ಇದು ಅಲ್ಲವೇ ಪ್ರಜಾಪ್ರಭುತ್ವದ ಸೊಬಗು ?
ಹೃತಿಕ್ ಕುಲಕರ್ಣಿ
ದೆಹಲಿಯ ಮಾದರಿಯಲ್ಲಿಯೇ ಆಮ್ ಆದ್ಮಿ ಪಂಜಾಬ್‌ನಲ್ಲೂ ಬಹುಮತ ಸಾಧಿಸಿದೆ. ಅರ್ಹತೆಯಿರುವ ವ್ಯಕ್ತಿ ಪಕ್ಷ ಕಟ್ಟಿ ಅದನ್ನು ಅಧಿಕಾರಕ್ಕೆ ತರುವ ಅವಕಾಶವನ್ನು ಹೊಂದಿರುವುದು ಪ್ರಜಾಪ್ರಭುತ್ವದ ನಿಜವಾದ ಸೊಬಗಾಗಿದೆ
ನೋಡಿ, ಇದೇ ಪ್ರಜಾಪ್ರಭುತ್ವದ ಸೊಬಗು. ಇದೇ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಿರುವ ಪ್ರಚಂಡ ಶಕ್ತಿ. ಊಹೆ ಮತ್ತು ಕಲ್ಪನೆಗಳಿಗೆಪ್ರಜಾ ರಾಜ್ಯದಲ್ಲಿ ಸ್ವಲ್ಪವೂ ಜಾಗವಿಲ್ಲ. 30 ವರ್ಷಗಳ ಹಿಂದೆ ಮುಂದೊಮ್ಮೆ ಬಿಜೆಪಿ ಪಕ್ಷ ದೇಶದಲ್ಲಿ ಆಡಳಿತ ಮಾಡುತ್ತದೆ ಎಂದು ಯಾರಾದರೂ ಊಹಿಸಿ ಹೇಳಿದ್ದಿದ್ದರೆ ಎಲ್ಲರೂ ಕುಹುಕ ಮಾಡಿಗೊಳ್ಳೆಂದು ನಕ್ಕು ನಿರ್ಲಕ್ಷಿಸಿ ಬಿಡುತ್ತಿದ್ದರು.
ಹಾಗೇಯೇ ಸುಮಾರು 60 ವರ್ಷ ಗಳ ಕಾಲ ಭಾರತದ ಆಡಳಿತ ಚುಕ್ಕಾಣಿ ಹಿಡಿದು- ದೇಶ ವನ್ನು ಮುನ್ನಡೆಸಿದ ಕಾಂಗ್ರೆಸ್ ೩೦ ವರ್ಷಗಳಿಂದಾಚೆಗೆ ಧೂಳಿ ಪಟವಾಗುತ್ತದೆ ಎಂದು ಯಾರಾದರೂ ಹೇಳಿದ್ದರೆ ಅವನನ್ನು ಬುದ್ದಿಕೆಟ್ಟವ ಎನ್ನುತ್ತಿದ್ದರು. 1998 ರಲ್ಲಿ ಕಾಂಗ್ರೆಸಿನಿಂದ ಹೊರಬಂದು ಮಮತಾ ಬ್ಯಾನರ್ಜಿ ಟಿಎಂಸಿ ಎಂಬ ಸ್ವಂತ ಪಕ್ಷ ಕಟ್ಟುತ್ತಾರೆ. ಆವಾಗ ಯಾರಾದರೂ ಊಹಿಸಿದ್ದರಾ – 2011ರಲ್ಲಿ ದೀರ್ಘ ಕಾಲ ಪಶ್ಚಿಮ ಬಂಗಾಳ ಆಳಿದ ಕಮ್ಯುನಿಸ್ಟ್ ಪಾರ್ಟಿಯನ್ನು ಮಣಿಸಿ ಇವರು ಅಧಿಕಾರ ಪಟ್ಟ ಏರುತ್ತಾರೆಂದು? ಏರಿದರು.
ಎನ್.ಟಿ ರಾಮರಾವ್ ದಿಢೀರ್ ಅಂತ ತೆಲಗು ದೇಶಂ ಪಕ್ಷ ಕಟ್ಟಿ ಬರೀ ಒಂಬತ್ತೇ ತಿಂಗಳಲ್ಲಿ ಆಂಧ್ರದ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿಯಾಗುತ್ತಾರೆ. ಅಲ್ಲಿಂದ ಮುಂದೆ ಅವರು ಆಂಧ್ರದ ಪ್ರಶ್ನಾತೀತ ರಾಜಕೀಯ ನಾಯಕರಾಗಿ ಬಿಡುತ್ತಾರೆ. ಇದನ್ನು ಯಾರು ತಾನೆ ಕಲ್ಪಿಸಿಕೊಂಡಿರಲಿಕ್ಕೆ ಸಾಧ್ಯ? ಹೀಗೆ ಇನ್ನೂ ಸಾಕಷ್ಟು ಉದಾಹರಣೆಗಳು ಕೆದಕಿ ತೆಗೆದರೆ ಸ್ವಾತಂತ್ರ್ಯೋತ್ತರ ಭಾರತರಾಜಕಾರಣ ದಲ್ಲಿ ಆಶ್ಚರ್ಯವಾಗುವಷ್ಟು ಸಿಕ್ಕಾವು!
ಅರ್ಥ ಸರಳವಾಗಿದೆ ಅಲ್ಲವೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಮನದಿಂಗಿತವೇ ಅಂತಿಮ. ಅದನ್ನು ಯಾರೂ ಊಹಿಸಲಾರರು. ಕಲ್ಪಿಸಿಕೊಳ್ಳಲೂ ಕಷ್ಟ ಸಾಧ್ಯವದು. ಆದರೆ ಅದೇ ಅಲ್ಲವೆ ಪ್ರಜಾಪ್ರಭುತ್ವದ ಸೊಬಗು. ಅ ಇರುವುದಲ್ಲವೇ ಡೆಮೊಕ್ರೆಸಿಯ ಮೆರಗು. ಆದ್ದರಿಂದ ಪ್ರಜಾಪ್ರಭುತ್ವದಲ್ಲಿ ಎಂದೂ ಯಾವ ರಾಜಕಾರಣಿಯೂ ಅಥವಾ ಯಾವ ರಾಜಕೀಯ ಪಕ್ಷವೂ ಮತ್ತೊಂದು ಪಕ್ಷವನ್ನು ಅಷ್ಟು ಲಘುವಾಗಿ ಪರಿಗಣಿಸಬಾರದು ಮತ್ತು ತೀರಾ ಉಪೇಕ್ಷಿಸಲೂ ಬಾರದು. ಇಂದಿನ ಲೇಖನ ವಿಷಯ ಅಂತಹ ಒಂದು ರಾಜಕೀಯ ಪಕ್ಷದ ಅನಪೇಕ್ಷಿತ ಅಧಿಕಾರ ವಿಸ್ತರಣೆ.
ಆ ಪಕ್ಷದ ಹೆಸರು ಆಮ್ ಅದ್ಮಿ. ಸ್ಥಾಪಕ ಇಂದಿನ ದೆಹಲಿ ಮುಖ್ಯಮತ್ರಿ ಅರವಿಂದ ಕೇಜ್ರಿವಾಲ. 2011-12ರ ಭ್ರಷ್ಟಾಚಾರ ವಿರುದ್ಧ ಚಳುವಳಿಯನ್ನು ನಿಭಾಯಿಸಿದ ರೀತಿ ಇವರನ್ನು ಜನನಾಯಕನ್ನಾಗಿ ಮಾಡಿ ಬಿಟ್ಟಿತ್ತು. ದೆಹಲಿಗರಿಗಂತೂ ಕೇಜ್ರಿವಾಲ್ ಪ್ರಾಮಾಣಿಕತೆಯ ಮತ್ತು ತತ್ವ ಬದ್ಧತೆಯ ಮೂರ್ತಿವೆತ್ತ ರೂಪವೇ ಆಗಿಬಿಟ್ಟರು. ಜನರ ಮನಸ್ಥಿತಿಯನ್ನು ಅರಿತ ಕೇಜ್ರಿವಾಲ್ 2012 ನವೆಂಬರ್‌ನಲ್ಲಿ ಆಮ್ ಆದ್ಮಿ ಪಕ್ಷ ಹುಟ್ಟುಹಾಕಿಅಧಿಕೃತವಾಗಿ ರಾಜಕಾರಣಕ್ಕೆ ಕಾಲಿಟ್ಟರು. ಎರಡು ಘಟಾನುಘಟಿ ರಾಷ್ಟ್ರೀಯ ಪಕ್ಷಗಳ ನಡುವೆ 2013 ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70ರಲ್ಲಿ 69 ಕ್ಷೇತ್ರಗಳಿಂದ ಆಮ್ ಆದ್ಮಿಗಳು ಕಣಕ್ಕಿಳಿಯಿತು. ಚುನಾವಣೆ ನಡೆದು ಫಲಿತಾಂಶ ಬಂದಾಗ ಆಮ್ ಆದ್ಮಿ ಪಕ್ಷ 28 ಕ್ಷೇತ್ರ ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಎದ್ದು ನಿಂತಿತು. ಬಿಜೆಪಿ 31 ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಜಯ ತಮ್ಮದಾಗಿಸಿಕೊಂಡವು. ಕಾಂಗ್ರೆಸಿನ ಸಹಕಾರದಿಂದ ಆಪ್ ಸರಕಾರ ರಚಿಸಿತು.
ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾದರು. ಆದರೆ ಭ್ರಷ್ಟಾಚಾರ ವಿರುದ್ಧದ ಶಾಸನವನ್ನು ವಿಧಾನಸಭೆಯಲ್ಲಿ ಅಂಗೀಕರಿಸುವಲ್ಲಿ ಅವರಿಗೆ ಬೇರೆ ಪಕ್ಷಗಳ ಅನುಮೋದನೆ ಸಿಗದೆ ಹೋದ ಕಾರಣ 49 ದಿನಗಳಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಒಗೆದರು. ಅಲ್ಲಿಗೆ ದೆಹಲಿ ರಾಷ್ಟ್ರಪತಿ ಆಡಳಿತಕ್ಕೊಳಪಟ್ಟಿತು. 2015ರಲ್ಲಿ ಮತ್ತೆ ದೆಹಲಿ ಚುನಾವಣೆ. ಈ ಸಲ ಆಮ್ ಆದ್ಮಿಗಳು ಬಹುಮತ ಪಡೆದು ಸ್ವತಂತ್ರವಾಗಿ ಸರಕಾರ ರಚಿಸಿದರು. ಅರವಿಂದ ಕೇಜ್ರಿವಾಲ್ ಮತ್ತೆ ಮುಖ್ಯಮಂತ್ರಿಯಾದರು. 2020ಕ್ಕೆಅವಧಿಪೂರ್ಣಗೊಳಿಸಿದ ಅವರು ಬಿಜೆಪಿಯ ಬಿರುಸಿನ ಪ್ರಚಾರದ ಮಧ್ಯೆಯೂ ದೆಹಲಿ ಜನರ ವಿಶ್ವಾಸ ಗಳಿಸಿ ಮುಖ್ಯಮಂತ್ರಿಯಾಗಿ ಇನ್ನೂ ದೆಹಲಿ ಆಡಳಿತ ನಡೆಸುತ್ತಿದ್ದಾರೆ.
ಸ್ವತಂತ್ರವಾಗಿ, ದೆಹಲಿಯಲ್ಲಿ ಅಷ್ಟಿಷ್ಟು ಉತ್ತಮ ಕೆಲಸ ಮಾಡಿzರೆ. ಅದನ್ನು ಅಲ್ಲಗಳೆಯುವಂತಿಲ್ಲ, ಆ ಆಧಾರದ ಮೇಲೇ ಅಲ್ಲವೇ ದೆಹಲಿಗರು ಮೋದಿ ಮಾತನ್ನೂ ಕಿವಿಗೆ ಬಿಟ್ಟು ಕೊಳ್ಳದೆ ಅರವಿಂದರನ್ನು ಮತ್ತೆ ಗೆಲ್ಲಿಸಿದ್ದು! ಅರವಿಂದ ಕೇಜ್ರಿವಾಲ್ ಒಬ್ಬ ಸಂಘಟನಕಾರ. ಅದರಲ್ಲಿ ಸಂಶಯ ಬೇಡ. ಮತ್ತು ಆ ಸಂಘಟನೆಯನ್ನು ಯಾವಾಗ, ಹೇಗೆ, ಎಲ್ಲಿ ಮತ್ತು ಯಾವುದಕ್ಕೆ ಬಳಸಬೇಕು ಎನ್ನುವುದನ್ನೂ ಅವರು ಬಹಳ ಸರಿಯಾಗಿ ತಿಳಿದು ಕೊಂಡಿದ್ದಾರೆ.
೨೦೧೨ರ ಅಣ್ಣಾ ಚಳುವಳಿಯ ಭಾಗವಾಗಿದ್ದ ಕೇಜ್ರಿವಾಲ್ ಗಳಿಸಿದ ಖ್ಯಾತಿ ಕಡಿಮೆ ಅಂದುಕೊಂಡವರಿಲ್ಲ ತಾನೆ! ಅದು ಊಹಿಸಲು ಅಸಾಧ್ಯ. ಆದರೆ ಕೇಜ್ರಿವಾಲ್ ಅವರಿಗೆ ಎಲ್ಲಾ ಅನಿಸಿರಬೇಕು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯ ಬೇಕು ಅಂತ. ರಾಜ ಕಾರಣದಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಗೆ ರಾಜಕಾರಣದಿಂದಲೇ ಉತ್ತರ ಕೊಡಬೇಕು ಎಂದು ಪಕ್ಷ ಮಾಡಿದರು. ಆ ಕಾಲಕ್ಕೆ ಅವರಿಗೆ ಜನ ಬೆಂಬಲವೂ ಇತ್ತು. ಭ್ರಷ್ಟಾಚಾರ ವಿರುದ್ಧ ಚಳುವಳಿಯಲ್ಲಿ ಭಾಗಿಯಾಗಿದ್ದ ಹಲವು ನಾಯಕರ ಸಾಥ್ ಕೂಡ ಇತ್ತು. ಇದನ್ನು ಕೇಜ್ರಿವಾಲ್ ಚೆನ್ನಾಗೇ ಬಳಸಿಕೊಂಡರು. ಅದು ತಪ್ಪೇನೂ ಅಲ್ಲ. ತತಲವಾಗಿ ಆಮ್ ಅದ್ಮಿ ಪಕ್ಷ ಎದ್ದು ಬಂದು ಸರಕಾರ ರಚಿಸಿತು.
ಕೇಜ್ರಿವಾಲ್ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ಕೊಟ್ಟರು. ದಿನದ ಇಪ್ಪತ್ತನಾಲ್ಕು ಗಂಟೆ ವಿದ್ಯುತ್ ಪೂರೈಕೆ, ಪ್ರತಿ ಮನೆಗೆ ಪ್ರತಿ ತಿಂಗಳು ಉಚಿತ 20000 ಲೀಟರ್ ನೀರು ಹೀಗೆ ಇನ್ನೂ ಹಲವು ಅಭಿವೃದ್ಧಿ ಪರ ಕೆಲಸಗಳು ಕೇಜ್ರಿವಾಲ್ ನೇತೃತ್ವದ ಸರಕಾರ ದಿಂದ ಆಗಿವೆ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಇದ್ದಾಗಹೇಗೆ ಗುಜರಾತ್ ಮಾಡೆಲ್ ಹೆಸರಾಗಿತ್ತೋ ಇಂದು ದೇಶಾದ್ಯಂತ ದೆಹಲಿ ಮಾಡೆಲ್ ಮಾತು ಬಳಕೆಯಲ್ಲಿದೆ. ಇದನ್ನು ಆಮ್ ಆದ್ಮಿಗಳು ಸೂಕ್ಷ್ಮವಾಗಿ ದೇಶದ ಇತರ ರಾಜ್ಯಗಳಲ್ಲೂ ಒಯ್ಯುವ ಮತ್ತು ಆ ರಾಜ್ಯದ ಜನರನ್ನು ಪ್ರಭಾವ ಮಾಡುವ ಪ್ರಯತ್ನ ಕಣ್ಣಿಗೆ ಕಾಣದ ಹಾಗೆ ನಡೆಸುತ್ತಿದ್ದಾರೆ.
ಯಾವಾಗ ಒಂದು ರಾಜ್ಯದ ಆಡಳಿತ ಪಕ್ಷ ದಿಕ್ಕೆಟ್ಟು ಹೋಗುತ್ತದೋ, ವಿರೋಧ ಪಕ್ಷ ಜನರ ವಿರೋಧವನ್ನು ಅನುಭವಿಸು ತ್ತಿರುತ್ತದೋ ಆವಾಗ ಆಮ್ ಆದ್ಮಿಗಳು ಆ ರಾಜ್ಯಗಳಲ್ಲಿ ಕಣ್ಣಿಗೆ ಕಾಣುವ ಹಾಗೆ ಎದ್ದು ಬರುತ್ತಾರೆ. ಅದೇ ಗೋವಾದಲ್ಲಿ ಆಗಿದ್ದು. ಅದೇ ಸ್ವಲ್ಪ ವರ್ಷಗಳಿಂದ ಪಂಜಾಬ್‌ನಲ್ಲಿ ಆಗುತ್ತಿದ್ದದ್ದು. ಅವರು ಹೀಗೆ ಎದ್ದು ಬರುವುದು ಅವರ ರಾಜಕೀಯ ತಂತ್ರ. ಕೇಜ್ರಿ ವಾಲರ ರಾಜತಂತ್ರ.
2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷ ಎರಡನೇ ಸ್ಥಾನ ಪಡೆದು ವಿರೋಧ ಪಕ್ಷವಾಗಿತ್ತು ಮತ್ತು ಕಾಂಗ್ರೆಸ್ ಸರಕಾರ ರಚಿಸಿತ್ತು. ಈ ಸಲದ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಅಪ್ರಬುದ್ಧತೆ ತೋರದೆ ಹೋಗಿದ್ದಿದ್ದರೆ ಆಪ್ ಇಷ್ಟು ಸೀಟ್ ಗೆಲ್ಲುತ್ತಿರಲಿಲ್ಲವೆನ್ನುವುದು ಸ್ಪಷ್ಟ. ಹೇಗೆ ಹಿಂದೆ ಕರ್ನಾಟಕದಲ್ಲಿ ಯಡಿಯೂರಪ್ಪನವರು ಪಕ್ಷ ಬಿಟ್ಟು ಮತ ಧ್ರುವೀಕರಣ ಕ್ಕೆ ಕಾರಣ ವಾದರೋ ಅದರ ಫಲವನ್ನು ಹೇಗೆ ಕಾಂಗ್ರೆಸ್ ಉಂಡಿತೋ ಅದೇ ಪಂಜಾಬ್ ನಲ್ಲೂ ಈಗ ಆಗಿರುವುದು. ಅದರೆ ಇಲ್ಲಿ ಒಂದೆರಡು ಹೆಚ್ಚಿನ ಅಂಶಗಳೂ ಸೇರಿದ ಹಾಗಿವೆ. ಈಗ ಅವುಗಳನ್ನು ನೊಡೋಣ.
ಕಾಂಗ್ರೆಸಿನ ಒನ್ ಮ್ಯಾನ್ ಆರ್ಮಿಯಂತಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಕಡೆಘಳಿಗೆಯಲ್ಲಿ ಕಾಂಗ್ರೆಸ್ ಹೀನಾ ಮಾನವಾಗಿ ನಡೆಸಿಕೊಂಡು ರಾಜೀನಾಮೆ ಪಡೆದುಕೊಂಡಿತು. ಇದರಿಂದ ಅಮರೀಂದರ್ ಪರ ಇದ್ದ ಗಣನೀಯ ಮತಗಳು ಆಪ್ ಕಡೆ ತಿರುಗಿರಲಿಕ್ಕೂ ಸಾಧ್ಯ. ಒಂದು ವೇಳೆ ಅಮರೀಂದರ್ ಸಿಂಗ್‌ಗೆ ಮತ ಚಲಾಯಿಸಿದರೆ ಅವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದನ್ನ ಅರಿತಿದ್ದ ಜನರು ಆಮ್ ಆದ್ಮಿಗೆ ಬೆಂಬಲ ಸೂಚಿಸಿದರು. ಇನ್ನೊಂದು ಕಡೆ ದಿಢೀರನೆ ಕಾಂಗ್ರೆಸ್ ದಲಿತ ಸಿಖ್ ಎಂಬ ಕಾರಣಕ್ಕೆ ಚರಣಜೀತ್ ಸಿಂಗ್ ಚನ್ನಿ ಅವರನ್ನು ಸಿಎಂ ಆಗಿ ಮಾಡಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಚನ್ನಿ ನಡುವಿನಗುದ್ದಾಟಮತದಾರರನ್ನು ಆಕ್ರೋಶಕ್ಕೆ ತಳ್ಳಿತ್ತು.
ಇದರಿಂದ ಮತಗಳು ಆಮ್ ಆದ್ಮಿ ಪಾಲಾಗಿವೆ. ಇಲ್ಲಿ ಗಮನಿಸಬೇಕಾದ್ದು ಇದು. ಈ ಎಲ್ಲ ಬೆಳವಣಿಗೆಗಳನ್ನೂ ನೋಡಿದ ಕೇಜ್ರಿ ವಾಲ್ ಪಂಜಾಬ್‌ನಲ್ಲಿ ತಮ್ಮ ಪಕ್ಷದ ನೆಲೆ ಗಟ್ಟಿಗೊಳಿಸಲು ಆಶ್ವಾಸನೆಗಳ ಮೇಲೆ ಆಶ್ವಾಸನೆ ಕೊಡುತ್ತಾ, ಭಾಷಣಗಳ ಮೇಲೆ ಭಾಷಣ ಹೊಡೆಯುತ್ತಾ ಆಪ್ ಪಕ್ಷಕ್ಕೆ ಬರಬಹುದಾದ ಎಲ್ಲ ಮತಗಳನ್ನೂ ಎತ್ತ ಕಡೆಯೂ ಹೊರಳದೆ ತಮಗೇ ಬರುವಂತೆ ನೋಡಿಕೊಂಡಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿzರೆ. ಇದೆಲ್ಲವನ್ನೂ ಬರೀ ಒಬ್ಬ ಸಂಘಟನಕಾರ ಮಾತ್ರ ಮಾಡಲಾರ. ಜನಮನವನ್ನು ಸೆಳೆಯುವ ಒಳ್ಳೆಯ ವಾಗ್ಮಿಯೂ ಇಲ್ಲಿ ಬೇಕಿರುತ್ತದೆ.
ಕೇಜ್ರಿವಾಲ್ ಒಳ್ಳೆ ವಾಗ್ಮಿಯೂ ಹೌದು ನೋಡಿ. ದೆಹಲಿಯಲ್ಲಿ ಆದಂತೆ ಇಲ್ಲೂ ಆಯಿತು. ಆದರೆ ಸಂದರ್ಭಗಳು ಬೇರೆ ಬೇರೆ. ತಂತ್ರಗಾರಿಕೆ ಹೆಚ್ಚೂ ಕಡಿಮೆ ಒಂದೇ. ದೆಹಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಒಂದುಗೂಡಿದ್ದ ಜನರ ಮನಸ್ಸನ್ನು ಗೆದ್ದ ಅರವಿಂದರು ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಕಿತ್ತಾಟ ಮತ್ತು ನಿಷ್ಕ್ರಿಯತೆಯಿಂದ ಬೇಸತ್ತ ಪಂಜಾಬಿಗರ ಮನಸ್ಸನ್ನು ಗೆದ್ದರು.