ದೀದಿ ರಾಜ್ಯದಲ್ಲಿ ದಾದಾಗಿರಿಯೇಕೆ ?
ಪ್ರಚಲಿತ
ವಿನಯ್‌ ಖಾನ್
vinaykhan078@.
ಟಿಎಂಸಿಯ ಕೆಲವು ನಾಯಕರು ಹೇಳುತ್ತಿದ್ದರಲ್ಲ ಟಿವಿ ಬ್ಲಾಸ್ಟ್ ಆಯ್ತು, ಫ್ರಿಜ್ ಬ್ಲಾಸ್ಟ್ ಆಯ್ತು ಅಂತ ಆದರೆ ಶವ ಪರೀಕ್ಷೆಯಲ್ಲಿ ಹೊರಬಿದ್ದ ವರದಿ ಏನೆಂದರೆ; ಮೃತರ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು!. ಅಂದ ಮೇಲೆ ಮೇಲ್ನೋಟಕ್ಕೇ ಕಾಣುವಂತೆ ಇದು ಭೀಕರ ಹತ್ಯಾ ಕಾಂಡ ಅಲ್ಲದೆ ಇನ್ನೇನು?
ಅದು ಮಾರ್ಚ್ 21, ಭಂಡು ಶೇಖ್ ಎಂಬ ಟಿಎಂಸಿ ನಾಯಕನ ಹತ್ಯೆಯಾಯಿತು. ಅದಾದ ಮೇಲೆ 8 ಜನರನ್ನು ಮನೆಯಲ್ಲೇ ಬಂಧಿಸಿ ಸಜೀವ ದಹಿಸಲಾಯಿತು. ಹೆಚ್ಚೂ ಕಡಿಮೆ 10 ಮನೆಗಳು ಬೆಂಕಿಗಾಹುತಿಯಾದವು. ಅದಕ್ಕೂ ಹಿಂದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ನೋಡಿ ವಾಪಸಾಗುತ್ತಿದ್ದ ಬಿಜೆಪಿ ಎಂಪಿ ಜಗನ್ನಾಥ್ ಸರಕಾರ್ ಮೇಲೆ ಬಾಂಬ್ ದಾಳಿ ಮಾಡಲಾಗಿತ್ತು. ಫೆಬ್ರವರಿ 18 ರಂದು ವಿದ್ಯಾರ್ಥಿ ಹೋರಾಟಗಾರ ಅನಿಶ್ ಖಾನ್‌ನನ್ನು ಪೊಲೀಸ್‌ರು ರಾತ್ರೋರಾತ್ರಿ ಕೊಲೆ ಮಾಡಿದ ಆರೋಪ ಇದೆ. ಕಾಂಗ್ರೆಸ್ ಮತ್ತು ಟಿಎಂಸಿ ಕೌನ್ಸೆಲರ್‌ಗಳು ಮಾರ್ಚ್ 13ರಂದು ಕೊಲ್ಲಲ್ಪಡುತ್ತಾರೆ. ಕೇವಲ ಒಂದು ತಿಂಗಳಲ್ಲಿ ಇವೆಲ್ಲವೂ ನಡೆದು ಹೋಗಿದ್ದು ಸೋಕಾಲ್ಡ್ ಸಂವಿಧಾನ ರಕ್ಷಕಿ, ಮಮತಾ ಬ್ಯಾನರ್ಜಿ ಯವರ ಬಂಗಾಳದಲ್ಲಿ.
ರಾಜಕೀಯ ಪ್ರೇರಿತ ಕೊಲೆಗಳು, ಪ್ರತಿಪಕ್ಷಗಳ ಕಚೇರಿ ಧ್ವಂಸ, ಬಿಜೆಪಿ-ಸಂಘ ಪರಿವಾರದವರ ಮೇಲೆ ಹಲ್ಲೆಗಳಲ್ಲಿ ‘ಟಿಎಂಸಿಯ ಗೂಂಡಾಗಳು’ ಕುಖ್ಯಾತರು. ಪ್ರತಿಪಕ್ಷಗಳ ಕಚೇರಿಗಳ ಮೇಲೆ ದಾಳಿಗಳು ಶುರುವಾಗಿ ವರ್ಷ ಕಳೆಯುತ್ತಿದೆ. ‘ಖೇಲಾ ಹೋಬೆ, ಬಿರೋಧಿ ಶೂನೋ ಬಾಂಗ್ಲಾ (ಶೂನ್ಯ ವಿರೋಧದೊಂದಿಗೆ ಬಂಗಾಳ) ಅಂತ ಬೊಬ್ಬೆ ಹೊಡೆಯುತ್ತ ಇಡೀ ಬಂಗಾಳವನ್ನೇ ಸಾವಿನ ಕೇರಿ ಮಾಡಿ ಕೊಂಡಿರುವ ಟಿಎಂಸಿ ಗೂಂಡಾಗಳು ಎಸಗುತ್ತಿರುವ ದೌರ್ಜನ್ಯಗಳು ಒಂದೆರಡಲ್ಲ.
ಕಳೆದೊಂದು ವಾರದಲ್ಲೇ 26 ರಾಜಕೀಯ ಪ್ರೇರಿತ ಕೊಲೆಗಳು ನಡೆದಿವೆ. ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಕೆಲವೇ ದಿನಗಳಲ್ಲಿ ಇಂಥ ದೌರ್ಜನ್ಯಗಳು ಆರಂಭವಾಗಿವೆ. ಅದರಲ್ಲಿ ಎಷ್ಟು ಮಂದಿಯ ವಿರುದ್ಧ ಎಫ್ ಐಆರ್ ದಾಖಲಾದವೋ, ಎಷ್ಟು ಜನರಿಗೆ ಶಿಕ್ಷೆಯಾದವೋ ದುರ್ಗಾ ದೇವಿಗೇ ಗೊತ್ತು. ಮೊನ್ನಿನ ಘಟನೆಯನ್ನೇ ನೋಡಿ, ಬಗ್ಟೋಯಿ ಗ್ರಾಮದ ಬಂಡು ಶೇಖ್‌ನನ್ನು ಹತ್ಯೆಗೈದವರೂ ಟಿಎಂಸಿಯವರೇ.
ಅದು ಆಗಿದ್ದು ಒಳ ರಾಜಕಾರಣದಿಂದ. ಇದು ಬಯಲಾಗುತ್ತಿದ್ದಂತೇ ಬಂಡು ಶೇಖ್‌ನ ಬೆಂಬಲಿಗರು ವಿರೋಧಿ ಬಣದವರ ಮನೆಯ ಬಾಗಿಲು ಹಾಕಿ, ಒಳಗಿದ್ದ ಮಹಿಳೆ ಮತ್ತು ಮಕ್ಕಳನ್ನು ಸಜೀವ ದಹಿಸಿದರು. ಹೊತ್ತಿದ್ದ ಬೆಂಕಿ 10ಕ್ಕೂ ಹೆಚ್ಚು ಮನೆಗಳಿಗೆ ವ್ಯಾಪಿಸಿ ಎಲ್ಲವೂಆಹುತಿಯಾಗಿದೆ. ಬಂಽತರಾಗಿದ್ದು 22 ಜನರಾದರೂ ಟಿಎಂಸಿ ನಾಯಕರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಒಬ್ಬರು ಫ್ರಿಜ್ ಬ್ಲಾಸ್ಟ್ ಆಗಿತ್ತು ಎಂದರು. ಇನೊಬ್ಬರು ಟಿವಿ ಶಾರ್ಟ್ ಸರ್ಕಿಟ್ ಎಂದರು. ಮತ್ತೊಬ್ಬ ರಾಜ್ಯದ ಹೆಸರನ್ನು ಕೆಡಿಸಲು, ಸರಕಾರದ ಹೆಸರಿಗೆ ಮಸಿ ಬಳಿಯಲು ವಿಪಕ್ಷದವರೇ ಮಾಡಿದ್ದು ಎಂದುಬಿಟ್ಟ. ಸ್ವತಃ ಮಮತಾ ಗುಜರಾತ್, ಉತ್ತರ ಪ್ರದೇಶದಂತೆಯೇ ನಮ್ಮಲ್ಲಿಯೂ ಆಗುತ್ತಿದೆ ಎನ್ನುವ ಮೂಲ ತೀರಾ ಸಹಜವಾಗಿ ಪ್ರತಿಕ್ರಿಯಿಸಿದ್ದಾರೆ. ದೀದಿ ಮಾತುಗಳನ್ನು ಕೇಳಿದರೆ ಎಲ್ಲರಿಗೂ ಹುಟ್ಟುವ ಪ್ರಶ್ನೆ ಹಾಗಿದ್ದರೆ ರಾಜ್ಯದ ಮೇಲೆ, ಪೊಲೀಸರ ಮೇಲೆ, ಕಾರ್ಯಕರ್ತರ ಮೇಲೆ ಅವರಿಗೆ ಹಿಡಿತವೇ ಇಲ್ಲವೇ? ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರತ್ಯಕ್ಷದರ್ಶಿ ಯನ್ನೇ ಗಾಯಬ್ ಮಾಡಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುಂಚೆ ಈ ರೀತಿ ಎಲ್ಲೇ, ಯಾವುದೇ ಪ್ರಕರಣಗಳು ವರದಿಯಾದರೂ ಪೊಲೀಸರ ಮೊದಲು ಹಾಜರಾಗುತ್ತಿದ್ದ ಮಮತಾ, ಈ ಘಟನೆಯಲ್ಲಿ 72 ಘಂಟೆಗಳ ಬಳಿಕ ಆ ಸ್ಥಳಕ್ಕೆ ಹೋಗಿದ್ದಾರೆ. ಅದೂ ಬಂಗಾಳ ಗವರ್ನರ್ ಜಗದೀಪ್ಧನಕರ್, ಪ್ರಧಾನಿ ಮೋದಿಯಂಥವರು ಟ್ವೀಟ್ ಮಾಡಿ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದ ಬಳಿಕ. ಆನಂತರವಷ್ಟೇ ತಪ್ಪಿತಸ್ಥ ರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಪೊಲೀಸರಿಗೆ ಆದೇಶಿಸುತ್ತಾರೆ. ಕೊನೆಗೂ ಬಂಧನಕ್ಕೊಳಗಾಗಿದ್ದು ಟಿಎಂಸಿ  ನಾಯಕನೇ; ಏಕೆಂದರೆ ಆತನೇ ಪ್ರಮುಖ ಆರೋಪಿ!.
ಪ್ರಕರಣದ ತನಿಖೆಗೆ ಮಮತಾ ಎಸ್‌ಐಟಿ ರಚಿಸಿದ್ದರೂ ಟಿಎಂಸಿಯ ನಾಯಕರೇ ರಾಜ್ಯ ಪೊಲೀಸರನ್ನು ನಂಬದೆ ಗೃಹಮಂತ್ರಿ ಅಮಿತ್ ಶಾ ಹತ್ತಿರ ಹೋಗುತ್ತಾರೆಂದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದು ಅರ್ಥವಾದೀತು. ಆಡಳಿತಾರೂಢ ಪಕ್ಷದ ನಾಯಕರಿಗೇ ಪೊಲೀಸರ ಮೇಲೆ ನಂಬಿಕೆಯಿಲ್ಲದಿರುವಾಗ ಇನ್ನು ಜನರ ಗತಿ? ಹಾಗೆ ಕೊಲ್ಕತಾ ಹೈಕೋರ್ಟ್ ಸಹ ಸಿಬಿಐ ತನಿಖೆಗೆ ಆದೇಶ ಕೊಟ್ಟಿದೆ. ಟಿಎಂಸಿಯ ಕೆಲವು ನಾಯಕರು ಹೇಳುತ್ತಿದ್ದರಲ್ಲ ಟಿವಿ ಬ್ಲಾಸ್ಟ್ ಆಯ್ತು, ಫ್ರಿಜ್ ಬ್ಲಾಸ್ಟ್ ಆಯ್ತು ಅಂತ ಆದರೆ ಶವ ಪರೀಕ್ಷೆ ಯಲ್ಲಿ ಹೊರಬಿದ್ದ ವರದಿ ಏನೆಂದರೆ; ಮೃತರ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು!. ಅಂದ ಮೇಲೆ ಮೇಲ್ನೋಟಕ್ಕೇ ಕಾಣುವಂತೆ ಇದು ಭೀಕರ ಹತ್ಯಾಕಾಂಡ ಅಲ್ಲದೆ ಇನ್ನೇನು? ಇನ್ನು ಫೆಬ್ರುವರಿ 18 ರ ಘಟನೆಯೊಂದನ್ನು ನೋಡಿ.
ಅಂದು ಸಿಪಿಐಎಂನ ವಿದ್ಯಾರ್ಥಿ ಕಾರ್ಯಕರ್ತನ ಮನೆಗೆ ರಾತ್ರಿ 9 ಘಂಟೆಗೆ ಕೆಲ ಮಂದಿ ಬಂದು ಬಾಗಿಲು ಬಡಿಯುತ್ತಾರೆ. ಹೊರಗೆ ನೋಡಿದಾಗ ಪೊಲೀಸ್‌ರು ನಿಂತಿದ್ದರು. ‘ಅನೀಶ್ ಖಾನ್‌ನ ಯಾವುದೋ ಹಳೆಯ ಕೇಸ್ ಬಗ್ಗೆ ವಿಚಾರಣೆ ಇದೆ ಸ್ಟೇಷನ್‌ಗೆ ಬಾ’ ಅಂತ ಕರೆದುಕೊಂಡು ಹೋದ ನಂತರ ಆತ ಹಿಂದಿರುಗಲೇ ಇಲ್ಲ. ಮನೆಯಿಂದ ಸ್ವಲ್ಪ ದೂರದಲ್ಲೇ ಅನೀಶ್‌ನ ಕೊಲೆ ಆಗಿತ್ತೆ. ಆ ಸಂಬಂಧಸಾಕಷ್ಟು ಉಗ್ರ ಹೋರಾಟಗಳು ನಡೆದರೂ ಈವರೆಗೆ ಕೊಲೆಗಾರರ ಸುಳಿವು ಸಿಕ್ಕಿಲ್ಲ.
ನಮ್ಮದೇ ಎಂಪಿ, ತೇಜಸ್ವಿ ಸೂರ್ಯ ಚುನಾವಣಾ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಬಾಂಬ್ ದಾಳಿಯಾಗಿತ್ತು. ಕೊನೆ ಪಕ್ಷ ಈ ಸಂಬಂಧ ಪೊಲೀಸರು ಕೇಸ್ ಸಹ ದಾಖಲಿಸಿಕೊಂಡಿಲ್ಲ. ಚುನಾವಣಾ ನಂತರವೂ ಅದೇ ಕಥೆ, ಲಕ್ಷಾಂತರ ಜನರು ಊರು ಬಿಟ್ಟು ಆತಂಕದಿಂದ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಬಂಗಾಳಕ್ಕೆ ಹೋಗಿದ್ದಾಗ ಅವರ ಕಾರಿನ ಮೇಲೆಯೂ ದಾಳಿ ಆಗಿತ್ತು.
ಬಂಗಾಳದಲ್ಲೀಗ ವಾರಕ್ಕೆ ಕನಿಷ್ಠ ಒಂದಾದರೂ ರಾಜಕೀಯ ದ್ವೇಷದ ಕೊಲೆಗಳಾಗುತ್ತಿವೆ. ಅಫ್ಗಾನಿಸ್ತಾನ್, ಪಾಕಿಸ್ತಾನ್, ಕಾಶ್ಮೀರಗಳಲ್ಲಿ ಕೇಳಿ ಬರುತ್ತಿದ್ದ ಬಾಂಬ್ ಸದ್ದು, ಇದೀಗ ಬಂಗಾಳದಲ್ಲಿ ಬಹುತೇಕ ನಿತ್ಯದ ಸದ್ದಾಗಿದೆ. 2007-08 ರ ಚುನಾವಣಾ ಸಮಯದಿಂದಲೇಬಂಗಾಳವನ್ನು ಬಾಂಬ್ ಮುಕ್ತಮಾಡುವುದಾಗಿ ಭರವಸೆ ಇತ್ತಿದ್ದ ಮಮತಾಗೇ ಈಗದು ವಿಸ್ಮೃತಿಗೆ ಸರಿದಿರಲೂ ಸಾಕು. ಅವರ ಪಕ್ಷದ ವರೇ ಬಾಂಬ್ ಸೋಟ ಪ್ರಕರಣಗಳಲ್ಲಿ ಸಾಕ್ಷಿ ಸಮೇತ ಸಿಕ್ಕು ಬೀಳುತ್ತಿದ್ದರೂ ಆಕೆ ಮಾತ್ರ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಸುಮ್ಮನೆ ಇದ್ದಾರೆ.
ಸ್ವಾತಂತ್ರ ಪೂರ್ವದಲ್ಲಿ ವಿವೇಕಾನಂದ, ಟ್ಯಾಗೋರ್, ರಾಮಕೃಷ್ಣ ಪರಮಹಂಸ, ಖುದಿರಾಮ ಬೋಸ್, ಜಗದೀಶ್ ಚಂದ್ರ ಬೋಸ್, ಬಕೀಮ ಚಂದ್ರ ಚಟರ್ಜಿ, ಸುಭಾಷ್ ಚಂದ್ರ ಬೋಸ್‌ರಂಥ ಮಹಾನ್ ವ್ಯಕ್ತಿಗಳಿಂದ ತುಂಬಿದ್ದ ಬಂಗಾಳ ಮಮತಾ ಬ್ಯಾನರ್ಜಿ ಆಡಳಿಕ್ಕೆ ಬರುವಷ್ಟರಲ್ಲಿ ಜಂಗಲ್ ರಾಜ್ ಆಗಿ ಮಾರ್ಪಟ್ಟಿದೆ! ಜಯಪ್ರಕಾಶ್ ನಾರಾಯಣ್‌ರ ಕಾರಿನ ಬಾನೆಟ್ ಹತ್ತಿ ಪ್ರತಿಭಟಿಸುವ ಛಲ, ಛಾತಿ ಇದ್ದ ಮಮತಾಗೆ ತನ್ನದೆ ಜನರ ಸಾವುಗಳಿಗೆ ನ್ಯಾಯ ಕೊಡಲಾಗದಿರುವುದು ದುರಂತ. ಚುನಾವಣೆಗೂ ಮುನ್ನ ತಾನು ಬಂಗಾಳದ ಮನೆಮಗಳು ಎಂದು ತಿರುಗಾಡುತ್ತಿದ್ದ ಅವರಿಗೆ, ಟಿಎಂಸಿಯನ್ನು ವಿರೋಧಿಸಿದ್ದ ಕಾರಣಕ್ಕೆ ಹೆಣ್ಣು ಮಕ್ಕಳ ಅತ್ಯಾಚಾರ ವೆಸಗುತ್ತಿದ್ದರೂ ಕಂಬನಿಯೇ ಹರಿಯುತ್ತಿಲ್ಲ!
ಪಠಾಣ್ ಕೋಟ್ ಎನ್‌ಕೌಂಟರ್ ಆದಾಗ ದೆಹಲಿ ಯಲ್ಲಿ ಉಗ್ರರ ಪರ ಹಾರಾಡಿದ್ದವರಿಗೆ ಇದೀಗ ತನ್ನ ರಾಜ್ಯದಲ್ಲೇ ನಡೆಯುತ್ತಿರುವ ನರಮೇಧಗಳು ಕಾಣಿಸಲಿಲ್ಲವೇ? ಬಾಂಗ್ಲಾ ನುಸುಳು ಕೋರರ ಪರ ಮಾತಾಡಿದವರಿಗೆ ತಮ್ಮ ರಾಜ್ಯದಲ್ಲೇ ಚುನಾವಣೆಯ ಬಳಿಕ ಭಾರೀ ಸಂಖ್ಯೆಯಲ್ಲಿ ಊರು ಬಿಟ್ಟು ಹೋದವವರ ಬಗ್ಗೆ ಕರುಣೆಯೇ ಬರಲಿಲ್ಲವೇ? ಚೀಚೀ ಮೋದಿ ಎಂದ ಮಮತಾಗೆ ತನ್ನ ಬಗ್ಗೆ ತನಗೆ ಛೀ, ಛೀ, ಭಾವನೆಯೇ ಮೂಡಲಿಲ್ಲವೇ? ಜನರ ಕ್ಷೇಮದ ನೆಪದಲ್ಲಿ ನ್ಯಾನೋ ಕಾರಿನ ಪ್ಲಾಂಟ್‌ಗಳನ್ನು ವಿರೋಧಿಸಿ ಹೈಡ್ರಾಮಾ ಮಾಡಿದ್ದ ಮಮತಾಗೆ ಇದೀಗ ಅದೇ ಜನರ ಕ್ಷೇಮವೇ ಬೇಡವಾಯಿತೇ? ಎಲ್ಲದಕ್ಕೂ ಮೋದಿ, ಅಮಿತ್ ಶಾ, ಯೋಗಿಗೆ ಬಯ್ಯುತ್ತಿದ್ದ ಮಮತಾ, ತಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ವೈಫಲ್ಯದ ಬಗೆಗೆ ಚಾಕಾರ ಎತ್ತದಿರುವುದು ಏಕೋ? ಮೋದಿ ಭಾಷಣವನ್ನೇ ಬಹಿಷ್ಕರಿಸಿದವರಿಗೆ ತನ್ನ ಪಕ್ಷದ ಗೂಂಡಾಗಳನ್ನೇಹತೋಟಿಗೆ ತರಲು ಆಗುತ್ತಿಲ್ಲವೇಕೆ? ರಷ್ಯಾ, ಉಕ್ರೇನ್ ಮೇಲೆ ದಾಳಿ ಮಾಡಿದಾಗ, ಪೊಲೀಸರುಟೆರರಿಸ್ಟ್ ಗಳನ್ನು ಕೊಂದಾಗ, ಕಾಶ್ಮೀರದ ಉಗ್ರರನ್ನು ಸೆದೆಬಡಿದಾಗ ಬೀದಿಯಲ್ಲಿ ಪೋಸ್ಟರ್ ಹಿಡಿದು ಪ್ರತಿಭಟಿಸುತ್ತಿದ್ದ ಲಿಬರಲ್‌ಗಳಿಗೆ ಈಗ ಬಂಗಾಳ ಒಂದು ವಿಷಯವೇ ಅಲ್ಲವೇ ಪ್ರಧಾನಿಯಾಗುವ ಕನಸು ಹೊತ್ತು ದೇಶವೆಲ್ಲ ಸುತ್ತುತ್ತಿದ್ದಾರೆ ಮಮತಾ.
ಮನೆಯನ್ನು ಗೆಲ್ಲಲಾಗದವರು ಮಾರು ಗೆಲ್ಲಲಾದೀತೆ ಎಂಬಂತೆ ರಾಜ್ಯವನ್ನೇ ಸಂಬಾಳಿಸಲಾಗದವರ ಕೈಯಲ್ಲಿ ದೇಶದ ಚುಕ್ಕಾಣಿ ಇಡುವು ದಾದರೂ ಹೇಗೆ? ದೇವರೇ ಗತಿ!