ಆಧುನಿಕ ಶಿಕ್ಷಣದ ಗುರಿ ಹೇಗಿರಬೇಕು ?
ಸ್ವಾಸ್ಥ್ಯ ಸಂಪದ
ಡಾ.ಎಸ್.ಪಿ.ಯೋಗಣ್ಣ
yoganna55@.
ಮಾನವ ನಿರ್ಮಿತ ಜ್ಞಾನಗಳನ್ನು ಶಿಕ್ಷಣದಲ್ಲಿ ಅಳವಡಿಸುವಾಗ ಅವುಗಳಲ್ಲಿರುವ ಸಾರ್ವತ್ರಿಕ ಸತ್ಯಾಂಶಗಳನ್ನು ಒರೆ ಹಚ್ಚಿ ಹೆಕ್ಕಿ ತೆಗೆದು ಅಳವಡಿಸಬೇಕು. ವಿವಾದಾತ್ಮಕ ವ್ಯಕ್ತಿಗಳ ಜೀವನಚರಿತ್ರೆ ಮತ್ತು ಅಭಿಪ್ರಾಯಗಳನ್ನು ಬೋಧಿಸದೇ ಸಾರ್ವತ್ರಿಕವಾಗಿ ಒಪ್ಪಿಗೆಯಾದ ನಿರ್ವಿವಾದ ವ್ಯಕ್ತಿಗಳ ವಿಚಾರಗಳನ್ನು ಮಾತ್ರ ಶಿಕ್ಷಣದಲ್ಲಿರಬೇಕು.
ಮನುಷ್ಯ, ಸೃಷ್ಟಿಯ ಉದ್ಭವ ಮತ್ತು ವಿಕಾಸ ಕ್ರಿಯೆಯ ಇಂದಿನ ಹಂತದ ಅತ್ಯಂತ ಶ್ರೇಷ್ಠಜೀವಿ. ಅವನ ಮುಂದಿನ ಹಂತದ ವಿಕಾಸ ನಿಗೂಢ, ಅವನೇ ಬಲ್ಲ!
ಆಲೋಚನೆಗಳು, ಭಾವಗಳು, ಬುದ್ಧಿ, ವಿಮರ್ಶೆ, ನಿರ್ಧಾರ, ಅನುಷ್ಠಾನ ಇತ್ಯಾದಿ ಕಾರ್ಯಗಳನ್ನು ಕೌಶಲದಿಂದ ನಿರ್ವಹಿಸುವ ಉತ್ಕೃಷ್ಟ ಮೆದುಳು ಮತ್ತು ಮನಸ್ಸನ್ನು ಹೊಂದಿರುವುದರಿಂದ ಅವನು ಇನ್ನಿತರ ಜೀವಿಗಳಿಗಿಂತ ಭಿನ್ನ. ಮನುಷ್ಯ ಮಿಲಿಯನ್‌ ಗಳಷ್ಟು ಜೀವಕೋಶಗಳಿಂದ ರಚಿತವಾಗಿದ್ದು, ಮೆದುಳಿನ ಜೀವಕೋಶಗಳನ್ನೂ ಒಳಗೊಂಡಂತೆ ಪ್ರತಿಯೊಂದು ಜೀವಕೋಶವು ತನ್ನ ಹಿಂದಿನ ವಿಕಾಸ ಕ್ರಿಯೆಯ ಎಲ್ಲ ಪೂರ್ವ ಇತಿಹಾಸದ ವೈಜ್ಞಾನಿಕ ಹಂತಗಳ ಮಾಹಿತಿಯನ್ನು ತನ್ನ ಒಡಲಿನಲ್ಲಿ ಸಂಗ್ರಹಿಸಿಕೊಂಡಿರುವ ಸಾಫ್ಟ್ ವೇರ್ ಆಗಿರುವುದು ವೈಜ್ಞಾನಿಕ ಸಂಶೋಧನೆಗಳಿಂದ ದೃಢ ಪಟ್ಟಿರುವ ಅಂಶವಾಗಿರುತ್ತದೆ.
ಮನುಷ್ಯ ಸೃಷ್ಟಿಯ ಪ್ರತಿಬಿಂಬವಾಗಿರುವುದರಿಂದ ಸೃಷ್ಟಿಯ ಎಲ್ಲವುಗಳ ಬಗೆಗಿನ ಮಾತಿ ಜೀವಕೋಶಗಳಲ್ಲಿ ಅಡಗಿವೆ. ಇವು ಪ್ರಧಾನವಾಗಿ ವಂಶವಾಹಿಗಳಲ್ಲಿ ರಾಸಾಯನಿಕ ರೂಪದಲ್ಲಿ ಶೇಖರಣೆಯಾಗಿವೆ. ಒಂದೊಂದು ಮಾತಿ ಅಂಶವೂ ಒಂದೊಂದು ಬಗೆಯ ರಚನಾತ್ಮಕ ರಾಸಾಯನಿಕ ರೂಪದಲ್ಲಿ ಸಂಗ್ರಹವಾಗಿರುತ್ತದೆ. ಇವು ಅವಶ್ಯಕತೆ ಇದ್ದಾಗ ವಿದ್ಯುತ್ ಸಿಗ್ನಲ್‌ಗಳಾಗಿ ಪರಿ ವರ್ತನೆ ಹೊಂದಿ ವ್ಯಕ್ತವಾಗುತ್ತವೆ. ಮೆದುಳಿನ ಜೀವಕೋಶಗಳು ಎಲ್ಲ ಪೂರ್ವ ಮತ್ತು ಪ್ರಸ್ತುತ ಮಾಹಿತಿಗಳ ಉಗ್ರಾಣ ಗಳಾಗಿವೆ.
ಮೆದುಳಿನ ಜೀವಕೋಶಗಳಲ್ಲಿ ತಲೆಮಾರುಗಳಿಂದ ವರ್ಗಾವಣೆಯಾಗಿ ಬಂದ ಮಾಹಿತಿಗಳು ಅಡಕವಾಗಿದ್ದು, ಅವು ತಾವಾಗಿಯೇವ್ಯಕ್ತವಾಗಬಹುದು ಅಥವಾ ನೀಡುವ ತರಬೇತಿಯಿಂದ ಮೇಲುಸ್ತರಕ್ಕೆ ಬಂದು ಅನಾವರಣಗೊಳ್ಳಬಹುದು. ಮೆದುಳಿನಲ್ಲಿ ಈಗಾಗಲೇ ಅಡಗಿರುವ ಅಥವಾ ಪ್ರಸ್ತುತ ಶೇಖರಿಸಲಾಗುವ ಸತ್ಯಸಂಗತಿಗಳೇ ಜ್ಞಾನ. ಸುಳ್ಳುಗಳು ಜ್ಞಾನವಲ್ಲ. ಶಿಕ್ಷಣ ಈಗಾಗಲೆ ಮೆದುಳಿನಲ್ಲಿ ಸುಪ್ತವಾಗಿ ಅಡಗಿರುವ ಜ್ಞಾನವನ್ನು ಮೇಲುಸ್ತರಕ್ಕೆ ತಂದು ವ್ಯಕ್ತವಾಗಿಸುವ ಕೌಶಲಯುತ ತರಬೇತಿ.
ಮೆದುಳಿನಲ್ಲಿ ಅಡಗಿರುವ ಮನುಷ್ಯನ ಕನಿಷ್ಠ ಬದುಕಿಗೆ ಅವಶ್ಯಕವಿರುವ ಜ್ಞಾನ ಯಾವ ತರಬೇತಿ ಇಲ್ಲದಿದ್ದರೂ ಸಂದರ್ಭಕ್ಕನು ಗುಣವಾಗಿ ಅವೇ ವ್ಯಕ್ತವಾಗುತ್ತವೆ. ಪ್ರೌಢಾವಸ್ಥೆಯಲ್ಲಿ ಉಂಟಾಗುವ ಲೈಂಗಿಕಾಸಕ್ತಿ, ಹಸಿವು, ನಿದ್ರೆ ಇತ್ಯಾದಿ. ಗರ್ಭಕೂಸಿನ 12ನೇ ವಾರದಲ್ಲಿ ಎಲ್ಲ ಅಂಗಾಂಗಗಳ ಬೆಳವಣಿಗೆಯಾಗಿದ್ದು, 12-16ನೇ ವಾರದಲ್ಲಿ ಮೆದುಳಿನ ಬೆಳವಣಿಗೆ ಯಾಗಿದ್ದು, 20ನೇ ವಾರಕ್ಕೆ ಗರ್ಭಕೂಸಿನ ಮೆದುಳು ವಯಸ್ಕರ ಮೆದುಳಿನ ಉನ್ನತ ಕಾರ್ಯಗಳಾದ ಸ್ಪರ್ಶಾನುಭವ, ಕೇಳುವಿಕೆ, ಕಣ್ಣುಗಳು ಬೆಳಕಿಗೆ ಸ್ಪಂದಿಸು ವಿಕೆ, ಹೊರಗಿನ ಶಬ್ದಗಳ ಗ್ರಹಿಕೆಗಳನ್ನು ಕಲಿತಿರುತ್ತದೆ.
15ನೇ ವಾರದಲ್ಲಿಯೇ ಗರ್ಭಕೂಸಿನ ಕಣ್ಣು ಮುಚ್ಚಿದ್ದರೂ ತಾಯಿಯ ಹೊಟ್ಟೆಯ ಮೇಲೆ ಬೀಳುವ ಬೆಳಕನ್ನು ಗ್ರಹಿಸುತ್ತದೆ. ಈಸಂಶೋಧನಾತ್ಮಕ ಅಂಶಗಳು ಜ್ಞಾನದ ಅರಿವು ಜನ್ಮದತ್ತವಾಗಿಯೇ ಮಗುವಿನಲ್ಲಿದ್ದು, ಯಾವ ಶೈಕ್ಷಣಿಕ ತರಬೇತಿಯೂ ಇಲ್ಲದೇ ಅವು ತಮಗೆ ತಾವೇ ಕಾಲ ಮತ್ತು ಸಂದರ್ಭಕ್ಕನುಗುಣವಾಗಿ ಅನಾವರಣಗೊಳ್ಳುತ್ತವೆ ಎಂಬ ಅಂಶ ವೈಜ್ಞಾನಿಕವಾಗಿ ಸಾಬೀತಾ ಗಿರುತ್ತವೆ. ಮಹಾಭಾರತದಲ್ಲಿ ಅಭಿಮನ್ಯು ತನ್ನ ತಾಯಿಯ ಗರ್ಭದಲ್ಲಿಯೇ ಸಮರಕಲೆ ಕಲಿತಿದ್ದ ಎಂಬ ದೃಷ್ಟಾಂತ ಇದನ್ನು ಸಾಕ್ಷೀಕರಿಸುತ್ತದೆ.
ಮಗು ಹುಟ್ಟಿದ ಆನಂತರ ಜನ್ಮದತ್ತವಾಗಿ ಬಂದ ಕಲಿಕೆಗಳು ವಯೋಧರ್ಮಕ್ಕನುಗುಣವಾಗಿ ಹಂತಹಂತವಾಗಿ ವ್ಯಕ್ತವಾಗಿ ಪಕ್ವಗೊಳ್ಳುತ್ತವೆ. ಪರಿಸರ ಜನ್ಮದತ್ತ ಸ್ವಯಂ ಕಲಿಕಾ ಮೆದುಳಿನ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಬೀರುತ್ತದೆ. ಮಗುಹುಟ್ಟಿದ ದಿನದಿಂದಲೇ ಪರಿಸರದ ಪ್ರಭಾವ, ಅದರ ಮೇಲೆ ಗಂಭೀರವಾಗಿ ಪ್ರಾರಂಭವಾಗುವುದರಿಂದ ಶೈಕ್ಷಣಿಕ ತರಬೇತಿ ಅಂದಿ ನಿಂದಲೇ ಪ್ರಾರಂಭವಾಗಬೇಕು.
ತಾಯಿಯೇ ಮೊದಲ ಗುರುವಾಗುವುದರಿಂದ ಈ ಎಲ್ಲ ಮಾಹಿತಿಗಳನ್ನು ತಾಯಿ ಮತ್ತು ಸುತ್ತಮುತ್ತಲಿನ ಸಮಾಜ ಅರಿತು ಅದಕ್ಕನುಗುಣವಾಗಿ ಮಗುವಿನ ಶಿಕ್ಷಣದ ತರಬೇತಿ ಪ್ರಾರಂಭದಿಂದಲೇ ಶುರುವಾಗುವುದರಿಂದ ಮೆದುಳಿನಲ್ಲಿ ಅದಮ್ಯವಾಗಿರುವ ಎಲ್ಲ ಜ್ಞಾನದ ಮಾಹಿತಿಗಳನ್ನು ಹಂತಹಂತವಾಗಿ ವ್ಯಕ್ತವಾಗಿಸಲು ಸಹಕಾರಿಯಾಗುತ್ತದೆ. ಆದುದರಿಂದ ತಾಯಿಯ ಶಿಕ್ಷಣ ಅತಿಮುಖ್ಯ.
ಇದಲ್ಲದೆ ಅದಮ್ಯ ಮೆದುಳಿನ ಜ್ಞಾನವನ್ನು ಸ್ವಯಂ ವ್ಯಕ್ತವಾಗದಂತೆ ದಮನಮಾಡುವ ಕ್ರಿಯೆಗಳಿಂದ ಮುಂದಿನ ದಿನಗಳಲ್ಲಿ ಮಗುವಿನಲ್ಲಿ ಕಲಿಕಾ ದೋಷವುಂಟಾಗುತ್ತದೆ. ಶಿಕ್ಷಣ ಜ್ಞಾನ ವಿಕಾಸವಾಗಲು ಹೊರಗಿನಿಂದ ಕೊಡುವ ತರಬೇತಿಯಾದುದರಿಂದ ಯಾವ ಬಗೆಯ ಜ್ಞಾನವನ್ನು, ಯಾವ ವಯಸ್ಸಿನಲ್ಲಿ, ಎಷ್ಟರಮಟ್ಟಿಗೆ ಮಗುವಿನ ಮೆದುಳಿಗೆ ತುಂಬಬೇಕು ಎಂಬುದು ಅತ್ಯ ವಶ್ಯಕ. ಮೆದುಳಿಗೆ ಅಗಾಧವಾದ ಕಲಿಕಾ ಸಾಮರ್ಥ್ಯವಿದ್ದರೂ ಅದಕ್ಕೂ ಶ್ರಮದ ಇತಿಮಿತಿ ಇದ್ದು, ಬದುಕಿನಲ್ಲಿ ಸಂತೋಷ ವಾಗಿ ಬದುಕಲು ಅವಶ್ಯಕವಿರುವ ಜ್ಞಾನವನ್ನು ಮೂಲಭೂತವಾಗಿ ಪ್ರಾರಂಭದಲ್ಲಿಯೇ ಕಲಿಸುವುದು ಅತ್ಯವಶ್ಯಕ.
ಕಲಿಕೆಗೆ ಭಾಷೆ ಅದರಲ್ಲೂ ಮಾತೃಭಾಷೆ ಬಹುಮುಖ್ಯವಾದ ಮಾಧ್ಯಮವಾಗಿದ್ದು, ಮಗುವಿಗೆ ಪ್ರಾರಂಭದಿಂದಲೇ ಮಾತೃಭಾಷೆ ಮತ್ತು ಜ್ಞಾನ ಯಥೇಚ್ಛವಾಗಿ ಲಭ್ಯವಿರುವ ಇನ್ನಿತರ ಭಾಷೆಯನ್ನು ಬಹಳ ಚೆನ್ನಾಗಿ ಓದಲು, ಬರೆಯಲು ಮತ್ತು ಮಾತನಾಡಲು ಬರುವ ಕೌಶಲ ಇರುವಂತೆ ಕಲಿಸುವುದು ಶಿಕ್ಷಣದ ಮೊದಲ ಆದ್ಯತೆಯಾಗಬೇಕು. ಭಾಷೆಯ ಪ್ರೌಢಿಮೆ ಇಲ್ಲದಿದ್ದರೆ ಜ್ಞಾನದಅರಿವು ಮತ್ತು ಪ್ರಸಾರ ಸಮಂಜಸವಾಗಿರುವುದಿಲ್ಲ. 1838ರಲ್ಲಿ ಥಾಮಸ್ ಬ್ಯಾಬಿನ್‌ಟನ್ ಮೆಕಾಲೆ ಶಿಕ್ಷಣ ನೀತಿ ಜಾರಿಗೆ ಬರುವ ಮುನ್ನ ಭಾರತದಲ್ಲಿ ಸಂಸ್ಕೃತ, ಅರೆಬಿಕ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಲಭ್ಯವಾಗುತ್ತಿತ್ತು.
ಅಂದಿನ ಬಹುತೇಕ ಶಿಕ್ಷಣ ಮಾನವೀಯ ಮೌಲ್ಯಗಳು, ಅಧ್ಯಾತ್ಮಿಕ ಚಿಂತನೆಗಳು, ಸೃಷ್ಟಿಯ ಜ್ಞಾನ, ತತ್ತ್ವಶಾಸ್ತ್ರಇತ್ಯಾದಿ ಬದುಕಿಗೆ ಸಂಬಂಧಿಸಿದ ಸಂತೋಷಕರವಾಗಿ ಬದುಕುವ, ವ್ಯಕ್ತಿತ್ವವನ್ನು ರೂಪಿಸುವ ಅಂಶಗಳನ್ನು ಒಳಗೊಂಡಿತ್ತು. ಮೆಕಾಲೆ ಶಿಕ್ಷಣ ನೀತಿ ಬಂದ ನಂತರ ಆಂಗ್ಲ ಭಾಷೆಯ ಶಿಕ್ಷಣ ಪ್ರಾರಂಭವಾಗಿ ಜ್ಞಾನ ಮತ್ತು ಆಡಳಿತಕ್ಕೆ ಸಂಬಂಧಿಸಿದ ಶಿಕ್ಷಣ ಮೇಲುಗೈ ಪಡೆದು ವ್ಯಕ್ತಿತ್ವ ನಿರ್ಮಾಣದ ಪ್ರಾದೇಶಿಕ ಭಾಷೆಯಲ್ಲಿನ ಶಿಕ್ಷಣ ಕ್ರಮೇಣ ಮರೆಯಾಗಿ ಇಂದು ಶಿಕ್ಷಣ, ಹಣ ಮತ್ತು ಅಧಿಕಾರ, ಸಂಪಾದಿಸುವ ಭೌತಿಕ ಸಂಪತ್ತುಗಳ ಹುಚ್ಚಿನಾಸಕ್ತ ವ್ಯಕ್ತಿತ್ವ ನಿರ್ಮಾಣ ಮಾಡುವ ತರಬೇತಿಯಾಗಿ ಪ್ರಪಂಚಾದ್ಯಂತ ಮಾರ್ಪ ಟ್ಟಿರುವುದು ದುರಂತದ ಸಂಗತಿಯಾಗಿದೆ.
ಜ್ಞಾನದಲ್ಲಿ ಸೃಷ್ಟಿಕರ್ತ ನಿರ್ಮಿತ, ಮನುಷ್ಯನನ್ನೂ ಒಳಗೊಂಡಂತೆ ಸೃಷ್ಟಿಯಲ್ಲಿರುವ ಎಲ್ಲವುಗಳ ಬಗೆಗೆನ ವೈಜ್ಞಾನಿಕ ಅಂಶಗಳನ್ನು ಒಳಗೊಂಡ ಸೃಷ್ಟಿಯ ಜ್ಞಾನ ಮತ್ತು ಮಾನವ ತನ್ನ ಬದುಕಿಗೆ ಅವನೇ ರೂಢಿಸಿಕೊಂಡಿರುವ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಆಡಳಿತಾತ್ಮಕ, ಕಾನೂನಾತ್ಮಕ, ವೃತ್ತಿಯಾತ್ಮಕ, ಧಾರ್ಮಿಕ ಇತ್ಯಾದಿಗಳಿಗೆ ಸಂಬಂಧಿಸಿದ ಮಾನವ ನಿರ್ಮಿತ ಜ್ಞಾನ ಎಂಬ ಎರಡು ಪ್ರಮುಖ ಕವಲು ಜ್ಞಾನಗಳಿವೆ. ಸೃಷ್ಟಿಯ ಜ್ಞಾನ ವಿಶ್ವಾದ್ಯಂತ ಸಾರ್ವತ್ರಿಕವಾಗಿದ್ದು, ಪ್ರತಿಯೊಬ್ಬರಿಗೂ ಈ ಜ್ಞಾನದ ಅರಿವು ಅತ್ಯವಶ್ಯಕ.
ಮನುಷ್ಯನ ರಚನೆ ಮತ್ತು ಬೆಳೆವಣಿಗೆ, ಅವನ ಆರೋಗ್ಯ ನಿಯಂತ್ರಣ, ಮನಸ್ಸಿನ ನಿಯಂತ್ರಣ, ಸೃಷ್ಟಿಯ ಅಂತಿಮಸತ್ಯಗಳಿಗೆ ಸಂಬಂಧಿಸಿದ ಜ್ಞಾನ ಇತ್ಯಾದಿ ಗಳು ಸೃಷ್ಟಿಯ ಜ್ಞಾನದ ಪರಿಮಿತಿಗೆ ಬರುತ್ತವೆ. ಮನುಷ್ಯ ಸೃಷ್ಟಿಯನ್ನು ಸಂಪೂರ್ಣವಾಗಿ ಇನ್ನೂ ಅರ್ಥಮಾಡಿಕೊಂಡಿಲ್ಲ. ಅರ್ಥಮಾಡಿಕೊಳ್ಳಬೇಕಾಗಿರುವ ಸೃಷ್ಟಿಯ ಸಂಗತಿಗಳು ಅಸಂಖ್ಯಾತ. ಈ ಬಗ್ಗೆ ನಿರಂತರ ಸಂಶೋಧನೆಗಳು ಜರುಗುತ್ತಲೇ ಇವೆ. ಸೃಷ್ಟಿಗೆ ಸಂಬಂಧಿಸಿದ ಎಲ್ಲ ವೈಜ್ಞಾನಿಕ ವಿಚಾರಗಳು ಇಂದು ಅಧ್ಯಾತ್ಮಿಕ ಜ್ಞಾನ, ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ, ಜೈವಿಕ ವಿಜ್ಞಾನ, ಖಗೋಳಶಾಸ್ತ್ರ, ಪರಿಸರ ಜ್ಞಾನ, ಭೂಗೋಳ ಜ್ಞಾನ, ಕೃಷಿ ವಿಜ್ಞಾನ, ವೈದ್ಯ ವಿಜ್ಞಾನ ಇತ್ಯಾದಿ ಹಲವಾರು ಕವಲು ವಿಜ್ಞಾನಗಳಾಗಿ ವಿಂಗಡಣೆಯಾಗಿದ್ದು, ಇಂದು ಹಾಲಿ ಶಿಕ್ಷಣದಲ್ಲಿ ಎಲ್ಲ ವಿದ್ಯಾರ್ಥಿ ಗಳಿಗೂ ಈ ಎಲ್ಲ ಜ್ಞಾನಗಳು ಲಭಿಸುತ್ತಿಲ್ಲ.
ಆಸಕ್ತರು ಮಾತ್ರ ವಿಶೇಷವಾಗಿ ಒಂದೊಂದು ಈ ಕವಲು ವಿಜ್ಞಾನಗಳನ್ನು ಅಭ್ಯಾಸ ಮಾಡುವುದರಿಂದ ಸೃಷ್ಟಿಯ ಜ್ಞಾನದಸಮಗ್ರನೋಟ ಲಭಿಸದೇ ವಿದ್ಯಾರ್ಥಿಗಳಲ್ಲಿ ಸಮಗ್ರ ದೃಷ್ಟಿಯ ವ್ಯಕ್ತಿತ್ವ ರೂಪಿತವಾಗುತ್ತಿಲ್ಲ. ಮನುಷ್ಯನ ಮನಸ್ಸು ಚಂಚಲ ಶೀಲವಾಗಿದ್ದು, ಅದನ್ನು ಅಧ್ಯಾತ್ಮಿಕ ಚಿಂತನೆಗಳಿಂದ ಮಾತ್ರ ಶಾಂತಪಡಿಸಲು ಸಾಧ್ಯ ಎಂಬ ವೈಜ್ಞಾನಿಕ ಅಂಶದ ಅರಿದ್ದರೂ ಮನಸ್ಸನ್ನು ತರಬೇತಿಗೊಳಿಸುವ ಶಿಕ್ಷಣ ಇಂದು ಲಭ್ಯವಿಲ್ಲ. ಇಂದಿನ ಸಾಮಾಜಿಕ ಅಶಾಂತ ಸ್ಥಿತಿಗೆ ಇದೇ ಬಹುಮುಖ್ಯ ಕಾರಣ.
ಮಾನವ ನಿರ್ಮಿತ ವಿಜ್ಞಾನಗಳು ಅವರವರ ಚಿಂತನೆಗಳು, ಅನುಭವ, ಅನುಕೂಲ, ಸಂದರ್ಭ ಇತ್ಯಾದಿಗಳಿಗನುಗುಣವಾಗಿ ಕಂಡುಕೊಂಡ ಸಾಂದರ್ಭಿಕ ಜ್ಞಾನಗಳೇ ಹೊರತು ಅವು ವಿಶ್ವ ವ್ಯಾಪ್ತಿಯಲ್ಲ, ಎಲ್ಲರಿಗೂ ಅನ್ವಯಿಸುವಂಥವುಗಳಲ್ಲ. ಉದಾ ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ನಂಬಿಕೆಗಳು, ರಾಜಕೀಯ ಮತ್ತು ಆರ್ಥಿಕ ಇವುಗಳಿಗೆ ಸಂಬಂಧಿಸಿದ ಜ್ಞಾನಗಳು ರಾಜ್ಯ-ರಾಜ್ಯಮತ್ತು ದೇಶ, ದೇಶಕ್ಕೂ ಭಿನ್ನ. ಇವುಗಳಲ್ಲಿ ಸತ್ಯಗಳಲ್ಲದೆ ಹಲವಾರು ಸುಳ್ಳುಗಳೂ ಸಹ ಅಡಗಿರಬಹುದು.
ಮಾನವ ನಿರ್ಮಿತ ಜ್ಞಾನಗಳನ್ನು ಶಿಕ್ಷಣದಲ್ಲಿ ಅಳವಡಿಸುವಾಗ ಅವುಗಳಲ್ಲಿರುವ ಸಾರ್ವತ್ರಿಕ ಸತ್ಯಾಂಶಗಳನ್ನು ಒರೆಹಚ್ಚಿ ಹೆಕ್ಕಿ ತೆಗೆದು ಅಳವಡಿಸಬೇಕು. ವಿವಾದಾತ್ಮಕ ವ್ಯಕ್ತಿಗಳ ಜೀವನಚರಿತ್ರೆ ಮತ್ತು ಅಭಿಪ್ರಾಯಗಳನ್ನು ಬೋಧಿಸದೇ ಸಾರ್ವತ್ರಿಕವಾಗಿ ಒಪ್ಪಿಗೆಯಾದ ನಿರ್ವಿವಾದ ವ್ಯಕ್ತಿಗಳ ವಿಚಾರಗಳನ್ನು ಮಾತ್ರ ಶಿಕ್ಷಣದಲ್ಲಿರಬೇಕು. ಉದಾಹರಣೆಗೆ ಗಾಂಧೀಜಿ, ಬುದ್ಧ, ಬಸವ, ಅಂಬೇಡ್ಕರ್ ಇವರುಗಳ ವಿಚಾರಗಳು ಎಲ್ಲರೂ ಒಪ್ಪುವಂತಹವುಗಳು ಇತ್ಯಾದಿ.
ಶಿಕ್ಷಣದ ಪ್ರಮುಖ ಗುರಿ ಮನುಷ್ಯನನ್ನು ಸೃಷ್ಟಿಯೊಡನೆ ಬೆಸೆದು, ಪ್ರೀತಿ ಹಂಚುವ ಮೌಲ್ಯಯುತ ಜ್ಞಾನ, ಮನುಷ್ಯ ಸಂಘಜೀವಿ ಯಾಗಿದ್ದು, ಸಮಾಜದೊಂದಿಗೆ ಕೂಡಿಸಿಕೊಂಡು ಬದುಕುವ ಸಾಮಾಜಿಕ ಜ್ಞಾನ, ಸಾಂಸ್ಕೃತಿಕ ಜ್ಞಾನ, ಬದುಕಲು ವೃತ್ತಿ ಕೌಶಲ ನೀಡುವ ವೈಜ್ಞಾನಿಕ ಜ್ಞಾನ, ಅಧ್ಯಾತ್ಮಿಕ ಜ್ಞಾನ ಮತ್ತು ಮೆದುಳಿನ ಬುದ್ಧಿವಂತಿಕೆಯನ್ನು ಗರಿಷ್ಠವಾಗಿ ವೃದ್ಧಿಸುವ ತರಬೇತಿ ಜ್ಞಾನಗಳನ್ನು ನೀಡುವ ಉದ್ದೇಶವಾಗಿದ್ದಲ್ಲಿ ಮಾತ್ರ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಸಾಧ್ಯ.
ಇದುವರೆಗೆ ಬಂದಿರುವ ಯಾವ ಶಿಕ್ಷಣನೀತಿಯಲ್ಲಿಯೂ ಮೇಲಿನ ಅಂಶಗಳನ್ನೊಳಗೊಂಡ ಶಿಕ್ಷಣ ಅನುಷ್ಠಾನಕ್ಕೆ ಬಾರದಿರು ವುದು ದುರದೃಷ್ಟಕರ. ಪ್ರಸ್ತುತ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ -2020ರಲ್ಲಿ ಪ್ರಧಾನವಾಗಿ 10+2ರ ಹಂತಗಳ ಶಿಕ್ಷಣವನ್ನು 5+3+3+4 ಹಂತಗಳಾಗಿ ವಿಂಗಡಿಸಲಾಗಿದ್ದು, ಕೇವಲ ಈ ವಿಂಗಡಣೆಯಿಂದಲೇ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ವಿಲ್ಲ.
5+3ರ ಹಂತದಲ್ಲಿ ಮಕ್ಕಳಿಗೆ ಭಾಷೆ ಮತ್ತು ಸೃಷ್ಟಿಯ ವಿಜ್ಞಾನವನ್ನೊಳಗೊಂಡ ಶಿಕ್ಷಣವನ್ನು ಎಲ್ಲರಿಗೂ ನೀಡುವಂತಾಗಬೇಕು. ಈ ಹಂತದಲ್ಲಿ ಸದೃಢ ದೇಹ, ಭಾಷೆ ಮತ್ತು ಸದೃಢ ಮನಸ್ಸನ್ನು ಕಟ್ಟುವ ಸಮಗ್ರಜ್ಞಾನವನ್ನು ನೀಡಿದಲ್ಲಿ ಬೆಳವಣಿಗೆಯಮೆದುಳಿನಲ್ಲಿ ನೈಜ ವಿಜ್ಞಾನ ನಾಟಿಯಾಗಿ ಮುಂದಿನ ದಿನಗಳಲ್ಲಿ ಮಾನವ ನಿರ್ಮಿತ ಜ್ಞಾನವನ್ನು ಹಂಸಕ್ಷೀರ ನ್ಯಾಯದಂತೆ ಗ್ರಹಿಸಲು ಮಕ್ಕಳು ಸದೃಢರಾಗುತ್ತಾರೆ. 3+4 ರ ಹಂತಗಳಲ್ಲಿಯೂ ಸೃಷ್ಟಿಯ ಜ್ಞಾನದ ಉನ್ನತ ಜ್ಞಾನದ ಜತೆ ಜತೆಗೆ ಮಾನವನಿರ್ಮಿತ ವಿಜ್ಞಾನಗಳನ್ನೂ ಕೂಡ ಜೋಡಿಸಿ ಶಿಕ್ಷಣ ನೀಡುವಂತಾಗಬೇಕು. ಈ ದಿಕ್ಕಿನಲ್ಲಿ ಪಠ್ಯಪುಸ್ತಕಗಳು ರಚನೆಯಾದಲ್ಲಿ ಮಾತ್ರ ಹೊಸ ಶಿಕ್ಷಣ ನೀತಿಯ ಆಶಯ ಈಡೇರುತ್ತದೆ. ಹಾಗಾಗಲಿ ಎಂದು ಆಶಿಸೋಣ.