ಅವರೇ ದಾಖಲಿಸಿದ ವಾಸ್ತವಗಳು
ಶಶಾಂಕಣ
ಶಶಿಧರ ಹಾಲಾಡಿ
.@.
ಬ್ರಿಟಿಷರು ಬರುವ ಮುಂಚೆಯೇ ನಮ್ಮ ದೇಶದಲ್ಲಿ ವ್ಯವಸ್ಥಿತ ವಿದ್ಯಾಭ್ಯಾಸ ಕ್ರಮ ಇತ್ತು ಎಂದು ಪ್ರತಿಪಾದಿಸಿ, ಸೂಕ್ತ ಪುರಾವೆ ನಿಡಿ, ಪುಸ್ತಕ ರೂಪದಲ್ಲಿ ಪ್ರಕಟಿಸಿದ ಧರ್ಮಪಾಲ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ (ಜನನ :19.2.1922) ಅವರ ಕೊಡುಗೆ ಯನ್ನು ನಾವು ನೆನಪಿಸಿಕೊಳ್ಳಲೇಬೇಕು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ಹದಿನೈದು ವರ್ಷಗಳ ನಂತರ, 1962ರಲ್ಲಿ ಅಂದು ಅಧಿಕಾರದ ಚುಕ್ಕಾಣಿ ಹಿಡಿದವರ ತಪ್ಪುಲೆಕ್ಕಾಚಾರಗಳಿಂದಾಗಿ, ಚೀನಾವು ಸುಲಭ ಜಯ ದಾಖಲಿಸಿತು. ನಮ್ಮ ದೇಶದ ಸುಮಾರು 5000 ಸೈನಿಕರನ್ನು ತಾನು ಕೊಂದೆ ಎಂದು ಚೀನಾ ಹೇಳಿಕೊಂಡಿತು.
ನಮ್ಮ 3968 ಸೈನಿಕರು ನಾಪತ್ತೆಯಾದರು. ಚೀನಾದ ಸುಮಾರು 1300 ಸೈನಿಕರು ಹತರಾಗಿದ್ದು ನಿಜವಾದರೂ, ಆ ಯುದ್ಧದಲ್ಲಿ ಆ ದೇಶ ಜಯಗಳಿಸಿದ್ದು ಸ್ಪಷ್ಟವಾಗಿ ದಾಖಲಾಗಿದೆ. ನವೆಂಬರ್ 1962ರಲ್ಲಿ ಗಾಂಧಿವಾದಿ ಧರ್ಮಪಾಲ್ ಅವರು ಲೋಕ ಸಭೆಯ ಎಲ್ಲಾ ಸದಸ್ಯರಿಗೆ ಪತ್ರಬರೆದು, ಈ ಯುದ್ಧದ ವೈಫಲ್ಯದ ಹೊಣೆ ಹೊತ್ತು ಜವಹರ್‌ಲಾಲ್ ನೆಹರೂ ಅವರು ರಾಜೀನಾಮೆ ನೀಡುವಂತೆ ಎಲ್ಲಾ ಸಂಸದರು ಒತ್ತಾಯಿಸಬೇಕೆಂದು ಆಗರಹಿಸಿದರು. ಅದಕ್ಕೆ ದೊರೆತ ಅಧಿಕೃತ ಪ್ರತಿಕ್ರಿಯೆ ಏನು ಗೊತ್ತೆ? ಧರ್ಮಪಾಲ್ ಅವರನ್ನು ಸರಕಾರ ದಸ್ತಗಿರಿ ಮಾಡಿ, ತಿಹಾರ್ ಜೈಲಿಗೆ ಕಳಿಸಿತು.
ಪ್ರಧಾನಿಯವರ ರಾಜಿನಾಮೆಗೆ ಒತ್ತಾಯಿಸಿದ್ದರಿಂದಾಗಿ, ಅವರು ಎರಡು ತಿಂಗಳುಗಳ ಕಾಲ ತಿಹಾರ್ ಜೈಲುವಾದ ಅನುಭವಿಸ ಬೇಕಾಯಿತು! ಗಮನಿಸಿ, ಇದು ನಡೆದದ್ದು 1962ರಲ್ಲಿ, ನೆಹರೂ ಯುಗದ ಉಚ್ಛ್ರಾಯದಲ್ಲಿ. ಹಾಗಂತ ಧರ್ಮಪಾಲ್ ಅವರು ಮಾಮೂಲಿ ವ್ಯಕ್ತಿಯಾಗಿರಲಿಲ್ಲ. ಅವರು ಹೆಸರಾಂತ ಗಾಂಧಿವಾದಿ. ಗಾಂಧೀಜಿಯವರ ಹಲವ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿದ್ದರು. ಗಾಂಧೀಜಿಯವರು ಹೇಳಿದ್ದನ್ನು ಸಾರ್ವಜನಿಕವಾಗಿಯೂ ಪಾಲಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು.
ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಬಾಲ್ಯದಲ್ಲೇ ಗಾಂಧೀಜಿಯವರ ಪ್ರಭಾವಲಯಕ್ಕೆ ಸಿಲುಕಿದವರಲ್ಲಿ ಧರ್ಮಪಾಲ್ ಸಹ ಒಬ್ಬರು. ತಮ್ಮ ಏಳನೆಯ ವಯಸ್ಸಿನಲ್ಲಿಗಾಂಧೀಜಿಯವರನ್ನು ಕಂಡ ನಂತರ, ಆ ‘ಮಹಾತ್ಮ’ನ ಸರಳತೆಗೆ, ಶಕ್ತಿಗೆ, ಮಾತಿನ ಶೈಲಗೆ ಬೆರಗಾದವರು. ಪದವಿ ತರಗತಿಗಳಿಗೆ ಹೋಗುತ್ತಿದ್ದ ಸಮಯದಲ್ಲಿ, ಗಾಂಧೀಜಿಯವರ ಅಸಹಕಾರ ಚಳವಳಿಗೆ ಓಗೊಟ್ಟು, ವಿದ್ಯಾಭ್ಯಾಸ ವನ್ನು ಅರ್ಧಕ್ಕೇ ಕೈಬಿಟ್ಟರು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಗಾಂಧೀಜಿವರ ವಿದೇಶಿ ಶಿಷ್ಯೆ ಮೀರಾಬೆನ್ ಜತೆ ಗೂಡಿ, ಹಳ್ಳಿಗಳ ಉದ್ಧಾರಕ್ಕೆ ಶ್ರಮಿಸಿದರು.
ಜಯಪ್ರಕಾಶ್ ನಾರಾಯಣ್ (ಜೆಪಿ) ಅಧ್ಯಕ್ಷರಾಗಿದ್ದ ಅಸೋಷಿಯೇಷನ್ ಆಫ್ ವಾಲಂಟರಿ ಏಜನ್ಸೀಸ್ ಫಾರ್ ರೂರಲ್ ಡೆವಲಪ್‌ ಮೆಂಟ್‌ನ ಕಾರ್ಯದರ್ಶಿಯಾಗಿ, 1958-64ರ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಆದರೂ, ನೆಹರೂ ಅವರ ರಾಜೀನಾಮೆಗೆ ಒತ್ತಾಯಿಸಿದ್ದರಿಂದಾಗಿ ಜೈಲು ವಾಸ ಅನುಭವಿಸಬೇಕಾಯಿತು!
ಅದಿರಲಿ, ಧರ್ಮಪಾಲ್ ಅವರ ಜೀವನ ಮತ್ತು ಸಾಧನೆಗಳನ್ನು ಗಮನಿಸಿದರೆ, 1962ರ ಎರಡು ತಿಂಗಳುಗಳ ಜೈಲುವಾಸವು ಕ್ಷುಲ್ಲಕ ಎನಿಸುವ ಘಟನೆ. ನಮ್ಮ ದೇಶದ ಇತಿಹಾಸದ ಕ್ಷೇತ್ರದಲ್ಲಿ ಧರ್ಮಪಾಲ್ ಅವರು ನಡೆಸಿದ ಅಪರೂಪದ ಸಂಶೋಧನೆ ಮತ್ತು ವಿಶ್ಲೇಷಣೆಯು ನಿಜಕ್ಕೂ ಬೃಹತ್ ಮತ್ತು ಮಹತ್. ಅವರ ಸಂಶೋಧನೆಗಳಲ್ಲಿ ಶಿಖರಪ್ರಾಯವಾದುದು ಎಂದರೆ ‘ದಿ ಬ್ಯೂಟಿಫುಲ್ಟ್ರೀ: ಇಂಡಿಜೀನಿಯಸ್ ಇಂಡಿಯನ್ ಎಜುಕೇಶನ್ ಇನ್ ಎಯ್‌ಟೀಂತ್ ಸೆಂಚುರಿ’ ಎಂಬ ಗ್ರಂಥ ರಚನೆ. 1983ರಲ್ಲಿ ಪ್ರಕಟಗೊಂಡ ಈ ಗ್ರಂಥ ರಚನೆಯ ಹಿಂದೆ ಅವರ ಹಲವು ವರ್ಷಗಳ ಸಂಶೋಧನೆ ಫಲವಿದೆ. (ಈ ಪುಸ್ತಕವನ್ನು ‘ಚೆಲುವತರು’ ಎಂಬ ಹೆಸರಿನಲ್ಲಿ ಮಾಧವ ಪೆರಾಜೆಯವರು ಕನ್ನಡದಲ್ಲಿ ಅನುವಾದಿಸಿದ್ದಾರೆ.)
1830ರ ದಶಕಕ್ಕೂ ಮುಂಚೆ, (ಅಂದರೆ ಬ್ರಿಟಿಷರು ಹೆಚ್ಚಿನ ಪ್ರಾಬಲ್ಯ ಸಾಧಿಸುವ ಮುಂಚಿನ ವರ್ಷಗಳಲ್ಲಿ) ನಮ್ಮ ದೇಶದಲ್ಲಿ ಸಾಕಷ್ಟು ವ್ಯವಸ್ಥಿತ ಎನಿಸುವ ವಿದ್ಯಾಭ್ಯಾಸ ಕ್ರಮ ಇತ್ತು ಎಂದು ದಾಖಲೆ ಸಹಿತ ಈ ಪುಸ್ತಕದಲ್ಲಿ ಧರ್ಮಪಾಲ್ ಅವರು ಪ್ರತಿಪಾದಿಸಿದ್ದಾರೆ,ಅನುಮಾನಕ್ಕೆ ಎಡೆಯಿಲ್ಲದಂತೆ ನಿರೂಪಿಸಿದ್ದಾರೆ. ಮಾತ್ರವಲ್ಲಿ, ಆಗಿನ ದಿನಗಳಲ್ಲಿ ಇಂಗ್ಲೆಂಡಿನಲ್ಲಿದ್ದ ಜನಸಾಮಾನ್ಯರ ವಿದ್ಯಾಭ್ಯಾಸ ಕ್ರಮಕ್ಕಿಂತ, ನಮ್ಮ ದೇಶದಲ್ಲಿದ್ದ ವಿದ್ಯಾಭ್ಯಾಸದ ಕ್ರಮವು ಉನ್ನತ ಮಟ್ಟದಲ್ಲಿತ್ತು ಎಂಬ ವಿಚಾರ ಈ ಗ್ರಂಥದಲ್ಲಿ ಹೈಲೈಟ್ ಆಗಿದೆ. ವಿಶೇಷವೆಂದರೆ, ಇಂತಹ ಪ್ರಮುಖ ವಿಚಾರವನ್ನು ಋಜುವಾತುಪಡಿಸಲು ಧರ್ಮಪಾಲ್ ಅವರು ಪ್ರಧಾನವಾಗಿ ಬಳಸಿದ್ದು, ಅಂದಿನ ಬ್ರಿಟಿಷ್ ಅಧಿಕಾರಿಗಳು ನಡೆಸಿದ ಸರ್ವೇ, ಅಂಕಿಅಂಶ ಮತ್ತು ದಾಖಲೆಗಳನ್ನು!
ನಮ್ಮ ದೇಶದಲ್ಲಿದ್ದ ಸುಂದರವಾದ, ಚೆಲುವಾದ ಒಂದು ವ್ಯವಸ್ಥೆಯನ್ನು ಬ್ರಿಟಿಷರು ನಾಶಪಡಿಸಿದರು ಎಂದು ಅಂಕಿ ಅಂಶ ಸಹಿತ ತೋರಿಸಿಕೊಡುವ ಧರ್ಮಪಾಲ್ ಅವರ ‘ದಿ ಬ್ಯೂಟಿಫುಲ್ ಟ್ರೀ’ ಗ್ರಂಥ ರಚನೆಗೆ, ಗಾಂಧೀಜಿಯವರು ಪರೋಕ್ಷ ಕಾರಣ ಎಂಬ ವಿಚಾರ ಕುತೂಹಲಕಾರಿ. ಬ್ರಿಟಿಷರು 1931ರಲ್ಲಿ ನಡೆಸಿದ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಗಾಂಧೀಜಿಯವರು ಇಂಗ್ಲೆಂಡಿಗೆಹೋಗಿದ್ದರಷ್ಟೆ. ಆ ಸಭೆಯ ಉದ್ದೇಶ, ಬ್ರಿಟಿಷರ ತಂತ್ರ ಏನೇ ಇರಲಿ, ಗಾಂಧೀಜಿಯವರು ಇಂಗ್ಲೆಂಡಿನಲ್ಲಿ ನೀಡಿದ ಒಂದು ಹೇಳಿಕೆಯು, ಅಲ್ಲಿನ ಪತ್ರಿಕೆಗಳಲ್ಲಿ ಪ್ರಧಾನವಾಗಿ ಪ್ರಕಟಗೊಂಡು, ಸಾಕಷ್ಟು ಚರ್ಚೆ, ಕೋಲಾಹಲಗಳಿಗೆ ಕಾರಣವಾಗಿದ್ದು ಚೋದ್ಯದ ವಿಚಾರ.
ಗಾಂಧೀಜಿವರು ಅಂದು ಹೇಳಿದ್ದಿಷ್ಟೆ ‘ಈಗ ಐವತ್ತು ಅಥವಾ ನೂರು ವರ್ಷಗಳ ಹಿಂದೆ ಇದ್ದುದ್ದಕ್ಕಿಂತ ಹೆಚ್ಚು ಅನಕ್ಷರಸ್ಥರು ಈಗ ನಮ್ಮ ದೇಶದಲ್ಲಿದ್ದಾರೆ. ಅದೇ ರೀತಿ ಬರ್ಮಾದಲ್ಲೂ. ಏಕೆಂದರೆ, ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಬಂದು, ಇಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬದಲು, ಇಲ್ಲಿದ್ದ ವ್ಯವಸ್ಥೆಯನ್ನು ನಾಶಪಡಿಸಲು ಆರಂಭಿಸಿದರು. ಅವರು ನೆಲವನ್ನು ಬಗೆದು,ಮಣ್ಣನ್ನು ಕೆರೆದು, ಬೇರುಗಳನ್ನು ಹೊರಗೆ ಕಾಣಿಸುವಂತೆ ಮಾಡಿದರು ಮತ್ತು ಚೆಲುವ ತರು ಸತ್ತು ಹೋಯಿತು. (…ಬ್ಯೂಟಿಫುಲ್ ಟ್ರೀ ಪೆರಿಶ್‌ಡ್)’.
1931ರಲ್ಲಿ ಗಾಂಧೀಜಿಯವರು ಬ್ಯೂಟಿಫುಲ್ ಟ್ರೀ ಅಥವಾ ಚೆಲುವ ತರುವಿನ ಹೋಲಿಕೆಯನ್ನು ಮಾಡಿದ್ದು, ಅಂದು ಅದು ಚರ್ಚೆಗೆ ಒಳಗಾಗಿದ್ದು, ಇವೆಲ್ಲವುಗಳ ಪ್ರಭಾವದಿಂದಾಗಿ, 1966ರಲ್ಲಿ ಧರ್ಮಪಾಲ್ ಅವರು ಸಂಶೋಧನೆ ಆರಂಭಿಸಿ, 1983ರಲ್ಲಿ ‘ದಿ ಬ್ಯೂಟಿಫುಲ್ ಟ್ರೀ’ ಪುಸ್ತಕ ಪ್ರಕಟಗೊಂಡಿತು! ಯಾವ ಸುಂದರ ಮರದ ಬೇರುಗಳನ್ನು ನಾಶಪಡಿಸುವ ಮೂಲಕ ಆ ಮರವನ್ನು ಬ್ರಿಟಿಷರು ಕೊಂದರೋ, ಆ ಪುರಾತನ ವೃಕ್ಷದ ವಿವರಗಳನ್ನು ಸಂಗ್ರಹಿಸುವ ಧರ್ಮಪಾಲ್ ಅವರ ಸಾಧನೆಯು, ಕೇವಲ ಸಾಧನೆಯಲ್ಲ, ಅದೊಂದು ಬೃಹತ್ ಅಭಿಯಾನ.
ಸಾಂದರ್ಭಿಕವಾಗಿ ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪಿಸಬಹುದು. 1931ರಲ್ಲಿ ಗಾಂಧೀಜಿಯವರು ಇಂಗ್ಲೆಂಡಿನಲ್ಲಿ ನೀಡಿದ ಹೇಳಿಕೆಗೆ ಬ್ರಿಟಿಷ್ ವ್ಯವಸ್ಥೆಯೇ ತಿರುಗಿಬಿದ್ದು, ಆ ಹೇಳಿಕೆ ಸುಳ್ಳು ಎಂದು ಸಾಧಿಸಲು ಯತ್ನಿಸಿತು. ಬ್ರಿಟಿಷರು ಬರುವ ಮುಂಚೆ ನಮ್ಮ ದೇಶದಲ್ಲಿ ಹೆಚ್ಚು ಅಕ್ಷರಸ್ಥರಿದ್ದರು ಎಂದು ಗಾಂಧೀಜಿ ಹೇಳಿದ್ದು, ಬ್ರಿಟಿಷರ ಅಹಂಗೆ ದೊಡ್ಡ ಘಾತವನ್ನೇ ಮಾಡಿತ್ತು. ಭಾರತದಲ್ಲಿ ವಿದ್ಯಾಭ್ಯಾಸವನ್ನು ಪರಿಚಯಿಸಿದವರೇ ಬ್ರಿಟಿಷರು ಎಂದು ಎಲ್ಲಾ ಕಡೆ ವ್ಯವಸ್ಥಿತವಾಗಿ ಪ್ರಚಾರ ಮಾಡಿಕೊಂಡು ಬರಲಾಗಿತ್ತಲ್ಲವೆ? ‘ನಿಮ್ಮ ಹೇಳಿಕೆ ಸುಳ್ಳು, ಈ ರೀತಿ ನೀವು ಹೇಳುವಂತಿಲ್ಲ, ಒಂದೇ ಋಜುವಾತು ಮಾಡಿ, ಇಲ್ಲವೇ ಆ ಹೇಳಿಕೆಯನ್ನು ವಾಪಸು ತೆಗೆದುಕೊಳ್ಳಿ’ ಎಂದು ಬ್ರಿಟಿಷ್ ವಿದ್ವಾಂಸ ಫಿಲಿಪ್ ಹರ್ಟಾಗ್ ಗಾಂಧೀಜಿಯವರ ಬೆನ್ನು ಬಿದ್ದ. ಬ್ರಿಟನ್ ನಿಂದ ಹಿಂದಿರುಗಿ ಬಂದ ಗಾಂಧೀಜಿಯವರು ಕೆಲವು ಕಾಲ ಇಲ್ಲಿ ಸೆರೆಮನೆ ವಾಸ ಅನುಭವಿಸಬೇಕಾಯಿತು.
‘ತಾನು ಈಗ ಉತ್ತರಿಸುವ ಸ್ಥಿತಿಯಲ್ಲಿಲ್ಲ, ನಿಧಾನವಾಗಿ ನಿಮಗೆ ವಿವರ ನೀಡುವೆ’ ಎಂದು ಗಾಂಧೀಜಿಯವರು ಉತ್ತರಿಸಿದರು. ಆದರೆ, ಆಬ್ರಿಟಿಷ್ ವಿದ್ವಾಂಸನಿಗೆ ವಿವರವಾದ ಉತ್ತರ ನೀಡಲು ಗಾಂಧೀಜಿಯವರಿಂದ ಸಾಧ್ಯವಾಗಲಿಲ್ಲ. ಆ ಕೆಲಸವನ್ನು ಅವರ ಶಿಷ್ಯ ಧರ್ಮಪಾಲ್ಅವರು 1966ರಲ್ಲಿ ಆರಂಭಿಸಿದರು. ಅವರ ಅಧ್ಯಯನವು ಏಕಾಂಗಿ ಹೋರಾಟ. ಯಾವುದಾದರೂ ವಿಶ್ವವಿದ್ಯಾಲಯ ಮಾಡಬೇಕಾಗಿದ್ದ, ಮಾಡಬಹುದಾಗಿದ್ದ ಸಂಶೋಧನೆ ಅದು. ೧೮೧೦-೩೦ರ ಅವಧಿಯಲ್ಲಿ ನಮ್ಮ ದೇಶದ ಮದರಾಸ್, ಬಂಗಾಳ ಮೊದಲಾದ ಪ್ರಾಂತ್ಯ ಗಳಲ್ಲಿ ಯಾವ ರೀತಿಯ ವಿದ್ಯಾಭ್ಯಾಸ ಕ್ರಮವಿತ್ತು ಎಂಬುದನ್ನು ಅಂದಿನ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರದ ಆದೇಶದಮೇರೆಗೆ, ಬ್ರಿಟಿಷ್ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದರು.
ಜತೆಗೆ, ಅದರ ವಿವರಗಳು ಬಯಲಾದಾರೆ, ಬ್ರಿಟಿಷರು ಹೇಳುತ್ತಿದ್ದ ಒಂದು ಸುಳ್ಳು ಬಯಲಾಗುವ ಸಾಧ್ಯತೆ ಇತ್ತು. ಹಿಂದೆ ಭಾರತದಲ್ಲಿಕೆಲವೇ ಮಂದಿ ಮಾತ್ರ ವಿದ್ಯಾಭ್ಯಾಸ ಪಡೆಯುತ್ತಿದ್ದರು, ತಾವು ಬಂದ ನಂತರ ಜನಸಾಮಾನ್ಯರಿಗೆ ವಿದ್ಯಾಭ್ಯಾಸ ಒದಗಿಸಿದೆವು ಎಂದು ಬ್ರಿಟಿಷರು ಪ್ರಚಾರ ಮಾಡಿಕೊಂಡು ಬಂದಿದ್ದರು. ಆದರೆ ೧೮೧೦-೩೦ರ ಅವಽಯಲ್ಲಿ ನಡೆದ ಸಮೀಕ್ಷೆಗಳ ಪ್ರಕಾರ, ಅಂದು ನಮ್ಮ ದೇಶದಲ್ಲಿ ಎಲ್ಲಾ ವರ್ಗಗಳ ಜನರು ಅಕ್ಷರಾಭ್ಯಾಸ ಮಾಡುತ್ತಿದ್ದರು ಮತ್ತು ಅಂದಿನ ವಿದ್ಯಾಭ್ಯಾಸದ ಮಟ್ಟವು ಸಮಕಾಲೀನ ಬ್ರಿಟನ್‌ನಲ್ಲಿದ್ದ ಮಟ್ಟಕ್ಕಿಂತ ಉತ್ತಮವಾಗಿತ್ತು!
ಧರ್ಮಪಾಲ್ ಅವರು ಹುಡುಕಿ ತೆಗೆದ ಮಾಹಿತಿ ಅಗಾಧ, ಅನುಮಾನಕ್ಕೆ ಎಡೆಇಲ್ಲದಷ್ಟು ವಿಸ್ತಾರ. ಒಂದು ಮಾಹಿತಿ ನೋಡಿ. 25.6.1822 ರಂದು ಮದರಾಸ್ ಪ್ರಾಂತ್ಯದ ಅಧಿಕಾರಿ ಥಾಮಸ್ ಮನ್ರೋ, ಎಲ್ಲಾ ಜಿಲ್ಲಾ ಕಲೆಕ್ಟರ್‌ಗಳಿಗೆ ಸುತ್ತೋಲೆ ಕಳಿಸಿ, ಬಳ್ಳಾರಿ, ಕೆನರಾ ಮೊದಲಾದ ಪ್ರದೇಶಗಳಲ್ಲಿದ್ದ ಶಾಲೆಗಳ ಪಟ್ಟಿ, ಪಠ್ಯಗಳು, ಗುರುಗಳು, ವಿದ್ಯಾರ್ಥಿಗಳ ಜಾತಿವಾರು ಅಂಕಿಅಂಶ ಗಳನ್ನು ನೀಡುವಂತೆ ಹೇಳಿದ. ಕೆಲವು ಜಿಲ್ಲಾ ಕಲೆಕ್ಟರ್‌ಗಳು ತಕ್ಷಣ ಮಾಹಿತಿ ನೀಡದಿದ್ದರೂ, 20 ಜಿಲ್ಲೆಗಳ ಮಾಹಿತಿ ದೊರಕಿತು. ಆ ಇಪ್ಪತ್ತು ಜಿಲ್ಲೆಗಳಲ್ಲಿ, 11,575 ಶಾಲೆಗಳು, 1094 ಕಾಲೇಜುಗಳು ಇದ್ದು, ಕ್ರಮವಾಗಿ 157195 ಮತ್ತು 5431 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು!
ಜತೆಗೆ, ಇನ್ನಷ್ಟು ಮಕ್ಕಳು ಮನೆಯಲ್ಲೇ ಓದುತ್ತಿದ್ದರು ಎಂದು ಕೆಲವು ಜಿಲ್ಲಾ ಕಲೆಕ್ಟರುಗಳು ವರದಿ ಮಾಡಿದ್ದರು. ಅಲ್ಲಿ ಎಲ್ಲಾ ವರ್ಗದ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದ ವಿಚಾರ ಮನ್ರೋಗೆ ಅಚ್ಚರಿ ಎನಿಸಿತ್ತು. ಸೇಲಂ ಮತ್ತು ಮದರಾಸ್‌ನಲ್ಲಿ ಶೇ.32 ರಷ್ಟು ಮಕ್ಕಳು ಹಿಂದುಳಿದ ವರ್ಗಕ್ಕೆ (ಇಂದಿನ ಮಾನದಂಡದಲ್ಲಿ) ಸೇರಿದ್ದರು! ತಿನ್ನೆವೆಲ್ಲಿಯಲ್ಲಿ ಶೇ.38 ರಷ್ಟು ಮಕ್ಕಳು ಹಿಂದುಳಿದ ವರ್ಗಕ್ಕೆ ಸೇರಿದವ ರಾಗಿದ್ದರು. ಇದನ್ನು ಗಮನಿಸಿದ ಮನ್ರೋನು ‘ಹೆಚ್ಚಿನ ಯುರೋಪಿಯನ್ ದೇಶಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಶಾಲೆಗೆ ಮಕ್ಕಳು ಸೇರ್ಪಡೆಯಾಗುತ್ತಿದ್ದಾರೆಂಬ ಟಿಪ್ಪಣಿ ಬರೆದಿದ್ದಾನೆ.
ಅತ್ತ ಬಂಗಾಳ ಪ್ರೆಸಿಡೆನ್ಸಿಯಲ್ಲೂ ಎಲ್ಲೆಡೆ ಶಾಲೆಗಳಿದ್ದವು. ಆಡಮ್ಸ್ ಎಂಬಾತ ಸಿದ್ಧಪಡಿಸಿದ ‘1835-38ರಲ್ಲಿ ಬಂಗಾಳದ ವಿದ್ಯಾಭ್ಯಾಸದ ಸ್ಥಿತಿ’ ವರದಿಯು 1841ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯ ದಿಂದ ಪ್ರಕಟಗೊಂಡಿದೆ. ಅದರ ಪ್ರಕಾರ, ಬಂಗಾಳ ಮತ್ತು ಬಿಹಾರದಲ್ಲಿ ಆ ಸಮಯದಲ್ಲಿ ಸುಮಾರು 100000 ಹಳ್ಳಿಗಳಲ್ಲಿ ಶಾಲೆಗಳಿದ್ದವು. ಮುಂಬಯಿ ಪ್ರೆಸಿಡೆನ್ಸಿಯು 1820ರ ಸಮಯದಲ್ಲಿ ಸಿದ್ಧಪಡಿಸಿದ ವರದಿಯಲ್ಲಿ ‘ನಮ್ಮ ಇಡೀ ಪ್ರಾಂತ್ಯದಲ್ಲಿ ಕನಿಷ್ಠ ಒಂದಾದರೂ ಶಾಲೆ ಇಲ್ಲದ ಹಳ್ಳಿ ಇಲ್ಲ, ಕೆಲವು ಹಳ್ಳಿಗಳಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದವು.’  ಎಂದು ದಾಖಲಾಗಿದೆ.
30.10.1931ರಂದು ಲಂಡನ್‌ನಲ್ಲಿ ಗಾಂಧೀಜಿ ಯವರು ಬ್ರಿಟಿಷರ ಮೇಲೆ ಆರೋಪ ಹೊರಿಸಿದ್ದು ಇದೇ ಹಿನ್ನೆಲೆಯಲ್ಲಿ. ಇಂತಹ ಒಂದು ವಿದ್ಯಾಭ್ಯಾಸ ಕ್ರಮವನ್ನು, ಸುಂದರ ವೃಕ್ಷದಂತಿದ್ದ ಆ ವ್ಯವಸ್ಥೆ ಯನ್ನು ಬುಡ ಸಹಿತ ನಾಶಪಡಿಸಿದವರು ಬ್ರಿಟಿಷರು ಎಂದು ಅವರ ನೆಲದಲ್ಲೇ ಗಾಂಧೀಜಿ ಹೇಳಿದಾಗ, ಇಂಗ್ಲಿಷ್ ಜನರು ಬೆಚ್ಚಿ ಬಿದ್ದರು. ನಿಮ್ಮ ಹೇಳಿಕೆಯನ್ನು ಋಜುವಾತು ಪಡಿಸಿ ಎಂದು ಸರ್ ಫಿಲಿಪ್ಹರ್ಟಾಗ್ ಗಾಂಧೀಜಿಯವರ ಬೆನ್ನು ಬಿದ್ದುದಷ್ಟೇ ಅಲ್ಲ, ಭಾರತದಲ್ಲಿ ವಿದ್ಯಾಭ್ಯಾಸ ಕ್ರಮವೇ ಇರಲಿಲ್ಲ, ಅದನ್ನು ಬ್ರಿಟಿಷರು ತಂದರು ಎಂಬುದನ್ನು ಪ್ರತಿಪಾದಿಸಲು ಫಿಲಿಪ್ ಹರ್ಟಾಗ್ ಎಂಬಾತ ತನ್ನದೇ ವರದಿಗಳನ್ನೂ ಸಿದ್ಧಪಡಿಸಿದ!
ಆತ ಡಾಕಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಯಾಗಿದ್ದ. ಗಾಂಧೀಜಿಯವರೊಂದಿಗೆ ದೀರ್ಘಕಾಲದ ಪತ್ರ ವ್ಯವಹಾರ ನಡೆಸಿದ. ತನ್ನ ವರದಿಗಳಲ್ಲಿ, ಭಾರತದ ಹಳೆಯ ಶಾಲೆಗಳು ಗುಣಮಟ್ಟದಲ್ಲಿ ಚೆನ್ನಾಗಿರಲಿಲ್ಲ, ಅಲ್ಲಿ ಉತ್ತಮವಾದುದನ್ನು ಹೇಳಿಕೊಡು ತ್ತಿರಲಿಲ್ಲ, ಹೆಚ್ಚಿನ ಶಾಲೆಗಳು ಗುಡಿಸಲಿನಲ್ಲಿ ನಡೆಯುತ್ತಿದ್ದವು, ದೇವಾಲಯದಲ್ಲಿ, ಖಾಸಗಿ ಮನೆಗಳಲ್ಲಿ ನಡೆಯುತ್ತಿದ್ದವು ಮೊದಲಾದ ಆರೋಪ ಗಳನ್ನು ಆತ ಪಟ್ಟಿ ಮಾಡಿದ. ಒಟ್ಟಿನಲ್ಲಿ, ಹತ್ತೊಂಬತ್ತನೆಯ ಶತಮಾನಕ್ಕಿಂತ ಮುಂಚೆ, ನಮ್ಮ ದೇಶದಲ್ಲಿ ವ್ಯವಸ್ಥಿತ ವಿದ್ಯಾಭ್ಯಾಸ ಕ್ರಮವಿತ್ತು ಎಂಬ ವಿಚಾರ ಒಂದು ಮಿಥ್ಯೆ ಎಂದು ಆತ ಪ್ರತಿಪಾದಿಸಿದ ಮತ್ತು ಅದರಲ್ಲಿ ಸಾಕಷ್ಟು ಯಶಸ್ವಿಯೂ ಆದ.
ಆದ್ದರಿಂದಲೇ, ನಮ್ಮ ದೇಶದಲ್ಲಿ ವಿದ್ಯಾಭ್ಯಾಸದ ಬುನಾದಿ ಹಾಕಿದವರೇ ಬ್ರಿಟಿಷರು ಎಂದು ಇಂದು ನಮ್ಮ ದೇಶದ ಜನಸಾಮಾನ್ಯರು, ವಿದ್ಯಾವಂತರು ನಂಬಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಧರ್ಮಪಾಲ್ ಅವರ ಸಂಶೋಧನೆ ಎಷ್ಟು ಮಹತ್ವದ್ದು ಎಂಬುದರಅರಿವಾಗುತ್ತದೆ. ಬ್ರಿಟಿಷರು ಬರುವ ಮುಂಚೆಯೇ ಇಲ್ಲಿ ವಿದ್ಯಾಭ್ಯಾಸ ಕ್ರಮ ಇತ್ತು ಎಂದು ಪ್ರತಿಪಾದಿಸಿ, ಪುರಾವೆ ನಿಡಿ, ಪುಸ್ತಕ ರೂಪದಲ್ಲಿ ಪ್ರಕಟಿಸಿದ ಧರ್ಮಪಾಲ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ (ಜನನ: 19.2.1922) ಈ ವಿಚಾರ ನೆನಪಿಸಿಕೊಳ್ಳುವುದು ಸೂಕ್ತ ಎನಿಸುತ್ತಿದೆ.