ಆಧುನಿಕ ವೈದ್ಯಕೀಯದ ತಾಯಿಬೇರು !
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಜಗತ್ತಿನ ಪ್ರಾಚೀನ ಸಂಸ್ಕೃತಿಗಳಲ್ಲಿ ಈಜಿಪ್ಷಿಯನ್ ಸಂಸ್ಕೃತಿಯು ಮುಖ್ಯವಾದದ್ದು. ಈಜಿಪ್ಷಿಯನ್ ಸಂಸ್ಕೃತಿಯು ಕ್ರಿ.ಪೂ.4000ದಿಂದ ಕ್ರಿ.ಪೂ.525 ರವರೆಗೆ ಬಾಳಿ ಬೆಳಗಿತು. ಕ್ರಿ.ಪೂ.525ರಲ್ಲಿ ಪರ್ಷಿಯ ದೇಶದವರು ದಂಡೆತ್ತಿ ಬಂದು ಈಜಿಪ್ಷಿಯನ್ ಸಂಸ್ಕೃತಿಯನ್ನುನಾಶಪಡಿಸಿದರು. ಈಜಿಪ್ಷಿಯನ್ಸ್ ಸಂಸ್ಕೃತಿಯ ಈ 3500 ವರ್ಷಗಳ ಅವಽಯಲ್ಲಿ ವೈದ್ಯಕೀಯವು ಗಣನೀಯವಾಗಿ ಬೆಳೆಯಿತು.
ಈಜಿಪ್ಷಿಯನ್ ಸಂಸ್ಕೃತಿಯಲ್ಲಿ ಬಾಳಿ ಬದುಕಿದ ವೈದ್ಯರು ಅಭಿವೃದ್ಧಿಪಡಿಸಿದ ವೈದ್ಯ ಕೀಯ ಜ್ಞಾನವು ಮುಂದಿನ ತಲೆಮಾರುಗಳ ಮೇಲೆ, ವಿಶೇಷವಾಗಿ ಗ್ರೀಕ್ ವೈದ್ಯಕೀ ಯದ ಮೇಲೆ ಅಪಾರ ಪ್ರಭಾವವನ್ನು ಬೀರಿತು. ಗ್ರೀಕ್ ವೈದ್ಯಕೀಯವು, ರೋಮನ್ ವೈದ್ಯಕೀಯದ ಮೇಲೆ ಹಾಗೂ ರೋಮನ್ ವೈದ್ಯಕೀಯವು ಆಧುನಿಕ ವೈದ್ಯವಿಜ್ಞಾನದ ಮೇಲೆ ಪ್ರಭಾವವನ್ನು ಬೀರಿದ್ದನ್ನು ನಾವು ನೋಡಬಹುದು. ಹಾಗಾಗಿ ಇಂದು ನಾವು ಬಳಸುತ್ತಿರುವ ಆಧುನಿಕ ವೈದ್ಯಕೀಯದ ಬೇರುಗಳನ್ನು ಈಜಿಪ್ಷಿಯನ್ ಸಂಸ್ಕೃತಿಯಲ್ಲಿ ಕಾಣಬಹುದು.
ಈಜಿಪ್ಷಿಯನ್ಸ್ ಸಂಸ್ಕೃತಿಯಲ್ಲಿ ಅಸ್ತಿತ್ವದಲ್ಲಿದ್ದ ವೈದ್ಯಕೀಯ ವಿಜ್ಞಾನದ ಪ್ರಾಥಮಿಕ ಅರಿವು, ನಮಗೆ ಗ್ರೀಸ್ ದೇಶದ ಇತಿಹಾಸಕಾರ ಹೆರೊಡೋಟಸ್ (ಕ್ರಿ.ಪೂ.440) ಬರಹಗಳಿಂದ ತಿಳಿದುಬಂದಿದೆ. ಆತನ ನಂತರ ಪ್ಲೀನಿ-ದಿ ಎಲ್ಡರ್, ಹಿಪ್ರೋಕ್ರೇಟ್ಸ್, ಹೆರೋಫಿಲಸ್, ಎರಾಸಿಸ್ಟ್ರಾಮಸ್ ಮತ್ತು ಗ್ಯಾಲನ್ ಬರೆದ ಬರಹಗಳಿಂದ ಸಾಕಷ್ಟು ಮಾಹಿತಿಯು ದೊರೆತಿದೆ. ಹಿಪ್ರೋಕ್ರೇಟ್ಸ್ ಈಜಿಪ್ಷಿಯನ್ ದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದ. ಆದರೆ ಈಜಿಪ್ಷಿಯನ್ಸ್ ವೈದ್ಯಕೀಯದ ಬಗ್ಗೆ ಅಧಿಕೃತ ಮಾಹಿತಿಯು ರೊಸೆಟ್ಟಾ ಸ್ಟೋನ್ ಅಧ್ಯಯನದ ನಂತರವೇ ತಿಳಿದುಬಂದಿತು.
ಇದೊಂದು ಶಿಲಾಶಾಸನ. ಇದು ಈಜಿಪ್ಟಿನ ಮೆಂಫಿಸ್ ನಗರದಲ್ಲಿ ಕ್ರಿ.ಪೂ.195ರಲ್ಲಿ ಟಾಲಮಿ ಎಪಿಪೇನಸ್ ಫ್ಯಾರೊಕೆತ್ತಿಸಿದ ಈ ಶಾಸನ.ಎಡ್ವಿನ್ ಸ್ಮಿತ್ ಪ್ಯಾಪಿರಸ್, ಈಬರ್ಸ್ ಪ್ಯಾಪಿರಸ್, ಕಹೂನ್ ಸ್ತ್ರೀರೋಗ ವಿಜ್ಞಾನದ ಪ್ಯಾಪಿರಸ್, ರಾಮೀಸಿಯಂ ಮೆಡಿಕಲ್ ಪ್ಯಾಪಿರೈ (5 ಭಾಗಗಳು), ಹರ್ಸ್ಟ್ ಪ್ಯಾಪಿರಸ್, ಲಂಡನ್ ಮೆಡಿಕಲ್ ಪ್ಯಾಪಿರಸ್, ಬೆರ್ಲಿನ್ ಪ್ಯಾಪಿರಸ್, ಕ್ಯಾರಿಸ್ಬರ್ಗ್ ಪ್ಯಾಪಿರಸ್, ಚೆಸ್ಟರ್ ಬೀಟ್ಲಿ ಮೆಡಿಕಲ್ ಪ್ಯಾಪಿರಸ್, ಬ್ರೂಕ್ಲಿನ್ ಪ್ಯಾಪಿರಸ್, ಎರ್ಮನ್ ಪ್ಯಾಪಿರಸ್ ಮತ್ತು ಲೀಡನ್ ಪ್ಯಾಪಿರಸ್.
ಎಡ್ವಿನ್ ಸ್ಮಿತ್ ಪ್ಯಾಪಿರಸ್ ವಾಸ್ತವದಲ್ಲಿ ಒಂದುಶಸ್ತ್ರವೈದ್ಯಕೀಯ ಪಠ್ಯಪುಸ್ತಕ. ಮನುಷ್ಯನ ಅಂಗರಚನೆ, ರೋಗ ಪರೀಕ್ಷಾ ವಿಧಾನ, ರೋಗ ನಿದಾನ, (ಡಯಾಗ್ನೋಸಿಸ್), ರೋಗ ಚಿಕಿತ್ಸೆ ಹಾಗೂ ಚಿಕಿತ್ಸೆಯ ಮುನ್ನರಿವು (ಪ್ರೋಗ್ನೋಸಿಸ್) ಬಗ್ಗೆ ವಿವರಗಳಿವೆ. ಮುನ್ನರಿ ವುದು ಎಂದರೆ ನಿಗದಿತ ರೋಗವನ್ನು ಪೂರ್ಣ ಗುಣಪಡಿಸಬಹುದು. ಆದರೆ ಚೆನ್ನಾಗಿ ನಿಯಂತ್ರಿಸಬಹುದು / ಗುಣಪಡಿಸಲು ಸಾಧ್ಯವಿಲ್ಲ ಇತ್ಯಾದಿಯಾಗಿ ಮುಂಚಿತವಾಗಿ ತಿಳಿ ಹೇಳುವ ಬಗ್ಗೆ ಮಾಹಿತಿಯಿದೆ. ಈ ಪ್ಯಾಪಿರಸ್ ಗ್ರಂಥವನ್ನು ಬಹುಶಃ ಕ್ರಿ.ಪೂ.1600ರಲ್ಲಿ ಬರೆದಿರ ಬೇಕು.
ಆದರೆ ಇದರಲ್ಲಿ ಸಂಗ್ರಹವಾಗಿರುವ ಮಾಹಿತಿಯು ಕ್ರಿ.ಪೂ.೩೦೦೦ಕ್ಕಿಂತಲೂ ಹಳೆಯದೆನ್ನಬಹುದು. ಸಸ್ಯಜನ್ಯ, ಪ್ರಾಣಿಜನ್ಯ ಹಾಗೂಖನಿಜಜನ್ಯ ವಸ್ತುಗಳನ್ನು ಬಳಸಿ ನಾನಾ ಔಷಧಿಗಳನ್ನು ಸಿದ್ಧಪಡಿಸುವ ವಿವರಗಳಿವೆ. ಈ ಬರ್ಸ್ ಪ್ಯಾಪಿರಸ್ ಬಹುಶಃ ಕ್ರಿ.ಪೂ.1550 ರಲ್ಲಿ ರಚನೆಯಾಗಿರಬೇಕು. ಈ ಗ್ರಂಥದಲ್ಲಿ ನಿಜವೈದ್ಯಕೀಯದ ಜೊತೆಯಲ್ಲಿ ಹುಸಿವೈದ್ಯಕೀಯವು ಬೆರೆತಿದೆ. ಇದರಲ್ಲಿ 877 ಔಷಧಗಳನ್ನು ತಯಾರಿಸುವ ಬಗ್ಗೆ ಕ್ರಮಬದ್ಧವಾದ ವಿವರಣೆಯಿದೆ. ಇದರಲ್ಲಿ ಶರೀರದ ಮೇಲೆ ಮತ್ತು ಒಳಗೆ ಬೆಳೆಯುವ ಗಂತಿಗಳು (ಟ್ಯೂಮರ್ಸ್) ಹಾಗೂ ಅವುಗಳ ನಿವಾರಣಾ ವಿಧಾನದ ಬಗ್ಗೆ ಮಾಹಿತಿಯಿದೆ.
ಕಹೂನ್ ಸ್ತ್ರೀರೋಗ ವಿಜ್ಞಾನದ ದಾಖಲೆಯು ಬಹುಶಃ ಕ್ರಿ.ಪೂ.1900ರಲ್ಲಿ ರಚನೆಯಾಗಿದ್ದು, ದೊರೆತಿರುವ ಎಲ್ಲ ವೈದ್ಯಕೀಯ ಪ್ಯಾಪಿರಸ್ಸು ಗಳಲ್ಲಿ ಅತ್ಯಂತ ಹಳೆಯ ದಾಖಲೆಯಾಗಿದೆ. 34ಸ್ತ್ರೀರೋಗ ಪ್ರಕರಣಗಳ ವಿವರಣೆಯ ಜೊತೆಯಲ್ಲಿ ಗರ್ಭಧಾರಣೆಯ ಸಮಸ್ಯೆ ಹಾಗೂ ನಿವಾರಣೆಯ ಬಗ್ಗೆ ವಿವೇಚನೆಯಿದೆ. ಈ ಪ್ಯಾಪಿರಸ್ ದಾಖಲೆಯು ಸಮಗ್ರವಾಗಿ ದೊರೆತಿಲ್ಲ. ಈಜಿಪ್ಷಿಯನ್ ವೈದ್ಯಕೀಯ ಪ್ಯಾಪಿರಸ್ ದಾಖಲೆಗಳ ಜೊತೆಯಲ್ಲಿ ಪಿರಮಿಡ್ಡುಗಳ ಒಳಗಿರುವ ಸಮಾಧಿಯ ಭಿತ್ತಿಗಳ ಹೈರೋಗ್ಲಿಫಿಕ್ಸ್ ಬರಹಗಳಿವೆ. ಇವುಗಳ ಅಧ್ಯಯನದಿಂದಲೂ ಸಾಕಷ್ಟು ಮಾಹಿತಿಯು ದೊರೆತಿದೆ.
ಜೊತೆಗೆ ಆಧುನಿಕ ವೈದ್ಯವಿಜ್ಞಾನದ ಉಪಕರಣಗಳ ನೆರವಿನಿಂದ, ಅಂದರೆ ಎಕ್ -ರೇ, ಸಿಟಿ ಸ್ಕ್ಯಾನ್, ಎಲೆಕ್ಟ್ರಾನ್ ಮೈಕ್ರೋಸ್ಕೋಪ್, ಮಾಸ್ ಸ್ಪೆಕ್ಟ್ರೋಮೆಟ್ರಿ ಮತ್ತು ಅನೇಕ ನ್ಯಾಯವೈದ್ಯಕೀಯ (ಫಾರೆನ್ಸಿಕ್) ತಂತ್ರಜ್ಞಾನದ ನೆರವಿನಿಂದ, 4000 ವರ್ಷಗಳಅವಧಿಯಲ್ಲಿ ಬದುಕಿದ್ದ ಈಜಿಪ್ಷಿಯನ್ನರ ಆರೋಗ್ಯದ ಬಗ್ಗೆ ಮಹತ್ತರವಾದ ಮಾಹಿತಿಯು ತಿಳಿದುಬಂದಿದೆ. ಈಜಿಪ್ಟ್ ದೇಶದಲ್ಲಿ ನೈಲ್ ನದಿಯು ಹರಿಯುವ ಕಾರಣ, ನದಿಯ ಎರಡೂ ದಂಡೆಗಳಲ್ಲಿ ಫಲವತ್ತಾದ ಕಪ್ಪು ಮಣ್ಣು ಇದೆ.
ಹಾಗಾಗಿ ಕೃಷಿಯು ಈ ಜನರ ಪ್ರಧಾನ ವೃತ್ತಿಯಾಗಿದ್ದು, ಪಶುಪಾಲನೆ ಮತ್ತು ಹೈನುಗಾರಿಕೆಯನ್ನು ರೂಢಿಸಿಕೊಂಡಿದ್ದರು. ಇವರು ಪ್ರಧಾನವಾಗಿ ಎಮ್ಮರ್ ಗೋಧಿ ಮತ್ತು ಬಾರ್ಲಿಯನ್ನು ಬೆಳೆಯುತ್ತಿದ್ದರು. ಮೀನು ಅವರ ಪ್ರಧಾನ ಆಹಾರಗಳಲ್ಲಿ ಒಂದಾಗಿತ್ತು. ಸಂಭಾರಪದಾರ್ಥಗಳನ್ನು ಹಿತಮಿತವಾಗಿ ಬಳಸುತ್ತಿದ್ದರು. ಈಜಿಪ್ಷಿಯನ್ ಸಮಾಜದಲ್ಲಿ ಎಲ್ಲ ವರ್ಗದ ಜನರಿದ್ದರು. ಶ್ರೀಮಂತರ ಆಹಾರಕ್ಕೆ ಯಾವತ್ತೂ ಕೊರತೆಯಿರಲಿಲ್ಲ. ಉಳಿದ ಜನರು ತಮ್ಮ ತಮ್ಮ ಅಂತಸ್ತಿಗೆ ತಕ್ಕ ಹಾಗೆ ಆಹಾರವನ್ನು ಸೇವಿಸುತ್ತಿದ್ದರೂ ಉಪವಾಸ ವಿರುತ್ತಿದ್ದ ಬಡವರೂ ಇರುತ್ತಿದ್ದರು.
ಈಜಿಪ್ಷಿಯನ್ ಸಂಸ್ಕೃತಿಯಲ್ಲಿ ವೈದ್ಯರು ಗುಳಿಗೆಗಳನ್ನು, ಲೇಹ್ಯಗಳನ್ನು, ಲೇಪನಗಳನ್ನು, ಕುಡಿಯಲು ಔಷಧಿಗಳನ್ನು, ಬಾಯಿ ಮುಕ್ಕಳಿ ಸಲು ದ್ರಾವಣಗಳನ್ನು, ಹೊಗೆಯ ರೂಪದ ಔಷಧಗಳನ್ನು ಹಾಗೂ ಭೇದಿಕಾರಕಗಳನ್ನು ಬಳಸುತ್ತಿದ್ದರು. 160 ಸಸ್ಯ ಉತ್ಪನ್ನಗಳನ್ನು ಬಳಸುತ್ತಿದ್ದ ಬಗ್ಗೆ ಮಾಹಿತಿಯಿದೆ. ಇದರಲ್ಲಿ ಗಾಂಜಾ ಗಿಡವನ್ನು ಸಾಕಷ್ಟು ಔಷಧಿಗಳಲ್ಲಿ ಬಳಸುತ್ತಿದ್ದರು. ಜೇನುತುಪ್ಪ ಪ್ರಧಾನ ಔಷಧ ವಾಗಿತ್ತು. ಪ್ರಾಣಿಗಳ ಉತ್ಪನ್ನಗಳನ್ನು, ಮಲವನ್ನು ಒಳಗೊಂಡಂತೆ, ವಿವಿಧ ಭಾಗಗಳನ್ನು ಔಷಧಗಳನ್ನಾಗಿ ಬಳಸುತ್ತಿದ್ದರು. ಕೆಲವು ಖನಿಜಗಳನ್ನು ಬಳಸುತ್ತಿದ್ದುದು ಉಂಟು. ಮೈಕೇಲ್ ಡಿ ಪೆರ್ಕಿನ್ಸ್ ಎನ್ನುವ ವೈದ್ಯನು ಈಜಿಪ್ಷಿಯನ್ನರ 260 ಔಷಧಗಳನ್ನು ಅಧ್ಯಯನ ಮಾಡಿ, ಅವುಗಳಲ್ಲಿ 28% ಔಷಧಗಳು ಮಾತ್ರ ನಿಗದಿತ ಪರಿಣಾಮವನ್ನು ಬೀರುತ್ತಿದ್ದಿರಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವರು.
ಈಜಿಪ್ಟಿನಲ್ಲಿ ದಂತ ವೈದ್ಯಕೀಯವು ಕ್ರಿ.ಪೂ.3000 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಬಗ್ಗೆ ದಾಖಲೆಗಳಿವೆ. ಈಜಿಪ್ಷಿಯನ್ನರ ಹಲ್ಲುಗಳೆಲ್ಲ ಸವೆದು ಹಾಳಾಗಿರುವುದನ್ನು ಇಂದಿಗೂ ಗಮನಿಸಬಹುದು. ಕಾರಣ ಅವರಿಗೆ ಎಮ್ಮರ್ ಗೋಧಿಯನ್ನು ಹಿಟ್ಟುಮಾಡುವುದು ಗೊತ್ತಿರಲಿಲ್ಲ. ಹಿಟ್ಟಿನ ಜೊತೆಯಲ್ಲಿ ಬಂಡೆಯ ಕಲ್ಲು ಪುಡಿಯೂ ಬೆರೆತಿರುತ್ತಿತ್ತು. ಇಂತಹ ರೊಟ್ಟಿಯನ್ನು ಜಗಿದು ಅವರ ಹಲ್ಲುಗಳು ಸವೆಯುತ್ತಿದ್ದವು. ಹಾಗಾಗಿ ದಂತಕ್ಷವು ಸಾಮಾನ್ಯವಾಗಿರುತ್ತಿತ್ತು. ಸೂಕ್ತ ಚಿಕಿತ್ಸೆಯಿಲ್ಲದೆ ಹಲ್ಲುಗಳು ಬೇಗ ಉದುರಿಹೋಗುತ್ತಿದ್ದವು.
ಈಜಿಪ್ಷಿಯನ್ ವೈದ್ಯರಿಗೆ ಮಾನವ ಅಂಗರಚನೆಯ ಪ್ರಾಥಮಿಕ ಅರಿವು ಇದ್ದಿತು. ಅವರು ಶವಸಂರಕ್ಷಣೆಯನ್ನು ಮಾಡುತ್ತಿದ್ದರು. ಒಂದು ಹರಿತವಾದ ಕೊಕ್ಕೆಯನ್ನು ಮೃತನ ಮೂಗಿನ ಹೊರಳೆಯ ಮೂಲಕ ತೂರಿಸಿ, ನವಿರಾದ ಜರಡಿಮೂಳೆಯನ್ನು ಛೇದಿಸಿ ಮಿದುಳನ್ನುತಲುಪುತ್ತಿದ್ದರು. ಮಿದುಳನ್ನು ಇಷ್ಟಿಷ್ಟೇ ಹೆರೆದು ಹೆರೆದು ಮೂಗಿನ ಮೂಲಕ ಹೊರತೆಗೆದು ಬಿಸುಡುತ್ತಿದ್ದರು. ಅವರ ದೃಷ್ಟಿಯಲ್ಲಿ ಮಿದುಳು ಅನಗತ್ಯ ಹಾಗೂ ಅನುಪಯುಕ್ತ ವಸ್ತುವಾಗಿತ್ತು. ಉದರದ ಎಡ ಕೆಳ ಮೂಲೆಯಲ್ಲಿ ಒಂದು ಛೇದನವನ್ನು ಮಾಡಿ, ಅದರ ಮೂಲಕ ಉದರದಲ್ಲಿದ್ದ ಕರುಳು ಮತ್ತು ಇತರ ಅಂಗಗಳನ್ನು ಹೊರತೆಗೆಯುತ್ತಿದ್ದರು ಹಾಗೂ ಅವನ್ನು ಪ್ರತ್ಯೇಕವಾದ ಝಾಡಿಗಳಲ್ಲಿಡುತ್ತಿದ್ದರು.
ಹೃದಯವನ್ನು ಸ್ವಸ್ಥಾನದಲ್ಲಿ ಇರಲು ಬಿಡುತ್ತಿದ್ದರು. ಬಹುಶಃ ಹೃದಯದಲ್ಲಿ ಜೀವವು ಇರುತ್ತದೆ ಎನ್ನುವುದು ಅವರ ಭಾವನೆಯಾಗಿದ್ದಿರ ಬಹುದು. ಈಜಿಪ್ಷಿಯನ್ ವೈದ್ಯರಿಗೆ ನಾಡಿ ಮಿಡಿತದ ಪರಿಚಯವಿದ್ದರೂ ಸಹ ಧಮನಿ, ಸಿರೆ ಮತ್ತು ನರಗಳ ಬಗ್ಗೆ ಏನೂ ತಿಳಿದಿರಲಿಲ್ಲ.ಆದರೆ ಮನುಷ್ಯರ ದೇಹದಲ್ಲಿ ಕಾಲುವೆಗಳಿರುತ್ತವೆ ಎಂದು ಭಾವಿಸಿದ್ದರು. ನೈಲ್ ನದಿಯಲ್ಲಿ ನೀರು ಕಟ್ಟಿಕೊಂಡರೆ ಹೇಗೆ ತೊಂದರೆ ಯಾಗುತ್ತದೆಯೋ, ಹಾಗೆಯೇ ಕಾಲುವೆಗಳಲ್ಲಿ ಏನಾದರೂ ಅಡಚಿಕೊಂಡರೆ ಅನಾರೋಗ್ಯವಾಗುತ್ತದೆ ಎಂದು ತಿಳಿದಿದ್ದರು.
ಹಾಗಾಗಿ ಬೇಧಿಗೆ ಔಷಧವನ್ನು ನೀಡಿ, ಕಟ್ಟಿಕೊಂಡಿರುವ ಕಾಲುವೆಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಈಬರ್ಸ್ ಪ್ಯಾಪಿರಸ್ ಎನೀಮ ಬಗ್ಗೆ ವಿವರಣೆಯನ್ನು ನೀಡುತ್ತದೆ. ಮಲಬದ್ಧತೆಗೆಸಂಬಂಧಿಸಿದಂತಹ ತಜ್ಞವೈದ್ಯರು (ಸ್ಪೆಷಲಿಸ್ಟ್) ಇರುತ್ತಿದ್ದರು. ಖರ್ ಎಂಬ ವೈದ್ಯನು ಈಜಿಪ್ಟನ್ನು ಆರನೆಯ ರಾಜವಂಶವು (ಕ್ರಿ.ಪೂ.2350-ಕ್ರಿ.ಪೂ.2140) ಆಳುತ್ತಿದ್ದ ಕಾಲದಲ್ಲಿದ್ದ. ಇವನು ರಾಜಶಸ್ತ್ರವೈದ್ಯನಾಗಿದ್ದ. ಈಜಿಪ್ಟಿನ ಸಕ್ಕಾರದಲ್ಲಿ ಈತನ ಸಮಾಧಿಯು ದೊರೆತಿದೆ. ಇವನ ಸಮಾಧಿಯಲ್ಲಿ ತಾಮ್ರ ಹಾಗೂ ಕಂಚಿನಿಂದ ಮಾಡಿದಶಸ್ತ್ರವೈದ್ಯಕೀಯ ಉಪಕರಣಗಳು-ಚಾಕು, ಕೊಕ್ಕೆ, ಇಕ್ಕಳ, ಭೈರಿಗೆಯಂತ್ರ, ಚಮಚ, ಗರಗಸ ಹಾಗೂ ಧೂಪದಾನಿಗಳು ದೊರೆತಿವೆ. ಬಹುಶಃ ಇವು ಜಗತ್ತಿನ ಅತ್ಯಂತ ಪ್ರಾಚೀನಶಸ್ತ್ರವೈದ್ಯಕೀಯ ಉಪಕರಣಗಳಾಗಿರಬಹುದು. ಸತ್ತ ಮೇಲೆ ಮತ್ತೊಂದು ಬದುಕು ಇರುವುದರ ಬಗ್ಗೆ ನಂಬಿದ್ದ ಈಜಿಪ್ಷಿಯನ್ನರು, ಈ ಜನ್ಮದಲ್ಲಿ ಯಾವುದಾದರೂ ಒಂದು ಅಂಗವು ಊನವಾದರೆ, ಕೃತಕ ಅಂಗವನ್ನು ಅಳವಡಿಸಿಕೊಳ್ಳು ತ್ತಿದ್ದರು.
ಅವು ಕೇವಲ ಅಲಂಕಾರಿಕವಾಗಿರುತ್ತಿದ್ದವು. ಹೀಗೆ ಈಜಿಪ್ಷಿಯನ್ ವೈದ್ಯಕೀಯವು, ಗ್ರೀಕ್ ವೈದ್ಯಕೀಯದ ಬೆಳವಣಿಗೆಗೆ ಕಾರಣವಾಯಿತು. ಗ್ರೀಕ್ ಮತ್ತು ರೋಮನ್ ವೈದ್ಯಕೀಯವು ಆಧುನಿಕ ವೈದ್ಯಕೀಯಕ್ಕೆ ಜನ್ಮ ನೀಡಿದ್ದು ನಮಗೆಲ್ಲ ತಿಳಿದಂತಹ ವಿಷಯವಾಗಿದೆ.