ಸಮಾಧಾನದಿಂದ ಸಾಯೋದು ಹೇಗೆ ?
ಅಭಿವ್ಯಕ್ತಿ
ಡಾ|| ಕೆ.ಪಿ.ಪುತ್ತೂರಾಯ
ಕೆಲವು ಪುಣ್ಯಾತ್ಮರು ಕ್ಷಣಾರ್ಧದಲ್ಲಿ ಸುಖ ಮರಣವನ್ನಪ್ಪಿದರೆ, ಇನ್ನು ಕೆಲವರು ಪಡಬಾರದ ಕಷ್ಟ ನಷ್ಟಗಳನ್ನು ಸಹಿಸಲಾರದ ನೋವು ಬೇನೆಗಳನ್ನುಅನುಭವಿಸಿ, ಅತೃಪ್ತಿಯ, ಅಸಮಾಧಾನದ ನಿಟ್ಟುಸಿರನ್ನು ಬಿಡುತ್ತಾ ಸಾಯುತ್ತಾರೆ. ಒಟ್ಟಿನಲ್ಲಿ ಒಂದು ದಿನ ಸಾಯೋದಂತೂ ಇದ್ದೇ ಇದೆ.
‘ಈಗಲೇ ಏಕೆ ಈ ಮಾತು? ಮುಂದೆ ಎಲ್ಲೋ ಒಂದು ಕಡೆ ಹಳ್ಳ ಬರುತ್ತೇಂತ ಈಗಿಂದಲೇ ಪಂಚೆಯನ್ನು ಮೇಲೆ ಎತ್ತಿ ಕೊಳ್ಳಬೇಕಾ? ಅಂತೆಯೇ ಮುಂದೆ ಎಂದೋ ಒಂದು ದಿನ ಸಾಯುವವನಿದ್ದೇನೆ ಎಂದು ಚಿಂತಿಸುತ್ತಾ ಈಗಿಂದಲೇ ತಲೆಕೆಡಿಸಿಕೊಳ್ಳಬೇಕಾ? ಸಾವು ಬಂದಾಗ ಸತ್ತರಾಯಿತು. ಅಲ್ಲಿಯವರೆಗೆ ನೆಮ್ಮದಿಯಾಗಿ ಇರೋಣ’ ಎಂದು ನೀವು ವಾದಿಸಬಹುದು.
ಇದಕ್ಕೆ ನೀವು ‘ಮುಂದೇನೋ, ಮತ್ತೇನೋ ಇಂದಿಗಾ ಮಾತೇಕೆ? ಸಂದರ್ಭ ಬರಲಿ, ಬಂದಾಗ ಮಾಡೋಣ ಅವುಗಳ ಚಿಂತೆ. ಹೊಂದಿಸುವವನಾರೋ ನಿನ್ನಾಳಲ್ಲ; ಬೇರಿಹನು ಇಂದಿಗಿಂದನು ಬದುಕು ತಿಮ್ಮ’ ಎಂಬ ಡಿ.ವಿ.ಜಿ.ಯವರ ಮಾತನ್ನೂ ಸೇರಿಸಿಕೊಳ್ಳಬಹುದು. ಆದರೆ ಅದು ಹಾಗಲ್ಲ; ‘ಜಾತಸ್ಯ ಮರಣಂ ಧ್ರುವಂ’ ಎಂಬಂತೆ, ಜನಿಸಿದವರಿಗೆಲ್ಲಾ ಮರಣ ಶತಸಿದ್ಧವೆಂಬ ಕಟು ಸತ್ಯವನ್ನು ನಾವು ಮರೆಯಲು ಇಚ್ಚಿಸಿದರೂ, ಯತ್ನಿಸಿದರೂ ಅದು ಎಲ್ಲರಿಗೂ ಎಲ್ಲೋ ಒಂದು ಕಡೆಯಿಂದ ಹೊಂಚು ಹಾಕುತ್ತಲೇ ಇರುತ್ತದೆ. ಸಾವು ಎಂಬುದು ಯಾರಿಗೆ, ಯಾವಾಗ, ಎಲ್ಲಿ ಯಾವ ರೀತಿಯಲ್ಲಿ ಸಂಭವಿಸುತ್ತದೆ ಎಂಬುಂದು ಯಾರಿಗೂ ತಿಳಿಯದ ವಿಚಾರ.
ಇಂದು ಇದ್ದವರೂ ನಾಳೆಯೂ ಇದ್ದೇ ಇರುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಎಂತಹ ಧನವಂತನೂ ಒಂದು ದಿನ ನಿಧನನಾಗುತ್ತಾನೆ; ಭಾರಿ ಹಣವಂತನೂ ಒಂದು ದಿನ ಹೆಣವಾಗುತ್ತಾನೆ; ನೂರಾರು ಹೆಣಗಳನ್ನು ಸುಟ್ಟವನ ಹೆಣವನ್ನೂ ಜನ ಸುಡುತ್ತಾರೆ. ಅಂತೆಯೇ ಹಲವಾರು ಜೀವಗಳನ್ನು ಉಳಿಸಿದ ವೈದ್ಯನೂ ತನ್ನ ಜೀವವನ್ನೇ ಉಳಿಸಿಕೊಳ್ಳಲಾಗದೆ ಒಂದು ದಿನ ಸಾಯುತ್ತಾನೆ. ‘ಅವ ಸತ್ತ’ ಎಂದರೆ, ಸಾಯಲೇ ಬಾರದವ ಸತ್ತನೆಂಬ ಅರ್ಥವಲ್ಲ. ಎಂದೋ ಒಂದು ದಿನ ಸಾಯಲೇ ಬೇಕಾದವ ಇಂದೇ ಸತ್ತು ಬಿಟ್ಟನೆಂಬ ಅರ್ಥ.
ಹಾಗೇನಿಲ್ಲವೆಂದರೂ, ಬದುಕಿರುವವರಿಗೆ ಸಾವಿನ ಚಿಂತೆ, ಸಾಯುವವರಿಗೆ ಇನ್ನೂ ಬದುಕುವ ಚಿಂತೆ; ಒಟ್ಟಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ಚಿಂತೆ ತಪ್ಪಿದ್ದಲ್ಲ! ಹುಟ್ಟುವಾಗ ಇನ್ನೊಬ್ಬರಿಗೆ ನೋವನ್ನಿತ್ತು ಹುಟ್ಟುತ್ತೇವೆ. ಆದರೆ ಸಾಯುವಾಗ ನಮ್ಮ ನೋವಿನಲ್ಲೇ ಸಾಯುತ್ತೇವೆ. ಕೆಲವು ಪುಣ್ಯಾತ್ಮರು ಕ್ಷಣಾರ್ಧದಲ್ಲಿ ಸುಖ ಮರಣವನ್ನಪ್ಪಿದರೆ, ಇನ್ನು ಕೆಲವರು ಪಡಬಾರದ ಕಷ್ಟ ನಷ್ಟಗಳನ್ನು ಸಹಿಸಲಾರದ ನೋವು ಬೇನೆಗಳನ್ನು ಅನುಭವಿಸಿ, ಅತೃಪ್ತಿಯ ಅಸಮಾಧಾನದ ನಿಟ್ಟುಸಿ ರನ್ನು ಬಿಡುತ್ತಾ ಸಾಯುತ್ತಾರೆ.
ಒಟ್ಟಿನಲ್ಲಿ ಒಂದು ದಿನ ಸಾಯೋದಂತೂ ಇದ್ದೇ ಇದೆ. ಅಂದ ಮೇಲೆ ಒಂದಲ್ಲ ಒಂದು ದಿನ ನಮ್ಮ ಮನೆಯ ಬಾಗಿಲ ಕದವನ್ನು ತಟ್ಟಲಿರುವ ಸಾವನ್ನು ಸ್ವಾಗತಿ ಸಲು ಹಾಗೂ ಸಂತೋಷ ಸಮಾಧಾನದಿಂದ ಸಾಯಲು ಬೇಕಾದ ಸಿದ್ಧತೆಯನ್ನು ಮನೋಸ್ಥಿತಿಯನ್ನು ಮುಂಚಿನಿಂದಲೇ ಏಕೆ ನಿರ್ಮಿಸಿಕೊಳ್ಳಬಾರದು? ಇದು ಅಷ್ಟೊಂದು ಸುಲಭಸಾಧ್ಯವಲ್ಲದ, ಎಲ್ಲರ ಸೌಭಾಗ್ಯದಲ್ಲಿಯೂ ಇಲ್ಲದ ವಿಚಾರವಾದರೂ ಕೆಲವೊಂದು ಪರಿಜ್ಞಾನದಿಂದ, ಪೂರ್ವ ತಯಾರಿಯಿಂದ ಸಾಧ್ಯಮಾಡಿಕೊಳ್ಳಬಹುದು.
ಕೆಲವು ಜೀವನ ಸತ್ಯಗಳನ್ನು ಅರಿತುಕೊಂಡು ಒಪ್ಪಿಕೊಳ್ಳುವುದರಿಂದ. ಹೌದು ಸಾವು ಯಾರಿಗೂ ಬೇಡ; ಸಾಯಲು ಯಾರಿಗೂ ಇಷ್ಟವಿಲ್ಲ, ಸಾವಿನ ಬಗ್ಗೆ ಬರೇ ಮಾತನಾಡಿದರೆ ಸಾಕು ‘ಅಪಶಕುನ ಬಿಡ್ತು ಅನ್ನು’ ಎನ್ನುತ್ತಾ ಜನ ನಮ್ಮ ಬಾಯಿ ಮುಚ್ಚಿಸುತ್ತಾರೆ. ಅಜ್ಜಿಯ ದೇಹ ಸ್ಥಿತಿಯನ್ನು ಪರೀಕ್ಷಿಸಿದ ವೈದ್ಯ ಮನೆಯವರಿಗೆ ಹೇಳುತ್ತಾನೆ. ‘ನಿಮ್ಮಜ್ಜಿಯ ಆರೋಗ್ಯ ತೀರಾ ಹದಗೆಟ್ಟಿದೆ, ಆಕೆಯ ಅಂತ್ಯಕಾಲ ಸಮೀಪಿಸುತ್ತಿದೆ. ಮುಂದಿನ ಏರ್ಪಾಡು ಮಾಡಿಕೊಳ್ಳಿರಿ.’ ಆದರೂ ಮನೆ ಮಂದಿ ಅಜ್ಜಿಯನ್ನು ಕೇಳುತ್ತಾರೆ. ‘ಅಜ್ಜೀ ನಿನ್ನದೇನಾದರೂ ಕೊನೆ ಆಸೆ ಇದೆಯಾ?’ ತಕ್ಷಣ ಎಚ್ಚೆತ್ತುಕೊಂಡ ಅಜ್ಜಿ ಹೇಳುತ್ತಾಳೆ ‘ಮೂರ್ಖರೇ ಸಮಯ ವ್ಯರ್ಥ ಮಾಡಬೇಡಿ; ಈ ಡಾಕ್ಟರ್‌ಗಿಂತಲೂ ಬೇರೆ ಒಳ್ಳೆಯ ಡಾಕ್ಟರ್ ಇದ್ದರೆ ಅವನನ್ನು ಕೂಡಲೇ ಕರಕೊಂಡು ಬನ್ನಿ.’
ಇದು ಎಲ್ಲರಲ್ಲಿರುವ ಬದುಕುಳಿಯುವ ಆಸೆಯನ್ನು ಎತ್ತಿ ತೋರಿಸುತ್ತದೆ. ಆದರೆ, ಹಣ್ಣೆಲೆ ಉದುರದೆ, ಹೊಸ ಎಲೆ ಚಿಗುರುವುದೆಂತು? ಈ ಜಗತ್ತಿಗೆ ಬಂದವರೆಲ್ಲ ಒಂದಲ್ಲ ಒಂದು ದಿನ ಹೊರಟು ಹೋಗಲೇಬೇಕು. ಸೃಷ್ಟಿ-ಸ್ಥಿತಿ-ಲಯಗಳಿಂದ ಪ್ರಕೃತಿಯ ನಿಯಮದಡಿ, ಈ ಜಗತ್ತಿಗೆ ಬರುವ ಪ್ರತಿಯೊಂದು ಜೀವಿಯೂ ಜನನ-ಜೀವನ ಮರಣಗಳೆಂಬ ಅವಸ್ಥೆಗಳನ್ನು ಅನುಭವಿಸಲೇಬೇಕು. ಇದಕ್ಕೆ ಯಾರೂ ಹೊರತಲ್ಲ. ಈ ಸತ್ಯವನ್ನರಿತೇ ‘ಅದ್ಯಾಕೆ ಜನರಿಗೆ ನಾನೆಂದರೆ ಭಯ-ಬೇಜಾರು, ನೀನೆಂದರೆ ಅಷ್ಟೊಂದು ಪ್ರೀತಿ?’ ಎಂಬ ಸಾವು ಕೇಳಿದ ಪ್ರಶ್ನೆಗೆ ಬದುಕು ಹೇಳಿತು, ‘ಏಕೆಂದರೆ ನೀನೊಂದು ಕಠೋರ ಸತ್ಯ.
ನಾನಾದರೋ ಒಂದು ಸುಂದರ ಸುಳ್ಳು.’ ನಾನೊಬ್ಬನೇ ಅಲ್ಲ, ಈ ಜಗತ್ತಿನಲ್ಲಿ ಎಲ್ಲರೂ ಸಾಯಲಿರುವವರೇ, ಯಾರೂ ಸೃಷ್ಟಿಯ ನಿಯಮಕ್ಕೆ ಹೊರತಲ್ಲ ಎಂಬಸತ್ಯದ ಅರಿವಾದಾಗ ಮನಸ್ಸಿಗೆ ಏನೋ ಒಂದು ಸಮಾಧಾನವಾಗಿ, ನಿರಾತಂಕದಿಂದ ಸಾಯಲು ಸುಲಭ ಸಾಧ್ಯವಾಗುತ್ತದೆ. ಇಲ್ಲಿರೋದು ಸುಮ್ಮನೆ ಅಲ್ಲಿದೆ ನಮ್ಮನೆ ಎಂಬುದಾಗಿ ದಾಸರು ತಿಳಿಸಿದ ಮೋಕ್ಷವನ್ನು ಸೇರಲು ಬೇಕಾದ ಪುಣ್ಯವೆಂಬ ಕರೆನ್ಸಿಯನ್ನು ಜೀವದಲ್ಲಿರುವಾಗಲೇ ಸಂಪಾದಿಸಿದಾಗಲೂಸಂತೋಷ ದಿಂದ ಸಾಯಬಹುದು.
ಸಾಂಸಾರಿಕವಾಗಿ ಗೃಹಸ್ಥಾಶ್ರಮದ ನಿಯಮದಡಿ ನಮ್ಮ ಪಾಲಿಗೆ ಬಂದಿರುವ ಕರ್ತವ್ಯ ಜವಾಬ್ದಾರಿಗಳನ್ನು ನಿರ್ವಹಿಸಿ, ನಿಶ್ಚಿಂತರಾದಾಗ, ಸಂತೋಷವಾಗಿ ಸಾಯಲು ಸುಲಭ ಸಾಧ್ಯ. ಅದು ನಮ್ಮನ್ನೇ ನಂಬಿದ ನಮ್ಮ ಮಕ್ಕಳ ಪಾಲನೆ-ಪೋಷಣೆ, ವಿಧ್ಯಾಭ್ಯಾಸ, ವಿವಾಹಗಳೇ ಇರಬಹುದು. ಇಲ್ಲವೇ ನಮ್ಮ ಕಾಲಾ ನಂತರ ಕೈಹಿಡಿದ ಬಾಳಸಂಗಾತಿಗೆ ಅಳಿದುಳಿದ ಜೀವನ ನಿರ್ವಹಿಸಲು ಬೇಕಾದ ಸೂಕ್ತ ವ್ಯವಸ್ಥೆಯೇ ಇರಬಹುದು. ಒಟ್ಟಿನಲ್ಲಿ ಹೊಣೆಗಾರಿಕೆಗಳಿಂದ ಮುಕ್ತರಾ ದಾಗ ಸುಖಾಂತ್ಯವನ್ನು ಕಾಣಲು ಸುಲಭ ಸಾಧ್ಯ.
ಸಾಮಾಜಿಕವಾಗಿ ಸಾಕಷ್ಟು ಸತ್ಕಾರ್ಯಗಳನ್ನು ಗೈದು ಸಮಾಜ ಸೇವೆಯನ್ನು ಮಾಡಿ ಸಮಾಜ ಋಣದಿಂದ ಮುಕ್ತರಾಗಿ ಇಲ್ಲವೇ ತಮ್ಮ ವೃತ್ತಿ ಜೀವನವನ್ನು ಪಾರದರ್ಶಕವಾಗಿ, ಪೂರೈಸಿ ಜೀವನವನ್ನು ಸಾರ್ಥಕ ಮಾಡಿಕೊಂಡಾಗಲೂ, ಸಾವು ಬೇಸರ ತರಿಸದು. ಸಾಯೋದಕ್ಕೆ ಮುನ್ನ ನಾವು ಈ ಪ್ರಪಂಚಕ್ಕೆ ಏನಾ ದರೂ ಒಳ್ಳೆಯದನ್ನು ಮಾಡಿ ಹೋಗಬೇಕು ಹಾಗೂ ನಾನು ಸತ್ತು ಹೋದರೂ ದೇಶ/ಜನ ಮರೆಯದಂಥ ಕಾರ್ಯವನ್ನು ಮಾಡಬೇಕೆಂಬ ಸಂಕಲ್ಪವನ್ನು ಮಾಡಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಯಶಸ್ವಿಯಾಗಲೂ ಸಂತೋಷ ಸಮಾಧಾನದಿಂದ ಸಾಯುವ ಮರಣ ನಮ್ಮದಾಗುತ್ತದೆ.
ನಾವು ಎಷ್ಟು ಜನರಿಂದ ಉಪಕೃತರಾಗಿದ್ದೇವೆ ಅನ್ನೋದಕ್ಕಿಂತಲೂ ಎಷ್ಟು ಜನರಿಗೆ ಉಪಕಾರಿಗಳಾಗಿದ್ದೇವೆ ಅನ್ನೋದೇ ನಮ್ಮ ಜೀವನದ ಸಾರ್ಥಕತೆಯ ಅಳತೆಗೋಲು. ಈ ದೃಷ್ಟಿಯಲ್ಲಿ ‘ಪರೋಪಕಾರ್ಥಾಯ ಇದಂ ಶರೀರಂ’ ಎಂದು ತಿಳಿದು ನಾವು ಪ್ರತಿ-ಲಾಪೇಕ್ಷೆ, ಪ್ರಚಾರವಿಲ್ಲದೆ ಪರೋಪಕಾರಿ ಗಳಾದಾಗಲೂ, ಸಂತೃಪ್ತಿಯ ಭಾವದ ಮರಣ ನಮ್ಮದಾಗಿರುತ್ತದೆ.
ಕಾರಣ ಅರಳಿದಾಗಲೇ ಹೂವಿಗೆ ಮುಕ್ತಿ; ಬದುಕು ಸಾರ್ಥಕವಾದಾಗಲೇ ಬಾಳಿಗೆ ಮುಕ್ತಿ. ವೃದ್ಧಾಪ್ಯವನ್ನು ಸಮಸ್ಯೆಯಾಗಿ ಅಲ್ಲ, ಒಂದು ಸವಾಲಾಗಿ ಸ್ವೀಕರಿಸಿ. ಜೀವನದ ಸಂಧ್ಯಾ ಕಾಲವೆನಿಸಿರುವ ನಮ್ಮ ವೃದ್ಧಾಪ್ಯದಲ್ಲಿ ಬರೇ ನಮ್ಮ ಆಸ್ತಿ ಹಣವನ್ನು ಮಡದಿ ಮಕ್ಕಳಿಗೆ ಬಿಟ್ಟು ಹೋಗುವುದರ ಜತೆ ನಮ್ಮ ಅನುಭವ,ಕಲೆ, ಜ್ಞಾನವನ್ನೂ ಇತರರಿಗೆ ಹಸ್ತಾಂತರಿಸಿ ಹೋದಾಗಲೂ ನಮ್ಮ ಕೊನೆಯ ದಿನಗಳನ್ನು ಸಮರ್ಪಕವಾಗಿ ಸಕ್ರಿಯವಾಗಿ ಪೂರೈಸಿದ ತೃಪ್ತಿ ನಮ್ಮದಾಗಿ ಸುಖ ಮರಣ ನಮ್ಮದಾಗುತ್ತದೆ.
‘ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ’ ಎಂಬ ಮಾತಿನಂತೆ ಆತ್ಮವಂಚನೆಯನ್ನು ಮಾಡಿಕೊಳ್ಳದ ಮೌಲ್ಯಾಧಾರಿತ ಜೀವನವನ್ನು ನಡೆಸಿ,ದೇವರು ಮೆಚ್ಚುವ, ನಮ್ಮ ಆತ್ಮ ಒಪ್ಪುವ ಕೆಲಸಗಳನ್ನು ಮಾಡಿದಾಗಲೂ ಸುಖ ಮರಣ ನಮ್ಮದಾಗುತ್ತದೆ. ಜೀವನವೆಂಬುದು ಒಂದು ಹೋರಾಟವಾಗಿದ್ದರೂ ಬಂದಂತೆ ಬದುಕದೆ, ನಾವು ಅಂದುಕೊಂಡತೆ ಬದುಕಲು ಸಾಧ್ಯವಾದಾಗಲೂ ಬಾಳ ಕೊನೆಯಲ್ಲಿ ನೆಮ್ಮದಿಯ ನಿಟ್ಟುಸಿರು ನಮ್ಮದಾಗುತ್ತದೆ. ಈ ನಮ್ಮ ಜೀವ ಜೀವನ ಯಾರಿಗೂ ಹೊರೆಯಾಗದೆ, ನಮಗೇ ಅಸಹ್ಯವಾಗದೆ, ಸಂತೋಷ ತೃಪ್ತಿಯಿಂದ ಸಾವನ್ನು ಎದುರು ನೋಡುವಂತಾದರೆ ಅಸಮಾಧಾನದ ಪ್ರಶ್ನೆಯೇಉದ್ಭವಿಸುವುದಿಲ್ಲ.
ಇತರರನ್ನು ಕಾಡಿ ಬೇಡಿ ಬಾಳುವ ಜೀವನ ನಮ್ಮದಾಗದೆ, ನಮ್ಮ ಕಾಲ ಮೇಲೆಯೇ ನಾವು ನಿಲ್ಲುವಂತಾಗಿ ಜೀವನವನ್ನು ನಡೆಸಿ, ಅಂತ್ಯಕಾಲವನ್ನು ಎದುರು ನೋಡುವಂತಾಗಲೂ, ಸಾವು ಬೇಡವೆನಿಸದು (ವಿನಾ ದೈನ್ಯೇನ ಜೀವನಂ). ಈ ಲೌಕಿಕ ಜೀವನವನ್ನು ಪೂರೈಸಿ, ನಮ್ಮ ಜೀವದಲ್ಲಿ ಅಂತರ್ಗತವಾಗಿರುವ ಆತ್ಮದ ಬಿಡುಗಡೆಯಾಗಿ, ಭಗವಂತನ ಸಾನ್ನಿಧ್ಯವನ್ನು ಸೇರಲು ಮಾನಸಿಕವಾಗಿ ಸನ್ನದ್ಧರಾದಾಗಲೂ, ಸಾವು ದುಃಖದ ವಿಷಯವಾಗದು. ಒಟ್ಟಿನಲ್ಲಿ ನಾವೆಲ್ಲರೂ ಈ ಜಗತ್ತಿಗೆ ನಮ್ಮ ಒಪ್ಪಿಗೆ ಇಲ್ಲದೆ ಬಂದವರು. ಅಂತೆಯೇ ನಮ್ಮ ಅಪ್ಪಣೆ ಇಲ್ಲದೆ ಹೊರಟು ಹೋಗುವವರು. ಒಮ್ಮೆ ತೆರಳಿದ ಜೀವ ಮತ್ತೊಮ್ಮೆ ಮರಳದು’ ಎಂಬುದು ಶತಸಿದ್ಧವಾಗಿರುವಾಗ ಅಳು ಅಳುತ ಈ ಜಗತ್ತಿಗೆ ಬಂದವರು. ನಗು ನಗುತಾ ಬಾಳಿ, ಹರುಷದಲಿ ಸಂತಸ-ಸಮಾಧಾನದಲ್ಲಿ ತೆರಳುವುದೇ ಲೇಸಲ್ಲವೇ?