ಪರಿಹಾರಕ್ಕಾಗಿ ಹೋರಾಟವೋ, ಹೋರಾಟ ಅಪರಿಹಾರ್ಯವೋ ?
ವಿಶ್ಲೇಷಣೆ
ವಿನಯ್‌ ಖಾನ್
vinaykhan078@.
ಒಬ್ಬ ಶಾಸಕನಾದ ಮೇಲೆ ಊರಿನ ಮುಂದೆ ಎಲೆಕ್ಷನ್ ಹತ್ತಿರವಿದ್ದಾಗ ರೋಡ್ ಮಾಡಿಸಿದರೆ, ಸಚಿವನಾದವರು ಕಾರ್ಯಕ್ರಮಗಳಿಗೆ ಹಾಜರಾದರೆ, ಸಿಎಂ ಆದವರು ಬಲಿಷ್ಠ ಸಮಾಜಕ್ಕೆ ಕೆಲವು ಕೋಟಿ ಅನುದಾನ ಕೊಟ್ಟರೆ, ಪಿಎಂ ಆದವರು ಕೆಲವಿಷ್ಟು ಯೋಜನೆಗಳನ್ನು ರೂಪಿಸಿದರೆ ಸಾಲುತ್ತಾ?
ಕಾಂಗ್ರೆಸ್ ವತಿಯಿಂದ ನಡೆದ ಮೇಕೆದಾಟು ಯೋಜನೆಗೆ ಒತ್ತಾಯಿಸುವ ಪಾದಯಾತ್ರೆ ಮೊನ್ನೆ ಸಮಾರೋಪಗೊಂಡಿತು, ಅದರಲ್ಲೂ ಹಲವಾರು ರಾಜಕೀಯ ಕೆಸರಾಟಗಳೂ ನಡೆದವು, ಆದರೂ ಛಿದ್ರ ಛಿದ್ರವಾಗುವ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್ ಅನ್ನು ಡಿಕೆಶಿ 165ಕಿಲೋಮೀಟರ್ ನಡೆಸಿದ್ದೇನೂ ಕಡಿಮೆ ಅಲ್ಲ ಬಿಡಿ. ಆದ್ರೆ ಇಲ್ಲಿ ಪ್ರಶ್ನೆ ಹೋರಾಟದ್ದಲ್ಲ, ಈ ಹೋರಾಟದ ಸಫಲತೆಯದ್ದು. ಅಂದರೆ ಇಷ್ಟು ದಿನ ಬೆಂಗಳೂರಿಗೆ ನೀರು ಸರಬರಾಜು ಮಾಡಲು ಹೋರಾಟ, ನೀರಿಗಾಗಿ ಹೋರಾಟ ಅಂತ ಕೋವಿಡ್ ಅನ್ನು ಲಕ್ಷಿಸದೆ, ಟ್ರಾಫಿಕ್ ಅನ್ನು ಲಕ್ಷಿಸದೆ ಹೋರಾಡಿದರಲ್ಲ; ಈ ಹೋರಾಟ ನಿಜವಾಗಿಯೂ ನೀರಿಗಾಗಿಯೇ ಆಗಿತ್ತೇ? ಅಥವಾ ರಾಜಕೀಯಕ್ಕಾಗಿಯೆ? ಎಲೆಕ್ಷನ್ ಸಮೀಪ ಬಂದಾಗ ಇಂಥ ಹೋರಾಟ ಗಳು ಪ್ರಶ್ನೆಗಳನ್ನು ಹುಟ್ಟು ಹಾಕುವುದು ಸಹಜ.
ಇನ್ನು ಹೋರಾಟಕ್ಕೆ ಬಿಜೆಪಿ ಅಷ್ಟೇನೂ ವಿರೋಧಿಸಲಿಲ್ಲ. ಏಕೆ? ಅದರಲ್ಲೂ ತನ್ನ ರಾಜಕೀಯ ಬೇಳೆ ಬೇಯಿಸಕೊಳ್ಳುವುದಕ್ಕೆ ನೋಡಿದ್ದು ಸುಳ್ಳಲ್ಲ. ಎಲ್ಲ ದಿನ ಮಾದ್ಯಮ ಗಳಲ್ಲಿ ಜಾಹೀರಾತಿನ ಮೂಲಕ, ಸೋಷಿಲ್‌ಮೀಡಿಯಾದಲ್ಲಿ ಸಾರಿದ್ದು ನೀರನ್ನಲ್ಲ. ತಾವು ಮಾಡಿಕೊಂಡು ಬಂದ ಅಸಂಬದ್ಧ ಸಾಧನೆಗಳನ್ನೇ ತಮಿಳುನಾಡಿನಲ್ಲಿ ಮೇಕೆದಾಟು ಹೋರಾಟದ ವಿರುದ್ಧವಾಗಿ ಅಣ್ಣಾಮಲೈ ಮಾತನ್ನೂ ಕೇಳಿದ್ದೇವೆ. ಅದರಲ್ಲೂ ಸಿ.ಟಿ.ರವಿ ಯವರನ್ನು ಪತ್ರಕರ್ತರು ‘ನೀವು ಯಾರ ಪರ’ ಎಂದಿದ್ದಾಗ ಭಾರತದ ಪರ ಎಂದು ಹೇಳಿ ನಗೆಪಾಟಲಿ ಗೀಡಾಗಿರು ವುದು ಕಣ್ಣುಮುಂದೆಯೇ ಇದೆ.
ಹಾಗೆ ಜೆಡಿಎಸ್‌ನ ವರಿಷ್ಠ ದೇವೆಗೌಡರು ಮೇಕೆದಾಟು ಹೋರಾಟಕ್ಕೆ ಬೆಂಬಲ ಕೊಟ್ಟರೂ, ಅವರ ಮಗ ಕುಮಾರಸ್ವಾಮಿ ರಾಜಕೀಯ ನಾಟಕ ಎಂದು ಕೈತೊಳೆದು ಕೊಂಡಿದ್ದನ್ನು ನೋಡುತ್ತಿದ್ದೇವೆ. ಮೇಲ್ನೋಟಕ್ಕೆ ಇದು ಒಳ್ಳೆಯ ಪ್ರಸ್ತಾವ, ಹೋರಾಟ, ಯೋಜನೆ ಅಂತ ಅನ್ನಿಸಿದರೂ, ಇದು ಅಷ್ಟೊಂದು ದೂರದೃಷ್ಟಿಯ ಹೋರಾಟವೇನಲ್ಲ! ಮೇಕೆದಾಟು ಆಣೆಕಟ್ಟಿಗಾಗಿ ನಡೆಯುವ ಅರಣ್ಯನಾಶ, ತೋಟ, ಹೊಲ, ಗದ್ದೆಗಳ ನಾಶ, ಜನ ಹಾಗೂ ಪ್ರಾಣಿಪಕ್ಷಿಗಳ ವಸತಿ ನಾಶ,ಅರಣ್ಯ ನಾಶ ಜಾಸ್ತಿಯಾಗುತ್ತಾ ಹೋದಂತೆ ಅಂತರ್ಜಲ ಕುಸಿತ, ಮಳೆ ಕಡಿಮೆ, ಬೆಳೆ ಕುಸಿತ ಇವೆಲ್ಲವೂ ಯಾರ ಜಾಗೃತಿಯಲ್ಲೂ ಇಲ್ಲವೇ? ಹಾಗೆಯೇ ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಡಿಎಮ್‌ಕೆ ಮೈತ್ರಿ ಸರಕಾರ ಇದೆ.
ಕಾಂಗ್ರೆಸ್‌ನವರು ಕರ್ನಾಟಕದಲ್ಲಿ ಹೋರಾಟ ಮಾಡುವ ಬದಲು ತಮಿಳುನಾಡು ಸರಕಾರದ ಜತೆ ಮಾತನಾಡಿ ಒಂದು ಒಪ್ಪಂದ ಮಾಡಿ ಕೊಂಡಿದ್ದರೆ ಅವರಿಗೆ ಹೋರಾಟ ಮಾಡುವ ಪ್ರಶ್ನೆಯೇ ಇರುತ್ತಿರಲಿಲ್ಲ.! ಕಾಂಗ್ರೆಸ್‌ನ ಸರಕಾರವಿದ್ದಾಗಲೂ ಬೆಂಗಳೂರಿನಲ್ಲಿ ನೀರಿನ ಅಭಾವವಿತ್ತು. ಅವಾಗಾದರೂ ಈ ಯೋಜನೆಗೆ ಅಸ್ತು ಎಂದಿದ್ದರೆ ಹೋರಾಟದ ಹಕೀಕತ್ ಇರುತ್ತಿತ್ತ? ಈ ನಾಟಕಗಳನ್ನೆಲ್ಲ ನೋಡಿದಾಗ ಜನರಲ್ಲಿ ಏಳುವ ಪ್ರಶ್ನೆ ಈ ಹೋರಾಟ ಯಾಕೆ, ಯಾರಿಗೆ ಬೇಕಿತ್ತು? ಹಾಗೆಯೇ ಬಿಜೆಪಿ ಏನು ಕಡಿಮೆಯಿಲ್ಲ, ಅವರದ್ದು ಅಧಿಕಾರವಿಲ್ಲ ದಿದ್ದಾಗ, ಅಧಿಕಾರಕ್ಕೆ ಬಂದ ಮೇಲೆ ಬೇಬೇರೆ ಕಾರ್ಯ ಚಟುವಟಿಕೆಗಳು ಬದಲಾಗುವುದನ್ನು ನೋಡುತ್ತಿರುತ್ತೇವೆ.
ಕುಮಾರಸ್ವಾಮಿಯವರ ಸರಕಾರವಿದ್ದಾಗ ಜಿಂದಾಲ್ ಕಂಪನಿಗೆ 3667 ಎಕರೆ ಭೂಮಿ ಮಾರಲು ಹೊರಟಿದ್ದನ್ನು ವಿರೋಧಿಸಿದ್ದ ಆಗಿನವಿಪಕ್ಷ ಬಿಜೆಪಿ, ನಂತರ ಯಡಿಯೂರಪ್ಪನವರ ಸರಕಾರ ಬಂದಾಗ ಅದೇ ಜಿಂದಾಲ್‌ಗೆ ಭೂಮಿ ಯನ್ನು ಮಾರಟ ಮಾಡಲು ಹೊರಟಿದ್ದ ರಲ್ಲ?! ಇದರಲ್ಲಿ ಇವರಿಗೆ ಕಂಡಿದ್ದು ಬರೀ ರಾಜಕಾರಣ, ಜಿಂದಾಲ್ ಏನು ಯಾವುದೇ ರಾಜಕೀಯ ಬೆಂಬಲಿತ, ಅಥವಾ ರಾಜಕಾರಣಿಯ ಕಂಪನಿಯಲ್ಲ. ಬೇನಾಮಿಯೂ ಅಲ್ಲ, ಸಾವಿರಾರು ಜನಕ್ಕೆ ಊಟ ಹಾಕಿ, ಕೋಟ್ಯಂತರ ರುಪಾಯಿಗಳ ವಹಿವಾಟು ಮಾಡಿ, ದೇಶ ವಿದೇಶ ದಲ್ಲಿ ತನ್ನದೇ ಛಾಪು ಮೂಡಿಸಿರುವ ಕಂಪನಿ.
ಹಾಗೆಯೇ ಜಿಂದಾಲ್ ಬಿಟ್ಟಿಯಾಗಿಯೂ ಭೂಮಿಯನ್ನು ಕೇಳುತ್ತಿರಲಿಲ್ಲ. ಹಲವಾರು ವರ್ಷಗಳಿಂದ ಅಲ್ಲಿಯೇ ತನ್ನ ಉತ್ಪನ್ನಗಳನ್ನು ಉತ್ಪಾದಿಸುತ್ತಿತ್ತು. ಸರಕಾರದ ನಿಯಮಾವಳಿಯ ಮುಖಾಂತರವೇ ಭೂಮಿ ಹಸ್ತಾಂತರದ ಪ್ರಸ್ತಾಪವಿಟ್ಟಿತ್ತು. ಈ ರಾಜಕಾರಣಿಗಳು ಜಿಂದಾಲ್‌ಗೆ ಭೂಮಿ ಹಸ್ತಾಂತರದ ವಿರುದ್ಧ ಧ್ವನಿ ಎತ್ತುವುದನ್ನು ಬಿಟ್ಟು ತಮ್ಮ ಪಕ್ಷದಲ್ಲೋ, ವಿರೋಧ ಪಕ್ಷದಲ್ಲೋ, ಅಧಿಕಾರಿ ವರ್ಗ ದರೋ ನುಂಗಿದ್ದ ಭೂಮಿಯ ಬಗ್ಗೆ ಯಾರೂ ಸೊಲ್ಲೆತ್ತಲೇ ಇಲ್ಲ!
ಮಹಾದಾಯಿ ಹೋರಾಟವೂ ಅಷ್ಟೇ, ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕದ ಹಲವು ಕಡೆ ನೀರಿನ ಅಭಾವವಿದೆ, ಧಾರವಾಡ,ಗದಗ, ಬಾಗಲಕೋಟೆ ಜಿಲ್ಲೆಯ ಹಲವೆಡೆ ನೂರಾರು ಚಳವಳಿಗಳು ನಡೆದವು, ಆ ಚಳವಳಿಗೆ ಸಿನಿಮಾ ತಾರೆಯರಿಂದ, ರಾಜಕಾರಣಿ ಗಳು, ಕನ್ನಡ ಪರ ಸಂಘಟನೆಗಳು ಕೈ ಗೂಡಿಸಿದವು, ಇದರಿಂದ ಬಿಜೆಪಿ ಕಾಂಗ್ರೆಸ್ ಹೋರತೇನಲ್ಲ. 2018ರ ಚುನಾವಣಾ ಪ್ರಚಾರದಲ್ಲಿ ಮಹಾದಾಯಿ ಕಳಸಾ-ಬಂಡೂರಿ ನಾಲಾದ ಯೋಜನೆಗೆ ಆದ್ಯತೆ ಕೊಡುತ್ತೇವೆ ಎಂದವರು.
ಅವರ ಸರಕಾರ ಬಂದು ಹೋದ ಮೇಲೂ ಆ ಯೋಜನೆ ಪೇಪರ್‌ಗಳನ್ನು ಬಿಟ್ಟು ಹೊರಗೆ ಬರಲೇ ಇಲ್ಲ! ಹಾಗೆಯೇ ಭದ್ರಾ ಮೇಲ್ದಂಡೆ ಯೋಜನೆ! ಎತ್ತಿನಹೊಳೆ ಯೋಜನೆ ಸಹ! ಈ ಎಲ್ಲ ಹೋರಾಟ, ಹಾರಾಟ ನಡೆಸಿದವರು ಅಧಿಕಾರಕ್ಕೆ ಬಂದಮೇಲೆ ಪೇಪರ್‌ನಲ್ಲಿ ಬಿಟ್ಟು ಆ ಯೋಜನೆಗಳನ್ನು ಮಾಡುವ ಗೋಜಲಿಗೆ ಹೋಗಲಿಲ್ಲವಲ್ಲ! ಹಾಗೆಯೇ ಹಿಂದುತ್ವದ ಪಾರ್ಟಿ ಅಂತ ಗುರುತಿಸಿಕೊಳ್ಳುವ ಬಿಜೆಪಿ ಅಧಿಕಾರದಲ್ಲಿ ಇರದೇ ಇದ್ದಾಗ ತೋರಿಸೋ ಹಿಂದುತ್ವ(!?), ಮಾತಾಡೋ ಮಾತುಗಳು, ಆ ಹೋರಾಟದ ಮನೋಭಾವ ಆಧಿಕಾರ ದಲ್ಲಿದ್ದಾಗ ಎಲ್ಲಿಗೆ ಹೋಗುತ್ತದೆ? ಸಿದ್ದರಾಮಯ್ಯನವರ ಕಾಲದಲ್ಲಿ 32ಕ್ಕೂ ಹೆಚ್ಚು ಹಿಂದೂಪರ ಕಾರ್ಯಕರ್ತರ ಕೊಲೆ ಗಳಾದಾಗಲೂ ಮಾತನಾಡಿದ ಮಾತುಗಳು ಈ ಹರ್ಷ ಕೊಲೆಯಂಥ ಸಂದರ್ಭದಲ್ಲಿ ನೆನಪಾಗುತ್ತಿಲ್ಲವೇ?, ಶಿವು ಉಪ್ಪಾರ ಕೊಲೆಯಾದಾಗ, ಮೊನ್ನೆ ಮೊನ್ನೆ ಹರ್ಷ ಹಿಂದೂ ಕೊಲೆಯಾಗ ಮೂರು ದಿನಗಳವರೆಗೆ ತೋರಿಸಿದ ನಿಮ್ಮ ಪೌರುಷ ಬರೀ ಮಾತುಗಳಿಗೆ ಸೀಮಿತವಾಯಿತಾ? ಅವರ ಮನೆಗೆ ಹೋಗಿ ಸಾಂತ್ವಾನ ಹೇಳಿದರೆ ಅಲ್ಲಿಗೆ ಬಿಜೆಪಿಯ ಕೆಲಸ ಮುಗಿಯಿತಾ? ಲಕ್ಷ ಲಕ್ಷ ಹಣ ಕೊಟ್ಟರೆ nಮನೆಗೆ ಮಗ ವಾಪಸ್ ಬರುತ್ತಾನಾ? ಇನ್ನು ಕುಮಾರಸ್ವಾಮಿ ರೈತ ಸಾಲ ಮನ್ನಾದ ಬಗ್ಗೆ ಮಾತನ್ನಾಡಿದ್ದರು.
ಆದರೆ ಮನ್ನಾ ಮಾಡಲಿಕ್ಕಾಗಲಿಲ್ಲ. ಎಷ್ಟೋ ಪಾರ್ಟಿಗಳು ನೀಡಿದ ಆಶ್ವಾಸನೆ ಬರೀ ಆಶ್ವಾಸನೆಯಾಗೆಯೇ ಉಳಿದಿವೆ ಹೊರತುಜಾರಿಗೆ ಬಂದಿಲ್ಲ. ಅವುಗಳೆಲ್ಲ ಬರೀ ಆಶ್ವಾಸನೆ, ರಾಜಕೀಯಕ್ಕಷ್ಟೇ ಸೀಮಿತ ಗೊಳಿಸಿದ್ದರೆ. ಮೊದಲಿಗೆ ಹೇಳಿಕೊಂಡು ಬಿಡಿ. ‘ನಾವ್ಹೇಳೋದೆಲ್ಲ ಸುಳ್ಳು ಅಂತ’ (ಎಷ್ಟೋ ಜನ ಆಗಲೇ ತಿಳಿದುಕೊಂಡಿದ್ದಾರೆ) ಆಗಲಾದ್ರೂ ನಮ್ಮ ಮುಗ್ಧ ಜನಕ್ಕೆ ಅರ್ಥ ಆಗಿ ನಂಬೋ ದನ್ನಾರೂ ಬಿಡುತ್ತಾರೆ! ಹಾಗೆಯೇ ಅಭಿವೃದ್ಧಿ ಪರ(?!) ಇರುವ ಸರಕಾರಗಳು ತಮ್ಮ ಅಭಿವೃದ್ಧಿಯ ಲಿಸ್ಟ್ ಅನ್ನು ಜನರ ಹತ್ತಿರ ಇಡುತ್ತಾರೆಯೇ? ಹೋಗಲಿ, ತಾವುಗಳು ಜಾರಿಗೆ ತಂದಿರುವ ಯೋಜನೆಗಳೇನಾಗುತ್ತಿವೆ, ಭ್ರಷ್ಟಾಚಾರ ಎಷ್ಟಾಗುತ್ತಿದೆ? ಅಂತಯಾವ ರಾಜಕಾರಣಿಗಳಾದರೂ ಆತ್ಮಾವಲೋಕನ ಮಾಡಿಕೊಂಡಿದ್ದಾರಾ? ಆತ್ಮಾವಲೋಕ ಬಿಡಿ ತಾವು ತಿಂದಿದ್ದು ತಮಗಾದರೂ ಗೊತ್ತಿದೆಯಾ? ನಮ್ಮಲ್ಲಿ ರಾಜಕೀಯ ಅನ್ನುವುದು ದಂಧೆಯಾಗಿದ್ದು ಗೊತ್ತಿದ್ದೇ ಬಿಡಿ!.
ಮಾತೆತ್ತಿದರೆ ಗಾಂಧಿ, ಅಂಬೇಡ್ಕರ್ ಅನ್ನುವ ರಾಜಕಾರಣಿಗಳೇ ರಾಜಕೀಯವನ್ನು ದಂಧೇ ಮಾಡಿದ್ದೂ ಗೊತ್ತು!. ರಾಜಕೀಯ ಅನ್ನುವುದು ನಮ್ಮಲ್ಲಿ ದಂಧೆಯಾಗಬೇಕಿಲ್ಲ, ಅದು ಆರಾಧನೆ, ತಾವು ನಂಬಿರುವ ಸಿದ್ಧಾಂತ, ಅಭಿವೃದ್ಧಿಯ ಆರಾಧನೆ. ‘ರಾಜಕೀಯವೆಂದರೆ ಅದು ಹುದ್ದೆಯಲ್ಲ, ಅದು ಸಾಮಾಜಿಕ ಜವಾಬ್ದಾರಿ’ ಈ ಮಾತನ್ನು ಬಲ್ಲವೆರೆಷ್ಟು ಜನ?. ಒಬ್ಬ ಶಾಸಕನಾದ ಮೇಲೆ ಊರಿನ ಮುಂದೆ ಎಲೆಕ್ಷನ್ ಹತ್ತಿರವಿದ್ದಾಗ ರೋಡ್ ಮಾಡಿಸಿದರೆ, ಸಚಿವನಾದವರು ಕಾರ್ಯಕ್ರಮಗಳಿಗೆ ಹಾಜರಾದರೆ, ಸಿಎಂ ಆದವರು ಬಲಿಷ್ಠ ಸಮಾಜಕ್ಕೆ ಕೆಲವು ಕೋಟಿ ಅನುದಾನ ಕೊಟ್ಟರೆ, ಪಿಎಂ ಆದವರು ಕೆಲವಿಷ್ಟು ಯೋಜನೆಗಳನ್ನು ರೂಪಿಸಿದರೆ ಸಾಲುತ್ತಾ? ಹಾಗಿದ್ದರೆ, ಕಿಮ್ ಜಾನ್ನ ಕೋರಿಯಾದಲ್ಲೂ ಒಳ್ಳೆಯ ದಾರಿ, ಅನುದಾನಗಳಿವೆ.
ಹಾಗಾದರೆ ನಾವೇಕೆ ಸಾಂವಿಧಾನಿಕವಾಗಿ ಈ ರಾಜಕಾರಣಿಗಳನ್ನು ಆಯ್ಕೆ ಮಾಡಬೇಕಿತ್ತು? ಎಲ್ಲರೂ ರಾಜಕೀಯವಾಗಿ ತಮ್ಮ ತಮ್ಮಬೇಳೆಗಳನ್ನು ಬೇಯಿಸಿಕೊಳ್ಳುವುದಾದರೆ, ಇಲ್ಲಿ ರುವ ಬಡ, ತುಳಿತಕ್ಕೊಳಗಾದ ಜನರನ್ನು ಮೇಲಕ್ಕೆತ್ತುವುದು ಯಾರು? ಆ ಸಮಾಜಕ್ಕೆ ದಾರಿ ತೋರಿಸುವವರು ಯಾರು? ಯಾವುದೇ ರಾಜಕೀಯ ಪಾರ್ಟಿಗಳಿರಬಹುದು, ಅದರ ಅಸ್ಥಿತ್ವಕ್ಕಾಗಿ ಯಾವಾಗಲೂ ಹೋರಾಡ ಬೇಕಿರುತ್ತೆ. ಆದರೆ ಆ ಅಸ್ಥಿತ್ವ ಬಂದ ಮೇಲೆ ಹೋರಾಟವನ್ನು ಮರೆಯುವುದು ಎಷ್ಟು ಉಚಿತ? ಯಡಿಯೂರಪ್ಪನವರು ರೈತಪರ ಚಳವಳಿಗಳಲ್ಲಿಯೇ ಗುರುತಿಸಿಕೊಂಡವರು ಅವರು ಸಿಎಂ ಆದಮೇಲೆ ರೈತರನ್ನು ಬಿಡಲಿಲ್ಲ, ಕೊನೆಯ ಬಾರಿಯೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲೂ ಹಸಿರು ಶಾಲನ್ನು ಹೊದ್ದಿದ್ದರು.
ಅದೇ ತರಹ ದೇವೇಗೌಡರು ಸಹ ರೈತ ಪರ ಹೋರಾಟದಿಂದಲೇ ಪ್ರಸಿದ್ಧಿ ಪಡೆದು ಮಣ್ಣಿನ ಮಗ ಆದವರು, ಕಾಂಗ್ರೆಸ್ ಸಹ ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ್ಯಕ್ಕೋಸ್ಕರ ಹಲವಾರು ಆಂದೋಲನಗಳನ್ನೂ ಮಾಡಿದವರು. ಅವರುಗಳೆಲ್ಲ ಆ ಹೋರಾಟಗಳಿಂದಲೇ ಗುರುತಿಸಿ ಕೊಂಡು, ಅಧಿಕಾರಕ್ಕೆ ಬಂದ ಮೇಲೆ ಆ ಹೋರಾಟಕ್ಕೆ ಪರಿಹಾರವನ್ನೂ ತಂದರು. ಆದರೆ ಈಗಿನ ಹೋರಾಟಗಳು ಎಷ್ಟು ದಿಕ್ಕುತಪ್ಪುತ್ತಿವೆ? ಎಷ್ಟು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ? ಮತ್ತಷ್ಟೂ ಜನರನ್ನೇಕೆ ಮುಗ್ಧರನ್ನಾಗಿ ಮಾಡುತ್ತೀರಿ? ಸರಕಾರ ಬರುವವರೆಗೆ ಮಾತ್ರ ಹೋರಾಟ? ಅಧಿಕಾರಕ್ಕೆ ಬಂದಮೇಲೆ?