ಸ್ಪಷ್ಟತೆ ಮತ್ತು ಬದ್ಧತೆ: ಮೋದಿಯವರ ಛಾಪು
ಅಭಿವ್ಯಕ್ತಿ
ಶಶಿಶೇಖರ
ದೇಶದ ಪ್ರಧಾನ ಸೇವಕನ ಮುಂದೆ ನಿಸ್ಸಂದೇಹವಾಗಿ ಸವಾಲುಗಳ ಬೆಟ್ಟವೇ ಇದೆ. ಅದರ ಅರಿವು ಅವರಿಗೆ ಚೆನ್ನಾಗಿಯೇ ಇದೆ. ಹಾಗಾಗಿಯೇ ಅವರು ತಮ್ಮ ಘೋಷವಾಕ್ಯ ಸಬ್ಕಾ ಸಾಥ್- ಸಬ್ಕಾ ವಿಕಾಸ್ ಜತೆಗೆ ಸಬ್ಕಾ ವಿಶ್ವಾಸ್ ಎಂಬ ನುಡಿಗಟ್ಟನ್ನೂ ಸೇರಿಸಿಕೊಂಡಿದ್ದಾರೆ.
ನಾನು ಅವರನ್ನು ಮೊದಲ ಬಾರಿಗೆ ಸನಿಹದಿಂದ ಕಂಡಿದ್ದು ಜನವರಿ ೨೪, ೧೯೯೨ರಂದು. ಆಗ ಅವರು ಜಮ್ಮುವಿನಲ್ಲಿ ಪತ್ರಕರ್ತರೊಂದಿಗೆ ಸಂವಹನದಲ್ಲಿ ತೊಡಗಿದ್ದರು. ಅವರ ಮಾತುಗಳಲ್ಲಿದ್ದ ನಿಖರತೆ ನನ್ನನ್ನು ಪ್ರಭಾವಿಸಿತು. ಆಡುವ ಶಬ್ದಗಳನ್ನು ಆಯ್ಕೆ ಮಾಡುವ ರೀತಿ ಮತ್ತು ಅದರಲ್ಲಿದ್ದ ಬದ್ಧತೆ ಕೂಡ ಇಷ್ಟವಾಯಿತು. ಆ ಕಾಲದಲ್ಲಿ ಅವರು ಭಾರತೀಯ ಜನತಾ ಪಕ್ಷದ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗಲೇ ಅವರ ಮಾತುಗಳಲ್ಲಿ ತೂಕವಿತ್ತು. ನಾನು ಮಾತನಾಡುತ್ತಿರುವುದು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಬಗ್ಗೆ.
೧೯೯೨ರಲ್ಲಿ ಅವರು ಮೂಡಿಸಿದ ಛಾಪನ್ನು ನಾನಿಂದಿಗೂ ಮರೆತಿಲ್ಲ. ಅವರು ಸಾರ್ವಜನಿಕ ಜೀವನದಲ್ಲಿ ಚರ್ಚಿತರಾಗಿದ್ದು, ಜನರಿಂದ ಗುರುತಿಸಲ್ಪಟ್ಟಿದ್ದು ಬಹುತೇಕ ಹತ್ತು ವರ್ಷಗಳ ನಂತರದಲ್ಲಿ. ಗುಜರಾತಿನಲ್ಲಿ ಕೇಶು ಭಾಯಿ ಪಟೇಲರ ನಂತರ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಹೈಕಮಾಂಡ್ ಪರಿಗಣಿಸಿತ್ತು. ಜನವರಿ ೨೬, ೨೦೦೧ರಲ್ಲಿ ಗುಜರಾತಿನಲ್ಲಿ ಸಂಭವಿಸಿದ ಭೂಕಂಪದ ಕಾರಣದಿಂದಾಗಿ ಕೇಶುಭಾಯಿ ಪಟೇಲ್ ಸರಕಾರವೂ ಅಲುಗಾಡಿತ್ತು. ಅಂತಹ ವಿಷಮ ಕಾಲಘಟ್ಟದಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯುವುದಿದೆಯಲ್ಲ, ಅದು ಬಹುದೊಡ್ಡ ಸವಾಲು.
ನಂತರದ ವರ್ಷದಲ್ಲಿ ಮುಖ್ಯಮಂತ್ರಿ ಮೋದಿಯವರು ದೆಹಲಿಯಲ್ಲಿ ಒಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಗುಜರಾತಿನ ಭುಜ್ ಮತ್ತು ಸುತ್ತಲ ಪ್ರದೇಶಗಳು ಭೂಕಂಪನದಿಂದ ಹೇಗೆ ನಾಶವಾಗಿವೆ ಮತ್ತು ಅಲ್ಲಿ ಪರಿಸ್ಥಿತಿಯನ್ನು ಹದಕ್ಕೆ ತರಲು ಏನೇನು ಮಾಡಲಾಗಿದೆ ಎಂಬುದನ್ನು ವಿವರಿಸುತ್ತಿದ್ದರು. ಈಗ ನೀವು ರಣ್ ಮತ್ತು ಕಛ್ ತ್ಯದಲ್ಲಿ ಓಡಾಡಿದರೆ ಭೂಕಂಪದ ಕುರುಹೂ ಕಾಣುವುದಿಲ್ಲ. ಅಲ್ಲ ಅತ್ಯುತ್ತಮ ರಸ್ತೆಗಳು, ವಿದ್ಯುದೀಕರಣಗೊಂಡ ಹಳ್ಳಿಗಳು, ಕುಡಿಯುವ ನೀರು ಮತ್ತು ವೈದ್ಯಕೀಯ ಸೌಲಭ್ಯವಿರುವ ಪ್ರದೇಶಗಳನ್ನೇ ಕಾಣುತ್ತೀರಿ.
ಇದು ಸಣ್ಣ ಸಂಗತಿಯಲ್ಲ. ಅಂದು ಮೋದಿಯವರು ಈ ಸವಾಲನ್ನು ಕೈಗೆತ್ತಿಕೊಳ್ಳದೇ ಇದ್ದರೆ ಅವರು ಪ್ರಧಾನಮಂತ್ರಿಯಾಗುತ್ತಿರಲಿಲ್ಲ. ೨೦೦೨ರಲ್ಲಿ ಗುಜರಾತಿ ನಲ್ಲಿ ಭೀಕರವಾದ ಜಾತಿ ಸಂಘರ್ಷ ನಡೆದಿತ್ತು. ಅಂದಿನ ಪ್ರಧಾನಮಂತ್ರಿ ವಾಜಪೇಯಿಯವರು, ರಾಜಧರ್ಮ ಪಾಲನೆ ಮಾಡಿ ಎಂದು ಮೋದಿ ಯವರಿಗೆ ಉಪದೇಶಿಸಿದ್ದರು. ಅಹಮದಾಬಾದಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ಸ್ವಾಮಿ, ಅದನ್ನೇ ನಾನು ಮಾಡುತ್ತಿದ್ದೇನೆ ಎಂದು ಉತ್ತರಿಸಿ ದ್ದರು. ಅಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದು ಮೋದಿಯವರ ಇಂಗಿತವಾಗಿತ್ತು. ಅವರು ಮುಖ್ಯಮಂತ್ರಿಯಾಗಿದ್ದ ಹನ್ನೆರಡು ವರ್ಷಗಳ ಅವಧಿಯಲ್ಲಿ ಗುಜರಾತಿನಲ್ಲಿ ಮತ್ತೆ ಕೋಮು ಸಂಘರ್ಷ ನಡೆಯಲೇ ಇಲ್ಲ. ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿರುವ ವ್ಯಕ್ತಿ ನಿಷ್ಪಕ್ಷಪಾತ ಧೋರಣೆಯವ ರಾಗಿದ್ದರೆ ಮತ್ತು ತಾನು ಯಾವುದೇ ಕೋಮಿಗೆ ಸೀಮಿತನಾದವನು ಎಂಬ ಭಾವನೆ ಇಲ್ಲದಿದ್ದರೆ ಮಾತ್ರ ಇದೆಲ್ಲವೂ ಸಾಧ್ಯ.
ಇಷ್ಟೇ ಅಲ್ಲ ಮೋದಿಯವರು ವಿರಾಮವಿಲ್ಲದೇ ಕೆಲಸ ಮಾಡುತ್ತಲೇ ಒಂದು ಸುಖೀರಾಜ್ಯವನ್ನು ಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರಲ್ಲದೇ ಯಾವುದೇ ಭೇದಭಾವವಿಲ್ಲದೇ ಸಮಾಜದ ಎಲ್ಲ ವರ್ಗಗಳಿಗೂ ಸರಕಾರದ ಸವಲತ್ತುಗಳು ಸಿಗುವಂತೆ ನೋಡಿಕೊಂಡರು. ಇದೆಲ್ಲವೂ ಹೇಗೆ ಸಾಧ್ಯವಾಯಿತು? ಅದೊಂದು ದಿನ ಅವರು ಗುಜರಾತಿನ ಮುಖ್ಯ ಕಾರ್ಯದರ್ಶಿಯವರಲ್ಲಿ ಒಂದು ಪ್ರಶ್ನೆ ಕೇಳಿದರು- ನೀವು ಯಾವ ತಾಲೂಕಿನಿಂದ ಬಂದಿದ್ದೀರಿ? ಅದಕ್ಕೆ ಪ್ರತಿಯಾಗಿ ಮುಖ್ಯ ಕಾರ್ಯದರ್ಶಿಯಿಂದ ಉತ್ತರ ಬಂದಾಕ್ಷಣ ನಿಮ್ಮ ತಾಲೂಕಿನ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ನೀವು ಚಿಂತನೆ ಮಾಡಿದ್ದೀರಾ? ನೀವು ದೊಡ್ಡ ಹುದ್ದೆಗೆ ಬಂದಿದ್ದೀರಿ ಆದರೆ ನಿಮ್ಮ ತಾಲೂಕಿನ ಸ್ಥಿತಿ ಇನ್ನೂ ಹಾಗೆಯೇ ಇದೆ, ಅಲ್ಲವೇ? ನಿಮ್ಮ ತಾಲೂಕನ್ನು ಅಭಿವೃದ್ಧಿ ಪಡಿಸುವ ಹೊಣೆಯನ್ನು ನೀವ್ಯಾಕೆ ಹೊರಬಾರದು ಎಂದು ಪ್ರಶ್ನಿಸಿದರು.
ಮುಖ್ಯ ಕಾರ್ಯದರ್ಶಿಗಳಲ್ಲಿದ್ದ ಆಸಕ್ತಿಯನ್ನು ಗಮನಿಸಿದ ಮೋದಿ ಎಲ್ಲ ಇಲಾಖಾ ಕಾರ್ಯದರ್ಶಿಗಳನ್ನು ಕರೆದು ಇದೇ ಪ್ರಶ್ನೆ ಹಾಕಿದರು. ಪ್ರತಿಯೊಬ್ಬ ಕಾರ್ಯ ದರ್ಶಿಗೂ ಅವರವರ ತಾಲೂಕು ಅಭಿವೃದ್ಧಿಯ ನೇರ ಹೊಣೆಯನ್ನು ವಹಿಸಲಾಯಿತು. ಯುವ ಅಧಿಕಾರಿಗಳಲ್ಲಿ ಅವರು ವಿಶ್ವಾಸ ಮತ್ತು ಧೈರ್ಯವನ್ನು ತುಂಬುವ ಕೆಲಸವನ್ನು ಮಾಡಿದರು. ಪ್ರತಿಯೊಬ್ಬರಿಗೂ ಒಂದೊಂದು ತಾಲೂಕಿನ ಅಭಿವೃದ್ಧಿ ಹೊಣೆ ವಹಿಸಲಾಯಿತು. ಎಲ್ಲಿ ಅನಾನುಕೂಲಗಳಿವೆಯೋ ಅಲ್ಲಿ ಮೊದಲು ಗಮನ ಹರಿಸಿ ಎಂಬ ಸೂಚನೆಯನ್ನೂ ಕೊಡಲಾಯಿತು.
ಬಡವರಲ್ಲಿ ಬಡವರಿಗೆ ನೆರವಾಗುವ ಈ ಅಂತ್ಯೋದಯ ಎಂಬ ಯೋಜನೆ ಅದೆಷ್ಟು ಜನಪ್ರಿಯವಾಯಿತೆಂದರೆ, ಅದನ್ನೀಗ ಅವರು ದೇಶವ್ಯಾಪಿ ವಿಸ್ತರಿಸಲು ಹೊರಟಿದ್ದಾರೆ. ಇಂದಿರಾ ಗಾಂಧಿಯವರಿಂದ ನರೇಂದ್ರ ಮೋದಿಯವರ ತನಕ ಅನೇಕ ಪ್ರಧಾನ ಮಂತ್ರಿಗಳ ಮಾತುಗಳನ್ನು ಪತ್ರಕರ್ತ ನಾಗಿ ಕೇಳುವ ಮತ್ತು ದಾಖಲಿಸುವ ಅವಕಾಶ ನನ್ನ ಸುದೀರ್ಘ ವೃತ್ತಿಜೀವನದಲ್ಲಿ ಒದಗಿ ಬಂತು. ಅವರೆಲ್ಲರೂ ತಮ್ಮದೇ ಆದ ವಿಧಾನದಲ್ಲಿ ದೇಶದ ಅಭ್ಯುದಯಕ್ಕೆ ಕೊಡುಗೆ ಕೊಟ್ಟಿದ್ದಾರೆ. ಆದರೆ ಮೋದಿಯವರಲ್ಲಿರುವ ಸ್ಪಷ್ಟತೆ ಮತ್ತು ಬದ್ಧತೆಯನ್ನು ನಾನು ಹಿಂದೆಂದೂ ನೋಡಿರಲಿಲ್ಲ ಎಂದು ಧೈರ್ಯವಾಗಿ ಹೇಳಬ. ಅವರು ಬಡ ಕುಟುಂಬದ ಹುಟ್ಟಿ ಬಂದವರು, ಬಡತನದ ನೋವಿನ ಅರಿವು ಅವರಿಗೆ ಚೆನ್ನಾಗಿದೆ.
ಉತ್ತಮ ಉದ್ದೇಶವಿದ್ದರೂ ಹೇಗೆ ಸರಕಾರಿ ಪ್ರಾಯೋಜನೆಗಳು ವಿಫಲವಾಗುತ್ತವೆ ಎಂಬುದನ್ನು ಅವರು ಆರ್.ಎಸ್.ಎಸ್ ಸಂಘಟನೆಯ ಪ್ರಚಾರಕರಾಗಿ ದೇಶ ವ್ಯಾಪಿ ತಿರುಗಾಟ ಮಾಡುತ್ತಿದ್ದಾಗಲೇ ಗಮನಿಸಿದ್ದಾರೆ. ಅವರಿಗಿಂತ ಹಿಂದಿನವರು ದೃಢ ತೀರ್ಮಾನಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರು. ಆದರೆ ಎಲ್ಲ ಹಿಂಜರಿಕೆಗಳನ್ನು ಹಿಮ್ಮೆಟ್ಟಿಸಿ ಅವರು ತೀರ್ಮಾನಗಳನ್ನು ತೆಗೆದುಕೊಳ್ಳುತ್ತ ಮುನ್ನಡೆದರು. ಸರ್ಜಿಕಲ್ ಸ್ಟ್ರೈಕ್, ಆರ್ಟಿಕಲ್ ೩೭೦ ರದ್ದತಿ, ತ್ರಿವಳಿ ತಲಾಖ್ ರದ್ದತಿ, ಮತ್ತು ನಾಗರಿಕ ತಿದ್ದುಪಡಿ ಕಾಯಿದೆ ಜಾರಿ, ಹೀಗೆ ಹೇಳುತ್ತ ಹೋದರೆ ಅವರ ದೃಢ ತೀರ್ಮಾನದ ಕುರುಹುಗಳು ಸಾಕಷ್ಟಿವೆ.
ಈ ತಿಂಗಳು ಅವರು ತಮ್ಮ ಪ್ರಧಾನಮಂತ್ರಿ ಹುದ್ದೆಯ ಎಂಟನೇ ವರ್ಷವನ್ನು ಪೂರೈಸುತ್ತಿದ್ದಾರೆ. ಇತ್ತೀಚಿನ ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಅವಲೋಕಿಸಿದಾಗ ಅವರಿಗೆ ರಾಜಕೀಯವಾಗಿ ಗಮನಾರ್ಹ ಸವಾಲುಗಳಿಲ್ಲ ಎಂಬುದು ಅರಿವಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳಿಗೆ ಬಂದಾಗ, ನಿಸ್ಸಂದೇಹವಾಗಿ ಪ್ರಧಾನಮಂತ್ರಿಗಳ ಮುಂದೆ ಸವಾಲುಗಳಿವೆ. ಇತ್ತೀಚಿನ ದಿನಗಳಲ್ಲಿ ನಾವು ಭಾಷೆ ಮತ್ತು ಧರ್ಮದ ಕುರಿತಾಗಿಹಲವಾರು ವಿಭಿನ್ನ, ವಿಭಜಕ ಧ್ವನಿಗಳನ್ನು ಕೇಳಿದ್ದೇವೆ.
ಉಕ್ರೇನಿನ ಯುದ್ಧ ಮತ್ತು ಕೋವಿಡ್-೧೯ ಸಾಂಕ್ರಾಮಿಕದ ಕಾರಣದಿಂದ ಹಲವಾರು ಸಮಸ್ಯೆಗಳು ಉದ್ಭವವಾಗಿವೆ. ಈ ವರ್ಷಾಂತ್ಯದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಎಲ್ಲರ ಕಣ್ಣುಗಳೂ ನರೇಂದ್ರ ಮೋದಿಯವರತ್ತ ನೆಟ್ಟಿವೆ. ಅವರೇ ಕರೆದುಕೊಂಡಂತೆ, ದೇಶದ ಪ್ರಧಾನ ಸೇವಕನ ಮುಂದೆ ನಿಸ್ಸಂದೇಹವಾಗಿ ಸವಾಲುಗಳ ಬೆಟ್ಟವೇ ಇದೆ. ಅದರ ಅರಿವು ಅವರಿಗೆ ಚೆನ್ನಾಗಿಯೇ ಇದೆ. ಹಾಗಾಗಿಯೇ ಅವರು ತಮ್ಮ ಘೋಷವಾಕ್ಯ ಸಬ್ಕಾ ಸಾಥ್- ಸಬ್ಕಾ ವಿಕಾಸ್ ಜತೆಗೆ ಸಬ್ಕಾ ವಿಶ್ವಾಸ್ ಎಂಬ ನುಡಿಗಟ್ಟನ್ನೂ ಸೇರಿಸಿಕೊಂಡಿದ್ದಾರೆ. ತಮ್ಮ ಗುರಿಸಾಧನೆಯನ್ನು ಸಫಲಗೊಳಿಸು ವಲ್ಲಿ ಅವರು ಹೇಗೆ ಮುನ್ನಡೆಯುತ್ತಾರೆಂಬುದನ್ನು ಗಮನಿಸುವುದೇ ಒಂದು ರೋಚಕ ಸಂಗತಿ.