ಮತ್ತೆ ಚಿಗುರುತ್ತಿದೆ ಖಲಿಸ್ತಾನಿ ಪ್ರತ್ಯೇಕತಾವಾದ
ಪ್ರಸ್ತುತ
ರಾಜ್‌ಗುರು ಕೆ.ಆರ್‌
ಪ್ರಸ್ತುತ ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಪ್ ಸರಕಾರಕ್ಕೆ ಖಲಿಸ್ತಾನೀ ಸಹಾನುಭೂತಿಗಳು ಸಂಪೂರ್ಣ ಬೆಂಬಲ ನೀಡಿದ್ದು, ಅರವಿಂದ್ ಕೇಜ್ರೀವಾಲ್ ೨೦೧೭ರ ತಮ್ಮ ಪಂಜಾಬ್ ಚುನಾವಣಾ ಸಮಯದಲ್ಲಿ ಖಲಿಸ್ತಾನ್ ಲಿಬರೇಶನ್ ಫ್ರಂಟ್‌ನ ಗುರ್ವಿಂದರ್ ಸಿಂಗ್‌ರನ್ನು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ನೆಚ್ಚಿಕೊಂಡಿದ್ದು ರಹಸ್ಯವೇನಲ್ಲ.
ದೆಹಲಿಯ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಕೆಂಪುಕೋಟೆ ಬಳಿ ಭಾರತದ ಧ್ವಜ ಕೆಳಗಿಳಿಸಿ ಖಲಿಸ್ತಾನಿ ಬಾವುಟ ಹಾರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ಗೆ ತೆರಳುವ ಸಮಯದಲ್ಲಿ ದಿಢೀರನೆ ರಸ್ತೆ ಮಧ್ಯೆಯೇ ಧರಣಿಗೆ ಕುಳಿತು ಅವರ ಪಂಜಾಬ್ ಪ್ರವಾಸಕ್ಕೆ ಅಡ್ಡಿಪಡಿ ಸಿದ್ದು ಹಾಗೂ ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ವಿಧಾನಸಭೆ ಕಟ್ಟಡದ ಬಳಿ ಖಲಿಸ್ತಾನಿ ಬಾವುಟಗಳು ಪ್ರತ್ಯಕ್ಷಗೊಂಡ ಹಲವು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲ ವರ್ಷಗಳಿಂದ ತಣ್ಣಗಾಗಿದ್ದ ಖಲಿಸ್ತಾನಿ ಪ್ರತ್ಯೇಕತಾವಾದ ಮತ್ತೆ ಚಿಗುರೊಡೆದು ದೇಶದ ಭದ್ರತೆಗೆ ಗಂಡಾಂತರ ತರಬಲ್ಲ ಎಲ್ಲ ಲಕ್ಷಣಗಳೂ ಗೋಚರ ಗೊಳ್ಳುತ್ತಿವೆ.
ಖಲಿಸ್ತಾನೀ ಪ್ರತ್ಯೇಕತಾವಾದವು ದೇಶ ವಿಭಜನೆ ಪೂರ್ವದಿಂದ ಚಾಲ್ತಿಯಲ್ಲಿದ್ದರೂ ಅದಕ್ಕೆ ಬಲ ಸಿಕ್ಕಿದ್ದು ೭೦-೮೦ರ ದಶಕದಲ್ಲಿ. ೧೯೭೧ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಪೂರ್ವ ಪಾಕಿಸ್ತಾನವನ್ನು ಕಳೆದುಕೊಂಡ ಪಾಕ್ ಅದರ ಪ್ರತೀಕಾರಕ್ಕಾಗಿ ಭಾರತದಲ್ಲಿ ಪ್ರತ್ಯೇಕತಾವಾದಕ್ಕೆ ನೇರ ಬೆಂಬಲ ಕೊಡುತ್ತಿರುವುದು ರಹಸ್ಯವೇ ನಲ್ಲ. ಯುದ್ಧಾನಂತರ ದಿಢೀರನೆ ಶುರುವಾಗುವ ಸಿಖ್ ಪ್ರತ್ಯೇಕ ರಾಷ್ಟ್ರ (ಖಲಿಸ್ತಾನ)ದ ಕೂಗು, ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯ ಜನಪ್ರಿಯತೆ, ಇಡೀ ಪ್ರಕರಣವನ್ನು ಹಿಂದೂ- ಸಿಖ್ ವಿರೋಧಿಗಳು ಎನ್ನುವ ದೃಷ್ಟಿಕೋನಕ್ಕೆ ಚಾಲನೆ, ಅಮೃತಸರದ ಅಖಾಲ್ ತಖ್ತ್‌ನಲ್ಲಿ ಆಶ್ರಯ ಪಡೆದುಕೊಳ್ಳುವ ಭಿಂದ್ರನ್ವಾಲೆ, ಸಿಖ್ ಪ್ರತ್ಯೇಕತಾವಾದಿಗಳಿಂದ ಹಿಂದೂಗಳ ಹತ್ಯೆ, ಆಪರೇಶನ್ ಬ್ಲೂಸ್ಟಾರ್ ಕಾರ್ಯಾಚರಣೆಯ ಮೂಲಕ ಭಿಂದ್ರನ್‌ವಾಲೆ ಸೇರಿದಂತೆ ಇತರರ ಹತ್ಯೆ, ತದನಂತರ ಅವರ ಸಿಖ್ ಅಂಗರಕ್ಷಕರಿಂದಲೇ ಹತ್ಯೆಗೊಳ್ಳುವ ಇಂದಿರಾ ಗಾಂಧಿ, ನಂತರ ನಡೆಯುವ ಸಿಖ್ ಹತ್ಯಾಕಾಂಡ, ಕೆ.ಪಿ.ಎಸ್ ಗಿಲ್‌ರಿಂದ ಖಲಿಸ್ತಾನೀ ಪ್ರತ್ಯೇಕತಾವಾದದ ನಿರ್ಮೂಲನೆ, ಇವೆಲ್ಲ ಘಟನೆಗಳು ಬೇರೆ ಬೇರೆಯಾದರೂ ಒಂದಕ್ಕೊಂದು ಸಂಬಂಧ ಹೊಂದಿವೆ.
೨೦೨೦ರಲ್ಲಿ ಕೆನಡಾ ಪತ್ರಕರ್ತ ಟೆರ್ರ‍ಿ ಮಿಲೆವಿಸ್ಕಿ ತಮ್ಮ ಖಲಿಸ್ತಾನ್- ಎ ಪ್ರೋಜೆಕ್ಟ್ ಆಫ್ ಪಾಕಿಸ್ತಾನ್ ಲೇಖನದಲ್ಲಿ ಖಲಿಸ್ತಾನೀ ಪ್ರತ್ಯೇಕತಾವಾದ ಭಾರತ ಕೆನಡಾದ ಭದ್ರತೆಗೆ ತರಬಲ್ಲ ಸಂಭಾವ್ಯ ಗಂಡಾಂತರದ ಕುರಿತಾಗಿ ವಿವರವಾದ ವರದಿಯನ್ನು ಸಲ್ಲಿಸಿದ್ದು, ಪಾಕಿಸ್ತಾನ ಪ್ರಾಯೋಜಿತ ಈ ಪ್ರತ್ಯೇಕತಾ ವಾದವನ್ನು ಆ ದೇಶ ವಿಶ್ವದ ಇತರ ದೇಶಗಳಲ್ಲಿ ಹಬ್ಬಿಸುತ್ತಿರುವ ಪರಿಯ ಕುರಿತು ಅಲ್ಲಿನ ಸರಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಕೆನಡಾ ಸರಕಾರಕ್ಕೆ ಸಿಖ್ ಪ್ರತ್ಯೇಕತಾವಾದವನ್ನು ಬೆಂಬಲಿಸದಂತೆ ಆಗ್ರಹಿಸಿದೆ.
ಸಿಖ್ ಪ್ರತ್ಯೇಕತಾವಾದದ ಇಡೀ ಪ್ರಕರಣದಲ್ಲಿ ಹಿಂದಿನಿಂದಲೂ ಪಾಕಿಸ್ತಾನ, ಕೆನಡಾ, ಯುರೋಪ್, ಯುಕೆಯಲ್ಲಿನ ಕೆಲ ಸಂಘಟನೆಗಳು ಬೆಂಬಲ ನೀಡು ತ್ತಿದ್ದು, ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಹಲವು ವಿದೇಶಿ ಶಕ್ತಿಗಳು ಹವಣಿಸುತ್ತಿರುವುದು ಸ್ಪಷ್ಟ. ೮೦ರ ದಶಕದ ಮಧ್ಯ ಭಾಗದಲ್ಲಿ ಉತ್ತುಂಗಕ್ಕೇರಿದಖಲಿಸ್ತಾನ ಪ್ರತ್ಯೇಕತೆಯ ಹಿಂಸಾತ್ಮಕ ಬಂಡಾಯವು ಮುಂದಿನ ಕೇವಲ ೧೫ ವರ್ಷಗಳಲ್ಲಿ ೨೧ ಸಾವಿರಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ೧೯೮೧ರಲ್ಲಿ ಭಾರತ ಮೂಲದ ಅಮೆರಿಕ ಪ್ರಜೆ ಗಂಗಾ ಸಿಂಗ್ ಧಿನ್ ಚಂಡೀಗಢದಲ್ಲಿ ನಡೆದ ಖಲಿಸ್ತಾನ ಕಾರ್ಯಾಗಾರದಲ್ಲಿ ಪ್ರತ್ಯೇಕ ಸಿಖ್ ರಾಷ್ಟ್ರಕ್ಕೆ ಕರೆ ಕೊಟ್ಟ ನಂತರ ಪ್ರವರ್ಧಮಾನಕ್ಕೆ ಬಂದ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಈ ಬಂಡಾಯಕ್ಕೆ ಉಗ್ರಸ್ವರೂಪ ನೀಡಿ ಸುಪ್ತವಾಗಿದ್ದ ಪಾಕಿಸ್ತಾನಿ ಪ್ರಾಯೋಜಿತ ಜ್ವಾಲೆಗೆ ಮತ್ತಷ್ಟು ತುಪ್ಪ ಸುರಿದು ಮುಂದಿನ ಕೆಲ ವರ್ಷಗಳಲ್ಲಿ ಪಂಜಾಬ್ ಸೇರಿದಂತೆ ಇಡೀ ದೇಶದಲ್ಲಿ ಅನೇಕ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿದ್ದು ಸ್ಪಷ್ಟ.
೧೯೮೦ರ ಆರಂಭದಿಂದ ಶುರುವಾದ ಈ ಪ್ರತ್ಯೇಕತಾವಾದವು ಇಡೀ ಪಂಜಾಬ್ ರಾಜ್ಯಾದ್ಯಾಂತ ಆಂತರಿಕ ಕ್ಷೋಭೆಗೆ ಕಾರಣವಾಗಿ ಅನೇಕ ಸಾವು-ನೋವುಗಳಿಗೆ ಕಾರಣವಾಗಿದ್ದನ್ನು ಅಲ್ಲಗಳೆಯುವಂತಿಲ್ಲ. ಸಿಖ್ ಪ್ರತ್ಯೇಕತಾವಾದದ ಹಿಂಸೆ, ಬಂಡಾಯ ಯಾವ ಮಟ್ಟಿಗೆ ಉತ್ತುಂಗದಲ್ಲಿತ್ತು ಎಂದರೆ ಶಸಸಜ್ಜಿತ ಬಂಡಾಯಗಾರರು ಖಲಿಸ್ತಾನ ಪ್ರತ್ಯೇಕತೆಗೆ ಬೆಂಬಲ ಕೊಡದವರನ್ನು ಒತ್ತೆ ಯಾಳುಗಳನ್ನಾಗಿಸಿಕೊಂಡು ಬರ್ಬರವಾಗಿ ಹತ್ಯೆಗೈಯ್ಯುವುದುಅಪರಾಧವೇ ಅಲ್ಲ ಅನ್ನಿಸುವ ಮಟ್ಟದಲ್ಲಿತ್ತು. ಪಂಜಾಬ್ ರಾಜ್ಯವು ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಅಂತಾರಾಷ್ಟ್ರೀಯ ಗಡಿಗೆ ಸಮೀಪ ದಲ್ಲಿರುವು ದರಿಂದ ಅಲ್ಲಿನ ಇಂಥ ಅಹಿತಕರ ಘಟನಾವಳಿಗಳು ದೇಶದ ಭದ್ರತೆಗೂ ಕಂಟಕ ತರಬಲ್ಲವು ಎಂದರಿತು ಸೂಪರ್ ಕಾಪ್ ಕೆಪಿಎಸ್ ಗಿಲ್‌ರಿಗೆ ಪಂಜಾಬ್‌ನ ಖಲಿಸ್ತಾನೀ ಪ್ರತ್ಯೇಕತಾವಾದವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಅಂದಿನ ಸರಕಾರ ಆದೇಶಿಸಿತು.
೧೯೮೮ ರಿಂದ ೧೯೯೫ ರವರೆಗೂ ಖಲಿಸ್ತಾನೀ ಬಂಡಾಯವನ್ನು ನಿರ್ಣಾಮ ಮಾಡಿದ ಕೆಪಿಎಸ್ ಗಿಲ, ಪಂಜಾಬ್‌ನಲ್ಲಿ ಮತ್ತೆ ಶಾಂತಿ ನೆಲೆಸುವಲ್ಲಿ ಶ್ರಮ ವಹಿಸಿದ್ದರು. ಕಳೆದ ಕೆಲ ವರ್ಷಗಳಿಂದ ತಣ್ಣಗಾಗಿದ್ದ ಬಂಡಾಯವು ಕೆನಡಾ, ಯುಕೆ, ಅಮೆರಿಕ, ಜರ್ಮನಿ, ಯುರೋಪ್ ರಾಷ್ಟ್ರಗಳಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಧ್ಯಪ್ರವೇಶದಿಂದ ಮತ್ತೆ ಚಿಗುರೊಡೆದು ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನದಲ್ಲಿ ನಿರತರಾಗಿರುವುದು ಅಕ್ಷಮ್ಯ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಸರಕಾರವಂತೂ ಖಲಿಸ್ತಾನೀ ಪ್ರತ್ಯೇಕತಾವಾದಕ್ಕೆ ಪೂರ್ಣ ಪ್ರಮಾಣದ ಮುದ್ರೆ ಒತ್ತಿರುವುದು ಭಾರತ ಸರಕಾರದ ಆಕ್ಷೇಪಕ್ಕೆ ಗುರಿಯಾಗಿದ್ದು, ಭಾರತ ಆಂತರಿಕ ಭದ್ರತೆ ವಿಚಾರದಲ್ಲಿ ಹಸ್ತಕ್ಷೇಪ ನಡೆಸದಂತೆ ಎಚ್ಚರಿಕೆ ನೀಡಿದೆ. ಆದರೂ, ಕೆಲ ದೇಶಗಳ ಸರಕಾರದಲ್ಲಿ ಪ್ರಭಾವ ಬೀರಬಲ್ಲ ಮಟ್ಟಿಗೆ ಖಲಿಸ್ತಾನೀ ಪರ ಸಹಾನುಭೂತಿಗಳು ನುಸುಳಿರುವುದು ಪ್ರತ್ಯೇಕತಾವಾದಕ್ಕೆ ಪುಷ್ಠಿ ನೀಡಿದೆ.
ಪ್ರಸ್ತುತ ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಿರುವ ಆಪ್ ಸರಕಾರಕ್ಕೆ ಖಲಿಸ್ತಾನೀ ಸಹಾನುಭೂತಿಗಳು ಸಂಪೂರ್ಣ ಬೆಂಬಲ ನೀಡಿದ್ದು, ಅರವಿಂದ್ ಕೇಜ್ರೀವಾಲ್ ೨೦೧೭ರ ತಮ್ಮ ಪಂಜಾಬ್ ಚುನಾವಣಾ ಸಮಯದಲ್ಲಿ ಖಲಿಸ್ತಾನ್ ಲಿಬರೇಶನ್ ಫ್ರಂಟ್‌ನ ಗುರ್ವಿಂದರ್ ಸಿಂಗ್‌ರನ್ನು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ನೆಚ್ಚಿಕೊಂಡಿದ್ದು ರಹಸ್ಯವೇನಲ್ಲ. ಜಿಎಸ್ ಪನ್ನು ನೇತೃತ್ವದ ಸಿಖ್ಸ್ ಫಾರ್ ಜಸ್ಟೀಸ್ (ಎಸ್.ಎಫ್.ಜೆ) ಸಂಘಟನೆಯು, ದೆಹಲಿಯಲ್ಲಿ ನಡೆದರೈತ ಚಳವಳಿಯಲ್ಲಿ ಖಲೀಸ್ತಾನಿಗಳನ್ನು ನುಸುಳಿಸಿದ್ದು, ಜನವರಿ ೨೬ರ ಟ್ರಾಕ್ಟರ್ ರ‍್ಯಾಲಿಯ ಮೂಲಕ ಕೆಂಪುಕೋಟೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಹಕಾರ ನೀಡಿ ರಾಷ್ಟ್ರ ರಾಜಧಾನಿಯಲ್ಲಿ ದಂಗೆಗಳಿಗೆ ಕಾರಣವಾಗಿದ್ದು ಹಾಗೂ ಐ.ಎಸ್.ಐ ನೊಂದಿಗಿನ ಸಂಬಂಧ ಖಲಿಸ್ತಾನಿ ಬಂಡಾಯ ಮತ್ತೆ ಚಿಗುರೊಡೆಯುತ್ತಿರುವುದರ ಸಂಕೇತ.
ಶ್ರೀಲಂಕಾದಲ್ಲಿನ ಆಡಳಿತ ಅನಿಶ್ಚಿತತೆ, ಪಾಕಿಸ್ತಾನದಲ್ಲಿನ ಐ.ಎಸ್.ಐ ಬೆಂಬಲಿತ ಆಡಳಿತ, ಚೀನಾದ ಕಾಲುಕೆರೆದು ಯುದ್ಧಕ್ಕೆ ನಿಲ್ಲುವ ಚಾಳಿ, ರಷ್ಯಾ ಉಕ್ರೇನ್ ಯುದ್ಧದ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪರಿಣಾಮಗಳ ನಡುವೆಯೇ ಖಲಿಸ್ತಾನೀ ಚಟುವಟಿಕೆಗಳು ಭಾರತದ ಆಂತರಿಕ, ಬಾಹ್ಯ ಸುರಕ್ಷತೆಗೆ ಧಕ್ಕೆ ತರುವಂತಿದ್ದು, ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಎಚ್ಚರಿಕೆಯ ಹೆಜ್ಜೆ ಇಡುವುದು ಸೂಕ್ತ.
ಖಲಿಸ್ತಾನಿ ಪ್ರತ್ಯೇಕತಾವಾದದ ಕೆಲ ಪ್ರಮುಖ ಘಟನಾವಳಿಗಳು:* ಏಪ್ರಿಲ್ ೧೯೮೧: ಚಂಡೀಗಢದ ಸಮಾವೇಶದಲ್ಲಿ ಪ್ರತ್ಯೇಕ ಸಿಖ್ ರಾಷ್ಟ್ರ (ಖಲಿಸ್ತಾನ)ಕ್ಕೆ ಬೇಡಿಕೆಯಿಟ್ಟ ಗಂಗಾ ಸಿಂಗ್ ಧಿಲ್ಲೋನ್
* ಸೆಪ್ಟೆಂಬರ್ ೧೯೮೧: ಖಲಿಸ್ತಾನೀ ಉಗ್ರರಿಂದ ಇಂಡಿಯನ್ ಏರ್‌ಲೈನ್ಸ್‌ನ ದೆಹಲಿ – ಶ್ರೀನಗರ ವಿಮಾನ ಹೈಜಾಕ್. ಖಲಿಸ್ತಾನಿ ಜಿಂದಾಬಾದ್, ಸಂತ್ ಬಾಬಾ ಭಿಂದ್ರನ್ ವಾಲೆ ಜಿಂದಾಬಾದ್ , ಭಾರತ್ ಸರಕಾರ್ ಮುರ್ದಾಬಾದ್ ಘೋಷಣೆ.
* ಸೆಪ್ಟೆಂಬರ್ ೧೯೮೧: ಪಂಜಾಬ್‌ನಲ್ಲಿ ಅಹಿತಕರ ವಾತಾವರಣ/ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ಆರೋಪದಡಿಯಲ್ಲಿ ಜರ್ನೈಲ ಸಿಂಗ್ ಭಿಂದ್ರನ್ ವಾಲೆ ಬಂಧನ, ಸಾಕ್ಷ್ಯಾಧಾರದ ಕೊರತೆಯಿಂದ ಬಿಡುಗಡೆ.* ಆಗಸ್ಟ್ ೧೯೮೨: ಅಕಾಲಿದಳದ ಪ್ರಕಾಶ್ ಸಿಂಗ್ ಬಾದಲ್, ಭಿಂದ್ರನ್ ವಾಲೆ ಹಾಗೂ ಇನ್ನಿತರ ಬಂಡಾಯಗಾರರಿಂದ ಸಿಖ್ ಜನಸಂಖ್ಯೆ ಹೆಚ್ಚಾಗಿರುವಹಿಮಾಚಲ ಪ್ರದೇಶ ಹಾಗೂ ಹರಿಯಾಣದ ಕೆಲ ಪ್ರದೇಶಗಳ ಪಂಜಾಬ್ ಸೇರ್ಪಡೆಗೆ ಆಗ್ರಹ. ಧರಮ್ ಯುದ್ಧ ಮೋರ್ಚಾ ಆರಂಭ.
* ೧೯೮೨- ೧೯೮೪: ಪಂಜಾಬ್‌ನಲ್ಲಿ ಉತ್ತುಂಗಕ್ಕೇರಿದ ಖಲಿಸ್ತಾನೀ ಬಂಡಾಯ.
* ೧೯೮೪: ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿ ಕುಳಿತಿದ್ದ ಖಲಿಸ್ತಾನೀ ಉಗ್ರಗಾಮಿಗಳ ನಿರ್ಮೂಲನೆಗೆ ಭಾರತೀಯ ಸೇನೆಯಿಂದ ಆಪರೇಶನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಿಂದ್ರನ್ ವಾಲೆ ಹತ್ಯೆ. ಇದಕ್ಕೆಪ್ರತೀಕಾರವಾಗಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಹತ್ಯೆ.
* ೧೯೮೫-೧೯೯೫: ಒಂದು ದಶಕದವರೆಗೆ ಹಿಂಸಾತ್ಮಕ ರೂಪ ಪಡೆದುಕೊಂಡ ಖಲಿಸ್ತಾನೀ ಬಂಡಾಯ. ಭದ್ರತಾ ಪಡೆಗಳು ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾತ್ಮಕ ದಾಳಿ. ಸೂಪರ್‌ಕಾಪ್ ಕೆಪಿಎಸ್ ಗಿಲ್‌ರಿಂದ ಪಂಜಾಬ್ ತಹಬಂದಿಗೆ.
* ಅಗಸ್ಟ್ ೧೯೯೫: ಖಲಿಸ್ತಾನಿ ಉಗ್ರರಿಂದ ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್‌ರ ಕಗ್ಗೊಲೆ.