ಮೂಲಭೂತ ಏಕತೆ ಮತ್ತು ಅಖಂಡತೆ
ವಿಶ್ಲೇಷಣೆ
ಡಾ.ಎಸ್.ವೆಂಕಟಾಚಾರ್‌
ಭಾರತದ ಮತ್ತೊಂದು ವೈಶಿಷ್ಟ್ಯವೆಂದರೆ, ಹಿಂಗಾರು, ಮುಂಗಾರು ಮಳೆಗಳು. ಇಡೀ ಭಾರತವನ್ನು ಆವರಿಸಿಕೊಂಡು ಇಲ್ಲಿಯದೇ ಆದ ವಾತಾವರಣ ವನ್ನು ನಿರ್ಮಾಣಮಾಡಿ, ಭಾರತವನ್ನು ಒಂದು ಕೃಷಿಕ ದೇಶವನ್ನಾಗಿಸಿವೆ. ಸುಮಾರು ಎಂಭತ್ತು ಶತಮಾನ ಕೃಷಿಯು ಭಾರತ ದಲ್ಲಿ ಹರಿಯುವ ನದಿಗಳಿಂದ ನೀರಾವರಿಗೆ ಒಳಪಟ್ಟಿದೆ.
ಭಾರತ ಒಂದು ದೇಶವೇ, ಅಥವಾ ವೈವಿಧ್ಯತೆಯಿಂದ ಕೂಡಿರುವ ಅನೇಕ ರಾಜ್ಯ /ಪ್ರಾಂತ್ಯಗಳ ಗುಂಪೇ ಎಂಬ ಒಂದು ವಾದ ಗುಪ್ತ ಗಾಮಿನಿಯಂತೆ ಪ್ರವಹಿಸುತ್ತಲೇ ಇದೆ. ಭಾರತ, ಇಂಡಿಯ, ಹಿಂದೂಸ್ತಾನ ಹೀಗೆ ಈ ದೇಶಕ್ಕೆ ಮೂರು ಹೆಸರುಗಳು. ಪ್ರಾಚೀನ ಕಾಲದಲ್ಲಿ ಆರ್ಯಾವರ್ತ, ಭರತಖಂಡ, ಜಂಬೂದ್ವೀಪ ಎಂಬ ನಾಮ ಗಳಿಂದಲೂ ಕರೆಯಲ್ಪಡುತ್ತಲಿತ್ತು.
ಭಾರತ ಎಂಬುದಕ್ಕೆ ಮೂಲಭೂತವಾದ ಒಂದು ಏಕತೆ ಇಲ್ಲ, ಭಾರತವನ್ನು ದೇಶ ಎಂದು ಕರೆಯುವುದಕ್ಕೆ ಬಲವಾದ ಪುರಾವೆಗಳಿಲ್ಲ ಎಂಬ ವಾದ ವಂತೂ ಸುಮಾರು ಕಾಲದಿಂದಲೂ ಪ್ರಚಲಿತದಲ್ಲಿದೆ. ಹಾಗಿದ್ದರೆ ಈ ಭಾರತವನ್ನು ಬೇರೆ ದೇಶಗಳಿಂದ ಪ್ರತ್ಯೇಕವಾಗಿ ಕಾಣಲು ಏನು ಪುರಾವೆ ಗಳಿವೆ? ಈ ಏಕತೆ ಭೌಗೋಳಿಕವೇ? ಸಾಂಸ್ಕೃತಿಕವೇ? ಎಂದೂ ಸಹ ಯೋಚಿಸಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಅತ್ಯಂತ ಪಾಂಡಿತ್ಯ ಪೂರ್ಣವಾದ ಸಂಶೋಧನಾತ್ಮಕವಾದ ಬರಹವನ್ನು ಪುಸ್ತಕ ರೂಪದಲ್ಲಿ ಮೊದಲು ರಚಿಸಿದವರು ಡಾ||ರಾಧಾ ಕುಮುದ್ ಮುಖರ್ಜಿಯವರು. ಇವರು ೧೮೮೪ ರಲ್ಲಿ ಕೋಲ್ಕತಾದಲ್ಲಿ ಜನಿಸಿದರು. ತಮ್ಮ 21ನೇ ವಯಸ್ಸಿನಲ್ಲಿ ಕೋಲ್ಕತಾ ವಿಶ್ವವಿದ್ಯಾನಿಲಯ ದಿಂದ ಡಾಕ್ಟರೇಟ್/ಪಿ.ಹೆಚ್.ಡಿ ಪದವಿ ಪಡೆದ ಮೇಧಾವಿ.
ಇತಿಹಾಸತಜ್ಞರಾದ ಇವರು ಅನೇಕ ಪಾಂಡಿತ್ಯಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ. ಭಾರತದ ಮೂಲಭೂತ ಏಕತೆಯ ಬಗ್ಗೆ, ಇವರು ಬರೆದ      ಗ್ರಂಥ ಅತಿ ಮುಖ್ಯ. ಈ ಲೇಖನದ ಅಡಿಪಾಯವೇ ಮುಖರ್ಜಿಯವರ ಈ ಗ್ರಂಥ. ಅವರು 1918ರಲ್ಲಿ ಬರೆದ ಈ ಪುಸ್ತಕವನ್ನು ಆಧರಿಸಿಯೇ ಈ ಲೇಖನವನ್ನು ತಯಾರು ಮಾಡಿದ್ದೇನೆ. ಏಕೆಂದರೆ ಪ್ರಾಜ್ಞರಾದ ಕನ್ನಡ ಓದುಗರಿಗೆ ಈ ಅಮೂಲ್ಯವಾದ ಪುಸ್ತಕದಲ್ಲಿ ರುವ ವಿಚಾರಗಳು ತಿಳಿಯಬರಲಿ ಎಂಬ ಉದ್ದೇಶ ನನ್ನದು.
ಮುಖರ್ಜಿಯವರು ತಮ್ಮ ಮುನ್ನುಡಿಯಲ್ಲಿ ತಿಳಿಸಿರುವಂತೆ, ಸಾಮಾಜಿಕ ಧಾರ್ಮಿಕ ಆಧಾರಗಳನ್ನು ಬಿಟ್ಟು ಭೌಗೋಳಿಕವಾಗಿ ನಮ್ಮ ಪ್ರಾಚೀನಇತಿಹಾಸದಲ್ಲಿ ಭಾರತದ ಏಕತೆಯ ಬಗ್ಗೆ ಏನು ಪುರಾವೆಗಳಿವೆ ಎಂಬ ವಿಚಾರವಾಗಿ ಪ್ರಸ್ತಾಪಿಸಿದ್ದಾರೆ. ರಾಷ್ಟ್ರ ಎಂದರೆ ಅದಕ್ಕೆ ಅದು ಏಕತೆಯನ್ನು ಮೂಲ ಭೂತವಾಗಿ ಹೊಂದಿರಬೇಕು. ಮಾತೃಭೂಮಿಯೆಂದು ಗುರುತಿಸಲ್ಪಟ್ಟರೆ ಮಾತ್ರ ಪ್ರಗತಿ ಸಾಧ್ಯ. ಒಂದೇ ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಆಡಳಿತ ಇವೆಲ್ಲ ದೇಶ ಎಂಬ ಪರಿಕಲ್ಪನೆಗೆ ಮೂಲ ಭೂತವಾದ ವಿಷಯಗಳು.
ಅದಲ್ಲದೆ ಒಂದು ಖಚಿತವಾದ ಭೌಗೋಳಿಕ ಚೌಕಟ್ಟು, ವಾಸಸ್ಥಾನ ಎಂಬುದಿಲ್ಲದೆ ದೇಶ ಎಲ್ಲಿ ಇರಲು ಸಾಧ್ಯ. ಅಲೆಮಾರಿಗಳಿಗೆ ದೇಶ, ರಾಷ್ಟ್ರ ಎಂಬು ದಿಲ್ಲ. ಹಾಗಾಗಿ ಅವರದ್ದೇ ಎಂದು ಒಂದು ದೇಶ ಅವರಿಗೆ ಇಲ್ಲ. ಭಾರತದ ಭೌಗೋಳಿಕ ರೂಪವನ್ನು ಅನೇಕ ಪ್ರಾಂತ್ಯಗಳ ಒಂದು ಉಪಖಂಡ ಎಂಬ ರೀತಿಯ ಶತಮಾನಗಳಿಂದ ಶಾಲಾ ಕಾಲೇಜುಗಳಲ್ಲಿ ಬೋಧಿಸಲಾಗಿದೆ. ಆಂಗ್ಲ ಮತ್ತು ಪಾಶ್ಚಾತ್ಯ ವಿದ್ವಾಂಸರುಗಳು ಸರಿ ಸುಮಾರು ಈ ರೀತಿ ಯಾದ ವಾದವನ್ನೇ ಮಂಡಿಸುತ್ತಾ ಬಂದಿದ್ದಾರೆ. ಆದರೆ ಅವರಲ್ಲಿ ಕೆಲವರು ಈ ವಾದವನ್ನು ವಿರೋಧಿಸಿದ್ದಾರೆ.
ಮುಖರ್ಜಿಯವರು ಚರಿತ್ರಕಾರರಾದ ವಿನ್ಸೆಂಟ್ ಸ್ಮಿತ್ ಅವರನ್ನುಉಲ್ಲೇಖಿಸಿದ್ದಾರೆ. ಸ್ಮಿತ್ ಅವರು ಭಾರತದ ಭೌಗೋಳಿಕ ಎಗಳು ಸಮುದ್ರ, ಪರ್ವತ ಶ್ರೇಣಿಗಳಿಂದ ಖಚಿತವಾಗಿಗುರುತಿಸಲ್ಪಡುತ್ತದೆ, ಆದ್ದರಿಂದ ಅದು ಒಂದು ಹೆಸರು ಮತ್ತು ನಿರ್ದಿಷ್ಟ ಎಗಳಿಂದ ಒಂದು ದೇಶವೇ ಸರಿ ಎಂಬ ವಾದವನ್ನು ಪುರಸ್ಕರಿಸಿದ್ದಾರೆ. ಪ್ರಸಿದ್ಧ ಭೂಗೋಳ ವಿದ್ವಾಂಸರಾದ ಚಿಷೂಲಂ ಅವರನ್ನುಉಲ್ಲೇಖಿಸಿ, ಭಾರತ ಭೌಗೋಳಿಕವಾಗಿ, ಅದರ ವಾತಾವರಣ, ಸಮುದ್ರದ ಸರಹದ್ದು, ಪರ್ವತಶ್ರೇಣಿ ಇವೆಲ್ಲದರಿಂದ ತನ್ನ ಸುತ್ತಮುತ್ತಲ ಪ್ರದೇಶಗಳಿಂದ ಬೇರೆಯಾಗಿ ಒಂದು ದೇಶ ಎನ್ನುವುದನ್ನು ಒಪ್ಪಲೇಬೇಕು ಎಂಬ ವಾದ ವನ್ನೂ ಸಹ ದಾಖಲಿಸಿದ್ದಾರೆ.
ಆದರೆ ಬರೀ ಬಾಹ್ಯ ಕುರುಹುಗಳಿಂದ, ಈ ಅನೇಕತೆಯಿಂದ ನಾವು ಭಾರತದ ಭೌಗೋಳಿಕ ಅಖಂಡತೆ ಮತ್ತು ಏಕತೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಅತಿ ಪ್ರಾಚೀನವಾದ ಐತಿಹಾಸಿಕ ಪುರಾವೆಗಳಲ್ಲಿ ಈ ಅನೇಕತೆಯಲ್ಲಿ ಏಕತೆಯನ್ನು ಕಾಣಬಹುದಾಗಿದೆ. ಅಶೋಕನ ಶಾಸನಗಳಲ್ಲಿ ಬೌದ್ಧ ಧರ್ಮ ಗ್ರಂಥಗಳಲ್ಲಿ ಅಶೋಕನನ್ನು ಜಂಬೂ ದ್ವೀಪದ ಚಕ್ರವರ್ತಿ ಎಂದು ಕರೆಯಲಾಗಿದೆ. ಭಾರತವನ್ನು ಒಂದು ಅಖಂಡ ದೇಶವನ್ನಾಗಿ, ಭೌಗೋಳಿಕ ಪ್ರದೇಶ ವನ್ನಾಗಿ ಗುರುತಿಸುವುದು, ಈ ಭೂಭಾಗವನ್ನು ಭಾರತವರ್ಷ ಎಂದು ಉಲ್ಲೇಖಿಸುವುದರಿಂದ ಮೊದಲಾಗುತ್ತದೆ. ಅಂದರೆ ಈ ಭೂಭಾಗವನ್ನು ಒಬ್ಬ ಚಕ್ರವರ್ತಿ ಆಳುತ್ತಿದ್ದ ಎಂದು ತಿಳಿಯಬಹುದು.
ಸುಮಾರು ಕ್ರಿ.ಪೂ. 3000 ವರ್ಷಗಳ ಹಿಂದಿನದು ಎಂದು ವಿದ್ವಾಂಸರುಗಳಿಂದ ನಿಶ್ಚಯಿಸಲ್ಪಟ್ಟಿರುವ ಋಗ್ವೇದದಲ್ಲಿ ನದಿ ಸ್ತುತಿ ಸೂಕ್ತದಲ್ಲಿ ಭಾರತ ದಲ್ಲಿ ಅಂದು ಪ್ರವಹಿಸುತ್ತಿದ್ದ ನದಿಗಳ ಪ್ರಾರ್ಥನೆಯ ಸೂಕ್ತ ಇದೆ. ಪೂರ್ವದಿಂದ ಪಶ್ಚಿಮ ದಿಕ್ಕುಗಳ ಭೌಗೋಳಿಕ ಭಾಗಗಳನ್ನು ಈ ನದಿಗಳ ಹೆಸರು ಗಳಿಂದ ಗುರುತಿಸಬಹುದು. ಸಿಂಧೂ, ರಾವಿ, ಬೀಯಾಸ್, ಝೇಲಂ ಮುಂತಾದ ನದಿಗಳನ್ನು ಉಲ್ಲೇಖ ಮಾಡಲಾಗಿದೆ. ಋಗ್ವೇದದ ಈ ನದಿ ಸ್ತುತಿಯು ಭಾರತೀಯ ಏಕತೆಯನ್ನು ಸಾರುವ ಮೊದಲ ಕುರುಹು ಎಂದು ಗುರುತಿಸಬಹುದು.
ಮತ್ತೊಂದು ಉಲ್ಲೇಖ ನಮಗೆ ಅಮರಕೋಶದಲ್ಲಿ ಸಿಗುತ್ತದೆ. ಅಲ್ಲಿ, ಆರ್ಯಾವರ್ತಃ ಪುಣ್ಯಭೂಮಿಃ ಮಧ್ಯಂ ವಿಂಧ್ಯ ಹಿಮಾಲಯೋಃ ಅಂದರೆ ಹಿಮಾಲಯ ಮತ್ತು ವಿಂಧ್ಯ ಪರ್ವತದ ಮಧ್ಯದಲ್ಲಿರುವ ಪ್ರದೇಶವೆಂದು ತಿಳಿಯಬರುತ್ತದೆ. ಮಾರ್ಕಂಡೇಯ ಪುರಾಣದಲ್ಲಿ ಭಾರತವರ್ಷದ ಖಚಿತವಾದ ರೂಪುರೇಷೆಗಳು ದೊರೆಯುತ್ತವೆ. ನದಿಗಳಲ್ಲದೆ, ಪರ್ವತಗಳು, ಕಾನನಗಳು ಇವೆಲ್ಲದರ ವಿವರಣೆಯನ್ನು ತಿಳಿಯಬಹುದು. ಚರಿತ್ರೆಯ ಪುಟಗಳನ್ನು ಇನ್ನಷ್ಟು ಮುಂದೆ ತಿರುವಿದರೆ, ಭಾರತದ ಪುಣ್ಯಕ್ಷೇತ್ರಗಳನ್ನು ಹೇಗೆ ಭೌಗೋಳಿಕವಾಗಿ ನಾಲ್ಕುದಿಕ್ಕುಗಳಿಗೂ ನಿರ್ದೇಶಿಸಿದ್ದಾರೆ ಎಂದು ತಿಳಿಯಬರುತ್ತದೆ. ಭಾರತದ ಅತ್ಯಂತ ಮಹತ್ವವಾದ ಪುಣ್ಯ ಕ್ಷೇತ್ರಗಳೆಂದರೆ, ಉತ್ತರದ ಬದರಿ, ಕೇದಾರನಾಥ, ದಕ್ಷಿಣದ ರಾಮೇಶ್ವರ, ಪಶ್ಚಿಮದ ದ್ವಾರಕೆ ಮತ್ತು ಪೂರ್ವ ದಲ್ಲಿ ಪುರಿ ಜಗನ್ನಾಥ.
ಆದಿಗುರು ಶಂಕರಾಚಾರ್ಯರು ಭಾರತದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪನೆ ಮಾಡಿದ್ದಾರೆ. ಬದರಿ, ದ್ವಾರಕಾ, ಪುರಿ ಮತ್ತು ಶೃಂಗೇರಿ ನಾಲ್ಕು ಪುಣ್ಯ ತೀರ್ಥಗಳು, ನಾಲ್ಕು ಪವಿತ್ರ ಸರೋವರಗಳು (ಮಾನಸ ಸರೋವರ, ಇತ್ಯಾದಿ) ನಾಲ್ಕು ಪುಣ್ಯಕ್ಷೇತ್ರಗಳು, ಸೂರ್ಯನ ಆರಾಧನಾ ಕ್ಷೇತ್ರಗಳು, ಇವೆಲ್ಲಾ ಭಾರತದ ಗಡಿಗಳನ್ನು ಮತ್ತು ಸಾಂಸ್ಕೃತಿಕ ಏಕತೆಯನ್ನು ಸಾರುವ ಭೌಗೋಳಿಕ ಪುರಾವೆಗಳು ಮತ್ತು ಇತಿಹಾಸದ ನಕ್ಷೆಗಳು. ನಾವುಭಾರತದ ಧರ್ಮಗಳು ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲ್ಪಡುವ ಪುಣ್ಯ ಕ್ಷೇತ್ರಗಳಾಗಲೀ, ಪೂಜಾ ವಿಧಾನಗಳಾಗಲೀ ನಮ್ಮ ಭಾರತದ ಎಲ್ಲೆಗಳನ್ನು ಮೀರಿದ್ದಲ್ಲ. ದೂರದ ಪ್ಯಾಲೆಸ್ತೇನಾಗಲಿ, ಲಂಡನ್ ನಗರ ಇತ್ಯಾದಿ ಭಾಗಗಳ ಉಖ ಇಲ್ಲದಿರುವುದನ್ನು ಅತಿ ಸೂಕ್ಷ್ಮವಾಗಿ ಗುರುತಿಸಬೇಕು.
ಭಾರತದ ಏಕತೆ / ಅಖಂಡತೆಯನ್ನು ಈ ಪ್ರಾಚೀನ ಇತಿಹಾಸಗಳು ಮತ್ತು ಪುರಾಣಗಳಲ್ಲಿನ ವಿಚಾರಗಳನ್ನು ನೋಡಿದಾಗ ಸ್ಪಷ್ಟವಾಗಿ ಕಾಣಬಹುದು. ಸಂಸ್ಕೃತ ಸಾಹಿತ್ಯದಲ್ಲಿ ಇದು ವಿಪುಲವಾಗಿದೆ. ಅಥರ್ವವೇದದಲ್ಲಿ ಜನ್ಮಭೂಮಿಯ ಅಂದರೆ ಭಾರತದ ಮಹತ್ವನ್ನು ಸಾರುವ ಋಕ್ಕುಗಳಿರುವುದುಕಂಡುಬರುತ್ತದೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ವಾಕ್ಯ ನಮ್ಮ ದೇಶ, ನಮ್ಮನ್ನು ಹಡೆದ ಮಾತೆ ಇವುಗಳು ಸ್ವರ್ಗಕ್ಕಿಂತ ಮಿಗಿ ಲಾದದ್ದು ಎಂದು ಘೋಷಿಸುತ್ತದೆ. ಇಂಥ ಒಂದು ಚಿಂತನೆ ಮತ್ಯಾವ ದೇಶದಲ್ಲೂ ಉದ್ಭವಿಸಲು ಸಾಧ್ಯವಿಲ್ಲ.
ಹಿಂದೆ ತೀರ್ಥಯಾತ್ರೆಯನ್ನು ಮಾಡುವ ಪರಂಪರೆ ಇತ್ತು. ಇದು ಬರೀ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮವಾಗಿರಲಿಲ್ಲ. ಈ ತೀರ್ಥಯಾತ್ರೆಯಹಕೀಕತ್ತು ಏನೆಂದರೆ ಜನರಿಗೆ ನಮ್ಮ ದೇಶದ ಮೂಲೆ ಮೂಲೆಗಳನ್ನು ಪರಿಚಯ ಮಾಡಿಸುವ ಉದ್ದೇಶ. ವೈವಿಧ್ಯಮಯ ಭೌಗೋಳಿಕ ಲಕ್ಷಣದಿಂದಕೂಡಿರುವ ಭಾರತದ ಪುಣ್ಯ ಕ್ಷೇತ್ರಗಳು, ದಕ್ಷಿಣದ ರಾಮೇಶ್ವರ, ಕಾಂಚಿ, ಉತ್ತರದ ಕಾಶಿ, ಹಿಮಾಲಯದ ಬದರಿಕಾಶ್ರಮ ಹೀಗೆ ಎಲ್ಲ ದಿಕ್ಕುಗಳಲ್ಲಿ ಈ ಕ್ಷೇತ್ರ ಗಳಿವೆ.
ಇವುಗಳನ್ನು ಅಂದಿನ ಕಾಲದಲ್ಲಿ ಕಾಲು ನಡಿಗೆಯಿಂದ ಕ್ರಮಿಸಿ ದರ್ಶನ ಭಾಗ್ಯ ಪಡೆಯುತ್ತಿದ್ದರು. ಭಾರತದ ಈ ಎಲ್ಲ ಸ್ಥಳಗಳನ್ನು ಪುಣ್ಯಕ್ಷೇತ್ರಗಳೆಂದು ಗುರುತಿಸಿ, ನಮ್ಮ ದೇಶದ ಭೂಭಾಗಗಳ ಸೌಂದರ್ಯವನ್ನು ದೈವೀಕಗೊಳಿಸಿ, ಅವುಗಳಿಗೆ ಪಾವಿತ್ರತೆಯನ್ನು ತಂದು ಕೊಡಲಾಗಿತ್ತು. ಇದು ಪಾಶ್ಚಾತ್ಯ ಸಂಸ್ಕೃತಿಗಿಂತ ಭಿನ್ನವಾದ ಚಿಂತನೆ. ಪ್ರಕೃತಿ ವೈವಿಧ್ಯಗಳನ್ನು ದೈವಿಕ ದೃಷ್ಟಿಯಿಂದ ಕಂಡು ದೇವನನ್ನಾಗಿ ಪೂಜಿಸಿದ ಪರಂಪರೆ ನಮ್ಮದು. ನಯಾಗರಾ ಜಲಪಾತ ಗಂಗಾ ನದಿಯಲ್ಲಿದ್ದಿದ್ದರೆ, ಪಾಶ್ಚಾತ್ಯರಂತೆ, ಮೋಜಿನ ತಾಣವಾಗಿರುತ್ತಿರಲಿಲ್ಲ.
ಪುಣ್ಯಸ್ಥಾನವಾಗಿ ಭಕ್ತರಿಂದ ಕೂಡಿ ಭವ್ಯತೆಯನ್ನು ಹೊಂದುತ್ತಿತ್ತು ಎಂಬುದು ಸಹೋದರಿ ನಿವೇದಿತಾ ಅವರ ಅನಿಸಿಕೆ. ತೀರ್ಥಯಾತ್ರೆ ಮಾಡುವುದನ್ನು ಒಂದು ರಾಷ್ಟ್ರೀಯ ಕರ್ತವ್ಯವನ್ನಾಗಿ ಭಾರತದ ಜನ ನಿರ್ವಹಿಸುತ್ತಿದ್ದರು. ಈ ತೀರ್ಥಯಾತ್ರೆಯ ಕಲ್ಪನೆ ಭಾರತಕ್ಕೆ ಬಹಳ ವಿಶಿಷ್ಟವಾದದ್ದು ಮತ್ತು ಮತ್ತೆಲ್ಲಿಯೂ ಇಂಥ ಒಂದು ವಿಚಾರದ ಊಹೆಯನ್ನೂ ಸಹಾ ಮಾಡಲಾಗಿಲ್ಲ. ರೈಲು, ಬಸ್ಸು, ವಿಮಾನ ನೌಕೆಗಳು ಉಪಯೋಗಕ್ಕೆ ಬರುವುದಕ್ಕೆ ಮುಂಚೆಯೇ ಜನ ತೀರ್ಥಯಾತ್ರೆಯನ್ನು ಮಾಡುತ್ತಿದ್ದರು. ನಾವು ತಿಳಿದಂತೆ ಸುಮಾರು 4-5 ತಲೆಮಾರುಗಳ ಹಿಂದೆ ನಮ್ಮ ಮುತ್ತಜ್ಜ, ಮುತ್ತಜ್ಜಿಗಳು ತೀರ್ಥಯಾತ್ರೆ ಮಾಡಿದ ವಿವರಗಳನ್ನು ನಮ್ಮ ಪೋಷಕರಿಂದ ಕೇಳಿ ತಿಳಿದಿದ್ದೇವೆ. ನಮ್ಮ ತೀರ್ಥಕ್ಷೇತ್ರಗಳ ಪಟ್ಟಿಯು ಬಹಳ ದೊಡ್ಡದಾಗಿದೆ.
ಇದರ ಜತೆಯಲ್ಲಿ ನಮ್ಮ ದೇಶದಲ್ಲಿರುವ ಬೌದ್ಧ, ಜೈನ ಮತ್ತು ಹಿಂದೂ ಧರ್ಮದ ಐತಿಹಾಸಿಕ ಸ್ಮಾರಕಗಳನ್ನು ಗಮನಿಸಿದರೆ, ಅವುಗಳು ಗುರುತಿಸಲ್ಪಟ್ಟಿ ರುವ ತಾಣಗಳು, ನಮ್ಮ ದೇಶದ ಎ ದಿಕ್ಕುಗಳಲ್ಲಿಯೂ ಇವೆ. ಏಕತೆ, ಅಖಂಡತೆಯನ್ನು ನಾವು ಎಲ್ಲೆಲ್ಲಿಯೂ ಕಾಣುತ್ತೇವೆ. ಋಗ್ವೇದದ ಕಾಲದಲ್ಲಿ ಉತ್ತರದಲ್ಲಿ ಹಿಮಚ್ಚಾದಿತವಾದ ಪರ್ವತ ಶ್ರೇಣಿಗಳಿಂದ, ಸಿಂಧೂ ನದಿ ಪಾತ್ರದಿಂದ, ದಕ್ಷಿಣದ ಸಮುದ್ರಗಳಿಂದ ಗಂಗಾ ಯಮುನಾ ನದಿಗಳ ಮಧ್ಯ ದಲ್ಲಿದ್ದ ಭೂಭಾಗವಾಗಿದ್ದ ಭಾರತದ ಎಗಳು ನಂತರ ಪುರಾಣ, ಸಾಹಿತ್ಯಗಳಲ್ಲಿ ವಿಸ್ತಾರವಾಗಿ ಕಾಣಿಸಿಕೊಂಡಿದೆ.
ಪ್ರಖ್ಯಾತ ಯ್ಯಾಕರಣಿಯಾದ ಪಾಣಿನಿ ಕೆಲವು ದಕ್ಷಿಣ ಭಾರತದ ಪ್ರಾಂತ್ಯಗಳನ್ನು ಹೆಸರಿಸಿದ್ದಾನೆ ಎಂದು ಪಂಡಿತರು ವ್ಯಾಖ್ಯಾನಿಸಿದ್ದಾರೆ. ಕೌಟಿಲ್ಯನ ಅರ್ಥಶಾಸದಲ್ಲಿ ದಕ್ಷಿಣ ಭಾರತದ ವಾಣಿಜ್ಯ ಉತ್ಪನ್ನಗಳನ್ನು ಹೆಸರಿಸಲಾಗಿದೆ. ವಾಣಿಜ್ಯ, ವ್ಯಾಪಾರದ ಮಾರ್ಗಗಳನ್ನು ಹಿಮವತ್ ಎಂದು ಉತ್ತರದ ದಿಕ್ಕಿಗೆ ಮತ್ತು ದಕ್ಷಿಣಾಪಥ ಎಂದು ದಕ್ಷಿಣ ದಿಕ್ಕಿಗೆ ಎರಡು ದಾರಿಗಳನ್ನು ಆಗಲೇ ಗುರುತುಮಾಡಲಾಗಿತ್ತು.
ಮಹಾಭಾರತದಲ್ಲಿ ದಕ್ಷಿಣ ಭಾರತದ ಪ್ರಮುಖ ರಾಜರು ಮತ್ತು ಪ್ರಾಂತ್ಯಗಳ ವಿವರಣೆ ಇದೆ ಮತ್ತು ಪಾಂಡವರಲ್ಲಿ ಒಬ್ಬನಾದ ಸಹದೇವನು, ಪಾಂಡ್ಯರು, ದ್ರಾವಿಡರು, ಕೇರಳರು ಮತ್ತು ಆಂಧ್ರರನ್ನು ಜಯಿಸಿದ್ದಾಗಿ ದಾಖಲಾಗಿದೆ. ಮಹಾಭಾರತದ ನಂತರದ ಪುರಾಣಗಳಲ್ಲಿ ಭಾರತವನ್ನು ಒಂದುಪ್ರತ್ಯೇಕ ಭೂಭಾಗವನ್ನಾಗಿ ದಾಖಲಿಸಿ ಅದನ್ನು ಒಂಭತ್ತು ಉಪಪ್ರದೇಶಗಳನ್ನಾಗಿ ವಿವರಿಸಿದ್ದಾರೆ. ವರಾಹಮಿಹಿರನೂ ಸಹ ಒಂಭತ್ತು ಭಾಗಗಳನ್ನುಹೆಸರಿಸುತ್ತಾನೆ. ಸಂಸ್ಕೃತ ಭಾಷೆಯಲ್ಲಿರುವ ಯಾವ ಗ್ರಂಥ, ಪುರಾಣ, ಮಹಾಕಾವ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೂ ಭಾರತದ ಭೂಗೋಳಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ.
ಅಶೋಕ ಚಕ್ರವರ್ತಿಯ ಚಕ್ರಾಧಿಪತ್ಯದ ಎಲ್ಲೆಗಳು ಅಫ್ಗಾನಿಸ್ತಾನದಿಂದ ಮೈಸೂರಿನವೆರೆಗೂ ವಿಸ್ತಾರವಾಗಿ ಹರಡಿತ್ತು. ಸಾವಿರಾರು ವರ್ಷಗಳ ಪರಂಪರೆ ಇರುವ ತಮಿಳಿನ ಆಳ್ವಾರುಗಳ ಪಾಶುರಂಗಳಲ್ಲಿಯೂ ಸಹ ಉತ್ತರ ಭಾರತದ ಪ್ರದೇಶಗಳ ಉಲ್ಲೇಖಗಳಿವೆ. ಇವರಲ್ಲಿ ಪ್ರಮುಖರಾದ ತಿರುಮಂಗೈ ಆಳ್ವಾರರ ಪೆರಿಯತಿರುಮೊಳಿಯಲ್ಲಿ ಉತ್ತರದ ಹಿಮಾಲಯದ ಪ್ರಸ್ತಾಪವಿರುವುದನ್ನು ನಾವು ಗುರುತಿಸಬಹುದು. ಭಾರತದ ಮತ್ತೊಂದು ವೈಶಿಷ್ಟ್ಯ ವೆಂದರೆ, ಹಿಂಗಾರು, ಮುಂಗಾರು ಮಳೆಗಳು. ಇಡೀ ಭಾರತವನ್ನು ಆವರಿಸಿಕೊಂಡು ಇಲ್ಲಿಯದೇ ಆದ ವಾತಾವರಣವನ್ನು ನಿರ್ಮಾಣ ಮಾಡಿ, ಭಾರತವನ್ನು ಒಂದು ಕೃಷಿಕ ದೇಶವನ್ನಾಗಿಸಿವೆ.
ಸುಮಾರು ಎಂಭತ್ತು ಶತಮಾನ ಕೃಷಿಯು ಭಾರತದಲ್ಲಿ ಹರಿಯುವ ನದಿಗಳಿಂದ ನೀರಾವರಿಗೆ ಒಳಪಟ್ಟಿದೆ. ಹೀಗೆ ಮೇಲೆ ಪ್ರಸ್ತಾಪಿಸಿದ ಧಾರ್ಮಿಕ, ಚಾರಿತ್ರಿಕ ಮತ್ತು ಭೌತಿಕ ದಾಖಲೆಗಳಿಂದ ಭಾರತದ ಏಕತೆಯು ಸಾಬೀತಾಗುತ್ತದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಮೇಳೈಸುವ ಭವ್ಯ ಭಾರತ ನಮ್ಮದು.ಇದೇ ಇದರ ಗುರುತು. ಬರೀ ಪುರಾಣಗಳನ್ನು ಉಲ್ಲೇಖಿಸಿ ಏಕತೆಯನ್ನು ಸಾರುವುದು ಈ ಲೇಖನದ ಉದ್ದೇಶವಲ್ಲ. ಸಂಸ್ಕೃತ, ಪುರಾಣ ಎಂದರೇನೇಮೂಗು ಮುರಿಯುವ ವಿಚಾರವಾದಿಗಳು ನಮ್ಮಲ್ಲಿ ಹೇರಳವಾಗಿದ್ದಾರೆ.
ತುಕಡೇ, ತುಕಡೇ ಗ್ಯಾಂಗುಗಳೂ ಸಹ ಇವೆ. ಆದರೆ ಇದೆಲ್ಲದರ ಮಧ್ಯೆ ನಮ್ಮ ಪರಂಪರೆ ಇನ್ನೂ ಕಂಗೊಳಿಸುತ್ತಲೇ ಇದೆ. ನಮ್ಮ ಚರಿತ್ರೆಯನ್ನು ನಾವು ಬರೆಯ ಬೇಡವೆ. ಯಾವನೋ ಆಂಗ್ಲನು ತನಗೆ ತೋಚಿದ್ದನ್ನೇ ಬರೆದು ಅದೇ ನಮ್ಮ ಚರಿತ್ರೆ ಎಂದು ಹೇಳಿದ್ದನ್ನೇ ವೇದವಾಕ್ಯವೆಂದು ಸ್ವೀಕರಿಸಿ, ಅತಿ ಬುದ್ಧಿವಂತರಂತೆ ಪೋಸು ಕೊಡುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ನಮ್ಮ ಸ್ವಂತಿಕೆಯನ್ನು ಮೇಲೆ ತರುವ ತುರ್ತು ನಮಗೆ ಅನಿವಾರ್ಯ.