ಸತ್ಯದ ಶಂಕಾನಾದಕ್ಕೆ ಅಂಜಿಕೆಯೇಕೆ ?
ಪ್ರಸ್ತುತ
ಬಿ.ಎಸ್.ಶಿವಣ್ಣ, ಮಳವಳ್ಳಿ
ವರ್ಷಗಳ ಕಾಲ ಅಭಿವೃದ್ಧಿ ರಾಜಕಾರಣವನ್ನು ಮಾಡಿಕೊಂಡು ಬಂದ ಕರ್ನಾಟಕದಲ್ಲಿ ಈಗ ಕೋಮು ರಾಜಕಾರಣವಿಜೃಂಭಿಸುತ್ತಿದೆ. ಸತ್ಯ ಹೇಳಿದವರ ವಿರುದ್ಧ ರಣೋನ್ಮಾದದಿಂದ ಮುಗಿ ಬೀಳುವ ಪಡೆಯನ್ನು ಸೃಷ್ಟಿಸಿ ಅಖಾಡಕ್ಕೆ ಬಿಡಲಾಗಿದೆ.
ರಾಜ್ಯದಲ್ಲಿ ಕಳೆದ ಕೆಲ ತಿಂಗಳಿಂದ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದಾಗ ನಮ್ಮ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬ ಆತಂಕ ಕಾಡಲಾರಂಭಿಸಿದೆ. ಹಿಜಾಬ, ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಂರಿಗೆ ವ್ಯಾಪಾರ ನಿರಾಕರಣ, ಮತಾಂತರ ನಿಷೇಧ ಕಾಯಿದೆ, ಹಲಾಲ್ ವಿವಾದಗಳ ಸುತ್ತ ನಡೆಯುತ್ತಿರುವ ವಾದ ಸರಣಿಯನ್ನು ಬಿಡಿ, ಸತ್ಯದ ಪರ ಮಾತನಾ ಡುವುದೇ ತಪ್ಪು ಎಂಬ ಹಂತಕ್ಕೆ ವ್ಯವಸ್ಥೆ ಜಾರುತ್ತಿರುವುದನ್ನು ನೋಡಿದಾಗ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡು ವಂತಾಗಿದೆ.
‘ಶೂಟ್ ದಿ ಮೆಸ್ಸೆಂಜರ್’ ಎಂಬ ವಾದದ ರೀತಿ ತಮ್ಮ ಹಿಡನ್ ಅಜೆಂಡಾದ ವಿರುದ್ಧ ಧ್ವನಿ ಎತ್ತುವ ಎಲ್ಲ ಕಂಠಗಳನ್ನೂ ನಿರ್ದಾಕ್ಷಿಣವಾಗಿ ಹತ್ತಿಕ್ಕುವ ವ್ಯವಸ್ಥಿತ ಷಡ್ಯಂತ್ರದ ತಾಲೀಮು ಈಗ ರಾಜ್ಯದಲ್ಲಿ ನಡೆಯುತ್ತಿದೆ. ಕರಾವಳಿಜಿಲ್ಲೆಗಳಲ್ಲಿಮಾತ್ರ ಕಂಡು ಬರುತ್ತಿದ್ದ ಈ ಪ್ರಯೋಗಕ್ಕೆ ಇಡಿ ರಾಜ್ಯವನ್ನೇ ಬಳಸಿಕೊಳ್ಳಲು ಬಲಪಂಥೀಯ ಶಕ್ತಿಗಳು ಯುದ್ಯೋನ್ಮಾದದಲ್ಲಿ ನುಗ್ಗುತ್ತಿರುವುದನ್ನು ನೋಡಿದಾಗ ಭವಿಷ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎಂಬುದು ಕನಸಾಗಿ ಮಾರ್ಪಡುವ ಸದ್ಯೋ ಭವಿಷ್ಯತ್ತಿನಲ್ಲಿ ಕಾದಿದೆ ಎನ್ನದೇ ವಿಧಿ ಇಲ್ಲ. ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಳದೂಂದು ವಾರದಿಂದ ಎಲ್ಲ ಕೊನಗಳಿಂದಲೂ ಮುಗಿ ಬೀಳುತ್ತಿರುವ ದಂಡನ್ನು ನೋಡಿದಾಗ ಈ ಆತಂಕ ಕಾಡದೇ ಇರದು.
ಯಾರನ್ನೂ ನಿಂದಿಸುವ ಉದ್ದೇಶವಿಲ್ಲದೇ ಸಿದ್ದರಾಮಯ್ಯ ಅವರು ಮಾಡಿದ ಸಾಂಧರ್ಬಿಕ ಹೇಳಿಕೆಯೊಂದು (ಪಾಸಿಂಗ್ ರೆಫರೆನ್ಸ್) ಈಗ ರಾಜ್ಯದ ಚುನಾವಣಾ ವಸ್ತುವಾಗಿ ಮಾರ್ಪಡುತ್ತಿದೆ ಎಂದರೆ ಇದರ ಹಿಂದಿರುವ ಕಾಣದ ಕೈಗಳ ಬಲಾಢ್ಯ ಪ್ರಭಾವ ಎಷ್ಟಿದೆ ಎಂಬುದನ್ನು ಒರೆಗೆ ಹಚ್ಚಬೇಕಾದ ಸಂದರ್ಭ ಈಗ ಬಂದಿದೆ ಎನ್ನಬೇಕು. ಕುಚೋದ್ಯವಂದರೆ ಈ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾದ ಸಂಸ್ಥೆಗಳಲ್ಲವೂ ಒಂದೇ ಲಾಯದ ಕುದುರೆಯ ರೀತಿ ಸಿದ್ದರಾಮಯ್ಯನವರ ವಿರುದ್ಧವೇ ಸಮಾನಾಂತರ ಓಟ ಪ್ರಾರಂಭಿಸಿವೆ ! ( ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಸೃಷ್ಟಿಯಾಗುವುದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಮತ್ತೇನನ್ನು ಧ್ವನಿಸುತ್ತದೆ ?) ಎಲ್ಲದ ಕ್ಕಿಂತ ಹೆಚ್ಚಾಗಿ ರಾಜ್ಯದ ಜನರ ನಿಜವಾದ ಭಾವನೆಗಳನ್ನು, ಅಸಹಾಯಕ ಧ್ವನಿಗಳನ್ನು ಗ್ರಹಿಸುವಷ್ಟು ಪ್ರಬುದ್ಧತೆ ಹಾಗೂ ವಿಶಾಲಹೃದಯ ಯಾರಿಗೂ ಇಲ್ಲವೆನ್ನುವುದು ವಿಷಾದವೇ ಸರಿ.
ಅಷ್ಟಕ್ಕೂ ಅಂದಿನ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ನವರು ಹೇಳಿದ್ದಾದರೂ ಏನು ? ಅದರ ತಾತ್ಪರ್ಯವೇನು? ಎಂಬು ದರ ಬಗ್ಗೆ ಯಾರಾದರೂ ಮುಕ್ತ ಮನಸ್ಸಿನಿಂದ ಚರ್ಚಿಸಿದ್ದಾರೆಯೇ? ಹಿಜಾಬ್ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿಯೂ ಸಲ್ಲಿಕೆಯಾಗಿದೆ.
ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸದೇ ಮಧ್ಯಮ ಮಾರ್ಗವೊಂದರ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಬಹುದಲ್ಲವೇ ? ಎಂದು ಸಿದ್ದರಾಮಯ್ಯ ಹಿಂದಿನ ದಿನ ಸರಕಾರದ ಮುಂದೆ ವಾದ ಮಂಡಿಸಿದರು. ಅದು ಕೂಡ ಮುಸ್ಲಿಂ ಸಮುದಾಯದ ವಿಧ್ಯಾರ್ಥಿನಿಯರ ಶೈಕ್ಷಣಿಕ ದೃಷ್ಟಿಕೋನದಿಂದ ಮಾತ್ರ, ಪರೀಕ್ಷಾ ಸಮಯದಲ್ಲಿ ಬುರ್ಖಾ ಅಥವಾ ಹಿಜಾಬನ್ನು ನಮ್ಮ ಮಕ್ಕಳು ಧರಿಸುವುದಿಲ್ಲ. ಅದರ ಬದಲು ಸಮವಸದ ಬಣದ ದುಪ್ಪಟ ಧರಿಸುವುದಕ್ಕಾದರೂ ಅವಕಾಶ ನೀಡಿ ಎಂದು ಅವರು ಮನವಿ ಮಾಡಿದ್ದರಲ್ಲಿ ಎಳ್ಳಷ್ಟಾದರೂ ತಪ್ಪಿದಿಯೇ ? ಇದೇ ವಾದ ಸರಣಿಯ ಭಾಗವಾಗಿ ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿಗಳು ಶಿರವಸ ಧರಿಸುವುದಿಲ್ಲವೇ ? ಎಂದು ಅವರು ಪ್ರಶ್ನೆ ಮಾಡಿದ್ದು, ಆದರೆ ಮಾಧ್ಯಮಗಳು ಹಾಗೂ ಆಡಳಿತ ಪಕ್ಷಬಿಜೆಪಿ ಅದರಲ್ಲೂ ಧರ್ಮವನ್ನು ಎಳೆದು ತಂದರು.
ಅಷ್ಟಕ್ಕೂ ಸಿದ್ದರಾಮಯ್ಯ ಹಿಂದು ಧರ್ಮದ ಯಾವುದೇ ಸ್ವಾಮೀಜಿಗಳು ಹಾಗೂ ಶ್ರದ್ಧಾ ಕೇಂದ್ರಗಳ ಜತೆಗೆ ಇದುವರೆಗೆ ಯಾವು ದೇ ಜಗಳ ಸೃಷ್ಟಿ ಮಾಡಿಕೊಂಡಿಲ್ಲದೇ ಇರುವಾಗ ಅವರೊಂದು ಹೇಳಿಕೆ ಬಿಜೆಪಿಯ ಉದ್ದೇಶ ಸಾಧನೆಗೆ ಅತೀವ ಬಲ ತಂದುಕೊ ಟ್ಟುಬಿಟ್ಟಿದೆ. ತನ್ನ ಕೋಮುವಾದ ಹಾಗೂ ಮತ ಕ್ರೋಢಿಕರಣದ ಅಜೆಂಡಾ ಪಾಲನೆಯಲ್ಲಿ ಬಿಜೆಪಿಗೆ ಇಂಥ ವಾದಗಳು ಸದ್ಯಕ್ಕೆ ಯಶಸ್ಸುನ್ನು ತಂದುಕೊಡಬಹುದಾದರೂ ದೂರಗಾಮಿ ದೃಷ್ಟಿಯಿಂದ ಇದು ರಾಜ್ಯದ ಜನರನ್ನು ಸಂಕಷ್ಟಕ್ಕೆ ದೂಡುತ್ತದೆ ಎಂಬುದರಲ್ಲಿ ಯಾವುದೇ ವಿವಾದವಿಲ್ಲ.
ಕುವೆಂಪು ಅವರು ಹೇಳಿದಂತೆ ಕರ್ನಾಟಕ ಜನಾಂಗದ ಶಾಂತಿಯ ತೋಟ, ವಿಶ್ವ ಸಮಾನತೆಯನ್ನು ಸಾರಿದ ಬಸವಣ್ಣನವರ ಕರ್ಮಭೂಮಿ. ಇದಕ್ಕೆ ಪೂರಕವಾಗಿ ತಮ್ಮ ಐದು ವರ್ಷದ ಅವಧಿಯಲ್ಲಿ, ಸಿದ್ದರಾಮಯ್ಯರವರು ಜನ ಪರ ಹಾಗೂ ಅಭಿವೃದ್ಧಿ ಪರ, ಕಳಂಕ ರಹಿತ ಆಡಳಿತ ನಡೆಸಿದ್ದನ್ನು ಯಾರೂ ಮರೆಯುವುದಕ್ಕೆ ಸಾಧ್ಯವಿಲ್ಲ. ನಾಡಿನ ಅನೇಕ ಮಠ-ಮಂದಿರ ಗಳ ಮುಖ್ಯಸ್ಥರೇ ಸಿದ್ದರಾಮಯ್ಯ ನವರ ಆಡಳಿತವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಹೀಗಿರುವಾಗ ಸಿದ್ದರಾಮಯ್ಯನವರಿಗೆ ಹಿಂದು ಧರ್ಮದ ಮೇಲೆ ಗೌರವ ಇಲ್ಲ, ಮಠಾಧೀಶರ ಬಗ್ಗೆ ಗೌರವ ಇಲ್ಲ ಎಂದು ವಾದಿಸುವುದರಲ್ಲಿ ಹುರುಳಿದೆಯೇ ? ಸಿದ್ದರಾಮಯ್ಯನವರು ಬಸವಾದಿ ಶರಣರ ಮಾರ್ಗದಲ್ಲಿ ಅನುಭವ ಮಂಟಪದ ಮಾದರಿ ಅನುಸರಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಮುರುಘಾ ಶರಣರು ಶ್ಲಾಘಿಸಿದರೆ, ಸಿದ್ದರಾಮಯ್ಯನವರ ಕನಸಿನ ‘ಅನ್ನಭಾಗ್ಯ ಯೋಜನೆ’ ತಾಯಿ ಹೃದಯ ಹೊಂದಿರುವ ಮನಸಿನಿಂದ ಜಾರಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಽಕಾರಿ ಡಾ.ವೀರೇಂದ್ರಹೆಗ್ಗಡೆಯವರು ಪ್ರಶಂಸೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅಲಕ್ಷಿತ ಸಮಾಜವನ್ನು ಸಮಸಮಾಜದ ಕಡೆಗೆ ಕರೆದೊಯ್ಯುತ್ತಿದ್ದಾರೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದರೆ, ಸಿದ್ದರಾಮಯ್ಯನವರು ನಾಡು ಕಂಡ ಉತ್ತಮ ನಾಯಕ. ಅವರ ಜನಪರ ಕಾಳಜಿ ಇತರರಿಗೆ ಮಾದರಿ ಸುತ್ತೂರು ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ, ನೋವುಂಡವರ ಪರ ಕೆಲಸ ಮಾಡುವ ನಾಯಕ. ಒಂದು ಜಾತಿ ವರ್ಗಕ್ಕೆ ಸೀಮಿತವಲ್ಲ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಹೊಗಳಿದರು. ನಾಡಿನ ಬಹುತೇಕ ಮಠಾಧೀಶರು ಸಿದ್ದರಾಮಯ್ಯನವರ ಬಗ್ಗೆ ಈ ಅಭಿಪ್ರಾಯ ಹೊಂದಿರುವಾಗ ಮಠಾಽಶರನ್ನು ನಿಂದಿಸುವ ಕಾರ್ಯಕ್ಕೆ ಅವರು ಕೈ ಹಾಕಲು ಸಾಧ್ಯವೇ ? ಆದರೆ ಬಾಹ್ಯ ಶಕ್ತಿಗಳು ಅವರ ಹೇಳಿಕೆಯನ್ನು ವಿಪರೀತ ವ್ಯಾಖ್ಯಾನ ಮಾಡಿದ್ದರಿಂದ ಇಂದು ಈ ಪರಿಸ್ತಿತಿ ನಿರ್ಮಾವಾಗಿದೆ.
ಸುಳ್ಳಿನ ಮೆರವಣಿಗೆ, ಹಾಗೂ ಉತ್ಸವ ನಡೆಯುತ್ತಿರುವಾಗ ಯಾರಷ್ಟೇ ಸತ್ಯ ಹೇಳಿದರೂ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಹಾಗೂ ವ್ಯವಧಾನ ಯಾರಲ್ಲೂ ಇರುವುದಿಲ್ಲ. ಆದರೆ ಇಷ್ಟು ವರ್ಷಗಳ ಕಾಲ ಅಭಿವೃದ್ಧಿ ರಾಜಕಾರಣವನ್ನು ಮಾಡಿಕೊಂಡು ಬಂದ ಕರ್ನಾಟಕದಲ್ಲಿ ಈಗ ಕೋಮು ರಾಜಕಾರಣ ವಿಜೃಂಭಿಸುತ್ತಿದೆ. ಸತ್ಯ ಹೇಳಿದವರ ವಿರುದ್ಧ ರಣೋನ್ಮಾ ದದಿಂದ ಮುಗಿ ಬೀಳುವ ಪಡೆಯನ್ನು ಸೃಷ್ಟಿಸಿ ಅಖಾಡಕ್ಕೆ ಬಿಡಲಾಗಿದೆ. ಆದರೆ ಇದಕ್ಕೆ ಅಂಜಿ ಕುಳಿತುಕೊಳ್ಳುವುದಕ್ಕೆ ಸಾಧ್ಯವೇ? ಸತ್ಯವನ್ನು ದೂಡ ಧ್ವನಿಯಲ್ಲಿ ಹೇಳಲೇಬೇಕು.
ಆಗಷ್ಟೇ ಅಸತ್ಯದ ಪ್ರತಿಮೆಗಳನ್ನು ಕುಟ್ಟಿ ಕೆಡವುವುದಕ್ಕೆ ಸಾಧ್ಯ. ಈ ಕಾರಣಕ್ಕಾಗಿ ಸಿದ್ದರಾಮಯ್ಯನವರ ಜತೆಗೆ ನಾವೆಲ್ಲರೂ ನಿಲ್ಲಲೇಬೇಕು. ಜಾತಿ-ಧರ್ಮ ಭ್ರಷ್ಟಾಚಾರದ ರಾಜಕಾರಣದ ವಿರುದ್ಧ ರಣದುಂದುಭಿಯನ್ನು ಮೊಳಗಿಸುವುದಕ್ಕೆ ಇದಕ್ಕಿಂತ ಪ್ರಶಸ್ತವಾದ ಕಾಲ ಬೇರೊಂದಿಲ್ಲ. ಸತ್ಯಮೇವ ಜಯತೆ.
(ಲೇಖಕರು ಕರ್ನಾಟಕ ಲೋಹಿಯ ವಿಚಾರ ವೇದಿಕೆಯ ಅಧ್ಯಕ್ಷರು)