ಆನ್‌ಲೈನ್‌ನಲ್ಲೂ ಮಹಿಳಾ ದೌರ್ಜನ್ಯ; ಒಪ್ಪಿ, ಸುಮ್ಮನಿರಬೇಡಿ
ಮಹಿಳಾ ಜಾಗೃತಿ
ಅಂಜಲಿ ರಾಮಣ್ಣ
ಆಫೀಸಿಗೆ ಹೋಗದೇ ಮನೆಯಿಂದಲೇ ಕೆಲಸ ಮಾಡುವುದರಿಂದ ಸ್ಪರ್ಶ ಕಿರುಕುಳ ಇರುವುದಿಲ್ಲ ಎನ್ನುವುದನ್ನು ಬಿಟ್ಟರೆ ಅವಳ ಮಾನಸಿಕ, ಭಾವನಾತ್ಮಕ ಮತ್ತು ಘನತೆಯ ಮೇಲಿನ ಅತ್ಯಾಚಾರ ಅವ್ಯಾಹತವಾಗಿ ಮುಂದುವರಿಯು ತ್ತಿದೆ. ಎಷ್ಟೇ ವಿದ್ಯಾವಂತ ಮಹಿಳೆಯರಿದ್ದರೂ ಇನ್ನೂ ಸಮಾಜ ತಮ್ಮನ್ನೇ ಬೊಟ್ಟು ಮಾಡಿ ತೋರಿಸುತ್ತದೆ ಎನ್ನುವ ಭಯ ಮಿಶ್ರಿತ ಒತ್ತಡದಿಂದ ದೌರ್ಜನ್ಯಗಳನ್ನು ಅವುಡುಗಚ್ಚಿ ತಡೆದುಕೊಳ್ಳುತ್ತಾರೆ.
ಪರಿಸರ, ಮಹಿಳಾವಾದಿ ವಂದನಾ ಶಿವ. ಹೇಳುತ್ತಾರೆ ‘ನಮ್ಮ ಬಳಿ ಎರಡೇ ಆಯ್ಕೆ. ಭೂಮಿಯ ಮೇಲೆ ಶಾಂತಿಯಿಂದ ಬದುಕಬೇಕೆಂದರೆ ಮಹಿಳೆಯರು ಮುಂದಾಳತ್ವ ವಹಿಸಬೇಕು ಇಲ್ಲವೇ ಮಾನವೀಯ ಭವಿಷ್ಯದ ಆಸೆ ಬಿಡಬೇಕು’.
ಹೌದಲ್ಲವೇ, ಜಗತ್ತಿನ ಯಾವುದೇ ಅವಘಡಗಳಿಗೂ ಪರೋಕ್ಷವಾಗಿ ಬಲಿಹೋಗುವುದು ಮಹಿಳೆಯರು, ಮಕ್ಕಳು. ಹಿಂದೆಂದೂ ಕಂಡರಿಯದ ಕರೋನಾ ಕಾಲ ದಲ್ಲೂ ಮೌನ ವಾಗಿದ್ದು ಮಾತ್ರ ಸ್ತ್ರೀ ದನಿ. ಸಬಲತೆಯೆ ನ್ನುವ ಸದ್ದು ಮಾಡುತ್ತ ಆಡಂಬರ ಹೆಚ್ಚು ಮಾಡಿದ್ದೇವೆಯೇ ಹೊರತು ಅವಳ ಧ್ವನಿಪೆಟ್ಟಿಗೆಗಳನ್ನು ಸಶಕ್ತಗೊಳಿಸಲೇ ಇಲ್ಲ.
ಮಹಿಳಾದಿನವನ್ನು ವರ್ಷವರ್ಷವೂ ಆಚರಣೆ ಮಾಡಬೇಕೆನ್ನುವ ಆಶಯ ಹುಟ್ಟಿದ್ದೇ ಅವಳ ಕೂಗನ್ನು ಜಗತ್ತು ಕೇಳವಂತಾಗಲೀ ಎಂದು. ಆದರೆ ಮಾಲ್ ಗಳಲ್ಲಿ, ಹೋಟೆಲು, ಸಿನೆಮಾ ಮಂದಿರಗಳಲ್ಲಿ, ಪಬ್, ಬಟ್ಟೆ ಅಂಗಡಿಗಳಲ್ಲಿ ಶೇ.೫೦ ರಿಯಾಯಿತಿ ಹಾಗೂಗಂಡಂದಿರ ಒಪ್ಪಿಗೆ ಪಡೆದ ಪಿಕ್‌ನಿಕ್‌ಗಳಿಗೆ ಮಾತ್ರ ಮಹಿಳಾದಿನಾಚರಣೆಯನ್ನು ಸೀಮಿತ ಗೊಳಿಸಿದ್ದು ಈ ನಾಗರಿಕತೆಯ ರುದ್ರ ಸಾಧನೆ.
ಮನುಷ್ಯ ಅದೆಷ್ಟು ಪ್ರಮಾಣದಲ್ಲಿ ಬದುಕುವ ವಿಧಾನವನ್ನು ಹುಡುಕಿಕೊಳ್ಳುತ್ತಿದ್ದಾನೋ ಅಷ್ಟೇ ಸಂಖ್ಯೆಯಲ್ಲಿ ದೌರ್ಜನ್ಯದ ಹೊಸ ಮುಖಗಳನ್ನೂ ಅವಿಷ್ಕರಿಸಿಕೊಳ್ಳುತ್ತಿದ್ದಾನೆ. ಅದಕ್ಕೆ ಹೊಸ ಸೇರ್ಪಡೆ ಆನ್‌ಲೈನ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಆನ್ ಲೈನ್‌ನಲ್ಲಿಯೇ ದೌರ್ಜನ್ಯ. ಈಗಿರುವ ಪರಿಸ್ಥಿಯಲ್ಲಿ ಸಾಕಷ್ಟು ಉದ್ಯೋಗ ದಾತರು ತಮ್ಮ ಕಚೇರಿಗಳನ್ನು, ಫ್ಯಾಕ್ಟರಿಗಳನ್ನು ಮುಚ್ಚಿರುವುದರಿಂದ ವಿದ್ಯಾವಂತ, ಅವಿದ್ಯಾವಂತ ಭೇದವಿಲ್ಲದೆ ಮಹಿಳೆಯರು ಕೆಲಸಗಳನ್ನು ಕಳೆದುಕೊಂಡಿದ್ದಾರೆ.
ಹೆಣಗಾಡಿ ಕೆಲಸ ಉಳಿದಕೊಂಡವರಿಗೆ ಮತ್ತೊಬ್ಬ ರಾಕ್ಷಸ ಎದುರಾಗಿದ್ದಾನೆ ಆನ್‌ಲೈನ್‌ನಲ್ಲಿ. ಆಫೀಸಿಗೆ ಬರುವ ಹೆಣ್ಣು ಮಗಳೊಬ್ಬಳು ಬೆಂಗಳೂರಿನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿದ್ದಾಳೆ. ಇವಳ ಜತೆ ಈವರೆಗೂ ಕೆಲಸ ಮಾಡುತ್ತಿದ್ದಒಟ್ಟು 40 ಹೆಂಗಸರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಉಳಿದುಕೊಂಡಿರುವ ೬ ಮಹಿಳೆಯರಿಗೆ, ಸೂಪರ್‌ವೈಸರ್ ಗೊತ್ತು ಪಡಿಸಿದ ರಾಶಿ ಬಟ್ಟೆಯನ್ನು ಅವರುಗಳ ಮನೆಗೆ ತಲುಪಿಸುತ್ತಾನೆ. ಅವುಗಳಿಗೆ ಗುಂಡಿ, ಕಾಜ ಹಾಕುವ ಕೆಲಸ. ಈಗ ಕೆಲಸ ಕಳೆದುಕೊಂಡರೆ ಊಟಕ್ಕೂ ತತ್ವಾರ ಇರುವ ಸಂದರ್ಭ. ಈ ಹೆಂಗಸರಿಗೆ ಇರುವ ಕೆಲಸದ ಅನಿವಾರ್ಯವನ್ನು ತಿಳಿದು ಕೊಂಡಿರುವ ಸೂಪರ್‌ವೈಸರ್ ಕೆಲಸ ಬೇಕು ಎಂದರೆ ದಿನಾ ರಾತ್ರಿ ತನ್ನ ಜತೆ ವಾಟ್ಸ್ಯಾಪ್‌ನಲ್ಲಿ ಅವನಿಗೆ ಇಷ್ಟವಾಗುವ ಹಾಗೆ ಚ್ಯಾಟ್ ಮಾಡಬೇಕು ಎನ್ನುವ ಷರತ್ತುವಿಽಸಿದ್ದಾನೆ.
ಇದು ವಾರದ ಕೂಲಿಗೆ ದುಡಿಯುವ ಹೆಂಗಸರ ಅಸಹಾಯಕತೆಯ ಒಂದು ಮುಖ. ಉದ್ಯೋಗಸ್ಥ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾನೂನು-2013ರ ಅಡಿಯಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ರಕ್ಷಣೆ ಇದೆಯೋ ಇಲ್ಲವೋ ಬಹುಮುಖ್ಯ ಪ್ರಶ್ನೆ ಈಗ ಚರ್ಚೆಗೆ ಬಂದಿದೆ. ಇನ್ನೊಬ್ಬಾಕ್ಕೆಸಾ-ವೇರ್ತಂತ್ರಜ್ಞೆ. ಆಕೆಯ ಕಂಪನಿಯ ಉದ್ಯೋಗಸ್ಥರೆಲ್ಲ ಮನೆಯಿಂದಲ್ಲೇ ಕೆಲಸ ಮಾಡುತ್ತಿದ್ದಾರೆ. ಇವಳ ಪ್ರಾಜೆಕ್ಟ್ ಮ್ಯಾನೇಜರ್ ಡಿಮ್ಯಾಂಡ್ ಏನೆಂದರೆ ಆನ್‌ಲೈಲ್ ಇರುವಾಗಲೆಲ್ಲ ವೆಬ್ ಕ್ಯಾಮೆರಾವನ್ನು ಅವಳ ಎದೆಯ ಭಾಗದ ಮೇಲೆ ಫೋಕಸ್ ಮಾಡಿಕೊಂಡಿರಬೇಕು. ಅದಕ್ಕೆ ಇವಳು  ವಿರೋಧ ವ್ಯಕ್ತಪಡಿಸಲು ಹೆದರುತ್ತಿದ್ದಾಳೆ.
ಏಕೆಂದರೆ ಆತ ಇವಳ ಮಾಜಿ ಪ್ರೇಮಿ ಮತ್ತು ಇವಳಿಗೆ ಈಗ ತಾನೆ ಮದುವೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ ಆನ್‌ಲೈನ್ ಮಿಟಿಂಗ್ ನಲ್ಲಿ ಇರುವಾಗಲೆಲ್ಲ ಬಾಸ್‌ಗೆ ಕಾಣುವಂತೆ ಅವಳ ಒಳ ಉಡುಪುಗಳನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ಕಾಣುವಂತೆ ಹಾಕಿರ ಬೇಕು. ಅಸಭ್ಯ ಪದಗಳನ್ನು ಅವನು ಬಳಸಿದಾಗ ಅದಕ್ಕೆ ಪ್ರತಿಕ್ರಿಯಿಸಬೇಕು. ಅಶ್ಲೀಲ ಸಂಜ್ಞೆಗಳನ್ನು ಮಾಡಿದಾಗ ಇವಳು ವಿರೋಧಿಸಬಾರದು, ಪೋಲಿ ಜೋಕ್ಸ್ ಮಾಡಿದಾಗ ಸಹಿಸಿಕೊಂಡಿರಬೇಕು, ಕಲಸ ಮಾಡುವುದರ ಜತೆಯಲ್ಲಿಯೇ, ಲ್ಯಾಪ್‌ಟಾಪ್‌ ನಲ್ಲಿ ಮತ್ತೊಂದು ವಿಂಡೋ ತೆರೆದಿಟ್ಟುಕೊಂಡು ಅವನೊಂದಿಗೆ ಸೆಕ್ಸ್ ಚ್ಯಾಟ್ ಮಾಡುತ್ತಿರಬಹುದು.
ಆಫೀಸಿಗೆ ಹೋಗದೇ ಮನೆಯಿಂದಲೇ ಕೆಲಸ ಮಾಡುವುದರಿಂದ ಸ್ಪರ್ಶ ಕಿರುಕುಳ ಇರುವುದಿಲ್ಲ ಎನ್ನುವುದನ್ನು ಬಿಟ್ಟರೆ ಅವಳ ಮಾನಸಿಕ, ಭಾವನಾತ್ಮಕ ಮತ್ತು ಘನತೆಯ ಮೇಲಿನ ಅತ್ಯಾಚಾರ ಅವ್ಯಾಹತವಾಗಿ ಮುಂದುವರಿಯುತ್ತಿದೆ. ಎಷ್ಟೇ ವಿದ್ಯಾವಂತಮಹಿಳೆಯರಿದ್ದರೂ ಇನ್ನೂ ಸಮಾಜ ತಮ್ಮನ್ನೇ ಬೊಟ್ಟು ಮಾಡಿ ತೋರಿಸುತ್ತದೆ ಎನ್ನುವ ಭಯ ಮಿಶ್ರಿತ ಒತ್ತಡದಿಂದ ದೌರ್ಜನ್ಯ ಗಳನ್ನು ಅವುಡುಗಚ್ಚಿ ತಡೆದುಕೊಳ್ಳುತ್ತಾರೆ.
ಕಣ್ಣಿಗೆ ಕಾಣುವ, ಕಿವಿಗೆ ಕೇಳಿಸುವ ಪ್ರತಿಭಟನೆ ಕೇವಲ ಶೇ.೩. ಬಾಕಿಯಂತೆ ನೋವುಗಳನ್ನು ನುಂಗುವುದು ಅವಳ ವರ್ಣತಂತು ಗಳಲ್ಲಿ ಬಲವಂತವಾಗಿ ಸೇರಿಸಿಬಿಟ್ಟಿವೆ. ಆಫೀಸಿನ ಕಿರಿಕುಳದ ಬಗ್ಗೆ ಸೊಲ್ಲೆತ್ತಿದರೆ ಕೂಡಲೇ ಮನೆಯಲ್ಲಿ ಗುಲ್ಲಾಗುವ ಹೆದರಿಕೆ, ಮನೆಯವರ ನಿಂದನೆ, ಮೂದಲಿಕೆಯನ್ನು ಎದುರಿಸಬೇಕೆನ್ನುವ ಭಯ. ಹಾಗಾಗಿ ದೌರ್ಜನ್ಯ ತಡೆದುಕೊಳ್ಳುತ್ತಿದ್ದಾರೆ.ಸರಕಾರಿ ಉದ್ಯೋಗಸ್ಥ ಮಹಿಳೆಯೊಬ್ಬರು ಹೇಳಿಕೊಳ್ಳುತ್ತಿದ್ದರು,’ ಮೇಡಂ ಆಫೀಸಿನಲ್ಲಿ ಸ್ವಲ್ಪ ಏರುಪೇರಾದರೂ ಒಂದು ಕಮಿಟಿ ಇರುತ್ತೆ.
ತಡೆಯಲಸಾಧ್ಯ ಎನಿಸಿದಾಗ ಕಮಿಟಿಗೆ ದೂರು ಕೊಡಬಹುದೆನ್ನುವ ಧೈರ್ಯನಾದರೂ ಇರುತ್ತೆ. ಆದರೀಗ ವರ್ಕ್ ಫ್ರಂ ಹೋಮ್‌ ನಲ್ಲಾಗುವ ಕಷ್ಟಕ್ಕೆ, ಕಮಿಟಿಗೆ ದೂರು ಕೊಡಲಾಗಲ್ಲ. ಹೇಗೂ ದೂರು ಕೊಡಲ್ಲ ಎನ್ನುವ ಭಂಡ ಧೈರ್ಯದಲ್ಲಿ ಗಂಡಸರು ಇನ್ನೂ ಒರಟು ಬೀಳಿತ್ತಿದ್ದಾರೆ’ ಬಹಳಷ್ಟು ಉದ್ಯೋಗಸ್ಥ ಮಹಿಳೆಯರಿಗೆ ಮನೆಯಿಂದಲೇ ಕೆಲಸ ಮಾಡುವಾಗ ತಮ್ಮ ಆಫೀಸಿನ ದೂರು ಘಟಕದಲ್ಲಿ ದೂರು ದಾಖಲಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವಿದೆ.
ಅವರೆಲ್ಲರಿಗೂ ತಿಳಿಸಿಕೊಡಲೇಬೇಕಾದ ವಿಷಯ ಎಂದರೆ ಕಾರ್ಯಸ್ಥಾನದಲ್ಲಿ ಮಹಿಳೆಯರ ಲೈಂಗಿಕ ದೌರ್ಜನ್ಯ ನಿರೋಧ, ನಿರ್ಬಂಧನೆ ಹಾಗೂ ನಿವಾರಣೆ ಕಾಯಿದೆ 2013 ಕಾನೂನಿನಡಿಯಲ್ಲಿ ಕೆಲಸ ಮಾಡುವ ಜಾಗ ಯಾವುದೇ ಇದ್ದರೂ, ಕೆಲಸ ಕೊಟ್ಟವರಿಂದ ಅಥವಾ ಸಹೋದ್ಯೋಗಿಗಳಿಂದ, ಯಾವ ವೇದಿಕೆಯ ಮೂಲಕವೇ ಆಗಲಿ ಕಿರುಕುಳವಾದಾಗ ಆ ಕಚೇರಿಯಆಂತರಿಕ ದೂರು ಸಮಿತಿಗೆ ದೂರು ಸಲ್ಲಿಸಲು ಸಾಧ್ಯವಿದೆ.
ಈ ಕಾನೂನಿನ ಸೆಕ್ಷನ್ ೨ ರಲ್ಲಿ ‘ ಕಾರ್ಯಸ್ಥಾನ’ ಎನ್ನುವುದಕ್ಕೆ ನೀಡಿರುವ ವ್ಯಾಖ್ಯಾನದಲ್ಲಿ ‘ವಾಸಿಸುವ ಮನೆ ಅಥವಾ ಕೆಲಸ ಮಾಡುತ್ತಿರುವ ಸ್ಥಳ’ ಎನ್ನುವು ದನ್ನೂ ಉಲ್ಲೇಖಿಸಲಾಗಿದೆ. ಎಲ್ಲಿಂದಲೇ ಆಗಲಿ, ಕೆಲಸದಅವಽಯಲ್ಲಿ ಉದ್ಯೋಗದಾತ – ಉದ್ಯೋಗಸ್ಥ ಎನ್ನುವ ಸಂಬಂಧದಡಿಯಲ್ಲಿ ಕೆಲಸ ಮಾಡುತ್ತಿರುವಾಗ ಆಗುವ ಎಲ್ಲ ರೀತಿಯ ದೌರ್ಜನ್ಯಗಳಿಗೂ ದೂರು ದಾಖಲಿಸಲು ಸಾಧ್ಯವಿರುತ್ತದೆ.
ಇದು ಈ ಮೊದಲೇ ಹೇಳಿದ ಗಾರ್ಮೆಂಟ್ ಫ್ಯಾಕ್ಟರಿಯ ಕೆಲಸಗಾರರಿಗೂ ಸಾಫ್ಟವೇರ್ ಉದ್ಯೋಗಿಗಳಿಗೂ ಲಭ್ಯವಿದೆ. ಆನ್‌ಲೈನ್ ಮುಖೇನ ಪಾಠ ಮಾಡುತ್ತಿರುವ ಉಪಾಧ್ಯಾಯರುಗಳು ಸಹೋದ್ಯೋಗಳಿಂದ, ವಿದ್ಯಾರ್ಥಿಗಳ ಪೋಷಕರಿಂದ ಈ ರೀತಿಯ ತೊಂದರೆಯಾದಲ್ಲಿ ದೂರು ಸಲ್ಲಿಸಬಹುದು. ಅಂತರ್ಜಾಲದ ಮೂಲಕ ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ತರಬೇತಿದಾರರು, ವಿಜ್ಞಾನಿಗಳು, ಭಾಷಾಂತರಕಾರರು, ಸರಕಾರಿ ಉದ್ಯೋಗಿಗಳು ಇವರುಗಳೂ ದೂರು ಸಲ್ಲಿಸಬಹುದು. ಮಹಿಳಾಹಿರಿಯನಾಗರಿಕರ ಮತ್ತು ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಸಹ ಅವರ ಕಚೇರಿಯ ಆಂತರಿಕ ದೂರು ಸಮಿತಿಯಲ್ಲಿ ಅಹವಾಲನ್ನು ದಾಖಲಿಸಬಹುದು.
ಉದ್ಯೋಗಸ್ಥ ಸ್ಥಳದಿಂದ ದೂರು ಸಲ್ಲಿಸಿದರೆ ಯಾವ ರೀತಿಯಲ್ಲಿ ತನಿಖೆ ನಡೆಯುವುದೋ ಈಗಲೂ ಅದೇ ರೀತಿಯ ತನಿಖೆ ಮಾಡಬೇಕಿರುತ್ತದೆ ಮತ್ತು ವರದಿಯನ್ನು ಸ್ಥಾನಿಕ ದೂರು ಸಮಿತಿಗೆ ಸಲ್ಲಿಸಲೇಬೇಕಿರುತ್ತದೆ. ಯಾವ ರೀತಿಯ ದೌರ್ಜನ್ಯ?ಲೈಂಗಿಕ ದೌರ್ಜನ್ಯವೆಂದರೆ ಕೇವಲ ಸ್ಪರ್ಶ ಮುಖೇನ ಮಾತ್ರ ಆಗಲು ಸಾಧ್ಯ ಎನ್ನುವುದು ಮಿಥ್ಯೆ. ಮಹಿಳೆಯ ಘನತೆಗೆ ಕುಂದು ತರುವ ಉದ್ದೇಶದಿಂದ ಮಾಡಿದ ಯಾವ ಕೆಲಸವೂ ಲೈಂಗಿಕ ದೌರ್ಜನ್ಯ ಎನ್ನಿಸಿಕೊಳ್ಳುತ್ತದೆ. ಚಲನ ವಲನ, ಹಾವ ಭಾವ, ಭಾಷೆ,ಸಂ ಗಳ ಮೂಲಕವೂ ಇದು ಸಾಧ್ಯ. ಅಸಭ್ಯ ಟೀಕೆ, ಹಾಸ್ಯಪಹಾಸ್ಯದ ಮಾತುಗಳೂ ಲೈಂಗಿಕ ದೌರ್ಜನ್ಯವೆನಿಸಿಕೊಳ್ಳುತ್ತವೆ.
-ಸಭ್ಯ ಭಾಷೆಯಲ್ಲಿಯೂ ವೈಯಕ್ತಿಕ ವಿಷಯಗಳನ್ನು ಕೇಳುವುದು, ಮಹಿಳೆಯ ಒಪ್ಪಿಗೆ ಇಲ್ಲದೆ ಆ ವಿಷಯಗಳನ್ನು ಚರ್ಚಿಸು ವುದು, ಸಲಹೆ ನೀಡುವುದು.
-ಸೆಕ್ಸ್ ಟಾಯ್ಸ್ ಬಗ್ಗೆ ಮಾತನಾಡುವುದು, ಅವುಗಳ ಚಿತ್ರ ತೋರಿಸುವುದು, ಅವುಗಳನ್ನು ಸಹೋದ್ಯೋಗಿ ಮಹಿಳೆಗೆ ಕಾಣಿಸುವಂತೆ ಪ್ರದರ್ಶಿಸುವುದು
-ಒಳ ಉಡುಪುಗಳ ಬಗ್ಗೆ ವರ್ಣಿಸುವುದು, ಆಕೆ ಬಳಸುವ ಒಳ ಉಡುಪುಗಳ ಬ್ರ್ಯಾಂಡ್, ಬಣ್ಣ, ದರ ಇವುಗಳ ಬಗ್ಗೆ ಸಾಂಕೇತಿಕವಾಗಿ ಕೇಳುವುದು-ಮಹಿಳೆಯ ಖಾಸಗೀ ವಿಷಯಗಳಾದ ದಾಂಪತ್ಯ, ಮುಟ್ಟಿನ ಬಗ್ಗೆ ಮತ್ತದಕ್ಕೆ ಸಂಬಂಧಪಟ್ಟ ಭಾವನೆ, ಏರುಪೇರು ಪರಿಸ್ಥಿತಿಗಳ ಬಗ್ಗೆ ಮಹಿಳೆಯ ಒಪ್ಪಿಗೆ ಇಲ್ಲದೆ ಅವಳೊಡನೆ ಮಾತನಾಡುವುದು
-ಮಹಿಳೆಯ ಒಪ್ಪಿಗೆಯಿಲ್ಲದೆ ಆಕೆಯ ಕುಟುಂಬವನ್ನು ಮಾತುಗಳಲ್ಲಿ ಅನವಶ್ಯಕವಾಗಿ ತರುವುದು ಅವರ ಬಗ್ಗೆ ತಪ್ಪು ಭಾಷೆಗಳನ್ನು ಬಳಸುವುದು ಅಥವಾ ಯಾವುದೇ ರೀತಿಯ ಬೆದರಿಕೆ ಒಡ್ಡುವುದು
-ಆಕೆ ತಾನು ಹೇಳಿದಂತೆ ಕೇಳಿದರೆ ಇನ್ಕ್ರೀಮೆಂಟ್, ಪ್ರಮೋಷನ್ ಕೊಡುವುದಾಗಿ ಆಮಿಷ ಒಡ್ಡುವುದು
-ಮೇಲಧಿಕಾರಿ ಅಥವಾ ಸಹೋದ್ಯೋಗಿಗಳು ಮಹಿಳಾ ಉದ್ಯೋಗಿಯನ್ನು ಸಾಲ ಕೊಡಲು ಒತ್ತಾಯ ಮಾಡುವುದು ಅಥವಾ ಕೊಟ್ಟ ಸಾಲವನ್ನು ಹಿಂದಿರುಗಿ ಕೇಳಿದಾಗ ಅಸಭ್ಯವಾಗಿ ವರ್ತಿಸುವುದು
-ದೈಹಿಕ ಕೋರಿಕೆಗಳನ್ನು ಅಶ್ಲೀಲ ಮತ್ತು ಅಸಭ್ಯ ಮನವಿ, ಒತ್ತಡಗಳನ್ನು ಪ್ರತ್ಯೇಕ ಇಲ್ಲವೇ ಪರೋಕ್ಷವಾಗಿ ಪೂರೈಸದೇ ಇದ್ದಲಿ ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡುವುದು
-ಮಹಿಳೆಯ ಮಾಡುವ ಕೆಲಸವನ್ನು ದುರುದ್ದೇಶ ಪೂರ್ವಕವಾಗಿ ಅಲ್ಲಗಳೆಯುವುದು ಅವಳ ಕೆಲಸದಲ್ಲಿ ವೃಥಾ ತಲೆ ಹಾಕುವುದು
-ಅವಳ ಮಾನಸಿಕ ಆರೋಗ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅವಮಾನಕರವಾಗಿ ನಡೆದುಕೊಳ್ಳುವುದು
-ಗುತ್ತಿಗೆದಾರರ ಮೂಲಕ ಕೆಲಸ ಪಡೆದುಕೊಂಡು ಅಸಂಘಟಿತ ವಲಯದಲ್ಲಿ ಮನೆಯಿಂದ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳಿಗೂ ಇವೆಲ್ಲವೂ ಅನ್ವಯವಾಗುತ್ತದೆ.
ಇಂತಹ ಯಾವುದೇ ತೊಂದರೆ ಉಂಟಾದರೆ, ತೊಂದರೆಯಾದ ಮೂರು ತಿಂಗಳೊಳಗಾಗಿ ಲಿಖಿತದಲ್ಲಿ, ಈ ಮೇಲ್ ಮೂಲಕ ಸಮಿತಿಗೆ ದೂರು ಸಲ್ಲಿಸಬೇಕಿರುತ್ತದೆ. ದೂರುದಾರಳ ಮತ್ತು ಸಾಕ್ಷಿಗಳ ಗುರುತನ್ನು ಗೌಪ್ಯವಾಗಿಡಬೇಕೆಂದು ಕಾನೂನಿನಲ್ಲಿಹೇಳಲಾಗಿದೆ. ರಾಜಿ ಸಂಧಾನ, ಅಪರಾಧಿಯನ್ನು ಕೆಲಸದಿಂದ ತೆಗೆದು ಹಾಕುವುದು, ದಂಡ ವಿಧಿಸುವುದು ಇವುಗಳು ಪ್ರಾಥಮಿಕ ಶಿಕ್ಷೆಗಳು. ಆದರೆ ತೀವ್ರತರವಾದ ಅಪರಾಧಗಳನ್ನು ಭಾರತೀಯ ಅಪರಾಧ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪರಿಗಣಿಸಿ೩ತಿಂಗಳಿಂದ೧೦ವರ್ಷಗಳ ಕಾಲ ಜೈಲು ಶಿಕ್ಷೆಯನ್ನು  ನೀಡಲಾಗುತ್ತದೆ.
ಕಾರಣಾಂತರಗಳಿಂದ ಆಂತರಿಕ ಸಮಿತಿಗೆ ದೂರುಕೊಡಲು ಸಾಧ್ಯವಾಗದಿದ್ದರೆ ಆನ್‌ಲೈನ್ ಉದ್ಯೋಗದ ಸಮಯದಲ್ಲಿ ಉದ್ಯೋಗದಾತರು, ಸಹೋದ್ಯೋಗಿಗಳು ಇವರಿಂದ ದೌರ್ಜನ್ಯ ಕಿರುಕುಳಕ್ಕೆ ಒಳಗಾಗಿ ನೊಂದ ಮಹಿಳೆಯರು ಎಂಎಚ್‌ಎ ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ ಅವರ ಸೈಬರ್ ಕ್ರೈಂಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ಆನ್ಲೈನ್‌ನಲ್ಲಿಯೇದೂರು ದಾಖಲಿಸಬಹುದಾಗಿರುತ್ತದೆ.
ಇದರಲ್ಲಿ ಅನಾಮಿಕಾಗಿಯೂ ದೂರು ದಾಖಲಿಸಬಹುದು. ಆ ಪೋರ್ಟಲ್‌ನಲ್ಲಿ ಸರಳವಾದ ಮಾರ್ಗ ದರ್ಶನವಿದೆ. ಇದರಲ್ಲಿ ಒಮ್ಮೆ ದರ್ಶಿಸಿದ ದೂರನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲು ಸಾಧ್ಯವಿರುವುದಿಲ್ಲ. ಬೆಳಗ್ಗೆ 9 ರಿಂದ ಸಂಜೆ6ರವರೆಗೂ ಸಹಾಯವಾಣಿ 155260 ಇದನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ದೂರು ಸಲ್ಲಿಸಬಹುದು. ಕಾನೂನು ಬೆಂಬಲಕ್ಕಿರು ವಾಗ ಮನೆಯಿಂದ ಕೆಲಸ ಮಾಡುತ್ತಿರುವ ಮಹಿಳೆಯರು ದೌರ್ಜನ್ಯಕ್ಕೆ ಹೆದರುವ ಅವಶ್ಯಕತೆಯಿಲ್ಲ. ಹಾಗೆಯೇ ಮನೆಯವರು ಗಳು ಸಹ ನೇರವಾಗಿ ಆಕೆಯ ಪರಿಸ್ಥಿತಿಯನ್ನು ಕಾಣಲು ಸಾಧ್ಯವಿರುವುದರಿಂದ ಆಕೆಯೆಡೆಗೆ ಸೂಕ್ಷ್ಮತೆಯಿಂದವರ್ತಿಸಿ ಸಹಾನುಭೂತಿಯಿಂದ ಬೆಂಬಲ ನೀಡುವುದು ಅವಶ್ಯಕವಾಗಿದೆ.
ಸರಕಾರವು ಈಗ ಎದುರಾಗಿರುವ ಹೊಸ ಪರಿಸ್ಥಿತಿಯಲ್ಲಿ ಮಹಿಳೆಯರು ಎದುರಿಸಲಿರುವ ಕಷ್ಟಗಳನ್ನು ಅರ್ಥಮಾಡಿಕೊಂಡು ಕಾನೂನುಗಳಲ್ಲಿ ಮತ್ತಷ್ಟು ಖಚಿತತೆ ತರುವಂತಹ ತಿದ್ದುಪಡಿಯನ್ನು ಈಕೂಡಲೇ ಜಾರಿಗೆ ತರಬೇಕು. ಜಾರಿಗೆ ತರಬೇಕಾದಂತಹ ಅಧಿಕಾರಿಗಳಿಗೆ ಅದರ ಬಗ್ಗೆ ತಿಳಿವಳಿಕೆ ಮತ್ತು ತರಬೇತಿ ನೀಡಬೇಕು. ಇಂತಹ ಮಹಿಳೆಯರಿಗೇ ಒಂದು ಪ್ರತ್ಯೇಕವಾದ ಸಹಾಯ ವಾಣಿ ಆರಂಭಿಸಬೇಕು. ಮನೆ ಯಿಂದಲೇ ಉದ್ಯೋಗ ಮಾಡಬೇಕಿರುವ ಈ ಅನಿವಾರ್ಯ ಪರಿಸ್ಥಿತಿ ಸಹಬಾಳ್ವೆ ಎನ್ನುವುದರ ನಿಜಾರ್ಥವನ್ನು ಸಮಾಜಕ್ಕೆ ಹೊಸ ಆಯಾಮದಲ್ಲಿ ಮಾಡಿಸಿಕೊಡಲಿ ಎನ್ನುವ ಆಶಯ ಮೊನ್ನೆಯಷ್ಟೇ ಮುಗಿದ ಮಹಿಳಾದಿನಾಚರಣೆ ಯದ್ದು. ವಿಶ್ವಸಂಸ್ಥೆಯ ಈ ವರ್ಷದ ಗುರಿಯಂತೆ ‘ಸತ್ವಶಾಲಿಯಾದ ನಾಳೆಗಳಿಗೆ ಇಂದುಸಾಧಿಸೋಣಲಿಂಗ ಸಮಾನತೆಯನ್ನು’.