ಅರೆಗುರುಡುತನ ತಪ್ಪಿಸುವ ಕನ್ನಡಕ
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಇಬ್ನ್ ಅಲ್-ಹೇತಮ್ ೧೦೨೧ರಲ್ಲಿ ಬುಕ್ ಆಫ್ ಆಪ್ಟಿಕ್ಸ್ ಎನ್ನುವ ಗ್ರಂಥವನ್ನು ಬರೆದ. ಇದರಲ್ಲಿ ಎಲ್ಲ ರೀತಿಯ ಮಸೂರಗಳನ್ನುವಿವರಿಸಿದ. ಸಾಮಾನ್ಯವಾಗಿ ಕನ್ನಡಕಗಳನ್ನು ಸೆಲ್ಯುಲೋಸ್ ಅಸಿಟೇಟ್ ಪಾಲಿಮರ್ ಇಂದ ಮಾಡುವುದುಂಟು.
ನಮ್ಮ ಪೂರ್ವಜರು ತಮ್ಮ ಕಣ್ಣುಗಳ ಮೂಲಕ ದೂರದ ವಸ್ತುಗಳನ್ನು ನೋಡುತ್ತಿದ್ದರು. ಅವರಿಗೆ ತಮ್ಮ ಸುತ್ತಮುತ್ತಲಿನ ಪರಿಸರದ ತಿಳಿವಿನ ಜತೆಯಲ್ಲಿ ಹಿಂಸ್ರ ಪಶುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕಾದ ಅಗತ್ಯ ಅವರಿಗೆ ತೀವ್ರವಾಗಿತ್ತು. ಅವರುಹತ್ತಿರದಲ್ಲಿ ಇರುತ್ತಿದ್ದ ವಸ್ತುಗಳನ್ನು ನೋಡಲು ತಮ್ಮ ಕಣ್ಣುಗಳನ್ನು ಬಳಸುವುದು ಅಪರೂಪವಾಗಿತ್ತು.
ಏಕೆಂದರೆ ಅಂತಹ ಕೆಲಸಗಳನ್ನು ಅವರು ಮಾಡುತ್ತಲೇ ಇರಲಿಲ್ಲ. ಆದರೆ ನಾಗರಿಕತೆ ಬೆಳೆಯುತ್ತಿದ್ದಂತೆಯೇ ಹೊಸ ಹೊಸ ಬದಲಾವಣೆಗಳು ಕಂಡುಬಂದವು. ಬಟ್ಟೆಗಳನ್ನು ಹೊಲಿಯುವಾಗ ಸೂಜಿಯೊಳಗೆ ದಾರವನ್ನು ಪೋಣಿಸಬೇಕಾಗಿತ್ತು. ಅಕ್ಕಿ ಯಲ್ಲಿರುವ ಕಲ್ಲುಗಳನ್ನು ಆರಿಸಿ ತೆಗೆಯಬೇಕಾಗುತ್ತಿತ್ತು. ಆಗ ಅವರಿಗೆ ಸಮೀಪ ದೃಷ್ಟಿಯು ನಿಚ್ಚಳ ವಾಗಿ ಇರಬೇಕಾದ ಅಗತ್ಯವು ಎದ್ದು ಕಾಣುತ್ತಿತ್ತು. ೪೦ ವರ್ಷಗಳಾದ ಮೇಲೆ ಈ ಸಮಸ್ಯೆ ಯು ತೀವ್ರವಾಗುತ್ತಿತ್ತು.
೧೪ನೆಯ ಶತಮಾನದಲ್ಲಿ ಪುನರುತ್ಥಾನದ ಕಾರಣ ಪುಸ್ತಕಗಳ ಮುದ್ರಣವು ಸಾಮಾನ್ಯ ವಾಯಿತು. ೪೦ ವರ್ಷಗಳಾದವರಿಗೆ ಓದುವುದು, ಬರೆಯುವುದು, ಚಿತ್ರಗಳನ್ನು ಬರೆಯು ವುದು, ಬಣ್ಣವನ್ನು ಹಚ್ಚುವುದು, ಆಭರಣಗಳನ್ನು ಮಾಡುವುದು ಇತ್ಯಾದಿ ಕೆಲಸ ಗಳು ತುಂಬಾ ಕಷ್ಟವಾಗುತ್ತಿದ್ದವು. ಈಗ ಇಂತಹವರು ಕನ್ನಡಕಗಳನ್ನು ಹಾಕಿಕೊಂಡು ಈ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳುತ್ತಿರುವರು. ಕನ್ನಡಕಗಳು ಬೆಳೆದು ಬಂದ ದಾರಿಯು ರೋಚಕವಾಗಿದೆ. ಮೊದಲ ಕನ್ನಡಕವನ್ನು ಯಾರು ರೂಪಿಸಿದರು ಎನ್ನುವ ಬಗ್ಗೆ ಒಮ್ಮತವಿಲ್ಲ.
ಚೀನೀಯರು, ಭಾರತೀಯರು ಹಾಗೂ ಗ್ರೀಕರನ್ನು ಹೆಸರಿಸುವುದುಂಟು. ಆದರೆ ಸೂಕ್ತ ಪುರಾವೆಗಳು ಮಾತ್ರ ಲಭ್ಯವಾಗಿಲ್ಲ. ಬಹುಶಃ ರೋಮ್ ಸಾಮ್ರಾಜ್ಯದ ಲ್ಯೂಶಿಯಸ್ ಆನಿಯಸ್ ಸೆನೆಕ ಮೊದಲ ಬಾರಿಗೆ ಸಮೀಪ ದೃಷ್ಟಿ ದೋಷದಿಂದ ಚಡಪಡಿಸಿದ ದಾಖಲೆಯಿದೆ. ಇವನು ದಾರ್ಶನಿಕನು, ನಾಟಕಾರನು ಹಾಗೂ ಲ್ಯಾಟಿನ್ ಸಾಹಿತ್ಯದಲ್ಲಿ ಉದ್ಧಾಮ ಪಂಡಿತನು ಆಗಿದ್ದ. ಇವನಿಗೆ ೪೦ ವರ್ಷಗಳಾದ ಸಮೀಪ ದೃಷ್ಟಿದೋಷದಿಂದ ಪುಸ್ತಕಗಳಲ್ಲಿರುವ ಬರಹವು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆಗ ಇವನು ಗಾಜಿನ ಗೋಳದಲ್ಲಿ ನೀರನ್ನು ತುಂಬಿ ಅದನ್ನು ಪುಸ್ತಕದ ಮೇಲೆ ಇಡುತ್ತಿದ್ದ. ಅಕ್ಷರಗಳು ಗಾತ್ರದಲ್ಲಿ ವೃದ್ಧಿಯಾಗಿ ದೊಡ್ದದಾಗಿ ಕಾಣು ತ್ತಿದ್ದವು.
ಜರ್ಮೇನಿಕಸ್ ಗ್ಲೇಡಿಯೇಟರ್ ಒಬ್ಬನು ಮಾಡುತ್ತಿದ್ದ ಯುದ್ಧವನ್ನು ಪಚ್ಚೆಕಲ್ಲಿನ ಮೂಲಕ ನೋಡುತ್ತಿದ್ದನಂತೆ. ಕ್ಲಾಡಿಯಸ್ ಟಾಲಮಿ ಗ್ರೀಸ್ ದೇಶದ ಗಣಿತಜ್ಞ, ಭೂಗೋಳ ಮತ್ತು ಖಗೋಳ ವಿಜ್ಞಾನಿಯಾಗಿದ್ದು ದೃಷ್ಟಿಗೆ ಸಂಬಂಧಿಸಿದ ಹಾಗೆ ಆಪ್ಟಿಕ್ಸ್ ಎನ್ನುವ ಗ್ರಂಥವನ್ನು ಬರೆದ. ಇವನು ಉಬ್ಬು ಮಸೂರ (ಕಾನ್ವೆಕ್ಸ್) ಮತ್ತು ತಗ್ಗು ಮಸೂರಗಳ (ಕಾನ್ಕೇವ್) ಬಗ್ಗೆ ಬರೆಯುವು ದನ್ನು ನೋಡಿದರೆ, ಬಹುಶಃ ಇವನು ಆದಿಸ್ವರೂಪದ ಕನ್ನಡಕವನ್ನು ರೂಪಿಸಿರುವ ಸಾಧ್ಯತೆಯಿದೆ. ಆದರೆ ಮೂಲ ಆಪ್ಟಿಕ್ಸ್ನಮಗೆ ದೊರೆತಿಲ್ಲ.
ಆದರೆ ಇಬ್ನ್ ಸಾಹ್ಲ್ ಪರ್ಷಿಯದ ಗಣಿತಜ್ಞ ಹಾಗೂ ಭೌತವಿಜ್ಞಾನಿಯು ಟಾಲಮಿ ಬರೆದ ಮಸೂರಗಳ ಬಗ್ಗೆ ಪ್ರಸ್ತಾಪಿಸಿ, ಅದನ್ನು ಮತ್ತಷ್ಟು ಸುಧಾರಿಸಿದುದಾಗಿ ತಿಳಿದುಬರುತ್ತದೆ. ಇಬ್ನ್ ಅಲ್-ಹೇತಮ್ ೧೦೨೧ರಲ್ಲಿ ಬುಕ್ ಆಫ್ ಆಪ್ಟಿಕ್ಸ್ ಎನ್ನುವ ಗ್ರಂಥವನ್ನು ಬರೆದ. ಇದರಲ್ಲಿ ಎಲ್ಲ ರೀತಿಯ ಮಸೂರಗಳನ್ನು ವಿವರಿಸಿದ. ರಾಬರ್ಟ್ ಗ್ರೇಟ್‌ಹೆಡ್ ೧೨೨೦-೧೨೩೫ರ ನಡುವೆ ಆನ್ ದಿ ರೈನ್ಬೋ ಎನ್ನುವ ಪುಸ್ತಕವನ್ನು ಬರೆದ. ಇದರಲ್ಲಿ ಅತ್ಯಂತ ಚಿಕ್ಕ ಚಿಕ್ಕ ಅಕ್ಷರಗಳನ್ನು ಲೀಲಾಜಾಲವಾಗಿ ಓದಲು ನೆರವಾಗುವ ಮಸೂರಗಳ ಬಗ್ಗೆ ವಿವರವನ್ನು ನೀಡಿದ.
ರೋಜರ್ ಬೇಕನ್ ಮಸೂರಗಳ ಹಿಗ್ಗಿಸಿ ತೋರಿಸುವ ಗುಣಗಳ ಬಗ್ಗೆ ಬರೆದ. ಮಾರ್ಕೋ ಪೋಲೊ ಚೀನೀಯರು ಕನ್ನಡಕಗಳನ್ನುಧರಿಸುತ್ತಿದ್ದ ಬಗ್ಗೆ ಬರೆದಿದ್ದಾನೆ ಎಂಬ ಮಾತು ಇದೆಯಾದರೂ ಅದಕ್ಕೆ ಸೂಕ್ತ ದಾಖಲೆಯು ದೊರೆತಿಲ್ಲ. ೧೯೭೧ರಲ್ಲಿ ರಿಷಿ ಅಗರ ವಾಲ್ ಎಂಬ ನೇತ್ರತಜ್ಞನು ಬ್ರಿತಿಶ್ ಜನರಲ್ ಆಫ್ ಆಫ್ತಲ್ಮಾಲಜಿಯಲ್ಲಿ ಲೇಖನವನ್ನು ಬರೆದ ಹಾಗೆ ವ್ಯಾಸತೀರ್ಥರು ೧೫೨೦ರ ಆಸುಪಾಸಿನಲ್ಲಿ ಕನ್ನಡಕವನ್ನು ಬಳಸುತ್ತಿದ್ದರು ಎಂದು ದಾಖಲಿಸಿದರೂ, ಅದನ್ನು ಪುರಸ್ಕರಿಸುವ ಇತರ ದಾಖಲೆಗಳು ದೊರೆಯ ದಾಗಿವೆ.
ಬಹುಶಃ ೧೨೯೦ರ ವೇಳೆಗೆ ಜಗತ್ತಿನ ಮೊದಲ ಯಶಸ್ವೀ ಕನ್ನಡಕವನ್ನು ಇಟಲಿ ದೇಶದ ಪೀಸಾ ನಗರದಲ್ಲಿ ನಿರ್ಮಿಸಿದರೆಂದು ಕಾಣುತ್ತದೆ. ಪೀಸಾ ನಗರವು ಕನ್ನಡಕಗಳ ತಯಾರಿಕೆಯ ಅಗ್ರಮಾನ್ಯ ಕೇಂದ್ರವಾಯಿತು. ೧೪ನೆಯ ಶತಮಾನದ ಆರಂಭದ ವೇಳೆಗೆ ದೂರದೃಷ್ಟಿ (ಹೈಪರೋಪಿಯ) ಹಾಗೂ ಚಾಳೀಸಿನ (ಪ್ರೆಸ್ಬಯೋಪಿಯ) ಅಗತ್ಯವಿರುವರಿಗೆ ಕನ್ನಡಕಗಳು ದೊರೆಯಲಾ ರಂಭಿಸಿದವು. ಆದರೆ ಸಮೀಪ ದೃಷ್ಟಿದೋಷವಿರುವವರಿಗೆ (ಮಯೋಪಿಯ) ಕನ್ನಡಕಗಳನ್ನು ಇನ್ನೂ ರೂಪಿಸಿರಲಿಲ್ಲ.
೧೫ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ, ತಗ್ಗು ಮಸೂರಗಳನ್ನು ಬಳಸಿ ಸಮೀಪ ದೃಷ್ಟಿದೋಷವನ್ನು ನಿವಾರಿಸುವ ಯಶಸ್ವೀ ಪ್ರಯತ್ನಗಳು ನಡೆದವು. ಆದರೆ ಈ ಉಬ್ಬು ಮತ್ತು ತಗ್ಗು ಮಸೂರಗಳು ದೂರದೃಷ್ಟಿ ಹಾಗೂ ಸಮೀಪದೃಷ್ಟಿಯನ್ನುಹೇಗೆ ಪರಿಹರಿಸಬಹುದು ಎನ್ನುವ ವೈಜ್ಞಾನಿಕ ವಿವರಣೆಯನ್ನು ೧೬೦೪ರಲ್ಲಿ ಜೊಹಾನಸ್ ಕೆಪ್ಲರ್ ನೀಡಿದ. ದೂರದೃಷ್ಟಿ ದೋಷ ಹಾಗೂ ಸಮೀಪ ದೃಷ್ಟಿದೋಷ ಎರಡೂ ಇರುವವರು ಎರಡು ಕನ್ನಡಕಗಳನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳು ತ್ತಿದ್ದರು.
ಸಂದರ್ಭಕ್ಕೆ ಅನುಗುಣವಾಗಿ ಕನ್ನಡಕಗಳನ್ನು ಬದಲಿಸುತ್ತಿದ್ದರು. ಈ ಅನಾನುಕೂಲತೆಯನ್ನು ತಪ್ಪಿಸಲು ಅಮೆರಿಕದ ವಿಜ್ಞಾನಿ ಬೆಂಜಮಿನ್ ಫ್ರಾಂಕ್ಲಿನ್ ದ್ವಿನಾಭಿ (ಬೈಫೋಕಲ್) ಕನ್ನಡಕವನ್ನು ರೂಪಿಸಿದ. ಆತನಿಗೆ ಎರಡೂ ರೀತಿಯ ದೃಷ್ಟಿದೋಷಗಳಿ ದ್ದವು. ೪೦ ವರ್ಷಗಳಾಗಿ ಚಾಳೀಸು ಧರಿಸುವವರಿಗೆ ಬೈಫೋಕಲ್ ಕನ್ನಡಕಗಳು ಹೆಚ್ಚು ಉಪಯುಕ್ತವಾದವು. ಗಾಜಿನ ಮೇಲಿನ ೬೦% ಭಾಗವನ್ನು ದೂರದೃಷ್ಟಿಯನ್ನು ನೀಡುವ ಭಾಗವಿದ್ದರೆ, ಕೆಳಗಿನ ೪೦% ಭಾಗದಲ್ಲಿ ಹತ್ತಿರದ ಕೆಲಸಕಾರ್ಯಗಳಿಗೆ ನಡೆಸಲು ಅಗತ್ಯವಾದ ಸಮೀಪ ದೃಷ್ಟಿಯ ಭಾಗಗಳಿರುತ್ತಿದ್ದವು.
ಅಸಮದೃಷ್ಟಿದೋಷವು (ಆಸ್ಟಿಗ್ಮಾಟಿಸಂ) ಒಂದು ಅಪರೂಪದ ದೃಷ್ಟಿ ದೋಷ. ಇವರ ಪಾರಪಟಲವು (ಕಾರ್ನಿಯ) ಹಳ್ಳ ದಿಣ್ಣೆ ಗಳಿಂದ ಕೂಡಿದ್ದು ನಿಖರ ದೃಷ್ಟಿಯು ದೊರೆಯುವುದಿಲ್ಲ. ಇಂತಹ ದೃಷ್ಟಿ ದೋಷವನ್ನು ಸರಿಪಡಿಸುವ ಕನ್ನಡಕವನ್ನು ೧೮೨೫ ರಲ್ಲಿ ಜಾರ್ಜ್ ಏರಿ ಎನ್ನುವವನು ರೂಪಿಸಿದ. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಬಳಕೆ ಅಧಿಕವಾಗಿರುವ ಕಾರಣ, ತ್ರಿನಾಭಿ (ಟ್ರೈಫೋಕಲ್) ಕನ್ನಡಕಗಳು ದೊರೆಯುತ್ತಿವೆ.
ಇವರಿಗೆ ದೂರದ ವಸ್ತುಗಳು, ಸಮೀಪದ ವಸ್ತುಗಳು ಹಾಗೂ ಕಂಪ್ಯೂಟರ್ ಪರದೆಯ ಮೇಲೆ ಮೂಡಿರುವ ಅಕ್ಷರಗಳು ಸರಿಯಗಿ ಕಾಣುವುದಿಲ್ಲ. ಹಾಗಾಗಿ ಈ ಮೂರೂ ರೀತಿಯ ದೋಷಗಳನ್ನು ಸರಿಪಡಿಸುವ ಕನ್ನಡಕಗಳು ಕಂಪ್ಯೂಟರ್ ಪರಿಣತರಲ್ಲಿ ಜನಪ್ರಿಯವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಟ್ರೈಫೋಕಲ್ಸ್ ಸಹ ಕಡಿಮೆಯಾಗಿದೆ. ಅದರ ಸ್ಥಾನವನ್ನು ಪ್ರೋಗ್ರೆಸಿವ್ ಲೆನ್ಸ್ಆಕ್ರಮಿಸಿಕೊಂಡಿದೆ. ಈ ರೀತಿಯ ಕನ್ನಡಕದಲ್ಲಿ ಗಾಜಿನ ಮೇಲ್ಭಾಗದಿಂದ ಕೆಳಭಾಗದವರಿಗೆ ದೂರದೃಷ್ಟಿ, ನಡು ದೃಷ್ಟಿ ಮತ್ತು ಸಮೀಪ ದೃಷ್ಟಿ ಎಲ್ಲವನ್ನೂ ಕ್ರಮವಾಗಿ ಸರಿಪಡಿಸುವ ಮಸೂರವನ್ನು ಅಳವಡಿಸಿರುತ್ತಾರೆ.
ವ್ಯಕ್ತಿಯು ತಾನು ಎಷ್ಟು ದೂರದಲ್ಲಿ ನೋಡಬೇಕಾಗಿದೆ ಎನ್ನುವುದನ್ನು ಅವಲಂಬಿಸಿ, ತನ್ನ ಕುತ್ತಿಗೆ ಮತ್ತು ಕಣ್ಣನ್ನು ಮೇಲೆ ಕೆಳಗೆ ಮಾಡುವುದರ ಮೂಲಕ ನಿಖರ ದೃಷ್ಟಿಯನ್ನು ಅನುಭವಿಸಬಲ್ಲ. ಆರಂಭದ ದಿನಗಳಲ್ಲಿ ಕನ್ನಡಕಗಳ ರಚನೆ ವಿಭಿನ್ನ ವಾಗಿರುತ್ತಿದ್ದವು. ಮಾನೋ-ಕಲ್ ಹೆಸರೇ ಸೂಚಿಸುವ ಹಾಗೆ ಒಕ್ಕಣ್ಣಿನ ಕನ್ನಡಕವಾಗಿತ್ತು. ಇದನ್ನು ಧರಿಸುವವರ ಒಂದುಕಣ್ಣಿನಲ್ಲಿ ಮಾತ್ರ ದೃಷ್ಟಿದೋಷವಿರುತ್ತಿತ್ತು. ಸಾಮಾನ್ಯವಾಗಿ ದೂರದ ವಸ್ತುಗಳು ಕಾಣುತ್ತಿರಲಿಲ್ಲ.
ಹಾಗಾಗಿ ಒಂದು ಗಾಜಿಗೆ ಒಂದು ಹಿಡಿಕೆಯಿರುತ್ತಿತ್ತು. ಈ ಹಿಡಿಕೆಗೆ ದಾರವನ್ನೋ ಇಲ್ಲವೇ ತೆಳ್ಳನ್ನೆಯ ಸರಪಳಿಯನ್ನು ಕಟ್ಟಿರು ತ್ತಿದ್ದರು. ಇಡೀ ಒಕ್ಕನ್ನಡಕವನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಅಗತ್ಯ ಬಿದ್ದಾಗ ಮಾತ್ರ, ಅದನ್ನು ಜೇಬಿನಿಂದ ಹೊರಕ್ಕೆ ತೆಗೆದು ಕಣ್ಣಿನ ಮುಂದೆ ಸಿಕ್ಕಿಸಿಕೊಂಡು ನೋಡುತ್ತಿದ್ದರು. ಹಾಗೆಯೇ ಎರಡೂ ಕಣ್ಣಿನಲ್ಲಿ ದೋಷವಿರುವವರು ಮೂಗಿನ ಮೇಲೆ ಕೂರಿಸಿಕೊಳ್ಳಬಹುದಾದ, ಹಿಡಿಕೆಗಳಿಲ್ಲದ ಕನ್ನಡಕಗಳನ್ನು ಧರಿಸುತ್ತಿದ್ದರು. ಅನಂತರವೇ ಇಂದು ಎಲ್ಲೆಡೆ ದೊರೆಯುವ ಸರ್ವ ಸಾಮಾನ್ಯ ಕನ್ನಡಕಗಳು ಬಳಕೆಗೆ ಬಂದವು.
ಇಂದು ಬಳಕೆಯಲ್ಲಿರುವ ಕನ್ನಡಕಕ್ಕೆ ವಿವಿಧ ಭಾಗಗಳಿವೆ. ಕನ್ನಡಕದ ಎರಡೂ ಗಾಜನ್ನು ಹಿಡಿದಿಟ್ಟಿರುವ ಭಾಗವನ್ನು ಅಂಚು ಇಲ್ಲವೇ ಚೌಕಟ್ಟು ತಂತಿ (ರಿಮ್/ಐ ವೈಸರ್) ಎನ್ನುವರು. ಈ ಎರಡೂ ಗಾಜನ್ನು ಸಂಪರ್ಕಿಸುವ ಭಾಗವೇ ಸೇತುವೆ. ರಿಮ್ ಮತ್ತು ಬ್ರಿಡ್ಜ್ ಎರಡನ್ನೂ ಸೇರಿಸಿದ ಸಮಷ್ಟಿ ರಚನೆಗೆ ಒಡಲು (ಚಾಸಿಸ್) ಎಂಬ ಹೆಸರಿದೆ. ಈ ಬ್ರಿಡ್ಜ್ ಗೆ ಹೊಂದಿಕೊಂಡ ಹಾಗೆ ಎರಡು ಮೂಗುಮೆತ್ತೆ (ನೋಸ್ ಪ್ಯಾಡ್ಸ್) ಇರುತ್ತವೆ.
ಕನ್ನಡಕವು ಮೂಗಿನ ಮೇಲೆ ಹೆಚ್ಚುವರಿ ಒತ್ತಡವನ್ನು ಹಾಕಿ ಹುಣ್ಣನ್ನು ಮಾಡದಿರಲಿ ಎಂದು ಈ ರಚನೆಯನ್ನು ಸೇರಿಸಲಾಗಿದೆ. ಹಾಗೆಯೇ ಕನ್ನಡಕಕ್ಕೆ ಕಿವಿಯ ಮೇಲೆ ಕೂರಿಸಲು ನೆರವಾಗುವ ಭಾಗ ಗಂಡಸ್ಥಳ ಚಾಚು (ಟೆಂಪಲ್ಸ್). ಇದನ್ನು ಸರಳವಾಗಿ ಚಾಚು ಎನ್ನಬಹುದು. ಸಾಮಾನ್ಯವಾಗಿ ಈ ಚಾಚುಗಳ ತುದಿಯಲ್ಲಿ ಚಾಚುರಕ್ಷಕವೆಂಬ (ಟೆಂಪಲ್ ಪೀಸ್) ಎಂಬ ಲೋಹದ ಆವರಣವು ಇರುವುದುಂಟು. ಕನ್ನಡಕವನ್ನು ಮಡಚಲು ನೆರವಾಗುವಂತಹ ಕೀಲುಗಳು ಕನ್ನಡಕದ ಒಡಲು ಮತ್ತು ಚಾಚುಗಳ ನಡುವೆ ಇರುತ್ತವೆ.
ಸಾಮಾನ್ಯವಾಗಿ ಕನ್ನಡಕಗಳನ್ನು ಸೆಲ್ಯುಲೋಸ್ ಅಸಿಟೇಟ್ ಎಂಬ ಪಾಲಿಮರ್ ಇಂದ ಮಾಡುವುದುಂಟು. ಆಪ್ಟಿಲ್ ಎಂಬ ವಸ್ತುವಿನಿಂದ ಮಾಡಿದ ಫ್ರೇಮ್‌ಗಳು ಅಷ್ಟಾಗಿ ಅಲರ್ಜಿಯನ್ನು ಉಂಟುಮಾಡುವುದಿಲ್ಲ. ಸೆಲ್ಯುಲೋಸ್ ಪ್ರೋಪಿಯೋನೆಟ್ ಮಾಡಿದ ಫ್ರೇಮ್‌ಗಳು ದೀರ್ಘಕಾಲ ಬಾಳುತ್ತವೆ. ಇತ್ತೀಚಿನ ದಿನಗಳಲ್ಲಿ ನಾನಾ ವಸ್ತುಗಳಿಂದ ತಯಾರಿಸಿದ ೩ಡಿ ಫ್ರೇಮುಗಳಜನಪ್ರಿಯವಾಗಿವೆ.
ಚಿನ್ನ, ಬೆಳ್ಳಿ, ಅಲ್ಯುಮಿನಿಯಂ, ಬೆರಿಲಿಯಂ, ಸ್ಟೇನ್‌ಲೆಸ್ ಸ್ಟೀಲ್, ಟೈಟೇನಿಯಂ ಮತ್ತು ನಿಕಲ್ ಟೈಟೇನಿಯಂ ಫ್ರೇಮುಗಳ ಲಭ್ಯ. ಇವು ಸಾಮಾನ್ಯವಾಗಿ ದುಬಾರಿಯಾಗಿರುತ್ತವೆ. ಹಿಂದಿನ ದಿನಗಳಲ್ಲಿ ಪ್ರಕೃತಿಯಲ್ಲಿ ಸಹಜವಾಗಿ ದೊರೆಯುವ ಮರ, ಮೂಳೆ, ದಂತ, ಚರ್ಮ ಹಾಗೂ ನವರತ್ನಗಳಿಂದಲೂ ಕನ್ನಡಕ -ಮುಗಳನ್ನು ಮಾಡಿದ ಉದಾಹರಣೆಗಳಿವೆ. ಆರಂಭದ ದಿನಗಳಲ್ಲಿ ಕನ್ನಡಕವನ್ನು ಕೇವಲ ದೃಷ್ಟಿದೋಷವನ್ನು ಪರಿಹರಿಸಲು ಮಾತ್ರ ಬಳಸುತ್ತಿದ್ದರು. ಈಗ ಕನ್ನಡಕಗಳನ್ನು ನಾನಾ ರೀತಿಯಲ್ಲಿ ಉಪಯೋಗಿಸುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾದದ್ದು ಸುರಕ್ಷತಾ ಕನ್ನಡಕಗಳು (ಸೇಫ್ಟಿ ಗ್ಲಾಸಸ್). ಕಾರ್ಖಾನೆಗಳಲ್ಲಿ ಗ್ರೈಂಡಿಂಗ್ ಎಂಬ ಸಾಣೆ ಹಿಡಿಯುವ ಕೆಲಸವಿರುತ್ತದೆ ಇಲ್ಲಿ ಲೋಹದ ಚೂರುಗಳು ಹಾರುತ್ತಿರುತ್ತವೆ.
ಇವು ಕಣ್ಣಿಗೆ ತಾಗಿದರೆ ದೃಷ್ಟಿ ಹೋಗುವ ಸಾಧ್ಯತೆಯಿರುತ್ತದೆ. ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರು ಸುರಕ್ಷತಾ ಕನ್ನಡಕ ಗಳನ್ನು ಧರಿಸಬೇಕಾಗುತ್ತದೆ. ವೆಲ್ಡಿಂಗ್ ಕೆಲಸವನ್ನು ಮಾಡುವವರು ಹಾಗೂ ಲೇಸರ್ ಜತೆಯಲ್ಲಿ ಕೆಲಸವನ್ನು ಮಾಡುವವರುವಿಶೇಷವಾದ ನೇತ್ರರಕ್ಷಕಗಳನ್ನು ಬಳಸಬೇಕಾಗುತ್ತದೆ. ಪರ್ವತಾರೋಹಿಗಳು, ಸೈನಿಕರು ಮುಂತಾದವರು ವಿಶೇಷವಾದ ಕಪ್ಪು ಕನ್ನಡಕಗಳನ್ನು ಧರಿಸುತ್ತಾರೆ. ಇವು ಅತಿನೇರಳೆ ಕಿರಣಗಳನ್ನು ತಡೆಗಟ್ಟುತ್ತವೆ. ಅವರು ಕನ್ನಡಕಗಳನ್ನು ಧರಿಸದಿದ್ದರೆ ಕುರುಡ ರಾಗುವ ಸಾಧ್ಯತೆಯಿರುತ್ತದೆ.
ಕಂಪ್ಯೂಟರ್ ಮಾನಿಟರ್/ಮೊಬೈಲ್ ಪರದೆಗಳ ಮೂಲಕ ಬರುವ ಬೆಳಕನ್ನು ದೀರ್ಘ ಕಾಲ ನೋಡುತ್ತಿದ್ದರೆ ತಲೆ ಮತ್ತು ಕುತ್ತಿಗೆ ನೋವಿನ ಜತೆಯಲ್ಲಿ ನಿದ್ರಾಚಕ್ರವು ಏರುಪೇರಾಗುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಹಳದಿ ಇಲ್ಲವೇ ನೀಲಿ ಲೇಪನವಿರುವ ಕನ್ನಡಕಗಳನ್ನು ಧರಿಸುವುದುಂಟು. ಹಾಗೆಯೇ ರಾತ್ರಿಯ ಹೊತ್ತಿನಲ್ಲಿ ವಾಹನಗಳ ಕಣ್ಣು ಕೋರೈಸುವ ಬೆಳಕಿನ ತೀವ್ರತೆಯನ್ನು ನಿಗ್ರಹಿಸಲು ಆಂಟಿ-ಗ್ಲೇರ್ ಕನ್ನಡಕಗಳನ್ನೂ ಧರಿಸುವ ಪದ್ಧತಿಯಿದೆ. ೩ಡಿ ಕನ್ನಡಕಗಳ ಮೂಲಕ ಮೂರು ಆಯಾಮದ ಚಲನಚಿತ್ರವನ್ನು ನೋಡಲು ಇಂದು ಸಾಧ್ಯವಾಗಿದೆ.
ಸಮೀಪ ದೃಷ್ಟಿ ದೋಷವುಳ್ಳವರು ಸ್ಪರ್ಶಮಸೂರಗಳನ್ನು (ಕಾಂಟ್ಯಾಕ್ಟ್ ಲೆನ್ಸ್) ಬಳಸಬಹುದು. ಹಾಗೆಯೇಶಸ್ತ್ರಚಿಕಿತ್ಸೆಯ ಮೂಲಕವೂ ಸಮೀಪ ದೃಷ್ಟಿ ದೋಷವನ್ನು ನಿವಾರಿಸಲು ಸಾಧ್ಯವಿದೆ. ಕಾಂಟ್ಯಾಕ್ಟ್ ಲೆನ್ಸ್ ಮತ್ತು ಸಮೀಪ ದೃಷ್ಟಿ ದೋಷ ನಿವಾರಣಾ ಶಸಚಿಕಿತ್ಸೆಯು ನಡೆದು ಬಂದ ದಾರಿಯ ಕಥೆಯು ಸಂಪೂರ್ಣವಾಗಿ ಭಿನ್ನವಾಗಿದೆ.