ನಮ್ಮಲ್ಲೂ ಇಂತಹುದೇ ಸನ್ನಿವೇಶ ಎದುರಾಗಿತ್ತು
ಸಂಗತ
ವಿಜಯ್‌ ದರಡಾ
ಸಾಲ ಮರುಪಾವತಿ ಮಾಡದೇ ಇದ್ದರೆ ಭಾರತ ದಿವಾಳಿಯಾಗುವ ಸ್ಥಿತಿ ಎದುರಾಗಿತ್ತು. ದೇಶೀಯವಾಗಿ ಹಲವಾರು ಟೀಕೆ ಟಿಪ್ಪಣಿಗಳಿ ದ್ದಾಗ್ಯೂ ಲೆಕ್ಕಿಸದೇ ಅವರು ೨೦ ಟನ್ ಚಿನ್ನವನ್ನು ಮಾರಿ ಬಾಕಿ ಪಾವತಿಗಳನ್ನು ಚುಕ್ತಾ ಮಾಡಿ ಭಾರತ ದಿವಾಳಿಯಾಗುವುದನ್ನು ತಪ್ಪಿಸಿ ದರು.
ರಾವಣನ ಆಳ್ವಿಕೆಯ ಕಾಲದಲ್ಲಿ ಶ್ರೀಲಂಕಾದಲ್ಲಿದ್ದ ಆತನ ಅರಮನೆ ಚಿನ್ನದಲ್ಲಿ ಕಟ್ಟಲಾಗಿತ್ತಂತೆ. ಆದರೆ ಇಂದು ಅದೇ ಶ್ರೀಲಂಕಾವನ್ನು  ದಿವಾಳಿತನದ ಅಪಾಯದಿಂದ ಪಾರು ಮಾಡಲು ಅಲ್ಲಿನ ಖಜಾನೆಯಲ್ಲಿ ಒಂದು ಔನ್ಸ್ ಚಿನ್ನ ಕೂಡ ಇಲ್ಲವಾಗಿದೆ. ಮೂರು ದಶಕಗಳ ಹಿಂದೆ ಭಾರತ ಕೂಡ ದಿವಾಳಿ ತನದ ಅಂಚಿಗೆ ಬಂದು ನಿಂತಿತ್ತು. ಆಗ ನಾವು ನಮ್ಮಲ್ಲಿದ್ದ ೨೦ ಟನ್ ಚಿನ್ನವನ್ನು ಮಾರಿ ಬಚಾವಾದೆವು. ನಂತರದ ದಿನಗಳಲ್ಲಿ ಆರ್ಥಿಕತೆ ತ್ವರಿತವಾಗಿ ಚಿಗುರಿಕೊಂಡ ಕಾರಣದಿಂದ ಎಲ್ಲವೂ ಸುಗಮವಾಯಿತು.
ಶ್ರೀಲಂಕಾದ ಪರಿಸ್ಥಿತಿ ಮತ್ತು ಅದಕ್ಕೆ ಕಾರಣಗಳನ್ನು ಚರ್ಚಿಸುವ ಮುನ್ನ ಕೆಲವು ವಿಚಾರಗಳನ್ನು ಪರಾಮರ್ಶೆ ಮಾಡಬೇಕಿದೆ. ೧೯೯೦ರಲ್ಲಿ ಮಧ್ಯ ಪ್ರಾಚ್ಯದಲ್ಲಿ ಯುದ್ಧ ಶುರುವಾಗಿತ್ತು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಗಗನಮುಖಿಯಾಗಿತ್ತು. ಭಾರತದ ಪೆಟ್ರೋಲಿಯಂ ಆಮದು ಪ್ರಮಾಣ ೨ ಬಿಲಿಯನ್ ಡಾಲರುಗಳಿಂದ ೫.೭ ಬಿಲಿಯನ್ ಡಾಲರ್‌ಗಳಿಗೆ ೧೯೯೦-೯೧ರಲ್ಲಿ ಜಿಗಿದಿತ್ತು. ಈ ಕಾಲಘಟ್ಟದಲ್ಲಿ ರಾಜಕೀಯ ಅಸ್ಥಿರತೆ ಕೂಡ ಚರಮಸೀಮೆಯಲ್ಲಿತ್ತು. ೧೯೮೯ರಲ್ಲಿ ರಾಜೀವ ಗಾಂಧಿಯವರು ಸಮ್ಮಿಶ್ರ ಸರಕಾರ ನಡೆಸುವ ತೀರ್ಮಾನ ದಿಂದ ಹಿಂದಕ್ಕೆ ಸರಿದಿದ್ದರು. ವಿಶ್ವನಾಥ ಪ್ರತಾಪ ಸಿಂಗರು ಪ್ರಧಾನ ಮಂತ್ರಿಗಳಾದರು. ಆದರೆ ಅವರೂ ೧೯೯೦ರಲ್ಲಿ ರಾಜೀನಾಮೆ ಕೊಡಬೇಕಾಯಿತು. ಮೇ ೧೯೯೧ರಲ್ಲಿ ರಾಜೀವ ಗಾಂಧಿಯವರ ಹತ್ಯೆಯಾಯಿತು.
ಪರಿಸ್ಥಿತಿ ಎಷ್ಟು ಕೆಟ್ಟು ಹೋಗಿತ್ತೆಂದರೆ ಅನಿವಾಸಿ ಭಾರತೀಯರು ಭಾರತದಲ್ಲಿನ ತಮ್ಮ ಹೂಡಿಕೆಗಳನ್ನು ಹಿಂಪಡೆಯತೊಡಗಿದರು. ಭಾರತದ ವಿದೇಶಿ ವಿನಿಮಯ ಧನರಾಶಿ ಒಂದು ಬಿಲಿಯನ್ ಡಾಲರ್‌ಗಿಂತ ಕೆಳಕ್ಕೆ ಕುಸಿದಿತ್ತು. ಅತ್ಯಗತ್ಯವಾದ ಆಮದಿಗೆ ಮಾತ್ರ ತೆರುವಷ್ಟು ಅದೂ ಕೂಡ ೨೦ ದಿನಗಳಿಗೆ ಬೇಕಾದಷ್ಟು ವಿದೇಶಿ ವಿನಿಮಯ ನಮ್ಮಲ್ಲುಳಿದಿತ್ತು. ಜಾಗತಿಕವಾಗಿ ವ್ಯವಹಾರ ಮಾಡುವಷ್ಟು ಹಣಕಾಸು ಅನುಕೂಲ ಇರಲೇ ಇಲ್ಲ. ಭಾರತದ ವಿದೇಶಿ ಸಾಲಗಳ ಮೊತ್ತ ೭೨ ಬಿಲಿಯನ್ ಡಾಲರ್ ಮುಟ್ಟಿತ್ತು. ಆಗ ಸಾಲದ ವಿಚಾರದಲ್ಲಿ ಭಾರತದ ಆಸುಪಾಸಿನಲ್ಲಿದ್ದ ಎರಡು ರಾಷ್ಟಗಳೆಂದರೆ ಬ್ರೆಜಿಲ್ ಮತ್ತು ಮೆಕ್ಸಿಕೋ.
ಸಾಲ ಮರುಪಾವತಿ ಮಾಡದೇ ಇದ್ದರೆ ಭಾರತ ದಿವಾಳಿಯಾಗುವ ಸ್ಥಿತಿ ಎದುರಾಗಿತ್ತು. ಆಗ ಚಂದ್ರಶೇಖರ್ ಪ್ರಧಾನಮಂತ್ರಿಗಳಾಗಿದ್ದರು. ದೇಶೀಯ ವಾಗಿ ಹಲವಾರು ಟೀಕೆ ಟಿಪ್ಪಣಿಗಳಿದ್ದಾಗ್ಯೂ ಲೆಕ್ಕಿಸದೇ ಅವರು ೨೦ ಟನ್ ಚಿನ್ನವನ್ನು ಮಾರಿ ಬಾಕಿ ಪಾವತಿಗಳನ್ನು ಚುಕ್ತಾ ಮಾಡಿ ಭಾರತ ದಿವಾಳಿಯಾಗು ವುದನ್ನು ತಪ್ಪಿಸಿದರು. ಅದೇ ವೇಳೆ ಐ.ಎಂ.ಎಫ್. ೧.೨೭ ಬಿಲಿಯನ್ ಡಾಲರ್‌ಗಳ ಸಾಲವನ್ನು ಭಾರತಕ್ಕೆ ಕೊಟ್ಟಿತು. ಆದರೆ ಪರಿಸ್ಥಿತಿಯನ್ನು ಸುಧಾರಿಸಿ ಮುನ್ನಡೆಯುವುದು ಸವಾಲಿನ ಸಂಗತಿಯಾಗಿತ್ತು. ತದನಂತರದಲ್ಲಿ ೧೯೯೧ರಲ್ಲಿ ಪಿ.ವಿ. ನರಸಿಂಹರಾವ್ ಪ್ರಧಾನ ಮಂತ್ರಿಗಳಾದರು ಮತ್ತು ಆಗ ವಿತ್ತ ಸಚಿವರಾಗಿದ್ದ ಮನಮೋಹನ ಸಿಂಗರ ಜತೆಗೂಡಿ ಭಾರತದ ಆರ್ಥಿಕತೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದರು.
ಆಮದನ್ನು ಕಡಿಮೆಗೊಳಿಸಲಾಯಿತು, ಸರಕಾರಿ ವೆಚ್ಚಗಳಿಗೆ ಕಡಿವಾಣ ಹಾಕಲಾಯಿತು. ಆಗ ಭಾರತದ ರುಪಾಯಿ ೨೦%ರಷ್ಟು ಮೌಲ್ಯ ಕಳೆದು ಕೊಂಡಿತ್ತು. ಬ್ಯಾಂಕುಗಳು ಬಡ್ಡಿದರವನ್ನು ಏರಿಸಿದ್ದವು. ಹೇಗೋ ಭಾರತ ಸಂಕಷ್ಟ ದಿಂದ ಪಾರಾಯಿತು. ರಾಜಕೀಯ ನಾಯಕತ್ವ ಮತ್ತು ಆಡಳಿತ ಯಂತ್ರ ಚುರುಕುತನವನ್ನು ತೋರಿಸದೇ ಇದ್ದಿದ್ದರೆ ನಮ್ಮ ಕಥೆಯೂ ಈಗ ಶ್ರೀಲಂಕಾಗೆ ಏನಾಗಿದೆಯೋ ಅದೇ ಆಗಿರುತ್ತಿತ್ತು. ಶ್ರೀಲಂಕಾದ ಪರಿಸ್ಥಿತಿಗೆ ರಾಜಕೀಯ ನಾಯಕತ್ವವನ್ನು ದೂಷಿಸಲಾಗುತ್ತಿದೆ. ಕಳೆದ ತಿಂಗಳ ತನಕ ಅಲ್ಲಿ ರಾಜಪಕ್ಸೆ ಕುಟುಂಬ ತನ್ನ ಪಾರಮ್ಯವನ್ನು ಮೆರೆದಿತ್ತು.
ಕಡಿವಾಣವಿಲ್ಲದ ಸ್ವಜನ ಪಕ್ಷಪಾತ ಅಲ್ಲಿತ್ತು. ಒಂದೇ ಕುಟುಂಬದ ಗೋಟಬಯ ರಾಜಪಕ್ಸೆ ರಾಷ್ಟಪತಿಯಾಗಿ, ಮಹಿಂದಾ ರಾಜಪಕ್ಸೆ ಪ್ರಧಾನಮಂತ್ರಿಯಾಗಿ, ಚಾಮಲ್ ರಾಜಪಕ್ಸೆ ನೀರಾವರಿ ಸಚಿವರಾಗಿ, ಬಾಸಿಲ್ ರಾಜಪಕ್ಸೆ ಹಣಕಾಸು ಸಚಿವರಾಗಿ, ನಾಮಲ್ ರಾಜಪಕ್ಸೆ ಕ್ರೀಡಾ ಸಚಿವರಾಗಿ ಅಧಿಕಾರ ಹಂಚಿಕೊಂಡಿದ್ದರು. ಶ್ರೀಲಂಕಾದ ಬಜೆಟ್‌ನ ೭೫%ನ್ನು ರಾಜಪಕ್ಸೆ ಕುಟುಂಬವೇ ಆಕ್ರಮಿಸಿ ಕೊಂಡಿತ್ತು. ಶ್ರೀಲಂಕಾವನ್ನು ತಮ್ಮದೇ ಖಾಸಗಿ ಕಂಪನಿ ಎಂಬಂತೆ ಈ ಮಂದಿ ಆಳ್ವಿಕೆ ನಡೆಸುತ್ತಿದ್ದರು. ರಾಜಪಕ್ಸೆ ಕುಟುಂ ಬದ ಮಕ್ಕಳು ಜಗತ್ತಿನ ಅತಿ ಸಿರಿವಂತ ತಾಣಗಳಲ್ಲಿ ಐಷಾರಾಮಿ ಕಾರುಗಳಲ್ಲಿ ವಿಹರಿಸುತ್ತಿದ್ದರು.
ದೇಶದ ಹಣ ತಮ್ಮ ಮನೆಯ ಬೊಕ್ಕಸದ ಹಣವೆಂಬಂತೆ ಅವರು ವರ್ತಿಸುತ್ತಿದ್ದರು. ತಮ್ಮ ಮೂಗಿನ ನೇರಕ್ಕೆ ಅಲ್ಲಿನ ಎಲ್ಲ ವ್ಯವಹಾರಗಳನ್ನೂ ರಾಜಪಕ್ಸೆ ಕುಟುಂಬ ನಿರ್ವಹಿಸುತ್ತ ಬಂದಿತ್ತು. ಏಕಾಏಕಿ ಕೃಷಿ ಕ್ಷೇತ್ರದಲ್ಲಿ ರಸಗೊಬ್ಬರ ಬಳಕೆ ನಿಷೇಧಿಸಲಾಯಿತು. ಆಗ ಅಲ್ಲಿ ಕೃಷಿ ಉತ್ಪಾದನೆಯಲ್ಲಿ  ದೊಡ್ಡ ಹಿನ್ನಡೆ ಕಂಡುಬಂತು. ಶ್ರೀಲಂಕಾದ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದ ಅಕ್ಕಿ ಮತ್ತು ಚಹಾ ರಫ್ತಿನ ಪ್ರಮಾಣ ಗಣನೀಯವಾಗಿ ಕುಸಿಯಿತು.
ಶ್ರೀಲಂಕಾದ ವರಮಾನದ ಶೇ. ೨೦ ಪ್ರವಾಸೋದ್ಯಮದಿಂದ ಬರುತ್ತದೆ. ಎಲ.ಟಿ.ಟಿ.ಈ. ಹಸ್ತಕ್ಷೇಪದ ಕಾರಣದಿಂದ ಉಂಟಾಗಿದ್ದ ನಾಗರಿಕ ಯುದ್ಧ ಮತ್ತು ತತ್ಸಂಬಂಧ ಏರ್ಪಟ್ಟಿದ್ದ ಆತಂಕದ ಪರಿಸ್ಥಿತಿಯಿಂದಾಗಿ ಶ್ರೀಲಂಕಾದ ಆರ್ಥಿಕತೆ ಆಗಲೇ ಡೋಲಾಯಮಾನವಾಗಿತ್ತು. ಕರೋನಾ ವೈರಸ್ ವಕ್ಕರಿಸಿ ಕೊಂಡ ಮೇಲಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಅದೇ ಕಾಲದಲ್ಲಿ ಶ್ರೀಲಂಕಾ ಎಗ್ಗುಸಿಗ್ಗಿಲ್ಲದೇ ಸಾಲಗಳನ್ನು ಮಾಡುತ್ತಾ ಮುನ್ನಡೆಯಿತು.
ಹಂಬಂಟೋಟಾ ಬಂದರಿನ ಮೇಲೆ ಚೀನಾ ಕಣ್ಣಿಟ್ಟು ಸಹಾಯ ಮಾಡುವುದಾಗಿ ತಂತ್ರಗಾರಿಕೆ ಹೆಣೆದಾಗ ಇದು ಶ್ರೀಲಂಕೆಗೆ ಬೇಡದ ಕೆಲಸ ಎಂದು ಪರಿಣಿತರು ಆಗಲೇ ಎಚ್ಚರಿಸಿದ್ದರು. ಆದರೆ ಶ್ರೀಲಂಕಾ ಅದಾಗಲೇ ಚೀನಾ ಹೆಣೆದ ಸಾಲದ ಬಲೆಯೊಳಕ್ಕೆ ಸಿಕ್ಕು ವಿಲವಿಲ ಒದ್ದಾಡುತ್ತಿತ್ತು. ಈ ರೀತಿಯ ಸಾಲದ ಒತ್ತಡ ತಂದೊಡ್ಡುವಲ್ಲಿ ಚೀನಾದ ಫೈನಾನ್ಸಿಯರ್‌ಗಳು ಹೇಗೆ ರಾಜಪಕ್ಸೆ ಕುಟುಂಬವನ್ನು ವಿಶ್ವಾಸಕ್ಕೆ ತೆಗೆದುಕೊಂಡರು ಎಂಬ ಕುರಿತಾಗಿ ಹಲವಾರು ರೋಚಕ ಕಥೆಗಳು ಹರಿದಾಡುತ್ತಿವೆ. ಆ ಕಥೆಗಳಲ್ಲಿ ಎಷ್ಟು ಹುರುಳಿದೆಯೋ ನನಗೆ ಗೊತ್ತಿಲ್ಲ.
ಆದರೆ ಅನಗತ್ಯವಾಗಿ ಶ್ರೀಲಂಕಾ ಬಿಲಿಯನ್ ಗಟ್ಟಲೆ ಸಾಲವನ್ನು ಚೀನಾದಿಂದ ಪಡೆದುಕೊಂಡಿತು. ಅದರ ಫಲ ಇಂದೇನಾಗಿದೆ? ಹಂಬಂಟೋಟಾ ಬಂದರನ್ನು ಚೀನಾ ೯೯ ವರ್ಷಗಳ ಗುತ್ತಿಗೆಗೆ ಪಡೆದು ತನ್ನ ವಸಾಹತು ಸ್ಥಾಪನೆ ಮಾಡಿದೆ. ಹೇಳಬೇಕೆಂದರೆ, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಆಡಳಿತ ನಡೆಸುವವರು ಇಡೀ ದೇಶವೇ ತಮ್ಮ ಖಾಸಗಿ ಕಂಪನಿ ಎಂಬಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರ ದುಡ್ಡಿನಲ್ಲಿ ತಮ್ಮ ನೆಲೆಯನ್ನು ಭದ್ರಪಡಿ ಸುವ ಕೆಲಸವನ್ನು ಇವರುಗಳು ಮಾಡುತ್ತಲೇ ಬಂದಿದ್ದಾರೆ. ಆದರೆ ಒಂದು ಮಾತು, ನಮ್ಮ ದೇಶದ ಪ್ರಧಾನ ಮಂತ್ರಿಗಳ್ಯಾರೂ ಇಂತಹ ಕೃತ್ಯಗಳನ್ನು ಎಸಗಿಲ್ಲ ಎಂಬ ಹೆಮ್ಮೆ ನನಗಿದೆ. ನಮ್ಮ ಪಾಲಿಗೆ ನಮ್ಮ ದೇಶವೇ ಅತ್ಯುನ್ನತವಾದದ್ದು.
ಶ್ರೀಲಂಕಾದ ವಿದೇಶಿ ಸಾಲ ಈಗ ೫೦ ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಾಗಿದೆ. ಸಾಲದ ಮೇಲಿನ ಬಡ್ಡಿ ಕಟ್ಟುವುದು ಕೂಡ ತಮ್ಮಿಂದಾಗುತ್ತಿಲ್ಲ ಎಂದು ಶ್ರೀಲಂಕಾ ಸರಕಾರ ಈಗಾಗಲೇ ಹೇಳಿಕೊಂಡಿದೆ. ಇದರಿಂದ ದೃಢವಾಗುವ ಸಂಗತಿಯೇನೆಂದರೆ, ಶ್ರೀಲಂಕಾ ದಿವಾಳಿಯಾಗಿದೆ. ಒಂದು ಡಾಲರ್‌ಗೆ ಸಮಾನವಾಗಿ ಶ್ರೀಲಂಕಾದ ರುಪಾಯಿ ೩೬೦ ಆಗಿದೆ. ಯಾವು ದೇ ರಾಷ್ಟ್ರವಾದರೂ ಕನಿಷ್ಟ ೭ ತಿಂಗಳುಗಳಿಗಾಗುವಷ್ಟು ವಿದೇಶಿ ವಿನಿಮಯ ಧನರಾಶಿಯನ್ನು ಹೊಂದಿರಬೇಕೆಂಬುದು ಒಂದು ಲೆಕ್ಕಾಚಾರದ ಮಾತು. ಆದರೆ ಶ್ರೀಲಂಕಾದಲ್ಲಿ ಬೆರಳೆಣಿಕೆಯ ದಿನಗಳಿಗೆ ಆಗುವಷ್ಟು ವಿದೇಶಿ ವಿನಿಮಯ ಧನವೂ ಇಲ್ಲವಾಗಿದೆ. ಆ ದ್ವೀಪ ರಾಷ್ಟದಲ್ಲಿ ಬಹುತೇಕ ಕಡೆ ವಿದ್ಯುಚ್ಚಕ್ತಿ ಇಲ್ಲ.
ಪೆಟ್ರೋಲ್ ಮತ್ತು ಗ್ಯಾಸ್ ಪೂರೈಕೆ ಸೇನೆಯ ವಶದಲ್ಲಿದೆ. ಅಗತ್ಯ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಬಡವರಿಗೆ ಉಣ್ಣಲು ಕೂಳಿಲ್ಲದಂತಾಗಿದೆ. ನ್ಯೂಸ್ ಪ್ರಿಂಟಿಗೆ ಕೊಡಲೂ ದುಡ್ಡಿಲ್ಲದ ಕಾರಣ ಪತ್ರಿಕಾಲಯಗಳೇ ಮುಚ್ಚಿಹೋಗಿವೆ. ಅಸಮಾಧಾನದ ಬೇಗೆಯಲ್ಲಿ ಶ್ರೀಲಂಕಾ ಹೊತ್ತಿ ಉರಿಯುತ್ತಿದೆ. ಇದೇ ಕಾಲದಲ್ಲಿ ರಾನಿಲ್ ವಿಕ್ರಮಸಿಂಘೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಭಾರತದೊಂದಿಗೆ ತೀರಾ ಉತ್ತಮ ಬಾಂಧವ್ಯ  ಹೊಂದಿದ್ದಾರೆಂದು ಹೇಳಲಾಗುತ್ತಿದೆ. ರಾಜಪಕ್ಸೆ ಆಡಳಿತಕಾಲದಲ್ಲೂ ಕೂಡ ಭಾರತ ಸಾಕಷ್ಟು ನೆರವನ್ನು ಶ್ರೀಲಂಕಾಗೆ ಕೊಟ್ಟಿದೆ. ಆದರೆ ಒಂದು ದೇಶ ಇನ್ನೊಂದು ದೇಶಕ್ಕೆ ಎಷ್ಟರ ಮಟ್ಟಿಗೆ ಸಹಾಯ ನೀಡುತ್ತ ಹೋಗಬಹುದು? ಅಲ್ಲಿನ ರಾಜಕೀಯ ನಾಯಕತ್ವದ ಮೂಲಕವೇ ಆ ದೇಶದ ಆರೋಗ್ಯ ಸುಧಾರಣೆ ಆಗಬೇಕು. ಶ್ರೀಲಂಕೆಯ ಒಳಿತಿಗಾಗಿ ನಾವೆಲ್ಲರೂ ಪ್ರಾರ್ಥಿಸೋಣ.
ಸಾಲದ ಸುಳಿಯಿಂದಾಗಿ ಆಗಿರುವ ಶ್ರೀಲಂಕಾದ ದಯನೀಯ ಅವಸ್ಥೆ ಇಡೀ ವಿಶ್ವಕ್ಕೇ ಕಣ್ತೆರೆಸುವ ಒಂದು ಪಾಠ. ಹಾಸಿಗೆ ಇದ್ದಷ್ಟೇ ಕಾಲುಚಾಚು ಎಂಬೊಂದು ಆಡುಮಾತು ನಮ್ಮ ದೇಶದಲ್ಲಿ ಜನಪ್ರಿಯವಾಗಿದೆ. ಮಳೆಗಾಲದ ದಿನಕ್ಕೆ ದುಡ್ಡು ದುಗ್ಗಾಣಿ ಕೂಡಿಡಬೇಕು ಎಂಬ ಮಾತೂ ಚಾಲ್ತಿ ಯಲ್ಲಿದೆ. ಇದು ಸರಕಾರಗಳಿಗೆ ಮಾತ್ರವಲ್ಲ, ಎಲ್ಲ ಕುಟುಂಬಗಳಿಗೂ ಅನ್ವಯವಾಗುವ ಪಾಠ. ಯಾವಾಗ ಯಾವ ಆಪತ್ತು ಎದುರಾಗುವುದೋ ಬಲ್ಲವರಾರು?