಾಳೆ.
ಇಂತಹ ಸಂಗೀತವನ್ನು ಶೈಕ್ಷಣಿಕ ಪಠ್ಯವಾಗಿಸಬೇಕು. ಸಂಗೀತಕ್ಕೆ ಭಾಷೆಗಳ ಗಡಿಯಿಲ್ಲ. ಅದರದು ಜಾಗತಿಕ ಭಾಷೆ. ಭಾರತೀಯ ರಾಗಗಳ ವಿದ್ಯಾರ್ಥಿನಿ ಮತ್ತು ಭಕ್ತೆಯಾಗಿದ್ದ ಲತಾ ಮಂಗೇಶ್ಕರ್ ಬಿತೋವೆನ್ ಮತ್ತು ಬೀಟಲ್ಸ್ ಕೂಡ ಬಹಳ ಇಷ್ಟಪಟ್ಟು ಕೇಳುತ್ತಿದ್ದರು. ಆಕೆಯ ಕಂಠದಲ್ಲಿ ಮಾನವತೆಯ ಪ್ರತಿಯೊಂದು ಭಾವನೆಗಳೂ ಸುರಿಸುತ್ತಿದ್ದವು. ಹೆಚ್ಚು ರಿಹರ್ಸಲ್ ಮಾಡದೆ ‘ಏ ಮೇರೆ ವತನ್ ಕೇ ಲೋಗೋ’ ಹಾಡನ್ನು 1963ರಲ್ಲಿ ಲತಾ ಹಾಡಿದ್ದರು. ಅದು ಇಡೀ ದೇಶವನ್ನು ತಟ್ಟುವ ಐತಿಹಾಸಿಕ ಹಾಡಾಯಿತು. ತಾಲೀಮಿಲ್ಲದೆ ಅಂತಹ ಹಾಡನ್ನು ಅವರು ಹಾಡಿದ್ದು ಹೇಗೆ ಎಂದು ಕೆಲವರು ಅಚ್ಚರಿಪಡುತ್ತಾರೆ. ಆದರೆ, ಲತಾರ ಆತ್ಮಕ್ಕೆ ತಾಲೀಮು ಬೇಕಿರಲಿಲ್ಲ. ನಿಶ್ಶಬ್ದದಲ್ಲಿ ಒಬ್ಬರೇ ಕುಳಿತು ‘ಏ ಮೇರೆ ವತನ್’ ಕೇಳಿನೋಡಿ.
ಪ್ರತಿಯೊಬ್ಬರ ಕಣ್ಣಲ್ಲೂ ಅವರಿಗೇ ಗೊತ್ತಿಲ್ಲದಂತೆ ಒಂದಲ್ಲ ಒಂದು ಕ್ಷಣದಲ್ಲಿ ನೀರು ಜಿನುಗುತ್ತದೆ. ಲತಾ ಮಂಗೇಶ್ಕರ್ ಸ್ಟುಡಿಯೋದಲ್ಲಿ ಹಾಡು ತ್ತಿರುವುದನ್ನು ಬೆರಗಾಗಿ ನೋಡುತ್ತಿರುವ ಮೀನಾ ಕುಮಾರಿಯ ಫೋಟೋ ಒಂದಿದೆ. ಮೀನಾಗೆ ಆಗ 20 ವರ್ಷವಿರಬಹುದು. ಸಾವಿಲ್ಲದ ಹಾಡುಗಾರ್ತಿಗೆಒಬ್ಬ ಅದ್ಭುತ ನಟಿಯ ಶ್ರದ್ಧಾಂಜಲಿಯದು. ಕಾಲಕ್ಕೆ ಪಶ್ಚಾತ್ತಾಪವಿಲ್ಲ. ಮಧುಬಾಲಾ 36 ವರ್ಷಕ್ಕೆ ಹೋದರು. ಮೀನಾ ಕುಮಾರಿ 38ಕ್ಕೆ. ನರ್ಗಿಸ್ 51, ನೂತನ್ 54, ಸಾಧನಾ 76 ವರ್ಷಕ್ಕೆ ಮರಣ ಹೊಂದಿದರು. ಸಾವಿನ ಕರೆ ಯಾವಾಗ ಬರುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ.
ಬದುಕಿಗೂ ಸಾವಿಗೂ ಲಾಜಿಕ್ ಇಲ್ಲ. ‘ಯೇ ಚಿರಾಗ್ ಭುಜ್ ರಹೇ ಹೈ, ಮೇರೇ ಸಾಥ್ ಜಲತೇ ಜಲತೇ.’ ಲತಾ ಮಂಗೇಶ್ಕರ್ 92 ವರ್ಷದವರೆಗೆ ನಮ್ಮೊಂದಿಗಿದ್ದರು ಎಂಬುದೇ ಅದೃಷ್ಟ. ‘ಗುಜರಾ ಹುವಾ ಜಮಾನಾ ಆತಾ ನ ದುಬಾರಾ, ಹಾಫಿಜ್ ಖುದಾ ತುಮ್ಹಾರಾ.’