ಸುಮ್ಸುಮ್ಮನೇ ಬಯ್ಯಬೇಡ್ರಿ ? ಸುಲಭ ಅಲ್ಲಾರೀ !
ಅಭಿಮತ
ಜಿ.ಪ್ರತಾಪ ಕೊಡಂಚ
.@.
ಯುಕ್ರೇನ್ ಮೇಲಿನ ರಷ್ಯಾ ಆಕ್ರಮಣದ ವಿಷಮ ಪರಿಸ್ಥಿತಿಯಲ್ಲಿ, ಪ್ರಪಂಚದ ಬಲಿಷ್ಠ ರಾಷ್ಟಗಳೆನಿಸಿಕೊಂಡ ಅಮೆರಿಕ, ಚೀನಾ, ಇಂಗ್ಲೆಂಡ, ಫ್ರಾನ್ಸ್ ಇತ್ಯಾದಿ ರಾಷ್ಟ್ರಗಳೇ, ರಷ್ಯಾವನ್ನು ಬೆದರಿಸುವ ಸರ್ವ ತಂತ್ರಗಳನ್ನೂ ಒಂದರ ಮೇಲೊಂದರಂತೆ ಬಿಚ್ಚಿಡು ತ್ತಿವೆಯಷ್ಟೇ. ಯುಕ್ರೇನ್ ಅಲ್ಲಿರುವ ತಮ್ಮದೇ ನಾಗರಿಕರನ್ನು ಕರೆ ತರುವ ಗೊಡವೆಗೆ ಹೋಗದೆ ಯುಕ್ರೇನೊಂದಿಗೆ ನಾವಿದ್ದೇವೆ,ಆಕ್ರಮಣವನ್ನು ಖಂಡಿಸುತ್ತೇವೆ ಎಂದು ಪೋಸು ಕೊಡುತ್ತಿವೆ.
ಬಲಿಷ್ಠ ರಾಷಗಳೇ ಯುದ್ಧ ವಲಯಗಳಲ್ಲಿರುವ ತಂತಮ್ಮ ರಾಜತಾಂತ್ರಿಕರನ್ನು, ಪ್ರಮುಖ ರನ್ನೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ. ಭಾರತೀಯರ ಸುರಕ್ಷಿತ ವಾಪಾಸಾತಿಗೆ ಭಾರತ ಸರ್ಕಾರ ಆಪರೇಷನ್ ಗಂಗಾ ಹೆಸರಿನ ದಿಟ್ಟ ಕಾರ್ಯಾ ಚರಣೆಯ ಮೂಲಕ ವಿಶ್ವದ ಹುಬ್ಬೇರಿಸುವಂತೆ ಮಾಡಿದೆ. ಇಂತಹದರಲ್ಲಿ ನೇರವಾಗಿ ತನ್ನ ಸಂಪುಟದ ಕೆಲ ಮಂತ್ರಿ ಗಳನ್ನೇ ಯುದ್ಧ ಭೂಮಿಯ ಆಸುಪಾಸಿನ ಸ್ಥಳಗಳಿಗೆ ಕಳುಹಿಸಿ, ಅವರ ಸುಪರ್ದಿಯ ಈಗಾಗಲೇ ಸುಮಾರು ಆರುಸಾವಿರಕ್ಕೂ ಹೆಚ್ಚು ಭಾರತೀಯ ರನ್ನು ಮರಳಿ ಮನೆಗೆ ಸೇರಿಸಿ ರುವ, ಆ ನಿಟ್ಟಿನಲ್ಲಿ ಹೆಣಗುತ್ತಿರುವ ಭಾರತ ಸರಕಾರದ ನಡೆ ನಿಜಕ್ಕೂ ಮನ ಮುಟ್ಟುತ್ತಿದೆ.
ಅನಿವಾಸಿಗಳಿಗಂತೂ ಈ ಕ್ರಮಭಾರತ ಸರ್ಕಾರದ ಮೇಲೆಹೊಸ ವಿಶ್ವಾಸ, ಹೆಮ್ಮೆ ಮೂಡಿ ಸಿದೆ. ಭಾರತದ ಈ ಕ್ರಮವನ್ನು ಪ್ರಪಂಚವೇ ನಿಬ್ಬೆರಾಗಿ ನೋಡುತ್ತಿರುವಾಗ ನಮ್ಮ ನಡು ವಿನ ಕೊಂಕಿತರು ಅಪಸ್ವರ ಎತ್ತಿದ್ದಾರೆ! ಈ ಕೊಂಕಿತರ ಸೋಂಕು ಯುಕ್ರೇನ್‌ನಿಂದ ಮರಳಿದ ಒಂದೆರಡು ಭಾರತೀಯ ವಿದ್ಯಾರ್ಥಿಗಳಿಗೂ ಹಬ್ಬಿದಂತಿದೆ! ಅದನ್ನೇ ಬಳಸಿ ತಂತಮ್ಮ ರಾಜಕೀಯದ ದೊಂಬರಾಟಕ್ಕೆ ಶಕ್ತಿ ಭರಿಸಿಕೊಳ್ಳುವ ಪ್ರಯತ್ನದ ಶಂಕೆ ಕೂಡ ಅಲ್ಲಲ್ಲಿ ಗೋಚರಿಸಿದೆ. ಅಹುದಹು ದೆನಿಸುವಂತೆ ಚಿತ್ರಿಸಲ್ಪಟ್ಟ ಕೆಲವು ಕೊಂಕುಗಳಿಗೆ ಉತ್ತರಿಸುವ ಧನಾತ್ಮಕ ಪ್ರಯತ್ನವಿದಷ್ಟೇ.
ಸಂಭಾವ್ಯ ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಭಾರತೀಯರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವ ಸೂಚನೆ ಭಾರತ ಸರ್ಕಾರ ಬಹು ಹಿಂದೆಯೇ ಕೊಟ್ಟಿತ್ತು. ನಿಮ್ಮ ರಕ್ಷಣೆ ನಿಮ್ಮ ಹೊಣೆ ಎಂದು ಕೈ ಚೆಲ್ಲಿರುವ ಬಹುತೇಕ ರಾಷ್ಟ್ರಗಳಂತೆ ಸುಮ್ಮನಾಗದೇ, ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ನೆರವಿಗೆ ಬಂದಭಾರತ ಸರಕಾರ, ರಾಯಭಾರ ಕಛೇರಿ, ರಾಜತಾಂತ್ರಿಕ ಸಿಬ್ಬಂದಿ, ಸೇನಾ ಸಿಬ್ಬಂದಿ ಗಳ ಮೇಲೆ ಅಪಸ್ವರವೆತ್ತುವುದು ಎಷ್ಟು ಸರಿ? ಇಂತಹ ಕಾರ್ಯಾಚರಣೆಗಿಳಿದ ಸಿಬ್ಬಂದಿಗಳಿಗೋ, ವಿಮಾನಗಳಿಗೋ ತೊಂದರೆ ಯಾದರೆ ಭಾರತದ ಘನತೆಗೆ ವಿಶ್ವಮಟ್ಟದಲ್ಲಿ ಎಂತಹ ಆಪತ್ತು ಎಂಬುದರ ಕಿಂಚಿತ್ತಾದರೂ ಅರಿವು ಕೊಂಕಿತರಿಗಿದ್ದಿದ್ದರೆ, ಸರ್ಕಾರ ಅನಿವಾಸಿಗಳ ನೆರವಿಗೆ ತೆಗೆದುಕೊಂಡ ನಿರ್ಧಾರದ ಬೆನ್ನೆಲು ಬಾಗಿ ನಿಲ್ಲುತ್ತಿತ್ತು. ಆಗ ಕಾರ್ಯಾಚರಣೆಯಲ್ಲಿ ತೊಡಗಿದ ಸಿಬ್ಬಂದಿಗಳು ಮತ್ತು ಸಂಕಷ್ಟದಲ್ಲಿರುವ ಅನಿವಾಸಿಗಳ ಸ್ಥೈರ್ಯ ಹೆಚ್ಚಿಸಿದಂತಾಗುತ್ತಿತ್ತು.
ಮೊದಲಿಗೆ ಭಾರತ ಯುಕ್ರೇನ್‌ನಿಂದ ಅನಿವಾಸಿ ಗಳನ್ನು ಕರೆತರುವಲ್ಲಿ ವಿಫಲ ಎಂದು ಬೊಬ್ಬಿರಿದ ಕೊಂಕಿತರು, ಅನಂತರ ಸರ್ಕಾರ ಉತ್ತರಪ್ರದೇಶ ಚುನಾವಣೆಯ ಲಾಭಗೋಸ್ಕರ ಆಪರೇಷನ್ ಗಂಗಾ ಅಂತ ಹೆಸರಿಟ್ಟಿದೆ ಎಂದು ಕೂಗಾಡತೊಡಗಿತು. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯೆಂದು ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಲು ಕೋರದಿದ್ದದ್ದೇ ಅನಿವಾಸಿ ಭಾರತೀಯರ ಸುದೈವ!
ದೆಹಲಿಗೆ ಬಂದಿಳಿದವರ ಸ್ವಾಗತಕ್ಕೆ ಸರಕಾರ ಮಂತ್ರಿಗಳು ಮುನ್ನುಗ್ಗಿ ತಾವೇ ಕರೆ ತಂದವರಂತೆ ಪ್ರಚಾರ ಪಡೆಯುತ್ತಿದ್ದಾರೆ ಎಂಬ ಹುಯಿಲೆಬ್ಬಿಸಿತು. ಸರಕಾರಿ ದುಡ್ಡಿನ ನಾಲ್ಕೈದು ಕೆಜಿ ಅಕ್ಕಿ ಕೊಡಿಸಿ, ತಲತಲಾಂತರದಿಂದ ದೀನ ದಲಿತರನ್ನು ರಕ್ಷಿಸಿದ್ದೇ ನಾವೆಂದು ಎದೆತಟ್ಟಿಕೊಳ್ಳುವ, ಸಣ್ಣ ಫುಡ್ ಕಿಟ್ ಕೊಟ್ಟು, ಫೋಟೋ ತೆಗೆಸಿ ನೂರೆಂಟು ಜಾಲತಾಣದಲ್ಲಿ ಹಾಕಿಸ್ಕೊಂಡ ಸಾರ್ವಭೌಮರಗಿಂತ ಸರ್ಕಾರದ ಈ ಸಾಧನೆ ಬಣ್ಣಿಸಲಾಗದಷ್ಟು ದೊಡ್ಡದು. ಇದೆಲ್ಲಕ್ಕಿಂತ ಮುಖ್ಯವಾಗಿ ಸುದ್ದಿ, ಸಂಪರ್ಕ ಕಡಿದುಕೊಂಡಿರುವ ಯುಕ್ರೇನ್ ನ ಉಳಿದುಕೊಂಡಿರುವ ಇನ್ನಷ್ಟು ಭಾರತೀಯರ, ಮತ್ತಿಲ್ಲಿರುವ ಅವರ ಮನೆಯವರಿಗೆ ಸರಕಾರ ನಮ್ಮೊಂದಿಗಿದೆ ಎಂಬ ಸ್ಥೈರ್ಯ ತುಂಬುವ ಕಾರ್ಯ ಇದೆಂದು ನಿಮಗೇಕೆ ಅನಿಸಲಿಲ್ಲ? ಲಾಭ ಯಾರ ಪಾಲಾಗುತ್ತೆ? ಎಲ್ಲಿ, ಹೇಗೆ ಕೆಸರೆರೆಚಬಹುದು ಎಂಬ ಯೋಚನೆ ಬಿಟ್ಟು ನೀವು ಮುಂದಕ್ಕೆ ಸಾಗುವುದು ಯಾವಾಗ? ಇವೆಲ್ಲದರ ನಡುವೆ ಯುಕ್ರೇನ್ ನಲ್ಲಿ ಅಧ್ಯಕ್ಷ ಜಿಲೆನ್ಸ್ಕಿಯವರ ರಾಜಕೀಯ ಕಡುವಿರೋಧಿ, ನಿಕಟಪೂರ್ವ ಅಧ್ಯಕ್ಷ ಪೆಟ್ರೋ ಪೋರ್ಷೆನ್ಕೋ, ದೇಶಕ್ಕೆ ಮರಳಿ ನಡು ರಸ್ತೆಯಲ್ಲಿ ನಿಂತು ನಾಗರೀಕ ಸೈನ್ಯದ ನೇತೃತ್ವ ವಹಿಸಿಕೊಂಡ ದೃಶ್ಯಗಳು ಮಾಧ್ಯಮಗಳು ಬಿತ್ತರಿಸುತ್ತಿದವು.
ಪ್ರಸ್ತುತ ಆಡಳಿತದಿಂದ ಬಂಧನ ಭೀತಿ ಎದುರಿಸಿ, ದೇಶ ಬಿಟ್ಟು ಹೊರಗಿದ್ದ ಪೋರ್ಷೆನ್ಕೋ, ಸಂಕಷ್ಟದ ಸಮಯದಲ್ಲಿ ದೇಶಕ್ಕೆ ಮರಳಿ ತನ್ನ ರಾಜಕೀಯ ಕಡು ವಿರೋಧಿ ಝಲೆನ್ಸ್ಕಿ ಆಡಳಿತದ ಪರ ನಿಂತು ಹೋರಾಡಿದ್ದು ನಮ್ಮಲ್ಲಿನ ರಾಜಕಾರಣಿಗಳು ನೋಡಿರಲಿಕ್ಕಿಲ್ಲವೇನೋ! ರಾಜಕೀಯ ಲಾಭಕ್ಕೂ ಮೀರಿ ದೇಶಕ್ಕಾಗಿ, ಭಾರತೀಯರಿಗಾಗಿ ನಮ್ಮ ನಾಯಕರುಗಳು ಜೊತೆ ನಿಲ್ಲುವು ದೆಂದು? ಯುದ್ಧ ಪರಿಸ್ಥಿತಿ ಕಾಣಿಸುತ್ತಲೇ ವಿಮಾನಯಾನ ದರಗಳು ಹೆಚ್ಚಾದವು, ಹಾಗಾಗಿ ನಮ್ಮವರು ಅಲ್ಲಿ ಸಿಲುಕಿ ಕೊಂಡರು, ಇದಕ್ಕೆ ಭಾರತ ಸರ್ಕಾರದ ಬೇಜವಾಬ್ದಾರಿಯೇ ಹೊಣೆ ಎಂಬ ಕೂಗು ಅಲ್ಲಿ ಅಲ್ಲಿ ಕೇಳಿಸಿತು.
ಯುದ್ಧ ಬಿಡಿ, ಆಕಸ್ಮಿಕ ಬೇಡಿಕೆ ಹೆಚ್ಚಾದಾಗೆಲ್ಲ ವಿಮಾನಯಾನವೂ ಸೇರಿದಂತೆ ಇನ್ನೆಲ್ಲ ಪ್ರಯಾಣದ, ತುರ್ತು ಅವಶ್ಯಕತೆಗಳ ದರ ಗಗನಕ್ಕೇರುವುದು ಸಹಜ. ಬೆಂಗಳೂರಿಂದ ನಮ್ಮೂರಿಗೆ ತೆರುಳುವ ಬಸ್ ಟೀಕೆಟ್ಗಳು ವಿಮಾನಯಾನದ ಟೀಕೆಟ್ ಮೊತ್ತ ಕ್ಕಿಂತಲೂ ಹೆಚ್ಚಾದ ಹಲವು ನಿದರ್ಶನಗಳು ಹಬ್ಬ , ಸಾಲು ಸಾಲು ರಜೆಗಳ ಸಂಧರ್ಭಗಳಲ್ಲಿ ನಾವೆಲ್ಲ ನೋಡಿಯೇ ಇದ್ದೇವೆ. ಇದರಿಂದ ಕೊನೆಯ ಕ್ಷಣದಲ್ಲಿ ಹೊರಡುವ ನಿರ್ಧಾರಕ್ಕೆ ಬಂದ ಹಲವು ಭಾರತೀಯರಿಗೆ ಸಂಪನ್ಮೂಲದ ಕೊರತೆ ಎದುರಾಗಿರ ಬಹುದು.
ಆದರೆ ಇವೆಲ್ಲದಕ್ಕೆ ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂಬುದು ಎಷ್ಟು ಸಮರ್ಪಕ? ಭಾರತದಲ್ಲಿನ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ ಅದಕ್ಕೆ ಅಲ್ಲಿಗೆ ತೆರುಳುವ ಅನಿವಾರ್ಯತೆ ಬಂತು ಹಾಗಾಗಿ ಪ್ರಸ್ತುತ ಆಡಳಿತವನ್ನು  ಹೊಣೆಗಾರರನ್ನಾ ಗಿಸುವ ಹವಣಿಕೆ ಕೂಡ ಕಂಡು ಬಂತು. ಎಲ್ಲವೂ ಸರಿ ಇದೆ ಎಂದು ಸಮರ್ಥಿಸಲಾಗುವುದಿಲ್ಲ, ಆದರೆ ವ್ಯವಸ್ಥೆಯ ಬದಲಾವಣೆಗೆ ಈಗಿನ ಆಡಳಿತದಷ್ಟೇ ಜವಾಬ್ದಾರಿ ಹಿಂದಿನ ಆಡಳಿತಗಳಿಗೂ ಇದೆಯಲ್ಲವೇ? ಅದರಲ್ಲಂತೂ ಕರ್ನಾಟಕದಿಂದ ಆಯ್ಕೆಯಾದಪ್ರಸ್ತುತ ಕೇಂದ್ರ ಮಂತ್ರಿಗಳೊಬ್ಬರು, ಅಲ್ಲಿ ಓದುತ್ತಿರುವವವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನದ ಗುಣಮಟ್ಟವೇ ಕಡಿಮೆ,ಅವರಿಲ್ಲಿನ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಅರ್ಹತೆಯೇ ಹೊಂದಿಲ್ಲವೇನೋ ಎಂಬಂತ ವಿವಾದದ ಹೇಳಿಕೆ ತೇಲಿ ಬಿಟ್ಟರು.
ಉರಿಯುವ ಗಾಯಕ್ಕೆ ತುಪ್ಪ ಸವರುವ ಕೆಲಸ ಜವಾಬ್ದಾರಿಯುತ ಸ್ಥಾನದಲ್ಲಿರುವರು ಮಾಡಬಾರದು. ಭಾರತದಲ್ಲಿ ಅವಕಾಶ ಸಿಗಲಿಲ್ಲವೆಂದು, ಅವಕಾಶ ಅರಸಿ ಹೊರಗಡೆ ಕಲಿಯುತ್ತಿರುವವರೆಲ್ಲ ನಿಮ್ಮ ದೃಷ್ಟಿಯಲ್ಲಿ ಕಳಪೆ ಸಾಧನೆಯವರೇ? ನಿಮ್ಮಂತಹ ಬಹುತೇಕ ರಾಜಕಾರಣಿಗಳ ಮಕ್ಕಳು ವಿದೇಶದಲ್ಲಿ ಓದುವುದು ಇದೆ ಕಾರಣಕ್ಕಿರಬಹುದೇ? ಭಾರತದಲ್ಲಿರುವ ಮೀಸಲಾತಿ ಪದ್ದತಿ ಯಿಂದ ಪ್ರತಿಭಾವಂತರಿಗೂ ವೈದ್ಯಕೀಯ ಶಿಕ್ಷಣ ಕಷ್ಟಸಾಧ್ಯ, ಮತ್ತು ದುಬಾರಿ.
ಹಾಗಾಗಿ ನಮ್ಮ ಮಗನ ಕನಸು ನನಸು ಮಾಡುವ ಮಾರ್ಗವಿದೆಂದು ಈ ಸನ್ನಿವೇಶದಲ್ಲಿ ಜೀವ ತೆತ್ತ ವಿದ್ಯಾರ್ಥಿಯ ಪಾಲಕ ರೊಬ್ಬರು ನೋವಿನಿಂದ ಹೇಳಿದ ಮಾತು, ಇನ್ನೊಂದು ರೀತಿಯ ಸಂಘರ್ಷವನ್ನೇ ಹುಟ್ಟಿ ಹಾಕಿತು. ಇವೆಲ್ಲ ಸಂಪೂರ್ಣ ಸಮರ್ಪಕವಾಗಿದೆ ಎಂದು ಹೇಳುತ್ತಿಲ್ಲ ಆದರೆ ಇವೆಲ್ಲವನ್ನೂ ಚರ್ಚಿಸುವವರ ಉದ್ದೇಶ ಇವುಗಳನ್ನು ಸರಿಪಡಿಸುವತ್ತಇರಲಿಲ್ಲ. ವ್ಯವಸ್ಥೆ ಬದಲಾವಣೆಯ ಬದಲು ಸಂಘರ್ಷ ಹುಟ್ಟುಹಾಕಿಸುವ, ಆ ಮೂಲಕ ರಾಜಕೀಯ ಲಾಭ ಎತ್ತಿಕೊಳ್ಳುವ ಹುನ್ನಾರದ ಛಾಯೆ ಕಂಡಿದ್ದು ಸುಳ್ಳಲ್ಲ!
ಇನ್ನು ಬಂದು ತಲುಪಿದ ಕೆಲ ವಿದ್ಯಾರ್ಥಿಗಳು ಸಮರ್ಪಕ ವ್ಯವಸ್ಥೆ ಇರಲಿಲ್ಲವೆಂಬ ಅಪಸ್ವರ ತೆಗೆದಿzರೆ. ಅವರು ಮೈಲುಗಟ್ಟಲೆ ನಡೆದೋ, ಕಷ್ಟ ಪಟ್ಟು ಸುರಕ್ಷಿತ ವಲಯ ತಲುಪಿ, ದೇಶವಾಸಿಗಳ ಜೊತೆ ಸೇರಿಕೊಂಡಿದ್ದರು. ಅವರಾದರೂ ಊಹಿಸಲಾ ಸಾಧ್ಯ ವಾದ ಯುದ್ಧ ಭೂಮಿಯ ನಡುವಿನಿಂದ ಬದುಕಿ ಬಂದ ಆಘಾತದಲ್ಲಿ ಮಾತಾಡಿರಬೇಕು ಅನಿಸುತ್ತದೆ. ಆದರೂ ಅಲ್ಲಿ ನಡೆಯಿ ತ್ತಿರುವುದು ಎರಡು ದೇಶಗಳ ಜೊತೆಗೂಡಿ ನಡೆಸಿಕೊಡುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಎರಡು ದೇಶಗಳ ನಡುವಿನ ಯುದ್ಧ ಎಂಬ ಅರಿವು ಅವರಿಗಿರಬೇಕಾದದ್ದು ಅವಶ್ಯ.
ಅಂತಹ ವಿಷಮ ಸನ್ನಿವೇಶದಲ್ಲಿ ಎಲ್ಲವೂ ಎಂದಿನಂತೆ, ಅಂದುಕೊಂಡಂತೆ ನಡೆಯುವುದಿಲ್ಲ. ಎರಡು ಮನೆಯವರು ಸೇರಿ ಕೊಂಡು ಮಾಡುವ ಸಮಾರಂಭದ ಎಲ್ಲರನ್ನು ಮಾತಾನಾಡಿಸಿಕೊಂಡು, ನೆಂಟರಿಷ್ಟರ ಅವಶ್ಯಕತೆಗಳನ್ನು ಪೂರೈಸಿ ಕೊಡಲಾ ಗದ ಸನ್ನಿವೇಶಗಳು ಸಾಮಾನ್ಯ. ತಮ್ಮವರಲ್ಲದವರನ್ನು ಯುಕ್ರೇನ್ ನಾಗರೀಕರು ಹೊರ ಹೋಗದಂತೆ ತಡೆಯುತ್ತಿದ್ದಾರೆ. ಯುದ್ಧ ಭೂಮಿಯ ನಡುವೆ, ನಮ್ಮವರ ಮುತುವರ್ಜಿ ತೆಗೆದುಕೊಂಡು, ಅವಶ್ಯಕತೆ ಪೂರೈಸಬೇಕೆಂಬ ನೀರಿಕ್ಷೆಯೇ ಅಸಮಂಜಸ.
ಹೀಗಿರುವಾಗ ಯುದ್ಧ ಪೀಡಿತ ಎರಡೂ ಸರ್ಕಾರಗಳ ಪ್ರಮುಖರೊಂದಿಗೆ ಚರ್ಚಿಸಿ, ಭಾರತದ ರಾಷ್ಟ್ರ ಧ್ವಜವನ್ನು ಬಳಸಿಕೊಂಡು ಸುರಕ್ಷಿತ ವಲಯ ತಲುಪುವಂತೆ ವ್ಯವಸ್ಥೆ ಕಲ್ಪಿಸಿದ ಭಾರತ ಸರ್ಕಾರದ ನಡೆ, ಕಳಕಳಿ ಅಭಿನಂದನೀಯ. ಮನೆಯೊಂದರಲ್ಲಿ ತಂದೆ, ತಾಯಿಯರ ಜಗಳದಲ್ಲಿ ಅಲ್ಲಿದ್ದ ನೆರೆ ಮನೆಯ ಮಕ್ಕಳನ್ನು ರಕ್ಷಿಸುವ ಸೂಕ್ಷ್ಮತೆಯೇ ನಿಭಾಯಿಸಲು ಕಷ್ಟವೆಂದಾದಾಗ, ಎರಡು ದೇಶಗಳ ನಡುವಿನ ಯುದ್ಧದಲ್ಲಿ ಇದು ಹೇಗೆ ಸಾಧ್ಯ? ತಾಯ್ನಾಡಿಗೆ ಮರಳಿದ, ಮರಳುವ ನೀರಿಕ್ಷೆಯಲ್ಲಿರುವ ಎಲ್ಲ ಅನಿವಾಸಿಗಳೂ ಭಾರತದ ಸರ್ಕಾರದ ಕ್ರಮವನ್ನು ಕೃತeತೆಯಿಂದ ನೋಡಬೇಕಾಗಿದೆ.
ತಾತ್ಕಾಲಿಕ ನೆಲೆ ತಲುಪಲು ಹಲವಾರು ಸಂಕಷ್ಟಗಳನ್ನು ಅವರು ಎದುರಿಸಿದ್ದರೂ, ನೆರೆ ದೇಶಗಳ ಪ್ರವೇಶಕ್ಕೆ, ತಾತ್ಕಾಲಿಕ ನೆಲೆಗಳವ್ಯವಸ್ಥೆಗಳಿಗೆ, ಸರಕಾರದ್ದೇ ಖರ್ಚಿನಲ್ಲಿ ಭಾರತಕ್ಕೆ ಕರೆತರುವ ಭಾರತ ಸರ್ಕಾರದ ಅವಿರತ ಶ್ರಮ ಪ್ರಪಂಚದ ಬೇರಾವ ದೇಶ ಗಳೂ ಮಾಡಿಲ್ಲ. ಹೀಗಿದ್ದೂ, ಬಿಸ್ಕೆಟ್ ಬಿಟ್ಟು ಬೇರೇನೂ ಸಿಕ್ಕಿಲ್ಲ, ತಾತ್ಕಾಲಿಕ ನೆಲೆ ತಲುಪುವ ತನಕ ಇವರು ನೆರವಿಗೇ ಬರಲಿಲ್ಲ, ಊಟೋಪಚಾರ ಸರಿಯಿಲ್ಲ ಎಂಬ ಕೊಂಕು ಮಾತುಗಳು, ಚಿಕ್ಕಂದಿನಲ್ಲಿ ಕೇಳಿದ್ದ, ಮಿತ್ರ ಮಂಗನ ಹೃದಯ ತಿನ್ನಲು ಹೊಂಚು ಹಾಕಿದ್ದ ಮೊಸಳೆಯ ಕತೆಯನ್ನು ಮತ್ತೊಮ್ಮೆ ನೆನಪಿಸುತ್ತಿದೆ.
ಬದುಕಿನ ನೀರಿಕ್ಷೆಗಳೇ ಹಾಗಲ್ಲವೇ? ಮೊದಲು ಬದುಕಿದರೆ ಸಾಕೆಂಬ ಆಸೆ, ನಂತರ ಇನ್ನೊಂದಾಸೆ, ಅದು ತೀರಿದರೆ ಇನ್ನೊಂದು ಬಯಕೆ, ಹೀಗೆ ನೀರಿಕ್ಷೆಗಳಿಗೆ ಕೊನೆಯೇನೆಂಬುದೇ ಇಲ್ಲ. ಹಾಗಾದರೆ ಧನ್ಯತೆಯ ಮಾತೆಲ್ಲಿ?