ಬಲಶಾಲಿಗಳಿಗೆಲ್ಲ ಆದರ್ಶ ಭೀಮಸೇನ
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಮಹಾಭಾರತ ಎಂದ ಕೂಡಲೇ ನಮಗೆ ನೆನಪಾಗುವುದು ಶ್ರೀಕೃಷ್ಣ, ಅರ್ಜುನ, ಬಹಳವೆಂದರೆ ಧರ್ಮರಾಯ. ಶಾಲೆಗಳಲ್ಲೂ ಅಷ್ಟೆ.ಪರೀಕ್ಷೆಗಳಲ್ಲೂ ಅಷ್ಟೆ. ಟಿವಿ ಧಾರಾವಾಹಿಗಳಲ್ಲೂ ಅಷ್ಟೆ.
ಮಹಾಭಾರತವೆಂದರೆ ಕೃಷ್ಣ, ಅರ್ಜುನರ ಬಗ್ಗೆಯೇ ಪ್ರಶ್ನೆಗಳು. ಅವರನ್ನೇ ತೋರಿಸು ವುದು ಜಗತ್ತಿನ ಎಲ್ಲ ಭಾಷೆಯ ಕಾವ್ಯ, ಸಾಹಿತ್ಯ, ಕಥೆ, ಕಾದಂಬರಿಗಳಿಗೆ ವಸ್ತು, ವಿಷಯ, ವ್ಯಕ್ತಿಗಳನ್ನು ಒದಗಿಸಿದ್ದು ರಾಮಾಯಣ, ಮಹಾಭಾರತಗಳೇ. ಇವುಗಳಲ್ಲಿ ಇರುವುದೇ ಎಲ್ಲ ಕಡೆ ಇರುವುದು; ಇವುಗಳಲ್ಲಿ ಇಲ್ಲದ್ದು ಎಲ್ಲೂ ಇಲ್ಲ ಎಂಬ ನುಡಿಯೇ ಇದಕ್ಕೆ ಸಾಕ್ಷಿ. ಮಹಾಭಾರತದ ಕೃಷ್ಣ, ಅರ್ಜುನರಿಗೆ ಸಿಕ್ಕಷ್ಟು ಹೆಸರು, ಪ್ರಚಾರ (ಬೇಕಾದರೆ ಈಗಿನ ಭಾಷೆಯಲ್ಲಿ ಅದೂ ಟಿವಿ ಭಾಷೆಯಲ್ಲಿ ಟಿಆರ್‌ಪಿ ಎನ್ನಿ) ಯಾರಿಗೂ ಸಿಕ್ಕಿಲ್ಲ. ನಕುಲ- ಸಹದೇವರಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲ, ಎನ್ನುವಂಥವರು ಪಾಪ!
ನಾನು ಈ ಲೇಖನದಲ್ಲಿ ಮಹಾಭಾರತದ ಭೀಮಸೇನನ ಕುರಿತಾಗಿ ನಾನು ಓದಿದ ಕೆಲ ಅಂಶಗಳನ್ನು ಓದುಗರಿಗೆ ತಿಳಿಸಲು ಇಚ್ಛಿಸುತ್ತೇನೆ. ಮಹಾಭಾರತದಲ್ಲಿ ಭೀಮಸೇನ, ಭೀಮ ಎಂದರೆ ಸಾಕು, ‘ಬಂಡಿ ಅನ್ನವನುಂಡ, ಬಕಾಸುರನ ಕೊಂದ’ ಎಂಬ ವಾಕ್ಯ ಬಿಟ್ಟರೆ, ಬೇರೆ ಮಾಹಿತಿಯನ್ನೇ ಯಾರೂ ಹೈಲೆಟ್ ಮಾಡುವುದಿಲ್ಲ. ಬಹಳ ಜನರಿಗೆ ಗೊತ್ತೂ ಇಲ್ಲ; ಆ ಮಾತು ಬೇರೆ. ಭೀಮಸೇನ ನೆಂದರೆ ಮಹಾಭಾರತದಲ್ಲಿ ಕೃಷ್ಣ ನಿಂದಲೇ ಪರಾಕ್ರಮಿ ಎಂದು ಹೊಗಳಿಸಿಕೊಂಡವ.‘ಶಿಷ್ಟ ರಕ್ಷಕ, ದುಷ್ಟ ಶಿಕ್ಷಕ’ ಕಾರ್ಯದಲ್ಲಿ ಸಾಕ್ಷಾತ್ ಭಗವಂತನಾದ ಕೃಷ್ಣನಿಗೂ ಸಹಾಯ ಮಾಡಿದ ವ್ಯಕ್ತಿ ಭೀಮಸೇನ.
ಕೀಚಕ, ದುರ್ಯೋಧನ, ಜರಾಸಂಧರಂತಹ ಪರಾಕ್ರಮಶಾಲಿಗಳನ್ನು ಕೇವಲ ಗಧೆ, ಕೈಮುಷ್ಟಿಗಳಿಂದಲೇ ಕೊಂದವನು. ಈ ಮೂಲಕಇಂತಹ ದುಷ್ಟರ ಸಂಹಾರದಿಂದ ಭೂಭಾರವನ್ನು ಕಡಿಮೆ ಮಾಡುವಲ್ಲಿ ಭಗವಂತನ ಸರಿಸಮ ನಿಂತವನು ಭೀಮಸೇನನೊಬ್ಬನೇ. ಭೀಮ ದೇಹದಿಂದ ಮಾತ್ರ ಬಲಶಾಲಿ ಮಾತ್ರವಲ್ಲ. ಆತನ ಸದ್ಗುಣಗಳ ಪಟ್ಟಿಯನ್ನೇ ಈ ಕೆಳಗೆ ನೋಡಬಹುದು. ‘ತತ್ವಜ್ಞಾನೇ ವಿಷ್ಣುಭಕ್ತೌ ಧೈರ್ಯೇ, ಸ್ಥೈರ್ಯೇ ಪರಾಕ್ರಮೇ |ವೇಗೇಚ ಲಾಘವೇ ಚೈವ ಪ್ರಲಾಪಸ್ಯೇ ಚ ವರ್ಜನೇಭೀಮಸೇನ ಸಮೋ ನಾಸ್ತಿ ಸೇನಯೋರುಭೂಯೋರಪಿ |ಪಾಂಡಿತ್ಯೇ ಚ ಪಟುತ್ವೇ ಚ ಶೂರತ್ವೇ ಚ ಬಲೇ ಪಿ ಚ||ಅಂದರೆ, ತತ್ವಜ್ಞಾನ, ವಿಷ್ಣುಭಕ್ತಿ, ಧೈರ್ಯ, ಸ್ಥೈರ್ಯ, ಪರಾಕ್ರಮ, ವೇಗ, ಲಾಘವ, ವ್ಯರ್ಥ ಮಾತನ್ನಾಡದಿರುವುದು, ಪಾಂಡಿತ್ಯ, ಪಟುತ್ವ, ಶೂರತ್ವ, ಬಲ ಇವುಗಳಲ್ಲಿ ಕುರುಪಾಂಡವರ ಸೇನೆಗಳೆರಡಲ್ಲಿಯೂ ಭೀಮಸೇನನಿಗೆ ಸಮನಾದವನು ಇಲ್ಲ.
ಹಾಗೆಯೇ ಧರ್ಮರಾಯನು ಕೂಡ ‘ಭೀಮಾ, ಧರ್ಮ, ಅರ್ಥ, ಕಾಮ, ಮೋಕ್ಷ, ಯಶಸ್ಸು ಇವೆಲ್ಲವೂ ಎಲ್ಲ ಲೋಕಕ್ಕೂ ನಿನ್ನ ಅಧೀನ ವಾಗಿವೆ’ ಎಂದು ಹೊಗಳಿದ್ದಾನೆ. ಕೃಷ್ಣ, ಯುಧಿಷ್ಠಿರ ಇವರೆಲ್ಲ ಭೀಮನ ಬಗ್ಗೆ ಆಡುವ ಮಾತುಗಳು ಒಳ್ಳೆಯವೇ. ಏಕೆಂದರೆ, ಕೃಷ್ಣ ಪಾಂಡವಪಕ್ಷಪಾತಿ, ಧರ್ಮರಾಯನಂತೂ ಸ್ವತಃ ಅಣ್ಣ. ಹೀಗಾಗಿ ಭೀಮನ ಬಗ್ಗೆ ಅಭಿಮಾನದ ಮಾತನ್ನಾಡುವುದು ಸಹಜ. ಇದರಿಂದಾಗಿ ಭೀಮನ ನಿಜವಾದ ವ್ಯಕ್ತಿತ್ವ ಗುರುತಿಸುವುದು ಕಷ್ಟ ಎನ್ನುವ ಆಕ್ಷೇಪ ಬಂದಾಗ, ಅಥವಾ ಬಂದರೆ, ಇದಕ್ಕೂ ಉತ್ತರವಿದೆ. ಅದೇನೆಂದರೆ, ವಿರಾಟ ಪರ್ವದಲ್ಲಿ ದುರ್ಯೋಧನ ಆಡುವ ಮಾತು, ಭೀಮನ ನಿಜಶೌರ್ಯ ವನ್ನು ತೋರಿಸುತ್ತದೆ.
ಏಕೆಂದರೆ, ದುರ್ಯೋಧನ ಭೀಮನ ಹುಟ್ಟಾ ವೈರಿ. ಭೀಮದ್ವೇಷಿ, ಅಂತವನೂ ಕೂಡ ಹೀಗೆನ್ನುತ್ತಾನೆ. ವೀರರು,ಶಾಸವೇತ್ತರೂ ಆದವರನಡುವೆ ಕರ್ತವ್ಯ-ಕರ್ಮಗಳ ತತ್ತ್ವ ನಿರ್ಣಯ ಸಾಮರ್ಥ್ಯದ ವಿಷಯದಲ್ಲಿ ದಾನವ, ಮಾನವ, ರಾಕ್ಷಸ ಯುಕ್ತವಾದ ಈ ಲೋಕದಲ್ಲಿ ಸತ್ವ, ಬಾಹುಬಲ, ಪೌರುಷ, ದೈಹಿಕ ವ್ಯಾಪಾರಗಳ ವಿಷಯದಲ್ಲಿ ಸಂಪೂರ್ಣ ಈ ನಾಲ್ವರೇ ಶ್ರೇಷ್ಠರಾದವರು. ಅವರೇ ಭೀಮ, ಬಲರಾಮ, ಶಲ್ಯ ಮತ್ತು ಕೀಚಕ. ಇವರನ್ನು ಬಿಟ್ಟು ಐದನೇಯವನನ್ನು ನಾವು ಕೇಳಿಯೇ ಇಲ್ಲ.
ಇದು ಹುಟ್ಟಾ ವೈರಿಯಾದ ದುರ್ಯೋಧನನ ಬಾಯಿಂದಲೆ ಬರುವ ಭೀಮನ ಬಗೆಗಿನ ಪ್ರಶಂಸೆ. ನಾವು ಅಲ್ಲಲ್ಲಿ ಕೇಳುವ, ಆಡುವ, ನೋಡುವ, ಮಾತು ದೃಶ್ಯಗಳಿಂದ ಭೀಮಸೇನನ ವ್ಯಕ್ತಿತ್ವ ಪೂರ್ಣ ಪರಿಚಯವಾಗುವುದಿಲ್ಲ. ಏಕೆಂದರೆ, ಭೀಮ ನಿಗರ್ವಿ, ನಿರಹಂಕಾರಿ,ಮಿತಭಾಷಿ. ಹೀಗಾಗಿ ಇಂತಹ ಭೀಮಸೇನನನ್ನು ಅವನ ಸದ್ಗುಣ, ಶೌರ್ಯಗಳನ್ನು ಬಿಂಬಿಸಲು ಶ್ರೀಮಧ್ವಾಚಾರ್ಯರ ಜನನವಾಯಿತು. ಅದು ನಮ್ಮ ಕರ್ನಾಟಕದ ಉಡುಪಿಯ ಪಾಜಕ ಎಂಬ ಊರಿನಲ್ಲಿ ಆದುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ, ಗರ್ವದ ವಿಷಯ.
ಮಧ್ವಾಚಾರ್ಯರೆಂದರೆ ಬೇರಾರೂ ಅಲ್ಲ. ರಾಮಾಯಣದಲ್ಲಿ ಹನುಮಂತನಾಗಿ, ಮಹಾಭಾರತದಲ್ಲಿ ಭೀಮನಾಗಿ ಹುಟ್ಟಿ, ಮುಂಬರುವಕಲಿಯುಗದ ನಮ್ಮಂತ ದಡ್ಡ ಜನರಿಗೆ ನಿಜವಾದ ಇತಿಹಾಸ ಹೀಗಿದೆ ಎಂದು ತಿಳಿಸಲು ಬರೆದ ಮಹಾನ್ ಗ್ರಂಥವೇ ‘ಶ್ರೀಮನ್ ಮಹಾಭಾರತ ತಾತ್ಪರ್ಯ ನಿರ್ಣಯ’ ಎಂಬ ಗ್ರಂಥ. ಎಲ್ಲ ಗ್ರಂಥಗಳ ಸಂದೇಹಕ್ಕೂ ಉತ್ತರ ಸಿಗುವ ಏಕೈಕ ಗ್ರಂಥವಿದು. ಇದನ್ನು ಇಂಗ್ಲಿಷಿನ ‘ಫೈನಲ್ ಡಿಸಿಷನ್’ ಎಂಬ ಮಾತಿನಂತೆ ತಾತ್ಪರ್ಯಷ್ಟೇ ಎಂದು ತಿಳಿಸುವ ನಿರ್ಣಾಯಕ ಗ್ರಂಥ.
ಮಹಾಭಾರತದ ನಮ್ಮ ಎಲ್ಲ ಸಂದೇಹಗಳಿಗೂ ನಮ್ಮ ಊಹಾಪೋಹ ಕಲ್ಪನೆಗಳಿಗೂ ‘ಇದಮಿತ್ಥಂ’ ಎಂದು ತೋರಿಸುವ ಗ್ರಂಥ. ಅಕ್ಷರ ಜ್ಞಾನ, ಓದು ಬರಹ ಬರುವ ಎಲ್ಲರೂ ಓದಲೇಬೇಕಾದ, ವಿಶ್ವವಿದ್ಯಾಲಯಗಳ ಮಾಸ್ಟರ್ ಡಿಗ್ರಿಗಳಿಗೆ ಪಠ್ಯವಾಗಬೇಕಾದ ಅರ್ಹತೆಯುಳ್ಳ ಗ್ರಂಥವಿದು. ಭೀಮಸೇನನ ಹನ್ನೆರಡು ಹೆಸರುಗಳುಳ್ಳ ಒಂದು ಸ್ತೋತ್ರವಿದೆ. ಇದಕ್ಕೆ ಭೀಮ ದ್ವಾದಶ ನಾಮ ಸ್ತೋತ್ರ ಎಂದೇ ಹೆಸರು. ಇದನ್ನು ನಿತ್ಯ ಪಠಿಸುವುದರಿಂದ ಅಬಾಲವೃದ್ಧರಾದಿಯಾಗಿ ಜಾತಿ, ವರ್ಣ, ಸ್ವಭಾವಗಳ ಭೇದವಿಲ್ಲದೇ, ನಿತ್ಯ ಪಠಿಸುವುದರಿಂದ ಆಯುಷ್ಯ, ಆರೋಗ್ಯ, ಸಂಪತ್ತು ದೊರಕುತ್ತದಲ್ಲದೇ ನಮ್ಮ ಶತ್ರುಗಳ ನಾಶವೂ ಆಗುತ್ತದೆ. ಆ ಸ್ತೋತ್ರ ಹೀಗಿದೆ.
ಮಾರುತಿ ಪಾಂಡವೋ ಭೀಮೋ ಗದಾಪಾಣಿ ವೃಕೋದರ |ಕೌಂತೇಯಃ ಕೃಷ್ಣದಯಿತೋ ಭೀಮಸೇನೋ ಮಹಾಬಲಃ |ಜರಾಸಂದಾಂತ ಕೃದ್ ವೀರೋ ದುಶ್ಯಾಸನ ನಾಶನಃ |
(ಮಾರುತಿ:- ವಾಯು ದೇವನ ಪುತ್ರ, ಪಾಂಡವ: ಪಾಂಡುರಾಜನ ಪುತ್ರ, ಭೀಮ:- ಶತ್ರು ಭಯಂಕರ, ಗದಾಪಾಣಿ:- ಗದೆ ಹಿಡಿದವ, ವೃಕೋದರ:- ವೃತವೆಂದ ಜಟರಾಗ್ನಿ ಉಳ್ಳವ, ಕೌಂತೇಯ:- ಕುಂತಿಪುತ್ರ, ಕೃಷ್ಣದಯಿತ:- ಶ್ರೀಕೃಷ್ಣನಿಗೆ ಪ್ರಿಯನಾದವ, ಭೀಮಸೇನ:-ಶಾಸವಿಮರ್ಶಕ ಮತ್ತು ಹೃದಯದಲ್ಲಿ ಭಗವಂತನನ್ನು ಇರಿಸಿಕೊಂಡವ, ಮಹಾಬಲ:- ಬಲಿಷ್ಠನಾದವ, ಜರಾಸಂದಾಂತ ಕೃದ್:- ಜರಾಸಂಧನನ್ನು ನಾಶ ಮಾಡಿದವ, ವೀರಹ:- ಕೈಗೊಂಡ ಕಾರ್ಯವನ್ನು ಮಾಡಿಯೇ ಮುಗಿಸುವವ, ದುಶ್ಯಾಸನನನ್ನು ಕೊಂದು ಮುಗಿಸಿದವ)
ಹೀಗೆ ಹನ್ನೆರಡು ನಾಮಗಳು ನಮಗೆ ದೈಹಿಕ ಸುಖ ಮಾತ್ರವಲ್ಲದೇ, ನಮ್ಮ ವಿರೋಽಗಳ, ಶತ್ರುಗಳ ನಾಶವೂ ಆಗುವುದೆಂದು ತಾತ್ಪರ್ಯ.
ಕೊನೆಯಲ್ಲಿ ಶ್ರೀಕೃಷ್ಣನಾಡುವ ಮಾತು ಭೀಮಸೇನನೇ ಮಹಾಭಾರತದ ನಿಜಶೂರ. ಅವನಿಂದಲೇ ಪಾಂಡವರಿಗೆ ಜಯ ಲಭಿಸಿದ್ದು ಎಂದು ಕಂಡುಬರುತ್ತದೆ. ಮಹಾಭಾರತದ ಯುದ್ಧವನ್ನು ಒಂದು ರಥಕ್ಕೆ ಹೋಲಿಸಿದರೆ, ಕುದುರೆಯ ರಥದ ನೊಗವನ್ನು ಹೊತ್ತವನು ಅರ್ಜುನನೇ. ಆದರೆ ಆ ರಥ ಚಲಿಸಬೇಕಾದ ದಿಕ್ಕನ್ನು ತೋರಿದವ, ಅಂದರೆ ರಥಿಕ ಭೀಮಸೇನ. ಇಂತಹ ಭೀಮನ ಅಧೀನದಲ್ಲಿ ಅರ್ಜುನ ತನ್ನ ಕಾರ್ಯನಿರ್ವಸುತ್ತಾನೆ ಎಂದಂತೆ.
ಯುದ್ಧ ಅನಿವಾರ್ಯವಾದಾಗ ಉದ್ಯೋಗಪರ್ವದಲ್ಲಿ ಭೀಮಸೇನ ಶ್ರೀಕೃಷ್ಣನಿಗೆ ಹೇಳುತ್ತಾನೆ, ‘ಕೃಷ್ಣ, ಸಂಽಗಾಗಿ ಪ್ರಯತ್ನಿಸು. ಕುಲಬಾಂಧವರನ್ನು ಕೊಲ್ಲುವ ಇಚ್ಛೆ ನನಗೂ ಇಲ್ಲ, ಯುದ್ಧವೇ ನಡೆಯುವುದಾದರೆ ಭೀಮನಿಂದಲೇ ಕುರುಕುಲ ನಾಶವಾಯಿತೆಂಬಅಪಕೀರ್ತಿ ನನಗೆ ಬೇಡ. ಶತ್ರು ಭಯವೆಂಬುದೇ ನನಗಿಲ್ಲ.
ಶತ್ರು ಭಯದಿಂದ ನಾನು ಈ ಸಂಽಯ ಮಾತನ್ನು ಆಡುತ್ತಿಲ್ಲ. ಈ ನನ್ನ ಬಾಹುಗಳಿಂದ ಮೂರುಲೋಕಗಳನ್ನೂ ನಿಗ್ರಹಿಸಬಲ್ಲೆ, ಬ್ರಹ್ಮಾಂಡವನ್ನೇ ಭೇದಿಸಬಲ್ಲೆ’ ಎನ್ನುತ್ತಾನೆ. ಆಗ ಕೃಷ್ಣ ಹೇಳುವ ಉತ್ತರ, ‘ಭೀಮಸೇನ, ಈಗ ನೀನು, ನಿನ್ನ ಬಗ್ಗೆ ಹೇಳಿಕೊಂಡಿದ್ದು ಕಡಿಮೆಯೇ, ಇದಕ್ಕಿಂತ ಸಾವಿರ ಪಟ್ಟು ಬಲ ಪೌರುಷಗಳು ನಿನ್ನಲ್ಲಿವೆ ಎಂಬುದನ್ನು ನಾನು ಬಲ್ಲೆ’ ಎನ್ನುತ್ತಾನೆ.
ಇದು ಸಾಕ್ಷಾತ್ ಭಗವಂತನಾದ ಕೃಷ್ಣನೇ ಭೀಮನ ಪೌರುಷದ ಬಗ್ಗೆ ಕೊಡುವ ಸರ್ಟಿಫಿಕೆಟ್. ಭೀಮಸೇನನಿಂದ ಜಗತ್ತು ಕಲಿಯಬೇಕಾದ ಪಾಠವಿದು. ಬಲವಿದೆ, ಬೆಂಬಲವಿದೆ ಎಂದು, ನಮ್ಮಲ್ಲಿಸೋಟಕಗಳು, ಕ್ಷಿಪಣಿಗಳು, ತಂತ್ರಜ್ಞಾನಗಳು ಇವೆ ಎಂದು ಬೀಗುವ ವೈರಿ ರಾಷ್ಟ್ರಗಳು ಭೀಮಸೇನನ ಈ ಮಾತುಗಳಿಂದ ಕಲಿಯಬೇಕಿದೆ.
ಎಂದಿಗೂ ಬಲ ಪ್ರದರ್ಶನ ಆಗಬಾರದು. ನಮ್ಮ ಬಲದಿಂದ ಯಾರೊಬ್ಬರ ನಾಶವಾಗಬಾರದು. ಸಂಧಿ, ಶಾಂತಿ, ಸ್ನೇಹದ ಜೀವನ ನಿತ್ಯನೂತನ. ಎಲ್ಲರೂ ಸತ್ತ ಮೇಲೆ ಎಲ್ಲರನ್ನೂ ಕೊಂದ ಮೇಲೆ, ನಾವೊಬ್ಬರೇ ಉಳಿದು ನೋಡಬೇಕಾದದ್ದು ಏನು? ಆಳಬೇಕಾದದ್ದು ಯಾರನ್ನು? ಎಂಬ ಯೋಚನೆ ಪ್ರತಿಯೊಬ್ಬ ಬಲಶಾಲಿಗೂ ಬರಬೇಕು. ಬಲಶಾಲಿಗಳು ಹೇಗೆ ಬಾಳಬೇಕೆಂದು ತೋರಿಸಿದವನು ಭಾರತದ ಭೀಮಸೇನನೊಬ್ಬನೇ.
ಏಕೆಂದರೆ ಅವನು ಜಗತ್ತಿಗೆ ಆಕ್ಸಿಜನ್ ನೀಡುವ ವಾಯುಪುತ್ರ. ಎಲ್ಲರೂ ಉಸಿರಾಡುವುದೊಂದೇ ಗಾಳಿ. ಅದಕ್ಕೆ ಅವನ ಬಾಯಲ್ಲಿ ಇಂತಹ ಮಾತು ಬರುತ್ತವೆ. ಅದಕ್ಕೆ ಬಲಶಾಲಿಗಳಿಗೆಲ್ಲ ಮಹಾಭಾರತದ ಭೀಮಸೇನ ಆದರ್ಶವಾದಾಗ ಈ ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸೀತು.
೦೦೦