ಪೌರ ಸೇನಾನಿಯೇ ದೇಶದ ಪ್ರಥಮ ಪ್ರಜೆಯಾಗಲಿ
ಅಭಿವ್ಯಕ್ತಿ
ಡಾ.ಬಿ.ಎ.ಎಸ್.ಶಿವಣ್ಣ
ಪ್ರಧಾನಿ ಮೋದಿಯವರು ವಾರಾಣಸಿಯಲ್ಲಿ ಪೌರ ಸೇನಾನಿಯೊಬ್ಬರ ಪಾದವನ್ನು ತೊಳೆದ ಪೂಜೆ ಮಾಡಿದ್ದರು. ಆದರೆ ಈ ಕಷ್ಟ ಜೀವಿಗಳ ಸಂಕಷ್ಟ ತೊಳೆಯುವುದಕ್ಕೆ ನಿಜವಾದ ಪ್ರಯತ್ನಗಳು ಮಾತ್ರ ನಡೆಯಲಿಲ್ಲ. ಹೀಗಾಗಿ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಈ ವರ್ಗದ ಪ್ರತಿನಿಧಿಯನ್ನು ಕಣಕ್ಕೆ ಇಳಿಸುವ ಮೂಲಕ ರಾಜಕೀಯ ಪಕ್ಷಗಳು ತಮ್ಮ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಿದೆ.
ಇದೇ ಜುಲೈ 25ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದೆ. ದೇಶದ ೧೪ನೇ ರಾಷ್ಟ್ರಪತಿ ಯಾಗಿ ಕೋವಿಂದ್ ಅವರು 2021 ಜುಲೈ 24ರಂದು ಚುನಾಯಿತರಾದರು. ದಲಿತ ಸಮುದಾಯಕ್ಕೆ ಸೇರಿದ ಕೆ.ಆರ್.ನಾರಾ ಯಣ್, ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತು ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವ ಮೂಲಕ ಶೋಷಿತ ಸಮುದಾಯಕ್ಕೆ ಒಂದು ರಾಜಕೀಯ ಸಂದೇಶವನ್ನು ನೀಡಿದ್ದು ಸರಿಯಷ್ಟೇ.
ರಾಷ್ಟ್ರಪತಿ ಸೇರಿದಂತೆ ದೇಶದ ಎಲ್ಲ ಸಂವಿಧಾನಿಕ ಹುದ್ದೆಗಳು (ನ್ಯಾಯಾಲಯವನ್ನು ಹೊರತುಪಡಿಸಿ ) ಇತ್ತೀಚಿನ ದಿನಗಳಲ್ಲಿ ರಾಜಕೀಯ ನೇಮಕಗಳಾಗುತ್ತಿರುವುದು ಸುಳ್ಳಲ್ಲ. ಅದಕ್ಕೆ ಪಕ್ಷಭೇದವೂ ಇಲ್ಲದಂತಾಗಿ ಬಿಟ್ಟಿದೆ. ಆದರೆ ದೇಶದ ಪ್ರಥಮ ಪ್ರಜೆಯ ನೇಮಕ ಸಂದರ್ಭದಲ್ಲಿ ಹೊಸ ಇತಿಹಾಸವನ್ನು ಬರೆಯುವುದಕ್ಕೆ ಇದು ಸಕಾಲವಲ್ಲವೇ? ಹೇಳಿಕೇಳಿ ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿ ಅಂತ್ಯೋದಯ ವನ್ನು ಪ್ರತಿಪಾದಿಸುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪಕ್ಷ ವಾದ ಬಿಜೆಪಿ ಈ ವರ್ಷ ರಾಷ್ಟ್ರಪತಿ ಚುನಾವಣೆ ಸಂದರ್ಭದದರೂ ಒಂದು ಹೊಸ ಕಾರ್ಯಕ್ಕೆ ನಾಂದಿ ಹಾಡಲಿ ಎಂಬುದು ಈ ಸಂದರ್ಭದ ಆಶಯ. ಏಕೆಂದರೆ ಆದರ್ಶಗಳು ಪುಸ್ತಕದ ಬದನೆಕಾಯಿ ಆಗಬಾರದಷ್ಟೇ!
ಭಾರತವನ್ನು ಹೊರತುಪಡಿಸಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ರಾಷ್ಟ್ರಪತಿಯಂಥ ಉನ್ನತ ಸ್ಥಾನಗಳಿಗೆ ತೆರೆಮರೆಯ ವ್ಯಕ್ತಿಗಳನ್ನು, ನಿಜಾರ್ಥದಲ್ಲಿ ದೀನ-ದಲಿತರನ್ನು ನೇಮಕ ಮಾಡಿದ ಅನೇಕ ದೃಷ್ಟಾಂತಗಳಿವೆ. ಹೀಗಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಪೌರ ಸೇನಾನಿಯೋಬ್ಬರನ್ನು ನೇಮಕ ಮಾಡಬೇಕೆಂಬುದು ಈ ಕಾಲದ ತುರ್ತು ಅಗತ್ಯವೂ ಹೌದು. ಮೇಲ್ನೋಟಕ್ಕೆ ಈ ಬೇಡಿಕೆ ಅತಿ ಆದರ್ಶದ್ದು ಎಂದು ಯಾರಿಗಾದರೂ ಅನಿಸಬಹುದು.
ಆದರೆ ಅದು ಅಸಾಧ್ಯವಾದುದ್ದೇನು ಅಲ್ಲ. ಅಮೆರಿಕದಂಥ ಪ್ರಪಂಚದ ಅತಿ ಮುಂದುವರಿದ ರಾಷ್ಟ್ರಗಳಲ್ಲಿ ಕಪ್ಪು ವರ್ಣೀಯ ರಾದ ಮಾರ್ಟಿನ್ ಲೂಥರ್ ಕಿಂಗ್, ಬರಾಕ್ ಓಬಾಮಾ ಅವರಂಥವರು ಅಧ್ಯಕ್ಷರಾಗಿದ್ದಾರೆ. ಬಿಜೆಪಿಯವರೇ ಬಣ್ಣಿಸುವಂತೆ ಚಹಾ ಮಾರಾಟ ಮಾರಾಟ ಮಾಡುವಾತ ದೇಶದ ಪ್ರಧಾನಿಯಾಗಿಲ್ಲವೇ?! ಹೀಗಿರುವಾಗ ಪೌರ ಸೇನಾನಿ ಅಥವಾ ಪೌರ ಸೇನಾನಿಗಳಹಿತಕ್ಕಾಗಿ ದುಡಿಯುವ ವ್ಯಕ್ತಿಯನ್ನು ರಾಷ್ಟ್ರಪತಿ ಚುನಾವಣೆಯ ಕಣಕ್ಕೆ ಇಳಿಸಿದರೆ ತಪ್ಪೇನು? ಇದು ಬಿಜೆಪಿಗೆ ಮಾತ್ರ ಮಾಡುವ ಆಗ್ರಹವಲ್ಲ.
ಇದು ಕಾಂಗ್ರೆಸ್ ಹಾಗೂ ಮತ್ತಿತ್ತರ ಪಕ್ಷಕ್ಕೂ ಅನ್ವಯ. ಆದರೆ ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಮತ್ತು ಈ ಚುನಾವಣೆ ಗೆಲ್ಲುವುದಕ್ಕೆ ಅಗತ್ಯ ಸಂಖ್ಯಾ ಬಲ ಎನ್‌ಡಿಎ ಮೈತ್ರಿಕೂಟಕ್ಕೆ ಇರುವುದರಿಂದ ಈ ಆಗ್ರಹ ಬಿಜೆಪಿಗೆ ಹೆಚ್ಚು ಅನ್ವಯ ಎಂದುಪ್ರತ್ಯೇಕವಾಗಿ ಹೇಳಬೇಕಿಲ್ಲ. ಏಕೆ ಮಾಡಬೇಕು? ಅಷ್ಟಕ್ಕೂ ಪೌರ ಸೇನಾನಿಗಳನ್ನೇ ಅಥವಾ ಅವರ ಹಿತಕ್ಕಾಗಿ  ದುಡಿಯುವವ ರನ್ನೇ ಈ ಹುದ್ದೆಗೆ ನೇಮಕ ಮಾಡಬೇಕೆಂಬ ಆಗ್ರಹಕ್ಕೂ ಒಂದು ಅರ್ಥವಿದೆ.
ದೇಶದ ರಾಜಧಾನಿ ದಿಲ್ಲಿಯೂ ಸೇರಿದಂತೆ ನಮ್ಮ ನಗರ -ಪಟ್ಟಣ ಪ್ರದೇಶಗಳನ್ನು ಶುಚಿಯಾಗಿ ಇಡುವವರು ಇದೇ ಪೌರಸೇನಾನಿಗಳು. ಅವರಿಲ್ಲದೇ ಇದ್ದರೆ ನಮ್ಮ ನಗರಗಳ ಪರಿಸ್ಥಿತಿಯನ್ನು ಊಹಿಸುವುದಕ್ಕೂ ಅಸಾಧ್ಯ. ಇದೇ ಬಿಜೆಪಿ ಸರಕಾರ ಹಿಂದೆ ಅಧಿಕಾರದಲ್ಲಿದ್ದಾಗ ಪೌರ ಸೇನಾನಿಗಳ ಬೇಡಿಕೆಯನ್ನು ಈಡೇರಿಸಲಾಗದೇ ಅವರು ಪ್ರತಿಭಟನೆ ನಡೆಸಿದ್ದರಿಂದ ಬೆಂಗಳೂರು ‘ಗಾರ್ಬೇಜ್ ಸಿಟಿ’ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಬಣ್ಣಿಸಿದ್ದು ನಮ್ಮ ಕಣ್ಣ ಮುಂದೆಯೇ ಇದೆ.
ಪೌರ ಸೇನಾನಿಗಳು ಇಲ್ಲದೇ ಇದ್ದರೆ ನಮ್ಮ ದಿನನಿತ್ಯದ ಬದುಕು ಅಸಹನೀಯವಾಗಿ ಬಿಡುತ್ತದೆ. ಆದರೆ ಸಮಾಜದ ಕೊಳೆತೊಳೆಯುವ ಈ ವರ್ಗಕ್ಕೆ ನಾವು ನಿಜವಾಗಿಯೂ ಏನಾದರೂ ಮಾಡಿದ್ದೇವೆಯೇ? ವೇತನ, ಭತ್ಯೆ ಇತ್ಯಾದಿಗಳನ್ನು ಹೊರತುಪಡಿಸಿಯೂ ಈ ವರ್ಗದ ಪ್ರತಿನಿಧಿಗಳಿಗೆ ಒಂದು ಗೌರವಯುತ ಸೇವೆ ಮಾಡುವ ಹೊಣೆಗಾರಿಕೆ ಎಲ್ಲ ರಾಜಕೀಯ ಪಕ್ಷಗಳಿಗೂ ಇದೆ. ಈ ಬೇಡಿಕೆಯನ್ನು ಕೇಂದ್ರದ ಬಿಜೆಪಿ ಸರಕಾರದ ಮುಂದೆ ಇಡುವುದಕ್ಕೆ ಒಂದು ಸಕಾರಣವೂ ಇದೆ. ಈ ಹಿಂದೆ ಅಂದರೆ 2019ರ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯಲ್ಲಿ ಪೌರ ಸೇನಾನಿಯೊಬ್ಬರ ಪಾದವನ್ನು ತೊಳೆದ ಪೂಜೆ ಮಾಡಿದ್ದರು.
ಆ ಸಂದರ್ಭದಲ್ಲಿ ಈ ಸುದ್ದಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚೆಯಾಗಿ, ಅಷ್ಟಕ್ಕೆ ಕೊನೆಯಾಯಿತು. ಆದರೆ ಈ ಕಷ್ಟ ಜೀವಿಗಳ ಸಂಕಷ್ಟ ತೊಳೆಯುವುದಕ್ಕೆ ನಿಜವಾದ ಪ್ರಯತ್ನಗಳು ಮಾತ್ರ ನಡೆಯಲಿಲ್ಲ. ಹೀಗಾಗಿ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಈ ವರ್ಗದ ಪ್ರತಿನಿಧಿಯನ್ನು ಕಣಕ್ಕೆ ಇಳಿಸುವ ಮೂಲಕ ರಾಜಕೀಯ ಪಕ್ಷಗಳು ತಮ್ಮ ಪ್ರಾಯಶ್ಚಿತ್ತವನ್ನುಮಾಡಿಕೊಳ್ಳಬೇಕಿದೆ.
ಭಾರತದಲ್ಲಿ ಈ ಹಿಂದೆ ತಲೆಯ ಮೇಲೆ ಮಲ ಹೊರುವ ಪದ್ಧತಿ ಇತ್ತು. ಸರಕಾರ ಇದನ್ನು ಕಾನೂನುಬದ್ಧವಾಗಿ ನಿಷೇಧಿಸಿದೆ ಯಾದರೂ ದೇಶದ ಎಷ್ಟೋ ಭಾಗಗಳಲ್ಲಿ ಈ ವ್ಯವಸ್ಥೆ ಇನ್ನೂ ಜೀವಂಥವಾಗಿದೆ. ಅನ್ಯರ ಅಶುಚಿಯನ್ನು ನಮ್ಮ-ನಿಮ್ಮಂಥ ಮನುಷ್ಯರೇ ಆದವರು ಇನ್ನೂ ಬಳಿಯುತ್ತಿದ್ದಾರೆ ಎಂದರೆ ಅದು ಭಾರತೀಯ ಸಮಾಜ ತಲೆತಗ್ಗಿಸುವ ವಿಚಾರವಲ್ಲವೇ? ಈ ಹಿನ್ನೆಲೆಯಲ್ಲಿ ಅಮೆರಿಕ, ರಷ್ಯಾ, ಯುರೋಪ್‌ನಂಥ ರಾಷ್ಟ್ರಗಳಲ್ಲಿ ಇರುವಂಥ ಯಾಂತ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತರ ಬೇಕೆಂಬ ಬೇಡಿಕೆಯೇ ಇನ್ನೂ ಪೂರ್ಣವಾಗಿಲ್ಲ.
ದೇಶದ ಆರೋಗ್ಯ ಕಾಪಾಡುವ ಪೌರಸೇನಾನಿಗಳಿಗೆ ‘ಭಾರತರತ್ನ’ದಂಥ ಪ್ರಶಸ್ತಿ ನೀಡಿ ಆ ವರ್ಗದ ಜನರಲ್ಲಿ ಆತ್ಮವಿಶ್ವಾಸ ಹಾಗೂ ತಲೆಯೆತ್ತಿ ನಿಲ್ಲುವ ಚೈತನ್ಯ ನೀಡಬೇಕೆಂಬ ಬೇಡಿಕೆಯನ್ನೂ ಕೇಂದ್ರ ಸರಕಾರ ಮನ್ನಿಸಿಲ್ಲ. ಇನ್ನು ರಾಜ್ಯಸಭೆ, ವಿಧಾನ ಸಭೆ, ವಿಧಾನಪರಿಷತ್ತಿನಲ್ಲಿ ಪೌರ ಸೇನಾನಿಗಳಿಗೆ ಸ್ಥಾನ ನೀಡಿ ಎಂದು ಒತ್ತಾಯಿಸಿದರೆ ರಾಜಕೀಯ ಪಕ್ಷಗಳು ಕಿವಿಗೆ ಹಾಕಿಕೊಳ್ಳು ವುದಿಲ್ಲ. ಅಂಥ ಪ್ರಯತ್ನವನ್ನು ತಡೆಯುವ ಪಟ್ಟಭದ್ರ ಹಿತಾಸಕ್ತಿಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಇದೆ ಎಂದು ಪ್ರತ್ಯೇಕ ವಾಗಿ ವಿವರಿಸಬೇಕಿಲ್ಲ.
ಹೀಗಾಗಿ ಈ ಬಾರಿ ರಾಷ್ಟ್ರಪತಿ ಚುನಾವಣೆ ಸಂದರ್ಭ ದಲ್ಲಿ ಪೌರಸೇನಾನಿಗಳನ್ನು ಪರಿಗಣಿಸುವ ದೊಡ್ಡ ಹೊಣೆಗಾರಿಕೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇದೆ. ಅಷ್ಟಕ್ಕೂ ಇದೇನೂ ಅಸಾಧ್ಯವಾದ ಮಾತೇನು ಅಲ್ಲ. ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ತೆರೆಮರೆಯಲ್ಲಿ ಇರುವ ಅಜ್ಞಾತ ವ್ಯಕ್ತಿಗಳನ್ನು ನೇಮಕ ಮಾಡಿದ್ದೇವೆ ಎಂದು ಬೀಗುವ, ಆ ಮೂಲಕ ರಾಜಕೀಯ ಮೈಲೇಜ್ ಪಡೆಯುತ್ತಿರುವ ಬಿಜೆಪಿಗೆ ಇದು ಕಷ್ಟದ ಕೆಲಸವೂ ಅಲ್ಲ.
ದೇಶದಲ್ಲಿ ಇಂದಿಗೂ ಪೌರ ಸೇನಾನಿಗಳೇ ಮಲದ ಗುಂಡಿಗೆ ಇಳಿದು ಶುಚಿ ಮಾಡುತ್ತಿzರೆ. ಆ ಸಂದರ್ಭದಲ್ಲಿ ವಿಷಾನಿಲ ಸೇವಿಸಿ ಮೃತಪಟ್ಟ ದುರ್ದೈವಿಗಳ ಸಂಖ್ಯೆಗೆ ಲೆಕ್ಕವಿಲ್ಲ. ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ಅದೆಷ್ಟೋ ಪ್ರಕರಣಗಳು ನಡೆದಿವೆ. ಈ ಕರ್ಮ ಕಳೆದುಕೊಳ್ಳುವ ಹೊಣೆ ಯಾರಿಗೆ ಹೇಳಿ? 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು ಮೊಳಗಿಸಿದ ‘ಅಚ್ಛೇ ದಿನ್ ಆನೇವಾಲೇ ಹೈ’ ಎಂಬ ಘೋಷಣೆಯನ್ನು ಇನ್ನೂ ಜನ ಮರೆತಿಲ್ಲ.
ಬಡವರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂಪಾಯಿ ಜಮೆ ಮಾಡುತ್ತೇವೆ ಎಂಬ ಘೋಷಣೆ ಇನ್ನೂ ಮರೀಚಿಕೆಯಾಗಿದೆ. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಪ್ರಧಾನಿಗಳು ಕಣ್ಣೀರು ಹಾಕಿದ ಚಿತ್ರ ಜನರ ಚಿತ್ತಭಿತ್ತಿಯಲ್ಲಿ ಇನ್ನೂ ಹಸುರಾಗಿಯೇ ಇದೆ. ಆದರೆ ಬಿಜೆಪಿ ಈ ಯಾವ ಮಾತುಗಳನ್ನೂ ಸತ್ಯವಾಗಿಸುವ ಪ್ರಯತ್ನ ನಡೆಸಿಲ್ಲ. ದಿನಬೆಳಗಾದರೆ ಧರ್ಮ -ದೇವರು ಇತ್ಯಾದಿ ಭಾವನಾತ್ಮಕ ವಿಚಾರಗಳನ್ನೇ ಪ್ರತಿಪಾದಿಸಿ ಚುನಾವಣೆ ಗೆಲ್ಲುವ ತಂತ್ರ ನಡೆಸಲಾಗುತ್ತಿದೆ. ಹಾಗಾದರೆ ಬಿಜೆಪಿಗರೇ ಯಾವುದುಧರ್ಮ? ಯಾರು ದೇವರು? ನನಗೆ ಈ ಸಂದರ್ಭಲ್ಲಿ ರಾಷ್ಟ್ರಕವಿ ದಿ. ಜಿ.ಎಸ್. ಶಿವರುದ್ರಪ್ಪನವರ ಕವನವೊಂದು ನೆನಪಿಗೆ ಬರುತ್ತಿದೆ.
‘ಉಡುಗಣ ವೇಷ್ಟಿತ, ಚಂದ್ರಶುಶೋಭಿತ ದಿವ್ಯಾಂಬರ ಸಂಚಾರಿ, ಕಣ್ಣ ನೀರಿನಲಿ,ಮಣ್ಣ ಧೂಳಿನಲ್ಲಿ ಹೊರಳುತ್ತಿರುವ ಸಹಚಾರಿ’ ದೇವರು ಎಲ್ಲಿದ್ದಾನೆ ಎಂದರೆ ಈ ನೊಂದ, ಬೆಂದ ಹೃದಯದಲ್ಲಿ. ಅವರಿಗಾಗಿ ಮಿಡಿಯುವುದೇ ಧರ್ಮ. ಪೌರಸೇನಾನಿಗೆ ದೇಶದಪ್ರಥಮ ಪ್ರಜೆಯ ಗೌರವ ಕೊಡುವ ಧರ್ಮವನ್ನು ಹೊಣೆಗಾರಿಕೆಯನ್ನು ಬಿಜೆಪಿ ಪಾಲಿಸುವುದೇ?
(ಲೇಖಕರು ಅಧ್ಯಕ್ಷರು ಲೋಹಿಯಾ ವಿಚಾರ ವೇದಿಕೆ)