ಚಿಂತನೆಗಿಂತ ಹೆಚ್ಚು ಚಿಂತೆಯೇ ಕಾಡಿತ್ತು
ಸಂಗತ
ವಿಜಯ್‌ ದರಡಾ
ಪಕ್ಷದ ಹಿರಿಯರಲ್ಲಿ ಎಷ್ಟು ಜನನಾಯಕರಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ನನ್ನನ್ನು ಪ್ರಶ್ನಿಸಿದ. ಅಂಥವರು ಸ್ವಯಂ ಶಕ್ತಿಯಿಂದ ಚುನಾವಣೆ ಗೆಲ್ಲಬಲ್ಲರೇ? ಪಕ್ಷದೊಳಗಿರುವ ಇಂತಹ ಕಪ್ಪುಕುರಿಗಳಿಗೆ ನಿವೃತ್ತಿ ಕೊಡದ ವಿನಾ ಪಕ್ಷದ ಪುನರುತ್ಥಾನ ಖಂಡಿತ ಸಾಧ್ಯವಿಲ್ಲ.
ಕಾಂಗ್ರೆಸ್ಸಿನ ಮೂರು ದಿನಗಳ ನವಸಂಕಲ್ಪ ಚಿಂತನ ಶಿಬಿರ ಉದಯಪುರದಲ್ಲಿ ಸಂಪನ್ನ ವಾಗುತ್ತಿದ್ದಂತೆ ಬಿಜೆಪಿಯ ಎರಡು ದಿನಗಳ ಚಿಂತನಾ ಶಿಬಿರ ಅಹಮದಾಬಾದ್‌ನಲ್ಲಿ ಪ್ರಾರಂಭವಾಯಿತು. ಈ ಎರಡೂ ಶಿಬಿರಗಳಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಸಹಜವಾದ ಚರ್ಚೆಗಳು ನಡೆದವು.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಪ್ರಬಲವಾದ ವಿರೋಧ ಪಕ್ಷವಿರ ಬೇಕೆಂದು ಬಯಸುತ್ತಾರೆ. ಒಂದು ಕಡೆ ಬಿಜೆಪಿ ಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ತಂಡ ಹಗಲಿರುಳೂ ವಿರಮಿಸದೇ ವಾರಪೂರ್ತಿ ಕಾರ್ಯ ನಿರತವಾಗಿ ತಂತ್ರಗಾರಿಕೆಯನ್ನು ಹೆಣೆಯುತ್ತಲೇ ಇದೆ. ಆದರೆ ಇನ್ನೊಂದೆಡೆ ಕಾಂಗ್ರೆಸ್ಸಿನ ಸ್ಥಿತಿ ಏನಾಗಿದೆ? ಉದಯಪುರದಲ್ಲಿ ಕೊನೆಗೊಂಡ 3 ದಿನಗಳ ನವಸಂಕಲ್ಪ ಚಿಂತನಾ ಶಿಬಿರದ ನಂತರದಲ್ಲಿ ಕಾಂಗ್ರೆಸ್‌ನಿಂದ ಹೊರಹೊಮ್ಮಿದ ಸಂದೇಶವೇನು ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ದೇಶಾದ್ಯಂತ ಹರಡಿರುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ನವಚೈತನ್ಯ ತುಂಬುವ ಕೆಲಸ ನಡೆಯಿತೇ? ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಮತ್ತು 2024ರ ಲೋಕಸಭಾ ಚುನಾ ವಣೆಗೆ ಕಾಂಗ್ರೆಸ್ ತಯಾರಿ ಮಾಡಿ ಕೊಂಡಿದೆಯೇ? ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಪ್ರಮಾಣದ ಅಧ್ಯಕ್ಷರು ಯಾವಾಗ ನೇಮಕ ವಾಗುತ್ತಾರೆ? ಇಂತಹ ಹಲವಾರು ಪ್ರಶ್ನೆ ಗಳಿಗೆ ಉತ್ತರ ಸಿಗುತ್ತಿಲ್ಲ. ಚಿಂತನಾ ಶಿಬಿರದ ನಂತರ ಕಾಂಗ್ರೆಸ್ ಒಂದು ಘೋಷಣೆಯನ್ನು ಹೊರಡಿಸಿತು.
ಅದುವೇ ‘ಭಾರತ್ ಜೋಡೋ’ (ಭಾರತವನ್ನು ಜೋಡಿಸಿ). ಈ ಘೋಷಣೆ ಹೊರಬಂದ ನಂತರದಲ್ಲಿ ಒಬ್ಬ ಹಿರಿಯ ಕಾಂಗ್ರೆಸ್ ನಾಯಕರು ನನ್ನೊಂದಿಗೆ ಮಾತನಾಡಿದ್ದರು. ಅವರು ನನಗೆ ಪರಿಚಿತರು ಮತ್ತು ಅವರ ಪೂರ್ಣಜೀವನವನ್ನು ಕಾಂಗ್ರೆಸ್ಸಿಗಾಗಿಯೇಅವರು ಮುಡುಪಾಗಿಟ್ಟವರು. ಅವರ ಪ್ರಕಾರ ಕಾಂಗ್ರೆಸ್ ಪಕ್ಷ ಮೊದಲು ತನ್ನ ಮನೆಯನ್ನು ಸರಿಯಾಗಿಟ್ಟುಕೊಳ್ಳಬೇಕು, ಆಗಭಾರತ ತಾನಾಗಿಯೇ ಈ ಪಕ್ಷದೊಂದಿಗೆ ಬೆರೆಯುತ್ತದೆ.
ಇದು ನಿಜವೆನಿಸುತ್ತದೆ. ನಿಮ್ಮ ಪಕ್ಷದ ಒಡಕು ಕಾಣಿಸುತ್ತಿರುವಾಗ ನೀವು ದೇಶದ ಬಗ್ಗೆ ಮಾತನಾಡುವುದರಲ್ಲಿ ಏನು ಅರ್ಥವಿದೆ? ಜಿ-೨೩ ಒಕ್ಕೂಟದ ನಾಯಕರುಗಳು ಪಕ್ಷದ ಆಂತರಿಕ ಸುಧಾರಣೆಗಳ ಬಗ್ಗೆ ಮಾತನಾಡಿದರೆ, ಅವರನ್ನು ಬಂಡಾಯಗಾರರೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಬಹಳ ಮುಖ್ಯವೆನಿಸುವ ಸಂಗತಿ- ಒಂದು ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕೆಂದರೆ, ಅಲ್ಲಿ ಪ್ರಬಲವಾದ ವಿರೋಧ ಪಕ್ಷವಿರಬೇಕು ಮತ್ತು ಅದನ್ನು ಪ್ರಸ್ತುತ ಕಾರ್ಯಗತ ಗೊಳಿಸುವುದು ಕಾಂಗ್ರೆಸ್ಸಿನ ನೈತಿಕ ಜವಾಬ್ದಾರಿ ಕೂಡ ಹೌದು.
ಅದು ದೇಶದ ಅತ್ಯಂತ ಪುರಾತನ ಪಕ್ಷವೂ ಆಗಿದ್ದು ಸುದೀರ್ಘ ಕಾಲ ಅಧಿಕಾರ ನಡೆಸಿದ ಪಕ್ಷವೂ ಹೌದು. ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಏಕೆ ಶಕ್ತವಾಗಿಲ್ಲ ಎಂಬುದು ಚಿಂತನ ಶಿಬಿರದ ಚರ್ಚೆಯ ವಿಷಯವಾಗಬೇಕಿತ್ತು. ಮತದಾರ ಆ ಪಕ್ಷವನ್ನು ಯಾಕೆ ನಂಬುತ್ತಿಲ್ಲ? ತಳಮಟ್ಟದಲ್ಲಿ ಆ ಪಕ್ಷ ಮತದಾರರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಏಕೆ ವಿಫಲವಾಗಿದೆ? ಈ ವಿಚಾರಗಳ ಬಗ್ಗೆ ಚಿಂತನ ಶಿಬಿರದಲ್ಲಿ ನಾಯಕರು ಬೆಳಕು ಚೆಲ್ಲುವ ಮೂಲಕ ಆ ನ್ಯೂನತೆಗಳನ್ನು ಸುಧಾರಿಸಿಕೊಳ್ಳಲು ನೀಲಿ ನಕಾಶೆ ಸಿದ್ಧಪಡಿಸ ಬೇಕಿತ್ತು. ಆದರೆ ಅಲ್ಲಿ ಅದಾವುದೂ ನಡೆದಂತೆ ಕಾಣುವುದಿಲ್ಲ. ಹಾಗಿರುವಾಗ ನೀವು ಜನರ ಭಾವನೆಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತೀರಿ ಮತ್ತು ನಿಮ್ಮ ಇಂಗಿತವನ್ನು ಜನರಿಗೆ ಹೇಗೆ ವಿವರಿಸುತ್ತೀರಿ.
ಉದಯಪುರ ಕ್ಯಾಂಪಿಗೆ ರಾಹುಲ್ ಗಾಂಧಿ ರೈಲಿನಲ್ಲಿ ಬಂದಿಳಿದರು. ಜನಸಮೂಹದೊಂದಿಗೆ ಬೆರೆಯಬೇಕೆಂಬುದು ಅವರ ಅಪೇಕ್ಷೆ ಆಗಿದ್ದಿರಬಹುದು. ಅವರಿಗೆ ಎಲ್ಲ ರೈಲ್ವೇ ಸ್ಟೇಶನ್‌ಗಳಲ್ಲೂ ಭವ್ಯ ಸ್ವಾಗತ ಸಿಕ್ಕಿತಲ್ಲದೇ ಕಾರ್ಯಕರ್ತರು ಎಡೆ ಕಿಕ್ಕಿರಿದು ಸೇರಿದ್ದರು. ಇದೆಲ್ಲವೂ ಸರಿಯೇ, ಆದರೆ ಉದಯಪುರದ ಸ್ಥಳೀಯ ಕಾಂಗ್ರೆಸ್ ನಾಯಕರ ಜತೆ ಹೈಕಮಾಂಡ್ ಯಾಕೆ ಸ್ಪಂದಿಸುವ ಕೆಲಸ ಮಾಡಲಿಲ್ಲ? ಉದಯಪುರದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ನಿರಾಸೆ ಪಕ್ಷದ ಹೈಕಮಾಂಡಿಗೆ ಯಾಕೆ ಅರ್ಥ ವಾಗಲಿಲ್ಲ? ಅಂತಹ ನಿರಾಸೆ ಉತ್ಸಾಹವನ್ನು ಹೊಸಕಿಹಾಕುವ ಕೆಲಸ ಮಾಡುತ್ತದೆ.
ಇನ್ನೊಂದು ಪ್ರಮುಖವಾಗಿ ಕಾಡುವ ಪ್ರಶ್ನೆಯೆಂದರೆ ಕಾಂಗ್ರೆಸ್ ತನ್ನ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಸಚಿವರನ್ನು ಮತ್ತು ಸಂಸದರನ್ನು ಯಾಕೆ ಈ ಚಿಂತನ ಶಿಬಿರಕ್ಕೆ ಆಹ್ವಾನಿಸಲಿಲ್ಲ? ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳೆಂದರೆ ಅದು ರಾಜಸ್ಥಾನ ಮತ್ತು ಚತ್ತೀಸಘರ್ ಮಾತ್ರ. ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷದೊಂದಿಗೆ ಆಡಳಿತ ಪಾಲುದಾರಿಕೆ ಇದೆ. ಅದಕ್ಕಿರುವುದು ೫೩ ಸಂಸದರ ಬಲ ಅಷ್ಟೆ. ಆದರೆ ಅವರಾರಿಗೂ ಆಹ್ವಾನವಿರಲಿಲ್ಲ.
ರಾಜಸ್ಥಾನದ ಸಚಿವರುಗಳಿಗೇ ಆಹ್ವಾನವಿರಲಿಲ್ಲ. 450 ನಾಯಕರುಗಳನ್ನು ಶಿಬಿರಕ್ಕೆ ಆಹ್ವಾನಿಸಲಾಗಿತ್ತು, ಅವರ ಪೈಕಿ 430 ಮಂದಿ ಹಾಜರಾಗಿದ್ದರು. ಅದರಲ್ಲಿದ್ದ ಅರ್ಧಭಾಗ ಯುವಕರಾಗಿದ್ದು ಅವರೆಲ್ಲರೂ ರಾಹುಲ್ ಗಾಂಧಿ ಸಮರ್ಥಕರು. ಉಳಿದವ ರೆಲ್ಲ ಹಳಬರು ಮತ್ತು ಪಕ್ಷದಲ್ಲಿ ದೀರ್ಘಕಾಲದಿಂದ ಆಯಕಟ್ಟಿನ ಜಾಗಗಳಲ್ಲಿ ಸ್ಥಾನ ಹೊಂದಿದ್ದವರು. ಪಕ್ಷದ ಬಲಸಂವ ರ್ಧನೆಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಕೇಳಿದರೆ ಯಾರ ಹತ್ತಿರವೂ ಉತ್ತರವಿಲ್ಲ. ಪಕ್ಷದ ಬಲಸಂವರ್ಧನೆ ಮಾಡುವ ಬದಲು ಈ ನಾಯಕರುಗಳು ತಮ್ಮ ತಮ್ಮ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೇ ಬಹಳಷ್ಟು ಸಮಯ ಮತ್ತು ಶ್ರಮವನ್ನು ವ್ಯಯಿಸುತ್ತಿದ್ದಾರೆ.
ಪಕ್ಷದ ಹಿರಿಯ ನಾಯಕರುಗಳಲ್ಲಿ ಎಷ್ಟು ಮಂದಿ ಜನನಾಯಕರಿದ್ದಾರೆ ಎಂದು ಒಬ್ಬ ಕಾಂಗ್ರೆಸ್ ಯುವ ನಾಯಕ ನನ್ನನ್ನು ಪ್ರಶ್ನಿಸಿದ. ಅಂಥವರು ಸ್ವಯಂಶಕ್ತಿಯಿಂದ ಚುನಾವಣೆ ಗೆಲ್ಲಬಲ್ಲರೇ? ಈ ಪ್ರಶ್ನೆ ಹೆಚ್ಚು ಸಮಂಜಸವೆನಿಸುತ್ತದೆ. ಪಕ್ಷದೊಳಗಿರುವ ಇಂತಹ ಕಪ್ಪುಕುರಿಗಳಿಗೆ ರಾಜಕೀಯ ನಿವೃತ್ತಿ ಕೊಡದ ವಿನಾ ಪಕ್ಷದ ಪುನರುತ್ಥಾನ ಖಂಡಿತವಾಗಿ ಸಾಧ್ಯವಿಲ್ಲ. ಅದು ಕನಸಾ ಗಿಯೇ ಉಳಿಯಬಹುದು.
ಮುಂಬರುವ ಅಕ್ಟೋಬರ್ 2ರಿಂದ ಭಾರತ್ ಜೋಡೋ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ಯಾಕೆ ಕಾಶ್ಮೀರದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಿಲ್ಲ ಎಂದೊಬ್ಬರು ನನ್ನಲ್ಲಿ ಪ್ರಶ್ನಿಸಿದರು. ಅದಕ್ಕೆ ಅವರೇ ಉತ್ತರವನ್ನೂ ಕೊಟ್ಟರು. ಒಂದೊಮ್ಮೆ ಅದು ಕಾಶ್ಮೀರದಿಂದ ಶುರುವಾಗುವುದಿದ್ದಲ್ಲಿ ಗುಲಾಮ್ ನಬಿ ಆಜಾದ ರನ್ನು ಜತೆ ಸೇರಿಸಿಕೊಂಡು ಮುನ್ನಡೆಯಬೇಕಾಗುತ್ತಿತ್ತು. ಆಜಾದ್ ಸಾಹೇಬರು ಹಲವಾರು ಬಾರಿ ಪಕ್ಷವನ್ನು ಪುನರುಜ್ಜೀವನ ಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಹಾಗಿದ್ದಾಗ ಅವರನ್ನು ಮುಂಚೂಣಿಯಲ್ಲಿಟ್ಟುಕೊಳ್ಳುವುದಾದರೂ ಹೇಗೆ. ಅವರು ಜಿ-೨೩ ಭಾಗವಾಗಿದ್ದಾರೆ.
ಅವರನ್ನು ಜತೆ ಸೇರಿಸಿಕೊಳ್ಳುವುದೆಂದರೆ ಟೀಕಾಕಾರರಿಗೆ ತಲೆಬಾಗಿಸಿದಂತಾಗುತ್ತದೆ. ನನಗೆ ಈ ಎಲ್ಲ ವಿದ್ಯಮಾನಗಳನ್ನುನೋಡಿದ ನಂತರದಲ್ಲಿ ೧೫ನೇ ಶತಮಾನದ ದಾರ್ಶನಿಕ ಸಂತ ಕಬೀರನ ವಾಣಿ ನೆನಪಾಗುತ್ತಿದೆ. ನಿಮ್ಮ ಸನಿಹದಲ್ಲಿ ನಿಂದಕ ರಿರಬೇಕು, ಆಗ ಮಾತ್ರ ನಿಮ್ಮ ದೌರ್ಬಲ್ಯಗಳೇನೆಂಬುದರ ಅರಿವು ನಿಮಗಾಗುತ್ತದೆ, ನಿಮ್ಮನ್ನು ನೀವು ಸುಧಾರಿಸಿಕೊಳ್ಳಬಹುದು, ಸರಿದಾರಿಯಲ್ಲಿ ಮುಂದೆ ಸಾಗಲು ಅದು ಸಹಾಯಕವಾಗುತ್ತದೆ, ನಿಮ್ಮ ಸುತ್ತಮುತ್ತ ಭಟ್ಟಂಗಿಗಳೇ ತುಂಬಿದ್ದರೆ ಹಡಗು ನಿಧಾನ ವಾಗಿ ಮುಳುಗುತ್ತದೆ ಎಂದವರು ಹೇಳಿದ್ದರು.
ಪಕ್ಷಕ್ಕೆ ಬಲ ತುಂಬುವ ಬಗ್ಗೆ ಕಟುವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರೇನೂ ಪಕ್ಷದ ವೈರಿಗಳಲ್ಲ. ಅವರು ಬಿಜೆಪಿಯ ಏಜೆಂಟರೂ ಅಲ್ಲ. ಅವರ ಮಾತುಗಳನ್ನು ಆಲಿಸಬೇಕು. ಯುವ ನಾಯಕರುಗಳು ಪಕ್ಷದಿಂದ ಏಕೆ ದೂರವಾಗುತ್ತಿದ್ದಾರೆ ಎಂಬು ದನ್ನೇನಾದರೂ ಪಕ್ಷ ಆಲೋಚಿಸಿದೆಯೇ? ಹಾರ್ದಿಕ ಪಟೇಲರನ್ನು ಮುನ್ನೆಲೆಗೆ ತಂದಾಗ ಕಾಂಗ್ರೆಸ್ಸಿನಲ್ಲಿ ಬಹಳ ನಿರೀಕ್ಷೆಗಳಿದ್ದವು. ಅವರು ಯಾಕೆ ದೂರವಾದರು? ಹೊಸದಾಗಿ ವಿವಾಹಿತನಾದವನನ್ನು ಸಂತಾನಹರಣಕ್ಕೆ ಒಳಪಡಿಸಿದರೆ ಏನಾಗ ಬಹುದೋ ಅಂತಹ ಸ್ಥಿತಿ ತನ್ನದಾಗಿತ್ತು ಎಂದು ಹಾರ್ದಿಕ್ ಪಟೇಲ್ ಹೇಳಿಕೊಂಡಿದ್ದಾರೆ.
ಸುನಿಲ್ ಜಾಕಡ್ ಯಾಕೆ ಪಕ್ಷ ತೊರೆದರು. ಜಾಕಡ್ ಹೇಳಿದ ಕಹಿಸತ್ಯಗಳು ಚಿಂತನ ಶಿಬಿರದ ಚರ್ಚಾವಿಷಯಗಳಾಗ ಬೇಕಿತ್ತು. ಬಿಜೆಪಿ ಎಲ್ಲ ಪಕ್ಷಗಳ ನಾಯಕರನ್ನೂ ತನ್ನ ತೆಕ್ಕೆಯೊಳಕ್ಕೆ ಸೇರಿಸಲು ಸನ್ನದ್ಧವಾಗಿದೆ. ಆದಾಗ್ಯೂ ಕಾಂಗ್ರೆಸ್ ಚಿಂತೆ ಮಾಡಿದಂತೆ ಕಾಣಿಸುತ್ತಿಲ್ಲ. ಈ ವಿಷಮ ಕಾಲಘಟ್ಟದಲ್ಲಿ, ಕಾಂಗ್ರೆಸ್ ಪಕ್ಷದ ಮುಂದೆ ಯಾವುದೇ ನಕಾಶೆಗಳಿಲ್ಲ ಎಂಬುದು ಕಹಿಸತ್ಯ. ಸೋನಿ ಯಾಜಿ ಮಧ್ಯಂತರ ಅವಧಿಗೆ ಅಧ್ಯಕ್ಷೆಯಾಗಿ ಮೂರು ವರ್ಷಗಳೇ ಕಳೆದು ಹೋಗಿವೆ. ಅವರು ತಮ್ಮ ಕೈಲಾದುದನ್ನು ಮಾಡುತ್ತಿ ದ್ದಾರೆ. ಆದರೆ ಪಕ್ಷಕ್ಕೆ ಪೂರ್ಣಪ್ರಮಾಣದ ಅಧ್ಯಕ್ಷರಿಲ್ಲದೇ ಹೋದಾಗ ಜನರ ವಿಶ್ವಾಸವನ್ನು ಗಳಿಸುವುದಾದರೂ ಹೇಗೆ?ರಾಹುಲ್ ಗಾಂಧಿ ತಾನು ಅಧ್ಯಕ್ಷನಾಗುವುದಿಲ್ಲ ಎಂದು ಹೇಳುತ್ತಲೇ ಅಧ್ಯಕ್ಷರ ಕುರ್ಚಿಯ ಆಜುಬಾಜು ಇರುವ ಅಧಿಕಾರದ ಕೇಂದ್ರಬಿಂದುವಾಗಲು ಬಯಸಿದ್ದಾರೆ.
ರಾಹುಲ್ ಗಾಂಧಿಯವರ ಅನಿಶ್ಚಿತ ನಡವಳಿಕೆ ಕಾಂಗ್ರೆಸ್ ಪಕ್ಷಕ್ಕೆ ಮಗ್ಗುಲ ಮುಳ್ಳಾಗಿದೆ. ಅಲ್ಲದೇ ಜಾತ್ಯತೀತ ವಾದಕ್ಕೆ ಸಂಬಂಧ ಪಟ್ಟಂತೆ ಪಕ್ಷದ ನಿಲುವು ಸಂದೇಹಾಸ್ಪದವಾಗಿದೆ. ಬಿಜೆಪಿಯವರು ಏನು ಮಾಡುತ್ತಾರೋ, ಅದನ್ನೇ ಈಗ ಕಾಂಗ್ರೆಸ್ ಮಾಡ ಹೊರಟಿದೆ. ಈಗ ಮುಖ್ಯವಾಗಿರುವ ಪ್ರಶ್ನೆಯೆಂದರೆ ಪಕ್ಷದ ಹೈಕಮಾಂಡ್, ತಳಮಟ್ಟದಲ್ಲಿರುವವರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳುವಲ್ಲಿ ಶಕ್ತವಾಗಿದೆಯೇ? ಮೇಲ್ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬವಾದಾಗ ಅದು ಗೊಂದಲಕ್ಕೆಡೆ ಮಾಡಿ ಕೊಡುತ್ತದೆ ಮತ್ತು ಪಕ್ಷದ ಕಾರ್ಯಕರ್ತರ ನೈತಿಕ ಬಲವೂ ಕುಸಿಯುತ್ತದೆ.
ತನ್ನ ಮನೆಯನ್ನು ಸರಿಯಾಗಿಟ್ಟುಕೊಳ್ಳಲಾಗದೇ ಕಾಂಗ್ರೆಸ್ ದೀರ್ಘ ಕಾಲದಿಂದ ಹೆಣಗಾಡುತ್ತಿದೆ. ಆದಾಗ್ಯೂ ಪ್ರತಿ ಹಳ್ಳಿಯಲ್ಲೂ ಕಾಂಗ್ರೆಸ್ ಪಕ್ಷಕ್ಕಾಗಿ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ.