ಪೆಟ್ಟು ತಿಂದಷ್ಟೂ ಪುಟಿದೆದ್ದು ನಿಲ್ಲಬೇಕು
ಸಕಾಲಿಕ
ಪ್ರವೀಣ ವಿವೇಕ
praveenvivek54@.
ಬದುಕು ಎಂದರೇ ಸವಾಲು! ಈ ಸವಾಲನ್ನು ಸ್ವೀಕರಿಸಿ ಮುನ್ನಡೆದವನೇ ಜಗತ್ತಿನಲ್ಲಿ ಜಾಣ, ಸವಾಲಿಗೆ ಬೆನ್ನು ನೀಡಿದವನೇ ಮೂರ್ಖ. ಬದುಕಿನಲ್ಲಿಅನುಭವ ಗಳಿಸಿಕೊಳ್ಳಿ. ಗುರಿ ತಲುಪುವ ತನಕ ನಿಲ್ಲದೆ, ಅಪಮಾನಗಳನ್ನು ಸನ್ಮಾನವನ್ನಾಗಿಸಿಕೊಳ್ಳಿ ಹೊರತು ಜೀವನ ವ್ಯರ್ಥ ಮಾಡಿಕೊಳ್ಳಬೇಡಿ.
ಕರೋನಾ ದೇಶಕ್ಕೆ ಕಾಲಿಟ್ಟ ನಂತರ ಶತಮಾನದಲ್ಲೂ ಕಂಡು ಕಾಣರಿಯದ ಬದಲಾವಣೆಗಳು ದೇಶದಲ್ಲಿ ಉಂಟಾಗಿವೆ. ಕೇಂದ್ರ ಸರಕಾರ ಸಾಂಕ್ರಾಮಿಕರೋಗವನ್ನು ಸಮರ್ಥವಾಗಿ ಎದುರಿಸದ ಬೆನ್ನಲ್ಲೂ ದೇಶದಲ್ಲಿ ಕೆಲ ಸಮಸ್ಯೆಗಳು ಉಲ್ಬಣವಾಗಿದ್ದು ವಾಸ್ತವ ಸಂಗತಿ. ಸಾಂಕ್ರಾಮಿಕದ ಹೊಡೆತಕ್ಕೆ ಜಗತ್ತಿಗೆ ಜಗತ್ತೇ ಅಲ್ಲೋಲ ಕಲ್ಲೋಲವಾಯಿತು.
ಇತ್ತೀಚೆಗೆ ಕೇಂದ್ರ ಸರಕಾರ ರಾಜ್ಯಸಭೆಯಲ್ಲಿ 2018ರಿಂದ 2020ರ ನಡುವೆ ಭಾರತದಲ್ಲಿ ನಿರುದ್ಯೋಗ ಹಾಗೂ ಸಾಲ ಬಾದೆಯಿಂದ 25000ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ನೀಡಿದೆ. ಅದರಲ್ಲೂ ಸಾಂಕ್ರಾಮಿಕದ ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕ್ರಮೇಣವಾಗಿ ಏರುಗತಿ ಯಲ್ಲಿದೆ ಅನ್ನುವ ಆಂತಕಕಾರಿ ಅಂಶ ಬೆಳಕಿಗೆ ಬಂದಿದೆ. ಇದನ್ನು ಕಲಾಪದಲ್ಲಿ ಪ್ರತಿಪಕ್ಷಗಳು ವಿರೋಧಿಸಿವೆ, ಆದರೆ ಇದನ್ನು ರಾಜಕಾರಣದ ಹೊರತಾಗಿ ವಿಚಾರಿಸಿದಾಗ ಆತ್ಮಹತ್ಯೆಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರವೇ ಎನ್ನುವ ಪ್ರಶ್ನೆ ಸಹಜವಾಗಿ ಕಾಡುತ್ತದೆ.
ನಮ್ಮ ಹಳ್ಳಿಯಲ್ಲಿ ಒಬ್ಬ ವೈದ್ಯರಿದ್ದರು, ಆ ವೈದ್ಯರು ನಮ್ಮ ಊರಿನಲ್ಲದವರಾಗಿದ್ದರಿಂದ ಪಕ್ಕದ ತಾಲೂಕು ಕೇಂದ್ರದಿಂದ ತಮ್ಮ ಹಳೆಯ ಸುಜುಕಿ ಬೈಕ್‌ನ್ನು ತಗೆದುಕೊಂಡು ನಮ್ಮೂರಿಗೆ ಬರುತ್ತಿದ್ದರು. ಆ ಗಾಡಿಯ ನಂಬರ್ ಪ್ಲೇಟಿಗೆ ದಪ್ಪ ಅಕ್ಷರದಲ್ಲಿ ಒಂದು ವಾಕ್ಯ ಬರೆಯಲಾಗಿತ್ತು, ಅದು ಅಲ್ಲದೇ ಆ ವಾಕ್ಯ ಅನೇಕ ಬಾರಿ ಚಿಂತೆಗೆ ದೂಡಿತ್ತು. ಆ ವಾಕ್ಯದ ಕುರಿತು ವಿಚಾರ ಮಾಡಿದಾಗಲೆಲ್ಲ ನನಗೆ ಅದು ನೂರಕ್ಕೆ ನೂರರಷ್ಟು ಸತ್ಯ ಎಂಬ ಅಭಿಪ್ರಾಯ ವಂತೂ ಖಂಡಿತ ವ್ಯಕ್ತವಾಗುತಿತ್ತು.
ಅಷ್ಟಕ್ಕೂ ಆ ವಾಹನದ ಮೇಲೆ ಹೀಗೆ ಬರೆಯಲಾಗಿತ್ತು – ಕಷ್ಟದ ಜೀವನ ಶಿಸ್ತನ್ನು ಕಲಿಸುವ ಪಾಠ ಶಾಲೆ. ಕಷ್ಟ ಎಂದಾಕ್ಷಣ ಕೇವಲ ಹಸಿವು, ಬಡತನ ಮಾತ್ರವಲ್ಲ, ಅದರ ಬದಲಾಗಿ ಕಷ್ಷ ಅನುಭವಿಸುವುದು ಎಂದರೇ ಜೀವಾನನುಭವ ಎಂತಲೇ ಅರ್ಥ! ಸಾವಿರಾರು ವರ್ಷದಿಂದ ಮಾನವನ ಬದುಕನ್ನು ನೋಡಿದಾಗ ಒಟ್ಟಾರೆ ಬದುಕು ನಡೆಸುವುದೇ ಕಷ್ಟ ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ. ಬದುಕು ಯಾವಾಗಲೂ ಅನಿಶ್ಚಿತೆಯಿಂದ ಕೂಡಿದ ಸಂಕೀರ್ಣ ವ್ಯವಸ್ಥೆಯೇ ಸರಿ. ಇಲ್ಲಿ ಯಾವುದು ಸುಲಭವಾಗಿ ಸಿಗುವುದಿಲ್ಲ, ಹಾಗೆ ಸುಲಭವಾಗಿ ಸಿಕ್ಕರೂ ಅದು ಬಹಳ ದಿನಗಳ ಕಾಲ ಇರುವುದಿಲ್ಲ!
ಹೀಗಾಗಿ ಅನುಭ ವವವಿದ್ದರಿಗೆ ಇಲ್ಲಿ ಹೆಚ್ಚು ಪ್ರಾಶಸ್ತ್ಯ. ಈ ಬದುಕಿಗೆ ಕಾಲಿಟ್ಟ ನಂತರ ಒಂದರ ಮೇಲೆ ಒಂದು ತೊಂದರೆ ತಾಪತ್ರಯಗಳು ಎದುರಾ ಗುತ್ತಲೇ ಇರುತ್ತವೆ, ಕೆಲವರು ಅವುಗಳನ್ನು ಸವಾಲಾಗಿ ಸ್ವೀಕರಿಸಿ, ಸಮರ್ಥವಾಗಿ ಎದುರಿಸಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಇವುಗಳಿಗೆ ಅಂಜಿದವರು ಬದುಕನ್ನು ಅಲ್ಲಿಗೆ ಮುಗಿಸಿಕೊಳ್ಳುತ್ತಾರೆ. ಅದೊಮ್ಮೆ ವಿವೇಕಾನಂದರಿಗೆ ದಾರಿಯಲ್ಲಿ ನಾಯಿ ಬೆನ್ನಟ್ಟಿತ್ತು, ಆಗ ಅವರು ಅದಕ್ಕೆಅಂಜಿಯೇ ಓಡುತ್ತಿದ್ದರು, ಆದರೆ ಸ್ವಲ್ಪ ಮುಂದೆ ಹೋದ ತಕ್ಷಣವೇ ಅವರಿಗೆ ಯಾರೋ ಹೇಳಿದರು ಯಕಶ್ಚಿತ ಒಂದು ನಾಯಿಗೆ ಹೀಗೆ ಅಂಜಿ ಓಡಿ ಹೋದರೆ ಹೇಗೆ? ನಾಯಿಗಳ ಎದುರಿಗೆ ಮುಖ ಮಾಡಿ ಎದೆ ಸೆಟಿಸಿಕೊಂಡು ನಿಲ್ಲು ಅವುಗಳು ತಾವಾಗಿಯೇ ಹೆದರಿ ಹೋಗುತ್ತವೆ ಎಂದರಂತೆ.
ವಿವೇಕಾನಂದರೂ ಆ ರೀತಿ ಮಾಡಿ, ಬದುಕಿನಲ್ಲಿ ಎದುರಾಗುವ ಸಮಸ್ಯೆಗಳು ಕೂಡಾ ಈ ರೀತಿಯೇ! ಅವುಗಳನ್ನು ಎದುರಿಸಲು ಗಟ್ಟಿಯಾಗಿ ನಿಲ್ಲಿ, ಮುನ್ನುಗ್ಗಿರಿ ಎಂದು ಕರೆ ನೀಡಿದ್ದರು. ನಮ್ಮ ಹಿರಿಯರು ಅಂದಿನ ದಿನಮಾನಗಳಲ್ಲಿ ಕಷ್ಟ ಪಟ್ಟಿರುವ ರೀತಿಯನ್ನು ಕಣ್ಣೀರನ್ನು ಸುರಿಸುತ್ತಾ ಬಡತನ,ಹಸಿವು, ಯಾವುದೇ ಸೌಲಭ್ಯಗಳು ಇಲ್ಲದ ದಿನಗಳನ್ನು ತಮ್ಮ ಮೊಮ್ಮಕ್ಕಳಿಗೆ ವಿವರಿಸುತ್ತಾರೆ. ಈ ಹಿರಿಯರ ಮಾತುಗಳು ಇಂದಿನ ಕಾಲದ ಮಕ್ಕಳಿಗೆ ಕಟ್ಟು ಕಥೆ ಎಂದು ಅನಿಸಿಬಿಡಬಹುದು. ಎಲ್ಲವೂ ಸುಲಭವಾಗಿ ಸಿಗಬೇಕು ಎನ್ನುವ ಮನೋಭಾವ ಎಲ್ಲರಲ್ಲೂ ಬೆಳೆದ ಪರಿಣಾಮದಿಂದ ಆತ್ಮಹತ್ಯೆಯಂತ ಹೇಡಿತನದ ಕೆಲಸಕ್ಕೆ ಕೆಲವರು ಹೋಗುತ್ತಿರುವುದು.
ಒತ್ತಡದ ಬದುಕು, ಮತ್ತೊಬ್ಬರಂತೆ ಆಗಬೇಕು ಎನ್ನುವ ಹಂಬಲ, ಐಷಾರಮಿ ಜೀವನದ ಪರಿಪಾಠ, ಇದ್ದಿದ್ದರಲ್ಲೇ ತೃಪ್ತಿ ಪಡುವ ಮನೋಭಾವ ಇಲ್ಲದಿ ರುವುದು ಎಲ್ಲವೂ ಮನುಷ್ಯನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇವತ್ತಿನ ಕಾಲ ಹೇಗಿದೆ ಎಂದರೇ ಹೊಟ್ಟಿಗೆ ಹಿಟ್ಟು ಇಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಹೂವು ಬೇಕು ಎನ್ನುವ ಮನೋಸ್ಥಿತಿಯನ್ನು ನಾವು ಬೆಳಸಿಕೊಂಡಿದ್ದೇವೆ, ಮಕ್ಕಳಿಗೂ ಅದನ್ನೇ ಹೇಳಿಕೊಡುತ್ತಿದ್ದೇವೆ. ಇವೆಲ್ಲದರ ಒಟ್ಟಾರೆ ಫಲಿತಾಂಶಮಕ್ಕಳಿಗೆ ನಿಜವಾದ ಬದುಕು ಅರ್ಥವಾಗುತ್ತಿಲ್ಲ.
ಹಾಗೆ ಸುಮ್ಮನೆ ವಿಚಾರ ಮಾಡಿ ನೋಡಿ, ಸರಕಾರಿ ಹಾಗೂ ಖಾಸಗಿ ವಲಯದ ನೌಕರಿಗಳಲ್ಲಿ ವ್ಯಕ್ತಿಯ ಅನುಭವ ನೋಡಿಯೇ ಅವನನ್ನು ಮತ್ತೊಂದು ಹುದ್ದೆಗೆ ಬಡ್ತಿ ನೀಡಲಾಗುತ್ತದೆ. ಅದೇ ಒಂದು ನೌಕರಿ ಪಡೆದುಕೊಳ್ಳಲು ಸಾಕಷ್ಟು ಅನುಭವ ಇರಬೇಕಾದರೆ ಇಡೀ ಬದುಕನ್ನು ಮುನ್ನಡೆಸಬೇಕಾದರೆ ಅದೆಷ್ಟು ಅನುಭವ ಇರಬೇಕು? ಜಗತ್ತಿನಲ್ಲಿ ಸಾಮಾನ್ಯ ಬದುಕಿಗಿಂತ ಅಸಾಮಾನ್ಯ ಬದುಕನ್ನು ಸಾಗಿಸಿದ ಅನೇಕರ ಜೀವನ ಸಾಮಾನ್ಯರಂತೆಯೇ ಇರಲೇ ಇಲ್ಲ. ಇತ್ತೀಚೆಗೆ ನಿಧನರಾದ ಸಿಂಧು ತಾಯಿ ಸಪ್ಕಾಲ್ ಗರ್ಭಿಣಿಯಾಗಿದ್ದಾಗ ಗಂಡನ ಮನೆಯಿಂದ ಹೊರ ನೂಕಲ್ಪಟ್ಟು ಸ್ಮಶಾನ ಹಾಗೂ ರೈಲುನಿಲ್ದಾಣಗಳನ್ನೇ ತನ್ನ ವಾಸಸ್ಥಾನವನ್ನಾಗಿಸಿಕೊಂಡು ಅನಾಥ ಮಕ್ಕಳಿಗೆ ಅನಾಥಾಲಯವನ್ನು ಕಟ್ಟಿ ಅವರನ್ನು ಸಾಕಿ ಸಲುಹಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು.
ಹೀಗೆ ಜಗತ್ತಿನಲ್ಲಿ ಅದ್ಭುತವಾದುದನ್ನುಸಾಧಿಸಿದಸಾಧಕರಿಗೆ ಎಲ್ಲವೂ ಸುಮ್ಮನೆ ಸಿಕ್ಕಿಲ್ಲ, ಆ ಸಾಧನೆಯ ಹಿಂದೆ ಬೆವರು, ಹಸಿವು, ಆರ್ಥಿಕ ಸಂಕಷ್ಟಗಳು ಎಲ್ಲವೂ ಅವಿತುಕೊಂಡಿವೆ. ವಿಪರ್ಯಾಸವೆಂದರೆ ಇಂದು ಬಹುತೇಕರಿಗೆ ಬದುಕಿನ ರುಚಿ ಅಥವಾ ಬದುಕಿನ ವಾಸ್ತವ ಅರ್ಥವೇ ಆಗುತ್ತಿಲ್ಲವೆನೋ? ಮಕ್ಕಳಿಗೆ ಅನುಭವ ಪಡೆದುಕೊಳ್ಳುವ ವಾತಾವರಣವನ್ನು ನಾವು ಸೃಷ್ಟಿಸುತ್ತಿಲ್ಲ. ಇಂದು ಲಕ್ಷ ಲಕ್ಷ ಖರ್ಚು ಮಾಡಿ ಅಂತಾರಾಷ್ಟ್ರಿಯ ಶಾಲೆಗಳಿಗೆಕಳುಹಿಸುತ್ತಿದ್ದೇವೆ, ಈ ಶಾಲೆಗಳಲ್ಲಿ ಅಂಕಗಳನ್ನು ಪಡೆದುಕೊಳ್ಳುವ ಮಾರ್ಗವನ್ನು ಹೇಳಿ ಕೊಡಲಾಗುತ್ತಿದೆ ಹೊರತು ಬದುಕನ್ನು ನಡೆಸುವ ಮಾರ್ಗ ವನ್ನು ಎಲ್ಲಿಯೂ ಹೇಳಿ ಕೊಡುತ್ತಿಲ್ಲ, ಅದು ಹೇಳಿ ಕೊಡುವಂತಹದ್ದು ಅಲ್ಲ!
ಬದುಕನ್ನು ಅನುಭವಿಸಿಯೇ ಅರ್ಥ ಮಾಡಿಕೊಳ್ಳಬೇಕು. ಬಂದ ಸಮಸ್ಯೆಗಳಿಗೆ ಎದೆ ಸೆಟೆಸಿ ನಿಲ್ಲಬೇಕು, ಮುನ್ನುಗ್ಗಬೇಕು. ಕಷ್ಟ ಎನ್ನುವುದು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಎನ್ನುವದು ಅದಕ್ಕಾಗಿಯೇ ಅಲ್ಲವೇ? ಈಗ ನೀವು ಹೇಳಿ ಸಮಸ್ಯೆಗಳನ್ನೇ ಅನುಭವಿಸದ ಬದುಕು ನಿಜವಾದ ಬದುಕೇ?ಅನಾರೋಗ್ಯದಿಂದ ರೋಗಿಯೊಬ್ಬ ಆಸ್ಪತ್ರೆಗೆ ದಾಖಲಾದ, ಆತನನ್ನು ಆಸ್ಪತ್ರೆಯ ಕೋಣೆಗೆ ತರಲಾಯಿತು ಆ ಕೋಣೆಯ ಕಿಟಕಿಯ ಪಕ್ಕದ ಹಾಸಿಗೆ ಯಲ್ಲಿ ಮತ್ತೊಬ್ಬ ರೋಗಿಯು ದಾಖಲಾಗಿದ್ದ , ಹೀಗಾಗಿ ಇಬ್ಬರು ಪರಸ್ಪರ ಸ್ನೇಹಿತರಾದರು.
ಕಿಟಕಿಯ ಪಕ್ಕದಲ್ಲಿದ್ದ ರೋಗಿಯು ತನ್ನ ಸ್ನೇಹಿತನನ್ನು ಹೊರಗಿನ ಪ್ರಪಂಚದ ಸುಂದರತೆಯನ್ನು ವರ್ಣಿಸಿ ಸಂತೋಷ ಪಡಿಸುತ್ತಿದ್ದ. ಆಸ್ಪತ್ರೆಯ ಪಕ್ಕದಲ್ಲಿ ಬೆಳೆದ ಬೃಹತ್ ಮರಗಳ, ತೋಟಗಳ ಸೌಂದರ್ಯವನ್ನು ತಿಳಿಸುವುದರ ಜೊತೆಗೆ ಕಥೆ ಕವನಗಳ ಮೂಲಕ ಆತನನ್ನು ರಂಜಿಸುತ್ತಿದ್ದನು. ಈ ಸುಂದರವಾದ ವಾತಾವರಣವನ್ನು ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬ ಸ್ನೇಹಿತ ಬಹಳ ಹತಾಶನಾಗಿ ಕಿಟಕಿಯ ಪಕ್ಕದ್ದಲ್ಲಿದ್ದಸ್ನೇಹಿತನನ್ನು ಕಾಲಕ್ರಮೇಣ ದ್ವೇಷಿಸಲು ಆರಂಭಿಸಿದ. ಒಂದು ರಾತ್ರಿ ಕಿಟಕಿಯ ಪಕ್ಕದಲ್ಲಿದ್ದ ವ್ಯಕ್ತಿ ವಿಪರೀತ ಉಸಿರಾಟದ ತೊಂದರೆಯಿಂದ ಬಳಲಿ ಸತ್ತು ಹೋದ. ಆಗ ಈತ ಕಿಟಕಿಯ ಪಕ್ಕದಲ್ಲಿರುವ ಹಾಸಿಕಗೆ ಬೇಕೆಂದಾಗ ಅಲ್ಲಿಯ ಸಿಬ್ಬಂದಿ ಅವನ ಕೋರಿಕೆಯನ್ನು ನೆರವೇರಿಸಿದರು.
ಆದರೆ ಆತ ಬಹಳ ಕುತೂಹಲದಿಂದ ಕಿಟಕಿಯ ಆಚೆ ನೋಡಿದಾಗ ಯಾವುದೇ ಗಿಡ ಮರಗಳು ಇರದೇ, ಅದು ಕೇವಲ ಬಯಲು ಪ್ರದೇಶವಾಗಿತ್ತು. ಅವನ ಸ್ನೇಹಿತ ಕಷ್ಟದ ಸಮಯದಲ್ಲಿ ಸ್ವಲ್ಪ ಸಾಂತ್ವಾನ ನೀಡಲು, ತನ್ನ ಸ್ನೇಹಿತನ ಲೋಕವನ್ನು ಉತ್ತಮಗೊಳಿಸಲು ತನ್ನ ಕಲ್ಪನೆಯ ಮೂಲಕ ಆ ಅದ್ಭುತ ದೃಶ್ಯಗಳನ್ನು ಸೃಷ್ಟಿಸಿಕೊಂಡು ಕಥೆಗಳನ್ನು ಹೇಳಿದ್ದ ಎಂದು ತಿಳಿಯಿತು. ಸಂತೋಷವಾಗಿ ಬದುಕಲು, ಹೆಚ್ಚು ತುಂಬು ಜೀವನ ನಡೆಸಲು, ನಾವು ಕಷ್ಟಗಳನ್ನು ಎದುರಿಸುವಾಗ ನಮ್ಮ ದೃಷ್ಟಿಕೋನವನ್ನು ಬದಲಿಸುತ್ತಲಿರಬೇಕು ಎನ್ನುವುದು ಈ ಘಟನೆಯ ಸಾರಾಂಶ.
ಎರಡು ಕಲ್ಲುಗಳಿದ್ದವು, ಆ ಕಲ್ಲುಗಳನ್ನು ಶಿಲ್ಪಿ ತನ್ನ ಮನೆಗೆ ತಗೆದುಕೊಂಡು ಕೆತ್ತಲು ಆರಂಭಿಸಿದ. ಹೀಗೆ ಕೆತ್ತುವಾಗ ಒಂದು ಕಲ್ಲು ಶಿಲ್ಪಿಯ ಉಳಿ ಏಟನ್ನು ಸಹಿಸಿಕೊಳ್ಳಲಾಗದೇ, ಚೂರು ಚೂರಾಯಿತು. ಇನ್ನೊಂದು ಕಲ್ಲು ಮಾತ್ರ ಶಿಲ್ಪಿಯ ಉಳಿಯ ಏಟನ್ನು ಸಹಿಸಿಕೊಂಡು ಮೂರ್ತಿಯಾಯಿತು. ಆ ಮೂರ್ತಿಯನ್ನು ಊರಿನವರೆಲ್ಲ ಪೂಜೆಸುತ್ತಾರೆ. ಹೀಗಾಗಿ ಉಳಿ ಏಟು ಬಿದ್ದ ಮಾತ್ರಕ್ಕೆ ಕಲ್ಲು ಚೂರಾದಂತೆ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳುಎದುರಾದಾಗ ಜೀವನವನ್ನು ಹಾಳು ಮಾಡಿಕೊಳ್ಳದೇ ಆ ಸಮಸ್ಯೆಗಳನ್ನು ಎದುರಿಸಬೇಕು ಅಂದಾಗಲೇ ನಾವು ಮೂರ್ತಿಯಾಗಲು ಸಾಧ್ಯ ಎನ್ನುವ ಮೌಲ್ಯಯುತವಾದ ಕತೆಯನ್ನು ಶಾಲೆಯಲ್ಲಿ ಹೇಳುತ್ತಾರೆ. ಈ ನೀತಿ ಕತೆ ಕೇವಲ ಶಾಲೆಗೆ, ಸ್ಪರ್ಧೆಗೋ ಅಷ್ಟೇ ಸೀಮಿತವಾಗಿದೆ ನಿಜವಾದ ಬದುಕಿನಲ್ಲಿ ಅಳವಡಿಕೆಯಾಗಬೇಕು. ಪೆಟ್ಟು ತಿಂದಷ್ಟು ಪುಟಿದೆದ್ದು ನಿಲ್ಲುವ ಸಾಮರ್ಥ್ಯವನ್ನು ಬೆಳಸಿಕೊಳ್ಳಬೇಕು.