ಭಾರತದಲ್ಲಿ ಆರ್ಥಿಕ ಅಪರಾಧಗಳಿಗಿದು ಕಾಲವಲ್ಲ
ವಿತ್ತ ನೋಟ
ಗಣೇಶ್ ಭಟ್ ವಾರಣಾಸಿ
@.
ಆರ್ಥಿಕ ಅಪರಾಧಿಗಳು ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುವುದನ್ನು ತಡೆಗಟ್ಟಲು ಪೂರಕ ಕಾನೂನು ಇರಲಿಲ್ಲ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಸಂಸ್ಥೆಗಳನ್ನು ಸಬಲೀಕರಣಗೊಳಿಸಲಾಗಿದೆ. ಜತೆಗೆ ಆರ್ಥಿಕ ಅಪರಾಧಗಳನ್ನು ಪತ್ತೆಹಚ್ಚುವ, ಅಪರಾಧಿ ಗಳನ್ನು ನ್ಯಾಯಾಲಯದ ಕಟಕಟೆಗೆ ತರುವ ನಿಟ್ಟಿನಲ್ಲಿ ಕಾನೂನು ಸುಧಾರಣೆ ತರಲಾಗಿದೆ.
ಸಾವಿರ ರುಪಾಯಿ ಸಾಲ ಮಾಡಿ ಮರುಪಾವತಿಸದಿದ್ದರೆ ಆಸ್ತಿ ಜಪ್ತಿ, ಕೋಟಿಗಟ್ಟಲೆ ಸಾಲ ಮಾಡಿ ಹಿಂದಿರುಗಿಸದೇ ಇದ್ದರೆ ಸಾಲ ಮನ್ನಾ ಅನ್ನುವುದು ಬ್ಯಾಂಕ್ ಸಾಲ ಮತ್ತು ಆರ್ಥಿಕ ಅಪರಾಧಗಳ ಕುರಿತು ಚಾಲ್ತಿಯಲ್ಲಿದ್ದ ಮಾತು. ಆದರೆ ಇತ್ತೀಚೆಗೆ ನಡೆಯುತ್ತಿರುವ ವಿದ್ಯ ಮಾನಗಳನ್ನು ನೋಡುವಾಗ ಪರಿಸ್ಥಿತಿ ಬದಲಾಗುತ್ತಿದೆ ಎಂದು ಅನಿಸುತ್ತಿದೆ.
ಬ್ಯಾಂಕ್ ಗಳಿಂದ ಸಾಲಪಡೆದು ಮರುಪಾವತಿ ಮಾಡದವರ ಮೇಲೆ ಕಾನೂನು ಕ್ರಮ ಗಳನ್ನು ಕೈಗೊಳ್ಳಲಾಗುತ್ತಿದೆ. ಕಾನೂನುಬಾಹಿರ ಹಣ ವರ್ಗಾವಣೆ, ಅಕ್ರಮ ಆರ್ಥಿಕ ವಹಿವಾಟುಗಳ ಮೇಲೆ ನಿಯಂತ್ರಣ ಹೇರಲಾಗುತ್ತಿದೆ. ಈ ಹಿಂದೆ ಕಪ್ಪು ಹಣವೇ ರಾರಾ ಜಿಸುತ್ತಿದ್ದ ಮನೆ ಹಾಗೂ ಆಸ್ತಿ ವ್ಯಾಪಾರ ಕ್ಷೇತ್ರದಲ್ಲಿನ ಈ ಪ್ರಮಾಣ ಶೇ.80 ಕಡಿಮೆ ಆಗಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಆದಾಯ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿದೆ. ಈ ಹಿಂದೆ ಆರ್ಥಿಕ ಅಪರಾಧಗಳು ಬೆಳಕಿಗೇ ಬರುತ್ತಿರಲಿಲ್ಲ ಹಾಗೂ ಈ ಅಪರಾಧಗಳನ್ನು ಪತ್ತೆಹಚ್ಚಬೇಕಾದ ಸಂಸ್ಥೆಗಳು ದುರ್ಬಲವಾಗಿದ್ದವು.
ಒಂದು ವೇಳೆ ಭ್ರಷ್ಟಾಚಾರ ಬಯಲಾದರೂ ಅದನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಸಂಸ್ಥೆಗಳನ್ನು ಸಬಲೀಕರಣಗೊಳಿಸಲಾಗಿದೆ. ಜತೆಗೆ ಆರ್ಥಿಕ ಅಪರಾಧಗಳನ್ನು ಪತ್ತೆಹಚ್ಚುವ, ಅಪರಾಧಿಗಳನ್ನು ನ್ಯಾಯಾಲಯದ ಕಟಕಟೆಗೆ ತರುವ ನಿಟ್ಟಿನಲ್ಲಿ ಕಾನೂನು ಸುಧಾರಣೆ ತರಲಾಗಿದೆ. ಪರಿಣಾಮ ಬ್ಯಾಂಕ್ ಸಾಲ ವಂಚನೆ, ಅಕ್ರಮ ಆಸ್ತಿ, ಅಕ್ರಮ ಹಣ ವರ್ಗಾವಣೆ ಹಾಗೂ ಭ್ರಷ್ಟಾಚಾರಗಳು ಕಡಿಮೆ ಆಗುತ್ತಿವೆ.
ಇತ್ತೀಚೆಗೆ ಮಹಾರಾಷ್ಟ್ರ ಸಚಿವ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ)ಯ ನವಾಬ್ ಮಲಿಕ್ ಅವರನ್ನು ಮುಂಬೈ ಸರಣಿ ಸೋಟದ ರೂವಾರಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಜತೆಗಿನ ಕಾನೂನು ಬಾಹಿರ ವಹಿವಾಟಿನ ಆರೋಪ ದಲ್ಲಿ ಎನ್ ಫೋರ್ಸ್‌ಮೆಂಟ್ ಡೈರೆಕ್ಟರೇಟ್(ಇಡಿ /ಜಾರಿ ನಿರ್ದೇಶನಾಲಯ) ಬಂಧಿಸಿದೆ. ಸುಮಾರು ಇಪ್ಪತ್ತು ಇಪ್ಪತ್ತೆರಡು ವರ್ಷಗಳ ಹಿಂದೆ ನವಾಬ್ ಮಲಿಕ್ ಹಾಗೂ ಅವರ ಮಗ-ರಾಝ್ಇಬ್ಬರೂ 1993ರ ಮುಂಬೈ ಸ್ಫೋಟದ ಆರೋಪಿ ಸರ್ದಾರ್ ಶಹ್ವಾಲೀ ಖಾನ್ ಜತೆಗೆ ಮಾತುಕತೆ ನಡೆಸಿದ್ದರು.
1998-99ರಲ್ಲಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ ವಶದಲ್ಲಿದ್ದ 300 ಕೋಟಿ ರು. ಮೌಲ್ಯದ ಆಸ್ತಿಯನ್ನು ಸೋಲಿಡಸ್ ಇನ್ ವೆಸ್ಟ್‌ಮೆಂಟ್ ಹೆಸರಿನಲ್ಲಿ ಕೆಲವೇ ಲಕ್ಷ ರು.ಗೆ ಖರೀದಿಸಿದ್ದರು. ಈ ಆಸ್ತಿ ನಿಜವಾಗಿಯೂ ಮುನೀರಾ ಪ್ಲಂಬರ್ ಎಂಬ ಮಹಿಳೆಗೆ ಸೇರಿದ್ದು ಸಲೀಂ ಪಟೇಲ್ ಎನ್ನುವ ವ್ಯಕ್ತಿ ನಕಲಿ ದಾಖಲೆಯ ಮೂಲಕ ಹಸೀನಾ ಪಾರ್ಕರ್‌ಗೆ ಮಾರಿದ್ದ.
ಭೂಗತ ಪಾತಕಿಗಳು ಹಾಗೂ ನವಾಬ್ ಮಲಿಕ್ ನಡುವೆ ನಡೆದಿದ್ದ ಅವ್ಯವಹಾರ ಕಂಡುಹಿಡಿದ ಇಡಿಯು ನವಾಬ್ ಮಲಿಕ್ ಅವರನ್ನು ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ೨೦೦೨( ಪಿಎಂಎಲಎ / ಅಕ್ರಮ ಹಣ ವರ್ಗಾವಣಾ ತಡೆಗಟ್ಟುವಿಕೆಯ ಕಾನೂನು) ನ ಅಡಿಯಲ್ಲಿ ಬಂಧಿಸಿದೆ. ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ರೀತಿಯ ತಂತ್ರಗಳನ್ನು ಬಳಸಿಕೊಂಡಿರುತ್ತಾರೆ. ಮೇಲೆ ಹೇಳಲಾದ ನವಾಬ್ ಮಲಿಕ್ ಪ್ರಕರಣ ಗಮನಿಸಿದರೆ ಇದು ಅರ್ಥವಾಗಬಹುದು. ಇಂತಹ ಅಪರಾಧಗಳನ್ನು ನ್ಯಾಯಾಲಯದ ವ್ಯಾಪ್ತಿಗೆ ತರಲು ಚಾಲ್ತಿಯಲ್ಲಿರುವ ಕಾನೂನು ಸುಧಾರಣೆ ಅಗತ್ಯ. ಆರ್ಥಿಕ ಅಪರಾಧ ಗಳನ್ನು ನಿಯಂತ್ರಿಸಲು೨೦೦೨ನೇ ಇಸವಿ ಯಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರಕಾರವು ಪ್ರಿವೆನ್ಷನ್ಆಫ್ಮನಿ ಲಾಂಡರಿಂಗ್ ಆಕ್ಟ್ ಅನ್ನು ಜಾರಿಗೆ ತಂದಿತ್ತು.
ಇತ್ತೀಚೆಗೆ ಭಾರತ ಸರಕಾರ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿರುವಂತೆ ಕಳೆದ 20 ವರ್ಷಗಳಲ್ಲಿ ಪಿಎಂಎಲ್ಎ 2002 ಕಾಯಿದೆ ಯ ಅನ್ವಯ ಅಕ್ರಮ ವಹಿವಾಟು, ಆದಾಯ ಮಿತಿಯ ಹೊರತಾದ ಆದಾಯಗಳ ಪ್ರಕರಣದಂತಹ 4700 ಕೇಸುಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳ ತನಿಖೆಯನ್ನು ಜ್ಯಾರಿ ನಿರ್ದೇಶನಾಲಯವು (ಇಡಿ) ತನಿಖೆ ನಡೆಸುತ್ತಿದೆ. ಕಳೆದ ಐದು ವರ್ಷ ಗಳಲ್ಲಿ ಪಿಎಂಎಲ್ಎ ಕಾನೂನಿನಡಿಯಲ್ಲಿ 2086 ಪ್ರಕರಣಗಳು ದಾಖಲುಗೊಂಡಿವೆ. 2021ರಲ್ಲಿ 981 ಕೇಸುಗಳು ದಾಖಲು ಗೊಂಡಿವೆ ಹಾಗೂ 313 ಮಂದಿಯ ಬಂಧನ ಆಗಿದೆ.
ಪಿಎಂಎಲ್ಎ ಕಾನೂನನ್ನು ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಸರಕಾರ ಬಳಸಿಕೊಳ್ಳುತ್ತಿದೆ ಎಂದು ಕೆಲವು ರಾಜಕೀಯ ಪಕ್ಷಗಳು ಆಪಾದಿಸಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿವೆ. ಈ ಕುರಿತು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠದ ಎದುರು ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿಗೆ ಹೇಳಿಕೆ ಕೊಟ್ಟ ಸರಕಾರ, ದೇಶದ ಬ್ಯಾಂಕ್‌ಗಳಿಂದ ಸಾಲ ಪಡೆದು ಮರುಪಾವತಿಸದೇ ವಂಚಿಸಿ ವಿದೇಶಗಳಿಗೆ ಓಡಿಹೋಗಿ ತಲೆಮರೆಸಿ ಕೊಂಡಿರುವ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸ್ ಅವರ 18000 ಕೋಟಿ ರುಪಾಯಿಗಳನ್ನು ಪಿಎಂಎಲ್ಎ ಕಾನೂನಿನ ಅಡಿಯಲ್ಲಿ ಬ್ಯಾಂಕ್ ಗಳು ವಶಪಡಿಸಿಕೊಂಡಿವೆ ಎಂದು ಹೇಳಿದೆ.
ಇದಲ್ಲದೆ 98,368 ಕೋಟಿ ರುಪಾಯಿಗಳಷ್ಟು ವಂಚನೆ ನಡೆದುದನ್ನು ಜ್ಯಾರಿ ನಿರ್ದೇಶನಾಲಯವು ಕಂಡುಹಿಡಿದಿದ್ದು ಈ ಮೊತ್ತವನ್ನು ಪಿಎಂಎಲ್ಎಯ 5 ನೇ ಸೆಕ್ಷನ್‌ನ ಅಡಿಯಲ್ಲಿ ಲಗತ್ತಿಸಲಾಗಿದೆ. ಇದರಲ್ಲಿ 55899 ಕೋಟಿ ರುಪಾಯಿಗಳಷ್ಟು ಮೊತ್ತವನ್ನು ವಶಪಡಿಸಿ ಕೊಳ್ಳಲು ಸಂಬಂಧಪಟ್ಟ ನ್ಯಾಯಪೀಠಗಳು ಸಮ್ಮತಿಯನ್ನೂ ನೀಡಿವೆ. ಮಲ್ಯ, ಮೋದಿ ಹಾಗೂ ಚೋಕ್ಸಿ ಇವರೆಲ್ಲ ವ್ಯವಹಾರಕ್ಕಾಗಿ ಸಾಲ ಪಡೆದು, ಆ ಹಣವನ್ನು ಬೇರೆ ಉದ್ದೇಶಗಳಿಗೆ ವಿನಿಯೋಗಿಸಿ, ವಿದೇಶಗಳಲ್ಲೂ ಅಸ್ತಿ ಖರೀದಿಸಿ, ನಂತರ ತಮ್ಮ ಕಂಪನಿಗೆ ನಷ್ಟವಾಗಿದೆ ಎಂದು ಲೆಕ್ಕ ತೋರಿಸಿ ಸಾಲ ವಂಚಿಸಿ, ದೇಶ ತೊರೆದು ಲಂಡನ್, ಹಾಂಗ್‌ ಕಾಂಗ್, ದುಬೈ, ಸಿಂಗಾಪುರ, ಆಂಟಿಗುವಾ ಮೊದಲಾದ ಕಡೆ ತಲೆಮರೆಸಿಕೊಂಡಿದ್ದಾರೆ.
ಕಂಪನಿಯ ದಿವಾಳಿ ಘೋಷಿಸಿ ಬ್ಯಾಂಕ್ ಗಳಿಗೆ ವಂಚಿಸುವವರನ್ನು ಕಾನೂನು ಕಟಕಟೆಗೆ ತರಲು ಸಮರ್ಪಕ ಕಾನೂನು ದೇಶದಲ್ಲಿರಲಿಲ್ಲ. ಹೀಗಾಗಿ ದೀವಾಳಿ ಎಂದು ಘೋಷಿಸುವ ಕಂಪನಿಗಳ, ಅವುಗಳ ಮಾಲೀಕರ ಆಸ್ತಿ ವಶಪಡಿಸಿಕೊಂಡು ಮಾರಾಟ ಮಾಡಿ ಸಂಸ್ಥೆಯ ಹೂಡಿಕೆದಾರರು ಹಾಗೂ ಉದ್ಯೋಗಿಗಳಿಗೆ ಪರಿಹಾರ ಕೊಡುವ ಮತ್ತು ಬ್ಯಾಂಕ್ ಸಾಲ ತೀರಿಸಲು ಅನುವು ಮಡುವಂತೆ ಇನ್‌ಸಾಲ್ವೆನ್ಸಿ ಆಂಡ್ ಬ್ಯಾಂಕ್ರಪ್ಟಸಿ ಕೋಡ್ 2016 (ದಿವಾಳಿ ಮತ್ತು ದಿವಾಳಿತನ ಕಾನೂನು) ಅನ್ನುವ ತಿದ್ದುಪಡಿಯೊಂದಿಗೆ ಕಾನೂನನ್ನು ಜಾರಿ ಗೊಳಿಸಲಾಯಿತು. ಇದರ ಜತೆಗೆ ದೇಶದ ಬ್ಯಾಂಕ್‌ಗಳ ಸಾಲವನ್ನು ಉದ್ದೇಶಪೂರ್ವಕ ವಂಚಿಸಿ ವಿದೇಶಗಳಿಗೆ ಪಲಾಯನ ಮಾಡಿ ತಲೆ ಮರೆಸಿಕೊಳ್ಳುವವರ ವಿದೇಶದಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವ ಹಾಗೂ ಅವರನ್ನು ಭಾರತಕ್ಕೆ ಕರೆತಂದು ಶಿಕ್ಷಿಸುವ ಉದ್ದೇಶ ದಿಂದ-ಗ್ಯುಟಿವ್ಇಕನಾಮಿಕ್ಅ-ಂಡರ್ಸ್ಆಕ್ಟ್ (ಆರ್ಥಿಕ ಅಪರಾಧ ಗಳನ್ನೆಸಗಿ ತಲೆಮರೆಸಿಕೊಂಡಿರುವವರ ವಿರುದ್ಧದ ಕಾಯಿದೆ) ಅನ್ನು 2018ರಲ್ಲಿ ಸರಕಾರ ಜಾರಿಗೆ ತಂದಿದೆ.
ಇದೇ ಕಾಯಿದೆಯಡಿಯಲ್ಲಿ ಮಲ್ಯ, ಮೋದಿ ಹಾಗೂ ಚೋಕ್ಸಿ ಇವರ ವಿದೇಶೀ ಆಸ್ತಿಗಳನ್ನೂ ಸರಕಾರ ಮುಟ್ಟುಗೋಲು ಹಾಕಿ ನಂತರ ಮಾರಾಟ ಮಾಡಿ 18000 ಕೋಟಿ ರುಪಾಯಿಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಇದೇ ಕಾನೂನಿನ ಅಡಿ ಯಲ್ಲಿ ಮಲ್ಯ ಹಾಗೂ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಲಂಡನ್‌ನ ನ್ಯಾಯಾಲಯಗಳಲ್ಲಿ ಭಾರತ ಕಾನೂನು ಹೋರಾಟ ನಡೆಸುತ್ತಿದೆ. ಚೋಕ್ಸಿಯನ್ನು ಭಾರತಕ್ಕೆ ಗಡೀಪಾರು ಮಾಡಬೇಕೆಂದು ಆಂಟಿಗುವಾ ಹಾಗೂ ಡೊಮಿನಿಕಾಗಳ ಕೋರ್ಟುಗಳಲ್ಲಿ ಹೋರಾಟ ನಡೆಸುತ್ತಿದೆ.
ಎಬಿಜಿ ಶಿಪ್‌ಯಾರ್ಡ್ ಅನ್ನುವ ಹಡಗು ನಿರ್ಮಾಣದ ಕಂಪನಿಯ ನಿರ್ದೇಶಕರು ಎಸ್‌ಬಿಐ, ಐಸಿಐಸಿಐ, ಐಡಿಬಿಐ, ಬ್ಯಾಂಕ್ ಆಫ್ ಬರೋಡಾ ಮೊದಲಾದ 28 ಬ್ಯಾಂಕ್‌ಗಳಿಂದ 22848 ಕೋಟಿ ರುಪಾಯಿಗಳ ಸಾಲ ಪಡೆದು ಬೇರೆಯ ಉದ್ದೇಶಗಳಿಗೆ ವರ್ಗಾವಣೆ ಮಾಡಿ ವಂಚಿಸಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. 2005 ರಿಂದ 2012ರ ವರೆಗೆ ದೊಡ್ಡ ಮೊತ್ತದ ಸಾಲಗಳನ್ನು ಪಡೆದುಕೊಳ್ಳಲಾಗಿತ್ತು.
2013ರಲ್ಲಿ ಸಾಲಗಳು ಮರುಪಾವತಿ ನಿಂತುಹೋಗಿ ನಾನ್ ಪಫಾರ್ಮಿಂಗ್ ಅಸೆಟ್/ಎನ್‌ಪಿಎ(ಕಾರ್ಯನಿರ್ವಹಿಸದ ಆಸ್ತಿ/ಕೆಟ್ಟ ಸಾಲ) ಎಂದು ಘೋಷಿಸಲ್ಪಟ್ಟವು. ಈ ಕುರಿತು ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಎಬಿಜಿ ಶಿಪ್‌ಯಾರ್ಡ್ ಸಂಸ್ಥೆಯ ವಹಿವಾಟಿನ ಕುರಿತಾಗಿ ಫಾರೆನ್ಸಿಕ್ ಆಡಿಟ್ ನಡೆಸಲಾಗಿದ್ದು ಕಂಪನಿಯ ಹೆಸರಿನಲ್ಲಿ ಪಡೆಯಲಾದ ಸಾಲದ ಹಣವನ್ನು ಬೇರೆಯ ಕಂಪನಿ ಗಳಲ್ಲಿ ಹೂಡಿಕೆ ಮಾಡಲಾಗಿದೆ; ವಿದೇಶಗಳಲ್ಲಿರುವ ಸಂಸ್ಥೆಗಳ ಮೇಲಿನ ಹೂಡಿಕೆಗೂ ಈ ಮೊತ್ತ ಬಳಸಲಾಗಿದೆ ಎಂಬುದು ಗೊತ್ತಾಗಿದೆ. ಈ ಕುರಿತು ಎಬಿಜಿ ಸಂಸ್ಥೆಯ ಮಾಜಿ ನಿರ್ದೇಶಕರುಗಳಾದ ರಿಷಿ ಅಗರ್ವಾಲ, ಸನಾತನಮ್ ಮುತ್ತುಸ್ವಾಮಿ ಮತ್ತು ಅಶ್ವಿನ್ ಕುಮಾರ್ ವಿರುದ್ಧ ಇಡಿ ತನಿಖೆ ನಡೆಯುತ್ತಿದೆ. ಇವರು ದೇಶ ಬಿಟ್ಟು ಹೋಗದಂತೆ ತಡೆಯಲು ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ಲುಕೌಟ್ ನೋಟೀಸ್ ಕೊಡಲಾಗಿದೆ. ಅಪರಾಧವನ್ನು ಅರ್ಥ ಮಾಡಿಕೊಳ್ಳಲು, ವಂಚನೆಯ ಮೊತ್ತ ವನ್ನು ಲೆಕ್ಕ ಹಾಕಲು ಹಾಗೂ ವಂಚನೆಯ ರೀತಿ ತಿಳಿಯಲು ಇಷ್ಟು ಸಮಯ ಬೇಕಾಯಿತು. ಇದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಲು ಹಾಗೂ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಇನ್ನೂ ಒಂದಿಷ್ಟು ಕಾಲ ಬೇಕು.
ಭಾರತದ ಬ್ಯಾಂಕುಗಳಲ್ಲಿ ಮರುಪಾವತಿ ಆಗದ ಸಾಲಗಳ ವಸೂಲಿ ಸುಗಮಗೊಳಿಸುವಲ್ಲಿ ನರೇಂದ್ರ ಮೋದಿ ಸರಕಾರ ಜಾರಿಗೆ ತಂದ ಇನ್‌ಸಾಲ್ವೆನ್ಸಿ ಆಂಡ್ ಬ್ಯಾಂಕ್ರಪ್ಟಸಿ ಕೋಡ್ 2016(ಐಬಿಸಿ-ದಿವಾಳಿ ಮತ್ತು ದಿವಾಳಿತನ ಕಾನೂನು) ಕಾನೂನು ಬಹುದೊಡ್ಡ ಪಾತ್ರ ವಹಿಸಿದೆ. ಇದರಿಂದ 2014 ರ ನಂತರ ಸುಮಾರು 5.5 ಲಕ್ಷ ಕೋಟಿ ರುಪಾಯಿಗಳಷ್ಟು ಕೆಟ್ಟ ಸಾಲಗಳು ಮರುಪಾವತಿಗೊಂಡಿವೆ. ಕಳೆದ 7 ವರ್ಷಗಳ ಹಿಂದೆ ಶೇ.8.2ರಷ್ಟಿದ್ದ ಕೆಟ್ಟಸಾಲಗಳು 2021ರ ಅಂತ್ಯದ ವೇಳೆ ಶೇ.6.9ಕ್ಕೆ ಇಳಿದಿವೆ.
ದಿವಾಳಿ ಘೋಷಿಸಿದ್ದ ಭೂಷಣ್ ಸ್ಟೀಲ್ಸ್ ಅನ್ನು ದಿವಾಳಿ ಕಾನೂನಿನ ಮೂಲಕ ಟಾಟಾ ಸ್ಟೀಲ್ಸ್‌ಗೆ ಪರಭಾರೆ ಮಾಡಿ ಭೂಷಣ್ ಸ್ಟೀಲ್ಸ್‌ನ 35200 ಕೋಟಿ ರುಪಾಯಿಗಳ ಸಾಲ ತೀರಿಸಲಾಗಿದೆ. ಎಸ್ಸಾರ್ ಸ್ಟೀಲ್ಸ್‌ನ 50000 ಕೋಟಿ ರುಪಾಯಿಗಳ ಕೆಟ್ಟ ಸಾಲ ವನ್ನು ಮರು ಪಾವತಿ ಮಾಡಿದ ಆರ್ಸೆಲರ್ ಮಿತ್ತಲ್ ಹಾಗೂ ನಿಪ್ರೋನ್ ಸ್ಟೀಲ್ ಕಂಪೆನಿಗಳು ಎಸ್ಸಾರ್ಸ್ಟೀಲ್ಸ್ಅನ್ನು ತಮ್ಮ ತೆಕ್ಕೆಗೆ ಪಡೆದುಕೊಂಡಿವೆ.
ಜೆಎಸ್‌ಡಬ್ಲ್ಯು ಸ್ಟೀಲ್ಸ್ ಕಂಪನಿಯು ಭೂಷಣ್ ಪವರ್ ಆಂಡ್ ಸ್ಟೀಲ್ಸ್ ಕಂಪನಿಯ 19350 ಕೋಟಿ ರುಪಾಯಿಗಳ ಸಾಲ ಮರು ಪಾವತಿ ಮಾಡಿ ಭೂಷಣ್ ಪವರ್ ಆಂಡ್ ಸ್ಟೀಲ್ಸ್ ಕಂಪನಿಯ ಒಡೆತನ ಪಡೆದಿದೆ. ಇದೇ ರೀತಿಯ ಪ್ರಕ್ರಿಯೆಯ ಮೂಲಕ 5.5 ಲಕ್ಷ ಕೋಟಿ ರುಪಾಯಿಗಳ ಕೆಟ್ಟ ಸಾಲಗಳು ಬ್ಯಾಂಕುಗಳಿಗೆ ಮರುಪಾವತಿಗೊಂಡಿವೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್, ಮಾಜಿ ವಿತ್ತ ಮಂತ್ರಿ ಪಿ.ಚಿದಂಬರಂ, ಅವರ ಮಗ ಕಾರ್ತಿ ಚಿದಂಬರಂ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಎಲ್ಲರೂ ಕಾನೂನು ಬಲೆಗೆ ಬಿದ್ದಿದ್ದಾರೆ. ಆರ್ಥಿಕ ಅಪರಾಧಗಳನ್ನು ಸಾಬೀತು ಪಡಿಸುವ ಪ್ರಕ್ರಿಯೆ ಕಠಿಣ ಹಾಗೂ ಸುದೀರ್ಘ. ಆದರೆ ಲಾಲೂ ಯಾದವ್ ಅವರಂತಹ ಪ್ರಭಾವಿ ರಾಜಕಾರಣಿಗೂ ಭ್ರಷ್ಟಾಚಾರ ವೆಸಗಿ ಕಾನೂನಿನ ಕುಣಿಕೆ ಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು, ಆರ್ಥಿಕಅಪರಾಧಿಗಳಿಗಿದು ಕಾಲವಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ