ಯುದ್ಧದಿಂದ ಪರಿಸ್ಥಿತಿ ಇನ್ನಷ್ಟು ಉಲ್ಬಣ
ಪ್ರಸ್ತುತ
ವಿಜಯ ದರ್‌ಡ
ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದಿಂದಾಗಿ ಯುರೋಪಿನ ಪರಿಸ್ಥಿತಿ ಮಾತ್ರ ಬಿಗಡಾಯಿಸಿಲ್ಲ ಅದರ ಬಿಸಿ ಭಾರತಕ್ಕೂ ತಟ್ಟಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುರುಮಾಡಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆ ಎಷ್ಟು ದಿನಗಳ ಕಾಲ ಮುಂದುವರಿಯಲಿದೆಎಂಬುದು ಯಾರಿಗೂ ಗೊತ್ತಿಲ್ಲ, ಆದರೆ ಅದರ ದುಷ್ಪರಿಣಾಮವನ್ನು ನಾವೆಲ್ಲ ದೀರ್ಘಕಾಲ ಅನುಭವಿಸ ಬೇಕಾಗಿದೆ. ಜಪಾನಿನ ವಿಶ್ವ ವಿಖ್ಯಾತ ನೊಮುರಾ ಹೋಲ್ಡಿಂಗ್ಸ್ ಎಂಬ ಸಂಸ್ಥೆ ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದ ಪರಿಣಾಮಗಳ ಬಗ್ಗೆ ಒಂದು ವರದಿಬಿಡು ಗಡೆ ಮಾಡಿದೆ. ಈ ಯುದ್ಧದಿಂದ ಬಾಧಿತವಾಗಲಿರುವ ರಾಷ್ಟಗಳ ಪೈಕಿ ಭಾರತ ಪ್ರಮುಖ ವಾದದ್ದು ಎಂಬುದು ಆ ವರದಿಯ ಮುಖ್ಯಾಂಶ. ಪ್ರಾಥಮಿಕ ದೃಷ್ಟಿಯಿಂದ ಗಮನಿಸುವು ದಾದರೆ ಅದರಲ್ಲಿ ಸತ್ಯಾಂಶವಿದೆ.
ಈ ಯುದ್ಧದ ದೂರಗಾಮಿ ಪರಿಣಾಮಗಳನ್ನು ವಿಶ್ಲೇಷಣೆ ಮಾಡುವುದಕ್ಕೆ ಮೊದಲು ಗಮನಿಸಬೇಕಾದ ಅಂಶವೆಂದರೆ ನ್ಯಾಟೋ ದೇಶಗಳ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಸದ್ಯೋ ಭವಿಷ್ಯದಲ್ಲಿ ಪರಿಹಾರವಾಗುವಂತಹದಲ್ಲ. ನ್ಯಾಟೋ ವಿಸ್ತರಣೆ ನಿಲ್ಲದ ವಿನಃ ರಷ್ಯಾ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸದು. ಹಾಗಾಗಿ ಇದೆಲ್ಲವೂ ಸದ್ಯದಲ್ಲಿ ಅಂತ್ಯ ಕಾಣುವ ಲಕ್ಷಣ ಕಾಣಿಸುತ್ತಿಲ್ಲ. ವಿಶಾಲವಾಗಿದ್ದ ಸೋವಿಯತ್ ಯೂನಿಯನ್ ಒಕ್ಕೂಟ ವನ್ನು ತುಂಡರಿಸುವುದಕ್ಕಾಗಿಯೇ ಅಮೆರಿಕ ಮತ್ತು ಐರೋಪ್ಯ ರಾಷ್ಟಗಳಿಂದ 1949ರಲ್ಲಿ ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಶನ್) ಸ್ಥಾಪಿತವಾಗಿತ್ತು.
ಒಂದಾಗಿದ್ದ ಸೋವಿಯತ್ ಯೂನಿಯನ್ 1991ರಲ್ಲಿ ವಿಘಟನೆಯಾಗಿ ಹದಿನೈದು ಹೊಸ ರಾಷ್ಟಗಳು ಅಸ್ತಿತ್ವಕ್ಕೆ ಬಂದವು. ಅವುಗಳಲ್ಲಿ ರಷ್ಯಾ ದೊಡ್ಡ ಭೂಭಾಗ. ರಷ್ಯಾವನ್ನು ಕಡೆಗಣನೆ ಮಾಡುವ ಉದ್ದೇಶದಿಂದಲೇ ಯುಎಸ್ ಮತ್ತು ಐರೋಪ್ಯ ಒಕ್ಕೂಟದಿಂದ ನ್ಯಾಟೋ ಸ್ಥಾಪನೆಯಾಯಿತು. ಜತೆಗೆ ತುಂಡು ತುಂಡಾದ ದೇಶಗಳನ್ನು ಅಮೆರಿಕ ಪ್ರಣೀತ ನ್ಯಾಟೋ ಸೇರುವಂತೆ ಅಮಿಷ ಒಡ್ಡಲಾಯ್ತು. ಲಾಟವಿಯಾ, ಎಸ್ಟೋನಿಯಾ, ಲಿಥುವೇನಿ ಯಾದಂತಹ ರಾಷ್ಟಗಳು ಈಗಾಗಲೇ ನ್ಯಾಟೋ ಸೇರಿವೆ. ಇನ್ನೂ ಮುಂದುವರಿದು, ಸೋವಿಯತ್ ಯೂನಿಯನ್ ಭಾಗವಾಗಿದ್ದ ಬಲ್ಗೇರಿಯಾ, ರೊಮಾನಿಯಾ, ಸ್ಲೋವೇನಿಯಾಗಳು ಕೂಡ ಈಗಾಗಲೇ ನ್ಯಾಟೋ ಸೇರಿಯಾಗಿದೆ.
ಈ ಪುಟ್ಟ ಪುಟ್ಟ ರಾಷ್ಟಗಳು ನ್ಯಾಟೋ ಸೇರುತ್ತಿರುವುದನ್ನು ನೋಡಿ ಹಲ್ಲು ಕಡಿಯುತ್ತಿದ್ದ ಪುಟಿನ್, ರಷ್ಯಾವನ್ನು ಇನ್ನಷ್ಟು ಬಲಶಾಲಿಯಾಗಿ ಸುವ ನಿಟ್ಟಿನಲ್ಲಿ ಸಾಕಷ್ಟು ಚಿಂತನೆ ಮಾಡುತ್ತಲೇ ಬಂದರು. ಯಾವಾಗ ಉಕ್ರೇನ್ ಕೂಡ ನ್ಯಾಟೋ ಸದಸ್ಯತ್ವಕ್ಕೆ ಮುಂದಾಯಿತೋ ಆಗ ರಷ್ಯಾದ ಸಹನೆಯ ಕಟ್ಟೆಯೊಡೆಯಿತು. ಇದೊಂದು ಬಗೆಯ ಸುಖಾಸುಮ್ಮನೆ ನಡೆಸಲಾಗಿರುವ ಮಿಲಿಟರಿ ಕಾರ್ಯಾಚರಣೆ. ಅಮೆರಿಕ ಮತ್ತು ನ್ಯಾಟೋ ಬಗ್ಗೆ ರಷ್ಯಾಗೆ ತೀವ್ರ ಅಸಹನೆ ಇದೆ. ಬಲಿಪಶುವಾಗಿರುವ ಉಕ್ರೇನ್ ಅತಂತ್ರವಾಗಿದೆ.
ಈ ಯುದ್ಧದಿಂದ ಭಾರತದ ಮೇಲೆ ಆಗಬಹುದಾದ ಪರಿಣಾಮಗಳೇನು ಎಂಬುದರತ್ತ ಬರೋಣ. ವಿಘಟನೆಗೆ ಮುಂಚಿನ ಸೋವಿಯತ್ ಯೂನಿಯನ್ ಇದೀಗ ರಷ್ಯಾ ಎಂದು ಕರೆಯಲ್ಪಡುತ್ತಿದ್ದು, ಇದು ಭಾರತದ ಮಿತ್ರರಾಷ್ಟವೇ ಆಗಿದೆ. ರಷ್ಯಾ ಸಹಕಾರದ ಕಾರಣದಿಂದಲೇ ಭಾರತ ಇಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಲಯುತ ಮಿಲಿಟರಿ ಪಡೆಯನ್ನು ಹೊಂದುವುದು ಸಾಧ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಾವು ಅಮೆರಿಕದೊಂದಿಗೂ ಸೌಹಾರ್ದಯುತ ಸಂಬಂಧಗಳನ್ನು ಹೊಂದಿದ್ದು, ಯುಎಸ್ ಮತ್ತು ರಷ್ಯಾ ಎರಡನ್ನೂ ಖುಷಿಯಾಗಿಡುವುದು ಕಷ್ಟದ ಕೆಲಸವೇ.
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಅತ್ಯಂತ ಸಹನೆಯಿಂದ ತನ್ನ ನಡೆಯನ್ನು ಪ್ರದರ್ಶಿಸುತ್ತ ಬಂದಿದೆ. ಅದು ರಷ್ಯಾ ಅಥವಾ ಉಕ್ರೇನ್ ಯಾರನ್ನೂ ಬೆಂಬಲಿಸಿಲ್ಲ. ಇತ್ತೀಚೆಗೆ ಪತ್ರಕರ್ತನೊಬ್ಬ ಜೋ ಬೈಡನ್ ಅವರನ್ನು ಪ್ರಶ್ನಿಸಿದಾಗ ಭಾರತ ಮತ್ತು ಯುಎಸ್ ಬಹುದೊಡ್ಡ ರಕ್ಷಣಾ ಒಡಂಬಡಿಕೆಯನ್ನು ಹೊಂದಿರುವ ಕಾರಣದಿಂದ ರಷ್ಯಾದಲ್ಲಿ ಆಗಿರುವ ಬಿಕ್ಕಟ್ಟಿನ ಬಗ್ಗೆ ಎರಡೂ ರಾಷ್ಟಗಳು ಸಮನಾದಅಭಿಪ್ರಾಯವನ್ನು ಹೊಂದಿವೆ ಎಂದಿದ್ದರು. ಭಾರತದ ಜತೆ ಈ ಕುರಿತಾಗಿ ಮಾತನಾಡುವುದಾಗಿ ಬೈಡನ್ ಆ ಕ್ಷಣಕ್ಕೆ ಹೇಳಿದ್ದರು ಕೂಡ.
ಆದರೆ ಯಾವುದೇ ಪರಿಹಾರ ಮಾರ್ಗಗಳು ಇದುವರೆಗೆ ಒಡಮೂಡಿಲ್ಲ. ಭಾರತ ತನ್ನ ತಟಸ್ಥ ನೀತಿಯನ್ನು ಮುಂದುವರಿಸಲಿದೆ. ಆದರೆ ಭಾರತಕ್ಕೆ ಪಂಚಶೀಲ ತತ್ವದಲ್ಲಿ ನಂಬಿಕೆ ಇದೆ. ಯುಎಸ್ ರಷ್ಯಾ ಸೇರಿದಂತೆ ಇನ್ನೂ ಅನೇಕ ರಾಷ್ಟಗಳ ಮೇಲೆ ಹೇರಬಹುದಾದ ನಿರ್ಬಂಧಗಳಿಂದ ಭಾರತಕ್ಕೇನಾದರೂ ತೊಂದರೆಯಾಗಬಹುದೇ ಎಂಬುದು ಈಗ ಎದುರಾಗಿರುವ ಪ್ರಶ್ನೆ. ಈಗಲೂ ಶೇ.65-70 ಮಿಲಿಟರಿ ಶಸ್ತ್ರಗಳನ್ನು ನಾವು ರಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತಿದ್ದೇವೆ.
ಚೈನಾ ಒಡ್ಡುತ್ತಿರುವ ಆತಂಕಗಳನ್ನು ಎದುರಿಸಲು ಸಮರ್ಥವಾಗಿರುವ ಅತ್ಯಾಧುನಿಕ ಎಸ್-400 ಮಿಲಿಟರಿ ವ್ಯವಸ್ಥೆ ರಷ್ಯಾದಿಂದಲೇ ಭಾರತಕ್ಕೆ ಬರುವುದಾಗಿದ್ದು, ಅದರ ಮೊದಲ ಹಂತದ ಆಮದು ಈಗಾಗಲೇ ಭಾರತಕ್ಕೆ ಬಂದಿಳಿದಿದೆ. ಇಷ್ಟೇ ಅಲ್ಲದೇ ರಷ್ಯಾ ಸಹಯೋಗ ದಲ್ಲಿ ಭಾರತದಲ್ಲಿ ದೇಶೀಯವಾಗಿ ಅತ್ಯಾಧುನಿಕ ರೈಫಲ್ ತಯಾರಿಕೆ ಮಾಡುವ  ಕುರಿತಾಗಿಯೂ ಒಡಂಬಡಿಕೆಯಾಗಿದೆ. ಇಷ್ಟೆಲ್ಲದರ ನಡುವೆಯೂ ಗಮನಿಸಬೇಕಾದ ಇನ್ನೊಂದು ವಿಚಾರವೆಂದರೆ ಅಮೆರಿಕ ಜತೆ ಭಾರತಕ್ಕಿರುವ ಸ್ನೇಹತ್ವದ ಕಾರಣದಿಂದ ರಷ್ಯಾ ರಾಜ ತಾಂತ್ರಿಕವಾಗಿ ಚೈನಾಗೆ ಹತ್ತಿರವಾಗಿದೆ. ಅಷ್ಟೇ ಅಲ್ಲ ಅದು ಪಾಕಿಸ್ತಾನದೊಂದಿಗೂ ಸೇರಿ ಜಂಟಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾ ಗಿದೆ. ಈಗಿನ ನಡವಳಿಕೆಗಳನ್ನು ಗಮನಿಸಿದಾಗ ಭಾರತಕ್ಕೆ ಅಮೆರಿಕಗಿಂತ ಹೆಚ್ಚಾಗಿ ರಷ್ಯಾದ ಸಖ್ಯ ಬೇಕಿದೆ.
ರಷ್ಯಾ ಮತ್ತು ಭಾರತ ರೂಪಾಯಿಗಳಲ್ಲಿ ತಮ್ಮ ವ್ಯವಹಾರಗಳನ್ನು ಮಾಡುತ್ತವೆಯಾದ್ದರಿಂದ ವ್ಯಾಪಾರ ಸಂಬಂಧಗಳು ಅಬಾಽತವಾಗಿ ನಡೆಯುವುದಕ್ಕೆ ಯಾವುದೇ ತಾಪತ್ರಯಗಳಿಲ್ಲ. ಹಾಗಿದ್ದರೆ ಅಮೆರಿಕ ಭಾರತದ ಮೇಲೂ ತನ್ನ ಸಿಟ್ಟನ್ನು ಪ್ರದರ್ಶಿಸಬಹುದೇ? ಅದು ಸಾಧ್ಯವೆಂದು ಅನಿಸುತ್ತಿಲ್ಲ, ಏಕೆಂದರೆ ಅಮೆರಿಕ ವ್ಯಾಪಾರ ನಿರ್ಬಂಧಗಳನ್ನು ರಷ್ಯಾ ಮೇಲೆ ಹೇರಿದ್ದು, ಆ ವಿಚಾರದಲ್ಲಿ ಭಾರತದ ಬಗ್ಗೆಚಕಾರವೆತ್ತದೇ ಮೌನವಾಗಿದೆ. ಎಸ್-೪೦೦ ಶಸ್ತ್ರ ಒಪ್ಪಂದ ವಿಚಾರವನ್ನು ಮುಂದಿಟ್ಟು ಅಮೆರಿಕ ಈಗಾಗಲೇ ಟರ್ಕಿ ಮೇಲೆ ನಿರ್ಬಂಧ ಹೇರಿದೆ. ಆದರೆ ಭಾರತದ ಬಗ್ಗೆ ಮೌನತಾಳಿದೆ.
ಇದಕ್ಕೆ ಪ್ರಮುಖ ಕಾರಣವೆಂದರೆ ಚೈನಾವನ್ನು ಬಗ್ಗುಬಡಿಯಲು ಅಮೆರಿಕಕ್ಕೆ ಭಾರತದ ಸಖ್ಯ ಬೇಕೇಬೇಕು. ಈ ನಿಟ್ಟಿನಲ್ಲಿ ರಾಜ ತಾಂತ್ರಿಕ ವಾಗಿ ಕೆಲವು ಸಮಸ್ಯೆಗಳು ಎದುರಾಗಬಹುದು, ಆದರೆ ಭಾರತ ಅದೆಲ್ಲವನ್ನೂ ಸಂಭಾಳಿಸಲು ಶಕ್ತವಾಗಿದೆ. ಭಾರತದ ಮುಂದಿರುವ ಬಹುದೊಡ್ಡ ಸವಾಲು ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು. ಭಾರತ, ರಷ್ಯಾ ದೊಂದಿಗೆ ಮಾತ್ರ ವ್ಯಾಪಾರ ವ್ಯವಹಾರಗಳನ್ನು ಹೊಂದಿಲ್ಲ, ಉಕ್ರೇನಿನೊಂದಿಗೂ ಭಾರತ ಆಮದು-ರಫ್ತು ವಹಿವಾಟನ್ನು ದೊಡ್ಡ ಮಟ್ಟದಲ್ಲಿ ನಡೆಸಿಕೊಂಡು ಬಂದಿದೆ. ಕಳೆದ ವರ್ಷ ಭಾರತ ದಿಂದ 19649 ಕೋಟಿ ರು. ಮೊತ್ತದ ಉತ್ಪನ್ನಗಳು ರಷ್ಯಾಗೆ ರಫ್ತಾಗಿದ್ದು, ಅಲ್ಲಿಂದ ಆಮದಾಗಿರುವ ಉತ್ಪನ್ನಗಳ ಮೌಲ್ಯ 49362 ಕೋಟಿ ರು. ಆಗಿತ್ತು.
ಉಕ್ರೇನಿಗೆ ಭಾರತ ದಿಂದ 3338 ಕೋಟಿ ರು.ಗಳ ಉತ್ಪನ್ನ ರಫ್ತಾಗಿದ್ದರೆ ಅಲ್ಲಿಂದ 15892 ಕೋಟಿ ರು. ಮೌಲ್ಯದ ಆಮದು ಕಳೆದ ವರ್ಷದಲ್ಲಿ ನಡೆದಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರತುಪಡಿಸಿ, ನಾವು ಅಲ್ಲಿಂದ ಔಷಧ, ಸೂರ್ಯಕಾಂತಿ ಎಣ್ಣೆ, ಸಾವಯವಉತ್ಪನ್ನಗಳು, ಪ್ಲಾಸ್ಟಿಕ್, ಕಬ್ಬಿಣ ಹೀಗೆ ಅನೇಕ ಉತ್ಪನ್ನಗಳನ್ನು ಆಮದುಮಾಡಿಕೊಳ್ಳುತ್ತೇವೆ. ಯುದ್ಧದ ಕಾರಣದಿಂದ ಈ ಎಲ್ಲ ವ್ಯಾಪಾರ ಗಳ ಮೇಲೆ ಖಂಡಿತವಾಗಿಯೂ ಹೊಡೆತ ಬೀಳಲಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುವ ಎಲ್ಲ  ಸಾಧ್ಯತೆ ಗಳೂ ಇವೆ. ಭಾರತ ಶೇ.85 ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಪೆಟ್ರೋಲಿಯಂ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಗೆ 100 ಡಾಲರ್ ದಾಟಿದೆ. ಭಾರತದ ಅನೇಕ ರಾಜ್ಯಗಳಲ್ಲಿವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿದ್ದು, ಏರುತ್ತಿರುವ ಬೆಲೆಗಳನ್ನು ಹತೋಟಿಯಲ್ಲಿಟ್ಟು ಕೊಳ್ಳುವುದು ಭಾರತಕ್ಕೆ ಸುಲಭದ ಮಾತಲ್ಲ. ಚುನಾವಣೆ ಮುಗಿದಾಕ್ಷಣ ನಿಶ್ಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಲಿದೆ. ನಾನು ಈಚೆಗೆ ವರದಿಯೊಂದನ್ನು ಗಮನಿಸಿರುವ ಪ್ರಕಾರ ಪೆಟ್ರೋಲಿಯಂ ಬೆಲೆ ಶೇ.೧೦ ಏರಿಕೆಯಾದರೂ ಸಹ ನಮ್ಮ ದೇಶದ ಜಿಡಿಪಿ ಶೇ.0.2ರಷ್ಟು ಬೀಳಲಿದೆ. ಜತೆಗೆ ಡಾಲರ್ ವಿನಿಮಯ ದರ ಏರಿಕೆಯಾಗುವ ಕಾರಣದಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳಲಿದೆ.
ಈಗಾಗಲೇ ಸಂಕಷ್ಟದಲ್ಲಿರುವ ಆರ್ಥಿಕ ವ್ಯವಸ್ಥೆ ಇನ್ನಷ್ಟು ಹದಗೆಡುವುದಕ್ಕೆ ಇವೆಲ್ಲವೂ ಪೂರಕ ಕಾರಣಗಳಾಗುತ್ತವೆ. ಮತ್ತು ಇದರಿಂದಅಭಿವೃದ್ಧಿ ಕುಂಠಿತವಾಗುತ್ತದೆ. ಜನಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಡಾಲರ್ ಬೆಲೆ ಹೆಚ್ಚಾದಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಏರಿಕೆಯಾಗುತ್ತದೆ. ಜತೆ ಜತೆಗೆ ಹಣದುಬ್ಬರ ಕೂಡ ಏರಿಕೆಯಾಗುತ್ತದೆ. ಇದರಿಂದ ಸಾಮಾನ್ಯ ಜನರಿಗೆ ದೊಡ್ಡ ಹೊರೆ ಬೀಳಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳೂ ಇದರ ದುಷ್ಪರಿಣಾಮಗಳಿಗೆ ಬಲಿಯಾಗಬೇಕಾದೀತು. ಅವರಲ್ಲಿ ಯುದ್ಧ ಮಾಡುತ್ತಿದ್ದರೆ, ಪರೋಕ್ಷವಾಗಿ ನಾವು ಅದರ ದುಷ್ಪರಿಣಾಮಗಳಿಗೆ ಬಲಿಯಾಗಬೇಕಾಗುತ್ತದೆ.
ಇಷ್ಟೆಲ್ಲದರ ನಡುವೆ ನನ್ನ ಮನಸ್ಸಿನಳುವ ಪ್ರಶ್ನೆಯೆಂದರೆ ಯಾಕಾಗಿ ಈ ಯುದ್ಧ ಶುರುವಾಗಿದೆ? ಉಕ್ರೇನ್ ಅಥವಾ ರಷ್ಯಾ ಎರಡೂ ಕಡೆಗಳಲ್ಲಿ ಮುಗ್ಧ ಜನರು ಬಲಿಯಾಗಿದ್ದಾರೆ. ಭಾರತ ಶಾಂತಿ ಮತ್ತು ಸಹಬಾಳ್ವೆಯನ್ನು ಪ್ರತಿಪಾದಿಸುವ ಪಂಚಶೀಲ ತತ್ವದಲ್ಲಿ ನಂಬಿಕೆ ಇಟ್ಟ ದೇಶವಾದ್ದರಿಂದ, ಇದೆಲ್ಲವನ್ನೂ ಕಂಡಾಗ ನಮಗೆ ದುಃಖವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ತೆಗೆದುಕೊಂಡ ಉಪಕ್ರಮನ್ನು ಮತ್ತು ಯುದ್ಧಬಾಧಿತ ಉಕ್ರೇನಿನಿಂದ ಭಾರತೀಯರನ್ನು ಕರೆತರುವಲ್ಲಿ ತೆಗೆದುಕೊಂಡ ತ್ವರಿತನಿರ್ಣಯಗಳನ್ನು ನಾನು ಶ್ಲಾಘಿಸುತ್ತೇನೆ.
ಭಾರತೀಯ ನಾಗರಿಕರ ಬಗ್ಗೆ ಅವರಿಗಿರುವ ಕಾಳಜಿ ಇಲ್ಲಿ ವ್ಯಕ್ತವಾಗುತ್ತದೆ. ಮತ್ತೊಮ್ಮೆ ನನ್ನ ಮನದಳುವ ಪ್ರಶ್ನೆ ಒಂದೇ ಆಗಿದೆ.ಈ ವಿಶ್ವ ಯಾಕೆ ಶಾಂತಿ ಮತ್ತು ಸೌಹಾರ್ದದಿಂದ ಬಾಳ್ವೆ ನಡೆಸುವುದನ್ನು ಬಯಸುತ್ತಿಲ್ಲ?