ರಾಜ್ಯ ರಾಜಕೀಯದಲ್ಲಿ ಬದಲಾವಣೆ ತಂದೀತೇ ಆಪ್
ವಿಶ್ಲೇಷಣೆ
ರಮಾನಂದ ಶರ್ಮಾ
ಒಂದು ಪಕ್ಷ ಒಂದು ರಾಜ್ಯದಲ್ಲಿ ಬೇರು ಬಿಡಬೇಕಾದರೆ- ಅದರ ಹೆಸರು, ಕಾರ್ಯಕ್ರಮಗಳು ಮತ್ತು ವಿಚಾರಧಾರೆಗಳು ಆ ರಾಜ್ಯದ ನೇಟಿ ವಿಟಿಗೆ ಹೊಂದಿಕೊಳ್ಳುವಂತಿರಬೇಕು. ಪಕ್ಷದ ಹೆಸರು ಕಾಂಗ್ರೆಸ್ ಅಥವಾ ಜನತಾ ಪಕ್ಷ, ಜನತಾ ದಳದಂತೆ ಅಖಿಲ ಭಾರತ ಹೆಸರಾಗಿರಬೇಕುಅಥವಾ ನಿರ್ದಿಷ್ಟ ರಾಜ್ಯಕ್ಕೆ ಸ್ಪಂದಿಸುವಂತಿರಬೇಕು.
ದೆಹಲಿ ಮೂಲದ ಆಮ್‌ಆದ್ಮಿ ಪಕ್ಷ ಕರ್ನಾಟಕದಲ್ಲಿ ನೆಲೆ ಊರಲು ಪ್ರಯತ್ನಿಸುತ್ತಿದೆ. 2018ರ ಅದರ ಹಿರಿಯ ನಾಯಕ ಸಿಸೊಡಿಯಾ ಕರ್ನಾಟಕಕ್ಕೆ ಭೇಟಿ ನೀಡಿ, ಈ ನಿಟ್ಟಿನಲ್ಲಿ ಕಾರ್ಯ ತಂತ್ರ ರೂಪಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕರ್ನಾಟಕ ರಾಜಕೀಯದ ಉದ್ದ, ಅಗಲ  ಮತ್ತು ಆಳವನ್ನು ಅಳೆಯಲು ಪ್ರಯತ್ನಿಸಿತ್ತು. ಒಂದೆರಡು ಘಟಾನುಘಟಿಗಳನ್ನು ನಿಲ್ಲಿಸಿ ಸ್ವಲ್ಪ ಅಬ್ಬರ ತೋರಿಸಿದರೂ, ಬೇರು ಬಿಡಲು ಸಾಧ್ಯವಾಗಿಲ್ಲ.
ಉತ್ತರ ಭಾರತದಿಂದ ಬಂದ ಬಹುಜನ ಸಮಾಜವಾದಿ ಪಕ್ಷ ಮತ್ತು ಸಮಾಜವಾದಿ ಪಕ್ಷಗಳಿಗೆ ಆದ ಗತಿಯೇ ಇದಕ್ಕೂ ಆಯಿತು. ಆದರೂ, ಛಲ ಬಿಡದ ವಿಕ್ರಮನಂತೆ, ಅವರು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಈ ಬಾರಿ ಸ್ವತಃ ಆಮ್ ಆದ್ಮಿ ಪಕ್ಷದ ದಂಡನಾಯಕ ಕೇಜ್ರಿವಾಲಾರೇ ಇತ್ತೀಚೆಗೆ ದೆಹಲಿಯಿಂದ ಬೆಂಗಳೂರಿಗೆ ಬಂದು ಮರಳಿ ಯತ್ನವ ಮಾಡು ಎನ್ನುವಂತೆ ಪಂಜಾಬ್ ಯಶಸ್ಸಿನ ಅಡಿಯಲ್ಲಿ ಹೊಸ ಹುಮ್ಮನಸ್ಸಿನಿಂದ ಕಾಲಿಟ್ಟಿದ್ದಾರೆ.
ದುರ್ದೈವವೆಂದರೆ ೨೦೧೮ರ ಕಾಲಿಟ್ಟರೂ, ಇನ್ನೂ ತಳ ಊರುವ ಮೊದಲೇ ಆಂತರಿಕ ಭಿನ್ನಾಭಿಪ್ರಾಯದಿಂದ ರವಿಕೃಷ್ಣಾ ರೆಡ್ಡಿಯಂಥ ಮೊದಲನೇ ಸಾಲಿನ ಧುರೀಣರು ಪಕ್ಷ ಬಿಟ್ಟು ತೆಲಂಗಾಣ ರಾಷ್ಟ್ರೀಯ ಸಮಿತಿ ಮಾದರಿಯಲ್ಲಿ ಕರ್ನಾಟಕ ರಾಷ್ಟ್ರೀಯ ಸಮಿತಿ ಎನ್ನುವ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿ ಅದರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಕರ್ನಾಟಕದ ಪಕ್ಷವಾಗದೇ, ಕರ್ನಾಟಕದ ತೆಲುಗರ ಪಕ್ಷವಾಗಿದೆ ಎನ್ನುವ ಟೀಕೆ ಮತ್ತು ಆರೋಪಗಳು ಕೇಳಿಬಂದಿದ್ದವು.
ಕಾಲಿಟ್ಟು ಐದು ವರ್ಷಗಳಾದರೂ, ಈ ಪಕ್ಷದಿಂದ ಪ್ರಭಾವಿ ನಾಯಕರು ಇನ್ನೂ ಹೊರ ಹೊಮ್ಮಬೇಕಾಗಿದೆ. ಜನಸಾಮಾನ್ಯ ಮತದಾರರು ಗುರುತಿಸಿ ಮತಹಾಕುವ ನಾಯಕರುಗಳು ಅಲ್ಲಿ ಕಾಣುತ್ತಿಲ್ಲ. ಅಲ್ಲಲ್ಲಿ ಸಣ್ಣ ಪುಟ್ಟ ಪ್ರತಿಭಟನೆಗಳನ್ನು ನಡೆಸಿದ್ದು ಬಿಟ್ಟರೆ ಅವರ ಕಾರ್ಯಚಟುವಟಿಕೆ ಕಾಣುತ್ತಿಲ್ಲ.ಒಂದು ಪಕ್ಷ ಒಂದು ರಾಜ್ಯದಲ್ಲಿ ಬೇರು ಬಿಡಬೇಕಾದರೆ- ಅದರ ಹೆಸರು, ಕಾರ್ಯಕ್ರಮಗಳು ಮತ್ತು ವಿಚಾರಧಾರೆಗಳು ಆ ರಾಜ್ಯದ ನೇಟಿವಿಟಿಗೆ ಹೊಂದಿಕೊಳ್ಳುವಂತಿರಬೇಕು.
ಪಕ್ಷದ ಹೆಸರು ಕಾಂಗ್ರೆಸ್ ಅಥವಾ ಜನತಾ ಪಕ್ಷ, ಜನತಾ ದಳದಂತೆ ಅಖಿಲ ಭಾರತ ಹೆಸರಾಗಿರಬೇಕು ಅಥವಾ ನಿರ್ದಿಷ್ಟ ರಾಜ್ಯಕ್ಕೆ ಸ್ಪಂದಿಸುವಂತಿರಬೇಕು. ಆಮ್ ಆದ್ಮಿ ಪಕ್ಷ ಎನ್ನುವ ಹೆಸರು ಹಿಂದಿ ಭಾಷೆಯದು. ಕನ್ನಡ ಭಾಷೆಯಲ್ಲಿ ಸಮಸ್ತ ಕನ್ನಡಿಗರಿಗೂ ಅರ್ಥವಾಗುವಂತೆ ಜನ ಸಾಮಾನ್ಯ ಪಕ್ಷ ಎನ್ನಬಹುದು. ಈ ಆಮ್ ಆದ್ಮಿ ಪಕ್ಷ ಎನ್ನುವ ಹೆಸರು ಸಮಾಜದ ಮೇಲುಸ್ತರದ, ಹಿಂದಿ ಚಲನಚಿತ್ರ ಮತ್ತು ಟಿವಿಗಳನ್ನು ನೋಡುವವರಿಗೆ ಅರ್ಥವಾಗ ಬಹುದೇ ವಿನಾ ಜನಸಾಮಾನ್ಯರಿಗೆ ತಿಳಿಯದು.
ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ( ಕಾಂಗ್ರೆಸ್) ಮತ್ತು ವರಿಷ್ಠರ(ಭಾರತೀಯ ಜನತಾ ಪಕ್ಷ) ಹೆಸರಿನಲ್ಲಿ ಕರ್ನಾಟಕವನ್ನು ದೆಹಲಿ ಯಿಂದ ನಿಯಂತ್ರಿಸುತ್ತಿವೆ ಎನ್ನುವ ಆರೋಪ ಇದೆ. ನಮಗೆ ಮತ್ತು ನಮ್ಮವರಿಗೆ ದೆಹಲಿಯಲ್ಲಿ ಯಾವುದೇ ಧ್ವನಿ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ನಮ್ಮನ್ನು ಕೇವಲ ಕೈ ಎತ್ತಲು ಮಾತ್ರ ಪರಿಗಣಿಸುತ್ತಾರೆ ಎಂದು ಹೇಳಲಾಗುತ್ತದೆ. ಆಮ್ ಆದ್ಮಿ ಪಕ್ಷ ಕರ್ನಾಟಕದಲ್ಲಿ ಬೇರು ಬಿಟ್ಟರೂ ಇದೇ ಪರಿಸ್ಥಿತಿಮುಂದುವರಿಯುತ್ತದೆ. ಪಕ್ಷ ಕಟ್ಟುವುದನ್ನು ಮತ್ತು ಸ್ಥಾಪಿಸುವುದನ್ನು ತಡೆಯಲು ಸಾಧ್ಯವಿಲ್ಲ.
ಇದು ಸಂವಿಧಾನ ನೀಡಿದ ಹಕ್ಕು. ಕನ್ನಡಿಗರ ಮತ್ತು ಕರ್ನಾಟಕದ ಹಿತದ ದೃಷ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಕನ್ನಡೀಕರಣವಾಗಬೇಕು ಮತ್ತು ಅದರ ಚಟುವಟಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಇರಬೇಕು ಮತ್ತು ನಿಯಂತ್ರಣ ದೆಹಲಿಯಿಂದ ಆಗದೇ, ಬೆಂಗಳೂರಿನಿಂದ ಅಗಬೇಕು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಯಾಗಿ ಅದರ ಹೆಸರು ಜನಸಾಮಾನ್ಯ ಪಕ್ಷ ಅಥವಾ ಬೇರೆಯಾವುದಾದರೂ ಆಮ್ ಆದ್ಮಿಗೆ ಸರಿಸಮಾನವಾದ ಕಸ್ತೂರಿ ಕನ್ನಡದ ಹೆಸರು ಇರಲಿ. ಕನ್ನಡೇತರ ಹೆಸರಿನಿಂದ ಕರ್ನಾಟಕದಲ್ಲಿ ಪಕ್ಷ ಸ್ಥಾಪಿಸುವ ಸಾಹಸ ಬೇಡ. ಈ ಪಕ್ಷದ ಹಿಂದಿ ಹೆಸರನ್ನು ಕರ್ನಾಟಕದಲ್ಲಿ ಕೈಬಿಟ್ಟು ಇಲ್ಲಿನ ನಾಡು ನುಡಿ, ಸಂಸ್ಕೃತಿ ಮತ್ತು ಕನ್ನಡಿಗರ ಆಶೆ ಆಕಾಂಕ್ಷೆಗಳಿಗೆ ಸ್ಪಂದಿಸಿ ಕನ್ನಡದ ಹೆಸರನ್ನು ಇಟ್ಟುಕೊಳ್ಳಬೇಕು.
ರಾಷ್ಟ್ರೀಯ ಪಕ್ಷಗಳ ರಾಷ್ಟ್ರೀಯ ದೃಷ್ಟಿಕೋನದಿಂದ ಕರ್ನಾಟಕವು ಸಾಕಷ್ಟು ಅನುಭವಿಸಿದೆ. ಕನ್ನಡತನ ಮತ್ತು ನಮ್ಮತನ ಜಾಗೃತವಾಗಲಿ. ದೆಹಲಿಯಿಂದ ದಾಳ ಮತ್ತು ಗಾಳ ಉರುಳಿಸುವವರು ಬೇಡ. ಕರ್ನಾಟಕದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಕಟ್ಟಲು ಹೊರಟ ಬಂಗಾರಪ್ಪ, ಶಂಕರ ಬಿದರಿ ಮತ್ತು ಮಾವಳ್ಳಿ ಶಂಕರ್‌ಗೆ ಆದ ಗತಿಯೇ ಕರ್ನಾಟಕದ ಆಪ್ ಧುರೀಣರಿಗೆ ಅಗಬಹುದು. ಬಂಗಾರಪ್ಪ ತಮ್ಮ ಸ್ವಂತ ಬಲದಿಂದ ಆರಿಸಿ ಬಂದಿದ್ದರೇ ವಿನಾ ಸಮಾಜವಾದಿ ಪಕ್ಷದ ಹೆಸರು ನೆಪ ಮಾತ್ರಕ್ಕೆ ಅವರ ಹಿಂದೆ ಇತ್ತು.
ಸ್ವಾಭಿಮಾನಿಯಾದ ಅವರು ತಮ್ಮ ರಾಜ್ಯದ ಘನತೆ ಮತ್ತು ಗೌರವಕ್ಕೆ ಚ್ಯುತಿ ಆಗುತ್ತಿರುವಂತೆ ಆ ಪಕ್ಷಕ್ಕೆ ರಾಜೀನಾಮೆ ಬಿಸಾಕಿದ್ದರು. ಭಾಜಪಾದ ಗರ್ಭ ಗುಡಿ ಸಂಸ್ಕೃತಿ ಮತ್ತು ಕಾಂಗ್ರೆಸ್‌ನ ಹೈಕಮಾಂಡ್ ಹಿಡಿತವನ್ನು ಅವರು ಸದಾ ಟೀಕಿಸುತ್ತಿದ್ದರು. ರಾಜ್ಯದಿಂದ ಬಂದ ಧುರೀಣರನ್ನು ಅಂಗನವಾಡಿ ಮಕ್ಕಳಂತೆ ನಡೆಸಿಕೊಳ್ಳುವ ದೆಹಲಿ ಮೂಲದ ರಾಜಕೀಯ ಪಕ್ಷಗಳನ್ನು ಅವರು ಇಷ್ಟ ಪಡುತ್ತಿರಲಿಲ್ಲ. ಅಂತೆಯೇ ಅವರು ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷ ಹುಟ್ಟು ಹಾಕಲು ಎರಡೆರಡು ಬಾರಿ ಶ್ರಮಿಸಿದರು.
ಆಮ್ ಆದ್ಮಿ ಪಕ್ಷ ತಾನು ರಾಷ್ಟ್ರೀಯ ಪಕ್ಷವೆಂದು ಹೇಳಿಕೊಳ್ಳುತ್ತಿದ್ದರೂ, ದೆಹಲಿ ಮೂಲದ ಈ ಪಕ್ಷ ಪಂಚರಾಜ್ಯದ ಚುನಾವಣೆಯಲ್ಲಿ ಗಳಿಸಿದ ಸೀಟು ಗಳನ್ನು ಗಣನೆಗೆ ತೆಗೆದುಕೊಂಡರೆ ಈ ನಿಟ್ಟಿನಲ್ಲಿ ಅದು ಇನ್ನೂ ಬಹುದೂರವನ್ನು ಕ್ರಮಿಸಬೇಕಾಗುತ್ತದೆ ಎಂದು ಅನಿಸುತ್ತದೆ. ಚುನಾವಣಾ ಪೂರ್ವ ದಲ್ಲಿ ಇವರ ಯಶಸ್ಸಿನ ಬಗೆಗೆ ಭಾರಿ ಹೈಪ್ ಮಾಡಲಾಗಿತ್ತು. ಗೋವಾದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿಯೇ ಬಿಟ್ಟಿತು ಎಂದು ಬಿಂಬಿತವಾಗಿತ್ತು. ಕೊನೆಗೆ ಮಂತ್ರಕ್ಕಿಂತ ಉಗುಳು ಹೆಚ್ಚು ಎನ್ನುವ ಪರಿಸ್ಥಿತಿ ಅನಾವರಣವಾಯಿತು.
ಇತ್ತೀಚೆಗೆ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ಗಳು ತಮ್ಮ ರಾಜ್ಯ ಘಟಕಗಳನ್ನು ನಿಯಂತ್ರಿಸುವ ಮತ್ತು ನಿಭಾಯಿಸುವ ಬಗೆಗೆ ಒಂದು ರೀತಿಯ ಅಲರ್ಜಿ ಉಂಟಾಗಿದೆ. ಪ್ರತಿಯೊಂದಕ್ಕೂ ಹೈಕಮಾಂಡ್ ಅನುಮತಿ ಕೇಳುವ ಮತ್ತು ಎಲ್ಲವನ್ನೂ ಹೈಕಮಾಂಡ್ ಹೆಸರಿನಲ್ಲಿ ದೆಹಲಿಯಿಂದ ಮೂಗುದಾರ ಹಿಡಿಯುವ ಬಗೆಗೆ ಆಕ್ರೋಶ ವ್ಯಕ್ತಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಸಚಿವ ಸಂಪುಟ ಪುನಾರಚನೆ,ವಿಸ್ತರಣೆ ಮತ್ತು ಮುಖ್ಯಮಂತ್ರಿಗಳ ಬದಲಾವಣೆ ಬಗೆಗೆ ನಡೆಯುವ ಪ್ರಹಸನಗಳನ್ನು ನೋಡಿ ಹೇಸಿ ಹೋಗಿದ್ದಾರೆ.
ಅಕಸ್ಮಾತ್ ರಾಷ್ಟ್ರೀಯ ಪಕ್ಷ ಎಂದು ಹಣೆ ಪಟ್ಟಿಕಟ್ಟಿ ಕಟ್ಟಿಕೊಂಡಿರುವ ಆಮ್‌ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ, ಪರಿಸ್ಥಿತಿಯಲ್ಲಿ ಏನೂ ಬದಲಾವಣೆಆಗುವುದಿಲ್ಲ ಎನ್ನುವ ಚಿಂತನೆ ಕೇಳಿ ಬರುತ್ತಿದೆ. ರಾಷ್ಟ್ರೀಯತೆಯ ಹೆಸರಿನಲ್ಲಿ ಪ್ರಾದೇಶಿಕತ್ವ ಮತ್ತು ಸ್ವಾಭಿಮಾನವನ್ನು ಹತ್ತಿಕ್ಕಲಾಗುತ್ತದೆ ಎನ್ನುವ ಅತಂಕ ಕಾಡುತ್ತಿದೆ. ಇದು ಒಂದು ರೀತಿಯಲ್ಲಿ ಹಳೆ ಮದ್ಯ ಹೊಸ ಬಾಟಲಿಯಲ್ಲಿ ಎನ್ನುವಂತೆ. ಉಳಿದ ರಾಷ್ಟ್ರೀಯ ಪಕ್ಷಗಳಂತೆ ಆಪ್ ಪಕ್ಷವೂ ತನ್ನ ಆಡಳಿತವನ್ನು ದೆಹಲಿಯಲ್ಲಿಯೇ ಕೇಂದ್ರೀಕರಿಸುತ್ತದೆ ವಿನಾ ಬೆಂಗಳೂರಿಗೆ ವರ್ಗಾಯಿಸುವುದಿಲ್ಲ.
ತಮಿಳುನಾಡಿನ ಪಕ್ಷಗಳು, ಆಂಧ್ರದ ತೆಲುಗು ದೇಶಂ, ಪಂಜಾಬ್‌ನ ಅಕಾಲಿದಳ, ಬಂಗಾಳದ ತೃಣಮೂಲ ಕಾಂಗ್ರೆಸ್, ಒಡಿಶಾದ ಬಿಜು ಜನತಾದಳ,ಮಹಾರಾಷ್ಟ್ರದ ಶಿವಸೇನೆಯಂತೆ ನಮ್ಮ ರಾಜ್ಯದ ನಾಡು-ನುಡಿ, ಸಂಸ್ಕೃತಿ, ಭಾಷೆ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ವಿಷಯದಲ್ಲಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಪಕ್ಷಗಳು ಇರಬೇಕು ಎನ್ನುವ ಚಿಂತನೆ ನಿಧಾನವಾಗಿ ರಾಜ್ಯದಲ್ಲಿ ರೂಪುಗೊಳ್ಳುತ್ತಿದೆ.
ಕರ್ನಾಟಕ ಚುನಾವಣೆ ಮಾರುಕಟ್ಟೆಯಲ್ಲಿ ಇನ್ನು ಚತುಷ್ಕೋನ ಪೈಪೋಟಿ. ಈವರೆಗೆ ತ್ರಿಕೋನ ಸ್ಪರ್ಧೆ ಇರುತ್ತಿದ್ದ ಕರ್ನಾಟಕದ ಚುನಾವಣೆಯಲ್ಲಿ, ಆಮ್‌ಆದ್ಮಿ ಪಕ್ಷದ ಪ್ರವೇಶದಿಂದ ಚತುಷ್ಕೋನ ಪೈಪೋಟಿಯಾಗಲಿದೆ. ಈವರೆಗೆ ಆಟ ಆಡುತ್ತಿದ್ದ ಪಕ್ಷಗಳಿಗೆ ಅವರದೇ ಮತ ಬ್ಯಾಂಕ್ ಇದ್ದು, ಆಮ್‌ ಆದ್ಮಿ ಪಕ್ಷ ವು ಇವರ ಮತ ಬ್ಯಾಂಕ್ ಗೆ ಲಗ್ಗೆ ಇಟ್ಟು ಹೊಸತಾಗಿ ಮತಬ್ಯಾಂಕ್‌ನ್ನು ಸೃಷ್ಟಿಸಿಕೊಳ್ಳುವ ಹಿಮಾಲಯನ್ ಟಾಸ್ಕ್  ಕೈಕೊಳ್ಳಬೇಕಾಗಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿ ಇರುವುದರಿಂದ ಚುನಾವಣೆಗೆ ಅಲ್ಲಿಂದ ಫ್ರೆಂಡ್ಸ್ ಹರಿದು ಬರಬಹುದು. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಈ ಪಕ್ಷವನ್ನು ಸೇರಿದ್ದಾರೆ.
ಇನ್ನೂ ಕೆಲವು ಹಿರಿಯ ನಿವೃತ್ತ ಐಎಎಸ್, ಐಪಿಎಸ್ ಅಽಕಾರಿಗಳು ಆಮ್‌ಆದ್ಮಿಯನ್ನು ಸೇರುವ ವದಂತಿಗಳಿವೆ. ಹಾಗೆಯೇ ಕಳಂಕ ರಹಿತ ರಾಜಕಾರಣಿ ಗಳಾದ ಎ.ಟಿ.ರಾಮಸ್ವಾಮಿ ಮತ್ತು ವೈಎಸ್‌ವಿ ದತ್ತಾರಂಥವರು ಸೇರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಕೇಜ್ರಿವಾಲಾರ ದೆಹಲಿ ಆಡಳಿತದ ಬಗೆಗೆ ಭಾರಿ ಹೈಪ್ ಕೇಳುತ್ತಿದ್ದು, ಕೆಲವು ಯುವಕರು೮ವರ್ಷಗಳ ಹಿಂದೆ ಅಣ್ಣಾ ಹಜಾರೆ ಹಿಂದೆ ಹೋದಂತೆ ಕೇಜ್ರಿವಾಲರ ಪಕ್ಷದತ್ತ ಮುಖ ಮಾಡಬಹುದು.
ಕೇಜ್ರಿವಾಲಾರಿಗೆ ವೇದಿಕೆ ಏರಲು ಧುರೀಣರ ಕೊರತೆಯಾಗದಿರಬಹುದು. ಆದರೆ, ಮತದಾರರನ್ನು ಸೆಳೆಯುವ, ಪಕ್ಷವನ್ನು ಮುನ್ನಡೆಸುವ ಸ್ಥಳೀಯ ಪ್ರಭಾವಿ ನಾಯಕರು ಮತ್ತು ಭಾಜಪಾದಂಥ ಮಾತುಗಾರ ಲೀಡರುಗಳು ದೊರಕಬಹುದೇ, ಅವರಂಥ ಕಾರ್ಯಕರ್ತರು ದೊರಕಬಹುದೇ ಎನ್ನುವುದು ಮುಖ್ಯ ಪ್ರಶ್ನೆ. ಆಮ್‌ಆದ್ಮಿ ಪಕ್ಷವು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ. ಹಾಗೆಯೇ ಅಧಿಕಾರದ ಗದ್ದುಗೆ ಹಿಡಿಯುತ್ತದೆ ಎಂದು ದೃಢವಾಗಿ ಹೇಳಲಾಗದು.
ಮೂರು ಪಕ್ಷಗಳ ಅಡಳಿತ ವೈಖರಿಯಿಂದ ಅಸಹ್ಯಗೊಂಡ, ಜಿಗುಪ್ಸೆ ಹೊಂದಿದ ಕರ್ನಾಟಕದ ಮತದಾರರು ಬದಲಾವಣೆಗೆ ಇರಲಿ ಎಂದು ಆಮ್‌ಆದ್ಮಿ ಪಕ್ಷಕ್ಕೂ ಸ್ವಲ್ಪ ಕರುಣೆ ತೋರಬಹುದು. ಅಧಿಕಾರಕ್ಕೆ ಬರದಿದ್ದರೂ ಅಧಿಕಾರ ಹಿಡಿಯುವರನ್ನು ಗಡಿ ದಾಟದಂತೆ ತಡೆಯಬಹುದು. ಈ ಪರಿಸ್ಥಿತಿ ನಿರ್ಮಾಣವಾದರೆ, ಮುಂದೆ ಮೈತ್ರಿ ಸರಕಾರ ಇನ್ನೊಮ್ಮೆ ಅನಾವರಣಗೊಳ್ಳಬಹುದು. ಸ್ಥಿರ ಸರಕಾರ ಇನ್ನೊಮ್ಮೆ ಕನಸಾಗಬಹುದು.