ಅಭಿಜಾತ ಕಲಾವಿದ ಶಂಕರ ಭಟ್
ವ್ಯಕ್ತಿ ಚಿತ್ರಣ
ಬ.ಲ.ಸುರೇಶ
ಇಂಥ ಶ್ರೇಷ್ಠ ಕಲಾವಿದರನ್ನು ಗುರುತಿಸಿ, ಇವರ ಜೀವಮಾನ ಸಾಧನೆಗಾಗಿ ‘ರಾಷ್ಟ್ರೀಯ ಕಲಾ ವಿಭೂಷಣ ರಾಷ್ಟ್ರ ಪ್ರಶಸ್ತಿ’ ನೀಡುತ್ತಿರುವುದು ಪ್ರಶಸ್ತಿಗೆ ಸಂದ ಗರಿಯಾಗಿದೆ. ಆದರೂ ಇವರ ಕಲಾವಂತಿಕೆಯನ್ನು ನಮ್ಮ ಚಿತ್ರರಂಗ ಇನ್ನೂ ಸಂಪೂರ್ಣ ವಾಗಿ ಬಳಸಿಕೊಂಡಿಲ್ಲ.
ಕಲೆ ಯಾರನ್ನು ಯಾವಾಗ ಎಲ್ಲಿಂದ ಹೇಗೆ ಕೈಬೀಸಿ ಕರೆಯುತ್ತದೆ ಎಂಬುದು ಅನೂಹ್ಯ. ಪ್ರತಿಯೊಬ್ಬರಲ್ಲೂ ಒಬ್ಬ ಕಲಾವಿದವ್ಯಕ್ತ ಅವ್ಯಕ್ತ ಆಗಿರುತ್ತಾನೆ. ಅದಕ್ಕೆ ಪೂರಕ ವಾತಾವರಣ ಅವಕಾಶ ಸಿಕ್ಕಾಗ ಕಲಾಕುಡಿ ಹೆಮ್ಮರವಾಗಿ ಬೆಳೆಯುತ್ತದೆ. ಇದಕ್ಕೆ ಪ್ರತಿಭೆ ಪ್ರಯತ್ನದೊಂದಿಗೆ ಅದೃಷ್ಟವೂ ಬೇಕು. ಶ್ರೀ ಶಂಕರಭಟ್‌ರವರು ಮಲೆ ನಾಡಿನ ಅಭಿಜಾತ ಕಲಾವಿದ ಎಂದರೆ ಅತ್ಯುಕ್ತಿಯಲ್ಲ.
ಕಳೆದ 50 ವರ್ಷಗಳಿಂದ ನಾಟಕ, ಸಿನೆಮಾ, ಕಿರುತೆರೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, ಕಲಾರಸಿಕರ ಮನದಲ್ಲಿ ಒಂದು ಶಾಶ್ವತ ಸ್ಥಾನವನ್ನು ಗಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಪುಟ್ಟಗ್ರಾಮ ಕಲಗಾರು ಇವರ ಹುಟ್ಟೂರು. ತಂದೆ ಶ್ರೀ ಮಹಾಬಲೇಶ್ವರ ಭಟ್ಟರು. ತಾಯಿ ಶ್ರೀಮತಿ ಸಾವಿತ್ರಮ್ಮ.
ಮೂವರು ಸಹೋದರಿಯರು ಒಬ್ಬ ತಮ್ಮ. ಭಟ್ಟರು ಕೃಷಿ ಕುಟುಂಬದ ತುಂಬು ಸಂಸಾರ ದಲ್ಲಿ ಏರಿಳಿತವನ್ನು ಕಂಡುಂಡು ಬೆಳೆದವರು. ತಂದೆ ತಾಯಿ ನೀಡಿದ ಸಂಸ್ಕಾರ ಹಾಕಿ ಕೊಟ್ಟ ಅಡಿಪಾಯ ಗಟ್ಟಿಯಾಗಿತ್ತು. ಸಿದ್ದಾಪುರ ಬಳಿಯ ತಟ್ಟಿಕೈನ ಶ್ರೀಮತಿ ಗೀತಾಭಟ್ ಇವರ ಪತ್ನಿ.
ಬಾಳ ಸಂಗಾತಿ ಆಗಮನದ ನಂತರ ಇವರ ಬದುಕಿನ ದಿಕ್ಕು ಇನ್ನೊಂದು ಮಗ್ಗಲಿಗೆ ಹೊರಳಿತು, ಅರಳಿತು. ಇವರ ಮಗ ಅಕ್ಷತ್ ಭಟ್, ಸೊಸೆ ರಂಜಿತಾ. ಇಬ್ಬರೂ ಅಮೆರಿಕದಲ್ಲಿ ಎಂ.ಎಸ್. ಮುಗಿಸಿ ಅಲ್ಲೇ ಉತ್ತಮ ಉದ್ಯೋಗ ದಲ್ಲಿರುವರು. ಮಗಳು ಅಮೃತಾ ಭಟ್ ಹಾಗೂ ಅಳಿಯ ನಿರಂಜನ್ ಇಬ್ಬರೂ ಎಂಜಿನಿಯರ್.
ಬೆಂಗಳೂರಿನಲ್ಲಿ ವೃತ್ತಿ ನಿರತರು. ಪತ್ನಿ ಶ್ರೀಮತಿ ಗೀತಾಭಟ್‌ರವರ ಪ್ರೋತ್ಸಾಹ, ಸಹಕಾರ ಪ್ರೇರಣೆ ಶಂಕರಭಟ್‌ರ ಸಾಧನೆಯವೇಗೋತ್ಕರ್ಷ! ಕಲೆ ಅವರ ರಕ್ತದಲ್ಲಿ ಹರಿದು ಬಂದಿದ್ದಾಗಿದೆ. ಹೇಳಿ ಕೇಳಿ ಮಲೆನಾಡು. ಅಲ್ಲಿನ ಬೆಟ್ಟ ಗುಡ್ಡ, ಮರ ಗಿಡ ಬಳ್ಳಿ, ನದಿ ತೊರೆ ಝರಿ, ಜಲಪಾತ ತುಂಪುಗಾಳಿ, ಹಕ್ಕಿಗಳ ಚಿಲಿಪಿಲಿ, ನಯನ ಮನೋಹರ ಪ್ರಕೃತಿ ಸೌಂದರ್ಯ, ಹಳ್ಳಿಯ ಜನಪದ ಕಲೆ, ನಾಟಕ, ಯಕ್ಷಗಾನ, ಚಂಡೆ ನಾದ, ಬಾಲ್ಯದ ಶಾಲಾ ದಿನಗಳಲ್ಲೇ ಇವರೊಳಗಿನ ಕಲಾವಿದನನ್ನು ಜಾಗೃತಗೊಳಿಸಿತ್ತು.
ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾಭ್ಯಾಸ ತಾಳಗು ಪ್ಪದ ನಳಂದ ಶಾಲೆಯಲ್ಲಿ, ಪಿಯುಸಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ. ನಂತರ ಬಿ.ಕಾಂ. ಪದವಿ ಓದಲು ಬಂದು ಸೇರಿದ್ದು ಎಂಇಎಸ್ ಕಾಲೇಜು ಬೆಂಗಳೂರು. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು ಎಂಇಎಸ್ ಕಾಲೇಜು ಸೇರಿದ ಮೇಲೆ ಇವರೊಳಗಿನ ಕಲಾವಿದನಿಗೆ ಹೆಚ್ಚಿನ ಅವಕಾಶ ಕಲ್ಪಿತವಾಯಿತು. ಅಂದಿನ ದಿನದಲ್ಲಿ ಕಾಲೇಜ್‌ನ ಸಹ-ಪ್ರಿನ್ಸಿಪಲ್ ಆಗಿದ್ದ ಹಿರಿಯ ಸಾಹಿತಿಗಳು, ನಾಟಕಕಾರರು, ವಿಮರ್ಶಕರು ಆದ ಶ್ರೀಕಾ.ವೆಂ.ರಾಜಗೋಪಾಲ್‌ರವರ ಮಾರ್ಗದರ್ಶನದಲ್ಲಿ ರಂಗಭೂಮಿ ಪ್ರವೇಶಿಸಿದರು.
ಕಾಲೇಜು ದಿನಗಳಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟನೆಗಾಗಿ ಮೂರು ಬಾರಿ ಉಲ್ಲಾಳ್ ಶೀಲ್ಡ್ ಪಡೆದ ಪ್ರತಿಭಾವಂತರು. ಬ್ಯಾಂಕ್ ಉದ್ಯೋಗಿಯಾಗಿ ಇದ್ದುಕೊಂಡೆ ಹಿರಿತೆರೆ ಮತ್ತು ಕಿರುತೆರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.ಯುಕೊ ಬ್ಯಾಂಕ್ ನಲ್ಲಿ ೩೮ ವರ್ಷ ಸೇವೆ ಸಲ್ಲಿಸಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು. ಇಂದು ೬೫ರ ವಯೋಮಾನದಲ್ಲೂ ಭಟ್ಟರು ಯುವಕರಂತಿದ್ದಾರೆ.
ಸೋದರ ಮಾವ ದೊಂಬೆ ಶಿವರಾಮಯ್ಯನವರ ಪ್ರೇರಣೆಯಲ್ಲಿ ಶಂಕರಭಟ್ ರಂಗಭೂಮಿ ಪ್ರವೇಶ ಪಡೆದರು. ಅವರಿಂದಲೇ ಪರಿಚಿತರಾದ ಗಿರೀಶ್ ಕಾರ್ನಾಡ, ಬಿ.ವಿ.ಕಾರಂತ್, ಜಿ.ವಿ.ಅಯ್ಯರ್, ಟಿ.ಎಸ್.ನಾಗಾಭರಣ, ಆರ್.ನಾಗೇಶ್. ಟಿ.ಎನ್.ಸೀತಾರಾಮ. ಡಾ. ದೊಡ್ಡರಂಗೇಗೌಡರು, ಶ್ರೀನಿವಾಸಪ್ರಭು, ಶ್ರೀನಿವಾಸಮೂರ್ತಿ, ಲೋಕ ನಾಥ, ಅನಂತನಾಗ್, ಶಂಕರನಾಗ್, ರಮೇಶ ಭಟ್, ಸುನೀಲ್ ಪುರಾಣಿಕ್, ಸುಂದರ್ ರಾಜ್ ಮುಂತಾದವರೊಂದಿಗೆ ನಾಟಕದಲ್ಲಿ ಅಭಿನಯಿಸಿದ್ದಾರೆ.
ಕಸಪಾ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಷಿಯವರಿಂದ ಬಹು ಉಪಕೃತರಾಗಿದ್ದಾರೆ. ಆಕಾಶವಾಣಿ ನಾಟಕಗಳು ಹಾಗೂ ಹಲವಾರು ಗೀತಚಿತ್ರ, ಜಾಹಿರಾತುಗಳಲ್ಲಿ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಚಿತ್ರನಟ ಅನಂತನಾಗ್‌ರವರ ಮೂಲಕ ಪರಿಚಿತರಾದ ನಿರ್ದೇಶಕ ಕೆ.ವಿ.ಜಯರಾಮ್ ಅವರು ‘ಶ್ವೇತ ಗುಲಾಬಿ’ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಚಿತ್ರರಂಗ ಪ್ರವೇಶಿಸಲು ಅನುವು ಮಾಡಿಕೊಟ್ಟರು. ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದ ಶಂಕರಭಟ್, ಯು.ಆರ್. ಅನಂತಮೂರ್ತಿ ಯವರ ಕಥೆ ಘಟಶ್ರಾದ್ಧ ಹಿಂದಿಯಲ್ಲಿ ದೀಕ್ಷಾ ಚಲನಚಿತ್ರವಾದಾಗ ನಾನಾ ಪಾಟೇಕರ್ ಎದುರು ಶಾಲಾಮಾಸ್ತರ್ ಪಾತ್ರ ನಿರ್ವಹಿಸಿ ತಾನೊಬ್ಬ ಸಮರ್ಥ ಕಲಾವಿದ ಎಂಬುದನ್ನು ನಿರೂಪಿಸಿದರು.
ಇದಕ್ಕೆ ಮೂಲ ಕಾರಣರಾದ ಸಂಕಲನಕಾರ- ನಿರ್ದೇಶಕರಾದ ಗುರುದತ್ತರನ್ನು ಭಟ್ ಕೃತಜ್ಞತೆಯಿಂದ ನೆನೆಯುತ್ತಾರೆ. ಎನ್.ಎಫ್.ಡಿ.ಸಿ. ಮತ್ತು ದೂರದರ್ಶನ ಸಹಭಾಗಿತ್ವದಲ್ಲಿ ತಯಾರಾದ ಅರುಣ್ ಕೌಲ್ ನಿರ್ದೇಶನದ ಈ ಹಿಂದಿ ಚಿತ್ರದಲ್ಲಿ ನಾನಾಪಾಟೇಕರ್, ಕೆ.ಕೆ.ರೈನಾ, ವಿಜಯ ಕಶ್ಯಪ್, ರಾಜಶ್ರಿ ಸಾವಂತ್, ಮನೋಹರ್ ಸಿಂಗ್ ಇವರ ಜೊತೆಯಲ್ಲಿ ಅಭಿನಯಿಸಿ ಸೈಎನಿಸಿಕೊಂಡರು. ದೀಕ್ಷಾ ಹಿಂದಿ ಚಿತ್ರಕ್ಕೆ 1994ನೇ ಸಾಲಿನ ಉತ್ತಮ ಹಿಂದಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಹಾಗೂ ಹಲವಾರುಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಬಂದಿವೆ.
ಜಿ.ವಿ.ಅಯ್ಯರ್ ನಿರ್ದೇಶನದ ಸ್ವರ್ಣಕಮಲ ಪ್ರಶಸ್ತಿ ಪಡೆದ ಆದಿಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ, ನಾಟ್ಯರಾಣಿ ಶಾಂತಲ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಮತ್ತು ಅವರ ನಿರ್ದೇಶನದ ಕೃಷ್ಣಾವತಾರ ಎಂಬ ಹಿಂದಿಧಾರಾವಾಹಿಯಲ್ಲೂ, ‘ಅದೃಷ್ಟದ ಹೋರಾಟ’ ಕನ್ನಡ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ. ‘ತಿರುವಳ್ಳವರ್ ಚರತಂ’ ಎಂಬ ತಮಿಳು ಧಾರಾವಾಹಿ ಕೆಲವು ಕಂತುಗಳಲ್ಲಿ ತಮ್ಮ ನಟನಾ ಚಾತುರ್ಯವನ್ನು ಮೆರೆದಿದ್ದಾರೆ.
ಉಪೇಂದ್ರ ನಿರ್ದೇಶನದ ‘ಶ್’ ಚಿತ್ರದಲ್ಲಿ ಖಳನಟನಾಗಿ ಮಿಂಚಿದ್ದು, ಉಪೇಂದ್ರ, ರಕ್ತಕಣ್ಣೀರು, ಹೆಚ್.ಟು.ಓ, ಹುಡುಗಾಟ, ಅಂತಿಮ ತೀರ್ಪು, ಬೇಟೆ, ಅಧಿಪತಿ, ಧೃವತಾರೆ, ಪರಶುರಾಮ, ಭಾಗ್ಯದ ಲಕ್ಷ್ಮೀ ಬಾರಮ್ಮ, ಶಬ್ದವೇದಿ, ತಾಳಿಕಟ್ಟೋ ಶುಭವೇಳೆ,  ಗಟ್ಟಿಮೇಳ, ಹುಬ್ಬಳ್ಳಿ, ಪಟ್ಟಣಕ್ಕೆ ಬಂದ ಪುಟ್ಟ, ರಾಣಿ ಮಹಾರಾಣಿ, ಮಾಲಾಶ್ರೀ ಮಾಮಾಶ್ರೀ, ರಶ್ಮಿ, ರಂಜಿತ, ಮತ್ಸರ,ಪ್ರೊಫೆಸರ್ ನಂದಿ, ಸವ್ಯಸಾಚಿ, ಪಾವನಗಂಗಾ, ತೆನಾಲಿರಾಮ, ಗಂಡುಗಲಿ ಕುಮಾರರಾಮ, ಮಿಲನ ಅರಿಶಿನ ಕುಂಕುಮ, ರಂಭೆ ಊರ್ವಶಿ ಮೇನಕೆ, ರಜನಿ, ವಿಷ್ಣುಸೇನೆ, ನಮ್ಮೂರ ರಾಜ, ಜನನಾಯಕ, ನಿನಗಾಗಿ, ನಿನಗೋಸ್ಕರ, ಮಹಾಕ್ಷತ್ರಿಯ, ಕತ್ತೆಗಳು ಸಾರ್ ಕತ್ತೆಗಳು, ಕೋತಿಗಳು ಸಾರ್ ಕೋತಿಗಳು, ಸೀತಾರಾಮ ಕಲ್ಯಾಣ, ಯುವರತ್ನ, ನಾಗರಿಕ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಜನಮನದಲ್ಲಿ ಉಳಿದಿದ್ದಾರೆ.
ಡಾ. ರಾಜಕುಮಾರ್, ಕಲ್ಯಾಣ್‌ಕುಮಾರ, ರಾಜೇಶ್, ಬಾಲಕೃಷ್ಣ, ಅಶ್ವತ್ ಪಂಢರಿಬಾಯಿ, ಜಯಂತಿ, ಭಾರತಿ, ಆರತಿ, ವಜ್ರಮುನಿ, ತೂಗುದೀಪದ ಶ್ರೀನಿವಾಸ, ಅನಂತನಾಗ್, ಶಂಕರನಾಗ್, ಆದಿಯಾಗಿ ಡಾ.ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಡಾ. ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್, ಗಣೇಶ್ ಹೀಗೆ ಇಂದಿನ ಹೊಸತಲೆಮಾರು ಸೇರಿದಂತೆ ಕಳೆದ ನಾಲ್ಕುತಲೆಮಾರಿನ ನಟರೊಂದಿಗೆ, ಹಾಗೂ ನಾಲ್ಕು ತಲೆಮಾರಿನ ಹಿರಿ-ಕಿರಿಯ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಶಂಕರಭಟ್ ರವರಿಗೆ ಇದೆ.
ಕಿರುತೆರೆಯಲ್ಲಿ ತೊಡಗಿಕೊಂಡು ಮುಂದೆ ‘ಸಿಹಿ ಕಹಿ’ ‘ನಮ್ಮ ನಮ್ಮಲ್ಲಿ’ ‘ಅಮ್ಮ’ ಧಾರಾವಾಹಿಗಳಲ್ಲಿ ತಮ್ಮ ನಟನೆಯ ಛಾಪು ಮೂಡಿಸಿದರು. ಆ ನಂತರ ತಿರುಗಿ ನೋಡದೆ ಹತ್ತಾರು ವಾರದ ಧಾರಾವಾಹಿಗಳಲ್ಲಿ ನಟಿಸಿದರು. ಮುಂದೆ ಶ್ರೀ ಬ.ಲ.ಸುರೇಶ್ರಚನೆ-ನಿರ್ದೇಶನದಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಗುರುರಾಘವೇಂದ್ರ ವೈಭವ’ದಲ್ಲಿ ಕೇಶವಾಚಾರ್ಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಟಿ.ಎನ್. ಸೀತಾರಾಮ್ ನಿರ್ದೇಶನದ ಮುಕ್ತ ಮುಕ್ತ, ಅರುಂಧತಿ, ಪಾಪ ಪಾಂಡು, ಲಕ್ಷ್ಮೀ ಬಾರಮ್ಮ ಮುಂಜಾವು ಧಾರಾವಾಹಿ, ಹರೀಶ್ ಆಚಾರ್ಯ ನಿರ್ದೇಶನದಲ್ಲಿ ಶ್ರೀ ನಾರಾಯಣಗುರು ವಿಜಯ ದರ್ಶನದಲ್ಲಿ ನಾರಾಯಣ ಗುರು ತಂದೆ ಪಾತ್ರದಲ್ಲಿ ಮತ್ತು ಅರುಂಧತಿ ಧಾರಾವಾಹಿಯಲ್ಲಿ ಶ್ರೀಶೈಲ ದೇವಸ್ಥಾನದ ಅರ್ಚಕರ ಪಾತ್ರದಲ್ಲಿ ಅಭಿನಯಿಸಿ ದ್ದಾರೆ.
ಶ್ರೀನಿವಾಸ ಕಲ್ಯಾಣದಲ್ಲಿ ಕುಬೇರನಾಗಿ, ಆಶ್ವಿನಿ ನಕ್ಷತ್ರದಲ್ಲಿ ಆಯಿ ಗಂಡನಾಗಿ, ಲಕ್ಷ್ಮೀ ಬಾರಮ್ಮದಲ್ಲಿ ಜ್ಯೋತಿಷ್ಯಿಯಾಗಿ, ಸರಯೂ ಧಾರಾವಾಹಿಯಲ್ಲಿ ನಾಯಕಿ ತಂದೆಯಾಗಿ ಸುಮಾರು ೪೦೦ ಕಂತುಗಳಲ್ಲಿ ಅಭಿನಯ. ಹೀಗೆ ಸಾಲುಸಾಲಾಗಿ ಟಿ.ವಿ. ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಪ್ರಸ್ತುತ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು,  ಕಾದಂಬರಿ, ರಾಧಿಕಾ ಧಾರಾ ವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಇದುವರೆಗೂ ಸುಮಾರು ೫೦೦೦ ಧಾರಾವಾಹಿ ಕಂತುಗಳು, 500ಕ್ಕೂ ಹೆಚ್ಚು ಚಲನಚಿತ್ರಗಳು ಹಾಗೂ ೨೦೦ಕ್ಕೂ ಹೆಚ್ಚು ನಾಟಕ ಗಳಲ್ಲಿ ಅಭಿನಯಿಸಿರುವರು. ಚಲನಚಿತ್ರ, ರಂಗಭೂಮಿ, ಕಿರುತೆರೆಯಲ್ಲಿ 50 ವರ್ಷಗಳ ಸೇವೆ ಇವರದಾಗಿದೆ. ಇವರ ಪ್ರತಿಭೆ ಯನ್ನು ಗುರುತಿಸಿದ ಬೆಂಗಳೂರು ಮಹಾನಗರ ಪಾಲಿಕೆ ಪ್ರತಿಷ್ಟಿತ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಶ್ರೇಷ್ಠ ಅಭಿನಯಕ್ಕಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಬಸವ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಪ್ರೊ.ಮರಿದೇವರು ದತ್ತಿ ಪ್ರಶಸ್ತಿ ಹೀಗೆ ನಾನಾ ಸಂಸ್ಥೆಗಳು, ಮಠ ಮಂದಿರಗಳು, ಸೇವಾ ವಲಯಗಳು ಕೊಡಮಾಡುವ ಮೂವತ್ತಕ್ಕೂ ಹೆಚ್ಚು ಉನ್ನತ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿ ಕೊಂಡು ಬಂದಿವೆ.
ಮೃದು ಸ್ವಭಾವ, ಮಧುರ ಮಾತು, ನಗುನಗುತ್ತ ಎಲ್ಲರೊಂದಿಗೆ ಬೆರೆಯುವ ಹೊಂದಿಕೊಳ್ಳುವ ಗುಣ, ಅಭಿನಯದಲ್ಲಿ ತನ್ಮಯತೆ, ಪಾತ್ರದ ಗಾತ್ರದ ಬಗ್ಗೆ ಚಿಂತಿಸದೆ ಪರಕಾಯ ಪ್ರವೇಶ ಮಾಡಿ ಪಾತ್ರಕ್ಕೆ ನ್ಯಾಯ ಒದಗಿಸುವ ಮನ, ವೃತ್ತಿ ಮತ್ತು ಪ್ರವೃತ್ತಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಕ್ರಮ, ಶ್ರಮ ಲೆಕ್ಕಿಸದೇ ತೊಡಗಿಕೊಳ್ಳುವಿಕೆ ಈ ಎಲ್ಲಾ ಗುಣಗಳೂ ಶಂಕರಭಟ್‌ ರವರಿಗೆ ಕನ್ನಡ ರಂಗಭೂಮಿ, ಚಿತ್ರರಂಗ, ಕಿರುತೆರೆಯಲ್ಲಿ ಗೌರವಾನ್ವಿತ ಸ್ಥಾನ ತಂದುಕೊಟ್ಟಿದೆ ಎಂದರೆ ತಪ್ಪಿಲ್ಲ.
ಹಲವು ಆಯಾಮಗಳಲ್ಲಿ ಇವರೊಬ್ಬ ಅದ್ಭುತ ಕಲಾವಿದರು. ಇಂಥ ಶ್ರೇಷ್ಠ ಕಲಾವಿದರನ್ನು ಗುರುತಿಸಿ, ಇವರ ಜೀವಮಾನಸಾಧನೆಗಾಗಿ ‘ರಾಷ್ಟ್ರೀಯ ಕಲಾ ವಿಭೂಷಣ ರಾಷ್ಟ್ರಪ್ರಶಸ್ತಿ’ ನೀಡುತ್ತಿರುವುದು ಪ್ರಶಸ್ತಿಗೆ ಸಂದ ಗರಿಯಾಗಿದೆ. ಕೊನೆಯ ಮಾತು! ಇವರ ಕಲಾವಂತಿಕೆಯನ್ನು ನಮ್ಮ ಚಿತ್ರರಂಗ ಇನ್ನೂ ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಈ ಕೊರಗು ಅವರಿಗೂ ಇದೆ,ನಮಗೂ ಇದೆ. ಶಂಕರಭಟ್‌ರವರು ಮುಂದಿನ ದಿನಗಳಲ್ಲಿ ವಿಶೇಷ ವಿಶಿಷ್ಟ , ಸಶಕ್ತ ಪಾತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟ ದಲ್ಲಿ ಇನ್ನಷ್ಟು ಮಿಂಚಲಿ ಎಂಬುದು ಎಲ್ಲರ ಆಶಯ.
ಲೇಖಕರು, ಸಾಹಿತಿ-ನಿರ್ದೇಶಕರು