ವಲಸೆ ಹಿಂದೆ ಇದೆ ನೆಮ್ಮದಿಯ ಬದುಕಿನ ಕನಸು
ಅಭಿಮತ
ರಮಾನಂದ ಶರ್ಮಾ
ಒಂದು ಸಂಸ್ಕ್ರತಿಯ ಚೌಕಟ್ಟು, ಸಂಪ್ರದಾಯ, ಪರಂಪರೆ ಮತ್ತು ಬದುಕಿನ ವೈಖರಿಯಲ್ಲಿ ಬೆಳೆದ ತಮ್ಮ ಮಕ್ಕಳು ಇದಕ್ಕೆ ವ್ಯತಿರಿಕ್ತ ಪರಿಸರದಲ್ಲಿ ಬೆಳೆಯುವುದನ್ನು ನೋಡಲಾಗದೇ ತಮ್ಮತನವನ್ನು ಉಳಿಸಿಕೊಳ್ಳಲು ಕೆಲವರು ವಿದೇಶಗಳಿಗೆ ಬೈ ಹೇಳಿ ವಾಪಸು ಬರುತ್ತಾರೆಯೇ ವಿನಃ ಬೇರೆ ಯಾವುದೇ ಕಾರಣಗಳಿಗೆ ಅವರು ಆ ದೇಶಗಳಿಗೆ ಬೆನ್ನು ತೋರಿಸುವುದಿಲ್ಲ.
ನಮ್ಮ ದೇಶದ ಜನರು ದೇಶ ತೊರೆಯುತ್ತಿರುವಬಗೆಗೆ ಮಾರ್ಗನ್ ಸ್ಟ್ಯಾನ್ಲಿ ೨೦೧೮ರಲ್ಲಿ ಒಂದು ವರದಿ ನೀಡಿದೆ. ಆ ವರದಿ ಪ್ರಕಾರ 2014ರಿಂದ 2018ರ ವರೆಗೆ 23000 ಭಾರತೀಯ ಕೋಟ್ಯಾಧಿಪತಿಗಳು ದೇಶ ತೊರೆದು, ವಿದೇಶಕ್ಕೆ ವಲಸೆ ಹೋಗಿದ್ದಾರಂತೆ.
ಇತ್ತೀಚೆಗಿನ ಗ್ಲೋಬಲ್ ವೆಲ್ತ್ ಮೈಗ್ರೇಷನ್ ರೆವ್ಯೂ ವರದಿಯಂತೆ 2020ರಲ್ಲಿ 5000 ಕೋಟ್ಯಧಿಪತಿಗಳು (ದೇಶದ ಒಟ್ಟೂ ಶ್ರೀಮಂತ ರಲ್ಲಿ ಶೇಕಡಾ 2ರಷ್ಟು ಜನ) ದೇಶದ ಪೌರತ್ವ ತೊರೆದು ವಿದೇಶಗಳಿಗೆ ವಲಸೆಹೋಗಿದ್ದಾರಂತೆ. ಇದಕ್ಕೆ ಹೊರತಾಗಿ ದೇಶದಲ್ಲಿ ರುವ 177 ಬಿಲಿಯನೇರ್‌ಗಳು ಮತ್ತು 6884 ಅತಿ ಶ್ರೀಮಂತ ಜನರು ತಮ್ಮ ಮಕ್ಕಳು ಮತ್ತು ಕುಟುಂಬದವರಿಗೆ ಅಮೆರಿಕ, ಆಸ್ಟ್ರೇಲಿಯಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಪೌರತ್ವ ಕೊಡಿಸುವವರಿದ್ದಾರಂತೆ. ಅದರಂತೆ ದೇಶದ ಖ್ಯಾತ ವಿದ್ಯಾಸಂಸ್ಥೆ ಗಳಿಂದ ಹೊರಬರುವ ಎಂಜಿನೀಯರುಗಳು, ವೈದ್ಯರುಗಳು, ಮ್ಯಾನೇಜ್‌ಮೆಂಟ್ ಪದವೀಧರರಲ್ಲಿ ಶೆ.೫೦ಕ್ಕೂ ಮೀರಿ ಪ್ರತಿಭೆಗಳು ವಲಸೆ ಹೋಗುತ್ತಾರೆ ಮತ್ತು ವಿದೇಶಗಳಲ್ಲಿ ತಮ್ಮ ಬದುಕನ್ನು ಕಂಡು ಕೊಳ್ಳುತ್ತಾರೆ ಹಾಗೂ ಕಾಲಕ್ರಮೇಣ ಅವರು ಅಲ್ಲಿಯೇ ನೆಲೆ ಗಾಣುತ್ತಾರೆ. ಈ ವರದಿಗಳು ನೀಡಿದ ಅಂಕಿ-ಸಂಖ್ಯೆಗಳ ಸತ್ಯಾಸತ್ಯತೆ ಬೇರೆ ಮಾತು.
ಆದರೆ, ಅವು ಮೇಲು ನೋಟಕ್ಕೆ ಸರಿ ಎನಿಸು ತ್ತಿದ್ದು, ಅಘಾತಕಾರಿಯಾಗಿವೆ. ಈ ವರದಿ ಸರಕಾರಕ್ಕೆ ಎಚ್ಚರಿಕೆ ಘಂಟೆಯಾಗಬೇಕು ಮತ್ತು ಇದನ್ನು ತಡೆಯಲು ಯುದ್ದೋಪಾದಿ ಯಲ್ಲಿ ಕಾರ್ಯ ಪೃವೃತ್ತರಾಗಬೇಕು. ವಾಸ್ತವದಲ್ಲಿ ಈ ಅಂಕಿ -ಸಂಖ್ಯೆಗಳು ಈ ವರದಿಯಲ್ಲಿ ತೋರಿಸಿದ್ದ ಕ್ಕಿಂತ ಹೆಚ್ಚು ಇರಲೇ ಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಅಭಿಪ್ರಾಯ.
ಈ ರೀತಿಯ ವಲಸೆಯಲ್ಲಿ ಮುಖ್ಯವಾಗಿ ಮೂರು ರೀತಿ ಇವೆ. ವಿಧಾರ್ಥಿಗಳಾಗಿ ಹೋಗಿ ಅಲ್ಲಿಯೇ ಜ್ಞಾನಾರ್ಜನೆ ಮಾಡಿ ಅಲ್ಲಿಯೇ ತಳ ಊರುವುದು. ಎರಡನೆಯದು ಬಿಜಿನೆಸ್‌ಗಾಗಿ ಹೋಗಿ ಕಾಲಘಟ್ಟದಲ್ಲಿ ಅಲ್ಲಿಯೇ ಗಟ್ಟಿಯಾಗಿ ನೆಲೆ ಕಾಣುವುದು. ಮೂರನೆ ಯದು ಕೆಲವು ಉಳ್ಳವರು ಉತ್ತಮ ಆರ್ಥಿಕ, ಸಾಮಾಜಿಕ ಜೀವನಕ್ಕಾಗಿ ಅಭಿವೃದ್ದಿ ಹೊಂದಿದ ದೇಶಗಳಿಗೆ ತಮ್ಮ ಮತ್ತು ತಮ್ಮ ಮುಂದಿನ ಪೀಳಿಗೆಯ ಸಂತೃಪ್ತ ಜೀವನಕ್ಕಾಗಿ ಭಾವನೆ, ಬಾವೋದ್ವೇಗ ಮತ್ತು ದೇಶಪ್ರೇಮವನ್ನು ನಿರ್ಲಕ್ಷಿಸಿ ದೇಶವನ್ನು ತೊರೆದು ಹೋಗುವುದು. ಇವರಿಗೆ ಸಂತೃಪ್ತ, ವಿಲಾಸಿ ಮತ್ತು ಸಂಕಷ್ಟ- ಅಡಚಣೆ ರಹಿತ ಜೀವನದ ಎದುರು ಉಳಿದೆಲ್ಲವೂ ಗೌಣ.
ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋದವರು ಬಹುತೇಕ ಅಲ್ಲಿಯೇ ಉದ್ಯೋಗ ಹಿಡಿದು, ಅಲ್ಲಿಯೇ ಕಾಯಂ ಆಗಲು ಪ್ರಯತ್ನಿಸು ತ್ತಾರೆ. ಹುಡುಗರಾಗಲಿ, ಹುಡುಗಿಯರಾಗಲಿ ಅಲ್ಲಿಯೇ ಇದ್ದವರನ್ನು ಮದುವೆಯಾಗಲು ಇಚ್ಛೆ ಪಡುತ್ತಾರೆ ಅಥವಾ ಅಲ್ಲಿಯೇ ಹೊಗಿ ಸೆಟ್ಲ್ ಅಗಲು ಇಚ್ಛಿಸುವವರನ್ನು ಮದುವೆಯಾಗುತ್ತಾರೆ. ಒಮ್ಮೆ ವಿದೇಶಗಳ ಮುಖ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಬದುಕಿನ ವೈಖರಿಯ ರುಚಿ ಕಂಡವರು ಹಿಂತಿರುಗಿ ನೋಡುವುದಿಲ್ಲ.
ಅವರು     ಅಲ್ಲಿಯೇ ಕಾಯಂ ತಳ ಊರಲು ಎಲ್ಲ ಟ್ರಿಕ್‌ಗಳನ್ನು ಬಳಸುತ್ತಾರೆ. ನಾವು ಭಾರತೀಯರು ಅಥವಾ ಫಿರಭಿ ಹೈ ಹಮ್ ಹಿಂದುಸ್ತಾನಿ ಎನ್ನುವುದು ಕೇವಲ ವೇದಿಕೆಗೆ, ಗಣ ತಂತ್ರ ದಿನಕ್ಕೆ, ಸ್ವಾತಂತ್ರ್ಯೋತ್ಸವ ಅಚರಣೆಯ ದಿನ, ಭಾರತ -ಪಾಕಿಸ್ತಾನ ಯುದ್ಧ ನಡೆದಾಗ ಅಥವಾ ಅವರಿಬ್ಬರ ಮಧ್ಯೆ ಕ್ರಿಕೆಟ್ ಮ್ಯಾಚ್ ನಡದಾಗ ಅಷ್ಟೇ: ಇವರೇಕೆ ವಲಸೆ ಹೋಗುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ಅದರಲ್ಲಿ ಕಾಣುವುದು ಒತ್ತಡ ರಹಿತ, ಜಂಜಾಟವಿಲ್ಲದ ಸುಸೂತ್ರ ಬದುಕು, ಹೆಜ್ಜೆ ಹೆಜ್ಜೆಗೂ ಎದುರಿಸುವ ಅಡಚಣೆಗಳು ಇಲ್ಲದ ನೆಮ್ಮದಿಯ ಜೀವನ.
ಇವೆಲ್ಲವೂ  ಅಗಿದೆ ಎಂದು ಅರ್ಥವಲ್ಲ. ಇಂದಿನ  ಯುಗದಲ್ಲಿ ಹಲವು ದೇಶಗಳಲ್ಲಿ  , ಬದುಕಿನ ವೈಖರಿ, ಸಾಮಾಜಿಕ-ಅರ್ಥಿಕ ಜೀವನ ನಮಗಿಂತ ಉತ್ತಮವಾಗಿರುವುದೇ ಕಾರಣ. ವಿದೇಶದಲ್ಲಿ ಕೆಲಕಾಲ ಇದ್ದು ಯಾರಾದರೂ ಹಿಂತಿರುಗಿ ಬಂದಿದ್ದರೆ ಅಥವಾ ಬರಲು ಚಿಂತಿಸಿದರೆ, ಅದು ಒಂದು ಸಂಸ್ಕ್ರತಿಯ ಚೌಕಟ್ಟು, ಸಂಪ್ರದಾಯ, ಪರಂಪರೆ ಮತ್ತು ಬದುಕಿನ ವೈಖರಿಯಲ್ಲಿ ಬೆಳೆದ ತಮ್ಮ ಮಕ್ಕಳು ಇದಕ್ಕೆ ವ್ಯತಿರಿಕ್ತ ಪರಿಸರದಲ್ಲಿ ಬೆಳೆಯುವುದನ್ನು ನೋಡಲಾ ಗದೇ ತಮ್ಮತನವನ್ನು ಉಳಿಸಿಕೊಳ್ಳಲು ಕೆಲವರು ವಿದೇಶಗಳಿಗೆ ಬೈ ಹೇಳಿ ವಾಪಸು ಬರುತ್ತಾರೆಯೇ ವಿನಃ ಬೇರೆ ಯಾವುದೇ ಕಾರಣಗಳಿಗೆ ಅವರು ಆ ದೇಶಗಳಿಗೆ ಬೆನ್ನು ತೋರಿಸುವುದಿಲ್ಲ.
ಕೆಲವರು ಹುಟ್ಟಿದ ದೇಶದಲ್ಲಿಯೇ ಮಣ್ಣಾಗಬೇಕು ಎನ್ನುವ ಭಾವನಾತ್ಮಕ ತುಡಿತದಿಂದ ಮರಳಿ ಬರುತ್ತಾರೆ. ಅವರ ಸಂಖ್ಯೆ ತಂಬಾ ಕಡಿಮೆ. ಆ ಮಾತು ಬೇರೆ. ಈ ದೇಶದ ಪರಿಸ್ಥಿತಿ ದಿನದಿಂದ ದಿನಕ್ಕೆ ಅಯೋಮಯವಾಗುತ್ತಿದೆ. ಬದುಕು ದುಸ್ತರವಾಗುತ್ತಿದೆ. ಭಿನ್ನತೆಯಲ್ಲಿ ಏಕತೆ (  ) ಘೋಷ ವಾಕ್ಯದಡಿಯಲ್ಲಿ ಏಕತೆಯಲ್ಲಿ ಭಿನ್ನತೆ (  )  ತಾಂಡವ ವಾಡುತ್ತಿದೆ. ಈ ದೇಶ ಧರ್ಮ, ಜಾತಿ, ಮತ-ಪಂಥ, ಉತ್ತರ-ದಕ್ಷಿಣ, ಉಳ್ಳವರು- ಇಲ್ಲದವರ , ಹಿಜಾಬ-ಕೇಸರಿ ಶಲ್ಯ-ನೀಲಿ- ಹಸಿರು ಶಾಲು, ನಗರಿಗರು- ಹಳ್ಳಿಗರು , ಸೆಲೆಬ್ರಿಟಿಗಳು- ಶ್ರೀಸಾಮಾನ್ಯರು ಹೀಗೆ ಛಪ್ಪನ್ನೈವತ್ತಾರು ಚೂರಿನಲ್ಲಿ ಇದೆ. ಪ್ರತಿಯೊಬ್ಬರೂ ದಿನನಿತ್ಯದ ಪ್ರತಿಕ್ಷಣ ಈ ಅಡಚಣೆಗಳನ್ನು ದಾಟಲು ದೊಂಬರಾಟ ನಡೆಸುವ ಅನಿವಾರ್ಯ ಇದೆ.
ಈ ಜಂಜಾಟಗಳಿಗೆ ಮುಕ್ತಿ ಇಲ್ಲವೇ ಎಂದು ಪ್ರತಿಯೊಬ್ಬರೂ ನಿಟ್ಟುಸಿರು ಬಿಡುತ್ತಾರೆ. ಮನೆಯಿಂದ ಹೊರಗೆ ಕೆಲಸಕ್ಕೆ ಹೋದವನು ಸುರಕ್ಷಿತವಾಗಿ ಮನೆಗೆ ಮರಳುತ್ತಾನೆ ಎನ್ನುವ ಭರವಸೆ ಇಲ್ಲ. ಸಮಯಕ್ಕೆ ಸರಿಯಾಗಿ ಬರದಿದ್ದರೆ ಎದರೂ ರಸ್ತೆಹೊಂಡಲ್ಲಿ ಬಿದ್ದರೇ, ಯಾರಾದರೂ ಏನಾದರೂ ಮಾಡಿದರೇ ಎನ್ನುವ ಅತಂಕ. ಕಷ್ಟ ಪಟ್ಟು ಓದಿ ಮೆರಿಟ್ ಪಡೆದವನಿಗೆ ಉದ್ಯೋಗ ಸಿಗುತ್ತದೆ ಎನ್ನುವ ಸಾಧ್ಯತೆ ಇಲ್ಲ. ಕಷ್ಟಪಟ್ಟು ಬೆನ್ನು ಬಾಗಿಸಿ ದುಡಿದವನಿಗೆ ಸಮರ್ಪಕವಾಗಿ ಸಂಬಳ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಇಂದು ಕಾರ್ಯ ನಿರ್ವಹಿಸುತ್ತಿರುವ ಸರಕಾರ ನಾಳೆ ಇರುತ್ತದೆ ಎನ್ನುವ ಭರವಸೆ ಇಲ್ಲ. ಕೆಲಸ ಎಷ್ಟೇ ಸಣ್ಣ ದಿರಲಿ,ಅಥವಾ ದೊಡ್ಡದಿರಲಿ, ಒಂದೇ ಭೇಟಿಯಲ್ಲಿ, ಸಮಯ ವ್ಯರ್ಥ ಮಾಡದೇ, ಸಂಬಂಧಪಟ್ಟವರ ಕೈಬಿಸಿ ಮಾಡದೇ ಕೆಲಸವಾಗುವ ಸಾದ್ಯತೆ ತುಂಬಾ ಕಡಿಮೆ.
ಮುಂಜಾನೆ ಕಚೇರಿಗೆ ಪ್ರವೇಶ ಮಾಡವಾಗ ಮತ್ತು ಸಂಜೆ ಕಚೇರಿಯಿಂದ ಹೊರಡುವಾಗ ತಮ್ಮಲ್ಲಿರುವ ನಗದನ್ನು ಡಿಕ್ಲೆರ್ ಮಾಡಬೇಕೆಂದು ರಾಜ್ಯಸರಕಾರ ಒಂದು ನಿರ್ದೇಶಿಸಿದ್ದು, ಇದೊಂದೇ ಉದಾಹರಣೆ ಭಾರತೀಯರೇಕೆ ದೇಶದಿಂದ ವಿಮುಖ ರಾಗುತ್ತಿದ್ದಾರೆ ಎನ್ನುವದಕ್ಕೆ ಸಮಜಾಯಿಸಿ ಕೊಡುತ್ತದೆ. ದೇಶದಲ್ಲಿ ಕಾಯಿದೆ ಕಾನೂನುಗಳಿಗೆ ಸ್ಥಿರತೆ ಇಲ್ಲ. ಅವು ಬೆಂಗಳೂರಿ ನಲ್ಲಿ ಒನ್ ವೆ ಮತ್ತು ಟು ವೇಗಳು ಬದಲಾದಂತೆ ಬದಲಾಗುತ್ತಿರುತ್ತವೆ. ನ್ಯಾಯದಾನ ವ್ಯವಸ್ಥೆ ಮ್ಯಾರಥಾನ್ ಓಟದಂತಿದ್ದು, ಗೆದ್ದವನು ಸೋತ, ಸೋತವನು ಸತ್ತ ಗಾದೆಯನ್ನು ನೆನಪಿಸುವಂತಿದೆ.
ಪ್ರತಿಯೊಂದು ರಂಗದಲ್ಲೂ ರಾಜಕೀಯದ ನುಸುಳುವಿಕೆ, ಹಣ ಮತ್ತು ಪ್ರಭಾವದ ಅಟ್ಟಹಾಸ. ನ್ಯಾಯಯುತ ಮಾರ್ಗದಲ್ಲಿ ಮುನ್ನಡೆಯುವವರಿಗೆ ಸಂಕಷ್ಟಗಳು ಹಲವು ಮತ್ತು ಗುರಿ ತಲುಪುವ ವಿಶ್ವಾಸ ಇಲ್ಲ. ಯಶಸ್ಸಿಗೆ ನೇರ ಹಾದಿಗಿಂತ ಅಡ್ಡ ಹಾದಿಗಳೇ ಮೇಲೆನ್ನುವ ಭಾವನೆ. ಮುನ್ನುಗ್ಗುವವರನ್ನು ನೋಡಿದರೆ ಅವರ ಕಾಲನ್ನು ಹಿಡಿದು ಎಳೆಯುವವರೇ ಹೆಚ್ಚು . ಬಹುತೇಕ ಜನರ ಚಿಂತನೆ ರಾಜಕೀಯ, ಕ್ರಿಕೆಟ್ ಮತ್ತು ಬಾಲಿವುಡ್ ಸುತ್ತ ಗಿರಕಿಹೊಡೆಯುತ್ತಿದ್ದು, ರಚನಾತ್ಮಕ ಮತ್ತು ದೂರ ಗಾಮಿ ಅಜೆಂಡಾಗಳು ರಾಡಾರ್‌ನಲ್ಲಿ ಕಡಿಮೆಯಾಗಿವೆ. ಇವು ಸಾಮಾನ್ಯವಾಗಿ ದೇಶತೊರೆದು ವಿದೇಶಗಳಿಗೆ ವಲಸೆ ಹೊಗು ವವರು ನೀಡುವ ಮುಖ್ಯಕಾರಣಗಳು. ನೆಮ್ಮದಿಯ ಬದುಕು ಮತ್ತು ಭಾವನಾತ್ಮಕ ಸಂಬಂಧಗಳ ಮಧ್ಯ ಅಯ್ಕೆಯ ಪ್ರಶ್ನೆ ಬಂದಾಗ ನೆಮ್ಮದಿಯ ಬದುಕುಮೇಲ್ಮೆಗೆ ಬರುತ್ತದೆ.
ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರಲ್ಲಿ ಸತ್ಯವಿಲ್ಲದಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಮಿಡ್‌ನೈಟ್ ಆಯಿಲ್ ಬರ್ನ ಮಾಡಿ ನೂರಕ್ಕೆ ನೂರರಷ್ಟು ಅಂಕ ಪಡೆದರೂಯಾವುದೋ ನಿಯಮ, ಧೋರಣೆಯಡಿಯಲ್ಲಿ ನಿರೀಕ್ಷಿತ ಗುರಿಯನ್ನು ತಲುಪಲಾಗುತ್ತಿಲ್ಲ ಎನ್ನುವ ಹತಾಶೆ, ನಿರಾಶೆ ಜನರನ್ನು ಆ ಗುರಿ ತಲುಪಲು ವಿದೇಶಕ್ಕೆ ತಳ್ಳುತ್ತಿದೆ. ಒಮ್ಮೆ ತನ್ನ ಬುದ್ದಿ ಮತ್ತೆಗೆ, ಅರ್ಹತೆಗೆ ಸ್ಪಂದಿಸಿದ ದೇಶವನ್ನು ಯಾರಾದರೂ ಬಿಟ್ಟು ಬರಬಹುದೇ? ಸಾಮಾಜಿಕ ನ್ಯಾಯದ ಹೆಸರನಲ್ಲಿ ಅರ್ಹತೆ ಮತ್ತು ಪ್ರತಿಭೆಗಳು ಒತ್ತಡಕ್ಕೊಳಗಾದಾಗ ವಿದೇಶದಲ್ಲಿ ಅವುಗಳಿಗೆ ಔಟ್‌ಲೆಟ್ ಪಡೆಯುತ್ತಾರೆ. ಈ ಅನಿವಾರ್ಯದಲ್ಲಿ ದೇಶದ ಬೌದ್ಧಿಕಸಂಪತ್ತು, ಬುದ್ಧಿ ಮತ್ತೆ, ಸಂಪತ್ತು, ಉನ್ನತ ಶಿಕ್ಷಣ ಮತ್ತು ಉದ್ಯಮಶೀಲತೆಗಳೂ ವಲಸೆ ಹೋಗುತ್ತವೆ ಎನ್ನುವ ಪರಿಕಲ್ಪನೆಗಳು ನೇಪಥ್ಯಕ್ಕೆ ಸರಿಯುತ್ತವೆ ಎನ್ನುವದು ಸತ್ಯವಾದರೂ, ಅದರ ಬಗೆಗೆ ಯಾರೂ ಕೇರ್ ಮಾಡುವುದಿಲ್ಲ.
ಅರ್ಹತೆ ಮತ್ತು ಪ್ರತಿಭೆ ಉಳ್ಳವರಿಗೆ ವಿದೇಶದಲ್ಲಿ ದೊರಕುವ ಸ್ಪಂದನೆ ಮತ್ತು ಪುರಸ್ಕಾರ ನಮ್ಮಲ್ಲಿ ಸಿಗಬಹುದೇ? ಅಮೆರಿಕದ ಜಾಗತಿಕ ಕಂಪನಿಗಳ ಉನ್ನತ ಸ್ಥಾನಗಳಲ್ಲಿ ಇರುವ ಭಾರತೀಯರ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಭಾರತೀಯರೇಕೆ ವಲಸೆ ಹೋಗುತ್ತಾರೆ ಎನ್ನುವ ಪ್ರಶ್ನೆ ಮತ್ತು ಕುತೂಹಲಕ್ಕೆ ಉತ್ತರ ದೊರಕುತ್ತದೆ. ಯಾವುದೇ ದೇಶದ ನಾಗರಿಕರಿಗೆ ಬೇಕಾಗಿರುವುದುಚುನಾವಣೆಯಲ್ಲಿ ನೀಡಲಾದ ಭರವಸೆಯನ್ನು ಕಾಯಾ ವಾಚಾ ಮನಸಾ ಈಡೇರಿಸುವ ಸ್ಥಿರ ಸರಕಾರ, ಜನರ ಬೇಡಿಕೆಗಳಿಗೆ ಕನಿಷ್ಠ ಶೇ.೫೦ನ್ನಾದರೂ ಸ್ಪಂದಿಸುವ ಆಡಳಿತ ವ್ಯವಸ್ಥೆ, ಅವರ ದಿನ ನಿತ್ಯದ ಸಮಸ್ಯೆ ಗಳಿಗೆ ನೆವ ಹೇಳದೇ ಪರಿಹಾರ ನೀಡುವ ಭ್ರಷ್ಟಾಚಾರ ರಹಿತ ನೌಕರಶಾಹಿ, ಕೋಮು ಸಂಘರ್ಷವಿಲ್ಲದ, ಮೇಲು ಕೀಳು ಇಲ್ಲದ ಸಾಮಾಜಿಕವ್ಯವಸ್ಥೆ, ಎಲ್ಲರಿಗೂ ಸಮಾನಾಗಿದುಡಿಯುವ ಸೌಲಭ್ಯ, ಮಾನವ ಹಕ್ಕು ಉಲ್ಲಂಘನೆಯಾಗದಿರುವ ಪರಿಸ್ಥಿತಿ, ದುಡಿತಕ್ಕೆ ಸರಿಯಾಗಿ ಪ್ರತಿಫಲ ದೊರಕಿದರೆ ಹುಟ್ಟಿದ ದೇಶಕ್ಕೆ ಬೈ ಹೇಳಲು ಯಾರೂ ಮನಸ್ಸು ಮಾಡುವುದಿಲ್ಲ.
ಇದರ ಕೊರತೆಯೇ ವಲಸೆಗೆ ಮೂಲ ಕಾರಣ. ಈ ನಿಟ್ಟಿನಲ್ಲಿ ಮೇಲ್ವರ್ಗದ ಜನರಿಗೆ ಹೆಚ್ಚಿನ ಅವಕಾಶ ಇರುವುದರಿಂದ ಅವರೇ ಹೆಚ್ಚಾಗಿ ಈ ಲಿಸ್ಟನಲ್ಲಿ ಕಾಣುತ್ತಾರೆ. ವಿಸಾ ಮತ್ತು ಉದ್ಯೋಗ ನೀಡಿದರೆ ಭಾರತೀಯರು ಸಪ್ತ ಸಮುದ್ರ ಈಜಿಯಾದರೂವಿದೇಶಕ್ಕೆ ಹೋಗುತ್ತಾರೆ ಎನ್ನುವ ಸತ್ಯವನ್ನು ಬರಹಗಾರ ಖುಶ್ವಂತ್ ಸಿಂಗ್ ನಾಲ್ಕು ದಶಕಗಳ ಹಿಂದೆಯೇ ತಮ್ಮ ಒಂದು ವಿಚಾರ ಪ್ರಚೋದಕ ಮತ್ತು ವಿವಾದಾತ್ಮಕ ಲೇಖನದಲ್ಲಿ ಕೇರಳಿಗರ ಕುವೈತ್ -ದುಬಾಯಿ ಪ್ರೀತಿ ಬಗೆಗೆ ಉಖಿಸುವಾಗ ಹೇಳಿದ್ದರು.