ಮಹಾವೀರನ ಸಂಕ್ಷಿಪ್ತ ಧರ್ಮಸಾರ
ನಿರಂಜನ್ ಜೈನ್, ಕುದ್ಯಾಡಿ
ಜಗತ್ತು ನಾನಾ ತೊಂದರೆಗಳನ್ನು ಅನುಭವಿಸಿದಾಗ ಅಲ್ಲಲ್ಲಿ ಜನ್ಮವೆತ್ತುವ ಕೆಲವು ಧರ್ಮ ಪುರುಷರು ಆ ತೊಂದರೆಗಳಿಗೆ ಪರಿಹಾರ ನೀಡಿದ ಅನೇಕ ಉದಾಹರಣೆಗಳಿವೆ. ಭಗವಾನ್ ಆದಿನಾಥರಿಂದ ಹಿಡಿದು ಜೈನ ಧರ್ಮದ 24 ತೀರ್ಥಂಕರರು, ಭಗವಾನ್ ರಾಮ,ಕೃಷ್ಟ, ಮಹಮ್ಮದ್ ಪೈಗಂಬರ್, ಏಸುಕ್ರಿಸ್ತ ಮುಂತಾದವರು ಮನುಕುಲದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಜನರು ದಾರಿ ತಪ್ಪಿದಾಗ ಅವರನ್ನು ಸರಿ ದಾರಿಗೆ ತರಲು ಈ ಮಹನೀಯರುಗಳು ಧರ್ಮೋಪದೇಶ ಮಾಡಿದರು.
ಅದರಂತೆ ನಡೆದುಕೊಂಡ ಜಗತ್ತು ಈ ಮಹನೀಯರುಗಳನ್ನು ದೇವರಂತೆ ಕಂಡು ಪೂಜಿಸಿ ತಮ್ಮ ಬದುಕನ್ನು ಸಾರ್ಥಕ್ಯಗೊಳಿಸಿ ಕೊಂಡರು. ಹಾಗಾಗಿ ಇಂದಿನವರೆಗೂ ಈ ಜಗತ್ತು ಈ ಮಹನೀಯರುಗಳನ್ನು ಅರಾಧಿಸಿ, ಅನುಕರಿಸಿ, ಅವರುಗಳ ಉಪದೇಶದಂತೆ ನಡೆದು ಕೊಂಡು ಬರುತ್ತಿದೆ. ಹಾಗಾಗಿ ಈ ಜಗತ್ತು ಉಳಿದಿದೆ ಮತ್ತು ನೆಮ್ಮದಿಯಿಂದ ಇದ್ದೇವೆ ಎಂದು ಈ ಜಗತ್ತು ಭಾವಿಸಿದೆ. ಈ ಮಹನೀಯರುಗಳು ಗತಿಸಿ ಸಹಸ್ರಾರು ಯುಗಗಳೇ ಗತಿಸಿರಲಿ ಅವರ ಆದರ್ಶ, ಅವರ ಚಾರಿತ್ರ್ಯ, ಅವರ ಉಪದೇಶ ಚಿರಸ್ಥಾಯಿ ಯಾಗಿದೆ.
ಕೋಟ್ಯಾಂತರ ಜನರು ಇಂದಿಗೂ ಈ ಧಾರ್ಮಿಕ ಸಂತರನ್ನು ಅನುಕರಣೆ ಮಾಡುತ್ತಲೇ ಬಂದಿದೆ. ಇಂತಹಾ ಧಾರ್ಮಿಕ ಕ್ರಾಂತಿಯನ್ನು ಮೂಡಿಸಿ ಜಗತ್ತಿನಲ್ಲಿ ಶಾಂತಿಯ ಝರಿ ಯನ್ನು ಹರಿಸಿದವರಲ್ಲಿ ಪ್ರಮುಖರಾದವರು ಜೈನ ಧರ್ಮದ 24 ನೆಯ ತೀರ್ಥಂಕರ ಭಗವಾನ್ ಮಹಾವೀರ. ಭರತ ಖಂಡದ ವ್ಯಾಪ್ತಿಗೆ ಒಳಪಟ್ಟ ಬಿಹಾರ ರಾಜ್ಯದ ಕುಂಡಲಪುರದಲ್ಲಿ ರಾಜಾ ಸಿದ್ಧಾರ್ಥ ರಾಜ್ಯವಾಳುತ್ತಿದ್ದ. ಈತನ ಮಡದಿ ತ್ರಿಶಲಾ ದೇವಿ ಧರ್ಮಾನುರಾಗಿಯಾಗಿ ರಾಜವೈಭೋಗದಲ್ಲಿ ಸಮರಸದಿಂದ ಇದ್ದಳು. ಇವಳ ಪುಣ್ಯ ಗರ್ಭದಲ್ಲಿ ಕ್ರಿ. ಪೂ 599 ರಲ್ಲಿ ಮಹಾವೀರನ ಜನನವಾಯಿತು.
ಮಹಾವೀರನ ಜನನದ ಅತಿಶಯದಿಂದಾಗಿ ಕುಂಡಲಪುರ ಮತ್ತಷ್ಟೂ ವೈಭೋಗವನ್ನು ಪಡೆಯಿತು. ಬಾಲಕ ಮಹಾವೀರನ ಬಾಲ್ಯ ಚೇತೋಹಾರಿಯಾಗಿತ್ತು. ಕೈಗೊಂದು ಕಾಲಿಗೊಂದು ಆಳು, ಸಿರಿವಂತಿಕೆ ಅರಮನೆಯಲ್ಲಿ ಪವಡಿಸಿತ್ತು. ಭೋಗ ಭಾಗ್ಯಗಳು ಮಹಾ ವೀರನ್ನು ಕೈ ಬೀಸಿ ಕರೆಯುತ್ತಿತ್ತು. ಬಾ ನನ್ನನ್ನು ಬಳಸಿಕೋ ಎಂದು ಆಹ್ವಾವೀಯುತ್ತಿತ್ತು. ಆದರೆ ಮಹಾವೀರ ಪ್ರೌಢನಾಗುತ್ತಾ ಬಂದಂತೆ ಈ ಸುಖಭೋಗಗಳು ಸಂಕೋಲೆಯಂತೆ ಕಂಡವು. ಪ್ರಜಾ ಜನರೆಲ್ಲ ಸುಖ ಸಂತೋಷದಿಂದ ಇರುವಂತೆ ಕಂಡರೂ ಏನೋಕೊರತೆ ಯಿಂದ ಬಳಲುತ್ತಿರುವಂತೆ ಕಂಡಿತು. ಅರಮನೆ ಏಕೋ ಸೆರೆಮನೆಯಂತೆ ಭಾಸವಾಗತೊಡಗಿತು.
ತನ್ನ ಸುತ್ತ ಮುತ್ತ ಇರುವ ಸುಖಭೋಗಗಳು, ರಾಜ ವೈಭವವನ್ನು ಸವಿಯುತ್ತಿದ್ದರೂ ಏನೋ ಒಂದು ಬೇರೆಯೇ ರೀತಿಯ ಸುಖ ಬೇಕು ಬೇಕು ಅನ್ನಿಸತೊಡಗುತ್ತಿತ್ತು. ಮಾತಾ ಪಿತರು ಮಹಾವೀರನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರೆ ಮಹಾವೀರ ಮಾತ್ರ ಅದೇನೋ ಜಹುಡುಕಾಟದ ಅಪೇಕ್ಷೆಯಿಂದ ಅರಮನೆಯಿಂದ ಹೊರನಡೆದ. ವೈರಾಗ್ಯ ತುಂದಿಲನಾಗಿ ಸಕಲ ಪರಿಗ್ರಹಗಳ ತೊರೆಯುತ್ತಾ ಆತ್ಮ ಸ್ವರೂಪ ಅರಿಯಲು ದಟ್ಟ ಕಾನನಕ್ಕೆ ತೆರಳಿದ. ತನ್ನನ್ನು ತಾನು ಅರಿಯಲು ಬಹಿರಂಗ ಹಾಗೂ ಅಂತರಂಗ ತಪದ ಮೊರೆಹೋದ. ಆರ್ತ್ರಧ್ಯಾನ, ರೌದ್ರ ಧ್ಯಾನಗಳ ಹತ್ತಿರ ಸುಳಿಯದೇ ಧರ್ಮಧ್ಯಾನದಿಂದ ಮುಂದುವರಿದು ಶುಕ್ಲ ಧ್ಯಾನದ ಮೊರೆಹೊಕ್ಕಾಗ ಘಾತಿ ಕರ್ಮಗಳನಾಶವಾದಾಗ ಕೇವಲ ಜ್ಞಾನ ಪ್ರಾಪ್ತಿಯಾಯಿತು.
ಜಗದ ಸಕಲ ವಿಚಾರಗಳು ಕೇವಲeನದಲ್ಲಿ ಗೋಚರವಾಯಿತು. ಸಮವಸರಣ (ಧರ್ಮ ಸಭೆ) ವನ್ನು ಸೇರಿ ಧರ್ಮೋಪದೇಶಮಾಡಲಾರಂಭಿಸಿದರು. ಬದುಕು ಬದುಕಲು ಬಿಡು’ ಎಂಬ ಪ್ರಧಾನ ಉಪದೇಶ ಸರ್ವರ ಹೃನ್ಮನಗಳನ್ನು ತಲುಪಿತು. ನೀನು ಖಂಡಿತ ವಾಗಿಯೂ ಬದುಕಬೇಕು, ಅದು ನಿನ್ನ ಹಕ್ಕು ಕೂಡ. ನೀನು ಚೆನ್ನಾಗಿ ಬದುಕು. ಆದರೆ ನೀನು ಬದುಕುವ ಭರಾಟೆಯಲ್ಲಿ ನಿನ್ನಂತೆ ಚೆನ್ನಾಗಿಬದುಕಬೇಕೆಂದಿರುವವರ ಹಕ್ಕಿಗೆ ಸಂಚಕಾರ ತರಬೇಡ.
ಯಾಕೆಂದರೆ ಅವರಿಗೂ ನಿನ್ನಂತೆಯೇ ಬದುಕುವ ಹಕ್ಕಿದೆ. ಇತರರ ಬದುಕಿಗೆ ನೋವ ಕೊಡದೇ, ಸಾಧ್ಯವಾದರೆ ಇತರರ ಬದುಕಿಗಿರುವಹಕ್ಕಿಗೆ ಪೂರಕವಾಗಿ ನಿನ್ನ ಜೀವನವಿರಲಿ. ಹಾಗೆಯೇ ನಿನ್ನ ಜೀವನವು ಅಹಿಂಸಾಮಯವಾಗಿರಲಿ, ಹಿಂಸೆಯ ಮೂಲಕ ನಿನ್ನ ಬದುಕಿನ ಸಾರ್ಥಕ್ಯವನ್ನು ಕಾಣಬೇಡ. ಯಾಕೆಂದರೆ ನೀನು ಹಿಂಸೆಯ ಮೂಲಕ ಗಳಿಸಬಹುದಾದ ಯಶಸ್ಸು ನಿನ್ನ ಅಧಃಪತನದ ಸಂಕೇತ ವಾಗಿರುತ್ತದೆ. ಮನ ವಚನ ಕಾಯದ ಮೂಲಕವೂ ನೀನು ಹಿಂಸೆಯ ಯೋಚಿಸಬೇಡ, ಯಾಕೆಂದರೆ ಹಿಂಸೆಯ ಮೂಲಕ ನೀನು ವಿಜ್ರಂಭಿಸುವುದಾದರೆ ನೀನು ಪಾಪಗಳ ಚೀಲವನ್ನು ಭರ್ತಿ ಮಾಡಿಕೊಳ್ಳುತ್ತಿರುವಿ, ಇದರಿಂದ ನೀನು ನರಕಲೋಕದ ನಿವಾಸಿಯಾಗುವೆ.ಒಬ್ಬರ ಸಂತೋಷದ ಜೀವನ, ಸಾಮರಸ್ಯದ ಜೀವನವನ್ನು ಕಂಡರೆ ಉರಿ ಪಡಬೇಡ. ಉರಿಯ ಪಟ್ಟರೆ ನೀನೇ ಉರಿದು ಹೋಗುವೆ. ಮತ್ಸರವು ಹಾಲಾಹಲ ವಿಷವಾಗಿದ್ದು ಅದು ನಿನ್ನ ಒಡಲನ್ನು ಸುಟ್ಟು ಬೂದಿ ಮಾಡುತ್ತದೆ.
ಸಕಲ ಪ್ರಾಣಿಗಳಲ್ಲಿ ದಯೆಯ ಭಾವ ಇರಲಿ. ಲೋಕದಲ್ಲಿ ಎಲ್ಲರ ಬದುಕು ಒಂದೇ ತೆರನಾಗಿ ಇರುವುದಿಲ್ಲ. ಹಲವು ಜೀವಿಗಳು ದುಃಖ ದಲ್ಲಿರುತ್ತವೆ, ಹಲವು ಜೀವಿಗಳು ಸಂತೋಷ ದಿಂದ ಇರುತ್ತವೆ. ದುಃಖ ಪಡುತ್ತಿರುವ ಜೀವಿಗಳಲ್ಲಿ ದಯಾ ಭಾವವನ್ನು ತೋರು, ಅವುಗಳ ಬದುಕಿಗೆ ಆಸರೆಯಾಗು ಅಥವಾ ನೆರಳಾಗು. ನಿನ್ನ ದಯಾ ಭಾವದ ನಿಮಿತ್ತದಿಂದ ದುಃಖ ಪಡುತ್ತಿರುವ ಪ್ರಾಣಿ ಸಂತೋಷವನ್ನು ಪಡೆಯಬಹುದು. ಸಕಲ ಚರಾಚರ ಜೀವಿಗಳ ಒಳಿತನ್ನು ಪ್ರತಿಯೊಬ್ಬರು ಬಯಸಬೇಕು ಹಾಗೂ ಅದರಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕುರಾಗ ದ್ವೇಷಗಳು ಮನಸ್ಸಿನ ವಿಕಾರಿ ಭಾವಗಳಾಗಿವೆ.
ಪ್ರೀತಿ-  ಪ್ರೇಮ ನಿನ್ನಾತ್ಮನ ಗುಣವಾಗಿದೆ. ಸಹಜ ಗುಣದ ವಿರುದ್ಧವಾಗಿ ಮಗದೊಂದು ಜೀವಿಯ ಮೇಲೆ ದ್ವೇಷವನ್ನು ಸಾಧಿಸುವುದು ನಿನ್ನ ಮನೋವಿಕಾರದ ಸೂಚಕವಾಗಿದೆ. ದ್ವೇಷವೆಂಬ ವಿಷ ಮನಸ್ಸು ಮನಸ್ಸನ್ನು, ಮನುಷ್ಯ ಮನುಷ್ಯನನ್ನು, ಪಟ್ಟಣಕ್ಕೆ ಪಟ್ಟಣವನ್ನು,ರಾಜ್ಯ ರಾಜ್ಯವನ್ನು, ದೇಶ ದೇಶವನ್ನು ಸುಟ್ಟು ಹಾಕುತ್ತದೆ. ಮಾನವೀಯತೆಯ ಸೆಲೆಯನ್ನು ಬರಿದಾಗಿಸಿ , ಭಾವನೆಗಳನ್ನು ಸುಟ್ಟು ಹಾಕಿ ಜಗದ ತುಂಬಾ ಅಂಧಕಾರ ಕವಿಯುವಂತೆ ಮಾಡುವ ದ್ವೇಷ ಭಾವನೆಯನ್ನು ತೊರೆದು ಜಗದಗಲ ಪ್ರೀತಿಯ ಸೆಲೆ ಒಸರುವಲ್ಲಿ ನೀನು ನಿಮಿತ್ತನಾಗು , ಕಾರಣನಾಗು. ಭಗವಾನ್ ಮಹಾವೀರ ವಾಣಿಯನ್ನು ಆಲಿಸಿದ ಭವ್ಯ ಜನತೆ ಆನಂದ ತುಂದಿಲರಾದರು. ಸತ್ಪಥದ ದಾರಿಯಲ್ಲಿ ಮುನ್ನಡೆದು ಬದುಕ ಕಟ್ಟಲು ಆ ದಿಸೆಯತ್ತ ಹಲವರು ಸಾಗಿದರು. ಅಹಿಂಸೆಯೇ ಪರಮ ಧರ್ಮ ಎಂದರಿತರು. ಅಹಿಂಸೆಯ ಉದ್ಯಾನವನದಲ್ಲಿ ಅಡ್ಡಾಡಿ ದಯಾಮಯಿಗಳಾದರು.
ಅತೀ ಪರಿಗ್ರಹ ಸಂಪತ್ತುಗಳತ್ತ ಮನ ಸೋಲದೇ ಅಪರಿಗ್ರಹಿಳಾದರು. ದಾನ, ಧರ್ಮ, ಕರುಣೆಗಳ ತೋಟವನ್ನು ನಿರ್ಮಿಸಿ ಅದರಿಂದಾದ ಸಂತೋಷವೆಂಬ ಫಸಲನ್ನು ಸವಿಯುತ್ತಾ ಸಂಭ್ರಮ ಪಟ್ಟರು. ಬದುಕು ಬದುಕಲು ಬಿಡುಎಂಬುದನ್ನು ಕರಗತ ಮಾಡಿಕೊಂಡು ಪಾಪದಿಂಚ ವಂಚಿತರಾಗಿ ಮಹಾವೀರನಾಗುವತ್ತ ಹೆಜ್ಜೆ ಹಾಕಿದರು.