ಕೊಟ್ಟ ಕುದುರೆಯನ್ನು ಏರಿದವರು…!
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
@.
ಈ ಜನ್ಮದಲ್ಲಿ ನಿಮ್ಮ ಸ್ನೇಹಿತ ಉದ್ಧಾರವಾಗಬಾರದು ಎಂದು ನೀವು ಬಯಸಿದರೆ, ಆತನಿಗೆ ಎರಡು ಸಲಹೆಗಳನ್ನುಕೊಡಬೇಕಂತೆ. ಒಂದು, ನೀನೇಕೆ ಒಂದು ಲಾರಿ ಮತ್ತು ಬಸ್ಸುಗಳ ಟ್ರಾನ್ಸ್ ಪೋರ್ಟ್ ಅಥವಾ ಟ್ರಾವೆಲ್ ದಂಧೆಯನ್ನುಆರಂಭಿಸಬಾರದು ಮತ್ತು ಎರಡನೇಯದು, ನೀನೇಕೆ ದಿನಪತ್ರಿಕೆಯನ್ನು ಆರಂಭಿಸಬಾರದು ಎಂಬ ಸಲಹೆ ಕೊಟ್ಟು, ಆತ ಅವೆರಡೂ ದಂಧೆಗಳಲ್ಲಿ ತೊಡಗುವಂತೆ ಖಾತ್ರಿ ಪಡಿಸಿಕೊಳ್ಳಬೇಕಂತೆ.
ಆ ಪೈಕಿ ಯಾವುದಾದರೂ ಒಂದನ್ನುಮಾಡಿದರೂ, ನಿಮ್ಮ ಸ್ನೇಹಿತ ಪಡ್ಚಾ! ಆದರೆ ಈ ಎರಡೂ ಉದ್ಯಮಗಳನ್ನು ಆರಂಭಿಸಿ, ಅವೆರಡ ರಲ್ಲೂ ಹಣ, ಹೆಸರು, ಯಶಸ್ಸು ಮತ್ತು ಸಾಧನೆ ಮಾಡಿದವರು ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರು. ಟ್ರಾನ್ಸ್ ಪೋರ್ಟ್ ದಂಧೆ ಯನ್ನು ಮಾಡಿದವರು ಇದ್ದಾರೆ, ಪತ್ರಿಕೆಯನ್ನು ಮಾಡಿದವರೂ ಇದ್ದಾರೆ. ಆದರೆ ಇವೆರಡನ್ನೂ ಒಬ್ಬ ವ್ಯಕ್ತಿ ಮಾಡಿದವರು ಇದ್ದರೆ ಅದು ಸಂಕೇಶ್ವರ ಮಾತ್ರ.
ಹಾಗಂತ ಅವರು ಆರಂಭಿಸಿದ ‘ವಿಜಯ್ ಟೈಮ್ಸ್’ ಇಂಗ್ಲಿಷ್ ದೈನಿಕ, ‘ಉಷಾಕಿರಣ’ ಎಂಬ ಎರಡನೇ ಕನ್ನಡ ದಿನಪತ್ರಿಕೆ, ‘ನೂತನ’ ವಾರಪತ್ರಿಕೆ ಮತ್ತು ‘ಭಾವನಾ’ ಮಾಸಿಕ ಹೇಳ ಹೆಸರಿಲ್ಲದೇ ಪ್ರಕಟಣೆಗಳನ್ನು ಸ್ಥಗಿತಗೊಳಿಸಿದವು. ‘ದಿಗ್ವಿಜಯ’ ಎಂಬ ಹೆಸರಿನ ಪತ್ರಿಕೆ ಪ್ರಕಟಣೆಗೆ ಮುನ್ನವೇ ಅಸುನೀಗಿತು. ‘ದಿಗ್ವಿಜಯ’ ಚಾನೆಲ್ ಇನ್ನೂ ಶಿರಾಡಿ ಘಾಟ್ ನ ತುದಿಯಲ್ಲಿ ಏದುಸಿರು ಬಿಡುವ ಅವರ ಲಾರಿಯಂತೆ ಸಾಗುತ್ತಿರು ವುದು ಬೇರೆ ಮಾತು. ಆದರೂ ಸಂಕೇಶ್ವರರ ಸಾಧನೆ ಪ್ರತಿಯೊಬ್ಬ ಕನ್ನಡಿಗನೂ ಅಭಿಮಾನ ಪಡುವಂಥದ್ದು.
ತಮಗೆ ಅಪರಿಚಿತವಾದ ಮಾಧ್ಯಮ ಕ್ಷೇತ್ರದಲ್ಲೂ ಅವರು ಮೆರೆದ ಸಾಧನೆ, ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ಅಪೂರ್ವ ಮೈಲಿಗಲ್ಲು. ಟ್ರಾನ್ಸ್ ಪೋರ್ಟ್, ಟ್ರಾವೆಲ್ ಮತ್ತುಪತ್ರಿಕೆಯನ್ನು ಜತೆಜತೆಯಲ್ಲಿ ನಡೆಸಿಕೊಂಡು ಯಶಸ್ಸು ಕಾಣುವುದು ಸಣ್ಣ ಮಾತಲ್ಲ. ಒಬ್ಬನನ್ನು ಹಣ್ಣುಗಾಯಿ- ನೀರುಗಾಯಿ ಮಾಡಿ ಲಗಾಡಿ ತೆಗೆಯಲು ಈ ಪೈಕಿ ಒಂದು ಸಾಕು. ಹಾಗಿರುವಾಗ ಎರಡಕ್ಕೂ ಕೈ ಹಾಕಿ ಯಶಸ್ಸಿನ ರುಚಿಸವಿದ ಸಂಕೇಶ್ವರ ವಿಶಿಷ್ಟ-ವಿಭಿನ್ನರಾಗಿ ನಿಲ್ಲುತ್ತಾರೆ.
ನಾನು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ‘ಅವಲೋಕನ’ ಎಂಬ ಪಾಕ್ಷಿಕ ಪತ್ರಿಕೆಯನ್ನು ಹೊರತರುತ್ತಿದೆ. ಅದು ಆರಂಭದಲ್ಲಿ ಕೈಬರಹದ, ಸೈಕ್ಲೋಸ್ಟೈಲ್ಡ್ ಪತ್ರಿಕೆಯಾಗಿತ್ತು. ಒಂದು ವರ್ಷದ ನಂತರ ಅದನ್ನು ಮುದ್ರಿಸಿ, ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಹಂಚು ತ್ತಿದ್ದೆ. ಆಗ ಅದರ ಪ್ರಸಾರ ಎರಡು ಸಾವಿರದಷ್ಟಿತ್ತು. ಎರಡು ರುಪಾಯಿ ಮುಖಬೆಲೆಯಿಟ್ಟು ಮಾರಾಟ ಮಾಡುತ್ತಿದ್ದೆ. ನನ್ನ ಜತೆಗೆ ಸ್ನೇಹಿತ ಓಂಕಾರ ಕಾಕಡೆ ಕೈಜೋಡಿಸಿದ್ದರು.
ಭರವಸೆಯ ಬಂಡವಾಳವೊಂದನ್ನೇ ನೆಚ್ಚಿಕೊಂಡು ಆರಂಭಿಸಿದ ಪತ್ರಿಕೆಯದು. ಸುಮಾರು ಎರಡು ವರ್ಷ ಅದನ್ನು ನಡೆಸಿದೆವು. ನಂತರ ನಾನು ಬೆಂಗಳೂರಿಗೆ ಬಂದೆ. ನಂತರ ಪತ್ರಿಕೆ ‘ಸಪ್ತಾಪುರ ಬಾವಿ’ಯಲ್ಲಿ ಮುಳುಗಿಹೋಯಿತು. ಅದು ಬಿಟ್ಟರೆ ನನಗೆ ಪತ್ರಿಕೆ ನಡೆಸಿ ಗೊತ್ತಿಲ್ಲ. ‘ವಿಜಯ ಕರ್ನಾಟಕ’ದಲ್ಲಿ ಹತ್ತು ವರ್ಷ ಮತ್ತು ‘ಕನ್ನಡ ಪ್ರಭ’ ದಲ್ಲಿ ಐದು ವರ್ಷ ಪ್ರಧಾನ ಸಂಪಾದಕನಾಗಿ ಕೆಲಸ ಮಾಡಿರ ಬಹುದು. ಆದರೆ ಸಂಬಳ, ಸಾರಿಗೆ, ಪತ್ರಿಕೆಯ ಪ್ರಕಟಣೆ, ಆರ್ಥಿಕ ಚಿಂತೆ, ಲಾಭ-ನಷ್ಟ ಮುಂತಾದ ವ್ಯಾವಹಾರಿಕ ಸಂಗತಿಗಳನ್ನು ಕೊರಳಿಗೆ ನೇತು ಹಾಕಿಕೊಂಡು ಏಗಿದವನಲ್ಲ.
ದಿನಕ್ಕೆ ಪತ್ರಿಕೆಯ ಎರಡು-ಮೂರು ಪುಟಗಳಿಗೆ ಸಾಕಾಗುವಷ್ಟು ಬರೆಯಬೇಕು ಎಂದರೆ, ಪಟ್ಟಾಗಿ ಕುಳಿತು ಬರೆಯಬ. ಇದನ್ನು ದಿನವೂ, ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದರೂ, ಅದಕ್ಕೂ ಸೈ. ಜತೆಯಲ್ಲಿ ಪತ್ರಿಕೆಯ ಆಡಳಿತ ನಿರ್ವಹಣೆ, ಸುದ್ದಿ ಸಂಗ್ರಹ, ರಾಜ್ಯಪ್ರವಾಸ, ವಿದೇಶ ಯಾನ… ಹೀಗೆ ಎಲ್ಲದಕ್ಕೂ ಸೈ. ಪತ್ರಿಕೆಯ ವಿನ್ಯಾಸ ಮಾಡಿಸುವುದು, ರೂಪ ಬದಲಿಸುವುದು, ಡೆಸ್ಕಿನಲ್ಲಿ ಕುಳಿತು ಕಾಪಿಯನ್ನು ಎಡಿಟ್ ಮಾಡುವುದು, ಕರಡು ತಿದ್ದುವುದು, ಹೆಡ್ ಲೈನ್ ಬರೆಯುವುದು, ಫೋಟೋ ಎಡಿಟಿಂಗ್… ಇವೆಲ್ಲ ಎದೆಗವುಚಿಕೊಂಡು ಮಾಡಲು ಬಯಸುವ ಇಷ್ಟವಾದ ಕೆಲಸಗಳೇ.
ಆದರೆ ಕೋಟ್ಯಂತರ ರುಪಾಯಿ ತಂದು, ನೂರು- ಇನ್ನೂರು ಸಿಬ್ಬಂದಿಯನ್ನು ಕಟ್ಟಿಕೊಂಡು ಅವರಿಗೆ ತಿಂಗಳ ಕೊನೆಯಲ್ಲಿ ಸಂಬಳ ಕೊಟ್ಟು, ಟನ್‌ಗಟ್ಟಲೆ ನ್ಯೂಸ್‌ಪ್ರಿಂಟ್ ಕಾಗದ ತಂದು, ಅದನ್ನುಯಾರದ್ದೇ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಮುದ್ರಿಸಿ, ಬಂಡಲ್ ಕಟ್ಟಿ, ಬೇರೆ ಬೇರೆ ಟ್ರಾನ್ಸ್‌ಪೋರ್ಟ್ ಆಪರೇಟರುಗಳನ್ನು ಹಿಡಿದು, ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಹೋಬಳಿಗಳಿಗೆ ಪ್ರತಿದಿನ, ವರ್ಷದಲ್ಲಿ ಮೂನ್ನೂರ ಅರವತ್ತು ದಿನ (ನಾಲ್ಕು ದಿನವಷ್ಟೇ ರಜಾ) ಸೂರ್ಯ ಏಳುವ ಮುನ್ನ ಓದುಗರ ಮನೆಯ ಹೊಸ್ತಿಲಲ್ಲಿಡುವ, ಅವರ ಬೆಚ್ಚನೆಯ ಕೈಗಿಡುವು ದಿದೆಯಲ್ಲ.. ಅದಕ್ಕೆ ರಾಕ್ಷಸ ಸಹನೆ, ಬಿಸಿಬಿಸಿ ಭಂಡತನ, ಒಣ ಹುಂಬತನ, ಹಸಿಹಸಿ ದಾಢಸಿತನ, ಹುಂಬ ಧೈರ್ಯ, ಪಿರ್ಕಸ್ಸುತನ, ಶುದ್ಧ ತಿಕ್ಕಲುತನ, ಪೆಕರುತನ, ಚುರುಕು ಮಂಡೆ, ಶುದ್ಧ ಚೌಕಾಶಿತನ.. ಇವೆಲ್ಲವೂ ಬೇಕು.
ಇವೆಲ್ಲವನ್ನೂ ನನ್ನಂಥ ಪತ್ರಕರ್ತನಿಂದ ನಿರೀಕ್ಷಿಸುವುದು ತಪ್ಪು. ಆದರೆ ಇವು ಇಲ್ಲದಿದ್ದರೆ ಪತ್ರಿಕೆ ಹೊರಬರುವುದೇ ಇಲ್ಲ. ಪತ್ರಿಕೆ ನಡೆಸುವ ಎಕನಾಮಿಕ್ಸ್ ಬೇರೆ. ಕಾರಣ ಹದಿನೈದು ರುಪಾಯಿ ಪದಾರ್ಥವನ್ನು ಐವತ್ತು ರುಪಾಯಿಗೋ ಅಥವಾ ಕನಿಷ್ಠ ಇಪ್ಪತ್ತು ರುಪಾಯಿಗೋ ಮಾರುವುದು ಸಹಜ ಬಿಜಿನೆಸ್. ಆದರೆ ಹದಿನೈದು ರುಪಾಯಿ ವಸ್ತುವನ್ನು ಐದು ರುಪಾಯಿಗೆ ಕೊಟ್ಟು, ಕಮಿಷನ್ ಕಳೆದು ಮೂರು ರುಪಾಯಿಯನ್ನು ಜೇಬಿಗಿಳಿಸಿಕೊಂಡು ವ್ಯವಹಾರ ಮಾಡಲು ಶತಮೂರ್ಖನೇ ಬೇಕು.
ಬಂಡೆಗೆ ತಲೆ ಚಚ್ಚಿಕೊಂಡು ಏನೂ ಆಗಿಯೇ ಇಲ್ಲ ಎನ್ನುವ ಹಾಗಿರುವ ಸ್ಥಿತಪ್ರಜ್ಞ ಮಾತ್ರ ಈ ದಂಧೆಯನ್ನು ಮಾಡಬಲ್ಲ. ನಿಮ್ಮಲ್ಲಿ ಲಾರಿ ಗಟ್ಟಲೆ ಲೋಡು ಹಣವಿದ್ದರೂ, ಪತ್ರಿಕೆ ನಡೆಸುವವನ ಕೈಗೆ ಸಿಕ್ಕರೆ, ಆತ ರಾಜ್ಯಾದ್ಯಂತ ಪತ್ರಿಕೆಯನ್ನು ಹಂಚಿದರೆ, ಅದು ಕರಗಲು ಕೆಲವು ದಿನಗಳು ಸಾಕು. ಇನ್ನು ಹಾಗೆ ಹಂಚಿದ ಪತ್ರಿಕೆಯನ್ನುಓದುಗರು ಓದಿ ಹಣ ಕೊಡುವುದು ಒಂದೂವರೆ ತಿಂಗಳ ನಂತರ.
ಜಾಹೀರಾತು ಕೊಟ್ಟವರಿಗೆ ಹಣ ಪಾವತಿಸಲು ಅರವತ್ತು ದಿನ ಕ್ರೆಡಿಟ್ ಲಿಮಿಟ್. ಇಲ್ಲಿ ಸಹಜ ವ್ಯಾಪಾರದ ಯಾವ ಎಕಾನಾಮಿಕ್ಸ್ಪೂರಟ್ ಬೀಳುವುದಿಲ್ಲ. ಈ ಎಲ್ಲ ಅಪಸವ್ಯಗಳನ್ನು ಸಹಿಸಿಕೊಂಡು ಪತ್ರಿಕೆ ತರುವ ಜರೂರತ್ತು ಏಕೆ? ಅನೇಕರು ಇಲ್ಲಿಯೇ ಕೈಚೆಲ್ಲಿ ಬಿಡುತ್ತಾರೆ. ಟಾಟಾ, ಅಂಬಾನಿ, ಸಿಂಘಾನಿಯಾ, ಥಾಪರ್ ಮುಂತಾದ ಶ್ರೀಮಂತರು ಸಹ ಪತ್ರಿಕೆ ಆರಂಭಿಸಿ, ಅದರ ಬಿಸಿಗೆ ಕೈಸುಟ್ಟು ಕೊಂಡು, ತಕ್ಷಣ ಪತ್ರಿಕೆಗಳನ್ನು ನಿಲ್ಲಿಸಿ, ಕೈತೊಳೆದುಕೊಂಡು ಬಚಾವ್ ಆದ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಒಮ್ಮೆ ರಿಲಾಯನ್ಸ್ ಕಂಪನಿ ಧಣಿ, ಉದ್ಯಮಿ ಧೀರೂಭಾಯಿ ಅಂಬಾನಿ, ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕಾ ಸಮೂಹದ ಮಾಲೀಕ ರಾಮನಾಥ ಗೋಯೆಂಕಾ ಅವರ ಬಳಿ, ‘ನೀವು ಪತ್ರಿಕೆಗೆ ಹಾಕುವ ಶ್ರಮವನ್ನು ಬೇರೆ ವ್ಯವಹಾರದಲ್ಲಿ ಹಾಕಿದ್ದರೆ, ನನ್ನನ್ನೂ ಮೀರಿಸುತ್ತಿದ್ದಿರಿ’ ಎಂದು ಹೇಳಿದಾಗ ಗೋಯೆಂಕಾ, ‘ನಾನು ಮಾಡಿದ ಈ ದಂಧೆಯನ್ನು ನೀವು ನಾಲ್ಕು ವರ್ಷ ಮಾಡಿದ್ದರೆ, ಇಲ್ಲಿ ತನಕ ಗಳಿಸಿದ್ದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದಿರಿ’ ಎಂದು ಹೇಳಿ ನಕ್ಕಿದ್ದರಂತೆ.
ತಮಾಷೆಯೆಂದರೆ, ಇಲ್ಲಿ ಅವರಿಬ್ಬರೂ ಹೇಳಿದ್ದು ಸತ್ಯವೇ. ಇಬ್ಬರೂ ತಮ್ಮ ತಮ್ಮ ಉದ್ಯಮದಲ್ಲಿ ಯಶಸ್ಸುಗಳಿಸಿ, ಇಡೀ ದೇಶವನ್ನು ವ್ಯಾಪಿಸಿದ್ದು ಮಾತ್ರ ವಾಸ್ತವ. ಜೇನಿಗೆ ಮಾತ್ರ ಜೇನುತುಪ್ಪ ಮಾಡುವುದು ಗೊತ್ತಂತೆ, ಮಿಡತೆಗಳಿಗಲ್ಲ. ಹಾಗೆ ಪತ್ರಿಕೋದ್ಯಮದಲ್ಲಿ ಲಾಭ ಮಾಡುವುದು ಎಲ್ಲ ಪತ್ರಕರ್ತರಿಗೆ ಗೊತ್ತಿಲ್ಲ. ಅದು ಕೆಲವರಿಗೆ ಮಾತ್ರ ಗೊತ್ತು. ಗೊತ್ತಿದ್ದವರು ಹೇಳಲ್ಲ. ಗೊತ್ತಿಲ್ಲದವರ ಮಾತು ಕೇಳಿ ಪ್ರಯೋಜನ ಇಲ್ಲ.
ನಾನು ವಿಶ್ವವಾಣಿ’ ಆರಂಭಿಸಿದ್ದು ಈ ಮನಃಸ್ಥಿತಿಯಲ್ಲಿ! ನೂರಾರು ಕೋಟಿ ರುಪಾಯಿ ಬಂಡವಾಳ ಹೂಡಲು ಮುಂದೆ ಬಂದವರು ನಾಲ್ಕು ತಿಂಗಳಲ್ಲಿ ಕೈ ಎತ್ತಿದ್ದು ಆರಂಭಿಕ ಹಿನ್ನಡೆಯೇ. ನಾನು ಆಗಲೇ ಪತ್ರಿಕೆಯನ್ನು ನಿಲ್ಲಿಸಿಬಿಡಬೇಕಾಗಿತ್ತು. ಆದರೆ ನನ್ನಲ್ಲಿ ಅದೆಲ್ಲಿತ್ತೋ ಆ ಹುಂಬ ಧೈರ್ಯ, ಮೊಂಡುತನ, ಕಲ್ಲು ಕುಟ್ಟಿ ನೀರು ಚಿಮ್ಮಿಸುವ ಹಠಮಾರಿತನ?! ತಂತಿಯ ಮೇಲೆ ನಡೆದಷ್ಟೇ ಎಚ್ಚರದಿಂದ ಒಂದೊಂದು ಹೆಜ್ಜೆಯನ್ನೂ ಹಾಕುತ್ತ, ಪ್ರತಿ ದಿನ ಬೆಳಗಾಗುತ್ತಿದ್ದಂತೆ, ಹೊಸಹೊಸ ಸವಾಲು, ಟೀಕೆಗಳಿಗೆ ಮುಖ ಮಾಡುತ್ತ, ಇನ್ನಿಲ್ಲದ ಸಂಕಷ್ಟಗಳನ್ನು ಅನುಭವಿಸುತ್ತ, ದಿನವೂ ಲಕ್ಷಲಕ್ಷ ಹಣ ಹೊಂದಿಸುತ್ತ, ತಿಂಗಳ ಕೊನೆಯಲ್ಲಿ ಪಗಾರಿಗೆ ಅರ್ಧ ಕೋಟಿಯಷ್ಟು ಹಣಹೊಂದಿಸುತ್ತ, ಇನ್ನಿತರ ಖರ್ಚುಗಳಿಗೆ ಕೋಟ್ಯಂತರ ರುಪಾಯಿ ಸುರಿಯುತ್ತ, ಒಂದು ದಿನವೂ ಪತ್ರಿಕೆ ನಿಲ್ಲದಂತೆ ಹೆಣಗುತ್ತ, ಕಳೆದ ಏಳು ವರ್ಷಗಳಿಂದ ಪತ್ರಿಕೆ ನಡೆಸಿಕೊಂಡು ಬರುತ್ತ, ಎರಡು ವರ್ಷಗಳಿಂದ ಲಾಭದ ದಡ ಸೇರಿದ್ದೇನೆ.
ಈ ಎಲ್ಲ ತಾಪತ್ರಯ, ಸಂಕಷ್ಟ, ನೂರಾರು ಸಮಸ್ಯೆಗಳ ಸಂಕೋಲೆಯ ನಡುವೆಯೂ ಒಂದೇ ಒಂದು ದಿನ ನನ್ನ ಬರವಣಿಗೆ, ಅಂಕಣ ನಿಲ್ಲಿಸಿಲ್ಲ. ಹೋಗಬೇಕಾದ ದೇಶ, ಭಾಗವಹಿಸಬೇಕಾದ ಕಾರ್ಯಕ್ರಮವನ್ನು ತಪ್ಪಿಸಿಲ್ಲ. ಜತೆಯಲ್ಲಿ ಹತ್ತಾರು ಪುಸ್ತಕಗಳ ಪ್ರಸವ! ಇಂದು ‘ವಿಶ್ವವಾಣಿ’ ರಾಜ್ಯಮಟ್ಟದ ಪತ್ರಿಕೆಯಾಗಿ, ಆರು ಆವೃತ್ತಿಗಳನ್ನು ಹೊಂದಿ, ತನ್ನ ಕಾಲ ಮೇಲೆ ತಾನು ನಿಂತಿದೆ. ನೂರಾರು ಮಂದಿ ಪತ್ರಕರ್ತರು, ಸುದ್ದಿಮನೆಯ ಬೇರೆ ಬೇರೆ ವಿಭಾಗದ್ದೇ ಸಹೋದ್ಯೋಗಿಗಳು ನನ್ನೊಂದಿಗೆ ನೊಗಕ್ಕೆ ಕತ್ತು ಕೊಟ್ಟು ಮುನ್ನಡೆಯು ತ್ತಿದ್ದಾರೆ.
ಒಂದು ಸಂಸ್ಥೆಯನ್ನು ಈ ಹಂತಕ್ಕೆ ತರುವ ಹೊತ್ತಿಗೆ ಅನುಭವಿಸಿದ ಕೋಟಲೆ, ಅಪಮಾನ, ನಿಂದನೆ, ಟೀಕೆ, ಮೂದಲಿಕೆ, ವ್ಯಂಗ್ಯ…ಇವೆಲ್ಲ ನನಗೊಂದೇ ಗೊತ್ತು. ಅವು ನನ್ನಲ್ಲಿಯೇ ಇರಲಿ, ಇರುತ್ತವೆ. ಇಷ್ಟು ಮಾಡದೇ ಒಂದು ಸಂಸ್ಥೆಯನ್ನು ಕಟ್ಟಲು ಸಾಧ್ಯವಿಲ್ಲ ಎಂಬುದುನನಗೆ ಗೊತ್ತು. ಅದೇ ನನ್ನನ್ನು ಕೈಹಿಡಿದು ಮುನ್ನಡೆಸಿದ್ದು. ಇನ್ನು ಮುಂದೆ, ‘ವಿಶ್ವವಾಣಿ’ಗೆ ಬೇರೆ ಯಾವ ಗೊಡವೆಯೂ ಇಲ್ಲ. ಅದುಸವಾರ-ಸಾರಥಿಯನ್ನೂ ಲೆಕ್ಕಿಸದೇ ಓಡುವ ಕುದುರೆ! ಇನ್ನು ಘೋಡಾ ಹೈ, ಮೈದಾನ್ ಹೈ!
ನೋಡಿ, ಅಷ್ಟಕ್ಕೂ ನಾನು ಹೇಳಬೇಕೆಂದಿದ್ದು ನನ್ನ ಕತೆ ಯನ್ನಲ್ಲ. ಆದರೆ ನನ್ನ ಕತೆಯ ಜಾಡಿನ ಹೊರಟ ಮತ್ತೊಬ್ಬರ ಕತೆಯನ್ನು ಹೇಳುವಾಗ, ಅಯಾಚಿತವಾಗಿ ಅದ್ಯಾಕೋ ನನ್ನ ಕತೆಯೂ ರಸ್ತೆಗೆ ಅಡ್ಡ ಬಂದಿತು. ಇರಲಿ. ನನ್ನ ಹಾಗೆ, ನನಗಿಂತ ಮೊದಲು ಈ ಎಲ್ಲ ಕಷ್ಟ, ಸಂಕೋಲೆಗಳ ಸರಮಾಲೆಯನ್ನು ಹೊದ್ದು ವಿಷಕಂಠನಾಗಿ, ಕಲ್ಲನ್ನು ಕುಟ್ಟಿ ನೀರು ಚಿಮ್ಮಿಸಿದವನು ಪಬ್ಲಿಕ್ ಟಿವಿ ರಂಗಣ್ಣ ಆಲಿ ಯಾಸ್ ಎಚ್. ಆರ್.ರಂಗನಾಥ. ಪಬ್ಲಿಕ್ ಟಿವಿಗೆ ಹತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಆತನ ಸಾಹಸಕ್ಕೆ ಒಂದು ದೊಡ್ಡ ಸಲಾಮು.
ಟಿವಿ ಸಂಸ್ಥೆಯನ್ನು ಕಟ್ಟಿ, ಅದನ್ನು ರಾಜ್ಯದ ಮನೆಮಾತಾಗಿಸಿ, ಕನ್ನಡ ಮಾಧ್ಯಮ ಲೋಕದಲ್ಲಿ ಒಂದು ದಾಖಲೆ ಬರೆದ ರಂಗಣ್ಣ ಇಂದು ಕನ್ನಡಿಗರ ಅಭಿಮಾನಕ್ಕೆ ಪಾತ್ರನಾಗಿದ್ದಾನೆ. ನಾನು ಮತ್ತು ರಂಗಣ್ಣ ಒಂದೇ ವಾರಿಗೆಯವರು. ಆತ ನನಗಿಂತ ಒಂದು ವರ್ಷ ದೊಡ್ಡವನು. ನಾವಿಬ್ಬರೂ ಒಂದೇ ದಿನ, ‘ಕನ್ನಡ ಪ್ರಭ’ ಪತ್ರಿಕೆ ಸೇರಿದವರು. ಆತ ಟ್ರೇನಿ ಕ್ರೈಂ ರಿಪೋರ್ಟರ್ ಮತ್ತು ನಾನು ಗ್ರಾಮೀಣ ವಿಭಾಗದ ಟ್ರೇನಿ ಡೆಸ್ಕ್ ಪತ್ರಕರ್ತ. ಅದಕ್ಕೂ ಮುನ್ನ ರಂಗಣ್ಣ ಮೈಸೂರಿನ ‘ಮಹಾನಂದಿ’, ‘ಮೈಸೂರು ಮಿತ್ರ’ ಪತ್ರಿಕೆಗಳಿಗೆ ಬೆಂಗಳೂರು ವರದಿ ಗಾರನಾಗಿದ್ದ. ಸಂಯುಕ್ತ ಕರ್ನಾಟಕದಲ್ಲೂ ಕೆಲಸ ಸಿಗದೇ ಪರದಾಡಿದ್ದ. ರಂಗಣ್ಣನ ಹತ್ತಿರ ಒಂದು ಲಟೂರಿ ಲೂನಾ ಇತ್ತು. ನನ್ನ ಬಳಿ ಬಿಟಿಎಸ್ ಬಸ್ಸು. ಆತ ತನ್ನ ಮೆಹತ್ತಿನಿಂದ ಮುಂದೆ ‘ಕನ್ನಡ ಪ್ರಭ’ ಸಂಪಾದಕನಾದ.
ನಾನು ‘ಕನ್ನಡ ಪ್ರಭ’ ಸಂಪಾದಕನಾಗುವ ಮೊದಲು ಆತ ಆ ಹುದ್ದೆಯಲ್ಲಿದ್ದ. ನಾನು ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕ ನಾಗಿ ಆ ಹುದ್ದೆಗೆ ಬಂದಿದ್ದರಿಂದ, ಅದೇ ಹುದ್ದೆಯಲ್ಲಿದ್ದ ಆತ ಆ ಸಂಸ್ಥೆ ತ್ಯಜಿಸಬೇಕಾಗಿ ಬಂತು. ಇವೆಲ್ಲ ಮಾಲೀಕರ ಧೋರಣೆ ಮತ್ತು ನಮ್ಮ ವೃತ್ತಿಯ ಕಿರಿಕ್ಕುಗಳು. ಅದು ರಂಗಣ್ಣನಿಗೆ ‘ಮಾಡು ಇಲ್ಲವೇ ಮಡಿ’ ದಿನಗಳು. ಯಾವ ಸಂಸ್ಥೆ ತನ್ನನ್ನು ಹೊರಹಾಕಿತೋ, ಅದೇ ಸಂಸ್ಥೆಯವಿರುದ್ಧ ತೊಡೆ ತಟ್ಟಲು ಆತ ಸಿದ್ಧನಾಗಿದ್ದ. ರಂಗಣ್ಣ ಪಬ್ಲಿಕ್ ಟಿವಿ ಕಟ್ಟಲು ಮುಂದಾದಾಗ ಎಲ್ಲರೂ ಅವನನ್ನು ನೋಡಿ ನಕ್ಕಿದ್ದರು. ನವಿಲು ಕುಣಿಯುತ್ತೆ ಅಂತ ಕೆಂಭೂತವೂ ಕುಣಿಯಲು ಶುರುವಿಟ್ಟುಕೊಂಡಿದೆ ಎಂದು ಟ್ಯಾಬ್ಲಾಯ್ಡ ಪತ್ರಿಕೆಯೊಂದು ಬರೆದಿತ್ತು.
ಇವನ್ನೆಲ್ಲ ನೋಡಲು ಇಂದು ಆ ಪತ್ರಿಕೆಯ ಸಂಪಾದಕ ಬದುಕಿರಬೇಕಿತ್ತು. ಬಂಡವಾಳ ಹೂಡುವವರನ್ನು ಹುಡುಕಾಟದಿಂದ ಆರಂಭವಾದ ಹೋರಾಟ, ಸಂಸ್ಥೆ ಆರಂಭಿಸಿ, ಅದನ್ನು ಒಂದು ಹಂತಕ್ಕೆ ತಂದು ನಿಲ್ಲಿಸುವ ತನಕವೂ ಸಾಗಿ ಬಂದಿದ್ದು ದೊಡ್ಡ ಸಾಹಸಗಾಥೆ. ಈಅವಧಿಯಲ್ಲಿ ರಂಗಣ್ಣ ಎದುರಿಸಿದ ಸವಾಲು, ಅಪಮಾನ, ಹೀಗಳಿಕೆ, ಮೂದಲಿಕೆ, ವಿಡಂಬನೆ, ಕೊಂಕು ಒಂದೆರಡಲ್ಲ. ತನ್ನ ಜತೆ ಮುನ್ನೂರಕ್ಕೂ ಹೆಚ್ಚು ಪತ್ರಕರ್ತರು ಮತ್ತು ಸಿಬ್ಬಂದಿಯನ್ನು ಕಟ್ಟಿಕೊಂಡು ಹೆಣಗಿದ ರಂಗಣ್ಣ, ಏಕಾಂಗಿಯಾಗಿ ಬಂದಿದ್ದನ್ನೆಲ್ಲ ಎದುರಿಸಿದ.ರಂಗಣ್ಣ ಟಿವಿ ಮಾಧ್ಯಮಕ್ಕೆ ಸೂಟಾಗುವುದಿಲ್ಲ ಅಂದರು.
ಆತನ ಹಾವ-ಭಾವ ಟಿವಿಗೆ ಹೇಳಿ ಮಾಡಿಸಿದ್ದಲ್ಲ ಅಂದರು. ಬೇರೆಯವರು ಕಟ್ಟಿದ ಸಂಸ್ಥೆಯಲ್ಲಿ ಕೋಲಗಾರಿಕೆ ಮಾಡುವುದಕ್ಕೂ, ತನ್ನ ಸಂಸ್ಥೆ ನಡೆಸುವುದಕ್ಕೂ ವ್ಯತ್ಯಾಸವಿದೆ ಅಂದರು. ಯಾವುದೋ ಮುಚ್ಚಿದ ಚಾನೆಲ್ ನ ಸೆಕೆಂಡ್ ಹ್ಯಾಂಡ್ ಉಪಕರಣಗಳನ್ನು ತಂದು ಆರಂಭಿಸಿದ ಗುಜರಿ ಟಿವಿ ಅಂದರು. ರಂಗಣ್ಣ ಎಲ್ಲವನ್ನೂ ಕೇಳಿಸಿಕೊಂಡ. ಆದರೆ ಅಽರನಾಗಲಿಲ್ಲ. ಹಾವ-ಭಾವ, ಡ್ರೆಸ್ ಕೋಡ್ ಎಲ್ಲಅತ್ಲಾಗಿರಲಿ , ರಂಗಣ್ಣನಲ್ಲಿ ಕತೆ ಹೇಳುವುದಕ್ಕೆ ಸರಕಿತ್ತು. ಸ್ಥಾಪಿತ ನಿಯಮಗಳನ್ನು ಅನುಸರಿಸದೇ, ಆನೆ ನಡೆದಿದ್ದೇ ದಾರಿ ಎಂಬಂತೆ ತನ್ನ ಮಾರ್ಗ ಕಂಡುಕೊಂಡ. ಆ ಮೂಲಕ ಕೇಜ್ರಿವಾಲನಂತೆ ಜನಸಾಮಾನ್ಯನಿಗೆ ಹತ್ತಿರವಾದ.
ಅವರ ದನಿಯಾದ. ರಂಗಣ್ಣನ ಭಾಷೆ, ಆಂಗಿಕ ಭಾಷೆಗಳೆಲ್ಲ ಟಿವಿಗೆ ಹೊಸತು. ಅದೇ ಅವನತು-ಗಳಾದವು. ಇತ್ತ ಸಂಸ್ಥೆಯ ಹಣಕಾಸಿನ ಅಗತ್ಯಗಳಿಗೆ ಬೆಂಬಲವಾಗಿ, ಮನೋಹರ ನಾಯ್ಡು ಮತ್ತು ರಾಕ್ ಲೈನ್ ವೆಂಕಟೇಶ್ ನಿಂತರು. ಅವರು ರಂಗಣ್ಣನ ನಿರ್ಣಯಗಳೆಲ್ಲವನ್ನೂ ಪುರಸ್ಕರಿಸಿದರು. ಆ ಕಡೆ ತಲೆಯನ್ನೇ ಹಾಕಲಿಲ್ಲ. ಆದರೆ ಇಡೀ ಸಂಸ್ಥೆಯ ಸಿಬ್ಬಂದಿಗೆ ಭರವಸೆಯ ಬೆನ್ನೆಲು ಬಾಗಿ, ವೀಕ್ಷಕರ ಮನಸ್ಸಿನಲ್ಲಿ ವಿಶ್ವಾಸಾರ್ಹತೆಗೆ ಲೋಪವಾಗದಂತೆ, ಸಾಂಸ್ಥಿಕವಾಗಿ ಲಾಭದಾಯಕವಾಗಿ ಮಾಧ್ಯಮ ಮನೆಯನ್ನು ಕಟ್ಟಿದ್ದು ಅಸಾಮಾನ್ಯ ಸಾಧನೆಯೇ. ಟಿವಿ೯ ಚಾನೆಲ್ ನಂತರ ಎರಡನೆಯ ಸ್ಥಾನವನ್ನು ಅಬಾಧಿತವಾಗಿ ಕಾಯ್ದುಕೊಂಡ ರಂಗಣ್ಣ, ತಾನು ಕಟ್ಟಿದ ಸಂಸ್ಥೆಗಿಂತ ಎತ್ತರವಾಗಿ ಬೆಳೆದಿದ್ದಾನೆ. ನನ್ನ ಸರೀಕನೊಬ್ಬನ ಈ ಸಾಧನೆಗೆ ನಾನು ಮನಸಾರೆ ಅಭಿಮಾನ ಪಡುತ್ತೇನೆ.
ಇದರಿಂದಾಗಿ ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ಬೆಚ್ಚಗಿವೆ. ಒಂದು ಮಾಧ್ಯಮ ಸಂಸ್ಥೆ ಭದ್ರವಾಗಿ ಬೇರೂರಿದರೆ, ಪತ್ರಕರ್ತರ ಅನಿಶ್ಚ ತತೆ ಅಷ್ಟರಮಟ್ಟಿಗೆ ದೂರವಾಗಿ, ಉತ್ತಮ ಮತ್ತು ಆರೋಗ್ಯಕರ ಪತ್ರಿಕೋದ್ಯಮಕ್ಕೆ ಇಂಬು ನೀಡಿದಂತಾಗುತ್ತದೆ. ಪತ್ರಕರ್ತರು ಯಾರ ಮುಂದೆಯೂ ತಲೆಬಾಗುವ ಪರಿಸ್ಥಿತಿ ಬರುವುದಿಲ್ಲ. ರಂಗಣ್ಣ ತನ್ನನ್ನು ನಂಬಿದ ಪತ್ರಕರ್ತರಲ್ಲಿ ಈ ವೃತ್ತಿಪರತೆಯನ್ನು ತುಂಬಿರು ವುದು ಮಾಧ್ಯಮರಂಗಕ್ಕೆ ಮಾಡಿದ ಮಹದುಪಕಾರವೇ.
ಹೀಗಾಗಿ ರಂಗಣ್ಣನ ಗೆಲುವು ಮಾಧ್ಯಮದ ಗೆಲುವು. ಒಂದು ಪತ್ರಿಕಾ ಸಂಸ್ಥೆ ಮುಚ್ಚಿದರೆ, ಅದು ಪತ್ರಿಕೋದ್ಯಮದ ಸೋಲಲ್ಲ, ಪತ್ರಕರ್ತರ ಸೋಲಲ್ಲ. ಅದು ಓದುಗರ ಸೋಲೂ ಹೌದು. ಅಕ್ಷರಗಳನ್ನು ಉಳಿಸಿಕೊಳ್ಳಲು ಆಗದ ಅಕ್ಷರವಂತರ ಸೋಲು. ರಂಗಣ್ಣನ ಗೆಲುವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು.