ತಿರುಗಾಟ ನಿಲ್ಲಿಸಿದ ಅಟ್ಲಾಸ್ ಸೈಕಲ್
ವಿದೇಶ ವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
@.
2020ರ ಜೂನ್ 3. ಅಂದು ವಿಶ್ವ ಬೈಸಿಕಲ್ ದಿನಾಚರಣೆ ಬೇರೆ. ಅಟ್ಲಾಸ್ ಸಂಸ್ಥೆ ತನ್ನ ಕೊನೆಯ ತಯಾರಿಕಾ ಕೇಂದ್ರ ವನ್ನೂ ಮುಚ್ಚುವುದಾಗಿ ಘೋಷಿಸಿತು. ಅಟ್ಲಾಸ್ ದಿಲ್ಲಿ ಸಮೀಪದ ಶಹೀಬಾಬಾದ್‌ನಲ್ಲಿದ್ದ ತನ್ನ ಕೊನೆಯ ಉತ್ಪಾದನಾ ಘಟಕದ ಗೇಟಿಗೆ ಬೀಗ ಹಾಕಿತ್ತು. ಆಗ ಸಂಸ್ಥೆಯಲ್ಲಿ 430 ಜನ ಮಾತ್ರ ಕೆಲಸ ಮಾಡುತ್ತಿದ್ದರು.
‘ಒಮ್ಮೆ ಕಲಿತರೆ ಜೀವನ ಪರ್ಯಂತ ನೆನಪಿರಬಹುದಾದ ಎರಡು ವಿಷ ಯಗಳೆಂದರೆ, ಈಜುವುದು ಮತ್ತು ಸೈಕಲ್ ನಡೆಸುವುದು’ ಎಂಬ ಮಾತಿದೆ. ಅದು ನಿಜವೂ ಹೌದು. ಒಮ್ಮೆ ಕಲಿತರೆ, ಹೆಣ್ಣಾಗಲೀ, ಗಂಡಾಗಲೀ, ಎಷ್ಟೇ ವಯಸ್ಸಾಗಲಿ, ಕೈ ಕಾಲು, ಬುದ್ಧಿ ಗಟ್ಟಿ ಇರುವವರೆಗೂ ಮರೆಯದ ವಿದ್ಯೆ. ಕೆಲವು ವರ್ಷ ಬಿಟ್ಟು ಪುನಃ ಪ್ರಯತ್ನಿಸುವಾಗ ಮರೆತಿರಬಹುದು ಎಂದು ಅನುಮಾನ ಪಡುತ್ತಿರುವಾಗಲೇ ಮರೆತಿಲ್ಲ ಎಂದು ತೋರಿಸಿ ಕೊಡುವ ವಿದ್ಯೆ ಅದು.
ಅದಕ್ಕೇ ಇರಬೇಕು, ಈ ಎರಡು ವಿದ್ಯೆಯ ಅನುಭವವೂ ಅನೂಹ್ಯ. ಬಡವರು ಮತ್ತು ಶ್ರೀಮಂತರು, ಇಬ್ಬರೂ ಬಳಸುವ ಸಾಧನಗಳು ಕೆಲವು ಮಾತ್ರ. ಅದರಲ್ಲಿ ಸೈಕಲ್ ಕೂಡ ಒಂದು. ವ್ಯತ್ಯಾಸ ಇಷ್ಟೇ, ಕೆಲವರಿಗೆ ಇದು ಪ್ರಯಾಣಕ್ಕೆ ಅವಶ್ಯವಾದ ವಾಹನ, ಕೆಲವ ರಿಗೆ ಸರಕು ಸಾಗಿಸುವ ಮಾಧ್ಯಮ, ಕೆಲವರಿಗೆ ವಿನೋದಕ್ಕೆ, ಸಂತೋಷಕ್ಕೆ ಬಳಕೆ ಯಾಗುವ ಸಾಧನ. ಇನ್ನು ಕೆಲವರಿಗೆ ಬೊಜ್ಜು ಕರಗಿಸುವ ಯಂತ್ರವೂ ಹೌದು ಬಿಡಿ. ಏನೇ ಆದರೂ ಅದರೊಂದಿಗಿನ ಬಾಂಧವ್ಯ ಮಾತ್ರ ಅನನ್ಯ.
ನನ್ನ ಶಾಲಾದಿನಗಳಲ್ಲಿ ನಾನೂ ಸೈಕಲ್ ತುಳಿದವನೇ. ಆ ದಿನಗಳಲ್ಲಿ ನಮ್ಮೂರಲ್ಲಿ ಇದ್ದದ್ದು ಹರ್ಕುಲೆಸ್, ಹೀರೊ, ಅಟ್ಲಾಸ್ ಮತ್ತು ಬಿ.ಎಸ್.ಎ. ಹೀಗೆ ಮೂರು ನಾಲ್ಕು ಕಂಪನಿಯ ಸೈಕಲ. ಎಲ್ಲದರ ಬೆಲೆಯೂ ಸುಮಾರು ಒಂದು ಸಾವಿರ ರೂಪಾಯಿಯ ಆಸು ಪಾಸು. ಬಿ.ಎಸ್.ಎ.ಗೆ ಒಂದು ನೂರು ಇನ್ನೂರು ರೂಪಾಯಿ ಜಾಸ್ತಿ. ಅದಕ್ಕೇ ಬಿ.ಎಸ್.ಎ. ಸೈಕಲ್ ಇದ್ದರೆ ಸ್ವಲ್ಪ ಡೌಲೂ ಹೆಚ್ಚು. ತಮ್ಮ ಸೈಕಲ್ ಉಳಿದವುಗಳಿಗಿಂತ ಹೆಚ್ಚು ಗಟ್ಟು ಮುಟ್ಟು ಎಂದು ಅಟ್ಲಾಸ್ ಮತ್ತು ಹರ್ಕುಲೆಸ್ ಸೈಕಲ್ ಇದ್ದವರ ಹಮ್ಮು.
ಅತಿ ಹೆಚ್ಚು ಮಾರಾಟವಾಗುವ, ಹೊಸ ಹೊಸ ಮಾಡೆಲ್‌ಗಳನ್ನು ತರುವ ಕಂಪನಿಯ ಸೈಕಲ್ ತಮ್ಮದು ಎಂಬ ಬಿಗುಮಾನ ಹೀರೊ ಸೈಕಲ್ನವರದ್ದು. ಅದರಲ್ಲೂ ಸೀಟಿಗೆ ಒಂದು ಕರ್ವ, ಹ್ಯಾಂಡಲ್‌ಗೆ, ಪೆಡಲ್‌ಗೆ ಒಂದಷ್ಟು ಅಲಂಕಾರ, ಹಿಂದಿನ ಮಡ್‌ ಗಾರ್ಡಿನ ಮೇಲೆ ಒಂದು ಬರಹ, ಇದ್ದರೆ ಯಾವ ಬ್ರ್ಯಾಂಡ್ ಆದರೂ ಇನ್ನೂ ಹೆಚ್ಚಿನ ಮರ್ಯಾದೆ. ಇದರ ಜತೆಗೆ, ರಾತ್ರಿ ವೇಳೆ ಚಲಿಸಲು ಒಂದು ಡೈನಮೊ ಇದ್ದರಂತೂ ಕೇಳುವುದೇ ಬೇಡ, ಸೈಕಲ್ ಸವಾರ ಅಂಬಾರಿ ಏರಿ ಹೊರಟ ಅರಸ. ಒಂದಂತೂ ಸತ್ಯ, ಇಂದು ಕಾರು ಇದೆ ಎಂದರೂ ಸಿಗದ ಮರ್ಯಾದೆ ಅಂದು ಸೈಕಲ್ ಇದೆ ಎಂದರೆ ಸಿಗುತ್ತಿತ್ತು.
ಎಪ್ಪತ್ತು ಎಂಬತ್ತರ ದಶಕದಲ್ಲಿ ಬಾಡಿಗೆಗೆ ಸೈಕಲ್ ಕೊಡುವ ಕೆಲವು ಅಂಗಡಿಗಳಿದ್ದವು. ಸಾಲ ಮಾಡಿಯಾದರೂ ತುಪ್ಪ ತಿನ್ನ ಬೇಕು ಎಂಬಂತೆ ಬಾಡಿಗೆ ಪಡೆದಾದರೂ ಸೈಕಲ್ ಸವಾರಿ ಮಾಡಬೇಕು ಎಂಬಂತಿತ್ತು ಆಗಿನ ಮನಸ್ಥಿತಿ. ಆಗ ಒಂದು ತಾಸಿಗೆಐದರಿಂದ ಹತ್ತು ರೂಪಾಯಿ ಬಾಡಿಗೆ. ಸಿಗುತ್ತಿದ್ದ ಪಾಕೆಟ್ ಮನಿ, ಊಟ ತಿಂಡಿಗೆಂದು ಕೊಟ್ಟ ದುಡ್ಡನ್ನೆಲ್ಲ ಸೇರಿಸಿ ಬಾಡಿಗೆ ಸೈಕಲ್ ಪಡೆದು ಕಲಿತವರ, ಅದರ ಸರ್ಕಸ್ ಮಾಡಿದವರ ಸಂಖ್ಯೆಗೆ ಲೆಕ್ಕವೇ ಇಲ್ಲ.
ತನ್ನ ಹುಡುಗಿ ಬರುವ ಹಾದಿಯಲ್ಲಿ ಅವಳನ್ನು ಮೋಡಿ ಮಾಡಲು ಸೈಕಲ್ ಹಿಡಿದು ನಿಂತವರ ಲೆಕ್ಕ ಯಾರಾದರೂ ಇಟ್ಟಿದ್ದರೆ ತಿಳಿಯುತ್ತಿತ್ತು. ಯಾರನ್ನಾದರೂ ಕಾಡಿ ಬೇಡಿಯಾದರೂ ಸೈಉಕಲ್ ಮೇಲೆ ಒಂದು ಸುತ್ತು ಹೋಗಿ ಬರಬೇಕು. ಅದೆಲ್ಲ ಬಿಡಿ, ಮೊದಲು ಸೈಕಲ್ ಇಟ್ಟುಕೊಂಡು, ಈಗ ಕಾರು ಇಟ್ಟುಕೊಂಡವರನ್ನೇ ಕೇಳಿ, ಅವರೆಲ್ಲ ಸ್ವತಃ ಕಾರು ತೊಳೆಯುವುದೋ, ಒರೆಸು ವುದೋ ಮಾಡಿರಲಿರಲಿಕ್ಕಿಲ್ಲ.
ಆದರೆ ಅವರೆಲ್ಲ ತಮ್ಮ ಬಳಿ ಇದ್ದ ಸೈಕಲ್ಲನ್ನು ತೊಳೆದಿಲ್ಲ, ಒರೆಸಲಿಲ್ಲ ಎಂದರೆ ಹೇಳಿ. ಸೈಕಲ್‌ಗೆ ಜೀವ ಇರುತ್ತಿದ್ದರೆ ಅದೂ ಒಂದು ಸಾಕುಪ್ರಾಣಿಯಾಗಿರುತ್ತಿತ್ತು. ಅಷ್ಟರ ಮಟ್ಟಿಗೆ ಬಾಂಧವ್ಯವನ್ನು ಬೆಸೆದುಕೊಳ್ಳುತ್ತದೆ ಸೈಕಲ್. ಅದಕ್ಕಾಗಿಯೇ ಸೈಕಲ್ ತಯಾರಿಸುವ ಕಂಪನಿಗಳೆಂದರೂ ವಿಶೇಷ ಪ್ರೀತಿ. ಈಗ, ಒಂದು ಕಾಲದಲ್ಲಿ ಅದೆಷ್ಟೋ ಜನರನ್ನು ಅರಸರಂತೆ ಮೆರೆಸಿದಅಟ್ಲಾಸ್ ಸೈಕಲ್‌ನ ವಿಷಯ ತಿಳಿದು ವಿಷಾದವೆನಿಸುತ್ತಿದೆ.
ಅಟ್ಲಾಸ್ ಸೈಕಲ್ ಸುತ್ತು ಹೊಡೆದು ಬಂದ ದಾರಿ ಸಾಮಾನ್ಯವಾದದ್ದಲ್ಲ. ಹರಿಯಾಣ ಮೂಲದ ಜಾನಕಿ ದಾಸ್ ಕರ್ಪೂ ಸೈಕಲ್ ಸೀಟ್ ತಯಾರಿಸಿ ಮಾರಾಟ ಮಾಡುತ್ತಿದ್ದರು. 1951ರಲ್ಲಿ ಸ್ವಂತ ಸೈಕಲ್ ತಯಾರಿಸಬೇಕೆಂದು ನಿರ್ಣಯಿಸಿದರು. ರಾಜಧಾನಿ ದಿಲ್ಲಿಯಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿ, ಹರಿಯಾಣಾದ ಸೋನಿಪತ್‌ನಲ್ಲಿ ತಗಡಿನ ಸಣ್ಣ ಶೆಡ್ ಒಂದ ರಲ್ಲಿ ಸೈಕಲ್ ತಯಾರಿಸುವ ಕೆಲಸ ಆರಂಭಿಸಿದರು. ತಾವು ಕಟ್ಟಿದ ಸಂಸ್ಥೆಗೆ ಅಟ್ಲಾಸ್ ಎಂದು ಹೆಸರಿಟ್ಟರು.
ಅಟ್ಲಾಸ್ ಕಂಪನಿ ಮೊದಲ ವರ್ಷ ತಯಾರಿಸಿದ ಸೈಕಲ್‌ಗಳ ಸಂಖ್ಯೆ ನೂರ ಇಪ್ಪತ್ತು. ಎರಡನೆಯ ವರ್ಷಕ್ಕೆ ಕಾಲಿಡುವಾಗ ಸಂಸ್ಥೆ ಇಪ್ಪತ್ತೈದು ಎಕರೆ ಜಮೀನು ಖರೀದಿಸಿತು. ಅದೇ ವರ್ಷ ಅಟ್ಲಾಸ್ ಹನ್ನೆರಡು ಸಾವಿರ ಸೈಕಲ್ ತಯಾರಿಸಿ ಮಾರಾಟ ಮಾಡಿತು.ಅಲ್ಲಿಂದ ತಿರುಗಲು ಆರಂಭಿಸಿದ ಅಟ್ಲಾಸ್ ಸೈಕಲ್ ಚಕ್ರ ನಿಂತೇ ಇರಲಿಲ್ಲ. ಅದು ನಿಂತದ್ದು ಇತ್ತೀಚೆಗೆ ಜಗತ್ತನ್ನು ಆಕ್ರಮಿಸಿದ ಕೊರೊನಾ ಮಹಾಮಾರಿಯ ಆರ್ಭಟದ ಸಂದರ್ಭದಲ್ಲಿ.
ಅಟ್ಲಾಸ್ ಸಂಸ್ಥೆ ಸೈಕಲ್ ತಯಾರಿಸಲು ಆರಂಭಿಸಿ ಆರು ಏಳು ವರ್ಷವಾಗಿತ್ತು. ವಿದೇಶಿ ಕಂಪನಿಗಳು ಅಟ್ಲಾಸ್ ಸಂಸ್ಥೆಯನ್ನು ಸಂಪರ್ಕಿಸಲು ಆರಂಭಿಸಿದ್ದವು. ಇದರ ಫಲವಾಗಿ ಆಫ್ರಿಕಾ, ಮಧ್ಯ ಪೂರ್ವ ರಾಷ್ಟ್ರಗಳು ಮತ್ತು ಬರ್ಮಾದಲ್ಲಿ ಅಟ್ಲಾಸ್ ಸೈಕಲ್‌ ಗಳಿಗೆ ಹೆಚ್ಚಿನ ಬೇಡಿಕೆ ಆರಂಭವಾಯಿತು. ನೋಡ ನೋಡುತ್ತಿದ್ದಂತೆ ಅಟ್ಲಾಸ್ ಸೈಕಲ್ ಐವತ್ತು ದೇಶಗಳಲ್ಲಿ ಸುತ್ತಾಡ ತೊಡಗಿತು.
ಅದೇ ಸಂದರ್ಭದಲ್ಲಿ ಹೀರೊ ಸೈಕಲ್ ಕೂಡ ಭಾರತದಲ್ಲಿ ತಳ ಊರಲು ಆರಂಭಿಸಿತ್ತಾದರೂ, ಅಟ್ಲಾಸ್‌ಗೆ ಅಷ್ಟೊಂದು ಫರಕ್ ಬೀಳಲಿಲ್ಲ. ಕಾರಣ, ಅಟ್ಲಾಸ್ ಸೈಕಲ್ ಮಜಬೂತಾಗಿದ್ದು, ಹೆಚ್ಚು ಬಾಳಿಕೆ ಬರುವ ಸೈಕಲ್ ಎಂದು ಆಗಲೇ ಹೆಸರಾಗಿದ್ದುದರಜತೆಗೆ ಅದರ ಬೆಲೆ ಉಳಿದವುಗಳಿಗಿಂತ ಕಡಿಮೆ ಇತ್ತು. ಆ ಕಾಲದಲ್ಲಿ ಸಂಸ್ಥೆ ತಯಾರಿಸಿದ ಒಂದೇ ಒಂದು ಸೈಕಲ್ ಕೂಡ ಮಾರು ಕಟ್ಟೆಯಲ್ಲಿ ಬಾಕಿ ಉಳಿಯುತ್ತಿರಲಿಲ್ಲ. ಕೆಲವು ಕಡೆಯಂತೂ ಮುಂಗಡ ಹಣ ನೀಡಿ ಕಾಯುವ ಪರಿಸ್ಥಿತಿ (ಈಗ ಕಾರು ಮತ್ತು ಬೈಕಿಗೆ ಕಾಯುವಂತೆ) ಇತ್ತು. ಆರಂಭವಾಗಿ ಹತ್ತು ವರ್ಷದಲ್ಲಿ ಹತ್ತು ಲಕ್ಷ ಸೈಕಲ್ ತಯಾರಿಸಿ ಮಾರಾಟ ಮಾಡಿತ್ತು ಅಟ್ಲಾಸ್ ಸಂಸ್ಥೆ. ಆ ಕಾಲದಲ್ಲಿ ಭಾರತದಂತಹ ದೇಶಕ್ಕೆ ಆ ಸಂಖ್ಯೆ ಕಮ್ಮಿಯೇನೂ ಆಗಿರಲಿಲ್ಲ.
ಆರಂಭವಾದ ಹದಿನೈದು ವರ್ಷಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ಸೈಕಲ್ ತಯಾರಿಸುವ ಕಂಪನಿಯಾಗಿತ್ತು ಅಟ್ಲಾಸ್. ಅದಾಗಿ ಒಂದು ದಶಕದ ನಂತರ, ಅಂದರೆ, ಎಪ್ಪತ್ತರ ದಶಕದ ಅಂತ್ಯದಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿತ್ತು ಅಟ್ಲಾಸ್. ‘ರಿಬನ್’ ಎಂಬ ಹೆಸರಿನಲ್ಲಿ ಕ್ರೀಡೆಗೆ ಬಳಸಲು ಯೋಗ್ಯವಾದ (ಸ್ಪೋಟ್ಸ್ ಬೈಸಿಕಲ) ಸೈಕಲ್ ತಯಾರಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಅಟ್ಲಾಸ್ ಸಂಸ್ಥೆ ಮತ್ತು ಸೈಕಲ್ ಎಷ್ಟು ಜನಪ್ರಿಯವಾಯಿತೆಂದರೆ, 1982ರ ಏಷ್ಯನ್ ಗೇಮ್ಸ್‌ನ ಜವಾಬ್ದಾರಿಯನ್ನು ಅಟ್ಲಾಸ್ ಹೆಗಲಿಗೆ ಏರಿಸಲಾಯಿತು. ಅದನ್ನು ಸಮರ್ಥವಾಗಿ ನಿಭಾಯಿಸಿತು ಅಟ್ಲಾಸ. ಆ ವರ್ಷದ ಪಂದ್ಯಾಟದಲ್ಲಿ ಸ್ಪರ್ಧೆಗೆ ಬೇಕಾದ ಅಷ್ಟೂ ಸೈಕಲ್ ಒದಗಿಸಿಕೊಟ್ಟದ್ದು ಅಟ್ಲಾಸ್ ಸಂಸ್ಥೆ.
ಎಂಬತ್ತರ ದಶಕದ ಅಂತ್ಯದಲ್ಲಿ ಸಂಸ್ಥೆ ಇನ್ನೊಂದು ಪ್ರಯೋಗಕ್ಕೆ ಮೊದಲಾಯಿತು. ಹತ್ತು ಗೇರ್ ಇರುವ ಅಟ್ಲಾಸ್ ‘ಕಾಂಕರ್ಡ್’ ಸೈಕಲ್ ತಯಾರಿಸಿತು. ಆ ಕಾಲದಲ್ಲಿ ಅದು ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿತ್ತು. ಒಂದು ರೀತಿಯಲ್ಲಿ ಎಂಬತ್ತು ಮತ್ತು ತೊಂಬತ್ತರ ದಶಕ ಅಟ್ಲಾಸ್ ಕಂಪನಿಗೆ ಸ್ವರ್ಣಯುಗ. ವಿಶ್ವದಾದ್ಯಂತ ಅಟ್ಲಾಸ್ ಸೈಕಲ್ ಮಾರಾಟ ಮಾಡುವ ನಾಲ್ಕು ಸಾವಿರ ಮಳಿಗೆಗಳಿದ್ದವು.
ದೇಶ ವಿದೇಶಗಳಲ್ಲಿ ಅಟ್ಲಾಸ್ ಸೈಕಲ್ ಜನ ಪ್ರಿಯತೆ ತುತ್ತತುದಿಯಲ್ಲಿತ್ತು, ಬೇಡಿಕೆ ಉತ್ತುಂಗ ದಲ್ಲಿತ್ತು. ಆ ಕಾಲದಲ್ಲಿ ಅದು ಮಾಡಿದ್ದೆಲ್ಲ ಖರೆ, ಮುಟ್ಟಿದ್ದೆಲ್ಲ ಚಿನ್ನ. 2003 ರಿಂದ ಕಾರ್ಮೋಡ ಕವಿಯಲು ಆರಂಭಿಸಿತ್ತು. ಪರಿವಾದ ಒಳಜಗಳ, ಭಿನ್ನಾಭಿ ಪ್ರಾಯಗಳಿಂದ ಕಂಪನಿ ಸುರುಟಲು ಶುರುವಾಯಿತು. ೨೦೧೪ ರ ನಂತರವಂತೂ ಕೇಳುವುದೇ ಬೇಡ, ಅಟ್ಲಾಸ್ ಸೈಕಲ್ ಚಕ್ರಕ್ಕೆ ಸುತ್ತಿಗೊಂದರಂತೆ ಸ್ಪೀಡ್ ಬ್ರೇಕರ್ ಎದುರಾದವು. ವಿದೇಶಿ ಕಂಪನಿಗಳು ಭಾರತಕ್ಕೆ ಬರಲಾರಂಭಿಸಿದವು. ಅವರೊಂದಿಗೆ ಪೈಪೋಟಿ ನಡೆಸಲು ಒಡೆದ ಪರಿವಾರದಲ್ಲಿ ಶಕ್ತಿ ಇರಲಿಲ್ಲ.
ಅಟ್ಲಾಸ್ ಸಂಸ್ಥೆ ಸಂಪೂರ್ಣ ಸೈಕಲ್ ಆಗಿರದೆ, ಬಿಡಿ ಭಾಗವಾಗಿ ಹಂಚಿಹೋಗಿತ್ತು. ಹೊಸ ಕಂಪನಿಗಳು ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ಸೈಕಲ್‌ಗಳನ್ನು ಬಿಡುತ್ತಿದ್ದರೆ, ಅಟ್ಲಾಸ್ ತನ್ನ ಸೈಕಲ್ಲನ್ನು ಸ್ಟ್ಯಾಂಡ್ ಹಾಕಿ ನಿಲ್ಲಿಸಿಬಿಟ್ಟಿತ್ತು. ಸ್ಟ್ಯಾಂಡ್ ತೆಗೆದು ಇತರ ಸೈಕಲ್ ಜತೆ ಸ್ಪರ್ಧೆಗಿಳಿಯುವ ಯಾವ ಹುಮ್ಮಸ್ಸನ್ನೂ ತೋರಿಸಲಿಲ್ಲ. ದಿನನಿತ್ಯದ ಖರ್ಚಿಗೇ ತತ್ವಾರವಾಗಿದ್ದಾಗ ಉಳಿದ ಕಡೆ ಗಮನವಾದರೂ ಹೇಗೆ ಹರಿದೀತು? ವರ್ಷಕ್ಕೆ ನಲವತ್ತು ಲಕ್ಷ ಸೈಕಲ್ ತಯಾರಿಸುವ ಸಾಮರ್ಥ್ಯ ಇರುವ ಘಟಕದಲ್ಲಿಕೇವಲ ಎರಡು ಲಕ್ಷ ಸೈಕಲ್ ತಯಾರಾಗುತ್ತಿದ್ದವು.
ಇನ್ನೊಂದೆಡೆ ಹೀರೊ ಸೈಕಲ್ ಎಂಬ ವೃಕ್ಷ ಆಗಾಗ ಹೊಸ ಟಿಸಿಲೊಡೆದು ಭದ್ರವಾಗಿ ಬೇರೂರಿತ್ತು. 2020ರ ಜೂನ್ 3ನೇ ತಾರೀಖು. ಅಂದು ವಿಶ್ವ ಬೈಸಿಕಲ್ ದಿನಾಚರಣೆ ಬೇರೆ. ಅಟ್ಲಾಸ್ ಸಂಸ್ಥೆ ತನ್ನ ಕೊನೆಯ ತಯಾರಿಕಾ ಕೇಂದ್ರವನ್ನೂ ಮುಚ್ಚುವುದಾಗಿ ಘೋಷಿಸಿತು. ಕೊರೊನಾ ಮಹಾಮಾರಿಯಿಂದ ವಿಶ್ವವೇ ಕಂಗೆಟ್ಟ ಸಂದರ್ಭ. ಹಾಗೆ ನೋಡಿದರೆ ಸೈಕಲ್ ತಯಾರಿಸುವ ಉಳಿದ ಕಂಪನಿಗಳು ಚೆನ್ನಾಗೇ ನಡೆಯುತ್ತಿದ್ದವು. ಆದರೆ ಅಟ್ಲಾಸ್ ದಿಲ್ಲಿ ಸಮೀಪದ ಶಹೀಬಾಬಾದ್‌ನಲ್ಲಿದ್ದ ತನ್ನ ಕೊನೆಯಉತ್ಪಾದನಾ ಘಟಕದ ಗೇಟಿಗೆ ಬೀಗ ಹಾಕಿತ್ತು. ಆಗ ಸಂಸ್ಥೆಯಲ್ಲಿ ಒಟ್ಟೂ ನಾಲ್ಕುನೂರ ಮೂವತ್ತು ಜನ ಮಾತ್ರ ಕೆಲಸ ಮಾಡುತ್ತಿದ್ದರು.
ಸಂಸ್ಥೆ ಪುನಃ ಆರಂಭವಾಗಿ ಕಾರ್ಯಾರಂಭ ಮಾಡಲು ಐವತ್ತು ಕೋಟಿ ರೂಪಾಯಿ ಬೇಕಂತೆ. ತನ್ನ ಬಳಿ ಇರುವ ಹೆಚ್ಚಿನ ಭೂಮಿಯನ್ನು ಮಾರಿ ಪುನಃ ಎದ್ದು ನಿಲ್ಲುತ್ತೇವೆ ಎನ್ನುವ ಭರವಸೆಯನ್ನು ಸಂಸ್ಥೆ ನೀಡುತ್ತಿದೆ. ಅದು ಎಷ್ಟರ ಮಟ್ಟಿಗೆ ನಿಜವಾ ಗುತ್ತದೆ ಎಂದು ಕಾದು ನೋಡಬೇಕು. ಏಕೆಂದರೆ ಸಂಸ್ಥೆ ಸ್ಥಗಿತಗೊಂಡು ಈಗಾಗಲೇ ಎರಡುವರ್ಷ ಆಗುತ್ತಾ ಬಂತು. ಮಾರು ಕಟ್ಟೆಯಿಂದ ನಿರ್ಗಮಿಸುವುದರಲ್ಲಿ ಎರಡು ವಿಧ. ಒಂದು ಆ ವಸ್ತುವೇ ಮಾಯವಾಗುವುದು.
ಉದಾಹರಣೆಗೆ, ರೇಡಿಯೊ, ಟೆಪ್ ರೆಕಾಡರರ್, ವಿಡಿಯೋ ಪ್ಲೇಯರ್, ಸಣ್ಣ ಗಡಿಯಾರ ಇತ್ಯಾದಿ. ಬೇರೆ ತಂತ್ರ್ಞಾನ ಅವುಗಳ ಅಸ್ಥಿತ್ವವನ್ನು ತಿಂದು ಹಾಕಿದೆ. ಇಂದು ಆ ವಸ್ತುಗಳ ಕೊರತೆ ಎಲ್ಲಿಯೂ ಕಾಣುವುದಿಲ್ಲವಾದ್ದರಿಂದ ಬೇಸರವಾಗುವುದಿಲ್ಲ. ಇನ್ನೊಂದು ವಸ್ತುಗಳು ಇದ್ದರೂ ತಯಾರಿಸುವ ಸಂಸ್ಥೆ ಮಾಯವಾಗುವುದು. ಅದು ಖೇದಕರ. ಇಂದು ಟಿವಿ ಇದೆ, ಹಳೆಯ ಕಂಪನಿಗಳಾದ ಒನಿಡಾ, ಬಿ.ಪಿ.ಎಲ., ವಿಡಿಯೋಕಾನ್ ಕಂಪನಿಗಳಿಲ್ಲ. ಮೊಬೈಲ್ ಇದೆ, ಮೊಟೊರೋಲಾ, ನೋಕಿಯಾ ಇಲ್ಲ,ಕಾರುಗಳಿವೆ, ಅಂಬಾಸಿಡರ್ ಇಲ್ಲ.
ಸ್ಕೂಟರ್ ಇದೆ, ಬಜಾಜ್ ಚೇತಕ್ ಇಲ್ಲ. ಇವೆಲ್ಲ ಒಂದು ಕಾಲದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ರಾಜ್ಯಭಾರ ಮಾಡಿದವರು. ಕಾರಣ ಏನೇ ಇರಲಿ, ಅಂಥವರು ಮಾರುಕಟ್ಟೆಯಿಂದ ನಿರ್ಗಮಿಸಿದರೆ ಒಮ್ಮೆ ಬೇಸರವಾಗುತ್ತದೆ. ಈಗ ಅಟ್ಲಾಸ್ ಅಂಥವರ ಸಾಲಿಗೆ ಸೇರಲಿದೆಯೇ ಎಂಬ ದುಗುಡ. ದೇಶ ವಿದೇಶಗಳಲ್ಲಿ, ಎಲ್ಲಿಂದ ಎಲ್ಲಿಗೋ ಜನರನ್ನು ಸುತ್ತಿಸಿದ ಅಟ್ಲಾಸ್ ಸೈಕಲ್ ಇಂದು ದಣಿದು ಕುಳಿತಿದೆ. ಗಟ್ಟಿತನಕ್ಕೆ ಹೆಸರಾದ, ಅದೇ ಅರ್ಥ ಕೊಡುವ ಲಾಂಛನದಲ್ಲಿರುವ ಮನುಷ್ಯ ತನ್ನ ಹೆಗಲ ಮೇಲಿರುವ ಕಲ್ಲನ್ನು ಕೆಳಗೆ ಇಳಿಸಿ ಕುಳಿತಿದ್ದಾನೆ.
ಕುಳಿತುಕೊಳ್ಳುವ ಮುನ್ನ ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು, ಸಮಯದ ಜತೆಗೆ ಹೆಜ್ಜೆ ಹಾಕಬೇಕು, ಇಲ್ಲದಿದ್ದರೆ ಉಳಿದವರು ನಮಗಿಂತ ಮುಂದೆ ಹೋಗಿ, ನಮಗಿಂತ ಮೊದಲು ತಲುಪುತ್ತಾರೆ, ನಾವು ತಲುಪುವಾಗ ಅಲ್ಲಿ ನಮಗಾಗಿ ಸ್ಥಳವೇ ಇರುವುದಿಲ್ಲ ಎಂಬ ಜೀವನದ ಪಾಠವನ್ನು ಕಲಿಸಿದ್ದಾನೆ. ಅಟ್ಲಾಸ್ ಹೆತ್ತಬ್ಬೆಯೂ ಇಂದು ವಿರಮಿಸಿದ್ದಾಳೆ. ಆಕೆಯ ವಿರಾಮ ಪೂರ್ಣವಾಗಿರದೆ,ಅಲ್ಪವಾಗಿರಲಿ ಎಂಬುದೊಂದೇ ಆಶಯ.