ಗುಂಡಿ ಮುಚ್ಚದವರಿಗೊಂದು, ಇವರಿಗೊಂದು ನ್ಯಾಯವಾ ?
ಬೇಟೆ
ಜಯವೀರ ವಿಕ್ರಮ ಸಂಪತ್‌ ಗೌಡ
ಖ್ಯಾತ ನ್ಯಾಯವಾದಿ ಮತ್ತು ಹಣಕಾಸು ಚಿಂತಕ ನಾನೀ ಪಾಲ್ಖೀವಾಲಾ ಹೇಳಿದ ಒಂದು ಮಾತು ನೆನಪಾಗುತ್ತಿದೆ – ‘ತುಳಸಿ ರಾಮಾ ಯಣ, ಹೌರಾ ರೈಲು ನಿಯಂತ್ರಣ ವ್ಯವಸ್ಥೆ ಮತ್ತು ರೈಲ್ವೆ ಟೈಮ್ ಟೇಬಲ್ಲನ್ನಾದರೂ ಅರ್ಥ ಮಾಡಿಕೊಳ್ಳಬಹುದು.
ಆದರೆ ನಮ್ಮ ದೇಶದ ಕೋರ್ಟ್ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಮಾತ್ರ ಸಾಧ್ಯವಿಲ್ಲ. ಡ್ರೈವರ್ ಇಲ್ಲದಿದ್ದರೂ ಸ್ವಲ್ಪ ದೂರ ರೈಲು ಸಂಚರಿಸಬಲ್ಲುದು. ಅದರ ಅರ್ಥ ರೈಲು ಸಂಚಾರಕ್ಕೆ ಡ್ರೈವರ್ ಬೇಕಾಗಿಲ್ಲ ಎಂದರ್ಥವಲ್ಲ. ಆದರೆ ನಮ್ಮ ಕೋರ್ಟುಗಳು ಕಾರ್ಯ ನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ, ಡ್ರೈವರ್ರೇ ಬೇಕಿಲ್ಲವೇನೋ ಎಂಬ ರೈಲಿನಂತೆ ನನಗೆ ಭಾಸವಾಗುತ್ತಿದೆ.’ ಈ ಮಾತನ್ನು ಅವರು ಹೇಳಿದ್ದು ಸುಮಾರು ಮೂವತ್ತೈದು ವರ್ಷಗಳ ಹಿಂದೆ.
ದುರ್ದೈವ ಅಂದ್ರೆ ಅವರ ಮಾತುಗಳು ಇಂದಿಗೂ ಸಕಾಲಿಕ ಮತ್ತು ವಾಸ್ತವಿಕವಾಗಿದೆ. ಪಾಲ್ಖೀವಾಲಾ ಹೇಳಿದಂತೆ ಕಷ್ಟಪಟ್ಟರೆ ತುಳಸಿ ರಾಮಾಯಣ ಅರ್ಥ ಮಾಡಿಕೊಳ್ಳ ಬಹುದು. ಈಗ ರೈಲ್ವೆ ಟೈಮ್ ಟೇಬಲ್ ಬಹಳ ಸುಧಾರಿಸಿದೆ. ಯಾರು ಬೇಕಾದರೂ ಅದನ್ನು ಸುಲಭ ವಾಗಿ ಅರ್ಥ ಮಾಡಿಕೊಳ್ಳಬಹುದು. ಮೊದಲು ಯಾವ ಬೋಗಿ ಯಾವ ಪ್ಲಾಟ್ ಫಾರ್ಮ್ ಮೇಲೆ ಬರುತ್ತದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಆ ವ್ಯವಸ್ಥೆಯನ್ನು ಸರಿಪಡಿಸುವುದು ಸಾಧ್ಯವೇ ಇಲ್ಲವೇನೋ ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಈಗ ಅದನ್ನೂ ಸಾಮಾನ್ಯ ಪ್ರಜೆಗೂ ಸರಿಯಾಗಿ ತಿಳಿಯುವ ಹಾಗೆ ಸುಧಾರಿಸ ಲಾಗಿದೆ. ಆದರೆ ನಮ್ಮ ಕೋರ್ಟ್ ವ್ಯವಸ್ಥೆಯನ್ನು ಮಾತ್ರ ಆ ಬ್ರಹ್ಮ ಬಂದರೂ ಸುಧಾರಿಸ ಲಾರ. ನ್ಯಾಯಪೀಠಗಳಲ್ಲಿ ಕುಳಿತಿರುವವರು ತಮ್ಮ ಮನೆಯನ್ನೇ ಸರಿ ಯಾಗಿ ಇಟ್ಟುಕೊಂಡಿಲ್ಲ ಎಂಬುದನ್ನು ವಿಷಾದದಿಂದ ಹೇಳಲೇಬೇಕಾಗಿದೆ. ಈ ಮಾತನ್ನು ಎಲ್ಲರಿಗೂ ಬುದ್ಧಿ ಹೇಳುವ ಪತ್ರಕರ್ತರೂ ಬರೆಯುವುದಿಲ್ಲ. ನಮ್ಮ ಕೋರ್ಟ್ ಬಗ್ಗೆ ಅವರಿಗೆ ಅದೆಂಥ ಭಯವೋ, ಅದ್ಯಾಕೆ ಭಯವೋ, ಗೊತ್ತಿಲ್ಲ. ಒಟ್ಟಾರೆ ಬರೆಯುವುದಿಲ್ಲ.
ನ್ಯಾಯಾಧೀಶರ ತೀರ್ಪನ್ನಂತೂ ಯಾರೂ ಪ್ರಶ್ನಿಸುವಂತಿಲ್ಲ. ಅದು ನ್ಯಾಯಾಂಗ ನಿಂದನೆ (  ) ಯಾಗುತ್ತದೆ. ಹೀಗಾಗಿ ಯಾರೂ ಆ ಬಗ್ಗೆ ಮಾತಾಡುವುದಿಲ್ಲ. ಒಪ್ಪೋಣ. ಹಾಗೆಂದ ಮಾತ್ರಕ್ಕೆ, ಇಡೀ ನ್ಯಾಯ ವ್ಯವಸ್ಥೆ, ಕೋರ್ಟ್ ಕಾರ್ಯವಿಧಾನಗಳ ಬಗ್ಗೆಯೇ ಮಾತಾಡಬಾರದು ಎಂದರ್ಥವಲ್ಲ. ಈ ಕಾರಣದಿಂದ ಅನ್ಯಾಯವಾಗಿರುವುದು ನ್ಯಾಯಾಂಗಕ್ಕೇ. ಪತ್ರಿಕೆಗಳಲ್ಲಿ ಇದರ ಬಗ್ಗೆ ಕಾಲಕಾಲಕ್ಕೆ ವರದಿಯಾಗುತ್ತಿದ್ದರೆ ಪರಿಸ್ಥಿತಿ ಸುಧಾರಿಸುತ್ತಿತ್ತು. ಆದರೆ ಎಲ್ಲರೂ ಕೋರ್ಟಿನ ಚಿಂತೆ, ನ್ಯಾಯಾಽಶರ ಉಸಾಬರಿ ನಮಗೇಕೆ ಎಂದು ಭಾವಿಸಿರುವುದರಿಂದ, ಇಡೀ ವ್ಯವಸ್ಥೆ ಸುಧಾರಣೆಯ ಬೆಳಕಿಗೆ ಮುಖ ಮಾಡಿಲ್ಲ.
ಕಳೆದ ಐವತ್ತು ವರ್ಷಗಳಲ್ಲಿ ಎಲ್ಲ ರಂಗಗಳು ಬದಲಾವಣೆಗೆ ತೆರೆದುಕೊಂಡಿವೆ. ಆದರೆ ಇದಕ್ಕೆ ನಮ್ಮ ನ್ಯಾಯ ವ್ಯವಸ್ಥೆ ಅಪವಾದ. ಎಂದೂಬದಲಾಗದು ಎಂದು ಭಾವಿಸಿದ ಆರೆಸ್ಸೆಸ್ಸಿನವರು ಚೆಡ್ಡಿ ಬಿಟ್ಟು, ಪ್ಯಾಂಟ್ ಧರಿಸಿದರು. ಆದರೆ, ನಮ್ಮ ವಕೀಲರಿಗೆ ಮಾತ್ರ ಇನ್ನೂ ಒಂದು ಚೆಂದದ ಡ್ರೆಸ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲೂ ಹೈಕೋರ್ಟಿನ ವಕೀಲರ ದಿರಿಸನ್ನು ನೋಡಬೇಕು. ಸಿಂಡ್ರೆಲಾನ ಒಡಹುಟ್ಟಿದ ವರಂತೆ, ಬಾವಲಿಗಳ ರೆಕ್ಕೆಯಂಥ ಕೋಟನ್ನು ಇಂದಿಗೂ ಧರಿಸುವುದು ವಿಚಿತ್ರವೇ.
ನಿಮಗೆ ಈ ಡ್ರೆಸ್ ಒಪ್ಪುವುದಿಲ್ಲ ಎಂದು ಮುಲಾಜಿಲ್ಲದೇ ಹೇಳಿದ್ದಿದ್ದರೆ, ಅವರು ಬದಲಾಗುತ್ತಿದ್ದರೇನೋ. ಆದರೆ ಎಲ್ಲರಿಗೂ ಕೋರ್ಟಿನ ಬಗ್ಗೆ, ವಕೀಲರ ಬಗ್ಗೆ, ನ್ಯಾಯಾಧೀಶರ ಬಗ್ಗೆ ಬರೆಯಲು ಸಣ್ಣ ಅಳುಕು, ಭಯ. ತಮ್ಮ ಮೇಲೆ ಕೇಸು ಹಾಕಬಹುದು, ಅವರ ಅವಕೃಪೆಗೆ ಪಾತ್ರರಾಗಬಹುದು ಎಂಬ ದುಗುಡ. ಹೀಗಾಗಿ ಎಲ್ಲರೂ ತಮ್ಮದೇ ಸೂಜಿ-ದಾರದಲ್ಲಿ ಬಾಯಿ ಹೊಲಿದುಕೊಂಡು ಬಿಟ್ಟಿದ್ದಾರೆ. ನ್ಯಾಯಾಂಗ ನಿಂದ ನೆಯ ಭೂತ ಎಲ್ಲರನ್ನೂ ಕಾಡುತ್ತಿದೆ. ಹೀಗಾಗಿ ನಮಗ್ಯಾಕೆ ಅವರ ಚಿಂತೆ ಎಂದು ಅವರನ್ನು ಅವರ ಪಾಡಿಗೆ ಬಿಟ್ಟುಬಿಟ್ಟಿದ್ದಾರೆ.
ನ್ಯಾಯಾಂಗವೂ, ಪ್ರಜಾಪ್ರಭುತ್ವದ ಉಳಿದೆಲ್ಲ ಅಂಗಗಳಂತೆ ಪ್ರಶ್ನಾರ್ಹವೇ. ನ್ಯಾಯಾಽಶರಾಗಲಿ, ವಕೀಲರಾಗಲಿ ಪ್ರಶ್ನಾತೀತರೇನಲ್ಲ. ನ್ಯಾಯದೇವತೆ ಕಣ್ಣಿನಲ್ಲಿ ನ್ಯಾಯಾಂಗ ದಲ್ಲಿರುವವರನ್ನೂ ಸೇರಿಸಿ, ಎಲ್ಲರೂ ಉತ್ತರದಾಯಿಗಳೇ. ಈ ಮಾತನ್ನು ನ್ಯಾಯಾಂಗದಲ್ಲಿರು ವವರೂ ಒಪ್ಪುತ್ತಾರೆ. ಹೀಗೆಂದಾಗ ನ್ಯಾಯಾಽಶರು ಸಹ ಪ್ರಶ್ನಾರ್ಹರು ಎಂದು ಪ್ಪಿಕೊಂಡಂತಾಗುತ್ತದೆ ಎಂದು ವಾದಿಸಿದರೆ, ಅದನ್ನು ಒಪ್ಪುವುದಿಲ್ಲ.
ಅದು ನ್ಯಾಯಾಂಗ ನಿಂದನೆ ಎಂದು ಹೇಳಿ ಬಾಯಿ ಮುಚ್ಚಿಸುತ್ತಾರೆ. ಕೋರ್ಟ್ ವ್ಯವಸ್ಥೆಯನ್ನು ಉತ್ತಮಪಡಿಸುವ ಆಶಯದಿಂದ ಹೇಳಿದ ಮಾತುಗಳು, ಅಭಿಪ್ರಾಯಗಳು ನಿಂದನೆ ಅಲ್ಲ. ತಾಯಿ-ತಂದೆ ಮಗನನ್ನು ಬೈದರೆ ಅದು ನಿಂದನೆಯಾಗದು. ಆದರೆ ನ್ಯಾಯಾಂಗ ನಿಂದನೆಯ ಕಾನೂನು ಮತ್ತು ಅದರ ವ್ಯಾಖ್ಯಾನವನ್ನು ಯಾವ ರೀತಿ ಮಾಡಿದ್ದಾರೆಂದರೆ, ಒಳ್ಳೆಯ ಉದ್ದೇಶದಿಂದಲೂ ಏನನ್ನೂ ಹೇಳು ವಂತಿಲ್ಲ. ನ್ಯಾಯಾಲಯವನ್ನು ನಿಂದಿಸಿದ ಆರೋಪದಡಿ ಕಟಕಟೆಗೆ ಎಳೆಯಬಹುದು. ಹೀಗಾಗಿ ಎಲ್ಲರೂಗಪ್ ಚುಪ್. ಇದರಿಂದ ದೊಡ್ಡ ಹಾನಿಯಾಗಿರುವುದು ನ್ಯಾಯಾಂಗಕ್ಕೇ. ಇದು ಎಲ್ಲವನ್ನು ಪ್ರಶ್ನಿಸುವ ಹಕ್ಕನ್ನು ದಯಪಾಲಿಸಿದ ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಅಪಚಾರ ಮಾಡಿದಂತೆ.
ಪ್ರಜಾಪ್ರಭುತ್ವದಲ್ಲಿ ನಾವು ಯಾರನ್ನೂ ಬಿಟ್ಟವರಲ್ಲ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಅವರ ನಿರ್ಧಾರಗಳನ್ನೂ ನಾವು ನಿಷ್ಕರ್ಷೆಗೆ, ಟೀಕೆಗೆ ಗುರಿಪಡಿಸುತ್ತೇವೆ. ಸಂವಿಧಾನ ರಕ್ಷಕರಾದ ರಾಷ್ಟ್ರಪತಿಗಳು ಜಂಟಿ ಸದನವನ್ನುದ್ದೇಶಿಸಿ ಮಾತಾಡಿದರೆ, ಸಂಸದರು ಅವರಿಗೆ ಧಿಕ್ಕಾರ ಕೂಗುತ್ತಾರೆ, ಅವರ ಮಾತುಗಳನ್ನು ಖಂಡಿಸುತ್ತಾರೆ, ಅವರ ವಿರುದ್ಧ ಟೀಕೆಯ ಮಾತುಗಳನ್ನಾಡುತ್ತಾರೆ. ಆದರೆ ರಾಷ್ಟ್ರಪತಿ ಗಳಿಂದ ನೇಮಕಗೊಂಡ ನ್ಯಾಯಾಽಶರ ಆದೇಶವನ್ನು ಮಾತ್ರ ಪ್ರಶ್ನಿಸುವಂತಿಲ್ಲ. ಹಾಗೆ ಮಾಡಿದರೆ ನ್ಯಾಯಾಲಯಕ್ಕೆ ಅಗೌರವ ತೋರಿದಂತೆ. ನ್ಯಾಯಾಂಗ ನಿಂದನೆ ಆರೋಪದಡಿ ಜೈಲಿಗೆ ಹಾಕಬಹುದು. ಈಗಿರುವ ನ್ಯಾಯಾಲಯ ನಿಂದನೆ ಕಾಯ್ದೆಯ ಸತ್ಯಾಸತ್ಯತೆ ವಿರುದ್ಧ ಸಾಕಷ್ಟು ಚರ್ಚೆಗಳಾಗಿವೆ.
ವಿ.ಆರ್.ಕೃಷ್ಣ ಅಯ್ಯರ್ ಅವರಂಥ ನ್ಯಾಯವೇತ್ತರು ಆ ಕಾಯಿದೆಯ ತಳಹದಿಯಲ್ಲಿರುವ ಟೊಳ್ಳುತನವನ್ನು ಎತ್ತಿತೋರಿಸಿದ್ದಾರೆ. ಆದರೂ ಈ ಕಾಯಿದೆ ಮುಂದುವರಿದುಕೊಂಡು ಬಂದಿದೆ. ಈ ಕಾಯಿದೆಯಡಿಯಲ್ಲಿ ಯಾರನ್ನಾದರೂ ಜೈಲಿಗೆ ಹಾಕಬಹುದು, ಗೊತ್ತಿರಲಿ, ಇದನ್ನು ಬರೆದ ನನ್ನನ್ನೂ! ಆದರೆ ಈ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಯಾಕೋ ಗೊತ್ತಿಲ್ಲ. ನೀವು ಕೋರ್ಟಿನ ಕಲಾಪಗಳನ್ನು ನೋಡಬೇಕು, ನಾವು ಇನ್ನೂ ಯಾವ ಜಮಾನದಲ್ಲಿ ಇದ್ದೇವೆ ಎನಿಸುತ್ತದೆ. ಬ್ರಿಟಿಷರು ನಮ್ಮನ್ನು ಬಿಟ್ಟುಹೋಗಿ, ಎಪ್ಪತ್ತೈದು ವರ್ಷಗಳಾದರೂ, ಕೋರ್ಟಿನಲ್ಲಿ ಮಾತ್ರ ಅವರ ಪಡಿಯಚ್ಚು ಇದ್ದೇ ಇದೆ.
ಪ್ರಜಾಪ್ರಭುತ್ವದಲ್ಲಿ ಯಾರನ್ನೂ ಲಾರ್ಡ್ ಎಂದು ಕರೆಯುವುದಿಲ್ಲ. ಪ್ರಜೆಗಳೇ ನಿಜವಾದ ಲಾರ್ಡ್‌ಗಳು. ಸಂವಿಧಾನ ರಕ್ಷಣೆಯ ದ್ಯೋತಕ ವಾದ ರಾಷ್ಟ್ರಪತಿ ಮತ್ತು ರಾಜ್ಯಪಾಲರನ್ನು ಮಾತ್ರ   ಅಥವಾ ‘ಘನತೆವೆತ್ತ’ ಎಂದು ಸಂಬೋಧಿಸುತ್ತೇವೆ. ಆದರೆ ಕೋರ್ಟುಗಳಲ್ಲಿ ನ್ಯಾಯಾಧೀಶರೆಲ್ಲ ಲಾರ್ಡುಗಳೇ. ಮಾತುಮಾತಿಗೆ ಅವರನ್ನು  ,    ಎಂದೇ ಸಂಬೋಧಿಸು ತ್ತಾರೆ.
ದೇವರು ಎದುರಿಗೆ ಥಟ್ ಅಂತ ಪ್ರತ್ಯಕ್ಷನಾದರೂ ಏಕವಚನದ ಅವನೊಂದಿಗೆ ಮಾತಾಡುವ ನಾವು, ಒಂದು ವೇಳೆ ನ್ಯಾಯಾಧೀಶರು ಎದುರಾದರೆ, ಭಗವಂತನಿಗೂ ಸಿಗದ ಮರ್ಯಾದೆ ಕೊಡುತ್ತೇವೆ. ಲಾರ್ಡ್ ಅಂದ್ರೆ ರಾಜ, ದೊರೆ, ಪ್ರಭು ಎಂದರ್ಥ. ಇವು ಗೌರವಸೂಚಕ ಪದಗಳಲ್ಲ. ಇವು ಅಪ್ಪಟ ದಾಸ್ಯತ್ವದ, ಗುಲಾಮಿ ಸಂಸ್ಕೃತಿ ಸೂಚಕ ಪದಗಳು. ನ್ಯಾಯದಾನ ಮಾಡುವವರನ್ನು ಗೌರವಿಸಲೇಬೇಕು. ಅವರ ಬಗ್ಗೆ ಯಾವುದೇ ಪೂರ್ವಗ್ರಹವನ್ನು ಇಟ್ಟುಕೊಳ್ಳಬಾರದು. ಹಾಗಂತ ಅವರ ಅಡಿಯಲ್ಲಿರುವ ಪ್ರಜೆಗಳು ಗುಲಾಮರಾಗಬೇಕಿಲ್ಲ. ಅವರನ್ನು ಗೌರವಿಸುವ ಭರದಲ್ಲಿ ಯಾರೂ ದಾಸರಾಗಬೇಕಿಲ್ಲ.
ನನಗೆ ತಿಳಿದಂತೆ, ತಮ್ಮನ್ನು ಹಾಗೆ (ಲಾರ್ಡ್) ಕರೆಯಬಾರದು ಎಂದು ಯಾವ ನ್ಯಾಯಾಽಶರೂ ತೀರ್ಪು ಕೊಟ್ಟಂತಿಲ್ಲ. ತಮ್ಮನ್ನು ಹಾಗೆಕರೆಯಬೇಕು ಎಂದು ಯಾರೂ ಹೇಳಿರಲಿಕ್ಕಿಲ್ಲ. ಆದರೆ ಹಾಗೆ ಕರೆದಾಗ ಒಳಗೊಳಗೇ ಖುಷಿಪಡಬಹುದು. ಅದಕ್ಕಾಗಿಯೇ ಅವರಾರೂ ಹಾಗೆ ಕರೆಯಬೇಡಿ ಎಂದು ಹೇಳಿರಲಿಕ್ಕಿಲ್ಲ. ಇದೇನೇ ಇರಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ದೊರೆ, ಪ್ರಭು, ರಾಜಾಧಿರಾಜ, ರಾಜ ಮಾರ್ತಾಂಡ… ಎಂದೆಲ್ಲ ಕರೆಯಿಸಿಕೊಳ್ಳುವುದು ಪ್ರಜಾಪ್ರಭುತ್ವ ಆಶಯಕ್ಕೆ ವಿರುದ್ಧವಾದುದು. ಒಂದು ವೇಳೆ ವಕೀಲರು ಮಾತು ಮಾತಿಗೆ ಲಾರ್ಡ್ ಎಂದು ಕರೆಯುವುದು, ಅವರನ್ನು ಸಂಪ್ರೀತಗೊಳಿಸಲು ಎನ್ನುವುದಾದರೆ, ಅದು ಸಹ ನ್ಯಾಯಾಽಶರ ಮೇಲೆ ಪ್ರಭಾವಬೀರುವ ಒಳ ಉದ್ದೇಶ ಹೊಂದಿರಬಹುದು ಎಂಬ ಸಂದೇಹ ಎಂಥವರಿಗಾದರೂ ಬಂದೀತು.
ಇನ್ನು ನನಗಂತೂ ನ್ಯಾಯಾಽಶರು ಕೊಡುವ ತೀರ್ಪುಗಳು ತಲೆ ಚಿಟ್ಟು ಹಿಡಿಸುತ್ತವೆ. ಒಂದೇ ಪ್ರಕರಣಕ್ಕೆ ಐದು ಕೋರ್ಟುಗಳಲ್ಲಿ, ಐದು ಬೇರೆಬೇರೆ ತೀರ್ಪುಗಳನ್ನು ನೀಡಿರುವ ನಿದರ್ಶನಗಳಿವೆ. ಇದರಿಂದ ನ್ಯಾಯ ಅಂದ್ರೆ ಅವರವರ ಭಾವಕ್ಕೆ ಎಂದು ಭಾವಿಸಲು ಆಸ್ಪದ ನೀಡಿದಂತೆ ಆಗಲಿಲ್ಲವೇ? ಕೆಳಗಿನ ಕೋರ್ಟ್ ನೀಡಿದ ಆದೇಶಕ್ಕೆ ಮೇಲಿನ ಕೋರ್ಟ್ ತಡೆ ನೀಡುತ್ತದೆ. ಸೆಷನ್ಸ್ ಕೋರ್ಟ್ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡುತ್ತದೆ. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕುತ್ತದೆ.
ಅಷ್ಟರಲ್ಲಿ ಕೋರ್ಟಿಗೆ ಹೋದವ ಚಟ್ಟ ಏರಿರುತ್ತಾನೆ. ಪಂಜಾಬಿನಲ್ಲಿ ಹಾಲು ವ್ಯಾಪಾರಿಯೊಬ್ಬನ ವಿರುದ್ಧ ಗ್ರಾಹಕನೊಬ್ಬ ಕೋರ್ಟಿಗೆ ಹೋಗಿ, ಅದು ಎಪ್ಪತ್ತೇಳು ವರ್ಷಗಳ ನಂತರ ಇತ್ಯರ್ಥವಾದ ಪ್ರಕರಣ ಜ್ಞಾಪಕಕ್ಕೆ ಬರುತ್ತದೆ. ಇಲ್ಲಿ ನಿಜವಾದ ತಪ್ಪಿತಸ್ಥರು ಅಂದ್ರೆ ಕೋರ್ಟು. ಜನರಿಗೆ ನ್ಯಾಯ ದೊರಕಿಸಿ ಕೊಡಲು ಅಷ್ಟು ವರ್ಷ ತೆಗೆದುಕೊಂಡ ಕೋರ್ಟಿಗೆ ಯಾವ ಶಿಕ್ಷೆ? ನನ್ನ ಭಾವನವರು ಒಂದು ಸಣ್ಣ ಕೇಸಿಗಾಗಿ, ಕಳೆದ ಹನ್ನೊಂದು ವರ್ಷಗಳಿಂದ, ಬೆಂಗಳೂರಿನಿಂದ ಶೃಂಗೇರಿ ಕೋರ್ಟಿಗೆ ಅಲೆಯುತ್ತಿದ್ದಾರೆ.
ಇಲ್ಲಿ ತನಕ ನ್ಯಾಯಾಧೀಶರು ಬರಿ ಡೇಟ್ಸ ಕೊಡುತ್ತಿದ್ದಾರೆಯೇ ಹೊರತು, ವಿಚಾರಣೆಯನ್ನೇ ನಡೆಸಿಲ್ಲ. ಪ್ರತಿ ಸಲ ನ್ಯಾಯಾಽಶರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದಂತೆ, ಅವರು ಮುಂದಿನ ತಿಂಗಳು ಬರುವಂತೆ ಡೇಟ್ ಕೊಡುತ್ತಾರೆ. ಇಲ್ಲಿ ತನಕ ನನ್ನ ಭಾವನವರು ಏನಿಲ್ಲವೆಂದರೂಅಲ್ಲಿಗೆ ಈ ಅವಽಯಲ್ಲಿ ಐವತ್ತಕ್ಕಿಂತ ಹೆಚ್ಚು ಸಲ ಹೋಗಿದ್ದಾರೆ. ಆದರೆ ಒಮ್ಮೆಯೂ ವಿಚಾರಣೆ ನಡೆದಿಲ್ಲ. ಬೇಸರವಾಗಿ ನಾಲ್ಕು ತಿಂಗಳು ಆ ಕಡೆ ಮುಖ ಹಾಕದಿದ್ದರೆ, ಕೋರ್ಟು ಸಮನ್ಸ್, ಜಾಮೀನು ರಹಿತ ವಾರಂಟ್ ಕಳಿಸುತ್ತದೆ. ಅದನ್ನು ರೀಕಾಲ್ () ಮಾಡಿಸಿ ಕೊಳ್ಳಲು ಹೋಗಬೇಕು.
ಸಮನ್ಸ್ , ವಾರಂಟ್, ನಾನ್ ಬೇಲೇಬಲ್ ವಾರಂಟ್ ಗಳ ಹೊರತಾಗಿ ಮತ್ತೇನೂ ಆಗಿಲ್ಲ. ಈ ಪ್ರಕರಣ ಇತ್ಯರ್ಥವಾಗಲುಇನ್ನೂ ಕನಿಷ್ಠ ಹದಿನೈದು ವರ್ಷಗಳಾದರೂ ಬೇಕು. ಹಾಗಾದರೆ, ಇದು ಒಂದು ಪ್ರಕರಣ ಇತ್ಯರ್ಥಕ್ಕೆ ಇಷ್ಟು ಸುದೀರ್ಘ ಸಮಯ ತೆಗೆದುಕೊಳ್ಳುವನ್ಯಾಯಾಧೀಶರ ಲೋಪ-ದೋಷವಲ್ಲವೇ? ಇದು ಲೋಪ-ದೋಷ ಹೌದಾದರೆ, ಅವರಿಗ್ಯಾವ ಶಿಕ್ಷೆ? ಇದನ್ನು ಕೇಳೋದೇ ದೊಡ್ಡ, ಘೋರ ಅಪರಾಧ ಎಂದು ಕೋರ್ಟು ಭಾವಿಸಬಹುದು ಎಂಬ ಹೆದರಿಕೆಯಿಂದ ಯಾರೂ ಇದನ್ನು ಪ್ರಶ್ನಿಸದೇ, ಒಳಗೊಳಗೇ ನುಂಗಿಕೊಂಡು ಸುಮ್ಮ ನಿರುತ್ತಾರೆ.
ಇಂದು ಜನ ಸಾಮಾನ್ಯರು ಕೋರ್ಟಿಗೆ ಹೋಗೋದು ನ್ಯಾಯ ಸಿಗಬಹುದು ಎಂಬ ಆಸೆಯಿಂದ. ಆದರೆ ಐದು-ಹತ್ತು ವರ್ಷಗಳಾದರೂ, ಸಾವಿರಾರು, ಲಕ್ಷಾಂತರ ರುಪಾಯಿ ಖರ್ಚು ಮಾಡಿದರೂ, ನ್ಯಾಯ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ ಎಂದಾದರೆ, ಇದು ನಮ್ಮ ನ್ಯಾಯ ವ್ಯವಸ್ಥೆಯ ಮತ್ತು ಕೋರ್ಟುಗಳ ವೈ-ಲ್ಯವಲ್ಲವೇ? ಈ ವೈಫಲ್ಯಕ್ಕೆ ಯಾರು ಕಾರಣ? ಇದಕ್ಕೆ ಕಾರಣರಾದವರು ಉತ್ತರದಾಯಿ ಗಳಾ()ಗುವುದೇ ಇಲ್ಲ. ನ್ಯಾಯ ಬಯಸಿದ ಕಕ್ಷಿದಾರನಿಗೆ ಈ ಮಾನಸಿಕ ಆಘಾತ, ಕಿರಿಕಿರಿ, ತುಮುಲ, ಉದ್ವೇಗ ಕೊಟ್ಟ ಕೋರ್ಟಿನ ವೈಫಲ್ಯ ಪರಿಗಣನೆಗೆ ಬರುವುದೇ ಇಲ್ಲ. ಇದು ವ್ಯವಸ್ಥೆಯ ಸೋಲು.
ಕೋರ್ಟಿಗೆ ಅಲೆದು, ಅಲೆದು ಹೈರಾಣರಾದವರಿಗೆ, ಕೊನೆಗೂ ನ್ಯಾಯದೊರಕಿಸಿಕೊಳ್ಳಲು ವಿಫಲರಾದವರಿಗೆ ಯಾವ ಪರಿಹಾರವಿದೆ? ಈವೈಫಲ್ಯಕ್ಕೆ ಕೋರ್ಟು, ನ್ಯಾಯಾಽಶರು ಭಾಗೀದಾರ ಅಲ್ಲವೇ? ಈ ಪ್ರಶ್ನೆಗೆ ಎಲ್ಲಿ ತನಕ ಉತ್ತರ ಸಿಗುವುದಿಲ್ಲವೋ, ಅಲ್ಲಿ ತನಕ ಕೋರ್ಟಿ ನಲ್ಲಿ ನ್ಯಾಯದಾನ ಪ್ರಕ್ರಿಯೆ ವರ್ಷಗಟ್ಟಲೆ ವಿಳಂಬವಾಗುತ್ತಲೇ ಹೋಗುತ್ತದೆ. ಮೊನ್ನೆ ರಸ್ತೆಗುಂಡಿಯಲ್ಲಿ ಬಿದ್ದ ಮಹಿಳೆಯೊಬ್ಬಳು ಅಸು ನೀಗಿದಾಗ, ಅದಕ್ಕೆ ಕಾರಣರಾದ ಬಿಬಿಎಂಪಿ ಎಂಜಿನಿಯರೊಬ್ಬರನ್ನು ಹೈಕೋರ್ಟಿಗೆ ಕರೆಯಿಸಿದ ನ್ಯಾಯಾಧೀಶರು, ‘ನಿಮ್ಮ ವೈಫಲ್ಯಕ್ಕೆ ನಿಮ್ಮನ್ನು ಜೈಲಿಗೇಕೆ ಕಳಿಸಬಾರದು?’ ಎಂದು ದಬಾಯಿಸಿದರು.
ನ್ಯಾಯಾಧೀಶರ ಈ ದಬಾವಣೆ ಸರ್ವತ್ರ ಪ್ರಶಂಸೆಗೆ ಪಾತ್ರವಾಯಿತು. ಇದೇ ಪ್ರಶ್ನೆಯನ್ನು ನ್ಯಾಯಾಧೀಶರಿಗೂ ಅನ್ವಯ ಮಾಡಬಹು ದಲ್ಲವೇ? ಇಷ್ಟು ವರ್ಷಗಳಾದರೂ ನ್ಯಾಯದಾನ ಮಾಡದ ನಿಮ್ಮ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಯಾಕೆ ಕೇಸು ಹಾಕಬಾರದು ಎಂದು ಕೇಳಿದರೆ, ಕೋರ್ಟು ಇದನ್ನು ಹೇಗೆ ಸ್ವೀಕರಿಸಬಹುದು? ಅದು ನ್ಯಾಯಾಂಗ ನಿಂದನೆಯಾಗುತ್ತದಾ? ನ್ಯಾಯ ನೀಡುವ ಕೋರ್ಟು ಕೂಡ ನ್ಯಾಯದ ಪರಿಽಯ ಕೆಲಸ ಮಾಡಬೇಕು ಎಂದು ಬಯಸುವುದು ತಪ್ಪಲ್ಲ.
ನ್ಯಾಯ ಯಾವತ್ತಿಗೂ ನ್ಯಾಯಾಧೀಶರನ್ನು ಮೀರಿದ್ದು. ನ್ಯಾಯಾಧೀಶರು ಸಹ ಕಾನೂನಿಗಿಂತ ದೊಡ್ಡವರಲ್ಲ. ನ್ಯಾಯ ವಿಳಂಬಕ್ಕೆ ಅವರೂಬಾಧ್ಯಸ್ಥರಾಗಲೇಬೇಕು. ಒಬ್ಬನಿಗೆ ವಹಿಸಿದ ಕೆಲಸವನ್ನು ಸರಿಯಾಗಿ ಮಾಡದಿದ್ದರೆ, ಗುರಿ ತಲುಪಲು ವಿಫಲರಾದರೆ, ಅವನಿಗೆ ಹಿಂಬಡ್ತಿ ನೀಡಲಾಗುತ್ತದೆ ಅಥವಾ ಭಡ್ತಿ ನೀಡುವುದಿಲ್ಲ. ಆದರೆ ವರ್ಷಗಟ್ಟಲೆ ಪ್ರಕರಣ ಇತ್ಯರ್ಥ ಮಾಡದವರಿಗೆ, ನ್ಯಾಯ ದೇವತೆ ಕಣ್ಣು ಮುಚ್ಚಿಯೇ ಇರುತ್ತಾಳೋ? ಕ್ಷಮಿಸಿ, ಈ ಪ್ರಶ್ನೆ ಕೇಳಬೇಕೋ, ಕೇಳಬಾರದೋ, ಗೊತ್ತಿಲ್ಲ.
ಆದರೆ ಮನಸ್ಸಿನಲ್ಲಿ ಮೂಡಿದ ಈ ಪ್ರಶ್ನೆಯನ್ನು ನಿಮ್ಮೆದುರು ಇಟ್ಟಿದ್ದೇನೆ. ಈ ಪ್ರಶ್ನೆಎತ್ತಿದ್ದೇ ತಪ್ಪು ಎಂದಾದರೆ, ಅದಕ್ಕೆ ಯಾವುದಾದರೂ ಶಿಕ್ಷೆ ಇದ್ದರೆ, ಅದನ್ನು ಅನುಭವಿಸಲು ಸಿದ್ಧ. ಹೇಗಿದ್ದರೂ ಪ್ರಕರಣ ಈ ಜನ್ಮದಲ್ಲಿ ಇತ್ಯರ್ಥವಾಗುವುದಿಲ್ಲ ಬಿಡಿ!